ಪುಸ್ತಕ ಸಂಗಾತಿ ಬೇಲಿಯೊಳಗಿನ ಬೆಳೆ ಒಂದು ಅವಲೋಕನ ಬೇಲಿಯೊಳಗಿನ ಬೆಳೆ – ಪ್ರಬಂಧ ಸಂಕಲನ – ಡಾ. ಕೆ.ಚಿನ್ನಪ್ಪ ಗೌಡ – ಮದಿಪು ಪ್ರಕಾಶನ, ಮಂಗಳೂರು: ೨೦೨೦ ಪುಟ ೧೦೪, ಬೆಲೆ ೯೦ ರೂ. ಇದೊಂದು ‘ವಿಶಿಷ್ಟ’ ಸಪ್ತ ಪ್ರಬಂಧಗಳ ಸರಮಾಲೆ. ಯಾಕೆ ‘ವಿಶಿಷ್ಟ’ ಎಂದರೆ ಇಲ್ಲಿಯ ಏಳೂ ಲೇಖನಗಳು ‘ಪ್ರಬಂಧ’ ಎಂಬ ಒಂದೇ ಪ್ರಭೇದ ಸೂತ್ರಕ್ಕೆ ಒಳಪಡುವುದಿಲ್ಲ! ಇದನ್ನು ‘ಹರಟೆ’ ಎಂದು ಲೇಖಕರು ಕರೆದರೂ ಅದು ಹಳ್ಳಿ ಪಂಚಾಯ್ತಿಕಟ್ಟೆಯ ಸಮಯ ಕೊಲ್ಲುವ ಜಡಭರತರ ಹಾಳು ಹರಟೆಯಾಗದೆ ಓದುಗರ ಮನತಟ್ಟುವ, ಮುಟ್ಟುವ ಕಥನಗಳಾಗಿ ವಿಕಾಸಗೊಂಡಿದೆ. ಲೇಖಕರೇ ಹೇಳಿಕೊಳ್ಳುವಂತೆ “ಕೂಡೂರಿನ ನನ್ನ ಮನೆ ಮತ್ತು ವಿಟ್ಲದ ಆಸುಪಾಸಿನ ಜನರ ಬದುಕಿನ ಕೆಲವು ಸಾಂಸ್ಕೃತಿಕ ವಿವರಗಳನ್ನು ಈ ಬರಹಗಳಲ್ಲಿ ಸೃಜನಶೀಲವಾಗಿ ಸಂಘಟಿಸಿದ್ದೇನೆ…ನನ್ನ ಮನಸ್ಸಿನಲ್ಲಿ ಲುಪ್ತವಾಗದೆ ಸುಪ್ತವಾಗಿ ಅವಿತಿದ್ದ, ಆಗೊಮ್ಮೆ ಈಗೊಮ್ಮೆ ಜಿಗಿಯುತ್ತಿದ್ದ ನೆನಪುಗಳನ್ನು ಬಳಸಿ ಈ ಪ್ರಬಂಧಗಳನ್ನು ಕಟ್ಟಿದ್ದೇನೆ. ಈ ನೆನಪುಗಳು ನನಗೆ ಅಮೂಲ್ಯ…ನನ್ನ ಅನುಭವಗಳ ಮೇಲೆ ನನಗೆ ಪ್ರೀತಿ ಇದೆ, ವ್ಯಾಮೋಹವಿಲ್ಲ. ಹಿಂದಿನ ದಿನಗಳನ್ನು ವೈಭವೀಕರಿಸುವ ಉದ್ದೇಶ ನನಗಿಲ್ಲ.” ಲೇಖಕರಿಗಿರುವ ಈ ಎಚ್ಚರ ಇಲ್ಲಿನ ಪ್ರಬಂಧಗಳನ್ನು ನಾಸ್ಟಾಲ್ಜಿಕ್ ಆಗದಂತೆ, ಅಂದರೆ ವೃಥಾ ಗತಕಾಲಕ್ಕೆ ಹಂಬಲಿಸುವ ಗೀಳು ಆಗದಂತೆ ಕಾಪಾಡಿದೆ. ನಾನೂ ಇದೇ ಪರಿಸರದಲ್ಲಿ ಹುಟ್ಟಿ ಬೆಳೆದವನಾದುದರಿಂದ, ಲೇಖಕರ ಕೂಡೂರು ನನಗೂ ಆಪ್ತವಾದುದರಿಂದ, ಇದೆಲ್ಲದರ ಒಡನಾಟವೂ ನನಗಿದ್ದುದರಿಂದ ಈ ಮಾತನ್ನು ಗಟ್ಟಿಯಾಗಿ ಹೇಳಬಲ್ಲೆ ಯಾಕೆಂದರೆ ಈ ಅನುಭವಗಳಲ್ಲಿ ಹಲವನ್ನು ನಾನೂ ಕಂಡವನೇ! ಶೀರ್ಷಿಕೆಯ ‘ಬೇಲಿ’ ಗತಕಾಲದ ನೆನಪುಗಳ ಬೆಳೆಯನ್ನು ಭದ್ರವಾಗಿ ಸಂರಕ್ಷಿಸಿಕೊಂಡು ಬಂದು ಕಟಾವಿಗೆ ಸಿದ್ಧವಾದ ಪಕ್ವತೆ ಸಾಧಿಸಿ ಪಾಕರಸಾಯನವಾಗಿ ನಮ್ಮ ಮುಂದೆ ತನ್ನನ್ನು ತಾನೇ ಅನಾವರಣಗೊಳಿಸಿಕೊಂಡಿದೆ. ಇಲ್ಲಿ ಗತಕಾಲವೆಂದರೆ ಬಾದರಾಯಣರಷ್ಟು ಹಿಂದೋಡದೆ ಕೇವಲ ‘ಸಂದ ಕಾಲ’ವಾಗಿ ಇಂದು-ನಿನ್ನೆಗಳನ್ನೂ ಒಳಗೊಂಡಿದೆ. ನಂಬಿದ ದೈವವೇ ‘ಬೇಲಿ’ಯಾಗಿ ನಂಬಿದವರನ್ನು ‘ಬೇಲಿಯೊಳಗಿನ ಬೆಳೆ’ಯಂತೆ ಪರಿಗಣಿಸಿ ದೈವ ಅಭಯ ನೀಡುವುದನ್ನು ಲೇಖಕರು ಹೀಗೆ ದಾಖಲಿಸುತ್ತಾರೆ: “ಬೇಲಿ ನಾನು. ಬೇಲಿಯೊಳಗಿನ ಬೆಳೆ ನೀವು. ಬಿತ್ತಿದ ಬೀಜ ನುಚ್ಚಾಗದಂತೆ ನೆಟ್ಟ ಸಸಿ ನಲುಗದಂತೆ ಕಂಬಳದ ಪೂಕರೆ ಮಾಲದಂತೆ ಬೋದಿಗೆ ಕಂಬ ಮುರಿಯದಂತೆ ನಂದಾದೀಪ ನಂದದಂತೆ ತೊಟ್ಟಿಲಿನ ಸರಪಳಿ ತುಂಡಾಗದಂತೆ ನಾನು ಸಾವಿರದ ಕಾಲದ ವರೆಗೆ ಕಾಯುತ್ತೇನೆ.” ಇದು ನಂಬಿದವರ ಪಾಲಿಗೆ ಒಂದು ಆಧಾರವಾಗಿ ಅವರ ಬಾಳನ್ನು ರೂಪಿಸಿದೆ ಎಂಬುದು ಸತ್ಯ. ಕೊನೆಯ ಪ್ರಬಂಧ “ನೀವೇ ಯೋಚಿಸಿ ನೋಡಿ,’ ಪ್ರಚಲಿತ ಕೊರೊನಾ ಸಂಕಷ್ಟದ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ನಡೆಸಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಮೇಲೆ ಹೇಳುವ ಮಾತುಗಳ ಮಾರ್ಮಿಕತೆ –- ‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ (೧೮:೬೩) – ‘ನಾನು ಹೇಳಿದ್ದನ್ನೆಲ್ಲಾ ಚೆನ್ನಾಗಿ ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು’ — ಎಂಬುದನ್ನು ಇಲ್ಲಿ ಓದುಗರಿಗೆ ಆರೋಪಿಸಿ ಅವರ ಜವಾಬ್ದಾರಿಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ. ಕನ್ನಡದಲ್ಲಿ ಪ್ರಬಂಧ ಸಾಹಿತ್ಯದ ಹುಟ್ಟು, ಬೆಳವಣಿಗೆ, ಉತ್ಕೃಷ್ಟ ಮಾದರಿಗಳು ಇತ್ಯಾದಿಗಳ ಬಗ್ಗೆ ಇಲ್ಲಿ ಉಲ್ಲೇಖಿಸದೆ ನೇರವಾಗಿ ಪ್ರಬಂಧಗಳೊಂದಿಗೆ ಮುಖಾಮುಖಿಯಾಗುವ ಪ್ರಯತ್ನವಷ್ಟೇ ನನ್ನದು. ಈ ಪ್ರಬಂಧಗಳ ಬಗ್ಗೆ ಲೇಖಕರೇ ಒಂದಿಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. “ಬಹುಶಃ ನಾನು ನನ್ನದೇ ಪ್ರಬಂಧಗಳ ಬಗ್ಗೆ ಬರೆದದ್ದು ಹೆಚ್ಚಾಯಿತೋ ಏನೋ” ಎಂಬ ದಾಕ್ಷಿಣ್ಯವೂ ಅವರನ್ನು ಕಾಡಿದೆ! ‘ತರಂಗ’ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಈ ಸಂಕಲನದ ಮೊದಲ ಪ್ರಬಂಧ ‘ಕಾಗೆ ಕಾಲಿನ ಗೆಜ್ಜೆ’ಯ ಬಗ್ಗೆ ನಾನು ವೈಯಕ್ತಿಕವಾಗಿ ನೇರ ಚಿನ್ನಪ್ಪ ಗೌಡರಿಗೆ ಬರೆದ ಮಾತುಗಳನ್ನು, ಅಂತೆಯೇ ಇತರ ಓದುಗರ ಅಭಿಪ್ರಾಯಗಳನ್ನೂ ಲೇಖಕರು ಈ ಸಂಕಲನದಲ್ಲಿ ಉಲ್ಲೇಖಿಸುತ್ತಾರೆ. ಭೂತಕೋಲದ ಸಂದರ್ಭದಲ್ಲಿ ಭೂತ ಕಟ್ಟುವ ದೈವದ ಪಾತ್ರಿ ನೀಡುವ ಅಭಯ ಜನರು ನಂಬುವ ಭೂತದ್ದೋ, ಪಾತ್ರಿಯದ್ದೋ ಎಂಬ ಸಂದಿಗ್ಧ ಕೆಲವರನ್ನು ಕಾಡಿದೆ ಮತ್ತು ಈ ಕುರಿತು ಅವರು ಲೇಖಕರನ್ನು ಪ್ರಶ್ನಿಸಿಯೂ ಇದ್ದಾರೆ. ಇದಕ್ಕೆ ಭೂತಾರಾಧನೆಯ ಬಗ್ಗೆಯೇ ಕ್ಷೇತ್ರ ಕಾರ್ಯ ನಡೆಸಿ ಡಾಕ್ಟರೇಟ್ ಪದವಿ ಪಡೆದ ಜಾನಪದ ವಿದ್ವಾಂಸರೂ ಆಗಿರುವ ಚಿನ್ನಪ್ಪ ಗೌಡರು ಉತ್ತರಿಸುವುದು ಹೀಗೆ: “ಭೂತ ಇದೆ. ನಾನು ಎಷ್ಟೋ ಭೂತಗಳನ್ನು ನೋಡಿದ್ದೇನೆ. ಅವುಗಳನ್ನು ಕೆಲವರು ದೈವಗಳೆಂದೂ, ಈ ನೆಲದ ಸತ್ಯಗಳೆಂದೂ ಕರೆಯುತ್ತಾರೆ. ಅವುಗಳಿಗೆ ನಿತ್ಯ ಕೈಮುಗಿಯುತ್ತಾರೆ… ಇಷ್ಟೊಂದು ವಿಶ್ವಾಸವಿಟ್ಟು