ಅಂಕಣ ಬರಹ

ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6

ನಾಗಮ್ಮಜ್ಜಿಯ ಅಂತಿಮಯಾತ್ರೆ

men watching cremation fire at pashupatinath - hindu funeral stock pictures, royalty-free photos & images

                ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.

                ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.

                ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.

                ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.

                ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.

                ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.

                ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!

                ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….

                ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.

                ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.

                ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ.

********************************************

2 thoughts on “

  1. ನಾಗಮ್ಮಜ್ಜಿಯವರ ಅಂತಿಮ ಯಾತ್ರೆ ಕಣ್ಣಾಲಿಗಳ ತುಂಬಿತು ಸರ್.
    ಅವರು ಇನ್ನೂ ಬದುಕಿದ್ದರೆ ಮೊಮ್ಮಗನ ಆಟ ಪಾಠ ಕಂಡು ಸಂತಸ ಗೊಳ್ಳುತ್ತಿದ್ದರು. ಆದರೆ ವಿಪರ್ಯಾಸ!!

Leave a Reply

Back To Top