ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಸಿಯಾಳ” ಸಣ್ಣ ಕಥೆ ನಾಗರಾಜ ಬಿ ನಾಯ್ಕ ಅವರಿಂದ

ಕಥಾ ಸಂಗಾತಿ ನಾಗರಾಜ ಬಿ ನಾಯ್ಕ “ಸಿಯಾಳ”        ಅವನ ಕೈಯೊಳಗೆ ಇರುವ ಎಳೆನೀರು ಕುಡಿದರೆ ಅಮೃತದಂತೆ. ಬರೀ ನಲವತ್ತಕ್ಕೆ ಕೊಡುವ ಎಳೆನೀರು ಅವನದ್ದು. ಚಿಕ್ಕದು ಮೂವತ್ತಕ್ಕೆ ದೊಡ್ಡದಾದರೆ ನಲವತ್ತಕ್ಕೆ ಎಂದು ಕುಡಿಯಲು ಅನುಕೂಲವಾಗುವ ಹಾಗೆ ನೀಡಿದರೆ ಸಮಾಧಾನ ಅವನಿಗೆ. ನಿಂತು ನೋಡಿದರೆ ಎಲ್ಲರೂ ಇವನಿಗೆ ಪರಿಚಯದವರೇ ಎನಿಸಿ ಬಿಡುತ್ತಾರೆ. ಆದರೆ ಹಾಗೆ ಯಾರೂ ಪರಿಚಯದವರಲ್ಲ. ಅಕ್ಕ ಒಂದು ಎಳನೀರು ಕೊಡಲಾ….? ಅಣ್ಣ ಒಂದು ಎಳೆ ನೀರು ಕೊಡಲಾ? ಎಂದಾಗ ಯಾರಿಗೂ ಬೇಡ ಎನ್ನುವ ಮನಸ್ಸಾಗದು‌. ಅವನಿಗೂ ತನ್ನ ಹೆಸರು ಹೇಳುವ ರೂಢಿ  ಇಲ್ಲ. ಎಲ್ಲರಿಗೂ ತಮ್ಮನಾಗಿ ಉಳಿದ. ನಗು ಅಷ್ಟೇ ಅವನ ಗುರುತು. ಸಿಕ್ಕವರ ನಗು ಅರಳಿಸುವುದು ಅವನ ಕೆಲಸ. ಸಂದೀಪ ಮಾಸ್ತರರು, ರಾಜೇಶ ಮಾಸ್ತರು, ಶಾಂತಿ ಟೀಚರ್, ಕರೆಂಟ್ ಸೀನ ,ಬ್ಯಾಂಕ್ ಕವಿತಾ, ಪೋಸ್ಟ್ ಸುಬ್ಬು, ಡ್ರೈವರ್ ಮಂಜ ಎಲ್ಲರೂ ಅವನ ಹತ್ತಿರ ಬಂದು ಎಳನೀರು ಕುಡಿದು ಹೋದವರೇ. ಅಂಗಡಿ ನಾಗೇಶ, ಆಯರಾ, ಸಾಜಿದ್, ರೋಜಿ ಎಲ್ಲರಿಗೂ ಇವನೆಂದರೆ ಮನೆ ಮನುಷ್ಯನ ಹಾಗೆ. ಆದರೆ ಆ ಕಡೆ ಬಂದವರೆಲ್ಲ ಒಮ್ಮೆ ಮಾತನಾಡಿ ಹೋಗುವರು ಅವನ ಹತ್ತಿರ. ಹೊಸ ಮುಖ ಕಂಡ್ರೆ ಬನ್ನಿ. ಊರು  ಯಾವುದು? ಎಂದು ಚಂದದಿಂದ ಕೇಳುವ. ಅವನ ರೂಢಿಗೆ ಎಲ್ಲರೂ ಒಮ್ಮೆ ನಿಂತು ಮಾತನಾಡುವ ಹೋಗುವ ಅಭ್ಯಾಸ. ಕಲ್ಪವೃಕ್ಷದಂತೆ ಇವನು ಎಳೆನೀರು ಎಂದವರು ಕೆಲವರು. ಹತ್ತಿರ ಹತ್ತಿರ ಏನೇ ಅಂದ್ರು ದಿನಕ್ಕೆ ದುಡಿಮೆ ಸಾಕು.  ಸಂಜೆ ಎಂಟು ಗಂಟೆವರೆಗೆ ದುಡಿಮೆ. ಮುಗಿಸಿ ಮನೆಗೆ ಬಂದರೆ ಅಕ್ಕನೇ ಅವನಿಗೆ ಎಲ್ಲ.  ಅಕ್ಕ ಗುಣಿ ತಮ್ಮಂದಿರು ಕೇಮು ಮತ್ತು ಪರಮ. ಈ ಹೆಸರು ಯಾರಿಟ್ಟರೋ ಗೊತ್ತಿಲ್ಲ. ಅಕ್ಕನೊಟ್ಟಿಗೆ ಬಂದದ್ದು ಮಾತ್ರ ಇವರಿಗೆ ಗೊತ್ತಿರುವುದು. ಅಮ್ಮ ಅಪ್ಪ ಅವರ ಮುಖ ನೋಡಿದ ನೆನಪಿಲ್ಲ ಅವರಿಗೆ. ಅಕ್ಕನಿಗೂ ಅಷ್ಟೇ. ಅಮ್ಮ ಅಪ್ಪ ಅನಾರೋಗ್ಯದಿಂದ ಸತ್ತಿದ್ದು ಮಾತ್ರ ನೆನಪಿರುವುದು. ಇರುವ ಜೋಪಡಿ ಒಳಗೆ ಒಂದು ಪುಟ್ಟ ಮನೆ. ಅಮ್ಮ ಸತ್ತ ನಂತರ ಅವರದಾಗಿ ಉಳಿಯಲಿಲ್ಲ. ಮನೆಯಲ್ಲಿನ ಜಗಳಗಳು, ತೊಂದರೆಗಳು ಇವುಗಳಿಂದ ಬೇಸತ್ತು ಎಲ್ಲವೂ ಬೇಡ ಎನ್ನಿಸಿ ಕೆಲಸಕ್ಕೆ ಬಂದಿದ್ದ ಗಂಗೂನು ಒಪ್ಪಿಸಿ ಮದುವೆಯಾಗಿ ಬಂದವಳು ಗುಣವತಿ. ಬರುವಾಗ ಈ ತಮ್ಮಂದಿರ ಬಿಟ್ಟು ಬರಲು ಮನಸ್ಸಾಗದೇ ಅನಾಥ ಮಕ್ಕಳು ಆಗಬಾರದು ಎಂದು ಅಕ್ಕರೆ ಕಕ್ಲಾತಿಯಿಂದ ಕರೆದುಕೊಂಡು ಬಂದವಳು.            ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಬದುಕು ಚೆಂದಾಗೆ ಕಟ್ಟಿಕೊಂಡವಳು. ಹಗಲಿಗೆ ಎದುರಾಗುವ ಕಷ್ಟ ರಾತ್ರಿ ಆದ್ರೆ ಕರಗಿಬಿಡುತ್ತಿತ್ತು. ಕಾಲಕ್ಕೆ ಕನ್ನಡಿ ಇರುವುದಿಲ್ಲ. ಮನಸ್ಸಿಗೆ ಕನ್ನಡಿ ಇರುತ್ತದೆ. ಕಾಲದ ಕನ್ನಡಿ ಒಳಗಿನ ನೋಟವೇ ಬದುಕು ಸಾಗಿ ಬಂದ ದಾರಿಯ ಕನ್ನಡಿಯೊಳಗಿನ ಬಿಂಬ. ಬೇರೆ ಅಭ್ಯಾಸಗಳು ಇರದ ಕಾರಣ ಗಂಗೂ ಮನೆಗೆ ದುಡಿದು ತರುವ. ಒಂದಿಷ್ಟು ದಿನ ತಮ್ಮಂದಿರ ಪ್ರೀತಿಯಿಂದ ಸಾಕಿದಳು ಗುಣಿ. ಕೇಮು ಓದಿನಲ್ಲಿ ಮುಂದೆ.  ಆದರೆ ಪರಮ ಅಷ್ಟಾಗಿ ಓದಲಿಲ್ಲ. ಕೇಮುವಿಗೂ ಓದಬೇಕು ಅನಿಸಲಿಲ್ಲ. ಸ್ವಲ್ಪ ಬುದ್ಧಿ ಬಂದಮೇಲೆ ಗಂಗೂಗೆ ಒಂದು ಎಳನೀರು ಅಂಗಡಿ ಹಾಕಬೇಕು ಅನ್ಸಿ ಹಾಕಿದರೆ ಹೇಗೆ ಎಂದು ಯೋಚಿಸುತ್ತಿರುವೆ ಎಂದಾಗ ಕೇಮು ಮತ್ತು ಪರಮ ಇಬ್ರು ಒಪ್ಪಿ, ನಾವು ನಡೆಸ್ತೇವೆ.  ನೀನು ಕೆಲಸಕ್ಕೆ ಹೋಗು ಅಂದಾಗ ಗಂಗೂಗೆ ನಿರಾಳ ಎನಿಸಿತು. ಅಂತೂ ಒಂದಿಷ್ಟು ಎಳೆನೀರು ಪಕ್ಕದಲ್ಲಿ ಇಟ್ಕೊಂಡು ಕೇಮು ಮತ್ತು ಪರಮ ಕುಳಿತರು. ಇದು ಸವಾಲಿನ ಕೆಲಸ ಎನಿಸಿತು. ಪರಿಚಯ ಗುರುತು ಒಂದೂ ಇರದ ನೆಲದಲ್ಲಿ ಅಪರಿಚಿತರಾಗಿ ಕುಳಿತು ಎದುರಾಗುವ ಮುಖಗಳನ್ನು ನೋಡಬೇಕು. ಅವರ ನಡುವೆ ಎಳನೀರಿಂದ ಸೇತುವೆ ಕಟ್ಟಿ ಬಂಧುತ್ವ ಗಳಿಸಬೇಕು.ಅದು ಸುಲಭದ ಮಾತಾಗಿರಲಿಲ್ಲ ಅವರಿಗೆ. ಆದರೆ ಅದೇಕೋ ಬೇಸಿಗೆಯ ಸಮಯ ಆದ್ದರಿಂದ ಆ ಕೆಲಸ ಕಷ್ಟ ಅನಿಸಲಿಲ್ಲ. ಹತ್ತು ,ಇಪ್ಪತ್ತು, ಮೂವತ್ತು, ನಲವತ್ತು, ಐವತ್ತರ ಲೆಕ್ಕದಲ್ಲಿ ಹೆಚ್ಚುತ್ತಲೇ ಹೋಯಿತು….ತಕ್ಕ ಮಟ್ಟಿಗೆ ಆದಾಯವೂ ಬರುತ್ತಾ ಹೋಯಿತು.  ಏನು ಗೊತ್ತಿರದ ಪರಮನಿಗೆ ನಗುವೇ ಅವನು ಒಂದು ಗುರುತು. ಬದುಕಿಗಾಗಿ ಯಾರಾದರೇನು ಅಣ್ಣ ಅಕ್ಕ ಎಂದು ಬಾಯಿ ತುಂಬಾ ಕರೆದು ಕೂಗುವುದು ಅವನ ರೂಢಿ. ಖಾಲಿ ಸುಮ್ಮನೇ ಕುಳಿತು  ಜೀವನ ಕಳೆಯುವವರೂ ಬಂದು ಎಳೆನೀರು ಕುಡಿದು ಸಾಗುತ್ತಿದ್ದರು. ಖರ್ಚಿಲ್ಲದ ಉದ್ಯೋಗವದು. ಏಳನೀರು ಕತ್ತರಿಸಲು ಒಂದು ಹಾಳಾದ ಮರದ ತುಂಡು, ಒಂದು ಕತ್ತಿ ಅಷ್ಟೇ ಸಾಕು. ಹೀಗೆ  ಎಳೆನೀರು ಎನ್ನುವುದು ಪರಮನ ಬದುಕಿನಲ್ಲಿ ಹಾಸು ಹೊಕ್ಕಾಗಿ ಉಳಿಯಿತು .ಪರಮನ ಅಣ್ಣನು ಪಾನಿಪುರಿ ಅಂಗಡಿ ಮಾಡಿದ. ಸಂಜೆಯ ನಂತರ ಪರಮನೂ ಅಣ್ಣನ ಅಂಗಡಿ ಕಡೆ ಸಾಗಿ ಸಹಾಯ ಮಾಡುವ ರೂಢಿ ಇಟ್ಟುಕೊಂಡ. ಪರಮನ  ಪರಿಚಯ ಎಲ್ಲರಿಗೂ ಬಹು ಬೇಗ ಆಯಿತು.ಅಂಗಡಿ ನಾಗೇಶ ಬಂದು ಅಂಗಡಿಯಲ್ಲಿ ಸುದ್ದಿ ಹೇಳಿ ನಕ್ಕು ಎಳೆನೀರು ಕುಡಿದು ಹಿಡಿ ಎಂದು ರೊಕ್ಕ ಕೊಟ್ಟು ಹೋದರೆ ಹೋಗುವಾಗ ಅಣ್ಣಾ ನಂಗೆ ಸಾಮಾನ್ ಬೇಕಿತ್ತಾ ಕಟ್ಟಿಡೋ ಹಾ ಎಂದು ಪರಮ ಹೇಳುತ್ತಿದ್ದ ಮಾತಿಗೆ ಕುಶಾಲ ಮಾಡಿ ನಕ್ಕು ನಾಗೇಶಣ್ಣ ಸಾಗಿ ಬಿಡುತ್ತಿದ್ದ‌. ಒಮ್ಮೊಮ್ಮೆ ಮಾತನಾಡಲು ಮನೆಯಲ್ಲಿ ಮಕ್ಕಳು  ಇಲ್ಲದ ಹಿರಿಯರು ಇವನ ಸಿಯಾಳ ಅಂಗಡಿ ಮುಂದೆ ಬಂದು ಬಹು ಸಮಯ ಪೇಪರ್ ಓದುವ ಕೆಲಸ ಮಾಡ್ತಾ ಇದ್ರು. ಹೆಚ್ಚಿನ ಮಾತೇ ಅವರ ಗುರುತಾಗಿತ್ತು.   ಅಲ್ಲಿ ಪ್ರೀತಿ ,ಕಾಳಜಿ,  ಅಕ್ಕರೆ,ಗೆಳೆತನ ,ಸಂಬಂಧ ಅದೇ ಅವರ ವಿಷಯ ಆಗಿತ್ತು . ಪರಮನ ಅಂಗಡಿಯೇ ಅವರು ಓದುವ ಸ್ಥಳವಾಗಿ ಬಿಟ್ಟಿತ್ತು. ಪರಮನ ಅಂಗಡಿ ಎದುರು ದೊಡ್ಡದೊಂದು ಹೋಟೆಲ್, ಜನುಮಗಾಗಿ ಮುಖ ಹೊತ್ತು ನಿಂತಿತ್ತು . ಅಲ್ಲಿ ಪೇಪರ್ ಬರುತ್ತಿರಲಿಲ್ಲ . ಆದರೆ ಪರಮನ ಅಂಗಡಿಗೆ ಪೇಪರ್ ದಿನಾಲು ಬರುತ್ತಿತ್ತು. ಪೇಪರ್ ಪರಮನಿಗೆ ದಿನಾಲು ಓದಲು ಬೇಕಿತ್ತು. ನಾಲ್ಕನೇ ಕ್ಲಾಸ್ ಆಗಿ ಓದುವುದನ್ನು ರೂಢಿಸಿಕೊಂಡಿದ್ದ. ಈ ಜಗದ ಸುದ್ದಿ ಅದರೊಳಗೆ ಕುಳಿತು ಬರುವುದು ಅವನಿಗೆ ಬಹಳ ಅಪ್ಯಾಯಮಾನವಾದ ಸಂಗತಿಯಾಗಿತ್ತು. ಎಷ್ಟೆಲ್ಲಾ ನಮೂನೆ ಜನರಿದ್ದಾರೆ ಈ ಜಗದಲ್ಲಿ ಎನಿಸ್ತಿತ್ತು. ಅಂಗಡಿಗೆ ದಿನ ಬರುವ ದಿನು ಮಾಸ್ತರರು  ನಿವೃತ್ತಿ ಆಗಿ ಎರಡೇ ವರ್ಷ ಕಳೆದಿತ್ತು. ಇರುವ ಇಬ್ಬರೂ ಮಕ್ಕಳು ದೂರ ದೇಶದಲ್ಲಿ ಉದ್ಯೋಗದಲ್ಲಿದ್ದರು. ಹೆಂಡತಿ ತೀರಿ ಕೊಂಡ ಮೇಲೆ ಅವರಿಗೆ ಬೇರೆ ಎಲ್ಲ ಹೋಗಲು ಮನಸ್ಸಾಗದೆ ಇರುವ ಮನೆ ಒಳಗೆ ಅವರು ವಾಸ ಮಾಡ್ತಾ ಇದ್ರು. ಒಮ್ಮೆ ಕೇಳಿ ಬಿಡುವ ಪರಮ. ಯಾಕೆ ತೊಂದರೆ ಮಾಡಿಕೊಳ್ಳುತ್ತೀರಿ.  ಹೋಗಿ ಬಿಡಿ ಮಕ್ಕಳ ಮನೆಗೆ ಆರಾಮಾಗಿ ಇರಬಹುದು ಎನ್ನುತ್ತಿದ್ದ . ಕೈಲಾಗುವವರೆಗೆ ಇಲ್ಲೇ ಇರುತ್ತೇನೋ. ನಿಮ್ಮಂತಹ  ಜನರ ಜೊತೆ ನಾಲ್ಕು ಮಾತಾಡಿ ಹಗುರ ಆಗಿ ಇರಬಹುದು. ಕಾಣದ ದೇಶಕ್ಕೆ ಹೋಗಿ ಗೋಡೆ ನೋಡುತ್ತಾ ಕೂರೋದು ಬೇಜಾರು ಮಾರಾಯ ನಂಗೆ . ನಮ್ಮೂರ ಗದ್ದೆ ,ಬಯಲು, ಸಮುದ್ರ ನೋಡೋಕೆ ಚಂದನ.  ನಂಗೆ ಅಂತ ಒಂದು ಊರಿದೆ ಅಂದ್ರ ಇದೇ ಊರಲ್ವಾ . ನಂಗೆ ಅನ್ನ ಸಾರು ಅಷ್ಟೇ ಸಾಕು. ಅದನ್ನೇ ನಾನು ಮಾಡಿಕೊಳ್ಳೋದು. ಯಾರಾದರೂ ಕಲಿಸಿದ ಮಕ್ಕಳು ಬರ್ತಾರೆ ಮಾತಾಡ್ತಾರೆ. ಆಗ ಬಹಳ ಖುಷಿಯಾಗುತ್ತೆ ನೋಡು ಪರಮ ಎನ್ನುವರು. ಆಗಾಗ ಒಳ್ಳೆಯ ಎಳೆ ನೀರು ಬಂದಾಗ ಹಿಡಿರಿ ಕುಡಿಯಿರಿ ಸರ್ ಅಂದಾಗ  ಬೇಡ ಎನ್ನುವುದಿಲ್ಲ . ಖುಷಿಯಿಂದ ಕುಡಿದು ಒಳ್ಳೆದಾಗ್ಲಿ ನಿಂಗೆ ಅನ್ನುತ್ತಾರೆ.  ಕಷ್ಟ ಅಂತ ಬಂದಾಗ ಒಂದಿಷ್ಟು ಹಣ ಎಣಿಸಿ ಕೈಗಿಡುತ್ತಾರೆ. ನಾನಿದ್ದೀನೋ ಎಂದು ಜೀವ ತುಂಬುತ್ತಾರೆ. ಇನ್ನೂ ರಮೇಶ್ ಮಾಸ್ತರು ತಮ್ಮ ಬಂದೆ ಎಂದು ಹೇಳುತ್ತಲೇ ಪಾಸ್ ಆಗಿ ಹೋಗಿ ಬಿಡುತ್ತಾರೆ. ಒಂದಿಷ್ಟು ನಡೆದು ಬಿಡುತ್ತೇವೆ ಆಮೇಲೆ ಬರ್ತೇನೆ ಅಂತ ಮುಂದಕ್ಕೆ ಹೋಗಿ ಮತ್ತೆ ಬರ್ತಾರೆ.               ಪರಮನ ಆಪ್ತರು ಎಷ್ಟು ಅಂತ ಪರಮನಿಗೂ ಗೊತ್ತಿಲ್ಲ. ಎಲ್ಲರೂ ಅವನ ಜೊತೆ ಪ್ರೀತಿಯಿಂದ ಮಾತನಾಡುವವರೇ. ಯಾರು ಇಲ್ದಾಗ ಅಪ್ಪ ಅಮ್ಮ ಈಗ ಇದ್ದಿದ್ದರೆ ಖುಷಿ ಪಟ್ಟಿರೋರು ಅಂದುಕೊಳ್ಳುತ್ತಾನೆ ಪರಮ. ಹಸಿವೆಯಾಗಿ ಕೈ ಚಾಚಿದ್ದು, ಇದ್ದವರು ಇಲ್ಲ ಎಂದು ಹೇಳಿದ್ದು ಅದೆಲ್ಲ ನೆನಪಿಸಿಕೊಂಡು ದುಃಖ ಆಗುತ್ತದೆ ಎಂದು ತನಗೆ ತಾನೇ ಅಂದುಕೊಳ್ಳುತ್ತಾನೆ. ಒಮ್ಮೆ ವಿದೇಶದ ಇಬ್ಬರು ಪ್ರವಾಸಿಗರು ಬಂದು ಇವನನ್ನು ಮಾತನಾಡಿಸಿ ಫೋಟೋ ತೆಗೆದುಕೊಂಡು ಹೋದರು. ಯಾರೋ ದೂರದ ಬೆಂಗಳೂರು, ಮೈಸೂರು ,ಗೋವಾ, ಮುಂಬೈನವರು ಹತ್ರ ಬಂದು ನಿಂತಾಗ ಇವನಿಗೆ ಆ ಊರೇ ಹತ್ತಿರ ಬಂದು ನಿಂತ ಹಾಗೆ ಅನ್ನಿಸೋದು . ಹೋಟೆಲಿನ ತಿಂಡಿಗಿಂತ ತನ್ನ ಎಳೆನೀರು ಹೆಚ್ಚು ಎಂದುಕೊಳ್ಳುವ ಒಮ್ಮೊಮ್ಮೆ. ಅದೇ ಆ ಹೋಟೆಲ್ ಹತ್ತಿರ ಹೋಗಿ ಹಸಿವಾದ ತಿಂಡಿ ತಿಂದು ಐದು ನೂರು ಕೊಟ್ಟು  ಚಿಲ್ಲರೆ ಪಡೆದರೆ ಸಾಹುಕಾರ ಏನೋ ತಮ್ಮ ವ್ಯಾಪಾರ ಹೆಂಗೆ ?ಎಂದು ಕೇಳಿದರೆ ಬಹಳ ಒಳ್ಳೆಯವರು ಅನ್ನಿಸೋದು. ತೊಂದರೆ ಇಲ್ಲ. ತುಂಬಾ ಜನ ಬರುತ್ತಾರೆ ಈಗ ಎಂದು ನಗುತ್ತಾ ಹೇಳಿ ಬರುವಾಗ ಪರಮ ಮರತೆ ನೋಡು. ಚೋಲೋತು ಎರಡು ಸಿಯಾಳ ಇದ್ದರೆ ತೆಗೆದು ಇಡು. ಹೋಗುವಾಗ ಒಯ್ತೆ ಎಂದಾಗ ಇವನಿಗೆ ಕಾಲು ನೆಲದ ಮೇಲೆ ಇಲ್ಲ ಎನಿಸೋದು. ಹಾಂ.. ತೆಗೆದು ಇಡುವೆ ಎಂದು ಹೇಳಿ ಬರುವ. ದೊಡ್ಡ ಜನಾನೂ ನಮ್ಮಂಗೆ ಅಂದುಕೊಳ್ಳುವ ಪರಮ.         ಎದುರಿನ ಅಂಗಡಿಯ ಗುಂಡಣ್ಣನೂ ಸಿಯಾಳ ಯಾಪಾರ ಸುರು ಮಾಡಿ ಇಪ್ಪತ್ತು ವರ್ಷ ಮೇಲಾಗಿತ್ತು. ಮಕ್ಕಳೆಲ್ಲಾ ದೊಡ್ಡ ಉದ್ಯೋಗ ಮಾಡ್ತಾ ಇದ್ದರೂ ಈ ಕೆಲಸ ಬಿಟ್ಟಿರಲಿಲ್ಲ. ಪರಮನಿಗೂ ಅವನಿಗೂ ಅಂತ ದ್ವೇಷ ಏನೂ ಇರಲಿಲ್ಲ. ಹಾಗಂತ ಆಪ್ತರೂ ಅಲ್ಲ. ಆದರೆ ಕಷ್ಟ ಅಂತ ಬಂದಾಗ ಇಬ್ಬರೂ ಒಬ್ಬರ ಪರವಾಗಿ ನಿಲ್ಲೋರು. ಒಮ್ಮೊಮ್ಮೆ ಗುಂಡಣ್ಣನ ಹಳೆ ಗಾಡಿ ಚಾಲು ಆಗೋದೇ ಇಲ್ಲ. ಆಗ ಪರಮನೇ ಬಂದು ಗಾಡಿ ಅಲ್ಲಾಡಿಸಿ ಹಿಂದೆ ಮುಂದೆ ಸರಿಸಿದರೆ ಗಾಡಿ ಚಾಲು ಆಗಿ ಬಿಡೋದು. ಇಷ್ಟೇ ಅನ್ನದ ಜೀವನ. ಇನ್ನಷ್ಟು ಇದೆ ಅನ್ನುವುದು ಬದುಕು. ಹತ್ತಿರದಿಂದ ಬದುಕಬೇಕು. ನಾಕು ಚೆಂದ ಮಾತು ಆಡಬೇಕು. ಸಾಧ್ಯವಾದರೆ ಉಪಕಾರ ಮಾಡಬೇಕು ಅನ್ನೋದು ಪರಮನ ಬದುಕು. ಏನೂ ಅಲ್ಲದ ಜೀವನ ಎಲ್ಲವನ್ನೂ ಹೇಳುತ್ತದೆ. ಏನೂ ಅಲ್ಲದ ಕೆಲವರು ಎಲ್ಲವನ್ನೂ ಹೇಳುತ್ತಾರೆ ಎನ್ನುವವ ಪರಮ. ಕರೆಂಟ್ ಸೀನ ಬಂದಾಗಲೆಲ್ಲಾ ಇಂದು ಕರೆಂಟ್ ಎಲ್ಲೆಲ್ಲಿ ಇರುವುದಿಲ್ಲ ಎಂದು ಹೇಳಿ ಹೋಗುವ. ಪರಮ ಬಂದವರಿಗೆ ಅದನ್ನು ಹೇಳುವ. ಅಡುಗೆ ಮಾಡಿ ಕೊಳ್ಳುವವರು ಎಲ್ಲಾ ಬೇಗ ಮಾಡಲಿ ಅಂತ ಹೇಳಿ ಬಿಡೋವ. ಆಗಾಗ ರಾಮಮೂರ್ತಿ ಸರ್ ಬರುವವರು ಸುಮ್ಮನೇ ನಗುತ್ತಾ ಪರಮ ಬದುಕು ಅಂದರೆ ಏನೋ ಎಂದು ಕೇಳುವರು. ಬದುಕು ಎಂದರೆ ಹೀಗೆ ಅಂತ ಹೇಳೂಕೆ ಆಗುವುದಿಲ್ಲ. ಕಾಲ ಬಂದಾಂಗೆ ನಾವು ಹೋಗೋದು ಬದುಕು. ಏನೇ ಬಂದರೂ ಖುಷಿಯಾಗಿ ಕಳೆಯೋದು ಜೀವನ ಅನ್ನೋನು ಪರಮ. ಅವನ ಮಾತಿಗೆ ನಕ್ಕು ಹಗುರಾಗಿ ಒಂದು ಸಿಯಾಳ ಕೊಡ ಎಂದು ಕುಡಿದು ಸಾಗುವರು.            ಆಯೀರಾ ಅಕ್ಕನೂ ಹಾಗೆ. ಆಸ್ಪತ್ರೆಯಲ್ಲಿ ಕೆಲಸ.

