ಕವಿತೆ
ಜಿಹ್ವೆ
ಅರುಣ ರಾವ್
ಈ ನಾಲಿಗೆಗೇನು?
ಅಂದು ಕೊಂಡದ್ದು ನೋಡಿದ್ದು
ಊಹಿಸಿಕೊಂಡದ್ದು ಕಲ್ಪಿಸಿಕೊಂಡದ್ದು ನುಡಿದುಬಿಡುತ್ತದೆ ನುಡಿದೇ ಬಿಡುತ್ತದೆ
ತುಸು ತಡೆದರೇನು ನಷ್ಟ? ಎಂದೊಮ್ಮೆ
ಕೇಳಿದರೆ ಸರಸರನೆ ತಿರುಗಿ ಗಿರಗಿರನೆ ಸುತ್ತಿ
ಮೇಲೆ ಕೆಳಗೆ ಹಾರಿ ಉರಿದುರಿದು ಬೀಳುತ್ತದೆ
ತಾಳ್ಮೆಯಿಂದಿದ್ದು ಕೊಂಚ
ಯೋಚಿಸಬಾರದೇ ಕ್ಷಣಕಾಲ?
ಮನಃಶಾಂತಿಯಾದರೂ ಇರುತಿತ್ತು ಆಗ
ಕೇಳಿದ್ದಷ್ಟೇ ಅಲ್ಲ, ನೋಡಿದ್ದೂ ಸುಳ್ಳಾಗುವ ಕಾಲ
ಇದುವೆ ಎಂದೊಂದರೆಗಳಿಗೆ ನೆನೆಯಬಾರದೆ?
ಗಳಿಗೆಗೊಂದರಂತೆ ಮಾತಂತೆ ಕತೆಯಂತೆ
ಅದರಲೊಂದಿಷ್ಟು ಹುರುಳು ಹೂರಣ
ಮತ್ತೆ ಕೆಲವೇನೋ ಕಸ ಕಡ್ಡಿ ಕೊಚ್ಚೆ ಕೂಳೆ
ಕೆಸರೆರೆಚಾಟ ಅರೆಚಾಟ ಅಬ್ಬರ
ಕಲ್ಪನೆಯ ಕೂಸಿನ ಅರೆನಗ್ನ ಕುಣಿದಾಟ
ಮುಂದೊಂದು ಹಿಂದೊಂದು ಮತ್ತೊಂದು ಮಗದೊಂದು ಆಗೊಂದು ಈಗೊಂದು
ನನಗೊಂದು ನಿನಗೊಂದು ಹೇಳುತ್ತ ಸಾಗುತ್ತ
ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಗೆ ಹೇಸಿ ಕಳವಳಿಸಿ ಬೇಸತ್ತು
ಬಸವಳಿದು ತಲ್ಲಣಿಸಿ ಕುಸಿಯುತಿದೆ ಜಗ
ಮುಖಕ್ಕೆ ಮಾಸ್ಕ್ ಧರಿಸಿದ್ದರೇನು?
ಅದರ ಹಿಂದಿನ ನಾಲಿಗೆಗೇನು ಕಡಿವಾಣ
ಸದಾ ಹೊರಳುತ್ತ ಹಾರುತ್ತ ಚೀರುತ್ತ
ನಶ್ವರದ ಜೀವನದಿ ನುಡಿದ ನುಡಿ
ಶಾಶ್ವತವೆಂಬ ತತ್ವವ ಮರೆಯುತ್ತಲಿದೆ
***********************************
ನಿಮ್ಮ ಕೈ ಸೇರಿದ ಲೇಖನಿಯ ಸೌಭಾಗ್ಯ, ಅದನ್ನು ಆಯುಧವಾಗಿರಿಸಿ ನಾಲಿಗೆಗೆ ಇರಿದು ಜರಿದರೂ, ಅದರ ಅಟ್ಟಹಾಸಕ್ಕಿಲ್ಲ ಎಲ್ಲೆ. ನೀವು ಹಾಕಿದ ಕಡಿವಾಣಕ್ಕೆ ಇನ್ನಾದರೂ ನಾಲಿಗೆ ನಾಚಿ, ತಗ್ಗಿ ಬಗ್ಗಿ ನುಡಿದರೆ ಚೆನ್ನ, ನಿಮ್ಮ ಬರಹ ಕೈಂಕರ್ಯಕ್ಕೆ ನಮ್ಮದೊಂದು ಜೈಕಾರ.
ಅಬ್ಬಬ್ಬ, ಪದಗಳ ಧಾಳಿಗೆ ಹೆದರಿಬಿಟ್ಟೆ ಶ್ವೇತ…. ಭಾಷಾ ಪರಿಣಿತರೂ ಮೆಚ್ಚಬೇಕು. ಧನ್ಯವಾದಗಳು
ನಿಮ್ಮ ಪರಿಣಿತಿಯ ಬರಹವೆಲ್ಲಿ, ನಮ್ಮ 2 ಸಾಲಿನ ಅಭಿಪ್ರಾಯವೆಲ್ಲಿ… ನಿಮ್ಮ ಬರವಣಿಗೆ, ಸಾಹಿತ್ಯ ಪ್ರೇಮಕ್ಕೆ ನನ್ನದೊಂದು ಪ್ರೋತ್ಸಾಹ, ಮೆಚ್ಚುಗೆ.. ನೀವು ಅಷ್ಟು ಬರೆದಾಗ ನಾನು ಇಷ್ಟು ಪದ ಬಳಕೆಯ ಮೂಲಕ ನಿಮ್ಮ ಬರಹಕ್ಕೆ ಗೌರವ ಸಲ್ಲಿಕೆ