ಕಣ್ಣೆದುರಿನ ಭೂತಕ್ಕೆ ಕೈಮುಗಿಯುವಾಗ ಅದು ಇಲ್ಲ ಎಂದರೆ ಹೇಗೆ? … ಭೂತವನ್ನು ಪ್ರತಿನಿಧಿಸಿ, ಭೂತವೇ ಆಗಿಬಿಡುವ ಒಬ್ಬ ವ್ಯಕ್ತಿಯೇ ಇದ್ದಾನಲ್ಲ…ನೋಡಲು, ಮುಟ್ಟಲು, ಮಾತನಾಡಿಸಲು ಸಾಧ್ಯವಾಗುವ ‘ವ್ಯಕ್ತಿತ್ವ’ವನ್ನು ಅದಿಲ್ಲ, ಅದಲ್ಲ ಎಂದರೆ ಹೇಗೆ? ಹಾಗಾಗಿ ನನ್ನ ಮಟ್ಟಿಗೆ ಭೂತ ಇದೆ. ನಾನು ಆ ಸತ್ಯಗಳನ್ನು ಕಂಡಿದ್ದೇನೆ.” ನನ್ನ ವೈಯಕ್ತಿಕ ನಿಲುವೂ ಇದೇನೇ. ಈ ಕುರಿತು ನಾನು ಹೇಳಿದ್ದು: “ಅಗೋಚರ ಸತ್ಯದ ಸಾಕ್ಷಾತ್ಕಾರ ಭೂತದ ನಡೆಯಲ್ಲಿ, ನೇಮದ ಗುಂಗಿನಲ್ಲಿ ಕ್ಷಣಕಾಲ ವಿಜೃಂಬಿಸುವುದು ಸುಳ್ಳಲ್ಲ. ಸತ್ಯದರ್ಶನದ ವಿಧಿಯೇ ಹಾಗೆ… ಭಾವಕ್ಕೆ ತಿಳಿದರೂ, ಬುದ್ಧಿಗೆ ತರ್ಕಕ್ಕೆ ನಿಲುಕದ ಕಾರಣಿಕ ಅದು. ಒಂದು ಸಮುದಾಯಕ್ಕೆ, ಅದರ ಬದುಕಿಗೆ ಆಧಾರವಾಗಿ ನಿಂತು ಮುನ್ನೆಡೆಸುವ ಶಕ್ತಿ ಅದು. ಇದನ್ನು ಬೆರಗುಗಣ್ಣಿಂದ ನೋಡಿದರೇನೇ ಚೆಂದ… ದೈನಿಕದ ಬದುಕು ನಿಂತಿರುವುದು ನಂಬಿಕೆ, ವಿಶ್ವಾಸ, ಪ್ರೀತಿ, ಭಕ್ತಿ ಇತ್ಯಾದಿ ಸಂವೇದನೆಗಳ ಮೇಲೆ…” ಇಲ್ಲಿ ನಿಜವಾಗಿ ಕೆಲಸಮಾಡುವುದು ಕವಿ ಕೊಲೆರಿಜ್ ಹೇಳುವಂತೆ – willing suspension of disbelief – ಅಪನಂಬಿಕೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದರೆ ಮಾತ್ರ ಸತ್ಯ, ಸೌಂದರ್ಯ ದೃಗ್ಗೋಚರವಾಗುತ್ತದೆ. ಅದು ಅರಿವಾಗುವುದು ಅಂತರಂಗದ ಆರ್ದ್ರತೆಯಲ್ಲಿ, ತಲ್ಲೀನತೆಯಲ್ಲಿ ಹಾಗೂ ಭಾವಪರವಶತೆಯಲ್ಲಿ. ತರ್ಕದಿಂದ ಬದುಕನ್ನು ಅಳೆಯಲಾಗದು, ಅಳೆಯಬಾರದು. ಸ್ತ್ರೀರೂಪವನ್ನು ಮಜ್ಜೆ, ಮಾಂಸ, ರಕ್ತಗಳೆಂದು ವಿಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಎಷ್ಟು