ಕಾವ್ಯ ಸಂಗಾತಿ
ಡಾ. ಶ್ರೀಶೈಲ ಮಾದಣ್ಣವರ
ಗಜಲ್


ಮುಗಿಲ ವೀಣೆ ಮೀಟಿದವರಾರು ನುಡಿಸುತಿದೆ ಮೇಘ ರಾಗ
ಹೃದಯ ಕೋಣೆಯ ತಟ್ಟಿದವರಾರು ಹರಿಸುತಿದೆ ಅನುರಾಗ
ಸುರಿವ ಮಳೆ ಮೋಡಗಳಲಿ ಮಿಂಚುತಿದೆ ಬೆಳಕಿನ ಕೋಲು
ಬಾನಿನ ಎದೆಗಿಳಿದವರಾರು ಬೆಳಗಿಸುತಿಹರು ಪ್ರೀತಿ ಚಿರಾಗ
ಹರಿದ ಹನಿ ಹನಿಗಳಿಗೂ ಹೂ ಅರಳಿಸುವ ಹಂಬಲಗಳು
ಮುತ್ತು ಮಣಿ ಬಿತ್ತಿದವರಾರು ಹರಡುತಿದೆ ಪ್ರೇಮ ಪರಾಗ
ಉಂಡ ನೆಲವು ಹಸಿಯಾಗಿದೆ ಪ್ರೀತಿ ಇಂಗಿ ಒಡಲಿನೊಳಗೆ
ಎದೆಹಾಲು ಉಣಿಸಿದವರಾರು ತೊದಲಿನಲೂ ಹೊಸರಾಗ
ಹಸಿರು ಉಸಿರು ಬೆಳೆಸಿಕೊಂಡು ನಗುತಿದೆ ನೋಡು ಪರಿಸರ
ಬಾಳು ತೆನೆಗಟ್ಟಿಸಿದವರಾರು ಬದುಕು ಈಗ ಬಲು ಸರಾಗ
ಡಾ. ಶ್ರೀಶೈಲ ಮಾದಣ್ಣವರ



