ಕಾವ್ಯ ಸಂಗಾತಿ
ಸಾಯಬಣ್ಣ ಮಾದರ (ಸಲಾದಹಳ್ಳಿ) ಅವರ ಕವಿತೆ
“ಹೀಗೊಂದು ಸುದ್ದಿ”


ಬೆಳಗಿನ ಜಾವ
ನೀ ಬಂದಿದದ್ದೆಯಂತೆ!
ಹೀಗೊಂದು ಸುದ್ದಿ
ಯಾಕೆ
ಹೇಗೆ
ಬಂದೆ ಎಂದು
ನಾನು ಕೇಳುವುದಿಲ್ಲ
ಸ್ವಲ್ಪ ಸಮಯ
ನೀ ಮರಳಿ ಹೋದ
ಸುದ್ದಿಯೂ ಗೊತ್ತಾಯಿತು
ಅದನ್ನು ಕೇಳುವುದಿಲ್ಲ.
ನೀ ಹೋಗುವುದಿದ್ದರೆ
ಬರುವ ತುರ್ತು ಏನಿತ್ತು?
ಬಂದಿದ್ದೆ
ಕಣ್ಣು ತೆರೆದು ನೋಡಿದ್ದಿ
ಯಾಕೋ ಗೊತ್ತಿಲ್ಲ
ವ್ಯವಸ್ಥೆ ನೋಡಿ ಹೆದರಿಕೊಂಡಿದ್ದೆ ಅಂತೆ
ಹೀಗೊಂದು ಸುದ್ದಿ
ಈ
ಮುಖವಾಡದ ಲೋಕದಲಿ
ಪರ ವಿರೋಧ
ಬಂದ ಬಂಧನದ ಬದುಕು
ಕಂಡು ನೀ
ಮರು ಮಾತಾಡದೇ ಹೋದದ್ದು
ಚೂರು ಬೇಜಾರು
ನಿನ್ನ ನಂಬಿದ ನಮ್ಗಳಿಗೆ…
ಬಿರುಗಾಳಿಯಂತೆ ಬರುವ
ನೀ
ಬರಬಾರದಿತ್ತು ಮೊದಲೇ
ಹೀಗೆ ಬಂದು
ಹಾಗೇ ಹೋಗಲು;
ಬಂದು ಹೋದದ್ದು
ನೂರೊಂದು ನೋವು
ಕಡಲ ತಡಿಯಲ್ಲಿ ಕಣ್ಣೀರು
ಇಲ್ಲಿ ಎಷ್ಟೊಂದು ಕಲಹ
ಎಷ್ಟೊಂದು ನೋವ ದನಿ
ಬರಬೇಕಿತ್ತು ಗಳಿಗೆ
ಇರಬೇಕಿತ್ತು ಒಂದು ಕ್ಷಣ
ಈ ಗಂಟು ಮೂಟೆಗಳ ಒಮ್ಮೆ ನೋಡಲು
ನೀ ಬರುವ ನಿರೀಕ್ಷೆಯಲ್ಲಿ
ಕಾದು ಕುಳಿತು
ನೂರಾರು ಕನಸುಗಳ
ಕಟ್ಟಿಕೊಂಡವರ
ಬದುಕಿನಲ್ಲಿ
ನೀ ಬರಿ ಓಯಾಸಿಸ್ ಆದೆ
ಮೂಡಣದಲ್ಲಿ ಮೂಡಿ
ಪಡುಣದಲ್ಲಿ ಮರೆಯಾದೆ
ನಾ ನೋಡಲಿಲ್ಲ ನಿನ್ನ
ನೀ ಹೋದ ಗಳಿಗೆ
ಹೇಗೆ ನೋಡಲಿ?
ಬೆಳಕನ್ನು ಸೋಸಿ
ನೊಂದವರಲ್ಲಿ ನಗೆಯ
ಬುಗ್ಗೆ ಅರಳಿಸಿ
ಕಾರ್ಗತ್ತಲು ಸೀಳಿ
ಕ್ರಾಂತಿ ದೀಪ ಹಚ್ಚಬೇಕಿತ್ತು
ನನ್ನವರ ಎದೆಯಲ್ಲಿ ನಗು ಬೀರಬೇಕಿತ್ತು
ಹೀಗೊಂದು ಸುದ್ದಿ!
ಹರಡಬೇಕಿತ್ತು.
ಸಾಯಬಣ್ಣ ಮಾದರ (ಸಲಾದಹಳ್ಳಿ)




Uttama kavite