“ಸಿಯಾಳ” ಸಣ್ಣ ಕಥೆ ನಾಗರಾಜ ಬಿ ನಾಯ್ಕ ಅವರಿಂದ Read Post »

ಕಥಾಗುಚ್ಛ

“ಚಲುವ” ಸಣ್ಣ ಕಥೆ ಬಿ.ಟಿ.ನಾಯಕ್‌ ಅವರಿಂದ

ಕಥಾ ಸಂಗಾತಿ ಬಿ.ಟಿ.ನಾಯಕ್‌ “ಚಲುವ” ಚೆಲುವಣ್ಣ, ಮಾದಣ್ಣ ಒಳ್ಳೆಯ ಸ್ನೇಹಿತರು.. ಆಗೊಮ್ಮೆ ಈಗೊಮ್ಮೆ ಅವರಿಬ್ಬರೂ ಭೇಟಿ ಮಾಡಿ ಯಾವುದೋ ಸಾಂಧರ್ಭಿಕ ವಿಷಯದ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಿದ್ದರು. ಅವರಿಬ್ಬರ ಸ್ನೇಹ ಅಚಲವಾಗಿತ್ತು.  ಒಮ್ಮೆ ಮಾದಣ್ಣ ಯಾವುದೋ ಕೆಲಸದ ಮೇಲೆ ಪರ ಊರಿಗೆ ಹೋದಾಗ, ಅಲ್ಲಿ ಅನಿವಾರ್ಯವಾಗಿ ತಿಂಗಳುಗಟ್ಟಲೆ                                              ಅಲ್ಲಿದ್ದಾಗ ಮರಳಲು ಸಮಯವೇ  ಹಿಡಿಯಿತು. ಇನ್ನೇನು ಚಡಪಡಿಸುತ್ತಿದ್ದ ಮಾದಣ್ಣನಿಗೆ ಹೇಗೋ ಒಂದು ದಿನ ಮರಳಿದ.  ಆಗ ತಕ್ಷಣಕ್ಕೆ ಚೆಲುವನನ್ನು ಭೇಟಿ ಮಾಡುವುದೇ ಆತನ ಪ್ರಥಮ ಆದ್ಯತೆಯಾಗಿ, ಆ ಪ್ರಕಾರ ಚೆಲುವನನ್ನು ಭೇಟಿ ಮಾಡಿ ಆತನನ್ನು ಆಲಂಗಿಸಿಕೊಂಡ ಮತ್ತು ಮಾತಿನಲ್ಲಿ ಚೆಲುವನೇ ಮುಂದಾದ;‘ಪ್ರಯಾಣದಲ್ಲಿ ತೊಂದ್ರೆ  ಆಯ್ತಾ ಮಾದಣ್ಣ?   ಅಲ್ಲಿಯ ಕೆಲಸ ಪೂರ್ತಿ ಆಯ್ತಾಹೇಗೆ ?’ ಎಂದಾಗ;‘ಅಂಥಹ ಘನ ಕೆಲಸ ಅಲ್ಲೇನಿಲ್ಲವಾದರೂ, ನಮ್ಮ ಬೀಗರಿಗೆ ಕೃಷಿ ಕೆಲಸದಲ್ಲಿ ಆಸರೆಯಾಗಿ ಬಂದಿದ್ದೇನೆ ಅಷ್ಟೇ.  ಅಲ್ಲಿಗೆ ಹೋಗಿ ಬಂದದ್ದು ನೆಮ್ಮದಿ ತಂದಿದೆ.  ಇನ್ನೇನು ಒಂದೇ ಕೊರತೆ ಎಂದ್ರೆ, ಸ್ವಂತ ಊರು ಬಿಟ್ಟು ಅಷ್ಟು ದಿನಗಳು ಹೊರಗೆ ಇರೋದು ಶಾನೆ ಕಷ್ಟ ಕಣಣ್ಣ.  ಸರಿ, ನೀನ್ಹೇಗೆ ಇದ್ದೀಯಾ ?’‘ಏನು ಹೇಳ್ಲಿ ಮಾದಣ್ಣ ನನ್ನ ಮಂಡಿಗಳು ಪ್ರಾಣ ಹಿಂಡ್ತಿವೆ.  ಅವು ಯಾಕಾದರೂ ನಂಜೊತೆಗೆ ಇವೆ ಎನ್ನಿಸುತ್ತಿದೆ .  ಈ ಮಂಡಿಗಳ ನೋವು ತಾಳೋದು ಶಾನೇ ಕಷ್ಟ.ನಂಗೆ ನಿಂತ್ರೂ, ಕುಂತ್ರೂ ಸಮಾಧಾನಾನೇ ಇಲ್ಲ.  ಏನ್ ಮಾಡೋದು ಕಣ್ಲಾ, ಇದು ನನ್ನ ಕರ್ಮ ಅಂತ ಅಂದ್ಕೊತೀನಿ.  ಏಕೆಂದರೆ, ಅದ್ರಿಂದ ನಂಗೆ ಅಳೋದು ತಪ್ತಿಲ್ಲ ‘.‘ಅದೇನ್ಲಾ ಮಂಡಿ ನೋವಿಗೀ ಇಷ್ಟು ಹೆದ್ರಿದ್ರೆ ಹೇಗೆ ? ನೀನು ಗಂಡ್ಸು ಕಣ್ಲಾ, ತಡ್ಕೋಬೇಕು.  ನೀನೇನಾದರೂ ಡಾಕ್ಟರ್ ಹತ್ರ ಹೋದ್ರೇ ಮಂಡಿಗಳನ್ನು ಕುಯ್ದೇ ಬಿಡ್ತಾರೆ ಆಟೇಯಾ’.‘ಏನೋ ಅಪ್ರೂಪಕ್ಕೆ ಸಿಕ್ಕ ಸ್ನೇಹಿತಾಂತ ನಿನ್ನತ್ರ ಹೇಳ್ಕೊಂಡ್ರೆ, ಅದೇನ್ಲಾ ಹೆದರಿಸ್ತೀಯಾ. ನಾನು ನಿನ್ನ ಕುಚುಕು ಕಣ್ಲಾ’‘ಕಂಡೀವ್ನಿ ಬಿಡು, ಸ್ವಲ್ಪ ನೋವು ತಡ್ಕೋ ಅಂತ ಹೇಳಿದೆ ಆಟೇಯಾ ‘‘ಅಷ್ಟು ಹೇಳಿದ್ರೆ ಆಯ್ತಾ ನಿನ್ ಕೆಲ್ಸಾ ?  ನೋವು ಕಡಿಮೆ ಮಾಡೋವ್ರು ಯಾರಾದ್ರೂ ಇದ್ರೆ ಹೇಳ್ಬೇಕು ಅಂತ ನನ್ ಬಗ್ಗೆ  ಕಾಳಜಿ ಬೇಡ್ವಾ ? ‘‘ಇದ್ಕೊಂದು ಬೆಳ್ಕು ಕಂಡೀವ್ನಿ ಕಣ್ಲಾ.  ಅದು ನಿಂಗೆ ಒಗ್ತದೋ ಇಲ್ವೋ ತಿಳ್ದಿಲ್ಲ.’  ‘ಅದೇನ್ಲಾ ಆಂಥೋದು, ವಸಿ ಹೇಳ್ಬಿಡು, ನಾನಾದ್ರೋ ಶಾನೇ ಒದ್ದಾಡ್ತಿದ್ದೀನಿ’‘ಸರಿ, ನಾವಿಬ್ರೂ ಎಣ್ಣೆ ಬಾರಿಗೆ ಹೋಗೋಣ, ಅಲ್ಲಿ ಕಂಠ ಪೂರ್ತಿ ಕುಡ್ಕಂಡಾಗ ನೋವೆಲ್ಲಾ  ಮಾಯವಾಗಿ ಹೊಂಟೋಯ್ತದೆ..’‘ಥೂ..ನಿನ್ನ ಜನ್ಮಕ್ಕೆ ಬೆಂಕಿ ಹಾಕ. ಅದೇನೋ ಒಳ್ಳೆಯ ದಾರಿ ತೋರಿಸ್ತೀ ಅಂತ ಅನ್ಕೊಂಡ್ರೆ, ಬಾರಿನ ಕಡೆಗೆ ತೋರಿಸ್ತೀಯಾ.  ಸ್ವಲ್ಪ ಇರು ನಿನ್ನೆಂಡ್ರಿಗೆ ಹೀಂಗೆ ಹೇಳಿ ಬಿಡ್ತೀನಿ,ಆಗ ಆಕೆನಿಂಗೆ ಚೆನ್ನಾಗಿ ಬಜಾಯಿಸ್ತಾಳೆ.  ಆಗ ತಿಳೀತದೆ.’‘ಬುಡು ಕಣಣ್ಣ. ಹಂಗ್ಯೇನಾದ್ರೂ ಆ ಪಾಟಿ ಮಾಡೀಯಾ.  ಇರಲಿ ಇಸ್ಯಕ್ಕೆ ಬರ್ತೀನಿ.  ಏನೋ ಒಬ್ರು ಸಾಬ್ರು ಎಸ್ರು ಕೇಳಿವ್ನೀ..ತಡ್ಕೋ ಗ್ಯಪ್ತಿ ಮಾಡ್ಕೊಂಡು ಹೇಳ್ತೀನಿ’ ಎಂದು ಕೊಂಚ ಹಾಗೆ ಇರಲು ಸನ್ನೆ ಮಾಡಿದ.  ‘ಸರಿ..ಸರಿ ಅದೇನೋ ಅಂತ ಯೋಚಿಸಿ ಹೇಳು’ ಎಂದು ಅವನನ್ನು ಅಲ್ಲಾಡಿಸಿ ಕೇಳಿದ.‘ಸುಮ್ನಿರು ಕಣ್ಲಾ….ನಂಗೆ ಯೋಚಿಸ್ಲಿಕ್ಕೆ ಬಿಡು’‘ಅಯಿತಾಯಿತು..’ ಎಂದು ಚೆಲುವ ಕೊಂಚ ಹೊತ್ತು ಸುಮ್ಮನಾದ.ಆನಂತರ ಮಾದಣ್ಣ ದೊಡ್ಡ ವಿಜ್ಞಾನಿಯ ಹಾಗೆ ಏನೋ ಕಂಡು ಹಿಡಿದವನಂತೆ  ಜೋರಾಗಿ ಕೂಗಿಕೊಂಡ;‘ಚೆಲುವಾss ಅವನು ಸಿಕ್ಕಾ ! ‘‘ಯಾರದೂ ss ? ‘‘ಅದೇ ನೀನು ಕೇಳಿದೆಯಲ್ಲ ಮಂಡಿ ನೋವಿನ  ಡಾಕ್ಟರ್’ !‘ಹೌದಾ.. ಅತ್ನ ಎಸ್ರು ಏನು ಕಂಡ್ಲಾ ? ಆತ ಎಲ್ಲಿರ್ತಾನೆ ?’‘ಆತ್ನ ಏಸ್ರು ಅಸಗರ್ ಸಾಬ ?’‘ಅದೆಂಥಹ ಹೆಸ್ರು ಕಣ್ಲಾ ಆ ಸಾಬಿಯಪ್ಪಂದು ?’‘ಹಾಗ್ಹೇಳ್ಬಾಡ ಕಣ್ಲಾ, ಮಂಡಿ ನೋವಿಗೆ ಆತ ದ್ಯಾವ್ರು ಕಣ್ಲಾ.  ಶಾನೆೇ ದೂರದಿಂದ ಆ ವಯ್ಯನ ಹತ್ರ  ಜನ ಸಾಲ್ಸಾಲಾಗಿ ಬರ್ತಾರೆ ‘‘ಆಯ್ತಾಯ್ತು..ಆತ್ನಲ್ಲಿಗೆ ನನ್ನ ಕರ್ಕೊಂಡು ಹೋಗು, ನಿಂಗೆ ಶಾನೆೇ  ಪುಣ್ಯ ಬರತೈತಿ’‘ಅಷ್ಟು ಪುರಸತ್ತು ನಂಗಿಲ್ಲ ಕಣಣ್ಣ. ಆತನ ಇಳಾಸ ಏಳ್ತಿನೀ , ನೀನೆ ವಸಿ ಹೋಗಿ ಬಾ’‘ಸರಿ.. ಅಷ್ಟಾದ್ರೂ ಮಾಡು. ಆ ವಯ್ಯನ ಇಳಾಸ ಏಳ್ಬಿಡು ‘‘ಚೆಲುವ..ಆ ಯಪ್ಪನ ಮನೆ ‘ಸಾಲಾರ ಮಸೀದಿ’ ಪಕ್ಕಕ್ಕಿದೆಯಂತಾ ಒಮ್ಮೆ ಯಾರೋ  ಹೇಳಿದ್ರು ಕಣ್ಲಾ.’ ಎಂದ.‘ಅಯ್ಯss ..ಇಳಾಸ ಆಟೆನಾ  ?’‘ಆ ವಯ್ಯನ ಹತ್ರ ಶಾನೆೇ ಜನ ಕೇಳ್ಕೊಂಡು ಬರ್ತಾರೆ.  ನೀನು ಅಲ್ಲಿಗೆ ಹೋದ್ರೆ ತಿಳಿತೈತೆ ಕಣ್ಲಾ.  ಆತ ಸಕತ್ತಾಗಿ ಔಷ್ದಿಕೊಡ್ತಾನಂತೆ.  ಹೀಗೆ ಅಂತಾ ಭಾಳೇ ಜನ ಹೇಳ್ತಾರೆ ಕಣ್ಲಾ’  ‘ಆಯಿತು ಬಿಡು..ಅದರ ಎಳೆ ಸಿಕ್ತಲ್ಲಾ.  ನಾನೇ ಕೇಳ್ಕೊಂತಾ ಓಗ್ತೀನಿ. ಥ್ಯಾಂಕ್ಸ್  ಮಾದಣ್ಣ’ ಎಂದ.‘ಥ್ಯಾಂಕ್ಸ್  ಬ್ಯಾಡ ಬುಡು,.ಬರ್ತೀನಿ ಕಣ್ಲಾ’ ಎಂದು ಹೇಳಿ ಮಾದಣ್ಣ ಹೊರಟು ಹೋದ. ಮಾರನೇ ದಿನ ಚೆಲುವ, ಸಾಲಾರ ಓಣಿ ಕಡೆಗೆ ತನ್ನ ಹೆಜ್ಜೆಗಳನ್ನು ಹಾಕಿದ.  ಹಾಗೋ ಹೀಗೋ  ಹೆಜ್ಜೆ ಹೆಜ್ಜೆಗೂ ವಿಚಾರಿಸಿ ಅಲ್ಲಿ ಸಾಗುತ್ತಿದ್ದ. ಆದರೇ, ಆತನ ಕುರುಹು ಕೂಡಾ ಸಿಗಲಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಚೆಲುವ ಅರ್ಧ ದಿನ ಕಳೆದಿಲ್ಲ ಅದಾಗಲೇ ಡಾಕ್ಟರನ ಹೆಸರನ್ನು ಮರೆತು ಬಿಟ್ಟಿದ್ದ ಮತ್ತು ಅದೀಗ  ನೆನಪಿಗೆ ಬರುತ್ತಿರಲಿಲ್ಲ. ಆಗ ಏನೋ ಅಲ್ಪ ಸ್ವಲ್ಪ ಬುದ್ಧಿ ಉಪಯೋಗಿಸಿ ಅಲ್ಲಿ  ‘ಎಣ್ಣೆ ಡಾಕ್ಟರ್’  ಎಂದು ವಿಚಾರಿಸಿದಾಗ,ಆ ಹೆಸರಿನವರು ‘ಯಾರಿಲ್ಲ’ ಎಂತಲೇ ಹೇಳುತ್ತಿದ್ದರು.    ಚೆಲುವ ಹಾಗೆಯೇ ತೆವಳುತ್ತಾ ಸಾಗುತ್ತಲೇ ಇದ್ದಾಗ,  ಅಲ್ಲೊಂದು ‘ಏಣ್ಣೆ ಬಾರ್‘ ತಲುಪಿದಾಗ, ಅದರ ಮುಂದೆ ಗಕ್ಕನೆ ನಿಂತ !. ಆತನ ಮನಸ್ಸೀಗ ಹೊಯ್ದಾಡುತ್ತಲೇ  ಇತ್ತು ಮತ್ತು ಆತನಿಗೆ ಹೆಜ್ಜೆ ಸಾಗದಾದವು. ಅದಕ್ಕೆ ಕಾರಣ, ಮನಸ್ಸು ವಿಚಲಿತವಾಗಿ ಕೊಂಚ ಏಣ್ಣೆ ಹಾಕುವ ಆಸೆಯು ಆತನಲ್ಲಿ ಜನಿತವಾಯಿತು.  ಏನೋ ಅಲ್ಪ ಸ್ವಲ್ಪ ಹಾಕಿದರೆ ನಡೀತದೆ ಎಂಬ ಮೊಂಡು ಧೈರ್ಯ ಕೂಡಾ ಮೂಡಿತು.  ಆದರೆ, ಮರು ಕ್ಷಣವೇ, ತಾನು ಡಾಕ್ಟರ್ ಬಳಿ ಹೋಗ್ತಿದ್ದೇನೆ, ನನ್ನ ಪರಿಸ್ಥಿತಿ ನೋಡಿ, ನನ್ನ ಮಂಡಿಗಳನ್ನು ನೋಡದೆ ಆತ ಎರಡು ಬಾರಿಸಿ ಕಳಿಸಿದರೆ ಕಷ್ಟ’ ಎಂದು ತನ್ನಷ್ಟಕ್ಕೆ ತಾನೇ ಎಚ್ಚರಗೊಂಡು ನಿರ್ಧಾರ ಬದಲಿಸಿಕೊಂಡ.  ಅದೇ ಸಮಯದಲ್ಲಿ, ಆತನಿಗೆ ತೀರಾ ಪರಿಚಯವಿದ್ದ ಧರ್ಮಣ್ಣ ಬಾರಿನೊಳಕ್ಕೆ ನುಗ್ಗುತ್ತಿರುವುದು ಕಂಡುಕೊಂಡ. ಬಹುಶಃ ಆತನಿಗೆ   ‘ಎಣ್ಣೆ ಡಾಕ್ಟರ್’ ಬಗ್ಗೆ ತಿಳಿದಿರಬಹುದು ಎಂದುಕೊಂಡು ಅವಸರವಸರದಿಂದ ಆತನನ್ನು ತಡೆಯಲೆತ್ನಿಸಿ ಸಫಲನಾದ;‘ಅಣ್ಣಾ..ಏನಿಲ್ಲೀ ?’ ಎಂದು ಆತನನ್ನು ಕೇಳಿದಾಗ;‘ಅರೆ ! ಚೆಲುವಣ್ಣ..ಅದೇನು ನೀನಿಲ್ಲಿ ?’ಹಾಗೆ ಪರಸ್ಪರ ಒಬ್ಬರಿಗೊಬ್ಬರು ಕೇಳಿಕೊಂಡಾದ ಮೇಲೆ, ಇಬ್ಬರೂ ತಲೆ ಕೆಳಗೆ ಮಾಡಿ, ನಾಚಿಕೆ ಗೊಂಡವರಂತೆ ತಲೆ ಕೆರೆದುಕೊಂಡರು. ಆಗ ಚೆಲುವನೇ ಕೇಳಿದ;‘ಏನ್ ಬೆಳ ಬೆಳಗ್ಗೆ ಬಂದೀಯ.. ಎಣ್ಣೆ ನೆನ್ಪು ಕಾಡಿತಾ ಹೇಗೆ ?’‘ಇಲ್ಲ ಚೆಲುವಣ್ಣ,  ಮನೇಲಿ ಯಾವುದೋ ಕಿರಿ ಕಿರಿ..ಅಲ್ಲಿ ಕಾಲ್ಗಳು ನಿಲ್ಲಿಲ್ಲ . ಹಾಗಾಗಿ, ಇಲ್ಲಿಗೆ ದೌಡಾಯಿಸಿ ಬಂದೆ.  ಇಲ್ಲಿ ನೆಮ್ಮದಿ ಸಿಗ್ತದೆ ಕಣಣ್ಣ’ ಎಂದು  ಧರ್ಮಣ್ಣ ಸಮಜಾಯಿಷಿ ನೀಡಿದ.  ‘ಆಯ್ತು ಬುಡು.. ಈಗ ಇಸ್ಯಕ್ಕೆ ಬರ್ತೀನಿ, ನೀನು ನಂಗೆ ಸಹಾಯ ಮಾಡ್ಬೇಕು ಕಣಣ್ಣ’ ಎಂದು ಚೆಲುವ ಪೀಠಿಕೆ ಹಾಕಿದ.‘ಅದೇನ್ಲಾ ?’‘ಈ ಏರಿಯಾನಾಗೆ ಎಣ್ಣೆ ಡಾಕ್ಟ್ರು ಇದ್ದಾರಂತೆ.  ನಿಂಗೇನಾದ್ರೂ ಗೊತ್ತಾ ?’‘ಅದ್ಯಾವ ಎಣ್ಣೆ ಕಣ್ಲಾ ?’  ಎಣ್ಣೆ ಅಂಗಡಿ ಮುಂದೆ ನಿಂತು ಅದೇನ್ಲಾ ಎಣ್ಣೆ ಬಗ್ಗೆಕೇಳ್ತೀಯಾ ?‘ಏಯ್..ಬುಡು..ಹಾಸ್ಯ ಮಾಡ್ಬೇಡ. ನನಗೆ ಮಂಡಿ ನೋವು ಶಾನೆ ಇದೆ. ಹಾಗಂತಾ, ಆತನ್ನ ಹುಡ್ಕೊಂಡು ಬಂದಿವ್ನಿ’‘ಅದ್ಯಾಕೆ ತಿರುಗಾಡಿ ಮತ್ತೇ ಮಂಡಿ ನೋವು ಹೆಚ್ಚಿಗೆ ಮಾಡ್ಕೊಳ್ತೀಯಾ. ಇಲ್ಲೇ ಬಾರಿನಲ್ಲಿ ಎಣ್ಣೆ ಹೊಡೆದು, ರೆಸ್ಟ್ ಮಾಡಿಬಿಡು, ಎಲ್ಲಾ ಹೊಂಟೋಯ್ತದೆ.’ ಎಂದು ಸಲಹೆ ಮಾಡಿದ.‘ಅದೇನು ಹೇಳ್ತೀ  ಧರ್ಮಣ್ಣ, ನಾನೀಗ ಎಣ್ಣೆ  ಹಾಕ್ತಿಲ್ಲ.  ಯಾಕೆಂದ್ರೆ ಡಾಕ್ಟರ್ ತಾವ ಹೋಗ್ತೇನೆ.  ನಾನು ಎಣ್ಣೆ ಹಾಕ್ಕೊಂಡು  ಅಲ್ಲಿಗ ಹೋದ್ರೆ, ಆತ ಬಾರಿಸಿಬಿಡ್ತಾನೆ.’‘ನಿನಗೆ ಎಣ್ಣೆ ಬೇಡಾಂದ್ರೆ ಬೇಡ.  ನನಗಾದರೂ ಸ್ವಲ್ಪ ಅನುಕೂಲ ಮಾಡಿ ಕೊಡು.  ಆಮೇಲೆ ನಿಂಗೆ ಡಾಕ್ಟರ್ ವಿವರ ತಿಳಿಸ್ತೇನೆ’ ಎಂದ ಧರ್ಮಣ್ಣ.ಸ್ನೇಹಿತ ಹೀಗೆ ಹೇಳಿದ ಕೂಡಲೇ, ಚೆಲುವ ಸಂತೋಷಗೊಂಡು ಒಂದು ಕ್ವಾರ್ಟರ್ ಬಾಟಲಿ ಆತಂಗೆ ಕೊಡಿಸಿಯೇ ಬಿಟ್ಟ. ಅದು ಧರ್ಮಣ್ಣನ ಕೈ ಸೇರುತ್ತಲೇ, ಗಟ ಗಟಾಂತ ಕುಡಿದು ಬರಗೆಟ್ಟವನಂತೆ  ಖಾಲಿ ಮಾಡಿ ಬಿಟ್ಟ. !  ಚೆಲುವನಿಗೆ ದಿಗಿಲಾಯಿತು.  ಇವನು ಬರೀ ಎಣ್ಣೆ ಹಾಕಿದ, ಆದ್ರೆ ಆ ಡಾಕ್ಟರ್ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ?  ಚೆಲುವ ಆತನನ್ನು ವಿವರ  ನೀಡಲು  ಪೀಡಿಸಿದಾಗ;‘ಚೆಲುವಣ್ಣ ನೀನು ತುಂಬಾ ಒಳ್ಳೆಯವನು ಕಣ್ಲಾ, ಇನ್ನೊಂದು ಕ್ವಾರ್ಟರ್  ಕೊಡಿಸು,                     ನಾನು ಆಣೆ ಮಾಡಿ ಹೇಳ್ತೇನೆ, ನಿನ್ನನ್ನು ಆ ಎಣ್ಣೆ ಡಾಕ್ಟರ್ ಬಳಿಗೆ ನಾನೇ ಕರ್ಕೊಂಡು ಹೋಗ್ತೇನೆ’ ಎಂದ.‘ಬೇಡ..ಇಷ್ಟೇ ಸಾಕು’‘ಅದೇನು, ನಿಂಗೆ ವಿವರಗಳು ಬೇಕೋ ಬೇಡ್ವೊ ?’‘ಅದ್ಕೆ ಅಂತ್ಲೆ ನಿಂಗೆ ಒಂದು ಕ್ವಾರ್ಟರ್ ಕೊಡಿಸಿದೆ. ನೀನಲ್ಲಿಗೆ ಹೋಗೋದೆನ್ಬೇಡ, ನಂಗೆ ವಿವರ ಕೊಟ್ಬಿಡು.  ನಾನೇ ಅವರನ್ನು ಹುಡ್ಕೊಂಡು ಹೋಗ್ತೇನೆ. ?’‘ಅದ್ಹೇಗೆ  ಸಾಧ್ಯ ?  ನೀನು ನಂಗೆ ಎಣ್ಣೆ ಕೊಡಿಸಲೇ ಬೇಕು ಅಷ್ಟೇ’ ಎಂದ.ಥೂ.!. ಇವನನ್ನು ನಾನೇ ಮೈ ಮೇಲೆ ಎಳೆದುಕೊಂಡ ಹಾಗಾಯ್ತಲ್ಲಾ ಎಂದು ಚೆಲುವ ಪರಿತಪಿಸಿದ. ಈಗ ಚೆಲುವನಿಗೆ ಹೋಗಲೂ ಬಿಡುತ್ತಿಲ್ಲ, ವಿಳಾಸಾನೂ ಕೊಡ್ತಿಲ್ಲ.  ಈಗ ಅನಿವಾರ್ಯತೆ ಮೂಡಿ, ಆತನಿಗೆ ಮತ್ತೊಂದು ಬಾಟಲಿ ಕೊಡಿಸಿದ.  ಅದನ್ನೂ ಕೂಡಾ ತಡ ಮಾಡದೆ ಖಾಲಿ ಮಾಡಿದ ಭೂಪ !. ಅದೇನೋ ಒಮ್ಮೆಲೇ ಅಷ್ಟೆಲ್ಲಾ ಗುಟುಕು ಹಾಕಿದ್ದರಿಂದ ಆತನಿಗೆ ಮಂಪರು ಮೂಡಿದ ಹಾಗೆ ಆಗಿ, ನಿಂತಲ್ಲಿಯೇ  ಕುಸಿದು ಬಿದ್ದು ಅರೆ ಪ್ರಜ್ಞೆಯವನಾದ.  ಚೆಲುವ ಗಾಭರಿಗೊಂಡು, ಆತನನ್ನು ಎತ್ತಿ ಒಂದು ಮೂಲೆಯಲ್ಲಿ ಕುಕ್ಕರಿಸಿ, ತಾನು ಅಲ್ಲಿಂದ ಹೊರಡಲು ಸಿದ್ಧನಾದ.  ಆದರೆ,  ತತ್ ಕ್ಷಣಕ್ಕೆ ಬಹುಶಃ ಕೃತಜ್ಞತೆಯ ಫಲವೋ ಏನೋ ಧರ್ಮಣ್ಣಅಲ್ಪ ಸ್ವಲ್ಪ ಎಚ್ಚರಗೊಂಡು ಚೆಲುವನನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಉಸುರಿದ;‘ಚೆಲುವ  ಥ್ಯಾಂಕ್ಸ್ ಕಣ್ಲಾ.  ನನ್ನಲ್ಲಿ ದುಡ್ಡೇ ಇರಲಿಲ್ಲ. ನಿನ್ನಿಂದ ಹೇಗೋ ಎಣ್ಣೆ ಪಡೆಯುವುದಕ್ಕೆ ಸುಳ್ಳು ಹೇಳಿದೆ.  ನನಗೆ ನಿಜವಾಗಿಯೂ ಯಾವ ಡಾಕ್ಟರ್ ತಿಳಿದಿಲ್ಲ. ನೀನೆ ಪ್ರಯತ್ನ ಮಾಡಿ ತಿಳಿದುಕೋ.  ದೇವ್ರು ನಿಂಗೆ ಒಳ್ಳೇದು ಮಾಡ್ಲಿ’ ಎಂದು ಹೇಳಿ ಧರ್ಮಣ್ಣ ಕೈತೊಳೆದುಕೊಂಡ !  ಚೆಲುವ ಆ ಕ್ಷಣದಲ್ಲಿ ಕೋಪಗೊಂಡರೂ, ತನ್ನ ಖೊಟ್ಟಿ ನಸೀಬಕ್ಕೆ ಶಪಿಸಿದ. ಅಲ್ಲಿಂದ ಹೊರಟು ಬೀದಿಗೆ ಇಳಿದು, ಅತ್ತ ಇತ್ತ ರಸ್ತೆಯಲ್ಲಿ ಗಂಭೀರವಾಗಿ ನೋಡಿದ. ತನಗೆ ಪರಿಚಯದವರ್ಯಾರೂ ಅಲ್ಲಿ ಕಾಣಲಿಲ್ಲ.  ಹಾಗೆಯೇ, ತನ್ನ ಹೆಜ್ಜೆಗಳನ್ನು ಮುಂದುವರೆಸಿ, ಯಾರಲ್ಲಿ ವಿಚಾರಿಸಿದರೆ ತಿಳಿಯಬಹುದು ಎಂದು ಲೆಖ್ಖಚಾರ ಹಾಕಿದ. ಆಗ ಆತನಿಗೊಂದು ವಿಚಾರ ಹೊಳೆಯಿತು. ಆ ಡಾಕ್ಟರ್ ವಿವರ  ಸಾಬ್ರುಗೇನೇ ತಿಳಿದಿರುತ್ತದೆ. ಅವರಲ್ಲಿಯೇ ವಿಚಾರ ಮಾಡಬೇಕು ಎಂದು ಸಿದ್ಧನಾದ. ಆ ನಿಟ್ಟಿನಲ್ಲಿ ಮುಂದಕ್ಕೆ ಸಾಗಿದಾಗ,  ಅದೃಷ್ಠವಾತ್ ಒಬ್ರು  ಸಾಹೇಬರು ರಸ್ತೆಯಲ್ಲಿ ಸಿಕ್ಕಾಗ ಸಂತೋಷಗೊಂಡ.  ಅದೇ ಸಮಯದಲ್ಲಿ ಡಾಕ್ಟರ್ ಹೆಸರು ಅರ್ಧಂಬರ್ಧ ನೆನಪಿಗೆ ಬಂತು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ. ಅಷ್ಟರಲ್ಲಿ ಸಾಬ್ರು ಎದೆಯ ಮೇಲೆಯೇ ಬಂದಂತಾದಾಗ;  ‘ಅಣ್ಣಾ..ಸಾಹೇಬಣ್ಣ ನಂಗೆ ಸ್ವಲ್ಪ ಸಹಾಯ ಮಾಡು ?’‘ಏನ್ ಭೈ..ಏನ್

“ಚಲುವ” ಸಣ್ಣ ಕಥೆ ಬಿ.ಟಿ.ನಾಯಕ್‌ ಅವರಿಂದ Read Post »

ಕಥಾಗುಚ್ಛ

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಉತ್ತಮ.ಎ.ದೊಡ್ಮನಿ “ಸುಧಾ” ಕಾಂಪೌಂಡ್‌ನ ಮೂಲೆಯಲ್ಲಿ ಒಂದು ಪುಟ್ಟ ಕೋಣೆ. ಅದರಲ್ಲಿ ಒಂದು ಸ್ಟೌವ್, ಎರಡು ಪಾತ್ರೆಗಳು, ಎರಡು ತಟ್ಟೆಗಳು, ಒಂದು ಕೊಡ, ಅದರ ಮೇಲೆ ಒಂದು ಗ್ಲಾಸ್. ಗೋಡೆಗೆ ನೇತು ಹಾಕಿದ್ದ ಎರಡು ಜೋಡಿ ಬಟ್ಟೆಗಳು. ಟೇಬಲ್ ಫ್ಯಾನ್.ಓ…ಅದು ಓಡಿದಾಗ ಮನೆಯ ಯಜಮಾನನಂತೆ ಸದಾ ತಲೆ ಅಲ್ಲಾಡಿಸುತ್ತಾ ತನ್ನ ಕೆಲಸದಲ್ಲಿ ಮಗ್ನವಾಗಿರುತ್ತಿತ್ತು. ಕೋಣೆಗೆ ಯಾರಾದರೂ ಬಂದರೆ ಹಾಸಲು ಒಂದು ಸಿಂದಿ ಗಿಡದ ಹಳೆಯ ಚಾಪೆ. ಅದೇ ಚಾಪೆ ರಾತ್ರಿ ರವಿಯ ಹಾಸಿಗೆಯಾಗುತ್ತಿತ್ತು.     ರವಿ ಕಲಬುರಗಿಯಲ್ಲಿರುವ ಸಾವಿತ್ರಿಬಾಯಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಲಬುರಗಿಯಿಂದ ಹತ್ತೊಂಬತ್ತು ಕಿಲೋಮೀಟರ್ ದೂರದ “ಕುಂಟ” ಎಂಬ ಹಳ್ಳಿಯಿಂದ ಬಂದು ತನ್ನ ಬದುಕಿನ ದಾರಿ ಹುಡುಕಿಕೊಂಡಿದ್ದ.ರವಿಯ ತಂದೆ ದ್ಯಾವಪ್ಪನಿಗೆ ಪಾರ್ಶ್ವವಾಯುಯಿಂದ ಹೊರಸಿಗೆ ಸಿಪ್ಟ್ ಆಗಿ ಈಗ ಮೂರು ವರ್ಷಗಳಾಗಿತ್ತು. ಆ ದಿನದಿಂದ ಮನೆಯ ಎಲ್ಲ ಜವಾಬ್ದಾರಿಗಳೂ ರವಿಯ ಹೆಗಲ ಮೇಲೆ ಬಿದ್ದವು. ಮನೆಯ ಹಿರಿಯ ಮಗನಾದ ಕಾರಣ ಯಾವುದಕ್ಕೂ ಇಲ್ಲವೆಂದು ಹೇಳುವ ಅವಕಾಶ ಅವನಿಗಿರಲಿಲ್ಲ. ತಂದೆಯ ಸ್ಥಾನವನ್ನು ತುಂಬುವುದು ಹಿರಿಯ ಮಗನ ಕರ್ತವ್ಯ ಎನ್ನುವ ನಂಬಿಕೆಯಲ್ಲಿ ಬೆಳೆದ ಸಮಾಜ ಇದು.      ತಾಯಿ ನಾಗಮ್ಮ ಕೂಡ ಮಗನ ಜೊತೆಯಾಗಿ ನಿಂತಳು. ಊರಲ್ಲಿ ಸಿಕ್ಕ ಕೂಲಿ ಕೆಲಸ ಮಾಡಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು. ಆದರೆ ಮನೆಯ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿತ್ತು. ತಂದೆಯ ಔಷಧಿ, ತಮ್ಮ-ತಂಗಿಯ ಓದು, ದಿನನಿತ್ಯದ ಜೀವನ—ಇವೆಲ್ಲವನ್ನೂ ಸಾಗಿಸುವುದು ದಿನದಿಂದ ದಿನಕ್ಕೆ ಕಷ್ಟವಾಗತೊಡಗಿತು.ರವಿಗೆ ಆಗ ಇನ್ನೂ ಶಾಲೆಗೆ ಹೋಗಿ ಓದಬೇಕಾದ ವಯಸ್ಸು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನು ಹೇಗಾದರೂ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂದು ಹಗಲು-ರಾತ್ರಿ ಶ್ರಮಿಸುತ್ತಿದ್ದ. ಗಣಿತ ಮತ್ತು ಇಂಗ್ಲಿಷ್ ಅವನಿಗೆ ಕಬ್ಬಿಣದ ಕಡಲೆಯಾಗಿದ್ದವು. ಆದರೂ ಶಿಕ್ಷಕರನ್ನು, ಟ್ಯೂಷನ್‌ಗೆ ಹೋಗುವ ಸ್ನೇಹಿತರನ್ನು ಕೇಳಿ ತನ್ನ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದ.                 “ಒಮ್ಮೆ ಓದಿ ಕೆಲಸಕ್ಕೆ ಸೇರಿದರೆ ಸಾಕು… ಅಪ್ಪ-ಅಮ್ಮನನ್ನು ಕೆಲಸದಿಂದ ಬಿಡಿಸಬೇಕು,” ಎಂಬ ಕನಸು ಅವನ ಮನಸ್ಸಿನಲ್ಲಿ ಸದಾ ಜೀವಂತವಾಗಿತ್ತು.ಆದರೆ ವಿಧಿಯ ಲೆಕ್ಕ ಬೇರೆ ಆಗಿತ್ತು. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ತಂದೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೆಲಸಕ್ಕೆ ಹೋಗುವುದೇ ನಿಂತುಹೋಯಿತು. ಮನೆಯ ಸಂಪೂರ್ಣ ಹೊರೆ ನಾಗಮ್ಮನ ಹೆಗಲ ಮೇಲೆ ವರ್ಗಾವಣೆ ಆಗಿತ್ತು. ತಾಯಿಯ ಕಷ್ಟವನ್ನು ಕಣ್ಣಾರೆ ನೋಡುತ್ತಿದ್ದ ರವಿ, ಓದನ್ನು ಅರ್ಧದಲ್ಲೇ ಬಿಟ್ಟು ಕಲಬುರಗಿಗೆ ಬಂದು ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿಕೊಂಡ.         ಹಗಲು-ರಾತ್ರಿ ದುಡಿದು ಮನೆಯ ಖರ್ಚಿಗೆ ಕಳುಹಿಸುತ್ತಿದ್ದರೂ ಅವನ ಮನಸ್ಸಿನಿಂದ ಓದಿನ ಕನಸು ಎಂದೂ ಮಾಯವಾಗಲಿಲ್ಲ. ಪ್ರತಿ ಬೆಳಗ್ಗೆ ವಿದ್ಯಾರ್ಥಿನಿಲಯದ ಹುಡುಗಿಯರು ಸಮವಸ್ತ್ರ, ಬ್ಯಾಗ್, ಬೂಟು ಧರಿಸಿ ಶಾಲೆಗೆ ಹೋಗುವುದನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ನೋವು ಮಿಂಚುತ್ತಿತ್ತು.“ನಮ್ಮ ಅಪ್ಪನಿಗೆ ಈ ಕಾಯಿಲೆ ಬರದೇ ಇದ್ದಿದ್ದರೆ… ನಾನೂ ಇವರಂತೆ ಶಾಲೆಗೆ ಹೋಗುತ್ತಿದ್ದೆ…” ಎಂದು ಮನದಲ್ಲೇ ಹೇಳಿಕೊಂಡು ಮೌನವಾಗಿ ನಿಂತುಕೊಳ್ಳುತ್ತಿದ್ದ.        ಸಂಜೆ ಶಾಲೆಯಿಂದ ಮರಳಿದ ಹುಡುಗಿಯರು ಅಂಗಳದಲ್ಲಿ ಕುಳಿತು ಪಾಠ ಓದುವುದನ್ನು ನೋಡುತ್ತಾ ಅವರ ಬಳಿಗೆ ಹೋಗಿ, “ಇವತ್ತು ಶಾಲೆಯಲ್ಲಿ ಏನು ಹೇಳಿದ್ರು? ಯಾವ ಪಾಠ ಮಾಡಿದರು?” ಎಂದು ಕುತೂಹಲದಿಂದ ಕೇಳುತ್ತಿದ್ದ.ಕೆಲವರು ಅವನ ಮಾತಿಗೆ ಉತ್ತರಿಸುತ್ತಿದ್ದರು. ಇನ್ನೂ ಕೆಲವರು, “ನಿನಗೆ ಅದೇಲ್ಲ ಏಕೆ? ನಿನ್ನ ಕೆಲಸ ನೋಡಿಕೋ,” ಎಂದು ತಿರಸ್ಕಾರದಿಂದ ಹೇಳುತ್ತಿದ್ದರು.ಆದರೆ ರವಿ ಯಾರ ಮೇಲೂ ಬೇಸರ ಮಾಡಿಕೊಳ್ಳಲ್ಲ. ನನ್ನ ಪಾಲಿಗೆ ಇದೆ ಬಂದಿದೆ ಎಂದು ಮಗುಳ ನಕ್ಕು ಅಲ್ಲಿಂದ ಹೋಗುತಿದ್ದ. ಅಕ್ಷರಗಳ ಮೇಲೆ ಇದ್ದ ಅವನ ಹಸಿವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು.      ವಿದ್ಯಾರ್ಥಿನಿಲಯದ ಹುಡುಗಿಯರು ಎಲ್ಲರೂ ಒಂದೇ ತರ ಇರಲಿಲ್ಲ. ಕೆಲವರು ರವಿಯನ್ನು ಕೇವಲ ವಾಚ್‌ಮ್ಯಾನ್ ಎಂದು ನೋಡುತ್ತಿದ್ದರು. ಎದುರಾದರೂ ಮಾತಾಡದೆ ಹೋಗುತ್ತಿದ್ದರು. ಇನ್ನು ಕೆಲವರು ಕೆಲಸ ಹೇಳಿ ಮುಗಿಸುತ್ತಿದ್ದರು. ಆದರೆ ಅವರಲ್ಲೊಬ್ಬಳು ಮಾತ್ರ ವಿಭಿನ್ನಳಾಗಿದ್ದಳು—ಸುಧಾ.         ಸುಧಾ ಬಿ.ಎ. ಓದುತ್ತಿದ್ದ ವಿದ್ಯಾರ್ಥಿನಿ. ಹಲವು ದಿನಗಳಿಂದ ರವಿಯನ್ನು ಗಮನಿಸುತ್ತಿದ್ದಳು. ಹುಡುಗಿಯರು ಓದುತ್ತಿರುವಾಗ ಅವನು ಅವರ ಹತ್ತಿರ ನಿಂತು ಪಾಠದ ಬಗ್ಗೆ ಕೇಳುವುದು, ಪುಸ್ತಕಗಳನ್ನು ಕುತೂಹಲದಿಂದ ನೋಡುವುದು, ಸಮಯ ಸಿಕ್ಕಾಗ ಹಳೆಯ ನೋಟ್ಸ್ ತಿರುವಿ ನೋಡುವುದು—ಇವೆಲ್ಲ ಅವಳ ಕಣ್ಣಿಗೆ ತಪ್ಪಿರಲಿಲ್ಲ.ಒಂದು ಸಂಜೆ ಅವಳು ರವಿಯನ್ನು ಕರೆದು ಕೇಳಿದಳು.“ರವಿ, ನೀನು ದಿನವೂ ಹುಡುಗಿಯರ ಹತ್ತಿರ ಹೋಗಿ ಪಾಠದ ಬಗ್ಗೆ ಕೇಳ್ತೀಯ. ಯಾಕೆ?”  ಮೊದಲು ರವಿ ಮುಜುಗರಪಟ್ಟ. “ಹಾಗೇ ಅಕ್ಕ…” ಎಂದು ತಪ್ಪಿಸಿಕೊಳ್ಳಲು ನೋಡಿದ.“ಇಲ್ಲ, ನಿಜ ಹೇಳು,” ಎಂದು ಸುಧಾ ಮತ್ತೊಮ್ಮೆ ಕೇಳಿದಳು.ಆ ಮಾತಿನಲ್ಲಿ ಪ್ರೀತಿಯಿತ್ತು, ಕಾಳಜಿಯಿತ್ತು. ರವಿ ತನ್ನ ಮನಸ್ಸಿನ ಬಾಗಿಲನ್ನೇ ತೆರೆದ.      ತಂದೆಯ ಕಾಯಿಲೆ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓದು ನಿಂತದ್ದು, ಮನೆಯ ಹೊರೆ, ತಾಯಿಯ ಕಷ್ಟ, ತನ್ನ ಕನಸು—ಒಂದನ್ನೂ ಬಿಡದೆ ಎಲ್ಲವನ್ನೂ ಶಾಲಾ ಒಪ್ಪಿಸಿಬಿಟ್ಟ,ಮಕ್ಕಳು ಶಿಕ್ಷಕರಿಗೆ ಬಾಯಿಪಾಠ ಒಪ್ಪಿಸಿದಂತೆ.“ಅಕ್ಕಾ… ಓದಬೇಕು ಅನ್ನೋ ಆಸೆ ಇನ್ನೂ ಸತ್ತಿಲ್ಲ. ಆದರೆ ಮನೆಯ ಪರಿಸ್ಥಿತಿ ನನ್ನನ್ನು ಕೆಲಸಕ್ಕೆ ನಿಲ್ಲಿಸಿತು.”ಅವನ ಮಾತು ಮುಗಿಯುವಷ್ಟರಲ್ಲಿ ಸುಧಾಳ ಕಣ್ಣಲ್ಲಿ ನೀರು ಅವಳಿಗೆ ಅರಿವಿಲ್ಲದಂತೆ ಪಾದದಡಿ ಬಿದಿತ್ತು. ಒಂದು ಮಾತೂ ಆಡದೆ ಅವಳು ತನ್ನ ಕೋಣೆಗೆ ಹೋದಳು. ಆ ದಿನ ಸರಿಯಾಗಿ ಊಟವೂ ಮಾಡಲಿಲ್ಲ. ರವಿಯ ಬದುಕಿನ ನೋವು ಅವಳ ಮನಸ್ಸನ್ನು ಕದಡಿತ್ತು.      ಆದರೆ ಆ ದಿನದಿಂದ ಅವರಿಬ್ಬರ ನಡುವೆ ಒಂದು ಹೊಸ ಸಂಬಂಧ ಹುಟ್ಟಿತು. ಪ್ರತಿದಿನ ಬೆಳಿಗ್ಗೆ ಎದುರಾದರೆ ರವಿ,“ಅಕ್ಕಾ, ಊಟ ಆಯ್ತಾ?”“ಕಾಲೇಜಿಗೆ ಲೇಟಾಗೋದಿಲ್ಲವಾ?”“ಏನಾದರೂ ತರಬೇಕಿದ್ದರೆ ಹೇಳಿ. ನಾನೇ ಹೋಗಿ ತರುತ್ತೀನಿ.”ಸುಧಾ ಅವನ ಮಾತುಗಳಲ್ಲಿ ತಮ್ಮನ ಮಮತೆಯನ್ನು ಕಂಡಳು.ರವಿಗೆ ಸುಧಾಳಲ್ಲಿ ಅಕ್ಕನ ನೆರಳು ಕಾಣತೊಡಗಿತು. ದಿನಗಳು ಕಳೆಯುತ್ತಾ ಹೋದವು.     ಒಂದು ದಿನ ಕಾಲೇಜಿಗೆ ಹೊರಡುವ ಮುನ್ನ ಸುಧಾ ರವಿಯ ಬಳಿ ಬಂದು ಹೇಳಿದಳು.“ರವಿ, ನೀನು ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕು.”ರವಿ ಬೆಚ್ಚಿಬಿದ್ದ.“ಅಕ್ಕಾ… ಅದು ಈಗ ಹೇಗೆ ಸಾಧ್ಯ? ನಾನು ಕೆಲಸ ಬಿಟ್ಟರೆ ನಮ್ಮ ಮನೆಯವರು ಏನು ಹಾಲತ್!ಸುಧಾ ನಗುತ ಹೇಳಿದಳು.“ಯಾರು ಕೆಲಸ ಬಿಡು ಅಂತ ಹೇಳಿದರು? ಈಗ ನೇರ ದಾಖಲಾತಿ ಮೂಲಕ ಪರೀಕ್ಷೆ ಬರೆಯಬಹುದು. ಕೆಲಸ ಮಾಡುತ್ತಲೇ ಓದಬಹುದು.”ಆ ಮಾತು ಕೇಳಿದ ಕ್ಷಣ ರವಿಯ ಮುಖದಲ್ಲಿ ವರ್ಷಗಳ ನಂತರ ಮೊದಲ ಬಾರಿಗೆ ನಗು ಅರಳಿತು.ಅವನ ಕಣ್ಣುಗಳಲ್ಲಿ ಮತ್ತೆ ಕನಸುಗಳು ಚಿಗುರೊಡೆಯತೊಡಗಿದವು.        ಮರುದಿನವೇ ಸುಧಾ ತನ್ನ ಮಾತಿನಂತೆ  ದಾಖಲಾತಿ ಮೂಲಕ ರವಿಗೆ ಹತ್ತನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದಳು. ಬೇಕಾದ ಪುಸ್ತಕಗಳನ್ನು ತಂದುಕೊಟ್ಟಳು. ಅಷ್ಟೇ ಅಲ್ಲ, ತನ್ನ ಖರ್ಚಿನ ಹಣದಲ್ಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಿದಳು.”ಇನ್ನು ನೆಪ ಹೇಳಬಾರದು. ಪ್ರತಿದಿನ ಸ್ವಲ್ಪ ಹೊತ್ತಾದರೂ ಓದಬೇಕು,” ಎಂದು ನಗುತ್ತಾ ಹೇಳಿದಳು.      ಆ ದಿನದಿಂದ ರವಿಯ ದಿನಚರಿಯೇ ಬದಲಾಯಿತು.ಹಗಲು ವಾಚ್‌ಮ್ಯಾನ್ ಕೆಲಸ. ರಾತ್ರಿ ಪುಸ್ತಕ.ಸಂಜೆ ಕಾಲೇಜಿನಿಂದ ಬಂದ ನಂತರ ಸುಧಾ ಅವನಿಗೆ ಪಾಠ ಹೇಳಿಕೊಡುತ್ತಿದ್ದಳು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಂದ ನೋಟ್ಸ್ ತಂದುಕೊಡುತ್ತಿದ್ದಳು. ಯಾರಿಗೆ ಯಾವ ವಿಷಯ ಚೆನ್ನಾಗಿತ್ತೋ, ಅವರಿಂದ ಅದನ್ನೇ ರವಿಗೆ ಹೇಳಿಸುತ್ತಿದ್ದಳು.        ಗಣಿತದಲ್ಲಿ ತೊಂದರೆ ಬಂದರೆ ಒಬ್ಬಳು ನೆರವಾಗುತ್ತಿದ್ದಳು.ಇಂಗ್ಲಿಷ್ ಅರ್ಥವಾಗದಿದ್ದರೆ ಇನ್ನೊಬ್ಬಳು ಹೇಳಿಕೊಡುತ್ತಿದ್ದಳು.ವಿದ್ಯಾರ್ಥಿನಿಲಯವೇ ನಿಧಾನವಾಗಿ ರವಿಯ ಶಾಲೆಯಾಗಿ ಮಾರ್ಪಟ್ಟಿತು.ವಾರ್ಡನ್ ಕೂಡ ಅವನ ಆಸಕ್ತಿಯನ್ನು ನೋಡಿ ಪ್ರೋತ್ಸಾಹಿಸಿದರು.   “ರವಿ, ನೀನು ಪಾಸ್ ಆಗಲೇಬೇಕು. ನಿನ್ನಂಥವರೇ ಓದಿದರೆ ಅಕ್ಷರದ ಮೌಲ್ಯ ಗೊತ್ತಾಗುತ್ತದೆ,” ಎಂದು ಧೈರ್ಯ ತುಂಬಿದರು.ಆ ಮಾತುಗಳು ರವಿಗೆ ಹೊಸ ಶಕ್ತಿಯಾಯಿತು. ದಿನವಿಡಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಬೇಕಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಪುಸ್ತಕದ ಕಡೆ ಓಡುತ್ತಿತ್ತು.ಕೆಲವೊಮ್ಮೆ ಕಣ್ಣುಗಳು ನಿದ್ದೆಗೆಜಾರುತ್ತಿದ್ದವು.ಅಷ್ಟರಲ್ಲಿ ಸುಧಾಳ ಮಾತು ನೆನಪಾಗುತ್ತಿತ್ತು.“ಬದುಕು ಬದಲಾಗಬೇಕಾದರೆ ಅಕ್ಷರ ಒಂದೇ ದಾರಿ.”ಆ ಮಾತು ನೆನಪಾದ ಕೂಡಲೇ ಮತ್ತೆ ಪುಸ್ತಕ ತೆರೆದು ಓದಲು ಕುಳಿತುಕೊಳ್ಳುತ್ತಿದ್ದ.ಹೀಗೆ ತಿಂಗಳುಗಳು ಕಳೆದುಹೋದವು.     ಕೊನೆಗೂ ಪರೀಕ್ಷೆಯ ದಿನ ಬಂತು.ಪರೀಕ್ಷಾ ಕೊಠಡಿಗೆ ಕಾಲಿಡುವಾಗ ರವಿಯ ಕೈಗಳು ನಡುಗುತ್ತಿದ್ದವು.ಸುಧಾ ಅವನ ಭುಜದ ಮೇಲೆ ಕೈ ಇಟ್ಟು ಹೇಳಿದಳು.”ಭಯಪಡಬೇಡ ನಿನಗೆ ಗೊತ್ತಿರುವುದನ್ನೇ ಬರೆ, ನಿನ್ನ ಪರಿಶ್ರಮ ನಿನ್ನನ್ನು ಕೈಬಿಡುವುದಿಲ್ಲ.”ಆ ಮಾತು ರವಿಗೆ ಆತ್ಮವಿಶ್ವಾಸ ತುಂಬಿತು.         ಎಲ್ಲಾ ಪರೀಕ್ಷೆಗಳನ್ನೂ ಮುಗಿಸಿ ಫಲಿತಾಂಶಕ್ಕಾಗಿ ಕಾಯಲು ಆರಂಭಿಸಿದ.ಫಲಿತಾಂಶ ಪ್ರಕಟವಾದ ದಿನ ವಿದ್ಯಾರ್ಥಿನಿಲಯವೇ ಹಬ್ಬದ ಸಂಭ್ರಮದಲ್ಲಿತ್ತು.ರವಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.ತನ್ನ ಫಲಿತಾಂಶವನ್ನು ನೋಡಿದ ಕ್ಷಣ ಅವನ ಕಣ್ಣಲ್ಲಿ ನೀರು ತುಂಬಿತು.ಅವನು ನೇರವಾಗಿ ಸುಧಾಳ ಬಳಿ ಹೋಗಿ ಅವಳ ಕಾಲಿಗೆ ಬಿದ್ದ.”ಅಕ್ಕಾ… ಇದು ನನ್ನ ಗೆಲುವಲ್ಲ. ನಿಮ್ಮದು.”ಸುಧಾ ತಕ್ಷಣ ಅವನನ್ನು ಎಬ್ಬಿಸಿದಳು.“ಇಲ್ಲ ರವಿ… ನಾನು ದಾರಿ ತೋರಿಸಿದ್ದೇನೆ ಅಷ್ಟೇ. ನಡೆದದ್ದು ನೀನು.”       ಆ ದಿನ ವಿದ್ಯಾರ್ಥಿನಿಲಯದಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಸಂತೋಷವಿತ್ತು.ಆದರೆ ರವಿಯ ಮನಸ್ಸಿನಲ್ಲಿ ಒಂದೇ ಸಂಕಲ್ಪ ಗಟ್ಟಿಯಾಯಿತು.“ನನಗೆ ಯಾರೋ ಒಬ್ಬರು ಅಕ್ಷರ ಕೊಟ್ಟರು. ನಾನು ಕೂಡ ಮುಂದೆ ಯಾರಿಗಾದರೂ ಅಕ್ಷರದ ಬೆಳಕು ಕೊಡಬೇಕು.”ಅದೇ ಸಂಕಲ್ಪ ಮುಂದೆ ಅವನ ಬದುಕಿನ ಗುರಿಯಾಯಿತು.      ಹತ್ತನೇ ತರಗತಿಯ ಯಶಸ್ಸು ರವಿಯ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.ಅಲ್ಲೇ ನಿಲ್ಲದೆ ಮುಂದೆ ಪಿಯುಸಿ, ನಂತರ ಟಿ.ಸಿ.ಎಚ್. ಪೂರ್ಣಗೊಳಿಸಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಮೊದಲ ನೇಮಕಾತಿ ಆದೇಶ ಕೈಗೆ ಬಂದ ದಿನ ಅವನಿಗೆ ಮೊದಲು ನೆನಪಾದದ್ದು ತನ್ನ ತಾಯಿ ನಾಗಮ್ಮ ಅಲ್ಲ, ಸುಧಾ.“ಅಕ್ಕಾ… ನಿನ್ನ ನಂಬಿಕೆ ಇಂದು ಗೆದ್ದಿದೆ,” ಎಂದು ಮನಸ್ಸಿನಲ್ಲೇ ಹೇಳಿಕೊಂಡ.        ಕೆಲ ದಿನಗಳ ಬಳಿಕ ರವಿ ಸುಧಾಳನ್ನು ಭೇಟಿಯಾಗಲು ಹೋದ. ತನ್ನ ಯಶಸ್ಸನ್ನು ಅವಳೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು.ಆದರೆ ಅವಳ ಮನೆಯ ಮುಂದೆ ಜನಸಮೂಹ ಕಂಡು ಅವನ ಹೆಜ್ಜೆಗಳು ನಿಂತವು.ಮನೆಯೊಳಗೆ ಬಿಳಿ ಬಟ್ಟೆಯಲ್ಲಿ ಮುಚ್ಚಿದ ಎರಡು ದೇಹಗಳು.ಗೋಡೆಯ ಮೇಲೆ ಹೂಹಾರ ಹಾಕಿದ ಎರಡು ಭಾವಚಿತ್ರಗಳು. ರವಿಯ ಹೃದಯ ಒಮ್ಮೆಲೆ ನಿಂತಂತಾಯಿತು. ಒಮ್ಮೆಲೇ ಕತ್ತು ಹಿಸಿಕಿ ಭೂಮಿ ಒಳಗೆ ತಳ್ಳಿದಂತೆ. ತಮ್ಮ ಮಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಸುಧಾ ಮತ್ತು ಅವಳ ಗಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.ಆ ಸುದ್ದಿ ಕೇಳಿದ ರವಿ ಅಲ್ಲೇ ಕುಸಿದು ಕುಳಿತ.“ಅಕ್ಕಾ… ನೀನು ಹೀಗೆ ಹೋಗಬಾರದಿತ್ತು…” ಎಂದು ಮಗುವಿನಂತೆ ಬಿಕ್ಕಿ ಬಿಕ್ಕಿ  ಅತ್ತ.       ಅವನ ಕಣ್ಣ ಮುಂದೆ ಒಂದೊಂದೇ ನೆನಪುಗಳು ಮಿಂಚಿದವು—ಪುಸ್ತಕ ಕೊಟ್ಟ ದಿನ, ಮೊದಲ ಪಾಠ, ಪರೀಕ್ಷಾ ಶುಲ್ಕ ಕಟ್ಟಿದ ಕ್ಷಣ, “ನೀನು ಓದಬೇಕು” ಎಂದು ಹೇಳಿದ ಧ್ವನಿ…ಎಲ್ಲವೂ ಕಣ್ಣೀರಾಗಿ ಹರಿಯಿತು.ಒಂದು ಮೂಲೆಯಲ್ಲಿ ಏನೂ ಅರಿಯದ ಪುಟ್ಟ ಮಗಳು ಕುಳಿತಿದ್ದಳು.ಅವಳೆ ಸುಧಾಳ ಮಗಳು.ಆ ಮಗುವನ್ನು ನೋಡಿದಾಗ ರವಿಯ ಮನಸ್ಸು ಮತ್ತೊಮ್ಮೆ ಒಡೆದುಹೋಯಿತು.        ಮನೆಗೆ ಹಿಂದಿರುಗಿದ ನಂತರವೂ ಅವನು ಸಹಜ ಸ್ಥಿತಿಗೆ ಬರಲಿಲ್ಲ.ಹೆಂಡತಿ ಎಷ್ಟೇ ಸಮಾಧಾನ ಮಾಡಿದರೂ ಅವನ ನೋವು ಕಡಿಮೆಯಾಗಲಿಲ್ಲ.ಒಂದು ರಾತ್ರಿ ಅವನು ಹೆಂಡತಿಯ ಮಡಿಲಲ್ಲಿ ತಲೆ ಇಟ್ಟು ಮಗುವಿನಂತೆ ಅತ್ತ.“ಈ ಬದುಕು ನನ್ನದಲ್ಲ…

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ Read Post »

ಕಥಾಗುಚ್ಛ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ

ಕಥಾ ಸಂಗಾತಿ ದಯಾನಂದ ಪಾಟೀಲರ “ಹೆತ್ತಪ್ಪನ ಕೂಗು…..”   ಅದೊಂದು  ಸಣ್ಣ ಹಳ್ಳಿ ಶಿವಳ್ಳಿ ಸುಂದರ ಹಾಗೂ ಹಸಿರು ತುಂಬಿದ  ವನ ಸಿರಿ. ಕೋಗಿಲೆಯ ಇಂಪು ಪಕ್ಷಿಗಳ ಕೂಗು ನವಿಲುಗಳ ಕುಣಿತ ಹೀಗೆ ಹೇಳುತ್ತಾ ಹೋದರೆ ಕೊನೆಯೆ ಇಲ್ಲ. ಶಿವಳ್ಳಿ ಗ್ರಾಮದ ಮುಖಂಡ ಅವನೇ ಶಿವಲಿಂಗ ಹೆಸರಿಗೆ ತಕ್ಕಂತೆ ಇದ್ದ ಯಾವುದೇ ಸಮಸ್ಯೆ ಇರಲಿ ಪರಿಹಾರ  ಸಿಗುವತನಕ  ಹಠ ಬಿಡುತ್ತಿರಲಿಲ್ಲ ಇವನ ನಿಸ್ವಾರ್ಥ ಸೇವೆ ಕಂಡು ದೇವತಾ ಮನುಷ್ಯ ಎಂದು ಕರೆಯುತ್ತಿದ್ದರು. ಜಾತಿ ಧರ್ಮ ನೋಡದೇ ಸಾವು ನೋವು, ಮದುವೆ ಮನೆಯ ವಾಸ್ತು ಶಾಂತಿ ಎಲ್ಲವನ್ನು ಹೆಗಲು ಮೇಲೆ ಇಟ್ಟುಕೊಂಡು ಪೂರ್ಣ ಮಾಡುತ್ತಿದ್ದ ಕೆಲಸದ ವೈಖರಿ ನೋಡಿ ಹತ್ತಳ್ಳಿಗೆ ಜನಪ್ರಿಯನಾಗಿದ್ದ ಶಿವಲಿಂಗನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು ಇದ್ದರು. ಇಬ್ಬರು ಮಕ್ಕಳಿಗೆ ತಕ್ಕಮಟ್ಟಿಗೆ ಶಿಕ್ಷಣ ಪಡೆದಿದ್ದರೂ ನೂರಾರು ಏಕರೆ ಗದ್ದೆ ಇರುವುದರಿಂದ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸಂತೋಷ ಕಂಡಿದ್ದರು. ತಂದೆಗೆ ಮಕ್ಕಳ ದುಡಿಮೆ ನೋಡಿ ಹೆಮ್ಮೆ ಹಾಗೂ ಅಭಿಮಾನ ಪಡುತ್ತಿದ್ದರು. ಮಕ್ಕಳು ದೊಡ್ಡವರಾದರು. ಮಕ್ಕಳಿಗೆ ಮದುವೆ ಮಾಡಿದರು ಕೆಲವು ವರುಷಗಳ ನಂತರ ಮಕ್ಕಳಿಗೆ ಮಕ್ಕಳು ಹುಟ್ಟಿದವು. ಮೊಮ್ಮಕ್ಕಳನ್ನು ಎತ್ತಿಕೊಂಡು ಆನಂದದ ಕ್ಷಣ ಅನುಭವಿಸುತ್ತಿದ್ದ ಶಿವಲಿಂಗ ಒಂದು ಕಡೆ ಗ್ರಾಮಸ್ಥರ ಪ್ರೀತಿ ಮತ್ತೊಂದು ಕಡೆ ಮಕ್ಕಳ ಮಮತೆ ಆಕಾಶಕ್ಕೆ ಎರಡೇ ಎರಡು ಗೇಣು ಎಂಬ ಭಾವನೆ ಅಡಕವಾಗಿತ್ತು. ತನ್ನ ಹೆಂಡತಿ ರಾಮಕ್ಕ ದೈವಭಕ್ತೆ ಗಂಡನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನು ಮಾಡುತ್ತಿದ್ದಳು. ಮಕ್ಕಳಿಗೆ ತಾಯಿಯಾಗಿ ಮೊಮ್ಮಕ್ಕಳಿಗೆ ಅಜ್ಜಿಯಾಗಿ ಮನೆತನದ ಆಗು ಹೋಗುಗಳನ್ನು ತಾನೇ ಯಜಮಾನಿಯಾಗಿ ತೊಂದರೆಯಾಗದಂತೆ ಸಮಸ್ಯೆಗೆ ಮದ್ದು ನೀಡುವ ಕಲೆ ರಾಮಕ್ಕನಿಗೆ ಒಲಿದು ಬಂದಿತು. ಶಿವಲಿಂಗ ರಾಮಕ್ಕ ಜೋಡಿ ನೋಡಿ ಜನ ಇದ್ದರ ಇಂಗ ಇರಬೇಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಆ ಸ೦ತೋಷ ಬಹಳ ದಿನ ಉಳಿಯಲಿಲ್ಲ ರಾಮಕ್ಕನ ಆಕಾಲಿಕ ಸಾವು ಶಿವಲಿಂಗನಿಗೆ ಆಘಾತ ಜೊತೆ ಬರಸಿಡಿಲು ಕಂಡು ಎದೆ ಹೊಡೆದು ಹೋಗಿತ್ತು. ನನ್ನ ಬಾಳಿಗೆ ನೆರಳಾಗಿ ಬಂದ ಹೆಂಡತಿ ಸತ್ತು ಹೋದಳು ನಾನು ಇಂದು ಅನಾಥನಾದೆ ಬಿಕ್ಕಿ ಬಿಕ್ಕಿ ಅತ್ತ ಆದರೆ ಏನು? ಮಾಡೋದು ಸತ್ತವರು ಮರಳಿ ಬರುವುದಿಲ್ಲ. ರಾಮಕ್ಕನ ಪ್ರೀತಿ ಮುಗ್ಧತೆ ಕಂಡು ಅದೇ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದ. ಮಕ್ಕಳು ಸೊಸೆಂದಿರು ಮನೆಗೊಂದು ಮೂರು ಬಾಗಿಲು ಎಂಬಂತೆ ಬೇರೆ ಬೇರೆಯಾದರು ಶಿವಲಿಂಗ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆದ.  ತಾನು ಇಂದು ದಿಕ್ಕು ಇಲ್ಲದ ಬಿಕಾರಿಯಾಗಿ ನಿಂತಿದ್ದಾನೆ. ಸೊಸೆಂದಿರು ಊಟದಲ್ಲಿ ಸಹ ಪಾಲು ಮಾಡಿಕೊಂಡಿದ್ದಾರೆ ಮುಂಜಾನೆ ಒಬ್ಬರು ರಾತ್ರಿ ಒಬ್ಬರು ಮಕ್ಕಳು ಶಿವಲಿಂಗನನ್ನು ಪಾಲು ಮಾಡಿದ್ದರು ಇದೆಂಥ ಪರಿಸ್ಥಿತಿ ಬಂತು ನಾಯಿಕ್ಕಿಂತ ಕಡೆ,  ಆಸ್ತಿ ಪಾಸ್ತಿ ಮಾಡಿ ಮಕ್ಕಳನ್ನು ಮುದ್ದಾಗಿ ಬೆಳೆಸಿ ಇಂದು ಮಕ್ಕಳು ಬೀದಿಗೆ ತಳ್ಳಿದರು ಇಂಥ ನಾಯಿ ಬದುಕು ಯಾರಿಗೂ ಬರುವುದು ಬೇಡ ಆಕಾಶ ಕಡೆಗೆ ನೋಡುತ್ತಾನೆ. ತಂದೆ ತಾಯಿಗಳು ಹತ್ತು ಮಕ್ಕಳನ್ನು ಪೋಷಣೆ ಮಾಡುತ್ತಾರೆ.  ಆದರೆ ಮಕ್ಕಳಿಗೆ ತಂದೆ ತಾಯಿ ಭಾರ ಎಂದು ವೃದ್ಧಾಶ್ರಮಕ್ಕೆ ಹಾಗೂ ಮನೆಯಿಂದ ಹೊರಗೆ ಹಾಕುತ್ತಾರೆ. ಶಿವಲಿಂಗನ ತಲೆಯಲ್ಲಿ ಓಡುವ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ತಾನು ನಿಂತ ಭೂಮಿ ಬಾಯಿ ತೆರೆದು ಬಾ…ಬಾ ಎಂದು ಕರೆಯುತ್ತಿದೆ. ತಂದೆಯೆಂದರೆ ಸ್ವಾಭಿಮಾನಿ ತಂದೆಯಂದರೆ ಹಠವಾದಿ ದಯಾಮಾಯಿ ಎಂದು ಕರೆಯುವ ನಾವು ಇದೇ ನಾ ನಾವು ನೀಡುವ ಕೊಡುಗೆ ನಾ ? ಇದ್ದಾಗ  ಆಹಾರ  ಆಶ್ರಯ ನೀಡದೇ ಪ್ರೀತಿ ಮಾನವೀಯತೆ ಮಾಡದೇ ಹಣ ಅಧಿಕಾರ ಗಳಿಕೆ ಮಾಡಿದರೆ ಏನು? ಉಪಯೋಗ ಹೇಳಿ? ಕಾಲ ಚಕ್ರ ಹೀಗೆ ತಿರುಗುತ್ತ ಇರುತ್ತದೆ. ಇಂಥ ಘಟನೆಗಳಿಗೆ ಕೊನೆ ಇಲ್ಲವೆ? ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ

