ಚಿಕ್ಕಿಯ ಫೋಟೋ

ಕಥೆ

ಚಿಕ್ಕಿಯ ಫೋಟೋ

ಮಧುರಾ ಕರ್ಣಮ್

An Afghan school girl peeps through a tattered part of their tent classroom  at Phool-e-Rangeena..., Stock Photo, Picture And Rights Managed Image. Pic.  MWO-MW015722 | agefotostock

“ಚಿಕ್ಕಿ ಇಸ್ಕೂಲಿಗೆ ಬತ್ತೀಯೇನೆ? ಟೇಮಾಗ್ತಾ ಐತೆ” ಎಂದು ಕಮಲಿ ಕೂಗು ಹಾಕಿದಾಗ ಚಿಕ್ಕಿ “ಒಸಿ ನಿಂತ್ಕೊಳ್ಳೆ, ಬಂದೆ” ಎನ್ನುತ್ತ ತಟ್ಟೆಯಲ್ಲಿದ್ದ ತಂಗಳನ್ನ ಮುಗಿಸಿ ಕೈ ತೊಳೆದಳು. ಅಲ್ಲಲ್ಲಿ ಹರಿದ ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿ “ನಾನ್ ಇಸ್ಕೂಲಿಗೆ ಹೋಗ್ಬರ್ತೀನಿ ಕಣವ್ವೋ” ಎಂದು ಕೂಗು ಹಾಕಿದಳು. “ಚಿಕ್ಕಿ, ಹಿಂದೆ ಒಂದ್ನಾಲ್ಕು ಪಾತ್ರೆ ಅವೆ, ತೊಳದ್ಹೋಗೆ” ಎಂಬ ಕೂಗು ಕೇಳಿಸದಂತೆ ಕಮಲಿಯ ಕೈಹಿಡಿದು ಓಡಿದಳು. “ಈ ಅವ್ವ ಹೋಗಾಗಂಟ ಕೆಲ್ಸ ಮಾಡಿದ್ರೂನು ಮತ್ತೆ `ಇದ್ ಮಾಡ್, ಅದ್ ಮಾಡ್, ಅಂತೈತೆ” ಎಂದು ದೂರು ಹೇಳುತ್ತ ನಡೆದಳು. ಅಷ್ಟರಲ್ಲಿ ಕಮಲಿ ಅವಳ ಕಿವಿ ಗಮನಿಸುತ್ತ “ಐ, ಕಿವಿಯೋಲೆ ಹೊಸ್ದೇನೆ? ಎಷ್ಟ ಚೆಂದಾಗೈತೆ” ಎನ್ನುತ್ತ ಮುಟ್ಟಿ ನೋಡಿದಳು. ಚಿಕ್ಕಿ ಇನ್ನೂ ಉತ್ಸಾಹಿತಳಾಗಿ “ಹ್ಞೂಂ ಕಣೇ. ಅಪ್ಪ ಜಾತ್ರೇಲಿಂದ ತಂದಿತ್ತು. ಅವ್ವಂಗ್ ಕೊಡ್ತು. ಅವ್ವ `ಇಂಥಾದ್ ತೊಟ್ಕೊಳಾಕ್ ನಾಯೇನ್ ಸಣ್ಣ ಮಗೀನಾ?’ ಅಂತ ಬೈತು. ಅದ್ಕೆ ಅಪ್ಪ ನನಕ್ಕೊಡ್ತು. ತಕ್ಷಣ ತೊಟ್ಕೊಂಬಿಟ್ಟೆ. ಈಗ ಶಾಲೇಗ್ ಬರೋವಾಗ ಅವ್ವ ನೋಡಿದ್ರೆ `ಬಿಚ್ಚಿಡು’ ಅಂತ ಬೈದು ಗಲಾಟೆ ಮಾಡ್ತಿತ್ತು” ಎಂದು ಹೇಳುತ್ತಾ ನಿಂತಳು. ಕಂಗಳಲ್ಲಿ ಸಂತಸದ ಮಹಾಪೂರ. ಕಮಲಿ ಕೂಡ ಅಷ್ಟೇ ಆನಂದದಿಂದ ತಿರುಗಿಸಿ ನೋಡಿ “ನಕ್‌ಸತ್ರ ಇದ್ದಂಗವೆ ಬಿಡು. ಭೋ ಸಂದಾಕವೆ” ಎಂದು ಪ್ರಶಂಸಿಸುತ್ತಾ ಮುನ್ನಡೆದಳು. 

