ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಶಾವಾ”ತ್ಮ ಪದಗಳು

ಮನದ ಮಾತು ಶಾಂತಿವಾಸು ಮನಸನ್ನೊಂದು ಮಾತು ಕೇಳು….ಹುಟ್ಟಿನಿಂದ ಕಲಿತು, ಸರಿತಪ್ಪುಗಳನ್ನರಿತು, ಲೋಕಾರೂಢಿಯನುಭವ ಪಡೆದರೇನು? ಕಾರ್ಯಸಿದ್ದಿಗೆ,ಮನಸನ್ನೊಂದು ಮಾತು ಕೇಳು…. ಮನಕ್ಕೊಪ್ಪುವ ಕೆಲಸ ಮಾಡು….ಯಾರೆಷ್ಟು ನಿಂದಿಸಲೇನು? ನಿನ್ನೆತ್ತರವನ್ಹೊಗಳಲೇನು? ತಟಸ್ಥ ಮನಕೆ ಶಕ್ತಿ ತುಂಬಿ ಆತ್ಮತೃಪ್ತಿಯಿಂದ,ಮನಕ್ಕೊಪ್ಪುವ ಕೆಲಸ ಮಾಡು…. ಮನವನೊಮ್ಮೆ ಇಣುಕಿ ನೋಡು….ಎಲ್ಲವೂ ನಿನದಾಗಿ ಕಂಡರೂ, ಬಂದುದು ಕೈತಪ್ಪಿ ಹೋಗಲು ನೆಪವೊಂದಿದೆಯೆಂಬ ಸತ್ಯವರಿತ,ಮನವನೊಮ್ಮೆ ಇಣುಕಿ ನೋಡು…. ಮನಸಿಗೊಂದು ಮಾತು ಹೇಳು…ಜಗದೆಲ್ಲವೂ ನೀನಲ್ಲ, ಜಗದಲ್ಲಿಹುದೆಲ್ಲವೂ ನಿನದಲ್ಲ. ಇರುವರರಿತು, ಬಾಳಲದುವೇ ಬದುಕೆಂದು,ಮನಸಿಗೊಂದು ಮಾತು ಹೇಳು…. *****************************

“ಶಾವಾ”ತ್ಮ ಪದಗಳು Read Post »