“ಹೆತ್ತಪ್ಪನ ಕೂಗು…..” ದಯಾನಂದ ಪಾಟೀಲರ ಸಣ್ಣಕಥೆ Read Post »

ಅನುವಾದ, ಕಥಾಗುಚ್ಛ

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಕಥಾ ಸಂಗಾತಿ “ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು ದಿ ಮೇಕಿಂಗ್  ಆಫ್  ಅವರ್ ಡ್ರಾಮ-ದೇಶ ದ್ರೋಹಿಗಳುತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು “ಸಾರ್, ಈಬಾರಿ ಆಗಸ್ಟ್  ಹದಿನೈದರಂದು ನಾವು ಕೂಡಾ ಒಂದು ನಾಟಕ ಪ್ರದರ್ಶಿಸಲು ಬಯಸುತ್ತಿದೇವೆ ಸಾರ್”ಸ್ಟಾಫ್  ರೂಮಿನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ವಿಜಯಕುಮಾರ್ ಸಾರ್ ಮುಂದೆ ನಮ್ಮ ಬಯಕೆಯನ್ನು ನಾನು-ಮಲ್ಲಿ ಹೇಳಿಕೊಂಡೆವು.ವಿಜಯಕುಮಾರ್ ಸಾರ್  ತೆಲುಗು ಶಿಕ್ಷಕರಷ್ಟೇಅಲ್ಲ, ಸಾಹಿತ್ಯ ಮತ್ತು ನಾಟಕಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲೆನ್ನ ಸಾರ್ ಜೊತೆ ಸೇರಿ ಹಲವುನಾಟಕಗಳು,ಮತ್ತು ಏಕಾಂಕಗಳನ್ನು ಪ್ರದರ್ಶಿಸಿದ ಅನುಭಅವ ಅವರಿಗಿದೆ.“ಯಾವ ನಾಟಕವಪ್ಪಾ?” ಎಂದುಕೇಳಿದರು.“ದೇಶದ್ರೋಹಿಗಳು” ನಾನು ಉತ್ತರಿಸಿದೆ.“ದೇಶದ್ರೋಹಿಗಳಾ ? ಎಂದೂ ಕೇಳಿಲ್ಲವಲ್ಲಾ, ಬರೆದವರು ಯಾರು? ಸ್ಕ್ರಿಪ್ಟ್ಇದೆಯೇ?” ಎಂದು ಕೇಳಿದರು.“ನಾನೇ ಬರೆಯುತ್ತಿದ್ದೇನೆ ಸಾರ್, ಇನ್ನೂ ಮುಗಿದಿಲ್ಲ, ಇನ್ನೆರಡು ದಿನಗಳಲ್ಲಿ ತೋರಿಸ್ತೇನೆ ಸಾರ್” ಅಂದೆ.ಅದಕ್ಕೂ ಮುಂಚೆ ಏಳನೇ ಕ್ಲಾಸ್ ನಲ್ಲಿ ನಮ್ಮ ECA (Extra Curricular Activities)ಪಿರಿಯಡ್ ನಲ್ಲಿ ನಾನು ಬರೆದ ‘ಈ ಸಮಾಜ ಬದಲಾಗದೆ?’ ಎಂಬ ಏಕಾಂಕ ನಾಟಕವನ್ನು,ಅದಕ್ಕೂ ಮುಂಚೆ ನಮ್ಮ ಕ್ಲಾಸ್ ಪುಸ್ತಕದಲ್ಲಿ ಇರುವ ‘ಬುರ್ರಕಥೆ’ ಯನ್ನು ಅನುಸರಿಸುತ್ತಾ  ಚಂದ್ರಶೇಖರ್, ನಾನು, ಕೂನ ಶ್ರೀನಿವಾಸ್ ಪ್ರದರ್ಶಿಸಿದ ವಿಷಯ ನೆನಪಿದ್ದರಿಂದ ಆಶ್ಚರ್ಯಪಡಲಿಲ್ಲ. ಆದರೆ ಎಷ್ಟು ಮಾತ್ರವೂ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ,“ಏನೋ, ಸ್ಕ್ರಿಪ್ಟ್ ರೆಡೀ ಇರುವ ನಾಟಕಗಳಿಗೆ ರಿಹರ್ಸಲ್ಮಾಡಿಸಲು ಸಮಯ ಸಾಕಾಗುತ್ತದೋ, ಇಲ್ಲವೋ ಎಂದು ನಾವು ಯೋಚಿಸುತ್ತಿದ್ದರೆ, ನಿಮ್ಮ ಸ್ಕ್ರಿಪ್ಟ್ ಇನ್ನೂ ರೆಡೀನೇ ಇಲ್ಲ. ಯಾವಾಗ ಬರೆಯುತ್ತೀರಿ? ಯಾವಾಗ ಪ್ರಾಕ್ಟೀಸ್ ಮಾಡುತ್ತೀರಿ? ಇದು ಸಾಧ್ಯವಾಗುವ ಕೆಲಸ ಅಲ್ಲ” ಎಂದು ಹೇಳಿದರು.ನಮಗೆ ನಿರಾಶೆಯಾಯಿತು. ಆದರೆ ಹಿಂದೆ ಸರಿಯಲಿಲ್ಲ. ಅಲ್ಲಿರುವಾಗಲೇ ನಾನು, ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಅವರನ್ನು ಹೇಗೆ ಒಪ್ಪಿಸುವುದು ಎಂದು ಯೋಚಿಸುತ್ತಿರುವಾಗ, ಏನಂದುಕೊಂಡರೊ ಏನೋ  ಅವರೇ-“ಸರಿ ಅಪ್ಪಾ, ಒಂದು ಕೆಲಸ ಮಾಡಿರಿ. ಇವತ್ತು ಇಪ್ಪತ್ತಾರು ಅಲ್ಲವೇ? ಮುವ್ವತ್ತನೇ  ತಾರೀಕಿನ  ಒಳಗೆ  ಸ್ಕ್ರಿಪ್ಟ್ ,ಟೀಮ್ ಎಲ್ಲಾ ರೆಡಿಯಾದರೆ ನಿಮ್ಮ ಡ್ರಾಮಾ  ಇರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ ಹಾಕಿರಿ” ಎಂದರು.“ಸರಿ ಸಾರ್” ಎಂದು ನಾವು ಖುಷಿಯಿಂದ ಹೇಳಿ,ಇನ್ನೂ ಅಲ್ಲೇ ಇದ್ದರೆ, ಮತ್ತೆ ಎಲ್ಲಿ ಅವರ ಮನಸು ಬದಲಾಗುತ್ತದೋ ಎಂದು ಒಂದೇ ಹೆಜ್ಜೆಯಲ್ಲಿ ಹೊರ ಬಿದ್ದೆವು.ನಾವು ಹೊರಗೆ ಬಂದು ಯೋಚಿಸ ತೊಡಗಿದೆವು.ತಲೆಯಲ್ಲಿ ಹೀರೋ ಕೃಷ್ಣ ಅವರ ಸಿನಿಮಾಗಳು ಗಿರ್ರೆಂದು ಸುತ್ತುತ್ತಿದ್ದವು. ಗೂಢಚಾರಿ (ಗೂಢಚಾರ) 116, ಏಜೆಂಟ್  ಗೋಪಿ ಕಣ್ಣ ಮುಂದೆ ಕದಲುತ್ತಾ ಇರುತ್ತವೆ. ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ  ರಫ್  ಸ್ಕೆಚ್ ಇದೆ. ಅದರ ತುಂಬಾ ಈಗ  ‘ವನ್ಸ್ ಮೋರ್ ‘ ಡೈಲಾಗ್‌ಗಳಿಂದ ತುಂಬಿಸಬೇಕು. ಇಡೀ ನಾಟಕ ತುಂಬಾ  ಬಂದೂಕಿನ     ವ್ಯವಹಾರವಾಗಿದ್ದರಿಂದ ಮಾತುಗಳು  ಕೂಡಾ ಗುಂಡುಗಳಂತೆ ಸಿಡಿಯಬೇಕು. ಖಳನಾಯಕನ‘ಚಾಲೆಂಜ್ ಮಾತುಗಳು, ಹೀರೋ ಪಂಚ್ ಡೈಲಾಗ್ ಗಳು  ಉತ್ಪ್ರೇಕ್ಷಿತ ಅಲಂಕಾರಗಳಿಂದ ನಡುಗಬೇಕು. ಫಿರದೌಸಿ ಷಾನಾಮಾ ಗ್ರಂಥಕ್ಕೆ ಪಟ್ಟಿರುವ ಕಷ್ಟವನ್ನು ಪಟ್ಟಿದ್ದೇನೆ. ತಿನ್ನುತಿದ್ದರೂ, ತರಗತಿಯಲ್ಲಿದ್ದರೂ, ಮನೆಗೆ,ಶಾಲೆಗೆ ಹೋಗುತ್ತಿದ್ದರೂ, ಅವೇ ಆಲೋಚನೆಗಳು. ಯಾವಾಗ  ಯಾವ ಡೈಲಾಗ್ ಮನಸ್ಸಿಗೆ ಹೊಳೆಯುತ್ತದೋ ತಿಳಿಯದು, ಅದರಿಂದ, ನಾಟಕ ಬರೆಯುತ್ತಿದ್ದ ಲೇಪಾಕ್ಷಿ ನೋಟ್ ಬುಕ್ ಯಾವಾಗಲೂ ನನ್ನೊಂದಿಗೆ ಇರುತ್ತಿತ್ತು. ಎಷ್ಟೋ ಬರಹಗಳು, ಹೊಡೆದು ಹಾಕುವುದು, ತಿದ್ದುಪಡಿಗಳಾದ ಮೇಲೆ  ಇಡೀ ಸ್ಕ್ರಿಪ್ಟ್  ಒಂದು ಸ್ತರಕ್ಕೆ ಬಂದಿತ್ತು. ಈಗ ನಮಗೆ ನಟೀ ನಟರು ಬೇಕು. ಹೀರೋ  ಇನ್ ಸ್ಪೆಕ್ಟರ್ ಆದ್ದರಿಂದ ಇನ್ನೂ ಇಬ್ಬರು ಅಥವಾ ಮೂವರು ಪೋಲೀಸು ಪೇದೆಗಳು ಇರಬೇಕು. ವಿಲನ್  ದೊಡ್ಡ ಡಾನ್. ಅದ್ದರಿಂದ ಅವನಿಗೆ  ಅನುಚರಗಣ ಇರಬೇಕು. ಅವರು ಇಬ್ಬರು ಅಥವಾ ಮೂವರು ಇರಬೇಕು. ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುವ ಡಾನ್‌ನ್ನ ಗುಪ್ತವೇಷದಲ್ಲಿ ಬಂದಿರುವ ಹೀರೋ ಹೇಗೆ ವಿಲನ್ ಕಥೆಯನ್ನು ಮುಗಿಸುತ್ತಾನೆ ಎಂಬುದು ಕಥಾಂಶ.   ಆಗಲೂ ನಮ್ಮ ಮಿತ್ರರಾದವರು, ನಮ್ಮ ಮಾತು ಕೇಳುವವರು ಎಂಬ ಅಂಶಗಳ ಆಧಾರದಮೇಲೆ ನಟಿ ನಟರ ಆಯ್ಕೆ ಮುಗಿಸಿದ್ದೇನೆ. ಪಾತ್ರಗಳು- ಪಾತ್ರಧಾರಿಗಳು ಎಂಬ ಪೇಪರ್ ಮುಂದೆ ಇಟ್ಟುಕೊಂಡು, ಬಾಕಿ ಸ್ಕ್ರಿಪ್ಟ್ ಎಲ್ಲ ಬರೆದಿರುವ ನೋಟ್ ಬುಕ್ ಹಿಡಿದುಕೊಂಡು ವಿಜಯಕುಮಾರ್ ಸಾರ್ ರೂಮಿಗೆ ಹೋದೆ.ಅಷ್ಟುಹೊತ್ತಿಗೆ ಸಾರ್  ಬೇರೆ ತರಗತಿಗೆ ಹೋಗುವ ಆತುರದಲ್ಲಿದ್ದರು. ಒಮ್ಮೆ ಇಡೀ ಸ್ಕ್ರಿಪ್ಟ್ ಇದೆಯೋ ಇಲ್ಲೋ ಎಂದು ನೋಡಿಕೊಂಡು ಸಮಾಧಾನಪಟ್ಟೆ.“ಸರಿ ಕಣಯ್ಯ, ಎಷ್ಟು ಸಮಯತೆಗೆದು ಕೊಳ್ಳುತ್ತದೆ?” ಎಂದು ಕೆಳಿದರು,ಡಸ್ಟರ್, ಚಾಕ್ ಪೀಸ್ ತೆಗೆದುಕೊಳ್ಳುತ್ತ-“ಇನ್ನೂ ನೋಡಿಲ್ಲ ಸಾರ್, ಇವತ್ತು ಸಾಯಂಕಾಲ ಎಲ್ಲರನ್ನು ಬರುವಂತೆ ಹೇಳಿದ್ದೀನಿ. ಒಮ್ಮೆ ರಿಹರ್ಸಲ್ಸ್ ಮಾಡಿದ್ರೆ ಗೊತ್ತಾಗುತ್ತೆ” ಎಂದೆ.“ಅದು ಬೇಕಾಗಿಲ್ಲ, ನಿನಗೆ ಎಲ್ಲರೂ ಸಿಕ್ಕಿ, ಎಲ್ಲರಿಗೂ ಡೈಲಾಗ್‌ಗಳು ಬಾಯಿಗೆ ಬಂದು ಅವರು ಅಭ್ಯಾಸ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀನೆ ಎಲ್ಲ ಡೈಲಾಗ್ ಗಳನ್ನು ಹೇಗೆ ಬರೆದಿದ್ದೀಯೋ  ಹಾಗೆ ಓದುತ್ತಾ, ನಡುವೆ ನಡುವೆ ಗ್ಯಾಪ್ ಕೊಡುತ್ತಾ ಹೋದರೆ ನಿನಗೆ ಗೊತ್ತಾಗುತ್ತೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೋ ನನಗೆ ಸಂಜೆಗೆ ಹೇಳು” ಅಂದರು.ನಾನು ಕೂಡಲೇ ನನ್ನ ತರಗತಿಗೆ ಹೋದೆ. ಮಧ್ಯಾಹ್ನ ಲಂಚ್ ಸಮಯದಲ್ಲಿ ಬೇಗಬೇಗನೆ ಮುಗಿಸಿ, ಎಲ್ಲ ಪಾತ್ರಧಾರಿಗಳ ಡೈಲಾಗ್ ಗಳನ್ನು ಅಭಿನಯಿಸುತ್ತಾ ಹೋದರೆ  ಹದಿನೈದು ನಿಮೊಷಗಳು ತೆಗೆದುಕೊಳ್ಳಿತ್ತು. ಸಂಜೆ ನಾನು ಹೋಗಿ ಸಾರ್ ಗೆ ಹೇಳಿದೆ. ಅವರು ಸ್ಟೇಜ್ ಬದಲಾವಣೆಗಳು ಮತ್ತು ವಿರಾಮಗಳನ್ನು ಒಳಗೊಂಡಂತೆ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಿದರು.“ಸರಿ, ನೀವು ಹೋಗಿ ರಿಹರ್ಸಲ್ಸ್  ಮಾಡಿಕೊಳ್ಳಿ.ಹನ್ನೆರಡನೇ ತಾರೀಖಿಗೆ  ನಾನು, ಅಲ್ಲೆನ್ನ ಸಾರೂ ಬಂದು ನೋಡ್ತೀವಿ” ಎಂದು ಹೇಳಿದಾಗ ಹೃದಯ ಸಂತೋಷದಿಂದ ಕುಣಿಯಿತು.  ನಾನು ತಕ್ಷಣ ಮಲ್ಲಿ ಕಡೆಗೆ ಹೋದೆ. . ಅವನು ಕೂಡಾ ತನ್ನ ಪಾತ್ರಕ್ಕೆ ತಕ್ಕ ಕೆಲವು ಡೈಲಾಗ್ ಗಳನ್ನು ಬರೆದುಕೊಂಡು ಸಿದ್ದವಾಗಿದ್ದ.ನಾವಿಬ್ಬರೂ ಕುಳಿತು ಫೈನಲ್  ಸ್ಕ್ರಿಪ್ಟ್  ಸಿದ್ಧಪಡಿಸಿದೆವು. ಮರುದಿನದಿಂದ ರಿಹಾರ್ಸಲ್ಸ್  ಎಂದು ಹೇಳಿ ಎಲ್ಲರನ್ನು ಸಂಜೆ ಶಾಲೆ ಮುಗಿದಮೇಲೆ ತರಗತಿ ಕೋಣೆಯಲ್ಲೇ ಇರಲು ಹೇಳಿದೆ. ಹಾಗೆ ಮರುದಿನ ನಾವು ಎಲ್ಲರೂ ಸೇರಿದವು. ಆಗಲೇ ನಾನು ಎಲ್ಲರಿಗೂ ಅವರವರ ಡೈಲಾಗ್ ಗಳು ಪ್ರತ್ಯೇಕವಾಗಿ ಬರೆದು ಹಂಚಿದೆ. ಕಡಿಮೆ ಡೈಲಾಗ್ ಗಳು ಬಂದವರುಸ್ವಲ್ಪ ಮುಖ ಸಪ್ಪಗೆ ಮಾಡಿಕೊಂಡರು. ಅವನು ಎಸ್‌.ಐ.ಆದರೆ  ನಾನು ಕಾನಸ್ಟೇಬಲ್ ಆಗುವುದಿಲ್ಲ ಎಂದು ಕೆಲವರು ಹಠ ಹಿಡಿದರು. ಡಾನ್‌ ಆಗಿ ನಾನಿರುತ್ತೇನೆ ಎಂದು ಕೆಲವರು ಡಿಮಾಂಡ್  ಮಾಡಿದರು. ಎಲ್ಲರನ್ನು ಸಮಾಧಾನಮಾಡಿ, ಬೇಡಿಕೊಂಡು, ದಾರಿಗೆ ತರಲು ಆ ದಿನ ಕಳೆದುಹೋಯಿತು.ಮರುದಿನ ತರಗತಿಯಲ್ಲಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿದ್ದಾಗ,ಹಿಂದಿನದಿನ ಒಪ್ಪಿಕೊಂಡವರು ತಮ್ಮ‌ ಹಿತೈಷಿಗಳ ಮಾತು ಕೇಳಿ  ರಿಹರ್ಸಲ್ಸ್ ಗೆ ಬರಲು ನಿರಾಕರಿಸಿದರು. ಯಾರು ಅನಿವಾರ್ಯವಾಗಿ/ ಅವಶ್ಯಕವಾಗಿ  ಬೇಕೋ ನಿರ್ಧರಿಸಿ, ಉಳಿದ ಪಾತ್ರಗಳಿಗೆ ಇಬ್ಬರು ಮೂವರನ್ನು ಸ್ಪೇರ್  ಆಗಿ ಇಟ್ಟುಕೊಂಡು, ಅವರಿಗೆ ಅಸಿಸ್ಟೆಂಟ್  ಡೈರೆಕ್ಟರ್ ಸ್ಥಾನಮಾನ ಕೊಟ್ಟು, ನಾಟಕದಲ್ಲಿ ಸಾಧ್ಯವಾದರೆ ಒಂದು ಪಾರ್ಟ್ ಕೊಡುತ್ತೇನೆ ಎಂದು ಆಶೆ ತೋರಿಸಿ ಒಪ್ಪಿಸಲು ಸಾಕುಸಾಕಾಯಿತು.ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಫುಲ್ ರಿಹರ್ಸಲ್ಸ್  ಶುರುವಾಗಲಿಕ್ಕೆ ಮೂರುದಿನ ಬೇಕಾಯಿತು.ವೇದಿಕೆಯ ಅಲಂಕಾರ, ನಡುವೆ ನಡುವೆ ಅಂಕಗಳು ಬದಲಾಗುವುದು ಅವೆಲ್ಲಾ ಲೆಕ್ಕಿಸಲಾಗಲಿಲ್ಲ. ನಿಜಕ್ಕೆ ನಾವು ಬಣ್ಣಗಳು ಬಳೆದುಕೊಂಡು,ಒಳ್ಳೆಯ ಸ್ಟೇಜ್ ಮೇಲೆ ವೇಷ ಧರಿಸುತ್ತೇವೆ ಎಂದು ಭಾವಿಸಿರಲಿಲ್ಲ.ನಮಗೆ ಸ್ವಲ್ಪ ಸಮಯ ಕೊಡುತ್ತಾರೆ . ನಾವು ಮಾಡಬೇಕಾದ್ದು ಮಾಡುತ್ತೇವೆ ಎಂದು ಭಾವಿಸುತ್ತಿದ್ದೆವು. ರಿಹಾ ರ್ಸಲ್ಸ್  ನಡೆಯುತ್ತಿದ್ದವು. ಪಾತ್ರಗಳು ಸಿಗದವರು,  ನಮ್ಮನ್ನು ತಮಾಷೆ ಮಾಡುತ್ತಿದ್ದರು. ಗೇಲಿಮಾಡುತ್ತಿದ್ದರು. ಹಿಂದೆ ಸೇರಿಕೊಂಡು ಕಾಮೆಂಟ್  ಮಾಡುತ್ತಿದ್ದರು.ಅವರ ಕಾಮೆಂಟ್‌ಗಳಿಗೆ,ನೊಂದುಕೊಂಡವರು ನಾಟಕದಿಂದ  ಹೊರಟುಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮರುದಿನದಿಂದ ಸಾರ್ ಗೆ ಹೇಳಿ ನಮ್ಮ ಟೀಮನ್ನು  ರೂಮಿನೊಳಗೆ ಬರಮಾಡಿಕೊಂಡು ಬಾಗಿಲುಗಳು ಮುಚ್ಚಿಕೊಂಡು ಪ್ರಾಕ್ಟೀಸ್ ಮಾಡಿದೆವು.  ಆದರೂ ಕೆಲವರು ಕಿಟಕಿಯ ಬಳಿ ನಿಂತು,ಬಾಗಿಲಿನ ಸಂದುಗಳಿಂದ ಕಾಮೆಂಟ್ ಗಳು ಮಾಡುತ್ತಲೇ ಇದ್ದರು.ಹತ್ತು ದಿನಗಳ ನಂತರ ಇಡೀ ವಿಷಯ ಒಂದು ಹಂತಕ್ಕೆಬಂದಿತು. ಅಷ್ಟರೊಳಗೆ ಹನ್ನೆರಡನೆ ತಾರೀಕು ಬಂದಿತ್ತು. ವಿಜಯಕುಮಾರ್ ಸಾರ್ , ಮತ್ತು ಅಲ್ಲೆನ್ನ  ಸಾರ್  ಬಂದರು. ನಾವು ಅವರಿಗಾಗಿ ನಮ್ಮ ನಾಟಕವನ್ನು ಪ್ರದರ್ಶಿಸಿದೆವು. ಸಣ್ಣಸಣ್ಣ ಬದಲಾವಣೆಗಳನ್ನುಸೂಚಿಸಿದರು. ಒಟ್ಟಾರೆ ಲಾಜಿಕಲ್ ಆಗಿ ನೋಡಿದರೆ ಚನ್ನಾಗಿದೆ  ಎಂದರು ಅಲ್ಲೆನ್ನ ಸಾರ್.  ವಿಜಯಕುಮಾರ್ ಸಾರ್  ಏನನ್ನೂ ಮಾತಾಡಲಿಲ್ಲ. ಅವರು ನನ್ನನ್ನು ಕರೆದು  ಯಾವ ದೃಶ್ಯಕ್ಕೆ ಯಾವ ಹಿನ್ನೆಲೆ ಇರಬೇಕು, ಸ್ಟೇಜ್ ಮೇಲೆ ಯಾವ ಯಾವವಸ್ತುಗಳು ಅಗತ್ಯವೋ ವಿವರವಾಗಿ ಬರೆಯಬೇಕೆಂದು, ಅದರ ಪ್ರಕಾರವೇ  ಅಲಂಕಾರಮಾಡುತ್ತಾರೆಂದು ಹೇಳಿದರೇ ಆಶ್ಚರ್ಯ ಪಟ್ಟೆ. ಇಷ್ಟೆಲ್ಲಾ ವ್ಯವಸ್ಥೆ ಇರುತ್ತದೆಂದು, ಇಷ್ಟು ಆಡಂಬರವಾಗಿ ಇರುತ್ತದೆಂದು ನನಗೆ ಗೊತ್ತಿರಲಿಲ್ಲ. ಊಹಿಸಿರಲಿಲ್ಲ. ಆಶಿಸಿರಲೂ ಇಲ್ಲ. ನನ್ನ ಜೀವನದಲ್ಲಿ ನಾನು ಆಶಿಸಿದ್ದು ಬಹಳ ಕಡಿಮೆ. ಹಾಗಾಗಿ ನಿರೀಕ್ಷೆಗಿಂತಲೂ ಹೆಚ್ಚಾಗಿ ಸಿಕ್ಕಿದೆ. ಮೊದಲನೆಯ ನಾಟಕ–ಅಷ್ಟು ಜನರ ಮುಂದೆ!ನನ್ನ ಉತ್ಸಾಹ ದುಪ್ಪಟ್ಟಾಯಿತು. ಮಲ್ಲಿ, ಜೈನುಲ್ಲಾ, ಚೆನ್ನಯ್ಯ, ರಮಣ, ಜಾಕೀರ್, ಅಚ್ಚಯ್ಯ, ನಾವೆಲ್ಲರೂ ತಯಾರಾಗಿದ್ದೇವೆ. ಆಗಾಗ ಡೈಲಾಗ್ ಗಳನ್ನು ಮನನಮಾಡಿಕೊಂಡು,ಎಲ್ಲಾ  ದೃಶ್ಯಗಳನ್ನು ರಿವೈಂಡ್ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ನಾಟಕದ ಬಗ್ಗೆ  ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಗೆಳೆಯರನ್ನು ನಾಟಕದ ಹೆಸರಿನಿಂದ ಕರೆಯುವುದು, ನಾವು ಪ್ರಾಕ್ಟೀಸ್  ಮಾಡುವಾಗ ನೋಡಿದ, ಕೇಳಿದ  ಡೈಲಾಗ್ ಗಳು ತರಗತಿಯಲ್ಲಿ ಬೇರೆಯವರಮೇಲೆ ಪ್ರಯೋಗಿಸುವುದು,‘ಅರೆ!,ಗಬ್ಬರ್  ಬರುತ್ತಿದ್ದಾನೋ’ ಎಂದು ತಮಾಷೆ ಮಾಡುವುದು ಮಾಮೂಲು ವಿಷಯವಾಯಿತು. ಈಗ ಅದು ನೆನೆದರೆ ನಗು ಬರುತ್ತದೆ, ಆದರೆ ವಿಪರೀತವಾದ ಕೊಪವೂ ಬಂದು, ನಾಟಕದಲ್ಲಿ ಬಳಸಿದ ಡಮ್ಮೀ  ಗನ್ನು  ನಿಂದ ಷೂಟ್ ಮಾಡಬೇಕೆಂದು ಅನ್ನಿಸುತ್ತಿತ್ತು. ಅಷ್ಟು ಗಲಭೆ ಮತ್ತು ಅಪಹಾಸ್ಯನಡೆಯುತ್ತಿತ್ತು.ಆಗಸ್ಟ್  ಹದಿನೈದು ಬಂತು. ಎಲ್ಲಾ ತೊಡಕುಗಳನ್ನು ದಾಟಿ,ನಾವು ಗ್ರೀನ್ ರೂಮಿನಲ್ಲಿಮುಖಕ್ಕೆ ಬಣ್ಣ ಬಳಿದು ಕೊಳ್ಳುತ್ತಿದ್ದರೆ ಅದೊಂದು ಅನಿರ್ವಚನೀಯ ಅನುಭವ.ಮೊದಲು ನಮ್ಮ ನಾಟಕ ಮುಗಿಸಿದನಂತರ ವಿಜಯಕುಮಾರ್ ಸಾರ್ ಅವರ ನಾಟಕ ಪ್ರದರ್ಶಿಸಬೇಕು. ನಾಟಕದ ಡೈಲಾಗ್‌ಗಳು ನೆನಪಿಲ್ಲದಿದ್ದರೇ, ಪ್ರಾಂಪ್ಟರ್  ಇರುತ್ತಾನೆಂದು ಕೂಡಾ ತಿಳಿಯದು. ಅದರಿಂದ ಯಾರನ್ನು ಆ ಕೆಲಸಕ್ಕೆ ನೇಮಿಸಲಿಲ್ಲ. ವಿಜಯಕುಮಾರ್ ಸಾರ್ ಅವರೇ ನಮ್ಮಸ್ಕ್ರಿಪ್ಟ್  ತೆಗೆದುಕೊಂಡು ಎರಡು ಮೂರು ಬಾರಿ ಹಿಂದೆ ಮುಂದೆ ತಿರುಗಿಸಿ ಸ್ಟೇಜ್ ಹಿಂದೆ ನಿಂತು ಆ ಪಾತ್ರವನ್ನುನಿರ್ವಹಿಸಿದರು. ಮಲ್ಲಿ ಸರಿಯಾಗಿ ಸ್ಟೇಜ್ ಬರುವ ಮುಂಚೆ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ. ಅದರಿಂದ ಕುಂಟುತ್ತಾ ನಡೆಯಬೇಕಾಯಿತು. ಅವನು ತುಂಬಾ –ಸಮಯಸ್ಪೂರ್ತಿಯಿಂದ ಕುಂಟುತ್ತಾ ನಡೆಯುವುದು ವಿಲನ್ ಮ್ಯಾನೇರಿಜಮ್ ಅಂತೆ ಬದಲಿಸಿ ನಟಿಸಿದ. ಒಳ್ಳೆಯ ಮೆಚ್ಚುಗೆಯನ್ನು ಪಡೆದ.  ನಾನು ಮಾಡಿದ ಹೀರೋ ಇನ್ ಸ್ಪೆಕ್ಟರ್  ಪಾತ್ರಕ್ಕಿಂತ ವಿಲನ್  ಪಾತ್ರದಲ್ಲಿ ಮಲ್ಲಿ ಅದ್ಭುತವಾಗಿ ನಟಿಸಿದ್ದ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರು. ಅಲ್ಲೊಂದು ಇಲ್ಲೊಂದು ಕೆಲವು‌ ದೋಷಗಳೊಂದಿಗೆ (ಮಿಷ್ಟರ್ ಗೋಪಿ, ವಾಟ್ ಈಜ್ ಯುವರ್ ನೇಮ್… ಇತ್ಯಾದಿ)ಒಟ್ಟಾರೆ ನಾಟಕ ತುಂಬಾ ಚೆನ್ನಾಗಿತ್ತು. ಅದಾವುದೂ ಸಿನಿಮಾ ಷೂಟಿಂಗ್ ನಡೆದಂತೆ ಮೂರು ನಾಲ್ಕು ಡೈಲಾಗ್ ಗಳಿಗೆ ಒಂದು ಸೀನ್  ಚೇಂಜ್ ಮಾಡುತ್ತಾ ಹೋದರೆ,ಪ್ರತಿಬಾರಿಯೂ ಸ್ಟೇಜ್ ಅಲಂಕರಿಸಲು ಅಲ್ಲಿಯ ಸಹಾಯಕರು ತುಂಬಾನೇ ಕಷ್ಟಪಟ್ಟರು. ಸಿನಿಮಾವನ್ನು ಕಲ್ಪಿಸಿಕೊಂಡು ನಾಟಕ ಬರೆದರೆ ಎಷ್ಟು ತೊಂದರೆ ಯಾಗುತ್ತದೆ ಎಂದು ಅರ್ಥವಾದಾಗ ನಮ್ಮ ನಾಟಕ ಮುಗಿಯಿತು.ವಿಜಯಕುಮಾರ್ ಸಾರ್, ಪಾತ್ರಗಳು- ಪಾತ್ರಧಾರಿಗಳು ಎಂದು ಎಲ್ಲರನ್ನು ಪರಿಚಯಿಸಿದರು. ಅಂದುನಾನು ‘ಮೇಘ ಸಂದೇಶಂ’ ಪೋಸ್ಟರ್ ಗಳ ಮೇಲೆ ಬರೆದಿರುವ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ –ದಾಸರಿ ನಾರಾಯಣರಾವ್ ಎಂಬ  ನೆನಪಿನ ಆಧಾರದ ಮೇಲೆ ಹಾಗೆ ಬರೆದು