ಅವರು ಸಾಗಬೇಕಿದ್ದ ದಾರಿ ಇನ್ನೂ ದೂರವಿತ್ತು. ಸುಮಾರು ಎರಡು, ಎರಡೂವರೆ ಕಿ.ಮೀ. ಮಧ್ಯೆ ಹೊನ್ನೆ ದಿಬ್ಬ ದಾಟಿದರೆ ದೊಡ್ಡ ಬಯಲು. ಅದರಾಚೆ ಊರು ಆರಂಭವಾಗುತ್ತಿತ್ತು. ಅಲ್ಲೇ ಸರಕಾರಿ ಶಾಲೆ. ಊರಿನಿಂದ ಇವರ ಕೇರಿ ಬಲು ದೂರ. ಚಿಕ್ಕಿ, ಕಮಲಿ ಇಬ್ಬರೂ ಕೇರಿಯ ಹೂಗಳೇ. ಚಿಕ್ಕಿಯ ಅಪ್ಪ ಗಾರೆ ಕೆಲಸಕ್ಕೆ ಹೋದರೆ ಅವ್ವ ಮನೆ ಕೆಲಸಕ್ಕೆ ಹೋಗುತ್ತಾಳೆ. ಅವಳಿಗೊಬ್ಬ ತಮ್ಮ ಬೇರೆ. ಅವನಿಗೆ ಹುಶಾರಿಲ್ಲದಿದ್ದರೆ ಚಿಕ್ಕಿಯ ಶಾಲೆ ಗೋತಾ. ಈಗ ಅವನನ್ನು `ಲತಾ ಮೇಡಂ’ ಬಳಿ ಬಿಡುತ್ತಿದ್ದಾರೆ. ಅವರು ಆಟವಾಡಿಸುವುದಲ್ಲದೆ “ಅ, ಆ, ಇ, ಈ, ಎ, ಬಿ, ಸಿ, ಡಿ ” ಹೇಳಿಕೊಡುತ್ತಾರೆ. “ಜಾನಿ ,ಜಾನಿ, ಎಸ್ ಪಪ್ಪಾ” ಎಂದು ಅವನ ಬಾಯಲ್ಲಿ ಕೇಳಿದಾಗ ಚಿಕ್ಕಿಯ ಅವ್ವನಿಗೆ ಆನಂದವೋ ಆನಂದ. ಅವನನ್ನು “ಇಂಗ್ಲೀಸ್ ಸಾಲೆಗೆ ಸೇರ‍್ಸಾಣ” ಅಂತಿದಾಳೆ. ಚಿಕ್ಕಿಗೆ ಬೇಜಾರು. ಬಿಸಿಯೂಟ ಕೊಟ್ಟು, ಪುಸ್ತಕ, ಬಟ್ಟೆ ಕೊಟ್ಟರೂ ಚಿಕ್ಕಿ ಶಾಲೆಗೆ ಹೋಗೋದು ಅವಳಿಗಿಷ್ಟವಿಲ್ಲ. ಮನೇಲಿದ್ದರೆ ಕೊಂಚ ಕೆಲಸ ಕಾರ‍್ಯಕ್ಕಾಗುತ್ತೆ ಅಂತ ಧೋರಣೆ. ಚಿಕ್ಕಿಗೆ ಕಲೀಲೇಬೇಕೂಂತ ಆಸೆ. ಎಲ್ಲರ ಥರಾ ಇಂಗ್ಲೀಸಿನಲ್ಲಿ ಪಟ ಪಟ ಅರಳು ಹುರಿದಂತೆ ಮಾತನಾಡಬೇಕು. ದೊಡ್ಡ ನೌಕರಿ ಮಾಡಬೇಕು………ಏನೆಲ್ಲ.ಮತ್ತೆಲ್ಲ. ಅವಳ ಕನಸುಗಳೆಲ್ಲ ಮನೆಯಲ್ಲಿ ಮುಚ್ಚಿ ಕಮಲಿಯ ಮುಂದೆ ಬಿಚ್ಚಿಕೊಳ್ಳುತ್ತವೆ. ಕಮಲಿಯದೂ ಸುಮಾರು ಅದೇ ಸ್ಥಿತಿ.

ಚಿಕ್ಕಿಯ ಬಣ್ಣ ಕಪ್ಪೋ ಕಪ್ಪು. ಎಣ್ಣೆ ಕಾಣದ ಕೂದಲು, ಚಪ್ಪಟೆ ಮೂಗು, ಬತ್ತಿದ ಕೆನ್ನೆಗಳು, ಅವಳಿಗೆ ಹೋಲಿಸಿದರೆ ಕಮಲಿಯೇ ಪರವಾಗಿಲ್ಲ. ಲಕ್ಷಣವಂತೆ. ಆದರೂ ಚಿಕ್ಕಿಗೆ ಸೌಂದರ‍್ಯ ವ್ಯಾಮೋಹ ಜಾಸ್ತಿ. ಒಡೆದ ಕನ್ನಡಿಯ ಮುಂದೆ ನಿಂತು ಮುಖ ನೋಡ್ಕೊಂಡಿದ್ದೇ ಬಂತು. ಪೌಡರ್ ಖಾಲಿಯಾದಾಗ ಮನೆಯಲ್ಲಿದ್ದ ಯಾವುದೋ ಹಿಟ್ಟನ್ನು ಬಳಿದುಕೊಳ್ಳುವ ಮೋಹ. “ಅಕ್ಕಿ ಹಿಟ್ಟು ಮನೇಲಿ ಉಳ್ಸಾಕಿಲ್ಲ ಈ ಕತ್ತೆ” ಎಂದು ಉಗಿಸಿಕೊಂಡರೂ ಬೇಜಾರಿಲ್ಲ. ಇತ್ತೀಚೆಗೆ ಶಾಲೆಯಲ್ಲಿ ಸುಗುಣ, ವಿಮಲ, ಎಲ್ಲ ಮೇಡಮ್‌ಗಳಂತೆ ಪೌಡರ್‌ಗಿಂತ ಮೊದಲು ಅದೇನೋ ಕ್ರೀಮು ತಿಕ್ಕುತ್ತಾರೆಂದು ಗೊತ್ತಾಗಿತ್ತು. ಅದನ್ನೊಂದು ಹೊಂದಿಸಲಾಗಿರಲಿಲ್ಲ.

ಅವಳ ನಿಜವಾದ ಹೆಸರು ಚಿಕ್ಕೀರವ್ವ. ಅದು ಅವಳಜ್ಜಿಯ ಹೆಸರಂತೆ. ಅಜ್ಜಿ ಗತಿಸಿದ ವರ್ಷವೇ ಇವಳು ಹುಟ್ಟಿದ್ದಂತೆ. ಅದಕ್ಕೇ ಅವಳಪ್ಪನಿಗೆ ಅವಳನ್ನು ಕಂಡರೆ ತುಂಬಾ ಪ್ರೀತಿ. `ನಮ್ಮವ್ವಾನೇ ಮತ್ತೆ ಹುಟ್ಟಿ ಬಂದವ್ಳೆ’ ಎಂದು ತಮ್ಮವ್ವನ ಹೆಸರನ್ನೇ ಇಟ್ಟಾಗ ಚಿಕ್ಕಿಯ ಅವ್ವನಿಗೆ ಇರಿಸು-ಮುರಿಸು. `ತಲೆ ಮೇಲೆ ಕೂರಿಸ್ಕೋ ನಿಮ್ಮವ್ವನ್ನ’ ಎಂದು ಕಾಲೆಳೆಯುವುದೂ ಇತ್ತು. ಚಿಕ್ಕಿ ಶಾಲೆಗೆ ಹೋಗುವುದು ಅಪ್ಪನ ಒತ್ತಾಸೆಯಿಂದಲೇ. ಇಲ್ಲದಿದ್ರೆ ಅವಳವ್ವ ಅವಳನ್ನು ಮನೆ ಕೆಲಸಕ್ಕೆ ಕಳಿಸಿ ತಣ್ಣಗಾಗ್ತಿದ್ಲು. ಕಮಲಿಯದೂ ಹೆಚ್ಚು ಕಡಿಮೆ ಇದೇ ಕಥೆಯೇ. ಆದರೆ ಅವಳಿಗೆ ತಮ್ಮನ ಬದಲಾಗಿ ಅಕ್ಕ ಇದ್ದಳು.

ಚಿಕ್ಕಿಗೆ ಫೋಟೋದ ಹುಚ್ಚು. ಜಾತ್ರೆಯಲ್ಲಿ ಅವರಪ್ಪ ತೆಗೆಸಿದ್ದ ಹಳೆಯ ಫೋಟೋ ಬಿಟ್ಟರೆ ಫೋಟೋಗಳೇ ಇರಲಿಲ್ಲ. ಅಪ್ಪನಿಗೆ ದುಂಬಾಲು ಬಿದ್ದರೂ “ಮುಂದಿನ ಜಾತ್ರೇಲಿ ತೆಗೆಸಾಣಂತೆ ಸುಮ್ಕಿರು” ಎಂದು ಬಿಟ್ಟಿದ್ದ. ಮಗುವಾಗಿದ್ದಾಗಿನ ಒಂದೇ ಒಂದು ಫೋಟೋ ಮಸುಕಾಗಿ ಹೀನಾಯ ಸ್ಥಿತಿಗೆ ತಲುಪಿತು. ಆದರೂ ಅದನ್ನು ದೇವರ ಪುಸ್ತಕದ ಮಧ್ಯೆ ಇಟ್ಟು ಜೋಪಾನ ಮಾಡಿದ್ದಳು. ಮದುವೇಲಿ ಅಷ್ಟೊಂದು ಫೋಟೋ ತಗೀತಾರೇಂದ್ರೆ ಅದಕ್ಕೋಸ್ಕರ ಮದುವೆಯಾಗಲೂ ಸಿದ್ಧವಿದ್ದಳು ಚಿಕ್ಕಿ. ಹನ್ನೆರಡು-ಹದಿಮೂರರ ವಯಸ್ಸಾದರೂ ಇನ್ನೂ ಪೀಚು ಪೀಚಾಗಿ ಎಳೇ ಮಕ್ಕಳಂತಿದ್ದಳು. ಇಬ್ಬರೂ ಕಿವಿಯೋಲೆ, ಮೇಷ್ಟ್ರುಗಳ ಬಗ್ಗೆ ಮಾತನಾಡುತ್ತಲೇ ಹೊನ್ನೆ ದಿಬ್ಬದ ಹತ್ತಿರ ಬಂದಿದ್ದರು.

ದಿಬ್ಬ ಬಳಸಿ ಮಕ್ಕಳು ಬಯಲಿಗೆ ಬಂದಾಗ ನಿತ್ಯ ಬಣಗುಡುತ್ತಿದ್ದ ಖಾಲೀ ಬಯಲಿನಲ್ಲೊಂದು ಟೆಂಟು. ಒಂದಷ್ಟು ಜನ ನೆರೆದಿದ್ದಾರೆ. ಪ್ಯಾಟೆಯವರಂತಿದ್ದಾರೆ. ಒಬ್ಬ ಮೇಕಪ್ ಮ್ಯಾನ್ ಹುಡುಗಿಯ ಮುಖಕ್ಕೆ ಬಣ್ಣ ಬಳಿಯುತ್ತಿದ್ದಾನೆ. ಚಿಕ್ಕಿ ಕಮಲಿಯ ಕೈ ಅದುಮಿ ಖುಷಿಯಿಂದ “ಐ ಕಮಲಿ, ಅಲ್ನೋಡೇ ಸೂಟಿಂಗ್ ಐತೇನೋ, ಓಗಾಣ, ನೋಡಾಣ” ಎಂದು ಕುಪ್ಪಳಿಸಿದಳು. ಕಮಲಿಗೂ ಉತ್ಸಾಹ. “ಏನೋ ನಡೀತಿರ‍್ಬೋದು ಕಣೆ. ಆದ್ರೆ ಶಾಲೆಗ್ ಲೇಟಾದ್ರೆ ದಾನಪ್ಪ ಮೇಷ್ಟ್ರು ಬೈಯಾಕಿಲ್ವಾ? ಬಿಸಿಯೂಟ ತಪ್ಪೋಗ್ ಬಿಟ್ರೆ?” ಎನ್ನುತ್ತಾ ನಿಂತಳು. “ಅಯ್ಯ, ದಾನಪ್ಪ ಮೇಷ್ಟಿçಗ್ ತಾನೆ, `ಅವ್ವಂಗ್ ಹುಸಾರಿಲ್ಲ. ಕೆಲಸದ ಮನೆಗ್ಹೋಗಿ ಬಂದ್ವಿ’ ಅಂತ ಕಣ್ಣೀರಾಕ್ಕೊಂಡ್ ಯೋಳಿದ್ರೆ ಸುಮ್ಗಾಗ್ತಾರೆ ಬಾ” ಎಂದು ಕೈಹಿಡಿದು ಎಳೆದುಕೊಂಡೇ ಹೋದಳು.

ದೊಡ್ಡ ಟೆಂಟಿನ ಹೊರಭಾಗದಲ್ಲೇ ಒಂದಿಬ್ಬರು ವಿವಿಧ ಬಗೆಯ ಕ್ಯಾಮೆರಾಗಳನ್ನಿಟ್ಟುಕೊಂಡು ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ದೊಡ್ಡ ಕಟೌಟ್. ಅದರ ಮೇಲೆ ಭೂಮಿ ಬಿರಿದು ಛಿದ್ರವಾಗುತ್ತಿರುವ ದೃಶ್ಯದ ಚಿತ್ರ. ಕೆಳಗೆ `ಪರಮಾಣು ಬೇಡ. ಪರಿಸರ ಉಳಿಸಿ’ ಎಂಬ ಘೋಷಣೆ. ಇನ್ನಿತರ ಏನೇನೋ ಫಲಕಗಳು ಸಿದ್ಧವಾಗುತ್ತಿದ್ದವು. ಅಲ್ಲೇನೋ ಪರಮಾಣು ರಿಯಾಕ್ಟರ್ ಬರುವ ಸುದ್ದಿಯಿತ್ತು. ಆದರೂ ಹಳ್ಳಿಗರಿಗೆ ಇದರ ಬಗ್ಗೆ ಜಾಸ್ತಿ ಗೊತ್ತಿಲ್ಲ. ಊರವರಿಗಂತೂ ಇವರು ಬಂದ ವಿಚಾರವೇ ಗೊತ್ತಿಲ್ಲ. ಇಲ್ಲವಾದಲ್ಲಿ ಆಗಲೇ ಅರ್ಧ ಊರು ಅಲ್ಲಿ ನೆರೆದಿರುತ್ತಿತ್ತು.