ಕಥಾಗುಚ್ಛ

ಚಿಕ್ಕಿಯ ಫೋಟೋ

ಕಥೆ ಚಿಕ್ಕಿಯ ಫೋಟೋ ಮಧುರಾ ಕರ್ಣಮ್ “ಚಿಕ್ಕಿ ಇಸ್ಕೂಲಿಗೆ ಬತ್ತೀಯೇನೆ? ಟೇಮಾಗ್ತಾ ಐತೆ” ಎಂದು ಕಮಲಿ ಕೂಗು ಹಾಕಿದಾಗ ಚಿಕ್ಕಿ “ಒಸಿ ನಿಂತ್ಕೊಳ್ಳೆ, ಬಂದೆ” ಎನ್ನುತ್ತ ತಟ್ಟೆಯಲ್ಲಿದ್ದ ತಂಗಳನ್ನ ಮುಗಿಸಿ ಕೈ ತೊಳೆದಳು. ಅಲ್ಲಲ್ಲಿ ಹರಿದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ “ನಾನ್ ಇಸ್ಕೂಲಿಗೆ ಹೋಗ್ಬರ್ತೀನಿ ಕಣವ್ವೋ” ಎಂದು ಕೂಗು ಹಾಕಿದಳು. “ಚಿಕ್ಕಿ, ಹಿಂದೆ ಒಂದ್ನಾಲ್ಕು ಪಾತ್ರೆ ಅವೆ, ತೊಳದ್ಹೋಗೆ” ಎಂಬ ಕೂಗು ಕೇಳಿಸದಂತೆ ಕಮಲಿಯ ಕೈಹಿಡಿದು ಓಡಿದಳು. “ಈ ಅವ್ವ ಹೋಗಾಗಂಟ ಕೆಲ್ಸ ಮಾಡಿದ್ರೂನು ಮತ್ತೆ `ಇದ್ ಮಾಡ್, ಅದ್ ಮಾಡ್, ಅಂತೈತೆ” ಎಂದು ದೂರು ಹೇಳುತ್ತ ನಡೆದಳು. ಅಷ್ಟರಲ್ಲಿ ಕಮಲಿ ಅವಳ ಕಿವಿ ಗಮನಿಸುತ್ತ “ಐ, ಕಿವಿಯೋಲೆ ಹೊಸ್ದೇನೆ? ಎಷ್ಟ ಚೆಂದಾಗೈತೆ” ಎನ್ನುತ್ತ ಮುಟ್ಟಿ ನೋಡಿದಳು. ಚಿಕ್ಕಿ ಇನ್ನೂ ಉತ್ಸಾಹಿತಳಾಗಿ “ಹ್ಞೂಂ ಕಣೇ. ಅಪ್ಪ ಜಾತ್ರೇಲಿಂದ ತಂದಿತ್ತು. ಅವ್ವಂಗ್ ಕೊಡ್ತು. ಅವ್ವ `ಇಂಥಾದ್ ತೊಟ್ಕೊಳಾಕ್ ನಾಯೇನ್ ಸಣ್ಣ ಮಗೀನಾ?’ ಅಂತ ಬೈತು. ಅದ್ಕೆ ಅಪ್ಪ ನನಕ್ಕೊಡ್ತು. ತಕ್ಷಣ ತೊಟ್ಕೊಂಬಿಟ್ಟೆ. ಈಗ ಶಾಲೇಗ್ ಬರೋವಾಗ ಅವ್ವ ನೋಡಿದ್ರೆ `ಬಿಚ್ಚಿಡು’ ಅಂತ ಬೈದು ಗಲಾಟೆ ಮಾಡ್ತಿತ್ತು” ಎಂದು ಹೇಳುತ್ತಾ ನಿಂತಳು. ಕಂಗಳಲ್ಲಿ ಸಂತಸದ ಮಹಾಪೂರ. ಕಮಲಿ ಕೂಡ ಅಷ್ಟೇ ಆನಂದದಿಂದ ತಿರುಗಿಸಿ ನೋಡಿ “ನಕ್‌ಸತ್ರ ಇದ್ದಂಗವೆ ಬಿಡು. ಭೋ ಸಂದಾಕವೆ” ಎಂದು ಪ್ರಶಂಸಿಸುತ್ತಾ ಮುನ್ನಡೆದಳು.  ಅವರು ಸಾಗಬೇಕಿದ್ದ ದಾರಿ ಇನ್ನೂ ದೂರವಿತ್ತು. ಸುಮಾರು ಎರಡು, ಎರಡೂವರೆ ಕಿ.ಮೀ. ಮಧ್ಯೆ ಹೊನ್ನೆ ದಿಬ್ಬ ದಾಟಿದರೆ ದೊಡ್ಡ ಬಯಲು. ಅದರಾಚೆ ಊರು ಆರಂಭವಾಗುತ್ತಿತ್ತು. ಅಲ್ಲೇ ಸರಕಾರಿ ಶಾಲೆ. ಊರಿನಿಂದ ಇವರ ಕೇರಿ ಬಲು ದೂರ. ಚಿಕ್ಕಿ, ಕಮಲಿ ಇಬ್ಬರೂ ಕೇರಿಯ ಹೂಗಳೇ. ಚಿಕ್ಕಿಯ ಅಪ್ಪ ಗಾರೆ ಕೆಲಸಕ್ಕೆ ಹೋದರೆ ಅವ್ವ ಮನೆ ಕೆಲಸಕ್ಕೆ ಹೋಗುತ್ತಾಳೆ. ಅವಳಿಗೊಬ್ಬ ತಮ್ಮ ಬೇರೆ. ಅವನಿಗೆ ಹುಶಾರಿಲ್ಲದಿದ್ದರೆ ಚಿಕ್ಕಿಯ ಶಾಲೆ ಗೋತಾ. ಈಗ ಅವನನ್ನು `ಲತಾ ಮೇಡಂ’ ಬಳಿ ಬಿಡುತ್ತಿದ್ದಾರೆ. ಅವರು ಆಟವಾಡಿಸುವುದಲ್ಲದೆ “ಅ, ಆ, ಇ, ಈ, ಎ, ಬಿ, ಸಿ, ಡಿ ” ಹೇಳಿಕೊಡುತ್ತಾರೆ. “ಜಾನಿ ,ಜಾನಿ, ಎಸ್ ಪಪ್ಪಾ” ಎಂದು ಅವನ ಬಾಯಲ್ಲಿ ಕೇಳಿದಾಗ ಚಿಕ್ಕಿಯ ಅವ್ವನಿಗೆ ಆನಂದವೋ ಆನಂದ. ಅವನನ್ನು “ಇಂಗ್ಲೀಸ್ ಸಾಲೆಗೆ ಸೇರ‍್ಸಾಣ” ಅಂತಿದಾಳೆ. ಚಿಕ್ಕಿಗೆ ಬೇಜಾರು. ಬಿಸಿಯೂಟ ಕೊಟ್ಟು, ಪುಸ್ತಕ, ಬಟ್ಟೆ ಕೊಟ್ಟರೂ ಚಿಕ್ಕಿ ಶಾಲೆಗೆ ಹೋಗೋದು ಅವಳಿಗಿಷ್ಟವಿಲ್ಲ. ಮನೇಲಿದ್ದರೆ ಕೊಂಚ ಕೆಲಸ ಕಾರ‍್ಯಕ್ಕಾಗುತ್ತೆ ಅಂತ ಧೋರಣೆ. ಚಿಕ್ಕಿಗೆ ಕಲೀಲೇಬೇಕೂಂತ ಆಸೆ. ಎಲ್ಲರ ಥರಾ ಇಂಗ್ಲೀಸಿನಲ್ಲಿ ಪಟ ಪಟ ಅರಳು ಹುರಿದಂತೆ ಮಾತನಾಡಬೇಕು. ದೊಡ್ಡ ನೌಕರಿ ಮಾಡಬೇಕು………ಏನೆಲ್ಲ.ಮತ್ತೆಲ್ಲ. ಅವಳ ಕನಸುಗಳೆಲ್ಲ ಮನೆಯಲ್ಲಿ ಮುಚ್ಚಿ ಕಮಲಿಯ ಮುಂದೆ ಬಿಚ್ಚಿಕೊಳ್ಳುತ್ತವೆ. ಕಮಲಿಯದೂ ಸುಮಾರು ಅದೇ ಸ್ಥಿತಿ. ಚಿಕ್ಕಿಯ ಬಣ್ಣ ಕಪ್ಪೋ ಕಪ್ಪು. ಎಣ್ಣೆ ಕಾಣದ ಕೂದಲು, ಚಪ್ಪಟೆ ಮೂಗು, ಬತ್ತಿದ ಕೆನ್ನೆಗಳು, ಅವಳಿಗೆ ಹೋಲಿಸಿದರೆ ಕಮಲಿಯೇ ಪರವಾಗಿಲ್ಲ. ಲಕ್ಷಣವಂತೆ. ಆದರೂ ಚಿಕ್ಕಿಗೆ ಸೌಂದರ‍್ಯ ವ್ಯಾಮೋಹ ಜಾಸ್ತಿ. ಒಡೆದ ಕನ್ನಡಿಯ ಮುಂದೆ ನಿಂತು ಮುಖ ನೋಡ್ಕೊಂಡಿದ್ದೇ ಬಂತು. ಪೌಡರ್ ಖಾಲಿಯಾದಾಗ ಮನೆಯಲ್ಲಿದ್ದ ಯಾವುದೋ ಹಿಟ್ಟನ್ನು ಬಳಿದುಕೊಳ್ಳುವ ಮೋಹ. “ಅಕ್ಕಿ ಹಿಟ್ಟು ಮನೇಲಿ ಉಳ್ಸಾಕಿಲ್ಲ ಈ ಕತ್ತೆ” ಎಂದು ಉಗಿಸಿಕೊಂಡರೂ ಬೇಜಾರಿಲ್ಲ. ಇತ್ತೀಚೆಗೆ ಶಾಲೆಯಲ್ಲಿ ಸುಗುಣ, ವಿಮಲ, ಎಲ್ಲ ಮೇಡಮ್‌ಗಳಂತೆ ಪೌಡರ್‌ಗಿಂತ ಮೊದಲು ಅದೇನೋ ಕ್ರೀಮು ತಿಕ್ಕುತ್ತಾರೆಂದು ಗೊತ್ತಾಗಿತ್ತು. ಅದನ್ನೊಂದು ಹೊಂದಿಸಲಾಗಿರಲಿಲ್ಲ. ಅವಳ ನಿಜವಾದ ಹೆಸರು ಚಿಕ್ಕೀರವ್ವ. ಅದು ಅವಳಜ್ಜಿಯ ಹೆಸರಂತೆ. ಅಜ್ಜಿ ಗತಿಸಿದ ವರ್ಷವೇ ಇವಳು ಹುಟ್ಟಿದ್ದಂತೆ. ಅದಕ್ಕೇ ಅವಳಪ್ಪನಿಗೆ ಅವಳನ್ನು ಕಂಡರೆ ತುಂಬಾ ಪ್ರೀತಿ. `ನಮ್ಮವ್ವಾನೇ ಮತ್ತೆ ಹುಟ್ಟಿ ಬಂದವ್ಳೆ’ ಎಂದು ತಮ್ಮವ್ವನ ಹೆಸರನ್ನೇ ಇಟ್ಟಾಗ ಚಿಕ್ಕಿಯ ಅವ್ವನಿಗೆ ಇರಿಸು-ಮುರಿಸು. `ತಲೆ ಮೇಲೆ ಕೂರಿಸ್ಕೋ ನಿಮ್ಮವ್ವನ್ನ’ ಎಂದು ಕಾಲೆಳೆಯುವುದೂ ಇತ್ತು. ಚಿಕ್ಕಿ ಶಾಲೆಗೆ ಹೋಗುವುದು ಅಪ್ಪನ ಒತ್ತಾಸೆಯಿಂದಲೇ. ಇಲ್ಲದಿದ್ರೆ ಅವಳವ್ವ ಅವಳನ್ನು ಮನೆ ಕೆಲಸಕ್ಕೆ ಕಳಿಸಿ ತಣ್ಣಗಾಗ್ತಿದ್ಲು. ಕಮಲಿಯದೂ ಹೆಚ್ಚು ಕಡಿಮೆ ಇದೇ ಕಥೆಯೇ. ಆದರೆ ಅವಳಿಗೆ ತಮ್ಮನ ಬದಲಾಗಿ ಅಕ್ಕ ಇದ್ದಳು. ಚಿಕ್ಕಿಗೆ ಫೋಟೋದ ಹುಚ್ಚು. ಜಾತ್ರೆಯಲ್ಲಿ ಅವರಪ್ಪ ತೆಗೆಸಿದ್ದ ಹಳೆಯ ಫೋಟೋ ಬಿಟ್ಟರೆ ಫೋಟೋಗಳೇ ಇರಲಿಲ್ಲ. ಅಪ್ಪನಿಗೆ ದುಂಬಾಲು ಬಿದ್ದರೂ “ಮುಂದಿನ ಜಾತ್ರೇಲಿ ತೆಗೆಸಾಣಂತೆ ಸುಮ್ಕಿರು” ಎಂದು ಬಿಟ್ಟಿದ್ದ. ಮಗುವಾಗಿದ್ದಾಗಿನ ಒಂದೇ ಒಂದು ಫೋಟೋ ಮಸುಕಾಗಿ ಹೀನಾಯ ಸ್ಥಿತಿಗೆ ತಲುಪಿತು. ಆದರೂ ಅದನ್ನು ದೇವರ ಪುಸ್ತಕದ ಮಧ್ಯೆ ಇಟ್ಟು ಜೋಪಾನ ಮಾಡಿದ್ದಳು. ಮದುವೇಲಿ ಅಷ್ಟೊಂದು ಫೋಟೋ ತಗೀತಾರೇಂದ್ರೆ ಅದಕ್ಕೋಸ್ಕರ ಮದುವೆಯಾಗಲೂ ಸಿದ್ಧವಿದ್ದಳು ಚಿಕ್ಕಿ. ಹನ್ನೆರಡು-ಹದಿಮೂರರ ವಯಸ್ಸಾದರೂ ಇನ್ನೂ ಪೀಚು ಪೀಚಾಗಿ ಎಳೇ ಮಕ್ಕಳಂತಿದ್ದಳು. ಇಬ್ಬರೂ ಕಿವಿಯೋಲೆ, ಮೇಷ್ಟ್ರುಗಳ ಬಗ್ಗೆ ಮಾತನಾಡುತ್ತಲೇ ಹೊನ್ನೆ ದಿಬ್ಬದ ಹತ್ತಿರ ಬಂದಿದ್ದರು. ದಿಬ್ಬ ಬಳಸಿ ಮಕ್ಕಳು ಬಯಲಿಗೆ ಬಂದಾಗ ನಿತ್ಯ ಬಣಗುಡುತ್ತಿದ್ದ ಖಾಲೀ ಬಯಲಿನಲ್ಲೊಂದು ಟೆಂಟು. ಒಂದಷ್ಟು ಜನ ನೆರೆದಿದ್ದಾರೆ. ಪ್ಯಾಟೆಯವರಂತಿದ್ದಾರೆ. ಒಬ್ಬ ಮೇಕಪ್ ಮ್ಯಾನ್ ಹುಡುಗಿಯ ಮುಖಕ್ಕೆ ಬಣ್ಣ ಬಳಿಯುತ್ತಿದ್ದಾನೆ. ಚಿಕ್ಕಿ ಕಮಲಿಯ ಕೈ ಅದುಮಿ ಖುಷಿಯಿಂದ “ಐ ಕಮಲಿ, ಅಲ್ನೋಡೇ ಸೂಟಿಂಗ್ ಐತೇನೋ, ಓಗಾಣ, ನೋಡಾಣ” ಎಂದು ಕುಪ್ಪಳಿಸಿದಳು. ಕಮಲಿಗೂ ಉತ್ಸಾಹ. “ಏನೋ ನಡೀತಿರ‍್ಬೋದು ಕಣೆ. ಆದ್ರೆ ಶಾಲೆಗ್ ಲೇಟಾದ್ರೆ ದಾನಪ್ಪ ಮೇಷ್ಟ್ರು ಬೈಯಾಕಿಲ್ವಾ? ಬಿಸಿಯೂಟ ತಪ್ಪೋಗ್ ಬಿಟ್ರೆ?” ಎನ್ನುತ್ತಾ ನಿಂತಳು. “ಅಯ್ಯ, ದಾನಪ್ಪ ಮೇಷ್ಟಿçಗ್ ತಾನೆ, `ಅವ್ವಂಗ್ ಹುಸಾರಿಲ್ಲ. ಕೆಲಸದ ಮನೆಗ್ಹೋಗಿ ಬಂದ್ವಿ’ ಅಂತ ಕಣ್ಣೀರಾಕ್ಕೊಂಡ್ ಯೋಳಿದ್ರೆ ಸುಮ್ಗಾಗ್ತಾರೆ ಬಾ” ಎಂದು ಕೈಹಿಡಿದು ಎಳೆದುಕೊಂಡೇ ಹೋದಳು. ದೊಡ್ಡ ಟೆಂಟಿನ ಹೊರಭಾಗದಲ್ಲೇ ಒಂದಿಬ್ಬರು ವಿವಿಧ ಬಗೆಯ ಕ್ಯಾಮೆರಾಗಳನ್ನಿಟ್ಟುಕೊಂಡು ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ದೊಡ್ಡ ಕಟೌಟ್. ಅದರ ಮೇಲೆ ಭೂಮಿ ಬಿರಿದು ಛಿದ್ರವಾಗುತ್ತಿರುವ ದೃಶ್ಯದ ಚಿತ್ರ. ಕೆಳಗೆ `ಪರಮಾಣು ಬೇಡ. ಪರಿಸರ ಉಳಿಸಿ’ ಎಂಬ ಘೋಷಣೆ. ಇನ್ನಿತರ ಏನೇನೋ ಫಲಕಗಳು ಸಿದ್ಧವಾಗುತ್ತಿದ್ದವು. ಅಲ್ಲೇನೋ ಪರಮಾಣು ರಿಯಾಕ್ಟರ್ ಬರುವ ಸುದ್ದಿಯಿತ್ತು. ಆದರೂ ಹಳ್ಳಿಗರಿಗೆ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಊರವರಿಗಂತೂ ಇವರು ಬಂದ ವಿಚಾರವೇ ಗೊತ್ತಿಲ್ಲ. ಇಲ್ಲವಾದಲ್ಲಿ ಆಗಲೇ ಅರ್ಧ ಊರು ಅಲ್ಲಿ ನೆರೆದಿರುತ್ತಿತ್ತು. “ಇದು ಸಾಲಲ್ಲ ವಿನೀತ್, ಇನ್ನೂ ಇಫೆಕ್ಟಿವ್ ಆಗರ‍್ಬೇಕು. ನೋಡಿದಾಕ್ಷಣ ಹೃದಯಕ್ಕೆ ತಟ್ಟುವಂತಿರಬೇಕು. ಕಂಗಳಿಂದ ನೀರು ಒಸರಬೇಕು. ಅಂತದ್ದೊಂದು ಆ್ಯಡ್ ಮಾಡಬೇಕು. ಅಂತಹ ಫೋಟೋ ಬೇಕು. ಈ ಭೂಮಿಯ ಚಿತ್ರಗಳೆಲ್ಲ ಹಳೆಯವಾದ್ವು. ಜನರಿಗೆ ಇವುಗಳಲ್ಲೇನೂ ಸೆಂಟಿಮೆಂಟ್ಸ ಉಳಿದಿಲ್ಲ” ಎಂದು ಗುಂಗುರು ಕೂದಲು ಬಾಚಿಕೊಳ್ಳುತ್ತಿದ್ದ ಹುಡುಗಿ ಸ್ಯಾಂಡ್ರಾ ಹೇಳಿದಾಗ ಕ್ಯಾಮೆರಾ ಹಿಡಿದ ಇಬ್ಬರ ಜೊತೆಗೆ ಇನ್ನಿಬ್ಬರು `ಹ್ಞೂಂ’ ಗುಟ್ಟಿದರು. ಗಡ್ಡದವನೊಬ್ಬ “ಏನಾದ್ರೂ ಡಿಫರೆಂಟ್ ಮಾಡ್ಬೇಕು. ಟಚಿಂಗ್, ಯು ನೋ ಟಚಿಂಗ್” ಎನ್ನುತ್ತ ಗಡ್ಡ ಕೆರೆದ. ಅಷ್ಟರಲ್ಲಿ ಇನ್ನೊಬ್ಬನ ಕ್ಯಾಮೆರಾ ಕಣ್ಣಿಗೆ ಹತ್ತಿರ ಬರುತ್ತಿದ್ದ ಹುಡುಗಿಯರು ಕಂಡರು. “ಏ, ಇಲ್ಲಿಗೇಕೆ ಬಂದ್ರಿ? ಹ್ಞಾಂ! ಏನ್ಕೆಲಸ ಇಲ್ಲಿ? ನಿಮಗೆ. ಹೋಗಿ, ಹೋಗಿ” ಎಂದು ಗದರಿಸಿದ ಕೈಯಲ್ಲಿ ಕೂಲಿಂಗ್ ಗ್ಲಾಸ್ ಹಿಡಿದ ವಿನೀತ್. ಇಬ್ಬರೂ ಹುಡುಗಿಯರು ಗಕ್ಕೆಂದು ನಿಂತರು. ಕಮಲಿ ಹೊರಡೋಣವೆಂದು ಕೈ ಹಿಡಿದು ಹಿಂದಕ್ಕೆ ಎಳೆದರೆ ಚಿಕ್ಕಿ ಅವಳ ಕೈ ಹಿಡಿದುಕೊಂಡೇ ಭದ್ರವಾಗಿ ನಿಂತಳು. “ಏನ್ಬೇಕು?” ಎಂದ ಇನ್ನೊಬ್ಬ. ಚಿಕ್ಕಿ ಗಟ್ಟಿ ಧರ‍್ಯ ಮಾಡಿ “ಫೋಟೋ ತೆಗೆಸ್ಕೋಬೇಕು” ಎಂದಳು ಕ್ಷೀಣವಾಗಿ. “ಫೋಟೋನಾ, ನಿಮ್ದಾ?” ಎನ್ನುತ್ತ ಎಲ್ಲರೂ ಒಂದು ಸುತ್ತು ಗಹಗಹಿಸಿ ನಕ್ಕರು. ಚಿಕ್ಕಿ, ಕಮಲಿಯರ ಕಣ್ಣುಗಳಲ್ಲಾಗಲೇ ನೀರು ಒಸರಿತ್ತು. “ನಿಮ್ ಫೋಟೋ ತೆಗೆಯಕ್ಕೆ ನಾವು  ಇಲ್ಲೀಗೂ ಬಂದ್ವಿ ಅನ್ಕೊಂಡ್ರಾ? ಹೋಗಿ, ಹೋಗಿ, ಶಾಲೆಗ್ ಹೋಗಿ” ಎಂದು ಗದರಿದ. “ಹೇಯ್, ಸ್ಟಾಪ್. . . .ಲಿಸನ್. . . .ನಿಮಗೆ ಫೋಟೋ ತೆಗೀಬೇಕಾ? ಇಲ್ಲಿ ಬನ್ನಿ ತೆಗೆಯೋಣ” ಎಂದು ಕರೆದಳು ಸ್ಯಾಂಡ್ರಾ. ಕಮಲಿಗೇನೊ ಹೆದರಿಕೆ. `ಬ್ಯಾಡ’ ಎನ್ನುತ್ತ ಹಿಂಜರಿದಳು. ಚಿಕ್ಕಿ ಮಾತ್ರ ಆಸೆ ತುಂಬಿದ ಕಂಗಳಿAದ ಮುಂದೆ ಬಂದಳು. ವಿನೀತ್ “ನಿನಗೇನು ಕೆಲಸವಿಲ್ಲವಾ ಸ್ಯಾಂಡ್ರಾ? ನಾಳೆ ಇಲ್ಲೀದೆಲ್ಲ ಪೇರ‍್ನಲ್ಲಿ ಬರುತ್ತೆ. ಮಧ್ಯಾಹ್ನ ಉಳಿದ ಎನ್.ಜಿ.ಓ.ದವರೆಲ್ಲ ರ‍್ತಾರೆ. ಪ್ರೊಟೆಸ್ಟ್ ಮಾಡ್ಬೇಕು. ಈ ಹಳ್ಳಿಮುಕ್ಕರ ಫೋಟೋ ತೆಗೀತಾ ಕೂತ್ಕೊ” ಎಂದು ಕೋಪಗೊಂಡ. “ಪ್ಲೀಸ್, ಎಲ್ರೂ ಎರಡು ನಿಮಿಷ ಸುಮ್ಮನಿರಿ” ಎಂದ ಸ್ಯಾಂಡ್ರಾ ಚಿಕ್ಕಿಯನ್ನು ಹತ್ತಿರ ಕರೆದಳು. “ನಿನ್ನ ಫೋಟೋ ತೆಗೀತೀನಿ. ಚಾಕಲೇಟೂ ಕೊಡ್ತೀನಿ. ನಾನ್ಹೇಳಿದಂತೆ ಪೋಸ್ ಕೊಡ್ತೀಯಾ” ಎಂದು ಕೇಳಿದಳು. “ಅಂಗಂದ್ರೆ?” ಚಿಕ್ಕಿ ಅಮಾಯಕಳಂತೆ ಪ್ರಶ್ನಿಸಿದಾಗ “ಊಂ, ನಗ್ತೀಯಾ, ಕೂಡ್ತೀಯಾ, ನಿಲ್ತೀಯಾ………?” ಎನ್ನುತ್ತ ಸ್ಯಾಂಡ್ರಾ ಕಷ್ಟಪಟ್ಟು ಉತ್ತರಿಸಿದಳು. “ಓ… ” ಎಂದ ಚಿಕ್ಕಿ ಮತ್ತೆ ಮೇಕಪ್‌ಮ್ಯಾನ್‌ನತ್ತ ಕೈತೋರಿದಳು. “ಓ ಹೊ ಹೋ……” ಎಂದು ಬಾಯಿಗೆ ಕೈ ಅಡ್ಡ ಇಟ್ಟು ನಕ್ಕ ಸ್ಯಾಂಡ್ರಾ “ಗೋಪಾಲ್, ಇವಳಿಗೆ ಮೇಕಪ್ ಮಾಡು” ಎಂದಳು. ಮುಂದೆ ಇಂಗ್ಲೀಷಿನಲ್ಲಿ ಏನ್ಹೇಳಿದಳೋ ಚಿಕ್ಕಿಗೆ ತಿಳಿಯಲಿಲ್ಲ. ಸ್ಕೂಲ್ ಬ್ಯಾಗ್ ಎಸೆದು ಕಮಲಿಯನ್ನೂ ಬಿಟ್ಟು ಓಡಿ ಹೋದಳು. ಬಂದ ದಾರಿಗೆ ಸುಂಕವಿಲ್ಲದಂತೆ ತಿರುಗಿದ ಕಮಲಿಯನ್ನು ಸ್ಯಾಂಡ್ರಾ ಹತ್ತಿರ ಕರೆಯುತ್ತ “ಇಲ್ಬಾ, ನೀನು ಗುಡ್ ಗರ್ಲ್ ಅಲ್ಲವಾ? ಚಾಕಲೇಟ್ ಕೊಡ್ತೀನಿ. ಅಲ್ಲಿರೋ ಮುಳ್ಳು, ಕಂಟಿಗಳನ್ನು ಆಯ್ದು ತರ‍್ತೀಯಾ?” ಎಂದು ಕೇಳಿದಳು. “ಕಮಲಿ, ತಕಂಬಾರೆ, ಫೋಟೋ ತೆಗೆಸ್ಗೊಂಡು ಇಬ್ರೂ ಬಿರ‍್ನೆ ಶಾಲೆಗೆ ಹೊಂಟು ಬಿಡಾಣ” ಎಂದು ಚಿಕ್ಕಿ ಕೂಗಿದಾಗ ಕಮಲಿಗೆ ಬೇರೆ ದಾರಿಯಿಲ್ಲ. ಚೀಲವಿಟ್ಟು ಆರಿಸಲು ನಡೆದಳು. ಸುತ್ತೆಲ್ಲ ಜನರಿಗೂ ಕುತೂಹಲ. ಸುಮ್ಮನೆ ನೋಡುತ್ತಿದ್ದರು. ಗೋಪಾಲನ ಮೇಕಪ್‌ನಲ್ಲಿ ಚಿಕ್ಕಿಯ ಕೆನ್ನೆ ಇನ್ನೂ ಬತ್ತಿತು. ಕಣ್ಣು ಆಳಕ್ಕಿಳಿದಿದ್ದವು. ಜಡೆ ಬಿಚ್ಚಲು ಹೇಳಿದ ಸ್ಯಾಂಡ್ರಾ ಕ್ಯಾಮೆರಾದಲ್ಲಿ ಅವಳನ್ನು ನಿಲ್ಲಿಸಿ, ಕೂಡಿಸಿ ಎರಡು ಫೋಟೊ ತೆಗೆದಳು. ಚಿಕ್ಕಿಗೆ ಖುಷಿಯೋ ಖುಷಿ. ಇನ್ನೂ ಹಲ್ಕಿರಿದಳು. ಉಹ್ಞೂಂ, ಅವಳಿಗೆ ತೃಪ್ತಿಯಾಗಲಿಲ್ಲ. ಕಮಲಿ ತಂದ ಮುಳ್ಳು-ಪೊದೆಗಳನ್ನು ಹರಡಿ ಅದರ ಪಕ್ಕ ಕುಳಿತುಕೊಳ್ಳಲು ಹೇಳಿದಳು. ಮಲಗಿಕೊಳ್ಳಲು ಹೇಳಿದಳು. ಮಲಗಿದ ಚಿಕ್ಕಿಗೆ ಅಲ್ಲೇ ಮೇಕಪ್. ಮತ್ತೆ ಮತ್ತೆ ಕೂದಲು ಕೆದರುವುದೂ ಇದ್ದೇ ಇತ್ತು. ಆಗಲೂ ಸಮಾಧಾನವಾಗದ ಸ್ಯಾಂಡ್ರಾ ಚಿಕ್ಕಿಯ ಸಮವಸ್ತ್ರ ತೆಗೆದು ಒಳಗಿನ ಹರಿದ ಪೆಟಿಕೋಟ್ ಮೇಲೆ ಮಲಗಿಸಿ ಭಂಗಿ ಸರಿಪಡಿಸಿದಳು. ಪಕ್ಕದಲ್ಲೇ ಒಂದು ಫಲಕವನ್ನಿಟ್ಟಳು. ಚಿಕ್ಕಿಗೆ ಇಷ್ಟು ಜನರ ಮುಂದೆ ಮಲಗುವುದು, ಅದೂ ಹರಿದ ಪೆಟಿಕೋಟ್ ಮೇಲೆ ಅವಮಾನವೆನಿಸಿದರೂ ವಿಧಿಯಿರಲಿಲ್ಲ. ಒಪ್ಪಿಕೊಂಡಾಗಿತ್ತಲ್ಲ. “ಐ ಸೀ, ಗುಡ್” ಎಂಬ ಉದ್ಗಾರಗಳು ಕೇಳಿ ಬಂದವು. ಸಮವಸ್ತ್ರ ಧರಿಸಿದ ಚಿಕ್ಕಿಯ ಮೇಕಪ್ ಒರೆಸಿದ ಗೋಪಾಲ್. ಸ್ಯಾಂಡ್ರಾ ಇಬ್ಬರ ಕೈಗೂ ಒಂದೊಂದು ಚಾಕಲೇಟನ್ನಿಟ್ಟಳು. “ನನ್ನ ಫೋಟೊ ಯಾವಾಗ ಕೊಡಾದು?” ಎಂದು ಕೇಳಿದ ಚಿಕ್ಕಿಗೆ ಸ್ಯಾಂಡ್ರಾ ನಗುತ್ತ “ನಾಳೆ ಬಿಟ್ಟು ನಾಡಿದ್ದಲ್ಲಿ ಪೇಪರ‍್ನಲ್ಲಿ ಬರುತ್ತೆ. ನೋಡ್ಕೊ.” ಎಂದಳು. ಚಿಕ್ಕಿಗೆ ಖುಷಿಯೋ ಖುಷಿ. “ಯಾವ ಪಫರ‍್ನಲ್ಲಿ ಬತ್ತದೆ?” ಎಂದು ಕೇಳಿದವಳಿಗೆ ಸ್ಯಾಂಡ್ರಾ “ಇಂಗ್ಲೀಷ್ ಪೇಪರ್ `ಟೈಮ್ಸ್ ಆಫ್ ಇಂಡಿಯಾ’ ದಲ್ಲಿ ಬರುತ್ತೆ. ಇಲ್ಲಿ ನಡೆದ್ದೆಲ್ಲ ಯಾರಿಗೂ ಹೇಳ್ಬೇಡಿ. ಫೋಟೋ ಬಂದ ಮೇಲೆ ನೋಡಿ. ಈಗ ಶಾಲೆಗೆ ಓಡಿ” ಎಂದು ಕಳಿಸಿದಳು ಸ್ಯಾಂಡ್ರಾ. ಚಿಕ್ಕಿ ದೂರ ನಿಂತು ಕಾಯುತ್ತಿದ್ದ ಕಮಲಿಯತ್ತ ಓಡಿದಳು. “ಕಮಲಿ, ನಾ ಫೋಟೊ ತಗೀವಾಗ ನಗ್ತಿದ್ನ? ಚೆಂದಾಕ ಬಿದ್ದದಾ ನನ್ನ ಫೋಟೊ?” ಅತಿ ಉತ್ಸಾಹ ಅವಳಿಗೆ. ಕಮಲಿಗೆ ಅಷ್ಟೇನೂ ಆನಂದವಿಲ್ಲ.