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಕಥಾಗುಚ್ಛ

ಸಣ್ಣ ಕಥೆ “ರಂಗಣ್ಣನ ಮಂಗ” ಉತ್ತಮ ಎ ದೊಡ್ಮನಿ

ಕಥಾ ಸಂಗಾತಿ ಉತ್ತಮ ಎ ದೊಡ್ಮನಿ “ರಂಗಣ್ಣನ ಮಂಗ”           ಒಂದು ಊರಿನಲ್ಲಿ ಒಬ್ಬ ರಂಗಣ್ಣ ಎನ್ನುವವನಿದ್ದ. ಇರಲು ಒಂದು ಚಿಕ್ಕ ಮನೆ. ಅದನ್ನು ಮನೆ ಅಂದರೆ ಮನೆ, ಜೋಪಡಿ ಅಂದರೆ ಜೋಪಾಡಿ, ನೀವು ಏನಾದರೂ ಅನ್ಕೋಬಹುದು, ಆದರೆ ರಂಗಣ್ಣನಿಗೆ ಮಾತ್ರ ಅದು ಮನೆನೇ.      ಅವನಿಗೆ ನನ್ನವರು-ತನ್ನವರು ಎಂದು ಹೇಳಿಕೊಳ್ಳುವರು ಯಾರು ಇರಲಿಲ್ಲ. ಇಷ್ಟಾ ಆದರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಇಲ್ಲದಿದ್ದರೆ ಮರಗಮ್ಮನ ಕಟ್ಟೆಯ ಮೇಲೆ ಕುಳಿತು ಯಾರಾದರೂ ಕೊಟ್ಟ ಬೀಡಿ ಸೇದುತ್ತಾ ಕಾಲ ಮ್ಯಾಲ ಕಾಲ ಹಾಕಿ ಮಲಗ್ತೀದ್ದ. ಊಟ ಸಿಕ್ಕರೆ ತಿನ್ನುತ್ತಿದ್ದ, ಇಲ್ಲ ಅಂದರೆ ಇಲ್ಲ. ಬದುಕ ಅಂದುರು ಹಿಂಗೆ ಇರಬೇಕು ಅನ್ನೋ ನಿಯಮ-ಗಿಮಾ ಏನ್ ಇರಲಿಲ್ಲ.       ಆಗಾಗ ಊರ ಪಕ್ಕದ ಕಾಡಿಗೆ ಹೋಗಿ ಒಣ ಕಟ್ಟಿಗೆಗಳನ್ನು ಆರಿಸಿಕೊಂಡು ಹೋಟೆಲ್‌ಗೆ ಮಾರುತ್ತಿದ್ದ. ಅದಕ್ಕೆ  ಒಂದು ಕಪ್ ಚಹಾ, ಕೆಲವೊಮ್ಮೆ ನಾಸ್ಟಾ ಸಿಗುತ್ತಿತ್ತು. ಅದೇ ಅವನ ಸಂಬಳ.ಆ ಹೋಟೆಲ್ ತೊಗರಿ ಕಟ್ಟಿಗೆಯಿಂದ ಕಟ್ಟಿದ ಅದರ ಮೇಲೆ ನಾಲ್ಕು  ಪತ್ರಾ. ಚಹಾ ಗ್ಲಾಸ್ ತೊಳೆದಿದ ನೀರಿನಲ್ಲಿ  ನಾಯಿಗಳು, ಹಂದಿಗಳು ಖಾಯಂ ಠಿಕಾಣಿ. ಕೋಳಿಗಳು ನೆಂಟರ ಹಾಗೆ  ಬಂದು ದಣಿಯೂ ಹಾರಿಸ್ಕೊತಿವು. ಒಳಗೆ ನೊಣಗಳದ್ದೇ ಜಾತ್ರೆ.      ರಂಗಣ್ಣ ಹೋಟೆಲ್ ಒಳಗೆ ಹೋಗ್ತಾ ಇರಲಿಲ್ಲ. ಅವನಿಗೋಸ್ಕರ ಹೊರಗೇ ಒಂದು ಗ್ಲಾಸ್ ಇಟ್ಟಿರುತ್ತಿದ್ದರು. ಅದರಲ್ಲಿ ಚಹಾ ಕುಡಿದು, ತಾನೆ ತೊಳೆದು ಅದೇ ಜಾಗದಲ್ಲಿ ಇಟ್ಟು ಹೊರಡುತ್ತಿದ್ದ.ಅವಾ ಏನು ಹುಟ್ಟಿನಿಂದ ಕುಂಟನಲ್ಲ. ಚಿಕ್ಕವನಿದ್ದಾಗ ಅಪ್ಪುನ ಜೊತೆ ದನ ಮೇಯಿಸಲು ಹೋಗಿ ತೆಗ್ಗಿನಲ್ಲಿ ಬಿದ್ದಿದ್ದ. ಆಗ ಸರಿಯಾದ ಚಿಕಿತ್ಸೆ ಸಿಗದೇ ಕುಂಟಾಗಿದ್ದ. ಊರವರು ದಯೆಯಿಂದ ಸರ್ಕಾರದ ಅಂಗವಿಕಲ ವೇತನ ಮಾಡಿಸಿಕೊಟ್ಟಿರು. ಅದು ಯಾರ ಅಂತ ಅವನೀಗ ಗೊತ್ತಿಲ್ಲ. ಅದೇ ಅವನ ಬದುಕಿನ ಒಂದು ಆಧಾರವಾಗಿತ್ತು. ಹೀಗೆ ಯಾರಿಗೂ ತೊಂದರೆ ಕೊಡದೆ, ಯಾರ ಮೇಲೂ ಆಸೆ ಇಡದೆ ರಂಗಣ್ಣ ತನ್ನ ಬದುಕು ಸಾಗಿಸುತ್ತಿದ್ದ.     ಒಂದು ದಿನ ಬೆಳಗ್ಗೆ ಎದ್ದು, ಹೋಟೆಲ್‌ನಲ್ಲಿ ಚಹಾ ಕುಡಿದು, ಬೀಡಿ ಹಚ್ಚಿಕೊಂಡು ಕಟ್ಟಿಗೆ ತರಲು ಕಾಡಿಗೆ ಹೋದ. ಅಲ್ಲಲ್ಲಿ ಬಿದ್ದಿದ್ದ ಒಣ ಕಟ್ಟಿಗೆಗಳನ್ನು ಕೂಡಿಸಿ ಹೊರೆ ಕಟ್ಟಲು ಮುಂದಾದಾಗ, ಹತ್ತಿರದಿಂದ ಸಣ್ಣದ್ದೊಂದು ಧ್ವನಿ ಕೇಳಿಸಿತು.”ಏನಿರಬಹುದು?” ಎಂದು ಸುತ್ತಲೂ ನೋಡಿದ.ಮುಳ್ಳಿನ ಗಿಡದ ನಡುವೆ ಒಂದು ಮಂಗ್ಯಾನ ಮರಿ ಸಿಕ್ಕಿಕೊಂಡು ಕಿರುಚುತ್ತಿತ್ತು.”ಅಯ್ಯೋ ಪಾಪ!” ಎಂದು ಓಡಿಹೋಗಿ ಮುಳ್ಳುಗಳನ್ನು ಬದಿಗಿಟ್ಟು ಅದನ್ನು ಎಚ್ಚರಿಕೆಯಿಂದ ಹೊರತೆಗೆದ.       ಕಟ್ಟಿಗೆಯ ಹೊರೆ ತಲೆಯ ಮೇಲೆ ಹೊತ್ತು ಊರ ಕಡೆ ಹೊರಟ.ಆದರೆ ಆ ಮರಿ ಅವನ ಹಿಂದೆ ಹಿಂದೆ ಬರತೊಡಗಿತು. ಓಡಿಸಿದರೂ ಅದು ಹೋಗಲಿಲ್ಲ.ಕೊನೆಗೆ ನಗುತ್ತಾ, “ನನಗೂ ಯಾರಿಲ್ಲ… ನಿನಗೂ ಯಾರಿಲ್ಲ… ಇನ್ನು ನಾವು ಇಬ್ಬರೂ ದೋಸ್ತುರು” ಎಂದು ಹೇಳಿ ತನ್ನ ಹೆಗಲ ಮೇಲೆ ಕೂರಿಸಿಕೊಂಡ.ಅಲ್ಲಿಂದಲೇ ಅವರಿಬ್ಬರ ಬದುಕು ಒಂದಾಯಿತು.      ರಂಗಣ್ಣ ಹೆಗಲ ಮೇಲೆ ಕುಳಿತ ಮಂಗ್ಯಾನ ಮರಿ ಊರಿಗೆ ಬಂದಾಗ ಎಲ್ಲರ ಕಣ್ಣು ಅವರಿಬ್ಬರ ಮೇಲೆಯೇ ನೆಟ್ಟಿತು.ಹೋಟೆಲ್ ಮುಂದೆ ಕಟ್ಟಿಗೆಯ ಹೊರೆ ಇಳಿಸುತ್ತಿದ್ದಂತೆ ಭೀಮಣ್ಣಗೌಡ ನಗುತ್ತಾ, “ಏನಪ್ಪಾ ರಂಗ, ಇವತ್ತ ಇದೇನು ನಿಂದು ಹೊಸ ಅವತಾರ?” ಎಂದ.ಪಕ್ಕದಲ್ಲೇ ನಿಂತಿದ್ದ ತುರುಕೂರು ಮುಲ್ಲಾ, “ಅಯ್ಯೋ… “ರಂಗಕ್ಕೆ ಉಪ್ಪಾರ ಮಂಗ್ಯಾ” ಎಂದು ತಮಾಷೆ ಮಾಡಿದ.ಅಲ್ಲಿದ್ದವರೆಲ್ಲ ನಕ್ಕರು. ರಂಗಣ್ಣ ಮಾತ್ರ ಯಾರ ಮಾತಿಗೂ ಉತ್ತರಿಸದೆ ಮುಗುಳ್ನಗುತ್ತಾ ಕಟ್ಟಿಗೆಯನ್ನು ಇಳಿಸಿ ತನ್ನ ಜೋಪಡಿಯ ಕಡೆ ನಡೆದುಹೋದ.         ಮನೆಗೆ ಬಂದ ಕೂಡಲೆ ಮರಿಯನ್ನು ಕೆಳಕ್ಕಿಳಿಸಿದ. ಅದರ ಕಾಲಿಗೆ ಸಣ್ಣ ಗಾಯವಾಗತ್ತು ಅರಸೀಣ ಹಚ್ಚಿ, ಹಳೆಯ ಬಟ್ಟೆಯ ತುಂಡಿನಿಂದ ಮೆಲ್ಲಗೆ ಕಟ್ಟಿದ.ಒಂದು ಹಳೆಯ ತಟ್ಟೆಯಲ್ಲಿ ನೀರು ಹಾಕಿ ಅದರ ಮುಂದೆ ಇಟ್ಟ. ನಂತರ ಮನೆಯಲ್ಲಿ ತಿನ್ನಲು ಏನಾದರೂ ಇದೆಯೇ ಎಂದು ಹುಡುಕಿದ.ಕೊನೆಗೆ ಪಕ್ಕದ ಮನೆಯ ಪಾರವ್ವ ಹಿಂದಿನ ರಾತ್ರಿ ಕೊಟ್ಟಿದ್ದ ಒಣ ರೊಟ್ಟಿ ಸಿಕ್ಕಿತು. ಅದನ್ನು ಚಿಕ್ಕಚಿಕ್ಕ ತುಂಡುಗಳಾಗಿ ಮುರಿದು ಮಂಗದ ಮುಂದೆ ಇಟ್ಟ.ಮೊದಲು ಅದು ಅನುಮಾನದಿಂದ ನೋಡಿತು. ನಂತರ ಹಸಿವಿನಿಂದ ನಿಧಾನವಾಗಿ ತಿನ್ನತೊಡಗಿತು. ರೊಟ್ಟಿಯನ್ನೂ ಅದರ ಜೊತೆ ಹಂಚಿಕೊಂಡ.         ಕಾಡಿಗೆ ಹೋಗಿ ಬಂದ ಆಯಾಸದಿಂದ ರಂಗಣ್ಣ ಬಾಗಿಲು ಮುಂದ ಮಾಡಿ ನೆಲದ ಮೇಲೆಯೇ ಅಡ್ಡಾದ.ಮಂಗ್ಯಾನ ಮರಿಗೆ ಮಾತ್ರ ಹೊಸ ಮನೆಯ ಕುತೂಹಲ.ಒಮ್ಮೆ ಈ ಮೂಲೆಗೆ, ಮತ್ತೊಮ್ಮೆ ಆ ಮೂಲೆಗೆ ಓಡುತ್ತಾ, ಗೋಡೆಯ ಮೇಲೆ ಹತ್ತಿ ಇಳಿಯುತ್ತಾ, ಪಾತ್ರೆಗಳನ್ನು ಮುಟ್ಟುತ್ತಾ ಆಟವಾಡತೊಡಗಿತು.ರಂಗಣ್ಣ ಕಣ್ಣು ಮುಚ್ಚಿದರೆ ಸಾಕು, ಅದು ಬಂದು ಅವನ ಎದೆ ಮೇಲೆ ಹತ್ತುತ್ತಿತ್ತು.ಕಿವಿ ಎಳೆಯುತ್ತಿತ್ತು.ಕೂದಲು ಹಿಡಿದು ಎಳೆಯುತ್ತಿತ್ತು.“ಅಯ್ಯೋ… ಇದು ಮಲಗೋಕೂ ಬಿಡಂಗ ಕಾಣಲ್ಲ!” ಎಂದು ನಗುತ್ತಾ ಅದನ್ನು ತಬ್ಬಿಕೊಂಡ.        “ಇದು ಯಾವಾಗ ಬೇಕಾದರೂ ಓಡಿಹೋಗಬಹುದು. ಅದಕ್ಕೆ ಕಟ್ಟಿ ಹಾಕಲು ಚೈನ್ ಮಾಡಿ ಜೊತೆ ತಗೊಂಡು ಓಡಾಡಬಹುದು, ಜೊತೆಯಲ್ಲೇ ಇಟ್ಟುಕೊಳ್ಳಬಹುದು.”ಎಂದುಕೊಂಡು ಮಂಗವನ್ನು ಬಗಲಲ್ಲಿ ಎತ್ತಿಕೊಂಡು ಕಂಬಾರ ನಾಗಪ್ಪನ ಮನೆ ಕಡೆ ಹೊರಟ.ನಾಗಪ್ಪನ ಮನೆಗೆ ಹೋಗುವ ದಾರಿ ಶಾಲೆಯ ಮುಂದೆ ಹಾದು ಹೋಗುತ್ತಿತ್ತು.ಅಷ್ಟರಲ್ಲಿ ಶಾಲೆ ಆಟಕೆ ಬಿಡಲಾಗಿತ್ತು.ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು.        ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ಕಂಡ ತಕ್ಷಣ ಎಲ್ಲ ಮಕ್ಕಳು ಓಡಿಬಂದರು.”ಮಂಗ… ಮಂಗ…!” ಎಂದು ಕೂಗುತ್ತಾ ಅದರ ಹಿಂದೆ ಬಿದ್ದರು.ಮೊದಲು ಮಂಗ ಹೆದರಿತು.ಟಿಸ್ ಟಿಸ್ ಅಂತ ಅವುರ ಮ್ಯಾಲೆ ಜಿಗಿದಾಗೆ ಮಾಡದು. ಸ್ವಲ್ಪ ಹೊತ್ತಿನಲ್ಲೇ ಮಕ್ಕಳ ಜೊತೆ ಆಟವಾಡಲು ಶುರುಮಾಡಿತು.ಒಬ್ಬನ ತಲೆಯ ಮೇಲೆ ಹಾರಿ ಕುಳಿತಿತು.ಇನ್ನೊಬ್ಬನ ಕೈಯಲ್ಲಿದ್ದ ಕಡಲೆ ಕಸಿದುಕೊಂಡಿತು.ಮಕ್ಕಳು ನಗುತ್ತಾ ಅದರ ಹಿಂದೆ ಓಡಿದರು.ಶಾಲೆಯ ಮೈದಾನವೇ ಕ್ಷಣಾರ್ಧದಲ್ಲಿ ಸಂಭ್ರಮದಿಂದ ತುಂಬಿತು.ರಂಗಣ್ಣ ಮಾತ್ರ ನಿಂತು ಮಕ್ಕಳ ಖುಷಿಯನ್ನು ನೋಡಿ ಮನಸಾರೆ ನಕ್ಕ.”ಇದು ನನಗಿಂತ ಬೇಗ ಊರವರ ಮನಸ್ಸು ಗೆದ್ದಿತಲ್ಲ…” ಎಂದು ತನ್ನೊಳಗೆ ಮಾತಾಡಿಕೊಂಡ.ಅಲ್ಲಿಂದ ನಿಧಾನವಾಗಿ ನಾಗಪ್ಪನ ಮನೆಯ ಕಡೆ ಹೆಜ್ಜೆ ಹಾಕಿದ.        ನಾಗಪ್ಪನ ಮನೆಯ ಮುಂದೆ ಹೋಗಿ ರಂಗಣ್ಣ ನಿಂತ.“ನಾಗಪ್ಪಣ್ಣ… ಓ ನಾಗಪ್ಪಣ್ಣ…” ಎಂದು ಎರಡು-ಮೂರು ಸಲ ಕೂಗಿದ.ಒಳಗಿಂದ ಕಬ್ಬಿಣದ ಮೇಲೆ ಸುತ್ತಿಗೆಯ ಸದ್ದು ನಿಂತಿತು.”ಯಾರು?” ಎಂದು ಹೊರಗೆ ಬಂದ ನಾಗಪ್ಪ, ರಂಗಣ್ಣನ ಹೆಗಲ ಮೇಲೆ ಕುಳಿತಿದ್ದ ಮಂಗವನ್ನು ನೋಡಿ ಕಕ್ಕಾಬಿಕ್ಕಿಯಾದ.“ಏನಯ್ಯ ರಂಗಾ! ಇದು ಎಲ್ಲಿಂದ ತಂದೆ?”“ಕಾಡಲ್ಲಿ ಮುಳ್ಳಿಗೆ ಸಿಕ್ಕಿಕೊಂಡಿತ್ತು. ಪಾಪ ಅಳ್ತಿತ್ತು. ಬಿಡಿಸಿಕೊಂಡು ಬಂದೆ. ಈಗ ನನ್ನ ಜೊತೆಯಲ್ಲೇ ಇರ್ತದೆ. ಇದಕ್ಕೊಂದು ಸಣ್ಣ ಚೈನ್ ಮಾಡಿಕೊಡು.”ನಾಗಪ್ಪ ನಕ್ಕ.“ನಿನಗೇ ಗತಿಯಿಲ್ಲ. ಈಗ ಇದನ್ನೂ ಸಾಕ್ತೀಯಾ?”ಅಷ್ಟರಲ್ಲಿ ಅಲ್ಲೇ ಕುಳಿತಿದ್ದ ಕುರುಬರ ಬೀರಣ್ಣ,“ನಾಯಿ ಸಾಕೋರು, ಬೆಕ್ಕು ಸಾಕೋರು ನೋಡಿದ್ದೇವೆ. ನೀನು ಮಂಗ ಸಾಕ್ತೀಯಪ್ಪಾ! ಊರಲ್ಲಿ ನೀನೇ ಭಾರಿ.”       ರಂಗಣ್ಣ ಮಾತ್ರ ಮಂಗದ ತಲೆಯನ್ನು ಸವರುತ್ತಾ,“ಇದಕ್ಕೂ ಜೀವ ಇದೆ ಬೀರಣ್ಣ. ಇದಕ್ಕೂ ಪ್ರೀತಿ ಬೇಕಲ್ಲ…” ಎಂದ.ಆ ಒಂದು ಮಾತಿಗೆ ಅಲ್ಲಿದ್ದವರು ಕ್ಷಣಕಾಲ ಮೌನರಾದರು.ಅಷ್ಟರಲ್ಲಿ ಅಡುಗೆ ಮನೆಯಿಂದ ನಾಗಪ್ಪನ ಹೆಂಡತಿ ಹೊರಬಂದಳು.”ಏನ್ರಿ ಇಷ್ಟೊಂದು ಗದ್ದಲ?”ಅವಳ ಕಣ್ಣು ಮಂಗದ ಮರಿಯ ಮೇಲೆ ಬಿತ್ತು.“ಅಯ್ಯೋ… ಎಷ್ಟು ಮುದ್ದಾಗಿದೆ!” ಎಂದು ಅದನ್ನು ಎತ್ತಿಕೊಳ್ಳಲು ಕೈ ಚಾಚಿದಳು.ಮಂಗ ಹೆದರಿ ಓಡಿ ಹೋಗಿ ರಂಗಣ್ಣನ ಬೆನ್ನ ಹಿಂದೆ ಅಡಗಿತು.ನಾಗಪ್ಪ ನಗುತ್ತಾ,ನೋಡಪ್ಪ ಈ ಹೆಂಗಸುರ ಕಂಡೂರಾ ಗಂಡದೇರು ಅಷ್ಟೇ ಅಂಜತರ ಅನ್ಕೊಂಡಿದ್ದೆ, ಆದುರು ಈ ಮಂಗ್ಯಾಗಳು ಹೇದುರ್ತಾವ ಅಂತ ನಾಗಪ್ಪ. ಎಲ್ಲರೂ ಒಮ್ಮೆಲೇಗೆ ಕೊಳ್ಳ ಅಂತ ನಕ್ಕುರು.ಹೌದು ಹೌದು ಬಾರಿ ಅಂಜತಿರಿ ಅಂತ ಒಳಗೆ ಹೋಗಿ ಒಂದು ತಟ್ಟೆಯಲ್ಲಿ ಬಿಸಿ ರೊಟ್ಟಿ, ಸ್ವಲ್ಪ ಪಲ್ಯ, ಒಂದು ಬಟ್ಟಲಲ್ಲಿ ನೀರು ತಂದು ರಂಗಣ್ಣನ ಮುಂದೆ ಇಟ್ಟಳು.”ಮೊದಲು ನೀನು ಊಟ ಮಾಡು. ಆಮೇಲೆ ಚೈನ್ ಮಾಡಿಸಿಕೋ.”ರಂಗಣ್ಣ ಕೃತಜ್ಞತೆಯಿಂದ ಅವಳನ್ನು ನೋಡಿದ.      ಏ ಬೀರಪ್ಪ ನಿಂಗೊತ್ತಿಲ್ಲ ಈ ಹೆಣ್ಣು ಮಕ್ಕಳು. ನಾ ಯಾರ್ ಹೇಳು, ಕಂಬಾರ ನಾಗಪ್ಪ. ಕಬ್ಬಿಣ ಕಾಸಿ ಬಗ್ಗಿಸೋದೆ ನನ್ನ ಕೆಲಸ, ಯಾವಾಗ-ಹೇಗೆ-ಎಲ್ಲಿ ಬಡಿಬೇಕಂತ ನನಗೆಲ್ಲಾ ಗೊತ್ತು. ಹೌದಪ್ಪ ಎಲ್ಲರಿಗೂ ನಿನ್ನ ಧೈರ್ಯ ಇರಬೇಕಲ್ಲ. ಈಗ  ಈ ಕೆಲಸ ಬಿಟ್ಟು ಊರಿನ ಗಂಡುಸರಿಗ-ಮುಂದ ಮದಿ ಆಗವರಿಗೆ ಪಾಠ ಮಾಡ “ಹೆಂಡತಿಯರಿಗೆ ಹದ್ದಬಸ್ತನಲ್ಲಿ ಹೇಗ  ಇಡುವುದು ಅಂತ” ಗಿರಾಕಿ ಬಹಳ ಆತದ. ಹೇ ಹುಚ್ಚ ಅದಕ್ಕೆ ನೀವೆಲ್ಲ ಫೇಲ್ ಆತಿರಿ ನೋಡು, ನಾವೂ ಮಾಡೋದು ಅವರಿಗೆ ಗೊತ್ತಾಗಬಾರದು. ಎಲ್ಲಾ ಸೀಕ್ರೆಟ್ ಇರಬೇಕು. ಇದೆಲ್ಲ ಗೊತ್ತಾದರೆ ನನ್ನ ದುಖಾನ ಬಂದಾತದ. ಸರಿ ಏನಾದ್ರೂ ಮಾಡು ನಾ ಹೋಗ್ತೀನಿ, ಚಾ ಗ್ಲಾಸ್ ಅಲ್ಲೇ ಕಟ್ಟಿ ಮೇಲೆ ಇಟು, ರೊಕ್ಕ ಆಮೇಲೆ ಕೂಡ್ತಿನಿ ಅಂತ,  ಕೊಡಲಿ ಹೆಗಲ ಮ್ಯಾಲ್ ಇಟ್ಟುಕೊಂಡು ಹೊರಟ         ಊಟ ಮುಗಿದ ಮೇಲೆ ನಾಗಪ್ಪ ಸಣ್ಣ ಕಬ್ಬಿಣದ ಸರ ಮಾಡಿ, ಕುತ್ತಿಗೆಗೆ ನೋವಾಗದಂತೆ ಮೃದುವಾಗಿ ಚೈನ್ ಹಾಕಿದ ಕೂಡಲೇ ಅದು ಎರಡು ಹೆಜ್ಜೆ ಹಿಂದೆ ಸರಿದು, ಮತ್ತೆ ರಂಗಣ್ಣನ ಹೆಗಲ ಮೇಲೆ ಹಾರಿ ಕುಳಿತಿತು.ಈ ಪ್ರೀತಿಗೆ ಚೈನ್ ಬೇಕಾಗಲ್ಲ. ಆದರೆ ಊರು ದೊಡ್ಡದು. ಕಳೆದು ಹೋದರೆ ಹುಡುಕೋಕಾಗಲ್ಲ.”ಆ ಮಾತು ಕೇಳಿ ನಾಗಪ್ಪನ ಮುಖದಲ್ಲಿ ಮೆಚ್ಚುಗೆಯ ನಗು ಮೂಡಿತು.ಅಲ್ಲಿದ್ದ ಎಲ್ಲರಿಗೂ ಮೊದಲ ಬಾರಿಗೆ ರಂಗಣ್ಣನ ಸರಳ ಮನಸ್ಸಿನ ಆಳ ಅರ್ಥವಾಯಿತು.           ಅಂದು ಸಂಜೆ ರಂಗಣ್ಣ ಮಂಗವನ್ನು ಹೆಗಲ ಮೇಲೆ ಕೂರಿಸಿಕೊಂಡು ಊರೊಳಗೆ ನಡೆದಾಗ, ಮಕ್ಕಳು ಹಿಂದೆ ಹಿಂದೆ ಓಡಿದರು.ಯಾರೋ ಕಡಲೆ ಕೊಟ್ಟರು.ಇನ್ನೊಬ್ಬರು ಬಾಳೆಹಣ್ಣು ಕೊಟ್ಟರು.ಹೋಟೆಲ್‌ನವನು ಬ್ರೆಡ್ ಕೊಟ್ಟ.ಮಂಗ ಎಲ್ಲವನ್ನೂ ಮೊದಲು ರಂಗಣ್ಣನ ಕೈಗೆ ಕೊಟ್ಟು, ಅವನು ಕೊಟ್ಟ ನಂತರವೇ ತಿನ್ನುತ್ತಿತ್ತು.ಅದನ್ನು ನೋಡಿದ ತುರುಕೂರು ಮುಲ್ಲಾ ನೋಡ್ರಿ ಗೌಡ ಮನಷ್ಯರು ಅಂತೂ ಜೋಡಿ ಆಲಿಲ್ಲ, ಈ ಮೂಕ ಪ್ರಾಣಿ ಜೋಡಿಯಿತ್ತು.        ಏನ್ ಮಾಡೋದು ಅವುನ ಅವ್ವ ಸಂಡಸ್ ಮಾಡುಕು ಹೋದಾಗ ಹಾವು ಕಚ್ಚಿ ಸತ್ತುಳು. ಅದೇ ಟೆನ್ಶನ್ ದಾಗ ಇದ್ದು ಇದ್ದು ಹೀಗ ಆದ. ಅದಕ್ಕೆ ಗೌಡ್ರೆ ನೀವು ನಮ್ಮೂರಿಗೊಂದು ಶೌಚಾಲಯ ಕಟ್ಟಿಸಬೇಕು. ಗಂಡಸರಿಗೆ ಅಲ್ಲದೆ ಹೋದರೂ ಈ ಹೆಣ್ಣು ಮಕ್ಕಳಿಗಾದರೂ ಶೌಚಾಲಯ ಕಟ್ಟಿಸಬೇಕು. ಗಂಡಸುರು ಎಲ್ಲದುರು ಹೋಗ್ತಾರ ಪಾಪ ಈ ಹೆಂಗಸುರದು ಹೈರಾಣ ಆದಾ.      ನೀ ಹೇಳೋದ ಕರೆ ಅದಾರೋ. ಪಂಚಾಯಿತಿಯಿಂದ ಕಟ್ಟುಸ್ತೇವು ಅಂತೇಳಿ ರೊಕ್ಕ ತೊಗೋತಾರೆ, ಕಟ್ಟಿಸಿದುರು ಅದರಲ್ಲಿ ಕೂಡಲ್ಲ ಮತ್ತೆ ಹೊರಗೆ ಹೋಗ್ತಾರೆ.   ಈ ನಮ್ಮ ಹಳ್ಳಿ, ಜನ ಮಡಿ-ಮೈಲಿಗೆ ಅದು ಇದು ಅಂತ ಹೇಳಿ.   ನಾ ಏನು ಕೈಹಿಡಿದು ಕುಡಿಸುಕಾಗುತ್ತಾ ಮುಲ್ಲಾ. ನೀವು ಹೇಳೋದು ಕರೆಯಾದರೆ ಜನರಿಗೆ ಬುದ್ಧಿ ಬರಬೇಕು ಗೌಡ್ರೆ. ಅಂತ ಹೇಳಿ ಅವರು ಲೆಕ್ಕದಲ್ಲಿ ಬೆಳಗ್ಗಿನ ಚಾ ಕುಡಿದು ಅವುನು ಕೈಯಾಗ ಸಂಡಾಸ್ಹೊ ಡಬ್ಬಾ ಹಿಡಕೊಂಡು ಹಳ್ಳುದ ಕಡೆ ಹೊರಟು ಹೋದ.         ಕಾಲ ಕಳೆಯುತ್ತಾ ಹೋಯಿತು.ಮಂಗ ಈಗ ರಂಗಣ್ಣನ ಸಾಕುಪ್ರಾಣಿಯಷ್ಟೇ ಅಲ್ಲ, ಅವನ ನೆರಳೇ ಆಗಿತ್ತು.ರಂಗಣ್ಣ ಎಲ್ಲಿಗೆ ಹೋದರೂ ಅದು ಹೆಗಲ ಮೇಲೆಯೇ ಇರುತ್ತಿತ್ತು. ಕಟ್ಟಿಗೆ ತರಲು

ಸಣ್ಣ ಕಥೆ “ರಂಗಣ್ಣನ ಮಂಗ” ಉತ್ತಮ ಎ ದೊಡ್ಮನಿ Read Post »

ಕಥಾಗುಚ್ಛ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್.

