ಅಂಕಣ ಬರಹ ಕಬ್ಬಿಗರ ಅಬ್ಬಿ ಮಗುವಿನ ಪರಿಮಳ ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ. ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ ಅಗಲಿಸಿ ಗಟ ಗಟ ನಗುತ್ತೆ. ಪುಟ್ಟ ಕೈಗಳನ್ನು ಚಪ್ಪಾಳೆ ಹೊಡೆಯುವಂತೆ ಅಲುಗಾಡಿಸುತ್ತೆ!. ಹೌದು!! ಮಗುವಿಗೆ ಅನೂಹ್ಯ ಪರಿಮಳವಿದೆ. ಆ ಪರಿಮಳ ಮುಗ್ಧ ಪರಿಮಳ. ಕಲಬೆರಕೆಯಾಗದ ಪರಿಮಳ. ಈ ಲೋಕದ್ದೇ ಅಲ್ಲವೋ ಎನ್ನುವ ಪ್ರೀತಿಯ ಪರಿಮಳ. ಮಗು ಬೆಳೆಯುತ್ತಾ ಹೋದಂತೆ, ಆ ಪರಿಮಳ ಮರೆಯಾಗಿ, ಕಲೆಯುತ್ತಾ, ಕಲಿಯುತ್ತಾ ಹೋದಂತೆ, ಸಮಾಜದ ‘ವಾಸನೆ’ ದೇಹಕ್ಕಂಟುತ್ತೆ. ಮಗುವಿನ ಪರಿಮಳವನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?. ಆರು ದಶಕಗಳ ಬದುಕಿನ ದಾರಿಯಲ್ಲಿ ಇಷ್ಟೊಂದು ಗಂಧಗಳು ಮೈ ಮನಸ್ಸಿಗೆ ಅಂಟಿಕೊಳ್ಳುವಾಗ ಮಗುವಾಗಿದ್ದಾಗಿನ ಪರಿಮಳ ಉಳಿಸಿಕೊಂಡು ಹಿಂತಿರುಗಿ ನೋಡಿದರೆ ಹೇಗಿರಬಹುದು!? ಬೆಂಗಳೂರಿನ – ” ಇಷ್ಟು ಕಾರು, ಬಸ್ಸು, ಮೆಟ್ರೋ ರೈಲುಗಳು ಓಡಾಡುವ ಜಾಗದಲ್ಲಿ, ಉಸಿರಿದ್ದರಷ್ಟೇ ಸಾಕು ಎಂದು ಜನರು ನಿಟ್ಟುಸಿರಿಡುವಲ್ಲಿ ದೊಡ್ಡದೊಂದು ತೆಂಗು ಗರಿ ತೇಲುತ್ತಾ ಮನೆಯೊಳಕ್ಕೆ ಬಂದು ಬಿದ್ದಿದ್ದನ್ನು ನಂಬುವುದು ಹೇಗೆ?!. ಮನುಷ್ಯರಿಗೆ ಮನುಷ್ಯನ ದನಿಯೇ ಕೇಳದ ಜಾಗದಲ್ಲಿ ಈ ವಲಸೆ ಗರಿಯ ಸದ್ದು ಅವಳಿಗೆ ಕೇಳಿದ್ದಾದರೂ ಹೇಗೆ?!” ಹೀಗೆ ಪೇಟೆಯಲ್ಲಿ ಮನೆಕಟ್ಟಿದ ವಯಸ್ಕ ಮನಸ್ಸೊಳಗೆ ಬಾಲ್ಯದ ನೆನಪಿನ ತೆಂಗಿನ ಮಡಲು ಹಾರಿ ಬರುತ್ತೆ. ಆಕೆ, ಆ ಮಡಲಿನ ಒಂದೊಂದೇ ಪುಟ್ಟ ಗರಿಗಳನ್ನು ಕೀಳುತ್ತಾಳೆ. ಮೊದಲು ಹೆಣೆಯುವುದೇ ಚಾಪೆ!. ಅದರಲ್ಲಿ ಕುಳಿತು ಗರಿಯ ವಾಚು, ಊದಲು ಪೀಪೀ ಗೆಳೆಯರನ್ನು ಕರೆದು ಅವರಿಗೆಲ್ಲ ‘ಕನ್ನಡಕ’. ” ಕಣ್ಣ ಕನಸುಗಳು ಗರಿಯ ತೋರಣ ಕಟ್ಟಿದವು. ಎಲ್ಲರೂ ಗಿರಗಿಟ್ಟಲೆಯಾಗಿ ಗರಗರ ತಿರುಗಿದರು. ಒಂದೊಂದೇ ಗರಿಗಕ್ಕಿಗಳ ಮಾಡಿ ಹಾರಲು ಬಿಟ್ಟರು.” ಆ ಹಕ್ಕಿಗಳು, ನೆರೆಮನೆಗಳ ಜಜ್ಜಕ್ಕೆ ಬಡಿದು, ಚರಂಡಿಯಲ್ಲಿ ಸಿಕ್ಕಿ ಉಸಿರುಗಟ್ಟಿ, ಗಾಳಿಯ ಚಕ್ರಕ್ಕೆ ಸಿಕ್ಕಿ, ಸಾಯುತ್ತವೆ. ಚೆಲ್ಲಾಪಿಲ್ಲಿಯಾದ ಹಕ್ಕಿಗಳ ಬದುಕನ್ನು ಕಂಡ ಗೆಳೆಯರು ಜಾಗ ಖಾಲಿ ಮಾಡುತ್ತಾರೆ. ಆದರೆ, ಆಕೆ ಉಳಿದ ಗರಿಗಳನ್ನು ಕಟ್ಟಿ ಪೊರಕೆ ಮಾಡಿ, ಕನಸಿನ ಹಿಡಿಕೆಯನ್ನು ಗರಿಯಲ್ಲೇ ಕಟ್ಟುತ್ತಾಳೆ!. ಅದಕ್ಕೇ ಆಕೆ ಮಗುವಾಗಿದ್ದಾಗಿನ ಪರಿಮಳ ಇನ್ನೂ ಇದೆ!. ಎಂ. ಆರ್. ಕಮಲಾ ಅವರ ಗದ್ಯಗಂಧೀ ಕವಿತೆಗಳು ಪುಸ್ತಕದ ಸಾಲುಗಳವು. ಇದೊಂದು ಆತ್ಮಕವಿತೆ! ಬಾಲ್ಯದ ನಿರ್ಮಲಾನಂದೋಬ್ರಹ್ಮನ ಅನುಭೂತಿಯನ್ನು ಹೊತ್ತು, ಜೀವಕೋಶಗಳು ಬಲಿತಂತೆ, ಸುತ್ತಲಿನ ಒಂದೊಂದೇ ವಾಸನೆಗಳನ್ನು ತುಂಬಿ ಲಯಿಸಿಕೊಂಡು, ಒಂದೊಂದೇ ಬಣ್ಣವನ್ನು ಕಲೆಸಿ ಲೇಪಿಸಿಕೊಂಡು, ತನ್ನ ಸುತ್ತಲೂ ಸ್ವರ ಮಂಡಲದ ಹಲವು ತರಂಗಗಳ ಸಂಕೀರ್ಣ ಪ್ರಸ್ತಾರವನ್ನು ಸಂಗೀತವಾಗಿಸಿಕೊಂಡು, ರುಚಿಗೆ ರುಚಿಯಾಗಿ ರುಚಿಕಟ್ಟಿ ಅಭಿರುಚಿ ಸೃಷ್ಟಿಸಿಕೊಂಡು ನಡೆದ ದಾರಿಯ ಇನ್ನೊಂದು ತುದಿಯಲ್ಲಿ ಕವಯಿತ್ರಿ ನಿಂತು, ಪ್ರತಿಫಲಿಸುತ್ತಾರೆ. ‘ಗದ್ಯಗಂಧೀ ಕವಿತೆಗಳು’, ಪುಸ್ತಕದಲ್ಲಿ, ಹಾಗೆ ನೋಡಿದರೆ ಒಂದೇ ಕವಿತೆಯಿದೆ, ಅಂತ ನನ್ನ ಅನಿಸಿಕೆ. ಒಂದೊಂದೇ ಪುಟವೂ ಒಂದು ಭಾವಕ್ಕೆ, ಇಂದ್ರಿಯಗ್ರಾಹ್ಯ ಅನುಭವಕ್ಕೆ, ನಗೆಯ ಚಿಗುರು ತುಟಿಗೆ, ನೋವಿನ ಕಣ್ಣೀರ ಬಿಂದುಗಳಿಗೆ ‘ಗಂಧ’ವಾಗುತ್ತೆ. ಮಹಾಭಾರತ ಆರಂಭವಾದದ್ದೇ ರಾಜ ಆಕರ್ಷಿತನಾದ ಆ ಗಂಧದಿಂದ. ಶಂತನು ಮಹಾರಾಜ ‘ಯೋಜನಗಂಧಿ’ ಯ ಪರಿಮಳಕ್ಕೆ ಸೋತ ಕ್ಷಣವದು. ‘ಗಂಧ’ ಕ್ಕೆ ಅಂತಹ ಅಪರಿಮಿತ ಶಕ್ತಿಯೂ ಇದೆ, ವ್ಯಾಪ್ತಿಯೂ ಇದೆ. ಗದ್ಯಗಂಧೀ ಕವಿತೆಗಳು, ಇದರ ಎಲ್ಲಾ ಪುಟಗಳ ತುಂಬಾ ಮನಸ್ಸಿನೊಳಗಿನ ಪದರಗಳಲ್ಲಿ ಮೂಡಿದ ಪ್ರತಿಮೆಗಳು ನಿತ್ಯನೋಟದ ವಸ್ತುಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರತೀ ಪುಟದಲ್ಲೂ ಮಗು ಮನಸ್ಸು ಮತ್ತು ಸಮಾಜದ ಕಲೆಕ್ಟಿವ್ ಮನಸ್ಸುಗಳ ತುಯ್ದಾಟ ಹಲವು ರೂಪ ಪಡೆದು ಚಿಂತನೆಗೆ ಹಚ್ಚುತ್ತವೆ. ಗದ್ಯದಂತಹ ಸಾಲುಗಳಲ್ಲಿ, ಪದ್ಯಾತ್ಮ ಪ್ರತಿಷ್ಠೆ ಮಾಡುವ ಪ್ರಯತ್ನ ಎನಬಹುದೇ?. ಸಾಧಾರಣವಾಗಿ ಹಿಂದಿ/ ಉರ್ದು ಶಾಯರಿಗಳಲ್ಲಿ ಕಂಡು ಬರುವ ಪಂಚ್ ಲೈನ್ ನ ಹಾಗೆ ಪುಟದ ಕೊನೆಗೆ ಕವಯಿತ್ರಿ, ತನ್ನ ಥಾಟ್ ಲೈನ್ ಅನ್ನು ಪ್ರಕಟಿಸುತ್ತಾರೆ. ಆ ಸಾಲು, ಬಾಲ್ಯದ ಗಂಧಕ್ಕೇ ವಾಲಿರುವುದೂ ಅಥವಾ ಅದನ್ನು ರಿ-ಇನ್ವೆಂಟ್ ಮಾಡುವ ಪ್ರಯತ್ನ ನಡೆಯುವುದೂ ಸ್ಪಷ್ಟ. ಇದಕ್ಕೆ ಸಾಮ್ಯವಿರುವ ಪ್ರಯತ್ನವೇ ಎಂದು ಹೇಳುವ ಭಾಷಾ ಪಾಂಡಿತ್ಯ ಇಲ್ಲದಿದ್ದರೂ, ವಿದ್ಯಾರ್ಥಿಯ ಕನವರಿಕೆಯ ಹಾಗೆ, ಇದನ್ನು ಉಲ್ಲೇಖಿಸ ಬಯಸುತ್ತೇನೆ. ಕೆ.ವಿ.ತಿರುಮಲೇಶ್ ಅವರ ಈ ಮಹತ್ತರವಾದ ಅಕ್ಷಯ ಕಾವ್ಯ ಪುಸ್ತಕದಲ್ಲಿ ಸುಮಾರು ೪೭೮ ಪುಟಗಳು. ಬಿಡಿ ಬಿಡಿಯಾದ,ಆದರೂ ಇಡಿಯಾದ ಕವಿತೆಗಳು. ತಮ್ಮ ಅಕ್ಷಯ ಕಾವ್ಯ ಪುಸ್ತಕದ ಮುನ್ನುಡಿಯಲ್ಲಿ, ಅವರು ಹೀಗೆ ಬರೆಯುತ್ತಾರೆ. ” ಸೂತ್ರಬದ್ಧತೆ, ಸುಸಂಬದ್ಧತೆ, ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ…ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.” ಈಗ ಗದ್ಯಗಂಧೀ ಕವಿತೆಗಳಿಗೆ ಪುನಃ ಬರೋಣ. ಈ ಒಟ್ಟೂ ಪುಸ್ತಕದ ಕವಿತೆಯ ಅಷ್ಟೂ ‘ಗಂಧ’ ಗಳನ್ನೂ ಬರೆಯಲು ಅಸಾಧ್ಯವಾದರೂ ಎರಡು ಪರಿಮಳ ದ್ರವ್ಯಗಳನ್ನಾದರೂ ಗ್ರಹಿಸುವ ಪ್ರಯತ್ನ ನನ್ನದು. ” ಅವಳ ಮನೆಯಲ್ಲಿ ಮೂರು ಕನ್ನಡಿಗಳಿದ್ದವು.” ಎಂದು ಆರಂಭವಾಗುವ ಕವಿತಾದಳದಲ್ಲಿ, ನೆರೆಮನೆಯ ಹುಡುಗಿ ಮತ್ತು ಈಕೆ ಎರಡು ಕನ್ನಡಿಗಳನ್ನು ಎದುರು ಬದುರು ಇಡುತ್ತಾರೆ. ” ಆಹಾ! ಒಂದರೊಳಗೊಂದು ಒಂದರೊಳಗೊಂದು ಕನ್ನಡಿಗಳು! ಕೊಂಚ ಮುಖ ತೂರಿಸಿ ಲೆಕ್ಕವಿರದಷ್ಟು ಬಿಂಬಗಳನ್ನು ಎದೆಯಲ್ಲಿ ಸೆರೆಹಿಡಿದು ಕನ್ನಡಿಗಳ ಸ್ವ ಸ್ಥಾನಕ್ಕೆ ಸೇರಿಸಿದರು.” ಎರಡು ಪುಟ್ಟ ಮಕ್ಕಳ ಆಟದಂತೆ ಕಾಣುವ ಈ ಚಿತ್ರ, ಚಿತ್ತಗನ್ನಡಿಗಳ ನಡುವಿನ ಅಸಂಖ್ಯ ಪ್ರತಿಫಲನಗಳಲ್ಲವೇ? ಆ ಹುಡುಗಿಯ ಯೌವನದಲ್ಲಿ ದಿವಾನಖಾನೆಯ ಕನ್ನಡಿಯೊಳಗಿಂದ ಹುಡುಗ ಹಾಡತೊಡಗಿ, ಅವಳು “ಮಾಯಾಬಜಾರಿ”ನ ಶಶಿರೇಖೆಯಾದಳು. ಹೀಗೆ ಒಂದು ಕನ್ನಡಿಯ ಸುತ್ತ ಪ್ರತಿಫಲಿಸುತ್ತವೆ ಹಲವು ಪ್ರತಿಮೆಗಳು. ಈ ಪುಟದ ಕೊನೆಯ ಸಾಲು ಹೀಗಿದೆ. ” ಈಗಂತೂ ಕನ್ನಡಿಯನ್ನು ಬೀದಿಯ ಕಡೆಗೆ ಮುಖಮಾಡಿ ಇರಿಸಿಬಿಟ್ಟಿದ್ದಾಳೆ. ಹಾದು ಹೋಗುವ ಪ್ರತೀ ಜೀವಿಯ ನೋವು,ನಲಿವು ಅವಳ ಎದೆಯಲ್ಲಿ ಪ್ರತಿಫಲಿಸುತ್ತದೆ.” ಕನ್ನಡಿಯೇ ಕವಯಿತ್ರಿಯ ಹೃದಯವೂ ಆಯಿತು. ಅದು ಸದಾ ಸಮಾಜದ ಚಲನೆಯ, ಬೀದಿಯ ಅಷ್ಟೂ ಡೈನಾಮಿಕ್ಸ್ ಗೆ, ಭಾವ ವೈವಿಧ್ಯಕ್ಕೆ ಕನ್ನಡಿ ಆಗುತ್ತೆ, ಹೃದಯ ಬರೇ ಕನ್ನಡಿಯೇ?. ಇದೊಂದು ಸ್ಪಂದನೆಯ ಕನ್ನಡಿ. ಈ ಎಸಳಿನ ನಂತರ ಒಂದು ವೈಶಿಷ್ಟ್ಯವನ್ನು ಹೇಳುವೆ. ಬೆಲ್ಲ ತಯಾರಿಸುವ ಕಾರ್ಖಾನೆಯಲ್ಲಿ ಕಬ್ಬಿನ ರಸ ಕುದಿಸುವಾಗ ಅದರ ಪರಿಮಳ ಊರೆಲ್ಲಾ ಹರಡುತ್ರೆ. ಕುದಿಸುತ್ತಾ ಅ ರಸ, ಪಾಕವಾಗಿ ಜೇನಿನಂತೆ ಮಂದ, ಸ್ನಿಗ್ಧ ದ್ರವವಾಗುತ್ತೆ. ಈ ಹಂತದಲ್ಲಿ ಅದಕ್ಕೆ ಕಬ್ಬಿನ ರಸದ ಎಲ್ಲಾ ಗುಣಗಳೂ ಇರುತ್ತವೆ,ಆದರೆ ಸಾಂದ್ರವಾಗಿರುತ್ತದೆ. ಹರಿಯುವ ಗುಣವೂ,ಪರಿಮಳವೂ,ಸಿಹಿಯೂ. ಈ ಹಂತದಲ್ಲಿ ಅದನ್ನು ಸಂಗ್ರಹಿಸಲು ಬಾಟಲಿ ಬೇಕು. ಇದರ ಮುಂದಿನ ಹಂತದಲ್ಲಿ ಅದನ್ನು ಗಟ್ಟಿಯಾಗಿಸಿ, ಅಚ್ಚಾಗಿಸಿ, ಆಕರ್ಷಕ ಪ್ಲಾಸ್ಟಿಕ್ ಕವರಿನೊಳಗೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ, ಕಂಪೆನಿಯ ಬೆಲ್ಲದಚ್ಚಾಗಿ ಗ್ರಾಹಕರ ವಿಕ್ರಯದ ವಸ್ತುವಾಗಿ ಪ್ರಕಟವಾಗುತ್ತೆ. ಕಮಲಾ ಅವರ ಗದ್ಯಗಂಧೀ ಕವಿತೆ ಬೆಲ್ಲದ ಅಚ್ಚು ಅಲ್ಲ. ಇದು ಸಾಂದ್ರವಾದ ಬೆಲ್ಲದ ಪಾಕ. ಇದಕ್ಕೆ ಹರಿವು,ಪರಿಮಳ, ರುಚಿ ಎಲ್ಲವೂ ಇದೆ. ರೂಪ ಮಾತ್ರ ಪಾಕವನ್ನು ತುಂಬಿಸಿಕೊಂಡ ಪಾತ್ರೆಯದ್ದೇ. ಗದ್ಯ ಗಂಧಿಯ ಇನ್ನೊಂದು ಎಸಳು ಹೀಗೆ ಆರಂಭವಾಗುತ್ತೆ. “ಅವಳು ಪುಟ್ಟವಳಿದ್ದಾಗ ಅಣ್ಣ ಕೊಟ್ಟ ನಾಲ್ಕಾಣೆ,ಎಂಟಾಣೆ ನಾಣ್ಯವನ್ನು ನೆಲದಲ್ಲಿ ಉರುಳಿ ಬಿಟ್ಟು ಎಷ್ಟು ದೂರ ಹೋಗುತ್ತದೆ ಎಂದು ನೋಡುತ್ತಿದ್ದಳು” ಈ ನಾಣ್ಯ, ಈ ನೆಲ, ಈ ನಾಣ್ಯದ ಉರುಳು ಚಲನೆ,ಚಲಾವಣೆ ಏನನ್ನು ಧ್ವನಿಸುತ್ತೆ?. ಆಕೆಯ ಅಪ್ಪ , ಪ್ರೀತಿಯಿಂದ ನಾಣ್ಯವನ್ನು ಉರುಳಿಸಿ ” ಅಂತಃಕರಣದ ನುಡಿಯನ್ನು ಹೀಗೇ ಉರುಳಿಸು. ಆ ಭಾಷೆ ಎಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ. ಅದು ಅವರಿಗೆ ಅರ್ಥವಾಗದಿದ್ದರೂ ಸರಿ, ಉರುಳಿಸುತ್ತಾ ಹೋಗಬೇಕು, ಎಷ್ಟು ದೂರ ಸಾಧ್ಯವಾದರೆ ಅಷ್ಟು ದೂರ” ಉರುಳುವ ನಾಣ್ಯಕ್ಕೆ ಅಂತಃಕರಣದ ನುಡಿಯ ಸ್ವರೂಪ. ಕೊಡು ಕೊಳ್ಳುವಿಕೆಯ ಕ್ರಿಯೆಯಿಂದ, ಪ್ರೀತಿಯಲ್ಲಿ ಕರಗುವ, ಕರಗಿಸುವ, ದ್ರಾವಣದೊಳಗೆ ಒಂದೇ ಆಗುವ ಕ್ರಿಯೆ. ನೀರಲ್ಲಿ ಕರಗಿಸಿದ ಸಕ್ಕರೆಯ ಹಾಗೆ. ನೀರೂ,ಸಕ್ಕರೆಯೂ ಒಂದಕ್ಕೊಂದು ಅಂತಃಕರಣಿಸಿ ಸ್ವಂತ ರೂಪ ಕಳೆದು ಏಕಸ್ವರೂಪ ಹೊಂದಿದ ಹಾಗೆ. ಕೊನೆಯ ಸಾಲುಗಳಲ್ಲಿ ಮನಸ್ಸಿನ ಟ್ರಾನ್ಸ್ಫಾರ್ಮೇಟಿವ್ ಚೈತನ್ಯ ಪರಿಮಳಿಸುತ್ತೆ. ” ಈಗ ನೀವು ನಿಮ್ಮೊಳಗಿನ ಯಾವ ನಾಣ್ಯವನ್ನಾದರೂ ಅವಳೆದುರಿಗೆ ಉರುಳಿಸಿ. ಎತ್ತಿಕೊಂಡು ಅಂತಃಕರಣದ ನುಡಿಯಾಗಿಸಿ ಉರುಳಿಬಿಡುತ್ತಾಳೆ” ಎಚ್ ನರಸಿಂಹಯ್ಯ ಅವರ ” ಹೋರಾಟದ ಹಾದಿ” ಪುಸ್ತಕದಲ್ಲಿ ಒಂದು ಘಟನೆಯಿದೆ. ಎಚ್. ಎನ್. ಅವರ ಗೆಳೆಯ ಮತ್ತು ಆತನ ಪುಟ್ಟ ಮಗು ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಆ ಮಗು ಕೋರ್ಟ್ ನ ಎಡಭಾಗದಲ್ಲಿ ಇರುವಾಗ,ಎದುರಾಳಿ ಶಟಲ್ ಕಾಕ್ ಅನ್ನು ಕೋರ್ಟಿನ ಬಲಗಡೆಗೆ ಪ್ಲೇಸ್ ಮಾಡುತ್ತಾನೆ. ಮಗು ಕೋರ್ಟ್ನ ಬಲ ಭಾಗದಲ್ಲಿದ್ದರೆ ಎದುರಾಳಿ, ಶಟಲ್ ನನ್ನು ಕೋರ್ಟ್ ನ ಎಡ ಭಾಗಕ್ಕೆ ಹೊಡೆಯುತ್ತಾನೆ. ಮಗು ಬಹಳ ನೊಂದುಕೊಂಡು ಎಚ್. ಎನ್. ಹತ್ರ ಹೇಳುತ್ತೆ, “ಅಂಕಲ್! ಇದು ಚೀಟಿಂಗ್” ಅಂತ. ಇದು ಕೂಡಾ ಮಗುವಿನ ಪರಿಮಳ. ಅಂತಹಾ ಪರಿಮಳವನ್ನು ಮೇಟಿಕುರ್ಕೆ ಯ ಬಾಲ್ಯದ ದಿನದಿಂದ ನಾಗರಿಕ ಜಗತ್ತಿನ ಗಂಧಗಳ ನಡುವೆಯೂ ಉಳಿಸಿಕೊಂಡು, ಇಲ್ಲಿಯೂ ಅಲ್ಲಿಯೂ ಸಲ್ಲುವ ಮತ್ತು ಯಾವುದೇ ನಾಣ್ಯವನ್ನು ಅಂತಃಕರಣದ ನುಡಿಯಾಗಿ ಪರಿವರ್ತಿಸುವ ಕವಿತೆಗಳಿವು. ಕವಿತೆಯುದ್ದಕ್ಕೂ ಸ್ತ್ರೀ ಸಹಜ ಮಮತೆ, ಸಹನೆ, ಮಡಿಲಲ್ಲಿ ತುಂಬಿಕೊಳ್ಳುವ ಕ್ಷಮತೆ, ಹರಿಯುತ್ತಲೇ ಇರುವ ನಿರಂತರತೆ, ತನ್ನ ಗಾಯವಲ್ಲದೇ,ಇತರರ ಗಾಯಗಳನ್ನೂ ಸ್ಪರ್ಶಿಸಿ ಗುಣವಾಗಿಸುವ ಔಷಧೀಯ ಹಸ್ತದ ಮೃದುಲತೆ, ಇವೆಲ್ಲವನ್ನೂ ಚಿತ್ತಾರವಾಗಿಸಿದ್ದನ್ನು ಕಾಣಬಹುದು. ಈ ಒಂದು ಚಿತ್ರವನ್ನು ಮನದಲ್ಲಿ ರೂಪಿಸಿಕೊಳ್ಳಿ. ಎರಡು ಗುಡ್ಡಗಳಿವೆ. ನಡುವೆ ಬಯಲು. ಒಂದು ಗುಡ್ಡದಲ್ಲಿ ಬಾಲ್ಯದ ಹಳ್ಳಿ, ಅಣ್ಣ ( ಅಪ್ಪ), ಅಮ್ಮ, ಮನೆ, ಕನ್ನಡಿ, ಕಲ್ಲುಗಳು, ತೆಂಗಿನ ಮರಗಳು, ಗಾಜಿನ ಬಳೆಗಳು, ಓಡಿದ ಓಣಿಗಳು, ಹೊಲಗಳು. ಸದಾ ಬೀಸುವ ಗಾಳಿ, ಪೋಸ್ಟ್ ಆಫೀಸ್, ನಕ್ಷತ್ರ, ಇವುಗಳೆಲ್ಲವೂ ಮಗುವಿನ ಪರಿಮಳದಂತೆ. ಮುಗ್ಧ, ನಿರ್ಮಲ, ನೇರ ನಿರಂತರ. ಭಾವ, ಮಮತೆ, ಜೀವಸಂಕುಲದ ಜತೆಗಿನ ತಾದಾತ್ಮ್ಯ ಸ್ಥಿತಿಗಳು ಈ ಗುಡ್ಡದ ತುಂಬಾ. ಎರಡನೆಯ ಗುಡ್ಡದಲ್ಲಿ, ಕಾರು, ಮೆಟ್ರೋ ರೈಲು, ಮುಖವಾಡಗಳು, ಕಲ್ಲು ಮನೆಗಳು, ಬೀಗ ಹಾಕಿದ ಬಾಗಿಲುಗಳು, ಸಿಮೆಂಟ್ ರಸ್ತೆಗಳು, ತಾಜ್ ಮಹಲ್ ಗಳು ಮತ್ತು ಗಾಳಿಯೂ ಸ್ಥಿರವಾಗಿವೆ. ಬಯಲಿನಲ್ಲಿ ಒಂದು ಸ್ಥಂಭದಲ್ಲಿ ಪೆಂಡುಲಮ್,ಈ ಎರಡು ಗುಡ್ಡಗಳ ನಡುವೆ ಓಲಾಡುತ್ತೆ. ಆ ಪೆಂಡುಲಮ್ನಲ್ಲಿ ಕವಯಿತ್ರಿ ಕುಳಿತಿದ್ದಾರೆ. ಪ್ರತೀ ಆಸ್ಸಿಲೇಷನ್, ಒಮ್ಮೆ ಮೊದಲ ಗುಡ್ಡದ ಹತ್ತಿರ, ಮತ್ತೆ ಎರಡನೇ ಗುಡ್ಡದ ಸಮೀಪ ಆಂದೋಳಿಸಿ ತರುವ ಅನುಭೂತಿಯ ಸಂಕಲನವೇ ‘ಗದ್ಯಗಂಧೀ ಕವಿತೆಗಳು’. ********************************************** ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