ಕಾವ್ಯ ಸಂಗಾತಿ
ಉಷಾರಾಣಿ ಗುರುಪ್ರಸಾದ
“ನಿರಾಸೆ”


ಕನಸುಗಳ ಗೋಪುರಕೆ
ಕಲ್ಲು ಬಿದ್ದಂತೆ,
ಹಚ್ಚಿದ ದೀಪ
ತಾನಾಗಿಯೇ ಆರಿದಂತೆ,
ನಂಬಿಕೆಯ ದಾರಿಯಲಿ
ಮುಳ್ಳು ಸಿಕ್ಕಂತೆ,
ಮನಸೀಗ ಮೌನವಾಗಿದೆ,
ಏನೂ ತೋಚದಂತೆ.
ಆಸೆಯ ಚಿಗುರೊಡೆದು
ನಿಂತ ಕೊಂಬೆಗೆ,
ಬರಗಾಲದ ಬಿಸಿಲು
ತಗುಲಿದ ಹಾಗೆ,
ನೆನೆದ ಸುಖದ ದಿನಗಳೆಲ್ಲ
ದೂರ ಸರಿದು,
ಹೃದಯದ ಮೂಲೆಲಿ
ನೋವು ಮನೆ ಮಾಡಿದೆ.
ಯಾರನ್ನು ನೋಯಿಸಲಿ,
ಯಾರಿಗೆ ದೂಷಿಸಲಿ?
ನನ್ನದೇ ವಿಧಿಯ ಆಟ
ಹೇಗೆ ನಗಲಿ?
ಪ್ರತಿ ಬಾರಿ ಗೆಲುವಿನ ದಡ
ಮುಟ್ಟುವ ಮುನ್ನ,
ನಿರಾಸೆಯ ಅಲೆಯು ಬಂದು ಮುಳುಗಿಸುವುದೆನ್ನ.
ಆದರೂ ಒಂದು ಭರವಸೆ
ಮೂಡದಿರದು,
ಕತ್ತಲೆಯ ನಂತರ ಬೆಳಕು
ಬಾರದಿರದು,
ಇಂದಿನ ಈ ನಿರಾಸೆಯ
ಕಹಿ ಕಣ್ಣೀರು,
ನಾಳೆಯ ಯಶಸ್ಸಿಗೆ
ಹಾದಿ ರಾಜಮಾರ್ಗ .
ಉಷಾರಾಣಿ ಗುರುಪ್ರಸಾದ