ಕಥಾ ಸಂಗಾತಿ “ಅಂತರಂಗದ ಸೋಲು” ಶೇಖರಗೌಡ ವೀ ಸರನಾಡಗೌಡರ್. ಯಶಸ್ವಿನಿ ದೊಡ್ಡ ಪರದೆಯ ಟೀವಿಯಲ್ಲಿ ಯಾವುದೋ ಸಿನಿಮಾವೊಂದನ್ನು ನೋಡತೊಡಗಿದ್ದಳು. `ಸಾಕು, ಟೀವಿ ಆಫ್‍ಮಾಡಿ ಮಲಗಿಬಿಟ್ಟರಾಯಿತು’ ಎಂದು ಅಂದುಕೊಂಡಳಾದರೂ, ಅದೊಂದು ಭಾರೀ ಶೃಂಗಾರಭರಿತ ಮೂವಿಯಾಗಿದ್ದರಿಂದ ಹಾಗೇ ವೈಭವೋಪೇತ ಸೋಫಾದ ಮೇಲೆ ಅಡ್ಡಾಗಿ ಚಿತ್ರ ನೋಡಲು ಮುಂದಾದಳು. ದಿನಾಲೂ ರಾತ್ರಿ ಬಹಳ ಎಂದರೆ ಹತ್ತೂವರೆ, ಹನ್ನೊಂದಕ್ಕೆ ಹಾಸಿಗೆ ಸೇರಿಕೊಳ್ಳುತ್ತಿದ್ದಳು. `ಹೇಗೂ ವೀಕೆಂಡ್ ಅಲ್ವಾ…? ಆಫೀಸ್ ಇಲ್ಲವಲ್ಲ? ತಡವಾಗಿ ಮಲಗಿ ನಾಳೆ ಬೆಳಗ್ಗೆ ತಡವಾಗಿ ಏಳಬಹುದು. ಅದಲ್ಲದೇ, `ಕರೆದು ಕಟ್ಟಿಹಾಕುವವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ’ ಎಂಬ ದನದಂತೆ ನಾನು. ತಡವಾಗಿ ಮಲಗಿದರೆ ನನಗಿಲ್ಲಿ ಯಾರೂ ಹೇಳುವವರಿಲ್ಲ, ಯಾವಾಗ ಎದ್ದರೂ ಯಾರೂ ಕೇಳುವವರಿಲ್ಲ. ಸುದೀರ್ಘ ಒಂಟಿ ಜೀವನಕ್ಕೆ ಒಗ್ಗಿಹೋಗಿದ್ದೇನೆ. ನನ್ನದೇ ಪ್ರಮೀಳಾ ರಾಜ್ಯ ಅಲ್ಲವೇ…?’ ಅಂತ ಮನದೊಳಗೇ ಅಂದುಕೊಂಡು ಯಶಸ್ವಿನಿ ಸಿನಿಮಾ ನೋಡುವುದನ್ನು ಮುಂದುವರಿಸಿದಳು. ಅಬ್ಬಾ…! ಮೈನವಿರೇಳಿಸುವ ಶೃಂಗಾರಭರಿತ ದೃಶ್ಯಗಳು…! ಯುವ ಪ್ರೇಮಿಗಳ ಪ್ರೀತಿ, ಪ್ರೇಮದ ಕಾವ್ಯ ಅದಾಗಿತ್ತು. ರಸಪೂರಿ ಮಾವಿನ ಹಣ ್ಣನಂಥಹ ನಾಯಕಿ, ಸುರಸುಂದರಾಂಗ ಎನ್ನುವಂಥಹ ನಾಯಕ. ಗಜನಿಂಬೆ ಹಣ ್ಣನ ಮೈಬಣ್ಣದ ನಾಯಕಿಯ ಸೊಬಗಿನ ತುಂಬಿದೆದೆ ಚಿತ್ರದುದ್ದಕ್ಕೂ ಮುಕ್ಕಾಲು ಭಾಗ ತೆರೆದೇ ಕೊಂಡಿತ್ತು. ಕೃಶೋದರಿಯ ಬಡ ನಡು ತುಂಬಾನೇ ಆಕರ್ಷಕವೇ. ಸಿನಿಮಾದುದ್ದಕ್ಕೂ ಶೃಂಗಾರಭರಿತ ಕಾವ್ಯ ಸಾಹಿತ್ಯದಲ್ಲಿ ಹೊರಹೊಮ್ಮುತ್ತಿದ್ದ ಹಾಡುಗಳಲ್ಲಿ ನಾಯಕ, ನಾಯಕಿಯರಿಬ್ಬರೂ ತುಂಡುಡುಗಳಲ್ಲೇ ಮಿಂಚುತ್ತಿದ್ದುದು ಚಿತ್ರದ ಹೈಲೈಟ್ ಆಗಿತ್ತು. ನಾಯಕಿಯ ನಳಿದೋಳುಗಳು, ಹೊಕ್ಕಳ ಗುಳಿ, ಸಪೂರ ಬಲಿಷ್ಠ ತೊಡೆಗಳು, ತುಂಬು ಜಘನ ಪ್ರೇಕ್ಷಕರ ಮನಗಳಿಗೆ ಕಚಗುಳಿ ಇಡುವಂತಿದ್ದವು. ಕಾವ್ಯಕನ್ನಿಕೆ, ಸೌಂದರ್ಯದೇವತೆ ರತಿದೇವಿಯಂತೆ ವಿಜೃಂಭಿಸುತ್ತಿದ್ದಳು ನಾಯಕಿ. ವಯಸ್ಸಾದವರು ಜೊಲ್ಲು ಸುರಿಸುತ್ತಾ ನೋಡುವಂತಿತ್ತು ನಾಯಕಿಯ ಮೈಮಾಟ. ನಾಯಕ, ನಾಯಕಿಯ ಪ್ರೀತಿ-ಪ್ರೇಮದ ತುಂಟಾಟದ ದೃಶ್ಯಗಳನ್ನು ನೋಡುತ್ತಿದ್ದಂತೆ ಯಶಸ್ವಿನಿಯ ಮೈಯಲ್ಲಿ ಕಾವೇರತೊಡಗಿತು. `ಅಬ್ಬಾ…! ಮೈ ಎಲ್ಲಾ ನವಿರೇಳುತ್ತಿದೆಯಲ್ಲ…? ಮೈಯಲ್ಲಿ ರೋಮಾಂಚನದಲೆಗಳು ಅಬ್ಬರಿಸಿ ಪುಟಿದೇಳುತ್ತಿವೆಯಲ್ಲ…? ಎದೆಯ ಬಡಿತ ಮುಗಿಲೆತ್ತರಕ್ಕೆ ಜಿಗಿಯುತ್ತಿದೆಯಲ್ಲ…? ಉಸಿರಾಟ ಜೋರಾಗುತ್ತಿದೆಯಲ್ಲ? ಹೃದಯದ ಲುಬ್-ಡುಬ್ ಅತಿವೇಗದ ಲಯ ಕಂಡುಕೊಳ್ಳುತ್ತಿದೆ ಎಂದು ಅನಿಸುತ್ತಿದೆ. ತುಂಬಾನೇ ಥ್ರಿಲ್ ಕೊಡುತ್ತಿದೆಯಲ್ಲ…? ಇಂಥಹ ಥ್ರಿಲ್ ಇದೆಯಾ ಗಂಡು-ಹೆಣ ್ಣನ ಶೃಂಗಾರ ಲೀಲೆಯಲ್ಲಿ…? ಶೃಂಗಾರ ಲೀಲೆಯ ಇಂಥಹ ಥ್ರಿಲ್‍ಗಳಿಂದ ವಂಚಿತಳಾಗಿ ನಾನು ಕರುಬುತ್ತಿರುವೆನಲ್ಲ…? ನನ್ನ ಉತ್ಕøಷ್ಠ ಯೌವನ ಕರಗಿ ಹೋಗುತ್ತಿದೆ. ಇನ್ನೇನು ನಾಲ್ಕಾರು ವರ್ಷಗಳಲ್ಲಿ ಮೆನೋಫಾಸ್ ಘಟ್ಟವನ್ನೂ ತಲುಪುವೆನೇನೋ? ಅದೃಷ್ಟ ಹೀನ ನತದೃಷ್ಟ ಹೆಣ್ಣು ನಾನು. ಎಲ್ಲವೂ ಇದ್ದು, ಏನೂ ಇಲ್ಲದವಳಂತಾಗಿದ್ದೇನೆ. ಹೆಸರೋ, `ಯಶಸ್ವಿನಿ.’ ಬಹಳಷ್ಟು ರಂಗಗಳಲ್ಲಿ ಯಶಸ್ಸು ಪಡೆದಿರುವೆನಾದರೂ ನನ್ನ ಪರ್ಸನಲ್ ಲೈಫಿನಲ್ಲಿ ಹೀನಾಯ ಸೋಲನ್ನು ಅನುಭವಿಸಿ ಪೇಚಾಡುತ್ತಿರುವೆ. ಈ ಸೋಲಿಗೆ ಯಾರು ಕಾರಣ…? ಯಾರೇಕೆ ಕಾರಣರಾಗುತ್ತಾರೆ? ನನ್ನ ಸೋಲಿಗೆ ನಾನೇ ಕಾರಣ ಅಷ್ಟೇ. ನಾನೇ ಅಂದರೆ ನನ್ನ, `ಅಹಂ’ ವೈಯಕ್ತಿಕ ಜೀವನದ ಸೋಲಿಗೆ ಕಾರಣ ತಾನೇ…? ಹೌದು, ಹೌದು, ಹೌದು. ನನ್ನ ಅಪರಿಮಿತ ಅಹಂ ನನ್ನ ವೈಯಕ್ತಿಕ ಜೀವನದ ಹಳಸುವಿಕೆಗೆ ಕಾರಣ.’ ಯದ್ವಾ-ತದ್ವಾ ಯೋಚನೆಗಳು ಯಶಸ್ವಿನಿಯ ಮನಸ್ಸನ್ನು ಮುತ್ತಿಕ್ಕಿ ಕಾಡತೊಡಗಿದವು.*****ಹಿಮ್ಮುಖವಾಗಿ ಚಲಿಸಲಾರಂಭಿಸಿದ ಯಶಸ್ವಿನಿಯ ಮನದಲ್ಲಿ ನೆನಪಿನ ಅಲೆಗಳ ಮಹಾಪೂರ ಭೋರ್ಗರೆಯತೊಡಗಿತು.“ನನ್ನ ಹೆಸರು, `ಯಶಸ್ವಿನಿ’ ಅಂತ ಆಗಲೇ ಹೇಳಿರುವೆನಲ್ಲ…? ಮೂವತ್ತೈದು ವಸಂತ ಋತುಗಳು ನನ್ನ ಜೀವನದಲ್ಲಿ ವಸಂತನಾಗಮನವಿಲ್ಲದೇ ಹಾಗೇ ಸಪ್ಪಗೇ ಕಳೆದು ಹೋದವು. ಈಗ ಮೂವತ್ತಾರರ ಹರೆಯದಲ್ಲಿ ನನ್ನ ಬಾಳಬಂಡಿಗೆ ಕಡೆಗೀಲೇ ಇಲ್ಲದಂತಾಗಿದೆ. ಸಾಮಾನ್ಯ ಕುಟುಂಬವೊಂದರಲ್ಲಿ ಮೂರನೇ ಮಗುವಾಗಿ ಜನಿಸಿದವಳು ನಾನು. ಅಪ್ಪ ಕೈಲಾಸ್, ಅಮ್ಮ ವಿಜಯಲಕ್ಷ್ಮಿ. ಅಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮ್ಮ ಗೃಹಿಣ . ಹೆತ್ತವರಿಗೆ ನಾನು ಮೂರನೆಯವಳೆಂದು ಹೇಳಿದೆನಲ್ಲ, ನನಗೆ ಧೀರಜ್ ಎಂಬ ಅಣ್ಣನಿದ್ದಾನೆ. ಅಕ್ಕ ಸಮತಾ ಇದ್ದಾಳೆ. ಅಣ್ಣ ಧೀರಜನಿಗೂ, ನನಗೂ ಎಂಟು ವರ್ಷಗಳ ಅಂತರವಿದ್ದರೆ, ಅಕ್ಕ ಸಮತಾಳಿಗೆ ನನಗೆ ಕೇವಲ ಎರಡು ವರ್ಷಗಳ ಅಂತರ ಅಷ್ಟೇ. ಮೂವರಲ್ಲಿ ನಾನೇ ರೂಪವತಿ. ಚಿಕ್ಕವಳಿದ್ದಾಗಿನಿಂದ ಅಣ್ಣ, ಅಕ್ಕನಿಗೆ ಇಲ್ಲದಿದ್ದರೂ ನನಗೆಲ್ಲವೂ ಬೇಕು ಎಂಬ ಹಟಮಾರಿತನದ ಸ್ವಭಾವದವಳು. ಮುದ್ದಾದ ಚೆಲುವಿನ ಹುಡುಗಿ ಎಂದು ಅಪ್ಪ, ಅಮ್ಮ ನನ್ನನ್ನು ಅತೀ ಮುದ್ದಿನಿಂದಲೇ ಬೆಳೆಸಿದರು. ಚಿಕ್ಕಳಿದ್ದಾಗಿನಿಂದಲೂ ನನ್ನ ಬಲಗೆನ್ನೆ ಗುಳಿಗೆನ್ನೆಯೇ. ಆ ಗುಳಿಗೆನ್ನೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಯೌವನ ಮೈ, ಮನಗಳಲ್ಲಿ ಅರಳತೊಡಗಿತ್ತು. ಎದೆಯ ಕುಸುಮಗಳು ಅರಳಲು ಮುಂದಾಗುತ್ತಿದ್ದಂತೆ ನನ್ನ ಅಪರಿಮಿತ ರೂಪರಾಶಿಗೆ ನಾನೇ ನನ್ನ ಬೆನ್ನನ್ನು ಚಪ್ಪರಿಸಿಕೊಳ್ಳುತ್ತಿದ್ದೆ. ಸಾಧಾರಣ ರೂಪಿನ ಅಕ್ಕನನ್ನು ನನ್ನೊಂದಿಗೆ ಹೋಲಿಸಲು ಸಾಧ್ಯವೇ ಇರಲಿಲ್ಲ. ನನಗರಿವಿಲ್ಲದಂತೆ ನಾನು ಆಗಿನಿಂದಲೇ ಜಂಬದ ಕೋಳಿಯಂತಾಗತೊಡಗಿದ್ದೆ. ಧೀರಜ್ ಎಂಎ ಬಿಎಡ್ ಮಾಡಿಕೊಂಡು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇರಿಕೊಂಡ. ಅಕ್ಕ ಇಂಜನಿಯರಿಂಗ್ ಪದವಿಗೆ ಸೇರಿಕೊಂಡಳು. ನಾನೂ ಅಷ್ಟೇ. ಪಿಯುಸಿ ನಂತರ ಇಂಜನಿಯರಿಂಗ್ ಕೋರ್ಸಿಗೇ ಸೇರಿಕೊಂಡೆ. ಅಣ್ಣ ಉದ್ಯೋಗಕ್ಕೆ ಸೇರಿದ ಮೂರನೇ ವರ್ಷವೇ ಮದುವೆಯಾಗಿ ಜೀವನದಲ್ಲಿ ಸೆಟ್ಲಾದ. ಅತ್ತಿಗೆಯಾಗಿ ಬಂದವಳು ನಮ್ಮ ಮನೆಯ ಅಂತಸ್ತಿಗಿಂತ ಕೆಳಗಿನ ಮಟ್ಟದ ಅಂತಸ್ತಿನ ಮನೆತನದವಳು. ರೂಪದಲ್ಲೂ ಅಷ್ಟಕಷ್ಟೇ. `ಅಣ್ಣಾ, ಇದೇನಿದು ಇಂಥಹ ಆರ್ಡಿನರಿ ಹುಡುಗಿಯನ್ನು ಆಯ್ಕೆಮಾಡಿಕೊಂಡೆಯಲ್ಲ, ಇದು ನನಗ್ಯಾಕೋ ಸರಿಕಾಣುತ್ತಿಲ್ಲ…?’ ಅಂತ ಅಂದಿದ್ದಕ್ಕೆ, `ರೂಪವನ್ನು ಅರೆದುಕೊಂಡು ಕುಡಿಯಲು ಆಗುತ್ತದೆಯೇ…? ನಿನ್ನತ್ತಿಗೆಯಾಗುವವಳು ರೂಪವತಿಯೇ ಇರುವಳೆಂದು ನನ್ನ ಕಣ್ಣುಗಳ ಜೊತೆಗೆ ಹೃನ್ಮನಗಳೂ ಹೇಳುತ್ತಿವೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ. ರೂಪಕ್ಕಿಂತ ಗುಣ ಮುಖ್ಯ ಎಂಬುದು ನನ್ನ ಅನಿಸಿಕೆ. ಗಂಡ, ಹೆಂಡತಿ ಇಬ್ಬರೂ ಜೊತೆಗೂಡಿಕೊಂಡು ಅರ್ಥಪೂರ್ಣ ಜೀವನ ಸವೆಸಿದರೆ ಸಾಕಲ್ಲವೇ…?’ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ಅದರಂತೆ ಅಣ್ಣ-ಅತ್ತಿಗೆಯರದು ಈಗ ಆದರ್ಶ ಸಂಸಾರವೇ. ಅತ್ತಿಗೆ ಸೌಭಾಗ್ಯಳಿಗೆ, `ನಮ್ಮ ಯಶೂ ತುಂಬಾನೇ ರೂಪವತಿ, ಶಾಣ್ಯಾಕಿ’ ಎಂದು ಸಂಬಂಧಿಕರ ಜೊತೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾಳೆ. ನಾನೆಂದರೆ ತುಂಬಾ ಪ್ರೀತಿ ಅವಳಿಗೆ.ಇಂಜನಿಯರಿಂಗ್ ಕೋರ್ಸ ಮುಗಿಯುವಷ್ಟರಲ್ಲಿ ಚೆಲುವಿನ ನನ್ನ ಮೈಯಲ್ಲಿ ಯೌವನ ತುಂಬಿ ತುಳುಕಾಡಲು ಮುಂದಾಗಿತ್ತು. ಯೌವನಮದ, ರೂಪಮದಗಳು ನನ್ನ ಮನಸ್ಸಿನಲ್ಲಿ ನೆಲೆನಿಂತು ಠಳಾಯಿಸತೊಡಗಿದವು. ತುಂಬಿದ ಕಾಶ್ಮೀರಿ ಸೇಬಿನ ಗುಳಿಗೆನ್ನೆ ನನ್ನ ಆಕರ್ಷಕ ಮೈಮಾಟಕ್ಕೆ ಇಂಬು ಕೊಡುತ್ತಿತ್ತು. `ನನ್ನಂಥಹ ಚೆಲುವೆ ಯಾರಿಲ್ಲ’ ಎಂಬ ಅಹಂ ಅಂಕುರಿಸಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯತೊಡಗಿತು. ಪದವಿ ಮುಗಿಯುತ್ತಿದ್ದಂತೆ ಸಮತಾಳಿಗೆ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಪ್ಯಾಕೇಜಿನ ಕೆಲಸವೂ ಸಿಕ್ಕಿತು. ನನಗೂ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದಲ್ಲದೇ ಸಮತಾಳಿಗಿಂತ ನನ್ನ ಪ್ಯಾಕೇಜ್ ಹೆಚ್ಚೇ ಇದೆ.ಅಕ್ಕನೂ ಕೆಲಸಕ್ಕೆ ಸೇರಿದ ಮೂರನೇ ವರ್ಷವೇ ಮದುವೆಗೆ ಅಣ ಯಾದಳು. ಅವಳ ಮತ್ತು ನನ್ನ ಮದುವೆಯನ್ನು ಒಂದೇ ಸಲಕ್ಕೆ ಮಾಡಬೇಕೆಂದಿದ್ದ ಅಪ್ಪ-ಅಮ್ಮನಿಗೆ, `ನನಗಷ್ಟು ಬೇಗ ಮದುವೆಯಾಗುವ ಮನಸ್ಸು, ಆಸಕ್ತಿ ಇಲ್ಲ. ಅಕ್ಕನ ಮದುವೆ ಮಾಡಿಬಿಡಿ. ನನಗೆ ಮದುವೆ ಬೇಕೆಂದಾಗ ತಿಳಿಸುವೆ’ ಎಂದು ಹೇಳಿದ್ದೆ. ನನ್ನ ಹಟಮಾರಿತನದ ಸ್ವಭಾವಕ್ಕೆ ಮಣ ದಿದ್ದರು. ಅಕ್ಕನೂ ಆರಿಸಿಕೊಂಡಿದ್ದು ತನಗಿಂತ ಕಡಿಮೆ ರೂಪಿನ ಚೆಲುವನನ್ನು. ನನಗೆ ಹೋಲಿಸಿದರೆ ಅಕ್ಕನ ರೂಪವೂ ಅಷ್ಟಕಷ್ಟೇ. ಅವನೂ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್. `ಏನೇ ಅಕ್ಕ, ನೀನು ಮಧುಸಾಗರನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದು ನನಗೇಕೋ ಅಷ್ಟಾಗಿ ಸರಿಕಾಣುತ್ತಿಲ್ಲ. ತೀರಾ ಸಾಮಾನ್ಯ ರೂಪಿನ ಹುಡಗ ಅವನು. ಮೇಲಾಗಿ ಅವನ ಪ್ಯಾಕೇಜ್ ನಿನಗಿಂತಲೂ ಬಹಳಷ್ಟು ಕಡಿಮೆಯೇ. ಅವನಿಗೆ ಹೇಳಿಕೊಳ್ಳುವಂಥಹ ಆಸ್ತಿ-ಅಂತಸ್ತೂ ಸಹ ಇಲ್ಲ. ಮೇಲಾಗಿ ಅವನಿಗೆ ಒಬ್ಬ ತಂಗಿಯ ಮದುವೆಯ ಜವಾಬ್ದಾರಿಯೂ ಇದೆ. ಏನೋಪ್ಪ, ನಿನ್ನ ನಿರ್ಧಾರ ಸರಿ ಇಲ್ಲ ಎಂದು ನನಗನಿಸುತ್ತಿದೆ’ ಎಂದು ಉದ್ದುದ್ದ ಭಾಷಣ ಬಿಗಿದಿದ್ದೆ. `ನೋಡು ಯಶೂ, ಮದುವೆ ಯಶಸ್ವಿಯಾಗುವುದು ಜೀವನ ಸಂಗಾತಿಯನ್ನು ಹುಡುಕುವುದಿಂದಲ್ಲ. ಸರಿಯಾದ ಜೀವನ ಸಂಗಾತಿ ಆಗುವುದರಿಂದ. ನನ್ನ ಆಯ್ಕೆ ಸೂಪರ್ರಾಗೇ ಇದೆ. ಹುಡುಗ ನನ್ನ ಕಣ್ಣಲ್ಲಿ ಚೆಲುವನೇ. ಮನಸ್ಸು, ಮನಸ್ಸುಗಳು ಒಂದಾದರೆ ಸಂಸಾರ ಆನಂದ ಸಾಗರವೇ. ಅವನ ನಡೆ-ನುಡಿ ಎಲ್ಲವೂ ಸ್ಫಟಿಕದಷ್ಟೇ ಶುಭ್ರ. ಆಫ್ಟರ್ ಆಲ್ ಲೈಫ್ ಈಜ್ ಯಾನ್ ಅಡ್ಜೆಸ್ಟಮೆಂಟ್ ಅಲ್ಲವೇ? ಪರಸ್ಪರ ಹೊಂದಿಕೊಂಡು ಜೀವನ ರಥ ಎಳೆದರೆ ದಾಂಪತ್ಯವು ಮಧುರವಾಗೇ ಸಾಗುತ್ತದೆ. ನೀನೇನೂ ಚಿಂತಿಸಬೇಡ. ನಮ್ಮದೂ ಒಂದು ಆದರ್ಶ ದಾಂಪತ್ಯ ಎಂದು ಮುಂದಿನ ದಿನಗಳಲ್ಲಿ ಸಾಬೀತುಮಾಡಿ ತೋರಿಸುತ್ತೇನೆ.’ ಸಮತಾ ದಿಟ್ಟವಾಗಿ ಉತ್ತರಿಸಿದ್ದಳು ನನ್ನ ಅನುಮಾನದ ಪ್ರಶ್ನೆಗಳಿಗೆ. ಮುಂದಿನ ದಿನಗಳಲ್ಲಿ ಅವಳು ಹೇಳಿದಂತೆ ನಡೆದೂ ತೋರಿಸತೊಡಗಿದಳು. ಅವಳದು ಅನ್ಯೋನ್ಯ ದಾಂಪತ್ಯ ಜೀವನವೇ. ಅವಳೀಗ ಎರಡು ಮುದ್ದು ಮಕ್ಕಳ ತಾಯಿಯೂ ಹೌದು.*****ಕಾಲೇಜ್ ಜೀವನ ಅಂದರೇ ಒಂಥರ ಕಲರ್ಫುಲ್ ಜೀವನ ಅಲ್ಲವೇ? ಅರಳುತ್ತಿರುವ ಚೆಲುವಿನ ಮೈಮನಗಳಲ್ಲಿ ಬಣ್ಣಬಣ್ಣದ ಕನಸುಗಳು ಅಂಕುರಿಸಿ ಬೆಳೆಯುವ ಕಾಲ ತಾನೇ…? ಕಾಲೇಜಿನೆಲ್ಲೆಡೆ ಹೂವುಗಳಂತೆ ಅರಳಿದ ಯುವಕ-ಯುವತಿಯರ ಮುಖಗಳು; ಬಿಸಿಲಲ್ಲಿ ಬೆಂದ ಭೂಮಿ ಮೊದಲ ಮಳೆಗಾಗಿ ಹಾತೊರೆಯುವಂತೆ ಎಲ್ಲರ ಹೃದಯಗಳು ಪ್ರೀತಿಯ ಮಳೆಗಾಗಿ ಕಾಯುತ್ತಿದ್ದ ವಸಂತಕಾಲ. ಪ್ರೀತಿಯ ನಿರೀಕ್ಷೆ ಬಲು ಸುಂದರ. ನನ್ನ ಕಥೆಯೂ ಬೇರೆ ಏನಿರಲಿಲ್ಲ. ನಾನು ಎರಡನೆಯ ವರ್ಷದ ಪಿಯುಸಿಯಲ್ಲಿದ್ದಾಗ ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ ರಾಜಶೇಖರ್ ಎನ್ನುವ ಹ್ಯಾಂಡ್ಸಮ್ ಗೈ ಬಂದಿದ್ದರು. ಹ್ಯಾಂಡ್ಸಮ್ ಎಂದರೆ ನಿಜವಾಗಿಯೂ ತುಂಬಾನೇ ಹ್ಯಾಂಡ್ಸಮ್. ಮನ್ಮಥನ ಅಪರಾವತಾರವೇ. ನಾವು ಗೆಳತಿಯರೆಲ್ಲ ಅವರಿಗೆ ಸ್ಮಾರ್ಟೀ ಎಂದೇ ಸಂಬೋಧಿಸುತ್ತಿದ್ದೆವು ನಮ್ಮೊಳಗೇ. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಆತ್ಮೀಯವಾಗಿ ಮಾತಾಡುತ್ತಿದ್ದರು. ನನ್ನ ಜೊತೆಗೂ ತುಂಬಾನೇ ಆತ್ಮೀಯವಾಗಿ ಮಾತಾಡುತ್ತಿದ್ದರಲ್ಲದೇ, `ಯುವರ್ ಪರ್ಫಾರ್ಮೆನ್ಸ್ ಈಜ್ ಎಕ್ಷಲೆಂಟ್ ಎಂದು ಹೇಳುತ್ತಿದ್ದರಲ್ಲದೇ ಯುವ್ ಆರ್ ದಿ ಮೋಸ್ಟ್ ಬ್ಯೂಟಿಫುಲ್ ಗರ್ಲ ಆಫ್ ದಿ ಕಾಲೇಜ್’ ಅಂತಾನೂ ಒಮ್ಮೆ ಉದ್ಘರಿಸಿ ನನ್ನನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಿದ್ದೂ ಉಂಟು. ಆಗಷ್ಟೇ ನಾನು ಬಿಇ ಮುಗಿಸಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದೆ. ಅದೊಂದು ದಿನ ಏಕಾಯೇಕಿ ರಾಜಶೇಖರ್ ಸರ್ ನಮ್ಮ ಕಂಪನಿಯ ಕ್ಯಾಂಪಸ್ಸಿಗೆ ಬಂದಿದ್ದರು. ಅವರು ಮೊದಲಿಗಿಂತ ಇನ್ನೂ ಹ್ಯಾಂಡ್ಸಮ್ಮಾಗಿ ಕಂಡರು. ಕ್ಯಾಂಟೀನಿನಲ್ಲಿ ಚಹ ಹೀರುತ್ತಿದ್ದಾಗ ನನ್ನೊಂದಿಗೆ ಒಂದಿಷ್ಟು ಪರ್ಸನಲ್ಲಾಗಿ ಮಾತಾಡುವುದಿದೆ ಎಂದು ಮಾತಿಗೂ ಇಳಿದಿದ್ದರು.“ಯಶಸ್ವಿನಿಯವರೇ, ನೇರವಾಗಿ ವಿಷಯವನ್ನು ಪ್ರಸ್ತಾಪಿಸಿಬಿಡುತ್ತೇನೆ. ನಾನು ನಿಮ್ಮ ಪಿಯು ಟೂದ ಮೊದಲ ತರಗತಿ ತೆಗೆದುಕೊಂಡ ದಿನದಿಂದಲೂ ನಿಮ್ಮನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನಿಮ್ಮ ಪದವಿ ಮುಗಿಯಲಿ ಎಂದು ಸುಮ್ಮನಿದ್ದೆ. ನೀವೀಗ ಪದವಿ ಮುಗಿಸಿಕೊಂಡು ಕೆಲಸವನ್ನೂ ಮಾಡುತ್ತಿರುವಿರಿ. ಈ ನಡುವೆ ನನ್ನ ಮದುವೆಗಾಗಿ ಹಲವಾರು ಸಂಬಂಧಗಳ ಪ್ರಸ್ತಾವಗಳು ಬಂದವಾದರೂ ಮೊದಲು ನಿಮ್ಮ ಅಭಿಪ್ರಾಯ ತಿಳಿದುಕೊಂಡು ಮುಂದೆ ವಿಚಾರಮಾಡಿದರಾಯಿತು ಎಂದಂದುಕೊಂಡು ಬಂದ ಪ್ರಸ್ತಾವಗಳನ್ನು ತಿರಸ್ಕರಿಸಿದ್ದೂ ಆಯಿತು. ಹಾಗೇ ಇನ್ನೊಂದು ಮಾತು. ನಿಮ್ಮ ಉದ್ಯೋಗ ಹೆಚ್ಚುಕಡಿಮೆ ಬೆಂಗಳೂರಿನಲ್ಲೇ ಮುಂದುವರಿಯುತ್ತದೆ. ನೀವು ನನ್ನ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟರೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಪ್ರಯತ್ನಿಸುವೆ. ಇಬ್ಬರೂ ಒಂದೇ ಕಡೆಗೆ ಇರಲು ಅನುಕೂಲವಾಗುತ್ತದೆ. ನನ್ನ ದಾಂಪತ್ಯ ಜೀವನದ ಕನಸು ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ” ಎಂದೆನ್ನುತ್ತಾ ನನ್ನ ಮೊಗವನ್ನೇ ದಿಟ್ಟಿಸತೊಡಗಿದ್ದರು ರಾಜಶೇಖರ್ ಸರ್. ನನಗೆ ಒಂಥರ ದಿಗ್ಭ್ರಮೆ. ನಾನೂ ಅವರನ್ನೇ ತೀಕ್ಷ್ಣವಾಗಿ ನೋಡತೊಡಗಿದೆ. `ಇದು ಜೀವಮಾನದ ಪ್ರಶ್ನೆ. ತತಕ್ಷಣ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ…?’ ಮನದಲ್ಲೇ ಯೋಚಿಸಿದೆ.“ಸರ್, ಇದು ಯೋಚಿಸುವಂಥಹ ವಿಷಯವೇ. ಒಂದುವಾರದ ಸಮಯ ಕೊಡಿರಿ. ಯಾವುದಕ್ಕೂ ನನ್ನ ಅಭಿಪ್ರಾಯ ತಿಳಿಸುವೆ” ಎಂದಿದ್ದೆ ತುಸು ಹೊತ್ತಿನ ಮೌನದ ಬ್ರೇಕ್‍ನ ನಂತರ.“ಸರಿ ಅಷ್ಟೇ ಮಾಡಿರಿ. ನಿಮ್ಮ ಸಕಾರಾತ್ಮಕ ನಿರ್ಣಾಯದ ಮಾತಿನ ದಾರಿ ಕಾಯುವೆ. ನಿರಾಶೆ ಮಾಡಬೇಡಿರಿ ಈ ಪ್ರೇಮಿಯನ್ನು…” ವಿನೀತಭಾವದಲ್ಲಿ ಹೇಳಿದ್ದರು ರಾಜಶೇಖರ್ ಸರ್. ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದೆವು.    ಆ ರಾತ್ರಿ ನಾನು ಸರಿಯಾಗಿ

