ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


 
ಅವಳೊಂದು ಬಿಂದು
ಆ ಬಿಂದು ಕೇಂದ್ರವಾಗಿರಿಸಿ
ಒಂದೇ ಪರಿಧಿಯಲ್ಲಿ
ಸುತ್ತುತ್ತಿದ್ದಾಳೆ ನಿತ್ಯ

ಅವಳೆದೆಯ ಬಿಕ್ಕಳಿಕೆ
ಅಂತರಂಗದ ಅಳಲು
ತವಕ ತುಡಿತಗಳು
ಕನಸು ಕಲ್ಪನೆಗಳು
ಆ ವೃತ್ತದ ಪರೊಧಿಯೊಳಗೆ
ಗಿರಕಿಹೊಡೆಯುತ್ತಿವೆ

ತಾನೇ ಇಚ್ಛೆಯಿಂದ
ಹೆಣೆದ ಗೂಡದು
ಮರಿ ಹಕ್ಕಿಗಳಿಗೆ
ಗುಟುಕಿಡುವ
ಹಾರುವ ರೆಕ್ಕೆಗಳ
ಬಲಗೊಳಿಸುವ
ಹೊಸ ಕನಸುಗಳ ಬೆಳಕಿಗೆ
ಗರಿಬಿಚ್ಚಿಕೊಳ್ಳುವ
ತರಬೇತಿ ತಾಲೀಮಿನಲ್ಲಿ
ಅವಳೀಗ ಬ್ಯುಸಿ ಆಗಿದ್ದಾಳೆ

ಅವಳ ಹಗಲು ರಾತ್ರಿಗಳೆಲ್ಲ
ಕರಗುತ್ತಿವೆ
ಹೀಗೆ ಬಂದು ಹಾಗೆ ಮಾಯವಾದಂತೆ!

ಒಂದಿಷ್ಟು ದಣಿವಾಗುತ್ತಿರಬಹುದು
ಆಕೆಗೆ
ಕಾಲಚಕ್ರದ ವೇಗಕ್ಕೆ
ತನ್ನ ಕನಸು ಮತ್ತು ವಾಸ್ತವಗಳ
ಬದುಕು ಮತ್ತು ಕಾಯಕದ
ಚಿತ್ತಾರವನ್ನು ಹೆಣೆದುಕೊಳ್ಳಲು

ಇಲ್ಲ.. ಇಲ್ಲ..
ಅವಳ ಕಣ್ಣುಗಳಲ್ಲಿ ಕಾಂತಿ
ಮನದೊಳಗೆ ಮಹತ್ವಾಕಾಂಕ್ಷೆ
ಮುಖದೊಳಗೆ ಮಂದಹಾಸವಿದೆ

ಅವಳಿಗೆ
ತನ್ನ ಕನಸುಗಳಿಗೆ
ಇನ್ನಷ್ಟು ಬಣ್ಣ ತುಂಬಬೇಕೆಂಬ
ತುಡಿತವಿದ್ದಂತಿದೆ
ಈಗಿರುವ ಚಿತ್ತಾರವನ್ನು
ಒಂದಿಷ್ಟು ವಿಸ್ತರಿಸಬೇಕೆಂಬ
ಚಿತ್ತವಿದ್ದಂತಿದೆ

ಈಗೀಗ ಮತ್ತೆ
ಇಣುಕುತ್ತಿವೆ
ಅವಳ ಕಣ್ಣುಗಳು
ಕಿಟಕಿ ಬಾಗಿಲುಗಳಾಚೆಯ
ಬೆಳಕು ಸವಿಯಲು
ಬಯಲೊಳಗಿನ
ಸದ್ದು ಗದ್ದಲಗಳ,
ಉರುಳುತ್ತಿರುವ ಚಕ್ರಗಳ
ಆ ವೇಗವನ್ನು
ಸ್ಮರಣೆಗೆ ತಂದುಕೊಳ್ಳುತ್ತ
ಅವಳು ಹೆಜ್ಜೆ ಹಾಕುತ್ತಿದ್ದಾಳೆ
ಮತ್ತೆ ಮತ್ತೆ
ಬದುಕಿನ ಬಡ್ತಿ ಮತ್ತು
ಮುಂಬಡ್ತಿಗಾಗಿ

ಸಾಲದಾಗಿದೆ ಅವಳಿಗೆ
ಓಡುತ್ತಿರುವ
ಆ ರಾತ್ರಿ ಹಗಲುಗಳ
ಕಾಲ ಮಿತಿ
ಅವಳ ಕನಸಿನ
ಹಂದರ ಹರವಲು


About The Author

Leave a Reply

You cannot copy content of this page

Scroll to Top