ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ

ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.
ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು.

 ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.
ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು.

 ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು.

ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.
ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ  ಪ್ರಕಾಶನವನ್ನು ಪ್ರಾರಂಭಿಸಿದರು.
ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು.
 ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು.

ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.
ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….
ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು.

ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ.

“ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |
ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ

ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.
“ನಮ್ಮವರು ಕಲಿಸಿದರು ಸರಳ ಶೈಲಿಯನು”  ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು.
 ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು.

 ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ
೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು.

ಜಯದೇವಿ ತಾಯಿಯವರಿಗೆ ಕನ್ನಡವೆಂದರೆ  ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು.

ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ  ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.
ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು.

ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು.

ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.
ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು  ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು.

ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ  ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ

 ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ.

“ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |
ಜೇನು ಸವಿದಂತೆ ತುಂಬಿದ – ಪದಗಳ
ದನಿ ದನಿಗೂಡಿಸಿ ಹಾಡುವೆನು ||

ಎನ್ನುತ ಜಯದೇವಿ ತಾಯಿಯವರು
ಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.
(ಮುಂದುವರೆಯುವುದು)


ಸವಿತಾ ದೇಶಮುಖ

About The Author

Leave a Reply

You cannot copy content of this page

Scroll to Top