ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಮ್ಮ ನೆತ್ತರಿನ ಬಣ್ಣ ಒಂದೇಯಾಗಿದ್ದರೂ
ಉತ್ತರ ಆಶೋತ್ತರಗಳು ಬೇರೆ ಬೇರೆ
ಅಡಿ ಇಡುವ ನೆಲವು ಒಂದೇಯಾಗಿದ್ದರೂ
ಗಮ್ಯ ತಾಣ ನಿಲ್ದಾಣಗಳು ಬೇರೆ ಬೇರೆ

ಬುದ್ಧಿಶಕ್ತಿಯ ಲವಲೇಶವಿರದ ಪ್ರಾಣಿಗಳು
ಸಹಬಾಳ್ವೆಗೆ ತಮ್ಮನ್ನು ಒಡ್ಡಿಕೊಂಡಿವೆ
ಸುತ್ತ ಸುಳಿವ ಗಾಳಿ ಒಂದೇಯಾಗಿದ್ದರೂ
ಒಳ ನೋಟ ಒಕ್ಕೂಟಗಳು ಬೇರೆ ಬೇರೆ

ಭಾಷಣ ಬರವಣಿಗೆಯಲ್ಲಷ್ಟೇ ಸಮತೆಯ
ಹೂರಣ ತೋರಣಗಳನ್ನು ಕಂಡಿದ್ದೇವೆ
ಕುಡಿಯುವ ಜಲವು ಒಂದೇಯಾಗಿದ್ದರೂ
ಯೋಚನೆ ಯೋಜನೆಗಳು ಬೇರೆ ಬೇರೆ

ಒಡಹುಟ್ಟಿದವರೇ ಬೆಳೆದೊಡನೆ ಕಾದಾಡಿ
ದಾಯಾದಿಗಳಾಗುವುದಿಲ್ಲಿ ಮಾಮೂಲಿ
ಭಾರತೀಯರೆಂದೂ ಒಂದೇಯಾಗಿದ್ದರೂ
ಇಲ್ಲಿ ಆಚಾರ ವಿಚಾರಗಳು ಬೇರೆ ಬೇರೆ

ಸರ್ವಜನಾಂಗದ ತೋಟದಲ್ಲಿ ಕುಂಬಾರ
ಶಾಂತಿ ಹುಡುಕಿ ಹುಡುಕಿ ಸೋತಿದ್ದಾನೆ
ಭಾವೈಕ್ಯದ ಬಾವುಟ ಒಂದೇಯಾಗಿದ್ದರೂ
ಜಾತಿ ಜೆಂಡಾ ಅಜೆಂಡಾಗಳು ಬೇರೆ ಬೇರೆ


About The Author

Leave a Reply

You cannot copy content of this page

Scroll to Top