ಚಿಕ್ಕಿಯ ಫೋಟೋ Read Post »

ಕಾವ್ಯಯಾನ

ಜಿಹ್ವೆ

ಕವಿತೆ ಜಿಹ್ವೆ ಅರುಣ ರಾವ್ ಈ ನಾಲಿಗೆಗೇನು?ಅಂದು ಕೊಂಡದ್ದು ನೋಡಿದ್ದುಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆತುಸು ತಡೆದರೇನು ನಷ್ಟ? ಎಂದೊಮ್ಮೆಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ ತಾಳ್ಮೆಯಿಂದಿದ್ದು ಕೊಂಚಯೋಚಿಸಬಾರದೇ ಕ್ಷಣಕಾಲ?ಮನಃಶಾಂತಿಯಾದರೂ ಇರುತಿತ್ತು ಆಗಕೇಳಿದ್ದಷ್ಟೇ ಅಲ್ಲ, ನೋಡಿದ್ದೂ ಸುಳ್ಳಾಗುವ ಕಾಲಇದುವೆ ಎಂದೊಂದರೆಗಳಿಗೆ ನೆನೆಯಬಾರದೆ? ಗಳಿಗೆಗೊಂದರಂತೆ ಮಾತಂತೆ ಕತೆಯಂತೆಅದರಲೊಂದಿಷ್ಟು ಹುರುಳು ಹೂರಣಮತ್ತೆ ಕೆಲವೇನೋ ಕಸ ಕಡ್ಡಿ ಕೊಚ್ಚೆ ಕೂಳೆಕೆಸರೆರೆಚಾಟ ಅರೆಚಾಟ ಅಬ್ಬರಕಲ್ಪನೆಯ ಕೂಸಿನ ಅರೆನಗ್ನ ಕುಣಿದಾಟ ಮುಂದೊಂದು ಹಿಂದೊಂದು ಮತ್ತೊಂದು ಮಗದೊಂದು ಆಗೊಂದು ಈಗೊಂದುನನಗೊಂದು ನಿನಗೊಂದು ಹೇಳುತ್ತ ಸಾಗುತ್ತಆಚಾರವಿಲ್ಲದ ನಾಲಿಗೆ ನಿನ್ನನೀಚ ಬುದ್ಧಿಗೆ ಹೇಸಿ ಕಳವಳಿಸಿ ಬೇಸತ್ತುಬಸವಳಿದು ತಲ್ಲಣಿಸಿ ಕುಸಿಯುತಿದೆ ಜಗ ಮುಖಕ್ಕೆ ಮಾಸ್ಕ್ ಧರಿಸಿದ್ದರೇನು?ಅದರ ಹಿಂದಿನ ನಾಲಿಗೆಗೇನು ಕಡಿವಾಣಸದಾ ಹೊರಳುತ್ತ ಹಾರುತ್ತ ಚೀರುತ್ತನಶ್ವರದ ಜೀವನದಿ ನುಡಿದ ನುಡಿಶಾಶ್ವತವೆಂಬ ತತ್ವವ ಮರೆಯುತ್ತಲಿದೆ ***********************************

ಜಿಹ್ವೆ Read Post »

ಆರೋಗ್ಯ, ಇತರೆ

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?

ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸಲು ನಾವು ಸೇವಿಸುವ ಆಹಾರವು ನಮ್ಮ ಹಸಿವನ್ನು ಹಿಂಗಿಸುವುದರ ಜೊತೆಗೆ ಅದು ಔಷಧದಂತೆ ಕಾರ್ಯನಿರ್ವಹಿಸುವಂತಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ಸೊಪ್ಪು,ತರಕಾರಿಗಳ ಪ್ರಯೋಜನಗಳು ನಾರಿನಾಂಶದಿಂದ ಸಮೃದ್ಧವಾಗಿವೆ ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿಂದ,  ಜೀರ್ಣಾಂಗವ್ಯೂಹ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನಂಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವಂತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ  ನಾರಿನಂಶವು  ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತೂಕ ಕಡಿಮೆ ಆಗಲೂ ಸಹಕಾರಿ ತೂಕನಷ್ಟವನ್ನು ಹೊಂದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊಂದಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ. ಮಧುಮೇಹ ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೂಡ ನೆರವಾಗುತ್ತವೆ. ತ್ವಚೆಯ ಆರೋಗ್ಯಕ್ಕಾಗಿ ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿಂದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊಂಡು ತಯಾರಿಸಿದ ಸಲಾಡ್ ಗಳ ಸೇವನೆಯಿಂದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒಂದು. ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯಂನಿಂದಲೂ ಸಂಪನ್ನವಾಗಿವೆ. ನಮಗೆಲ್ಲಾ ತಿಳಿದಿರುವಂತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಷಿಯಂ ಆತ್ಯಂತ ಅವಶ್ಯಕ ಮೂಲವಸ್ತುವಾಗಿದೆ. ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ಪೊರೆಗಳಂತಹ, ನೇತ್ರ ಸಂಬಂಧೀ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೀಲುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತವೆ ಆರ್ಥ್ರೈಟಿಸ್ನಂತಹಾ ಕೀಲುಗಳಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊಂದು ಪ್ರಯೋಜನವೇನೆಂದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು. ತರಕಾರಿಗಳು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊಂದು ಬಯೋ ಪ್ರತಿಬಂಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.  ತರಕಾರಿಗಳ ಒಂದು ಅತ್ಯುತ್ತಮವಾದ ಗುಣವಿಶೇಷವೇನೆಂದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊಂಡಿರಲಾರವು. ಹೀಗಾಗಿ,  ಸೊಪ್ಪು, ತರಕಾರಿಗಳ ಪ್ರಮಾಣದ ಕುರಿತಾಗಿ ಚಿಂತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? Read Post »

ಕಾವ್ಯಯಾನ

ನಸುಕಿನ ತುಂತುರು

ಕವಿತೆ ನಸುಕಿನ ತುಂತುರು ಸ್ಮಿತಾ ಶ್ಯಾಮ ತುಂತುರು ಹನಿಗಳ ಮುಂಜಾನೆಯ ಮಳೆಸರಿಗಮ ಪದನಿಸ ಹಾಡುತಿದೆಸಪ್ತ ಸ್ವರಗಳ ಸಂಗಮದಲಿ ತೇಲಿದೆಹಸಿರನುಟ್ಟು ಕಂಗೊಳಿಸುತಿಹ ವಸುಧೆ || ಪ|| ಹಕ್ಕಿಗಳಿಂಚರದಿ ಬೆರೆತಿದೆ ಮಳೆಗಾನಹೊಮ್ಮುತಲಿದೆ ಹೊಂಬೆಳಕಿನ ರವಿ ಕಿರಣಪರಿಮಳವನು ಸೂಸುತಲಿವೆ ಹೂಬನಪ್ರಕೃತಿಯ ಸೊಬಗದು ರೋಮಾಂಚನ. ||೧|| ಮುಂಜಾನೆಯ ಮಳೆಯ ಸಿಂಚನತನನ ತನನ ನವಿಲ ನರ್ತನಸಾಗರದ ದಡಕೆ ಅಲೆಯ ಚುಂಬನತಂಪು ಸೂಸುತ ಹಾಯ್ವ ಪವನ. ||೨|| ಸುಪ್ರಭಾತ ಹಾಡುತಲಿದೆ ಪ್ರಾತಃಕಾಲದಿ ವರ್ಷವುಗುಡಿಗೋಪುರಕದುವೆ ನಸುಕಿನ ಅಭಿಷೇಕವುಶುಭ್ರಗೊಂಡಿಹುದು ಮನೆ ಮನೆಯ ಅಂಗಳವುತನುಮನವನು ತುಂಬುತಲಿದೆ ನವೋಲ್ಲಾಸ ಚೇತನವು||೩|| *********************************

ನಸುಕಿನ ತುಂತುರು Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ.                         ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪             ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ.             ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ.                         ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ.                         ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು  ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. )                         ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ.                         ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ.  ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ.                         ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ-                         ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು.                         ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ.    ಅಡಿಟಿಪ್ಪಣಿಗಳು ೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧) ( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.) ೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪) ೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬) ೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ೵ ಕದಂಬಲಿಂಗದಲ್ಲಿಗೆ        ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮        ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ ************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ                 ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.                 ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.                 ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.                 ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.                 ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.                 ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.                 ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!                 ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….                 ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.                 ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.                 ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ. ********************************************

Read Post »

You cannot copy content of this page

Scroll to Top