“ಇದು ಸಾಲಲ್ಲ ವಿನೀತ್, ಇನ್ನೂ ಇಫೆಕ್ಟಿವ್ ಆಗರ‍್ಬೇಕು. ನೋಡಿದಾಕ್ಷಣ ಹೃದಯಕ್ಕೆ ತಟ್ಟುವಂತಿರಬೇಕು. ಕಂಗಳಿಂದ ನೀರು ಒಸರಬೇಕು. ಅಂತದ್ದೊಂದು ಆ್ಯಡ್ ಮಾಡಬೇಕು. ಅಂತಹ ಫೋಟೋ ಬೇಕು. ಈ ಭೂಮಿಯ ಚಿತ್ರಗಳೆಲ್ಲ ಹಳೆಯವಾದ್ವು. ಜನರಿಗೆ ಇವುಗಳಲ್ಲೇನೂ ಸೆಂಟಿಮೆಂಟ್ಸ ಉಳಿದಿಲ್ಲ” ಎಂದು ಗುಂಗುರು ಕೂದಲು ಬಾಚಿಕೊಳ್ಳುತ್ತಿದ್ದ ಹುಡುಗಿ ಸ್ಯಾಂಡ್ರಾ ಹೇಳಿದಾಗ ಕ್ಯಾಮೆರಾ ಹಿಡಿದ ಇಬ್ಬರ ಜೊತೆಗೆ ಇನ್ನಿಬ್ಬರು `ಹ್ಞೂಂ’ ಗುಟ್ಟಿದರು. ಗಡ್ಡದವನೊಬ್ಬ “ಏನಾದ್ರೂ ಡಿಫರೆಂಟ್ ಮಾಡ್ಬೇಕು. ಟಚಿಂಗ್, ಯು ನೋ ಟಚಿಂಗ್” ಎನ್ನುತ್ತ ಗಡ್ಡ ಕೆರೆದ. ಅಷ್ಟರಲ್ಲಿ ಇನ್ನೊಬ್ಬನ ಕ್ಯಾಮೆರಾ ಕಣ್ಣಿಗೆ ಹತ್ತಿರ ಬರುತ್ತಿದ್ದ ಹುಡುಗಿಯರು ಕಂಡರು.

“ಏ, ಇಲ್ಲಿಗೇಕೆ ಬಂದ್ರಿ? ಹ್ಞಾಂ! ಏನ್ಕೆಲಸ ಇಲ್ಲಿ? ನಿಮಗೆ. ಹೋಗಿ, ಹೋಗಿ” ಎಂದು ಗದರಿಸಿದ ಕೈಯಲ್ಲಿ ಕೂಲಿಂಗ್ ಗ್ಲಾಸ್ ಹಿಡಿದ ವಿನೀತ್. ಇಬ್ಬರೂ ಹುಡುಗಿಯರು ಗಕ್ಕೆಂದು ನಿಂತರು. ಕಮಲಿ ಹೊರಡೋಣವೆಂದು ಕೈ ಹಿಡಿದು ಹಿಂದಕ್ಕೆ ಎಳೆದರೆ ಚಿಕ್ಕಿ ಅವಳ ಕೈ ಹಿಡಿದುಕೊಂಡೇ ಭದ್ರವಾಗಿ ನಿಂತಳು. “ಏನ್ಬೇಕು?” ಎಂದ ಇನ್ನೊಬ್ಬ. ಚಿಕ್ಕಿ ಗಟ್ಟಿ ಧರ‍್ಯ ಮಾಡಿ “ಫೋಟೋ ತೆಗೆಸ್ಕೋಬೇಕು” ಎಂದಳು ಕ್ಷೀಣವಾಗಿ. “ಫೋಟೋನಾ, ನಿಮ್ದಾ?” ಎನ್ನುತ್ತ ಎಲ್ಲರೂ ಒಂದು ಸುತ್ತು ಗಹಗಹಿಸಿ ನಕ್ಕರು.