“ಅಂತರಂಗದ ಸೋಲು” ಸಣ್ಣ ಕಥೆ ಶೇಖರಗೌಡ ವೀ ಸರನಾಡಗೌಡರ್. Read Post »

ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ಕಥಾಗುಚ್ಛ

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ

ಕಥಾ ಸಂಗಾತಿ ಡಾ.ವೆಂಕಟೇಶ ಪಿ.ಗುಡೆಪ್ಪನವರ “ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ” ಬ್ಲರ್ಬ     “ಇಲ್ಲಿ ಬರೀ ಸಿಮೆಂಟ್ ದೂಳು ಮಳೆಯಾಗಿ ಸುಳಿಯುವುದಿಲ್ಲ; ಬಡತನದ ಒರಟುತನದಲ್ಲೂ ಚಿಗುರಿದ ಶುದ್ಧ ಪ್ರೀತಿಯೊಂದು ಅಂದದ ಜೀವಗಳನ್ನೇ ಬೂದಿ ಮಾಡಿತು!”   ಹಸಿರಿನಿಂದ ಕಂಗೊಳಿಸುತ್ತಿದ್ದ ಅವಳಿ ನಗರದ ತೋಟದ ಪಕ್ಕ ಕಾರ್ಖಾನೆಯೊಂದು ತಲೆಎತ್ತಿದಾಗ, ಅಲ್ಲಿನ ಪ್ರಕೃತಿಯಷ್ಟೇ ಮನುಷ್ಯರ ಉಸಿರೂ ಕಲುಷಿತವಾಯಿತು. ಅದೇ ದೂಳಿನಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಒರಟು ಮೈಯ ಮರಗಪ್ಪ ಮತ್ತು ಶ್ರೀಮಂತ ಸಾವುಕಾರನ ಮುದ್ದಿನ ಮಗಳು ಗೌರಮ್ಮನ ನಡುವೆ ಚಿಗುರಿದ ಮೂಕ ಪ್ರೀತಿ, ವರ್ಗ-ಜಾತಿಯ ಗೋಡೆಗಳನ್ನು ಮೀರಿ ಬೆಳೆಯುತ್ತದೆ.ಆದರೆ, ವಿಧಿಯ ಕ್ರೂರ ಆಟವೆಂಬಂತೆ, ಅದೇ ಸಿಮೆಂಟ್ ದೂಳು ನಿಧಾನವಾಗಿ ಅವರ ಶ್ವಾಸಕೋಶವನ್ನು ತಿಂದುಹಾಕಿ ಮಾರಕ ‘ಕ್ಯಾನ್ಸರ್’ ಎಂಬ ಮಹಾಮಾರಿಯಾಗಿ ಪರಿಣಮಿಸುತ್ತದೆ. ಸಮಾಜದ ಕಣ್ಣಿಗೆ ಬಿಸುಕಿಸಲ್ಪಟ್ಟ ಆ ಪ್ರೇಮಿಗಳು ಕೊನೆಗೆ ಅದೇ ಬೂದಿ ಮಳೆಯ ನಡುವೆ ಒಂದೇ ಚಿತೆಯಲ್ಲಿ ಅಮರರಾಗುತ್ತಾರೆ.ಜಾತಿ-ಅಂತಸ್ತಿನ ಅಹಂಕಾರವನ್ನು ಕರಗಿಸಿ, ಓದುಗರ ಕಣ್ಣಾಲೆಗಳನ್ನು ಒದ್ದೆ ಮಾಡುವ ಈ ಕರುಳು ಹಿಂಡುವ ಪ್ರೇಮ ಕಥೆಯೇ  ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ… ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ ಅವಳಿ ನಗರಗಳ ಅಂಚಿನಲ್ಲಿ ಹಬ್ಬಿರುವ ಆ ಮಣ್ಣಿನ ವಾಸನೆಯೇ ಹಂಗೆ, ಅದಕ್ಕೊಂದು ಒಂಥರಾ ವಿಶಿಷ್ಟವಾದ ಗತ್ತು, ಗಮ್ಮತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆ ಗಾಳಿಯ ಹಂಗೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಕೆಂಪು ಮಣ್ಣಿನ ಘಮಲು ಮಾಸಿ, ಯಂತ್ರಗಳ ಗರ್ಜನೆ ಆ ಪ್ರಾಂತ್ಯವನ್ನು ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸತ್ಯಪ್ಪ ಸಾವುಕಾರನ ನೂರಾರು ಎಕರೆ ವಿಶಾಲವಾದ ತೋಟದ ಪಕ್ಕದಲ್ಲೇ ದೈತ್ಯಾಕಾರದಲ್ಲಿ ತಲೆಎತ್ತಿದ ಆ ಸಿಮೆಂಟ್ ಕಾರ್ಖಾನೆಯಂತೂ ಆ ಇಡೀ ಪ್ರದೇಶದ ಜೀವಸೆಲೆಯನ್ನು ಬತ್ತಿಸಿಬಿಟ್ಟಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಬಾಳೆ ತೋಟ, ಮಾವಿನ ತೋಪು, ಸಪೋಟಾ ಗಿಡಗಳು ಈಗ ಜೀವ ಕಳೆದುಕೊಂಡು ನಿಂತಿವೆ. ಆ ತೋಟದ ಎಲೆಗಳ ಮೇಲೆಲ್ಲಾ ಹಸಿರು ಬಣ್ಣ ಮಾಸಿ, ಕಾರ್ಖಾನೆಯ ಬೂದಿ ಬಣ್ಣ ಮೈಮೇಲೆ ಅಂಟಿಕೊಂಡಿದೆ. ಇಲ್ಲಿನ ಜನರ ಬದುಕು ಕೂಡ ಆ ಸಿಮೆಂಟ್ ದೂಳಿನ ಮಳೆಯಲ್ಲಿ ನಲುಗಿ, ಬೂದಿಯಾಗಿಹೋಯ್ತು ಎಂದರೆ ತಪ್ಪಾಗಲಾರದು.ಅದೇ ತೋಟದ ಮೂಲೆಯಲ್ಲಿ, ಬಿರು ಬೇಸಿಗೆಯ ಸುಡು ಬಿಸಿಲಿಗೂ ಕ್ಯಾರೆ ಎನ್ನದೆ ಮೈಯೆಲ್ಲಾ ಕರಗಿ ಹೋದ ಬೆವರನ್ನು ಹರಿಸಿ ದುಡಿಯುವ ಒಬ್ಬ ಅಪ್ಪಟ ಒರಟು ಮನುಷ್ಯ ಮರಗಪ್ಪ. ಎದೆಗೆ ಬಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೂ ಹೂವಿನಂತೆ ಎತ್ತುವ ಗಟ್ಟಿಮುಟ್ಟು ಮೈಕಟ್ಟು ಅವನದು. ಕುತ್ತಿಗೆಯ ಮೇಲೆ ಬಿದ್ದ ಬಿಳಿ ಸಿಮೆಂಟ್ ದೂಳು ಅವನ ಇಡೀ ಮೈಯನ್ನು ಆವರಿಸಿಕೊಂಡು, ನೋಡಲು ಯಾವುದೋ ಶಿಲ್ಪಿಯ ಕೈಯಲ್ಲಿ ರೂಪುಗೊಂಡ ಬಿಳಿ ಕಲ್ಲಿನ ಮೂರ್ತಿಯಂತೆ ಕಾಣುತ್ತಿದ್ದ. ಬಡತನದ ರೇಖೆಗಿಂತಲೂ ಕೆಳಗೆ ಹುಟ್ಟಿ, ಹೊಟ್ಟೆಪಾಡಿಗೆ ದಿನಗೂಲಿ ನಂಬಿ ಬದುಕುತ್ತಿದ್ದರೂ, ಅವನ ಒರಟು ಎದೆಯ ಒಳಗೆ ಮೃದುವಾದ ಹೃದಯವಿತ್ತು; ಕಣ್ಣುಗಳಲ್ಲಿ ಮಾತ್ರ ಒಂಥರಾ ಜೀವನದ ಕಳೆಯಿತ್ತು. ಮುಖದ ಮೇಲಿನ ಸಿಮೆಂಟ್ ದೂಳನ್ನು ಆಗಾಗ್ಗೆ ಬಿಳಿ ಕೈಯಿಂದ ಒರೆಸಿಕೊಳ್ಳುತ್ತಾ, ಸೂರ್ಯ ಮೂಡುವುದರಿಂದ ಹಿಡಿದು ಮುಳುಗುವವರೆಗೂ ದುಡಿಯುವುದೇ ಅವನ ಏಕೈಕ ಕಾಯಕವಾಗಿತ್ತು.ಅದೇ ಸತ್ಯಪ್ಪ ಸಾವುಕಾರನ ಮುದ್ದಿನ ಹಾಗೂ ಏಕೈಕ ಮಗಳು ಗೌರಮ್ಮ. ಆ ಊರಿನ ದೊಡ್ಡ ಶ್ರೀಮಂತನ ಮಗಳಾದ್ದರಿಂದ ಅವಳಿಗೆ ಯಾವುದೇ ರೀತಿಯ ಕೊರತೆ ಇರಲಿಲ್ಲ. ಅಪ್ಪನ ಆಸ್ತಿ-ಪಾಸ್ತಿಗೆ ಇವಳೇ ಕಣ್ಣಿನುಸಿರು, ರಾಣಿ. ಮೈತುಂಬಾ ಒಡವೆಗಳನ್ನು ಹಾಕಿಕೊಳ್ಳದಿದ್ದರೂ, ಅವಳ ಸ್ವಾಭಾವಿಕ ಅಂದವೇ ಆ ಊರಿನ ಯುವಕರ ನಿದ್ದೆಗೆಡಿಸಿತ್ತು. ಸಿಂಗಾರಗೊಂಡು ಕಾಲೇಜಿಗೆ ಹೋಗುವ ವಯಸ್ಸು ಅವಳದ್ದು. ಪಟ್ಟಣದ ದೊಡ್ಡ ಕಾಲೇಜಿನಲ್ಲಿ ಸೈನ್ಸ್ ಓದುತ್ತಿದ್ದರೂ, ವಾರಾಂತ್ಯದಲ್ಲಿ ಅಥವಾ ರಜೆ ದಿನಗಳಲ್ಲಿ ತಂದೆಯ ಈ ತೋಟಕ್ಕೆ ಬಂದಾಗಲೆಲ್ಲಾ ಆ ನಿಸರ್ಗದ ಮಡಿಲಲ್ಲಿ ಪಕ್ಷಿಯಂತೆ ಉಲ್ಲಾಸದಿಂದ ಓಡಾಡುತ್ತಿದ್ದಳು. ಬಿಳಿಯ ಸಲ್ವಾರ್ ಧರಿಸಿ, ಮುಡಿಯಲ್ಲಿ ಯಾವಾಗಲೂ ತಾಜಾ ಮಲ್ಲಿಗೆ ಹೂವನ್ನು ಮುಡಿದು ಆಕೆ ನಡೆದುಬರುತ್ತಿದ್ದರೆ, ಕಳೆಗುಂದಿದ್ದ ಆ ಸಾವುಕಾರನ ತೋಟಕ್ಕೆ ಮರಳಿ ಹೊಸ ಜೀವ ಬಂದಹಾಗಾಗುತ್ತಿತ್ತು. ಅವಳ ನಗು ಆ ಬಿಸಿಲಿನ ತಾಪವನ್ನೂ ತಣಿಸುವಂತಿತ್ತು.ಅದೊಂದು ದಿನ ಮಧ್ಯಾಹ್ನದ ಹೊತ್ತು. ಬಿಸಿಲು ತನ್ನ ಪ್ರತಾಪವನ್ನು ಸಂಪೂರ್ಣವಾಗಿ ತೋರುತ್ತಿತ್ತು. ಕಾರ್ಖಾನೆಯಿಂದ ಹೊರಬರುತ್ತಿದ್ದ ದೂಳು ಗಾಳಿಯಲ್ಲಿ ತೇಲಾಡುತ್ತಾ ಎಲ್ಲರ ಮೇಲೂ ಸುರಿಯುತ್ತಿತ್ತು. ಮರಗಪ್ಪ ತೋಟದ ಒಂದು ಮೂಲೆಯಲ್ಲಿ ಮರದ ನೆರಳಿನಲ್ಲಿ ನಿಂತು ಕೆಲಸ ಮಾಡಿ ಸುಸ್ತಾಗಿ ಹೋಗಿದ್ದನು. ಗಂಟಲು ಒಣಗಿಹೋಗಿತ್ತು, ಬಾಯಾರಿಕೆ ತೀವ್ರವಾಗಿತ್ತು. ನೀರು ಕುಡಿಯಲು ತೋಟದ ಮೂಲೆಯಲ್ಲಿದ್ದ ಪುರಾತನ ಕಲ್ಲು ಬಾವಿಯ ಬಳಿಗೆ ಹೆಜ್ಜೆ ಹಾಕಿದನು. ಅದೇ ಸಮಯದಲ್ಲಿ, ಅಪ್ಪನಿಗೆ ಊಟ ತಂದಿದ್ದ ಗೌರಮ್ಮ, ಕೈಯಲ್ಲಿ ತಣ್ಣನೆಯ ನೀರಿರುವ ತಾಮ್ರದ ಬಿಂದಿಗೆ ಹಿಡಿದು ಅದೇ ಬಾವಿಯ ಕಡೆಗೆ ಬಂದಿದ್ದಳು.ಅನಿರೀಕ್ಷಿತವಾಗಿ ಇಬ್ಬರ ಕಣ್ಣುಗಳೂ ಒಂದಕ್ಕೊಂದು ನೇರವಾಗಿ ಬೆಸೆದುಕೊಂಡವು. ಆ ಕ್ಷಣದಲ್ಲಿ ಜಗತ್ತೇ ನಿಂತುಹೋದ ಅನುಭವ. ಮಾತೇ ಆಡದ ಆ ಮೂಕ ಸೆಳೆತದಲ್ಲಿ, ಇಬ್ಬರ ಮನಸ್ಸಿನ ಆಳದಲ್ಲೂ ಏನೋ ಒಂದು ಹೊಸ ಅಲೆಯೊಂದು ಹುಟ್ಟಿಕೊಂಡಿತು. ಬಡತನದ ಮುಖವಾಡ ಧರಿಸಿದ ಮರಗಪ್ಪನ ಕಣ್ಣುಗಳಲ್ಲಿ ಬೆರಗು ಮೂಡಿದರೆ, ಶ್ರೀಮಂತಿಕೆಯ ಅಹಮಿಕೆಯಿಲ್ಲದ ಗೌರಮ್ಮನ ಕಣ್ಣುಗಳಲ್ಲಿ ಮೃದುವಾದ ಅರಿವು ಮೂಡಿತು.ಗೌರಮ್ಮ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದ ತಣ್ಣನೆಯ ನೀರನ್ನು ಒಂದು ಲೋಟಕ್ಕೆ ಸುರಿದು ಮರಗಪ್ಪನ ಕಡೆಗೆ ಚಾಚುತ್ತಾ, ತನ್ನ ಮೃದು ಧ್ವನಿಯಲ್ಲಿ ನಸುನಗುತ್ತಾ ನುಡಿದಳು: “ಏನ್ಲಾ ಮರಗಪ್ಪ, ಮೈಯೆಲ್ಲಾ ಸಿಮೆಂಟ್ ದೂಳು ತುಂಬಿಕಂಡೈತಿ, ಗಂಟಲು ಒಣಗಿರಬೇಕಲ್ಲ, ಈ ನೀರು ಕುಡಿದು ಸ್ವಲ್ಪ ತಣ್ಣಗಾಗು.”ಅವಳ ಆ ಸಣ್ಣ ಎರಡು ಮಾತುಗಳು ಮರಗಪ್ಪನ ಒಣಗಿದ ಗಂಟಲಿಗೆ ಮಾತ್ರವಲ್ಲ, ಇಡೀ ಎದೆಗೆ ತಂಪಾದ ಮಳೆಯ ಅಲೆ ಅಪ್ಪಳಿಸಿದಂತಾಯಿತು. ಕೈಲಿದ್ದ ಲೋಟವನ್ನು ನಡುಗುವ ಕೈಗಳಿಂದ ಪಡೆದುಕೊಂಡು ನೀರು ಕುಡಿದ ಮರಗಪ್ಪನಿಗೆ, ಜಗತ್ತಿನ ಸಮಸ್ತ ಸಿಹಿಯೂ ಆ ನೀರಿನಲ್ಲೇ ಇದ್ದಹಾಗೆನಿಸಿತು. ಅಂದಿನಿಂದ ಆ ಸಿಮೆಂಟ್ ದೂಳು ತುಂಬಿದ ಕಲುಷಿತ ವಾತಾವರಣದಲ್ಲೂ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯ ಅಪುರೂಪದ ಚಿಗುರು ಒಡೆಯಲು ಶುರುವಾಯಿತು.ದಿನಗಳು ಕಳೆದಂತೆ ಆ ಭೇಟಿಗಳು ನಿತ್ಯದ ಅಭ್ಯಾಸವಾಯಿತು. ಫ್ಯಾಕ್ಟರಿಯಿಂದ ದಿನನಿತ್ಯ ಹೊರಬರುವ ಆ ಕೆಟ್ಟ ವಾಸನೆ ಮತ್ತು ಬಿಳಿ ದೂಳು ಇಡೀ ಊರನ್ನೆಲ್ಲಾ ಆವರಿಸುತ್ತಿದ್ದರೂ, ಆ ದೂಳಿನ ಕಣ ಕಣದಲ್ಲೂ ಅವರಿಬ್ಬರ ಪ್ರೀತಿ ಮಾತ್ರ ಮಕರಂದದಂತೆ ಹರಡಿಕೊಳ್ಳುತ್ತಾ ಹೋಯ್ತು. ಸತ್ಯಪ್ಪ ಸಾವುಕಾರನ ಕಣ್ಣಿಗೆ ಮಣ್ಣೆರಚಿ, ಯಾರೂ ಇಲ್ಲದ ವೇಳೆಗಳಲ್ಲಿ ಆ ಬೃಹತ್ ಬಾಳೆ ತೋಟದ ದಟ್ಟ ಮರಗಳ ಮರೆಯಲ್ಲಿ ಇಬ್ಬರೂ ಗುಟ್ಟಾಗಿ ಮಾತುಕತೆ ಆಡಲಾರಂಭಿಸಿದರು. ಗೌರಮ್ಮ ತನ್ನ ಕಾಲೇಜಿನ ಕಥೆಗಳನ್ನು ಹೇಳುತ್ತಿದ್ದರೆ, ಮರಗಪ್ಪ ತಾನು ಅನುಭವಿಸುತ್ತಿದ್ದ ಕಷ್ಟಗಳನ್ನೂ, ಈ ಕಾರ್ಖಾನೆ ಬಂದು ತೋಟ ಹಾಳಾಗುತ್ತಿರುವುದರ ನೋವನ್ನೂ ಹಂಚಿಕೊಳ್ಳುತ್ತಿದ್ದನು. ಪ್ರೀತಿ ಎನ್ನುವುದು ವರ್ಗ, ಜಾತಿ, ಬಡತನ, ಸಿರಿತನದ ಗಡಿಗಳನ್ನು ಮೀರಿ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಇವರೇ ಸಾಕ್ಷಿಯಾದರು.ಆದರೆ, ಈ ಪ್ರೀತಿಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಮುಳ್ಳು ಹಾಸಿದ ಹಾದಿಯಾಗಿತ್ತು. ಕಾರ್ಖಾನೆಯಿಂದ ಸದಾ ಕಾಲ ಹೊರಬರುತ್ತಿದ್ದ ಆ ವಿಷಪೂರಿತ ಅನಿಲ, ಕೆಟ್ಟ ವಾಸನೆ ಮತ್ತು ದೂಳು ಕೇವಲ ಪ್ರಕೃತಿಯ ಹಸಿರನ್ನಷ್ಟೇ ಅಲ್ಲ, ಅಲ್ಲಿನ ಜನರ ಉಸಿರಾಟವನ್ನೂ ನಿಧಾನವಾಗಿ ಹೈರಾಣು ಮಾಡುತ್ತಿತ್ತು. ಆ ಬಿಳಿ ದೂಳು ಮನುಷ್ಯರ ಒಳಹೊಕ್ಕು ಶ್ವಾಸಕೋಶವನ್ನು ಗಾಯಗೊಳಿಸುತ್ತಿತ್ತು, ಉಸಿರುಗಟ್ಟಿಸುತ್ತಿತ್ತು. ಆದರೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿಯ ಉಸಿರು ಮಾತ್ರ ಆ ದೂಳಿನ ಮಧ್ಯೆಯೂ ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಂತಿತ್ತು….ಅವಳಿ ನಗರಗಳ ಆ ಹವಾಮಾನ ದಿನದಿಂದ ದಿನಕ್ಕೆ ಉಸಿರುಗಟ್ಟುವಂತಾಗುತ್ತಿತ್ತು. ಸತ್ಯಪ್ಪ ಸಾವುಕಾರನ ತೋಟದ ಅಂಚಿನಲ್ಲಿ ನಿಂತು ನೋಡಿದರೆ, ಆಕಾಶದಲ್ಲಿ ಮೋಡ ಕವಿದಿದೆಯೋ ಅಥವಾ ಸಿಮೆಂಟ್ ಕಾರ್ಖಾನೆಯ ಬೂದಿ ಆವರಿಸಿದೆಯೋ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಮೇಲ್ನೋಟಕ್ಕೆ ಅದೊಂದು ಹವಾಮಾನ ವೈಪರೀತ್ಯದಂತೆ ಕಂಡರೂ, ವಾಸ್ತವದಲ್ಲಿ ಅದೊಂದು ನಿಧಾನವಾಗಿ ಹರಡುತ್ತಿದ್ದ ಮಾರಕ ವಿಷವಾಗಿತ್ತು. ಆ ಬಿಳಿ ದೂಳು ದಿನವಿಡೀ ಮಳೆಯ ಹನಿಗಳಂತೆ ಇಡೀ ಊರಿನ ಮೇಲೆ ಸುರಿಯುತ್ತಿತ್ತು. ಗಿಡಮರಗಳ ಎಲೆಗಳು ತಮ್ಮ ಅಸಲಿ ಹಸಿರು ಬಣ್ಣವನ್ನು ಕಳೆದುಕೊಂಡು, ಬಿಳಿಚಿಕೊಂಡಿದ್ದವು. ಆದರೆ, ಪ್ರಕೃತಿಯ ಈ ವಿನಾಶದ ನಡುವೆಯೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿ ಮಾತ್ರ ಆ ಬೂದಿಯ ಮಳೆಯಲ್ಲೂ ಗಟ್ಟಿಯಾದ ಬೇರು ಬಿಟ್ಟು ಬೆಳೆಯುತ್ತಿತ್ತು.ದಿನಗಳು ಕಳೆದಂತೆ ಅವರ ಭೇಟಿಗಳ ಕಾತರ ಹೆಚ್ಚಾಯಿತು. ಸಾವುಕಾರ ಸತ್ಯಪ್ಪ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ರಾಜಕೀಯ ತಿಕ್ಕಾಟಗಳಲ್ಲಿ ಸಿಲುಕಿಕೊಂಡು ದಿನದ ಹೆಚ್ಚಿನ ಸಮಯ ಮನೆಯ ಹೊರಗಿರುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆ ಜೋಡಿ, ತೋಟದ ಕಡೆಗೆ ಯಾರೂ ಬಾರದ ನಿರ್ಜನ ಮೂಲೆಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕಾಲ ಕಳೆಯುತ್ತಿತ್ತು. ಮರಗಪ್ಪ ತನ್ನ ಒರಟು ಕೈಗಳಿಂದ ಗೌರಮ್ಮಳ ಕೈಯನ್ನು ಸ್ಪರ್ಶಿಸಿದಾಗ, ಆ ಕೈಗಳಲ್ಲಿನ ಬೆವರು ಮತ್ತು ಸಿಮೆಂಟ್ ದೂಳು ಕೂಡ ಅವರಿಗೆ ಒಂದು ಪವಿತ್ರವಾದ ಗಂಧದಂತೆ ಭಾಸವಾಗುತ್ತಿತ್ತು. ಗೌರಮ್ಮ ಕಾಲೇಜಿನಿಂದ ತಂದ ಪುಸ್ತಕಗಳನ್ನು ಮರಗಪ್ಪನ ಕೈಗೆ ನೀಡಿ, “ಇದನ್ನು ಓದು ಮರಗಪ್ಪ, ಅಕ್ಷರ ಕಲಿತರೆ ಈ ಜಗತ್ತನ್ನು ಬೇರೆ ರೀತಿಯಲ್ಲಿ ನೋಡಬಹುದು” ಎಂದು ಪ್ರೀತಿಯಿಂದ ಹೇಳುತ್ತಿದ್ದಳು. ಅಕ್ಷರದ ಗಂಧವೇ ಇಲ್ಲದ ಮರಗಪ್ಪ, ಗೌರಮ್ಮಳಿಗಾಗಿ ಅಕ್ಷರಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದ. ಅವಳ ಆ ಮಾತುಗಳು ಅವನಿಗೆ ಜಗತ್ತಿನ ಯಾವುದೇ ದೊಡ್ಡ ವಿಶ್ವವಿದ್ಯಾಲಯದ ಪಾಠಕ್ಕಿಂತ ಮಿಗಿಲಾಗಿ ಕಾಣುತ್ತಿದ್ದವು.ಅಂದು, ಕಾರ್ಖಾನೆಯ ಸೈರನ್ ಭೀಕರವಾಗಿ ಮೊಳಗಿತು. ಆ ಶಬ್ದಕ್ಕೆ ಬೆಚ್ಚಿಬಿದ್ದ ಪಕ್ಷಿಗಳು ಗೂಡಿಗೆ ಹಾರಿದವು. ಅದೇ ಸಮಯದಲ್ಲಿ ಬಾಳೆ ತೋಟದ ನಡುವೆ ನಿಂತಿದ್ದ ಆ ಇಬ್ಬರ ಪ್ರೇಮಿಗಳ ಲೋಕದಲ್ಲಿ ದೊಡ್ಡದೊಂದು ಆತಂಕದ ಅಲೆ ಹರಿಯಿತು. ದೂರದಿಂದ ಕೆಲಸಗಾರನೊಬ್ಬ ಕೂಗುವ ಸದ್ದು ಕೇಳಿಸಿತು. “ಸಾವುಕಾರರು ಬರ್ತಿದಾರೆ! ಜಲ್ದಿ ಬನ್ನಿ!” ಎಂಬ ಆ ಮಾತು ಕೇಳುತ್ತಿದ್ದಂತೆ ಗೌರಮ್ಮನ ಮುಖದಲ್ಲಿ ಭಯದ ಛಾಯೆ ಆವರಿಸಿತು. ಅವಳ ತಂದೆ ಸತ್ಯಪ್ಪ ಸಾವುಕಾರನ ಕೋಪದ ಬಗ್ಗೆ ಆ ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಬಡವ-ಸಿರಿವಂತರ ನಡುವಿನ ಈ ಅಂತರ ಮುರಿದುಬಿದ್ದರೆ, ಆತ ಏನು ಬೇಕಾದರೂ ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂಬ ಸತ್ಯ ಅವರಿಬ್ಬರಿಗೂ ಚೆನ್ನಾಗಿ ತಿಳಿದಿತ್ತು.ಆದರೂ ಆ ಭಯವೇ ಅವರ ಪ್ರೀತಿಗೆ ಇನ್ನಷ್ಟು ಬಲ ತುಂಬಿತು. ವಿಧಿಯ ಆಟವೇ ವಿಚಿತ್ರವಲ್ಲವೇ? ಎಷ್ಟು ದಿನಗಳವರೆಗೆ ಈ ಕದ್ದುಮುಚ್ಚಿದ ಪ್ರೀತಿ ಮುಂದುವರಿಯಲು ಸಾಧ್ಯ? ಒಂದು ದಿನ ಸತ್ಯಪ್ಪ ಸಾವುಕಾರನ ಕಣ್ಣಿಗೆ ಆ ದೃಶ್ಯ ಬಿತ್ತು. ಅಂದು ಮಧ್ಯಾಹ್ನ ಸಾವುಕಾರ ತೋಟದ ಲೆಕ್ಕಪತ್ರಗಳನ್ನು ನೋಡಲು ಅನಿರೀಕ್ಷಿತವಾಗಿ ಬಂದಿದ್ದನು. ಎಂದೂ ಇಲ್ಲದಂತೆ ಆತ ಕಾರ್ಮಿಕರು ವಿಶ್ರಾಂತಿ ಪಡೆಯುವ ಶೆಡ್‌ಗಳ ಕಡೆಗೆ ಹೆಜ್ಜೆ ಹಾಕಿದನು. ದಟ್ಟವಾದ ಬಾಳೆ ಮರಗಳ ಮರೆಯಲ್ಲಿ ಗೌರಮ್ಮ ಮರಗಪ್ಪನ ಜೊತೆ ಮಾತನಾಡಿ ನಗುತ್ತಿರುವುದನ್ನು ಆತ ದೂರದಿಂದಲೇ ಕಣ್ಣಾರೆ ಕಂಡನು. ಆ ಕ್ಷಣದಲ್ಲಿ ಸಾವುಕಾರನ ಕಣ್ಣುಗಳು ಕೆಂಪಾದವು. ರಕ್ತದ ಕುದಿ ತಲೆಗೆ ಏರಿತು. ತನ್ನ ಮರ್ಯಾದೆ, ತನ್ನ ಆಸ್ತಿ, ತನ್ನ ಇಡೀ ವಂಶದ ಪ್ರತಿಷ್ಠೆ ಆ ಬಡ ಕಾರ್ಮಿಕನ ಕಾಲ್ತುಳಿತಕ್ಕೆ ಸಿಲುಕಿತು ಎಂದು ಭಾವಿಸಿದ ಆತನ ಮತಿ ಭ್ರಮಣೆಯಾಯಿತು.“ಏಯ್ ಮರಗಪ್ಪ!” ಎಂಬ ಆ ಸಿಂಹಘರ್ಜನೆ ಇಡೀ ತೋಟದಲ್ಲೇ ಪ್ರತಿಧ್ವನಿಸಿತು. ಆ ಧ್ವನಿಯನ್ನು ಕೇಳಿದ ತಕ್ಷಣ ಮರಗಪ್ಪ ಮತ್ತು ಗೌರಮ್ಮ ಬೆಚ್ಚಿಬಿದ್ದರು. ಸಾವುಕಾರ ಕೋಪದಿಂದ ಹತ್ತಿರ ಬಂದು, ಮರಗಪ್ಪನ ಕಾಲರ್ ಹಿಡಿದು ಎಳೆದಾಡಿದನು. “ನನ್ನ ಮನೆತನದ ಮರ್ಯಾದೆಯೊಂದಿಗೆ ಆಟವಾಡ್ತಿಯೇನ್ಲಾ ಬಡಪಾಯಿ ಮೂರ್ಖ? ನಿನ್ನ ಯೋಗ್ಯತೆಗೆ ನನ್ನ ಮಗಳನ್ನು