ಆಭಾಸವಾದೀತು! ನಾಗಚಂದ್ರ ಕವಿ ವರ್ಣಿಸಿದ್ದನ್ನು ಬುದ್ಧಿಯಿಂದಲ್ಲ, ಭಾವದಿಂದ, ರಸೈಕ ದೃಷ್ಟಿಯಿಂದ ಗ್ರಹಿಸಬೇಕು, ಅಲ್ಲವೇ? ಸ್ತ್ರೀ ರೂಪಮೆ ರೂಪಂ ಶೃಂ ಗಾರಮೆ ರಸಮತುಳ ಸುರತ ಗಂಧಮೇ ಗಂಧಂ l ಸಾರಸ್ಪರ್ಶಂ ಗುರುಕುಚ ಭಾರಸ್ಪರ್ಶಂಗಳಪ್ರಶಬ್ದಮೇ ಶಬ್ದಂ ll “ಕಟ್ಟುವುದಾದರೆ ಕಾಗೆ ಕಾಲಿಗೆ ಗೆಜ್ಜೆ ಕಟ್ಟಬೇಕು. ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ಮನೆಹಿತ್ತಿಲು ಸುತ್ತು ಬಂದೀತು. ನಿನ್ನ ಕಾಲಿಗೆ ಗೆಜ್ಜೆ ಕಟ್ಟಿದ್ದೇನೆ. ನಾಲ್ಕು ಊರು ಹಾರಾಡು” ಎಂದು ತಾಯಿ ಉಳ್ಳಾಲ್ತಿ ದೈವ ಲೇಖಕರಿಗೆ ಬೂಳ್ಯ (ಪ್ರಸಾದ) ಕೊಟ್ಟು ಹರಸುವುದು ಒಂದು ರೋಚಕ ಘಟನೆ. ಇದು ವಾಸ್ತವ ಹಾಗೂ ದೈವದ ಮಾಯಕದ ಲೋಕದ ನಡುವಿನ ಸೇತುವಾಗಿ ಚಿನ್ನಪ್ಪ ಗೌಡರ ನಿಜಜೀವನದಲ್ಲೂ ನಡೆದದ್ದು ಕೇವಲ ಕಾಕತಾಳೀಯವಲ್ಲ ಎಂಬುದು ನನ್ನ ದೃಢ ನಂಬಿಕೆ. ಇದರ ವಿವರಗಳಿಗೆ ನೀವು ಪ್ರಬಂಧವನ್ನೇ ಓದಬೇಕು. ‘ಪಾಚಕ್ಕನ ಗಂಡಾಂತರ’ದಲ್ಲಿ ಲೇಖಕರು ‘ಕೆಟ್ಟ ದೃಷ್ಟಿ’ಯ ಬಗ್ಗೆ ಬರೆಯುತ್ತಾರೆ. ಇಲ್ಲಿಯೂ ನಂಬಿಕೆ-ಅಪನಂಬಿಕೆಗಳ ಮಧ್ಯೆ ಒಂದು ತೆಳು ರೇಖೆ ಮಾತ್ರ ಇದೆ. ಮಗುವಿಗೆ ದೃಷ್ಟಿಯಾಗುವುದು, ದೃಷ್ಟಿ ತೆಗೆಯುವುದು ಇತ್ಯಾದಿ ನಮ್ಮ ಸಾಮಾಜಿಕ ಜೀವನದಲ್ಲಿ ಜಾತಿ, ಮತಗಳ ಭೇದವಿಲ್ಲದೆ ಅನೂಚಾನವಾಗಿ ಲಾಗಾಯ್ತಿಂದ ನಡೆದು ಬಂದಿರುವುದು ಸತ್ಯ ತಾನೇ? ಇಲ್ಲಿ ಪಾಚಕ್ಕನ ಕೆಟ್ಟ ದೃಷ್ಟಿಯನ್ನು ಅವಳು ಅನುಭವಿಸಿರಬಹುದಾದ ಸಂಕಟಗಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಚಿನ್ನಪ್ಪ ಗೌಡರು ಗ್ರಹಿಸಿರುವುದು ಅವರ ಸೂಕ್ಷ್ಮ ಸಂವೇದನೆಗೆ ಸಾಕ್ಷಿ ಎಂದು ನಾನು ತಿಳಿಯುತ್ತೇನೆ. ಈ ಸಂವೇದನೆಯೇ ಲೇಖಕರ ಬಾಯಿಯಿಂದ ಈ ಮಾತುಗಳನ್ನು ಹೇಳಿಸಿದೆ: “ಪಾಚಕ್ಕನ ಮಾತುಗಳನ್ನು ಕೇಳಿದ ಮೇಲೆ ನನಗೆ ಅವಳು ಕೆಟ್ಟವಳು ಅಂತ ಅನಿಸಲಿಲ್ಲ. ಅವಳ ಮನಸ್ಸನ್ನು ಕೆಡಿಸಿ ಅವಳನ್ನು ಕೆಟ್ಟವಳನ್ನಾಗಿ ಮಾಡಿದ್ದು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿದೆ. ಅವಳ ಒಳದನಿಗೆ ಸಮಾಜ ಕಿವಿಗೊಡಲಿಲ್ಲ. ಲಿಂಗ ತಾರತಮ್ಯ ಅವಳ ಸಂವೇದನೆಯನ್ನು ಕೊಂದಿದೆ. ಜಾತಿ, ಹೆಣ್ಣು, ಬಡತನ ಮೊದಲಾದ ನೆಲೆಗಳ ಸಾಮಾಜಿಕ ಅಸಮಾನತೆಗಳು ಪಾಚಕ್ಕನನ್ನು ತೀವ್ರವಾಗಿ ಕಾಡಿವೆ. ಅವಳದಲ್ಲದ ತಪ್ಪಿಗೆ ಅವಳನ್ನು ಹೊಣೆಗಾರಳನ್ನಾಗಿ ಸಮಾಜ ಮಾಡಿದೆ. ಅವಳ ಸ್ವಾತಂತ್ರ್ಯವನ್ನು ಸಮಾಜ ಕಸಿದಿದೆ. ಅವಳ ಮನಸ್ಸನ್ನು ಕೆಡಿಸಿದ ಕೆಟ್ಟ ಸಮಾಜವನ್ನು ದುರಸ್ತಿಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಅಂತ ನನಗನ್ನಿಸಿದೆ ಪಾಚಕ್ಕನ ಮಾತುಗಳನ್ನು ಕೇಳಿ.” ಇಂತಹ ಒಂದು ಸಮಾಜಶಾಸ್ತ್ರೀಯ ದೃಷ್ಟಿ ಇನ್ನೂ ಅನೇಕ ಪ್ರಚಲಿತವಿರುವ ಸಾಮಾಜಿಕ ಅನಿಷ್ಟಗಳ ನಿವಾರಣೋಪಾಯವಾಗಿ ಇಂದಿನ ತುರ್ತು ಹಾಗೂ ಇಂದಿಗೂ ಪ್ರಸ್ತುತ ಕೂಡಾ ಎಂದು ನನಗೆ ಅನಿಸುತ್ತದೆ. ಇದಕ್ಕೆ ಪೂರಕವಾಗಿ ಒಂದು ಮಾತು. ನಾನು ಬಾಲ್ಯಕಾಲದಲ್ಲಿ ಕೇಳಿದಂತೆ ವಿಟ್ಲ ಪೇಟೆಯಿಂದ ಅನತಿದೂರದಲ್ಲಿ ‘ಅಪ್ಪೇರಿಪಾದೆ’ ಎಂಬ ಬೃಹತ್ ಶಿಲಾಹಾಸುಬಂಡೆ ಇತ್ತಂತೆ. ಅದಕ್ಕೆ ವಿಶಾಲವಾದ ಬಿಳಿ ಬಟ್ಟೆಯನ್ನು ಮುಚ್ಚಿ, ಪಾಚಕ್ಕನಂತೆ ಬಿರುದೃಷ್ಟಿಗೆ ಹೆಸರುವಾಸಿಯಾದ ಮಹಿಳೆಯೊಬ್ಬರಿಗೆ ತೋರಿಸಿದಾಗ ‘ಬೆಳಗಾಗಿ ಇಷ್ಟು ಹೊತ್ತಾದರೂ ಇವನಿನ್ನೂ ಎದ್ದಿಲ್ಲವೇ?’ ಎಂದು ಕುಚೋದ್ಯದ ಮಾತನಾಡಿದಾಗ ಅವಳ ಬಿರುನುಡಿಗೆ ಇಡೀ ಹಾಸುಬಂಡೆಯೇ ಚಿಟಿ ಚಿಟಿಲೆಂದು ಸಾವಿರ ಹೋಳಾಗಿ ಹೋಯಿತಂತೆ ಎಂಬುದನ್ನು ನಾನು ಕೇಳಿ ಬಲ್ಲೆ! ಇದು ಸತ್ಯವೋ ಸುಳ್ಳೋ ಎನ್ನುವುದಕ್ಕಿಂತಲೂ ಅಂತಹ ಒಂದು ಸಾಧ್ಯತೆಯನ್ನು ಗುರುತಿಸಿದ ಜನಮಾನಸಕ್ಕೆ ‘ಕಲ್ಪನಾ ದಾರಿದ್ರ್ಯ’ ಎಂದೂ ಬಾರದು ಎಂಬುದಷ್ಟೇ ಮುಖ್ಯ ಎಂದು ನನಗನಿಸುತ್ತದೆ. ಸೃಜನಶೀಲ ಮನಸ್ಸು ಕಲ್ಪನೆ-ವಾಸ್ತವಗಳ ನಡುವಿನ ವ್ಯಾವಹಾರಿಕ ರೇಖೆಯನ್ನು ನಿರಾಕರಿಸುತ್ತದೆ, ಅಥವಾ ನಿವಾರಿಸುತ್ತದೆ ಎಂದರೆ ಹೆಚ್ಚು ಸಮಂಜಸವಾಗಬಹುದೇನೋ! ‘ಪಾಚಕ್ಕನ ಗಂಡಾಂತರ’ ಈ ಮಾತಿಗೆ ಪುರಾವೆ ಇದ್ದಂತಿದೆ. ‘ಕಳೆಂಜಿಮಲೆ’ ವಿಟ್ಲದ ಸರಹದ್ದಿನ ಕಾಡು. ಇದು ವಿಟ್ಲವಾಸಿಗಳ ಭಾವಕೋಶದ ಒಂದು ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ನಾನೂ ಚಿಕ್ಕವನಾಗಿದ್ದಾಗ ಗೆಳೆಯರೊಂದಿಗೆ ಕಳೆಂಜಿಮಲೆಗೆ ಲಗ್ಗೆ ಇಟ್ಟವನೇ! ಅಲ್ಲಿಯ ಕಾಟು ಮಾವಿನ ಮರದ ಹಣ್ಣುಗಳನ್ನು, ಬೆಟ್ಟದ ನೆಲ್ಲಿಕಾಯಿ, ಪುನರ್ಪುಳಿ, ನೇರಳೆ, ಕುಂಟಲ ಹಣ್ಣುಗಳನ್ನು ಧಾರಾಳವಾಗಿ ತಿಂದವನೇ!! ಅಲ್ಲಿಯ ಬಕಾಸುರನ ಗುಹೆ, ನೆತ್ತರಕೆರೆ, ವಿಟ್ಲವೇ ಮಹಾಭಾರತದ ‘ಏಕಚಕ್ರ ನಗರ’ ಎಂಬ ನಂಬಿಕೆ ಇತ್ಯಾದಿಗಳಲ್ಲಿ “ಪುರಾಣ ಕಾವ್ಯಗಳು ಸ್ಥಳೀಯವಾಗುವ – ಥಿಯರಿ ಆಫ್ ಲೋಕಲೈಸೇಷನ್”ನ ಅದ್ಭುತವನ್ನು ಕಂಡವನೇ. ಚಿನ್ನಪ್ಪ ಗೌಡರು ಇವೆಲ್ಲವನ್ನೂ ಮನಮುಟ್ಟುವಂತೆ, ಅತಿರಂಜಕತೆಯ, ಅತಿಭಾವುಕತೆಯ ಅಪಾಯದ ಸೆಳೆತವನ್ನು ಮೀರಿ ವರ್ಣಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಡು ಮತ್ತು ಮನುಷ್ಯ ಸಮಾಜದ ನಡುವಿನ ಅವಿನಾಭಾವದ ನೆಂಟಿನ ಗಂಟನ್ನು ಸುಕ್ಕುಗಟ್ಟದಂತೆ ಬಿಡಿಸಲು ಚಿನ್ನಪ್ಪ ಗೌಡರು ಶಕ್ತರಾಗಿದ್ದಾರೆ. ಕಳೆಂಜಿಮಲೆ ಒಂದು ರಕ್ಷಿತಾರಣ್ಯ. ಇಲ್ಲಿ ಹೆಚ್ಚಾಗಿ ಹೆಂಗಸರು ಒಣಸೌದೆ ಆರಿಸಿ ಗಂಟು ಕಟ್ಟಿ ತಲೆಯ ಮೇಲೆ ಹೊತ್ತು ತಂದು ಮಾರಾಟ ಮಾಡುವುದೋ, ಸ್ವಂತಕ್ಕೆ ಬಳಸುವುದೋ ಸದಾ ನಡೆದೇ ಇತ್ತು. ಅಂತೆಯೇ ಕರ್ನಾಟಕದಿಂದ ಸಮೀಪದ ಕೇರಳಕ್ಕೆ ಅಕ್ಕಿ ಸಾಗಾಟ ನಿರ್ಬಂಧ ಇದ್ದ ಕಾಲದಲ್ಲಿ ಹಲವು ಸಾಹಸಿಗರು ರಾತ್ರಿ ಕಳೆಂಜಿಮಲೆ ದಾರಿಯಾಗಿ ಕೇರಳಕ್ಕೆ ಅಕ್ಕಿ ಸಾಗಾಟ ಮಾಡಿ ದುಡ್ಡು ಮಾಡಿದ್ದೂ, ಕಾನೂನುಪಾಲಕರೊಂದಿಗೆ ಎಗರಾಡಿದ್ದೂ ಗೊತ್ತು. ಇದೆಲ್ಲಾ ನನ್ನ ಬಾಲ್ಯಕಾಲದ ನೆನಪುಗಳಲ್ಲಿ ಹುದುಗಿವೆ. ಕಳೆಂಜಿಮಲೆ ಒಂದು ರೀತಿಯಲ್ಲಿ ನಿಗೂಢವೂ ಆಗಿ ಜನಜೀವನಕ್ಕೆ ಸಹಾಯಕವಾಗಿಯೂ ಒದಗಿದ ಕಾಲವೊಂದಿತ್ತು. “ಈ ಕಳೆಂಜಿಮಲೆಯ ಒಡಲಲ್ಲಿ ಏನಿದೆ, ಏನಿಲ್ಲ ಎಂಬುದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ನಮ್ಮ ಊರಿನ ಸಂಸ್ಕೃತಿ ಮತ್ತು ಈ ಕಾಡಿನ ಪ್ರಕೃತಿಯ ನಡುವೆ ಸಂಘರ್ಷ ಮತ್ತು ಸಮನ್ವಯ ನಡೆಯುತ್ತಾ ಬಂದಿರುವುದಂತೂ ನಿಜ” ಎಂದು ಚಿನ್ನಪ್ಪ ಗೌಡರು ಗುರುತಿಸುತ್ತಾರೆ. ಇಂತಹ ಕಳೆಂಜಿಮಲೆಗೆ ಈಗ ಬಂದಿರುವ ದುಸ್ಥಿತಿಯನ್ನು ಲೇಖಕರು ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ಅವರೊಂದಿಗೆ ಓದುಗರೂ ವಿಷಾದಯೋಗಕ್ಕೆ ಜಾರುತ್ತಾರೆ: “ರಕ್ಷಿತಾರಣ್ಯವಾಗಿದ್ದ ಈ ಕಳೆಂಜಿಮಲೆ ಈಗ ರಕ್ಷಣೆಯಿಲ್ಲದೆ ಬಳಲುತ್ತಿದೆ. ಪಶ್ಚಿಮ ಘಟ್ಟವೇ ಸೂರೆಹೋಗಿರುವಾಗ ಈ ಪುಟ್ಟ ಕಳೆಂಜಿಮಲೆ ಏನು ತಾನೇ ಮಾಡಲು ಸಾಧ್ಯ. ಬಕಾಸುರನ ಗುಹೆಯ ಬದಿಯಿಂದಲೇ