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ Read Post »

ಕಥಾಗುಚ್ಛ

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ

ಕಥಾ ಸಂಗಾತಿ ಸೌಮ್ಯ ಕೆ ವಿ “ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..”       ಜೇನುಪುರದ ತಾವರೆ ಕೆರೆ ಹಿಂದೆಂದೂ  ಸುದ್ದಿಯಾಗಿರಲಿಲ್ಲ. ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಕುಗ್ಗಿ, ವರ್ಷದಿಂದ ವರ್ಷಕ್ಕೆ ಅದೇ ತಾವರೆ ಹೂಗಳನ್ನು ಅರಳಿಸುತ್ತಾ, ಊರಿನ ಹಿರಿಯರಂತೆ ಗಂಭೀರವಾಗಿ ಬದುಕಿತ್ತು. ಆ ದಿನ ಮಾತ್ರ ಕೆರೆಯ ದಂಡೆಯಲ್ಲಿ ಜನಸಂದಣಿ. “ಮೊಸಳೆ… ಮೊಸಳೆ ಬಂದಿದೆ!” ಎಂಬ ಕೂಗು ಕೇಳುತ್ತಿದ್ದಂತೆ ಊರಿನ ಜನರೆಲ್ಲ ಓಡಿಬಂದಿದ್ದರು. ನೀರಿನ ಅಂಚಿನಲ್ಲಿ ಒಂದು ಪುಟ್ಟ ಮೊಸಳೆಯ ಮರಿ ಬಿಸಿಲಿಗೆ ಮೈಯೊಡ್ಡಿ ಮಲಗಿತ್ತು. ಯಾರೋ ಮೊಬೈಲ್‌ನಲ್ಲಿ ಚಿತ್ರ ತೆಗೆಯುತ್ತಿದ್ದರು. ಯಾರೋ ಮಕ್ಕಳನ್ನು ಹಿಂದೆ ಸರಿಸುತ್ತಿದ್ದರು. ಇನ್ನೂ ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡುತ್ತಿದ್ದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ದಿನವಿಡೀ ಸಿಲುಕಿ ಬೇಸರಗೊಂಡು ಸಹನಾ  ಎಂದಿನಂತೆ ಸಂಜೆಯ ವಾಕಿಂಗ್‌ಗೆ ಬಂದಿದ್ದಳು. ಜನಸಂದಣಿ ಕಂಡು ಕುತೂಹಲದಿಂದ ಮುಂದೆ ಹೋಗಿ ಮೊಸಳೆಯನ್ನು ನೋಡಿದಳು. ಅವಳೂ ಮೊಬೈಲ್ ತೆಗೆದು ಎರಡು ಚಿತ್ರ, ಒಂದು ಚಿಕ್ಕ ವಿಡಿಯೋ ಮಾಡಿಕೊಂಡಳು.  ಮನೆಗೆ ಬಂದು ಅಡುಗೆ, ಮಕ್ಕಳ ಓದು, ಅತ್ತೆ-ಮಾವಂದಿರ ಔಷಧಿ—ಇವೆಲ್ಲದರ ನಡುವೆ ಆ ವಿಡಿಯೊವನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದಾಗ, ಅರಿವಿಲ್ಲದೆ ಹಳೆಯ ಪ್ರಾಥಮಿಕ ಶಾಲಾ ಸಹಪಾಠಿಗಳ ವಾಟ್ಸ್ಆಪ್‌ ಗುಂಪಿಗೂ ಕಳುಹಿಸಿಬಿಟ್ಟಳು. ಆ ಗುಂಪು ವರ್ಷಗಳಿಂದ ಚಾಲ್ತಿಯಿದ್ದರೂ ಅದರಲ್ಲಿ ಜೀವಂತಿಕೆಯೇನಿರಲಿಲ್ಲ.ಬೆಳಿಗ್ಗೆ “ಶುಭೋದಯ” ಹೂವುಗಳು, ದೇವರ ಚಿತ್ರಗಳು, ಹಬ್ಬದ ಶುಭಾಶಯಗಳು… ಅಷ್ಟಕ್ಕೇ ಸೀಮಿತವಾಗಿತ್ತು. ಮೊಸಳೆಯ ವಿಡಿಯೊ ಕಳುಹಿಸಿದ ನಂತರವೂ ಸಹನಾ ಅದನ್ನು ಮರೆತುಬಿಟ್ಟಳು. ಆದರೆ ಮರುದಿನ  ಅವಳ ಮೊಬೈಲ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂತು. “ಹಲೋ… ನಾನು ಕಿಶನ್ ಭಾರದ್ವಾಜ್. ನಿನ್ನ ಪ್ರಾಥಮಿಕ ಶಾಲಾ ಸಹಪಾಠಿ.. ನೆನಪಿದೆಯೇ?” ಆ ಒಂದು ಸಾಲು ಅವಳನ್ನು ಮೂವತ್ತು ವರ್ಷಗಳ  ಹಿಂದಕ್ಕೆ ಕರೆದೊಯ್ದಿತು. ಕಿಶನ್… ಪುಸ್ತಕಗಳೊಳಗೇ ಬದುಕುತ್ತಿದ್ದ ಹುಡುಗ. ತರಗತಿಯಲ್ಲಿ ಶಿಕ್ಷಕರು ಪ್ರಶ್ನೆ ಕೇಳುವ ಮೊದಲೇ ಉತ್ತರ ಹೇಳುತ್ತಿದ್ದ ಹುಡುಗ. ದಪ್ಪ ಕನ್ನಡಕದ ಹಿಂದೆ ಯಾವಾಗಲೂ ಏನನ್ನೋ ಯೋಚಿಸುತ್ತಿದ್ದ ಕಣ್ಣುಗಳು. ಆದರೆ ಯಾರೊಂದಿಗೂ ಹೆಚ್ಚು ಮಾತನಾಡದ ಮೌನ. ಸಹನಾ ಅವನನ್ನು ನೆನಪಿಸಿಕೊಂಡಳು. ಆದರೆ ಅವನ ಜೊತೆ ಮಾತನಾಡಿದ ಒಂದೇ ಒಂದು ಸಂದರ್ಭ ನೆನಪಿಗೆ ಬರಲಿಲ್ಲ. “ಹೇಗಿದ್ದೀರಾ? ಇಷ್ಟು ವರ್ಷಗಳ ನಂತರ ನನ್ನ ನೆನಪಾಯಿತೇ?” ಎಂದು ಅವಳು ಉತ್ತರ ಕಳುಹಿಸಿದಳು. ಕೆಲವೇ ಕ್ಷಣಗಳಲ್ಲಿ ಉತ್ತರ ಬಂತು. “ನಿನ್ನ ಮೊಸಳೆಯ ವಿಡಿಯೋ ವನ್ನು ಗ್ರೂಪ್ ನಲ್ಲಿ ನೋಡಿದೆ. ಆ ಕೆರೆ ನಿಮ್ಮ ಊರಿನಲ್ಲೇ ಇದೆಯಾ?” ಸಹನಾಳಿಗೆ ನಗು ಬಂತು. ಇಷ್ಟು ವರ್ಷಗಳ ನಂತರ ಕೇಳುವ ಪ್ರಶ್ನೆ ಇದೇನಾ? ಆದರೂ ಮಾತು ಅಲ್ಲಿಂದಲೇ ಆರಂಭವಾಯಿತು. ಕಿಶನ್ ಈಗ ಒಡಿಶಾದ ಒಂದು ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ. ದೇಶ-ವಿದೇಶ ಅಲೆದ ಜೀವನ. ಮದುವೆಯಾಗಿತ್ತು. ಮುರಿದುಹೋಗಿತ್ತು. ಮಕ್ಕಳು ಇರಲಿಲ್ಲ. ಈಗ ಕೆಲಸವೇ ಅವನ ಸಂಗಾತಿ. ಸಹನಾ ತನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. “ಜೇನುಪುರದಲ್ಲಿ ಇದ್ದೇನೆ. ಇಬ್ಬರು ಮಕ್ಕಳು. ಗಂಡನಿಗೆ ಬಟ್ಟೆ ಅಂಗಡಿ.” ಅಷ್ಟೇ. ಮಾತುಗಳು ಕಡಿಮೆಯಿದ್ದರೂ, ದಿನಕ್ಕೆ ಒಂದೆರಡು ಸಂದೇಶಗಳು ಬರತೊಡಗಿದವು. ಸಹನಾಳ ದಿನಚರಿಯೂ ಬದಲಾಯಿತು. ಬೆಳಿಗ್ಗೆ ಎದ್ದ ಕೂಡಲೇ ಅವಳು ಮೊಬೈಲ್ ನೋಡುತ್ತಿದ್ದಳು. ಅವನು ಏನಾದರೂ ಕಳುಹಿಸಿದ್ದಾನಾ? ಒಂದು ಸಂದೇಶ ಬಂದರೂ ಮನಸ್ಸು ಹಗುರವಾಗುತ್ತಿತ್ತು. ಅವಳಿಗೆ ಗಂಡನ ಬಗ್ಗೆ ದೂರುಗಳಿರಲಿಲ್ಲ. ಅವನು ದುಡಿತದ ಹಿಂದೆ ಬಿದ್ದ ಮನುಷ್ಯ. ಮನೆ, ಮಕ್ಕಳು, ಅತ್ತೆ-ಮಾವ—ಎಲ್ಲರ ಹೊಣೆ.. ಅವರ ಬದುಕು ಯಾವಾಗಲೋ ಲೆಕ್ಕಾಚಾರವಾಗಿಬಿಟ್ಟಿತ್ತು. ಮಾತುಗಳಿದ್ದವು. ಮಮತೆ ಇರಲಿಲ್ಲ. ಕಾಳಜಿಯಿತ್ತು. ಕುತೂಹಲ ಇರಲಿಲ್ಲ. ಸಹನಾ ಯಾವಾಗ ನಕ್ಕಳು, ಯಾವಾಗ ಬೇಸರಪಟ್ಟಳು ಎಂಬುದನ್ನು ಗಮನಿಸುವಷ್ಟು ಬಿಡುವು ಯಾರಿಗೂ ಇರಲಿಲ್ಲ. ಹಳೆಯ ಗೆಳತಿ ಶುಭಾಳೊಂದಿಗೆ ಮೊಬೈಲ್ ನಲ್ಲಿ ಸಂಪರ್ಕಿಸುವುದನ್ನು ಬಿಟ್ಟರೆ ಬದುಕಿನ ಯಾವ ಸಂಗತಿಯಲ್ಲೂ ಉಮೇದಿಯಿರಲಿಲ್ಲ.. ಗಂಡ ನಾಲ್ಕು ಸಲ ಲೆಕ್ಕ ಮಾಡಿ ಕೊಡುವ ಎರಡು ಮೂರು ನೋಟುಗಳಲ್ಲಿ ಆನ್ ಲೈನ್ ಬಟ್ಟೆ ಆರ್ಡರ್ ಮಾಡುವ, ಧರಿಸಿ ಫೋಟೋ ಹೊಡಕೊಂಡು ಆಮೇಲೆ ರಿಟರ್ನ್ ಮಾಡಿ  ಆ ದುಡ್ಡಿನಲ್ಲಿ ಮತ್ತೇನೋ ಆರ್ಡರ್ ಮಾಡುವುದಷ್ಟೇ ಅವಳಿಗೆ ಖುಷಿ ಕೊಡುವ ಸಂಗತಿಯಾಗಿತ್ತು.. ಕಿಶನ್‌ನ  ಪ್ರತಿಯಂದು ಸಂದೇಶ  ಅವಳ ದೈನಂದಿನ ಬದುಕಿನಲ್ಲಿ ಹೊಸ ಅಲೆ ಎಬ್ಬಿಸತೊಡಗಿತ್ತು. ಕೆಲವೊಮ್ಮೆ ಮನುಷ್ಯನಿಗೆ ಪ್ರೀತಿಗಿಂತ ಮೊದಲು ಬೇಕಾಗುವುದು, ಯಾರೋ ತನ್ನನ್ನು ನೆನಪಿಸಿಕೊಂಡಿದ್ದಾರೆ ಎಂಬ ಭಾವನೆ. ಬಹುಶಃ ಸಹನಾ ಅನುಭವಿಸುತ್ತಿದ್ದುದೂ ಅದೇ. ಒಂದು ಸಂಜೆ ಕಿಶನ್ ಸಂದೇಶ ಕಳುಹಿಸಿದ. “ನಾನು ಜೇನುಪುರಕ್ಕೆ ಬರಬಹುದಾ? ಆ ಮೊಸಳೆಯನ್ನು ಕಣ್ಣಾರೆ ನೋಡಬೇಕು.” ಸಹನಾ ಮೊಬೈಲ್ ಪರದೆಯತ್ತ ಬಹಳ ಹೊತ್ತು ನೋಡುತ್ತ ಕುಳಿತಳು. ಗೆಳತಿ ಶುಭಾಗೆ ಹೀಗೆಲ್ಲ ನಡೀತು ಅಂದರೆ  ಮೊಸಳೆ ಒಂದು ನೆವ ಅಷ್ಟೇ.. ಅವನು ಭೇಟಿ ಮಾಡಲು ಬಯಸಿರುವುದು ನಿನ್ನನ್ನು.. ! ಹೊಸ ಕಥೆ ಶುರುವಾಗುತ್ತಿದೆಯೋ ಅಥವಾ ಹಳೆಯ ಕಥೆಯೇ ಮರುಜೀವ ಪಡೆಯುತ್ತಿದೆಯೋ ಎಂದು ಕಾಲೆಳೆದಿದ್ದಳು.. ಕಿಶನ್ ಜೇನುಪುರಕ್ಕೆ ಬರುವ  ದಿನ, ಸಹನಾ ತನ್ನ ವಯಸ್ಸನ್ನು ಮರೆತು ಕನ್ನಡಿಯ ಮುಂದೆಯೇ  ನಿಂತಿದ್ದಳು.ಅದು ಅವಳಿಗೆ ಹೊಸ ಅನುಭವ.ಮದುವೆಯ ಮೊದಲ ವರ್ಷಗಳಲ್ಲಿ ಗಂಡನಿಗಾಗಿ ಸಿಂಗಾರ ಮಾಡಿಕೊಂಡಿದ್ದ ನೆನಪು ಇತ್ತು. ನಂತರ ಮಕ್ಕಳು, ಮನೆ, ಜವಾಬ್ದಾರಿಗಳು—ಇವೆಲ್ಲದರ ನಡುವೆ ತನ್ನ ಮುಖವನ್ನು ನೋಡುವುದಕ್ಕೂ ಸಮಯ ಸಿಕ್ಕಿರಲಿಲ್ಲ.ಆದರೆ ಆ ದಿನ ನಾಲ್ಕು ಸೀರೆ ಬದಲಿಸಿದಳು. ಕೂದಲು ಮತ್ತೆ ಮತ್ತೆ ಸರಿಪಡಿಸಿದಳು. ಕಣ್ಣಿನ ಕೆಳಗಿನ ಆಯಾಸವನ್ನು ಮುಚ್ಚಲು ಸ್ವಲ್ಪ ಮೇಕಪ್ ಹಚ್ಚಿಕೊಂಡಳು.ಯಾರಿಗೂ ಗೊತ್ತಾಗದಂತೆ.ತನ್ನನ್ನೇ ಮೋಸಗೊಳಿಸುತ್ತಾ.. ಅವಳ ಬುದ್ದಿ, ಮನಸ್ಸು, ಹೃದಯ ಯಾವುದೂ ಅವಳ ಹತೋಟಿಯಲ್ಲಿ ಇರಲಿಲ್ಲ.. ಆದರೆ ಕಿಶನ್‌ನ್ನು ನೋಡಿದ  ತಕ್ಷಣ ಅವಳ ಮನಸ್ಸಿನೊಳಗೆ ನಿರೀಕ್ಷೆಯ ಬಲೂನು  ಢಮ್ಮೆಂದು  ಒಡೆದ ಶಬ್ದ ಕೇಳಿಸಿತು!! ಶಾಲೆಯ ದಿನಗಳ ಸಣಕಲು ಹುಡುಗ ಈಗ ಎಲ್ಲಿದ್ದ!ಬೊಜ್ಜು ದೇಹ. ವಿರಳವಾಗಿರುವ ಕೂದಲು. ಆಯಾಸಗೊಂಡ ಕಣ್ಣುಗಳು. ವಯಸ್ಸಿಗಿಂತ ಹೆಚ್ಚು ಮುಪ್ಪು. ವರ್ಷಗಳ ಸಂಶೋಧನೆ, ನಿರಂತರ ಪ್ರಯಾಣ, ಏಕಾಂತ—ಇವೆಲ್ಲ ಸೇರಿ ಅವನ ಮುಖದ ಮೇಲೆ  ಅಳಿಸಲಾರದ ಗುರುತು ಬಿಟ್ಟಿದ್ದವು.ಸಹನಾ ಮನಸ್ಸಿನಲ್ಲೇ ನಕ್ಕಳು.“ಇವನಿಗಿಂತ ನನ್ನ ಗಂಡನೇ ಚೆನ್ನಾಗಿ ಕಾಣುತ್ತಾರೆ.”ಆ ಸಂಜೆ ಶುಭಾಗೆ ಕರೆ ಮಾಡಿದಾಗ ಮೊದಲ ಮಾತೇ ಅದಾಗಿತ್ತು.                         ಶುಭಾ ಹೊಟ್ಟೆ ಹಿಡಿದು ನಕ್ಕಳು.“ಅಯ್ಯೋ, ನೀನು ಹೀರೋನನ್ನೇ ಕಲ್ಪಿಸಿಕೊಂಡಿದ್ದೆಯಾ ಏನು!”ಸಹನಾ ಕೂಡ ನಕ್ಕಳು.ಆದರೆ ಆ ನಗುವಿನೊಳಗೆ ಸ್ವಲ್ಪ ನಿರಾಶೆಯೂ ಇತ್ತು.ಅವಳು ಕಾಯುತ್ತಿದ್ದದ್ದು ಹಳೆಯ ನೆನಪುಗಳ ಮಾತುಗಳನ್ನು. ಆದರೆ ಕಿಶನ್‌ಗೆ ಆಸಕ್ತಿ ಇದ್ದದ್ದು ಕೇವಲ ಮೊಸಳೆಯ ಮೇಲೆ. ಅಯ್ಯೋ ..ಅದರ ಮೇಲೆ ಸಂಶೋಧನೆ ಮಾಡಲೆಂದು ಅಷ್ಟು ದೂರದಿಂದ ಬಂದನೇ?? ಮುಂದಿನ ಎರಡು ದಿನ ಅವನು ತಾವರೆ ಕೆರೆಯ ದಂಡೆಯಲ್ಲೇ ಕಳೆದ. ಬೆಳಿಗ್ಗೆ. ಮಧ್ಯಾಹ್ನ. ಸಂಜೆ. ಕೆರೆಯ ಸುತ್ತ ತಿರುಗುತ್ತಿದ್ದ. ನೀರಿನ ಅಂಚಿನಲ್ಲಿ ಕುಳಿತು ದೂರ ನೋಡುತ್ತಿದ್ದ. ಗ್ರಾಮಸ್ಥರನ್ನು ಪ್ರಶ್ನಿಸುತ್ತಿದ್ದ. ಆದರೆ ಮೊಸಳೆ ಮತ್ತೆ ಕಾಣಿಸಲಿಲ್ಲ. ಹಿಂತಿರುಗುವ ಮುನ್ನ ಒಂದು ಸಂಜೆ ಇಬ್ಬರೂ ಕೆರೆಯ ದಡದಲ್ಲಿ ನಿಂತಿದ್ದರು. ಸೂರ್ಯ ಅಸ್ತಮಿಸುತ್ತಿದ್ದ. ತಾವರೆ ಎಲೆಗಳ ನಡುವೆ ಗಾಳಿ ನಿಧಾನವಾಗಿ ಹರಿಯುತ್ತಿತ್ತು. ಆಗ ಕಿಶನ್   ಮನದಾಳದ ಮಾತುಗಳನ್ನು ಹಂಚಿಕೊಂಡ.. “ನನ್ನ ತಾಯಿ ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ತೀರಿಕೊಂಡರು.. -ಬ್ರೇನ್ ಕ್ಯಾನ್ಸರ್..  ಕೊನೆಯ ದಿನಗಳಲ್ಲಿ ಅವರು ನನ್ನನ್ನು ಗುರುತಿಸಲೂ ಆಗುತ್ತಿರಲಿಲ್ಲ.” ಅವನು ಸ್ವಲ್ಪ ಹೊತ್ತು ನೀರಿನತ್ತ ನೋಡಿದ. “ಕಳೆದ ಕೆಲವು ವರ್ಷಗಳಿಂದ ಒಂದು ಕನಸು ಪದೇಪದೇ ಬೀಳುತ್ತಿದೆ.” “ಯಾವ ಕನಸು?” ಎಂದು ಸಹನಾ ಕೇಳಿದಳು. “ನನ್ನ ತಾಯಿ  ಮೊಸಳೆಯಾಗಿ ಹುಟ್ಟಿದ್ದಾರೆ ಅಂತ!” ಸಹನಾಳಿಗೆ ಅವನು ತಮಾಷೆ ಮಾಡುತ್ತಿದ್ದಾನೇನೋ ಅನಿಸಿತು. ಆದರೆ ಅವನ ಮುಖದಲ್ಲಿ ನಗುವಿರಲಿಲ್ಲ. ಅವನು ನಿಜವಾಗಿಯೇ ಹೇಳುತ್ತಿದ್ದ. ವಿಜ್ಞಾನಿಯಾಗಿದ್ದೂ? ಸಂಶೋಧಕನಾಗಿದ್ದೂ? ಸಹನಾ ಗೊಂದಲಕ್ಕೊಳಗಾದಳು. “ಅದು ನಿಜವೋ ಸುಳ್ಳೋ ಗೊತ್ತಿಲ್ಲ, ನೀನು ಮೊಸಳೆಯ ವಿಡಿಯೋ ಶೇರ್ ಮಾಡಿದ ಮೇಲೆ ಇವಳೇ ನನ್ನ ಅಮ್ಮ ಎಂದು ಮತ್ತೆ ಕನಸಾಯಿತು!!” ಎಂದು ಕಿಶನ್ ನಿಧಾನವಾಗಿ ಹೇಳಿದ. ಒಬ್ಬ ವಿಜ್ಞಾನಿ.. ಒಬ್ಬ ಬುದ್ಧಿವಂತ ಮನುಷ್ಯ..  ತನ್ನ ತಾಯಿಯನ್ನು ಒಂದು ಮೊಸಳೆಯೊಳಗೆ ಹುಡುಕುತ್ತಿದ್ದಾನೆ!! ಮನುಷ್ಯನ ದುಃಖಕ್ಕೆ ತರ್ಕದ ಭಾಷೆ ಗೊತ್ತಿರದಿರಬಹುದು ಎಂದು ಮೊದಲ ಬಾರಿಗೆ ಅವಳಿಗೆ ಅನಿಸಿತು. ಹಿಂತಿರುಗುವಾಗ ಕಿಶನ್ ಒಂದು ವಿನಂತಿ ಮಾಡಿದ. “ಮೊಸಳೆ ಮತ್ತೆ ಕಂಡರೆ ನನಗೆ ಫೋಟೋ ಕಳುಹಿಸು.” “ಸರಿ.” “ಸಾಧ್ಯವಾದರೆ ಅದರ ಬಗ್ಗೆ ಗಮನವಿಡು.” “ಅಂದರೆ?” “ಆಹಾರ ಹಾಕು. ಯಾರಾದರೂ ತೊಂದರೆ ಕೊಡದಂತೆ ನೋಡಿಕೋ.” ಸಹನಾ ನಕ್ಕಳು. “ನಾನು ಮೊಸಳೆಯ ಕಾವಲುಗಾರ್ತಿಯಾ?” “ನಾನು ಖರ್ಚು ಕಳುಹಿಸುತ್ತೇನೆ.” ಆ ಮಾತು ಕೇಳಿದಾಗ ಸಹನಾ ಏನೂ ಹೇಳಲಿಲ್ಲ. ಮೊದಲ ತಿಂಗಳು ಕಿಶನ್ ಸ್ವಲ್ಪ ಹಣ ಕಳುಹಿಸಿದ. ಸಹನಾ ನಿಜವಾಗಿಯೇ ಕೆಲವು ಮೀನುಗಳನ್ನು ತಂದು ಕೆರೆಯ ಬಳಿ ಹಾಕಿದಳು. ಮುಂದಿನ ತಿಂಗಳು ಮತ್ತೆ ಹಣ ಬಂತು. ಅದಾದ ಮೇಲೆ ಇನ್ನೊಮ್ಮೆ. ಇದರ ಮಧ್ಯೆ ಕಿಶನ್ ಜರ್ಮನಿಗೆ ಹೊರಟ. ದೂರದ ದೇಶದಿಂದಲೂ ಅವನು ಮೊಸಳೆಯ ವಿಚಾರ ಕೇಳುತ್ತಿದ್ದ. “ಇವತ್ತು ಕಂಡಿತಾ?” “ನೀರಿನ ಮಟ್ಟ ಹೇಗಿದೆ?” “ಅದಕ್ಕೆ ಆಹಾರ ಹಾಕಿದ್ದೀಯಾ?” ಸಹನಾ ಉತ್ತರಿಸುತ್ತಿದ್ದಳು. ಆದರೆ ನಿಧಾನವಾಗಿ ಅವಳ ಉತ್ತರಗಳಲ್ಲಿ ಸತ್ಯ ಕಡಿಮೆಯಾಗತೊಡಗಿತು. ಒಂದು ದಿನ ಅವಳು ಬರೆದಳು: “ಮೊಸಳೆಗೆ ಮೀನು ತರಲು ಖರ್ಚು ಹೆಚ್ಚಾಗಿದೆ.” ಕಿಶನ್ ತಕ್ಷಣ ಹಣ ಕಳುಹಿಸಿದ. ಮತ್ತೊಂದು ದಿನ: “ಕೆರೆಯ ನೀರು ಕಲುಷಿತವಾಗಿದೆ. ಸ್ವಚ್ಛಗೊಳಿಸಬೇಕು.” ಮತ್ತೆ ಹಣ ಬಂತು. ಮೊದಲ ಬಾರಿ ಹಣ ಬಂದಾಗ ಅವಳಿಗೆ ಸಂಕೋಚವಾಯಿತು.ಎರಡನೇ ಬಾರಿ ಕಡಿಮೆ ಆಯಿತು.ಮೂರನೇ ಬಾರಿ ಸಂಪೂರ್ಣ ಮಾಯವಾಯಿತು. ಅವಳು ತನ್ನೊಳಗೆ ಒಂದು ಸಮರ್ಥನೆ ಕಂಡುಕೊಂಡಳು. “ನಾನು ಕದಿಯುತ್ತಿಲ್ಲ. ಅವನೇ ಕೊಡುತ್ತಿದ್ದಾನೆ.” ಆದರೆ ಕೆಲವು ಸುಳ್ಳುಗಳು ಮೊದಲಿಗೆ ಇತರರನ್ನು ಮೋಸಗೊಳಿಸುತ್ತವೆ.ನಂತರ ಅವುಗಳನ್ನು ಹೇಳಿದವರನ್ನೇ. ಅದನ್ನು ಸಹನಾ ಇನ್ನೂ ಅರಿತಿರಲಿಲ್ಲ. ಕೆರೆಯ ನೀರು ನಿಶ್ಚಲವಾಗಿತ್ತು. ಮೊಸಳೆ ಅಪರೂಪಕ್ಕೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಸಹನಾಳ ಬದುಕಿನಲ್ಲಿ ಹೊಸ ಅಲೆಗಳು ಎದ್ದಿದ್ದವು. ಅವು ಎಲ್ಲಿಗೆ ಕರೆದೊಯ್ಯುತ್ತವೆ ಎಂಬುದು ಅವಳಿಗೂ ಗೊತ್ತಿರಲಿಲ್ಲ.ವರ್ಷಗಳು ಕೆಲವೊಮ್ಮೆ ಮನುಷ್ಯರನ್ನು ದೊಡ್ಡವರನ್ನಾಗಿಸುವುದಿಲ್ಲ.ಅವರೊಳಗಿನ ಆಸೆಗಳನ್ನು ಮೊಸಳೆಯ ಬಾಯಿಗಿಂತ ದೊಡ್ಡದಾಗಿಸುತ್ತವೆ.. ಕಿಶನ್ ಕಳುಹಿಸುತ್ತಿದ್ದ ಹಣದಿಂದ ಸಹನಾ ಮೊದಲು ಒಂದು ಬಂಗಾರದ ಸರ ಕೊಂಡಳು. ನಂತರ ಇನ್ನೊಂದು. ದುಬಾರಿ ಸೀರೆಗಳು ಬಂದವು. ಗಂಡನ ಬಟ್ಟೆ ಅಂಗಡಿಯ ಒಂದು ಮೂಲೆಯಲ್ಲಿ ಮಹಿಳೆಯರ ಸಿದ್ಧ ಉಡುಪು ಮತ್ತು ಕೃತಕ ಆಭರಣಗಳ ಪುಟ್ಟ ಮಳಿಗೆಯನ್ನೂ ತೆರೆದಳು.“ತವರು ಮನೆಯಿಂದ ಸ್ವಲ್ಪ ಆಸ್ತಿ ಬಂದಿದೆ,” ಎಂದು ಗಂಡನಿಗೆ ಹೇಳಿದಳು.ಅವನು ಪ್ರಶ್ನಿಸಲಿಲ್ಲ.ನಂಬಿಕೆ ಕೆಲವೊಮ್ಮೆ ಪ್ರಶ್ನೆಗಳಿಗಿಂತ ದೊಡ್ಡದು. ಮೂರು ವರ್ಷಗಳು ಕಳೆದುಹೋದವು.ಒಂದು ಬೆಳಿಗ್ಗೆ ಕಿಶನ್‌ನ ಸಂದೇಶ ಬಂತು.“ನನ್ನ ಜರ್ಮನಿ ನಿಯೋಜನೆ ಮುಗಿದಿದೆ.  ಒಂದೆರಡು  ವಾರದಲ್ಲಿ  ಜೇನುಪುರಕ್ಕೆ ಬರುತ್ತಿದ್ದೇನೆ.”ಆ ಒಂದು ಸಾಲು ಓದಿದ ಕ್ಷಣದಿಂದ ಸಹನಾಳ ಮನಸ್ಸು ತನ್ನದೇ ಧ್ವನಿಯನ್ನು ಕಳೆದುಕೊಂಡಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ.ಬಂದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಎಚ್ಚರವಾಗುತ್ತಿತ್ತು.ಕನಸಿನಲ್ಲಿ ಕೆರೆಯ ನೀರು ಕಾಣಿಸುತ್ತಿತ್ತು.ಆ ನೀರಿನಲ್ಲಿ ಮೊಸಳೆಯಲ್ಲ…ತನ್ನ ಮುಖವೇ ತೇಲುತ್ತಿತ್ತು.ಕುತ್ತಿಗೆಯ ತುಂಬ ಬಂಗಾರದ ಸರಗಳಿದ್ದರೂ, ಕಣ್ಣುಗಳಲ್ಲಿ ಬೆಳಕು ಇರಲಿಲ್ಲ. ರಾತ್ರಿಯಿಡೀ ಕೆಟ್ಟ ಕನಸುಗಳು.. ಸರಗಳೇ ನೇಣಿನ ಕುಣಿಕೆಯಾದಂತೆ.. ತನ್ನ ಮೈಯಿಡೀ ಮೊಸಳೆಯ ಚರ್ಮದಂತಾಗಿ ಬಿಟ್ಟಂತೆ.. ಯಾವ ಸೀರೆ ಉಡಲು ಹೋದರೂ ಮೊಸಳೆಯ ವಾಸನೆ ಬಂದಂತೆ..

“ನೀ ಮಾಯೆಯೊಳಗೋ .. ನಿನ್ನೊಳು ಮಾಯೆಯೋ..” ಸಣ್ಣಕಥೆ ಸೌಮ್ಯ ಕೆ ವಿ ಅವರಿಂದ Read Post »

You cannot copy content of this page

Scroll to Top