ಚಿಕ್ಕಿ, ಕಮಲಿಯರ ಕಣ್ಣುಗಳಲ್ಲಾಗಲೇ ನೀರು ಒಸರಿತ್ತು. “ನಿಮ್ ಫೋಟೋ ತೆಗೆಯಕ್ಕೆ ನಾವು  ಇಲ್ಲೀಗೂ ಬಂದ್ವಿ ಅನ್ಕೊಂಡ್ರಾ? ಹೋಗಿ, ಹೋಗಿ, ಶಾಲೆಗ್ ಹೋಗಿ” ಎಂದು ಗದರಿದ. “ಹೇಯ್, ಸ್ಟಾಪ್. . . .ಲಿಸನ್. . . .ನಿಮಗೆ ಫೋಟೋ ತೆಗೀಬೇಕಾ? ಇಲ್ಲಿ ಬನ್ನಿ ತೆಗೆಯೋಣ” ಎಂದು ಕರೆದಳು ಸ್ಯಾಂಡ್ರಾ. ಕಮಲಿಗೇನೊ ಹೆದರಿಕೆ. `ಬ್ಯಾಡ’ ಎನ್ನುತ್ತ ಹಿಂಜರಿದಳು. ಚಿಕ್ಕಿ ಮಾತ್ರ ಆಸೆ ತುಂಬಿದ ಕಂಗಳಿAದ ಮುಂದೆ ಬಂದಳು. ವಿನೀತ್ “ನಿನಗೇನು ಕೆಲಸವಿಲ್ಲವಾ ಸ್ಯಾಂಡ್ರಾ? ನಾಳೆ ಇಲ್ಲೀದೆಲ್ಲ ಪೇರ‍್ನಲ್ಲಿ ಬರುತ್ತೆ. ಮಧ್ಯಾಹ್ನ ಉಳಿದ ಎನ್.ಜಿ.ಓ.ದವರೆಲ್ಲ ರ‍್ತಾರೆ. ಪ್ರೊಟೆಸ್ಟ್ ಮಾಡ್ಬೇಕು. ಈ ಹಳ್ಳಿಮುಕ್ಕರ ಫೋಟೋ ತೆಗೀತಾ ಕೂತ್ಕೊ” ಎಂದು ಕೋಪಗೊಂಡ.

“ಪ್ಲೀಸ್, ಎಲ್ರೂ ಎರಡು ನಿಮಿಷ ಸುಮ್ಮನಿರಿ” ಎಂದ ಸ್ಯಾಂಡ್ರಾ ಚಿಕ್ಕಿಯನ್ನು ಹತ್ತಿರ ಕರೆದಳು. “ನಿನ್ನ ಫೋಟೋ ತೆಗೀತೀನಿ. ಚಾಕಲೇಟೂ ಕೊಡ್ತೀನಿ. ನಾನ್ಹೇಳಿದಂತೆ ಪೋಸ್ ಕೊಡ್ತೀಯಾ” ಎಂದು ಕೇಳಿದಳು. “ಅಂಗಂದ್ರೆ?” ಚಿಕ್ಕಿ ಅಮಾಯಕಳಂತೆ ಪ್ರಶ್ನಿಸಿದಾಗ “ಊಂ, ನಗ್ತೀಯಾ, ಕೂಡ್ತೀಯಾ, ನಿಲ್ತೀಯಾ………?” ಎನ್ನುತ್ತ ಸ್ಯಾಂಡ್ರಾ ಕಷ್ಟಪಟ್ಟು ಉತ್ತರಿಸಿದಳು. “ಓ… ” ಎಂದ ಚಿಕ್ಕಿ ಮತ್ತೆ ಮೇಕಪ್‌ಮ್ಯಾನ್‌ನತ್ತ ಕೈತೋರಿದಳು. “ಓ ಹೊ ಹೋ……” ಎಂದು ಬಾಯಿಗೆ ಕೈ ಅಡ್ಡ ಇಟ್ಟು ನಕ್ಕ ಸ್ಯಾಂಡ್ರಾ “ಗೋಪಾಲ್, ಇವಳಿಗೆ ಮೇಕಪ್ ಮಾಡು” ಎಂದಳು. ಮುಂದೆ ಇಂಗ್ಲೀಷಿನಲ್ಲಿ ಏನ್ಹೇಳಿದಳೋ ಚಿಕ್ಕಿಗೆ ತಿಳಿಯಲಿಲ್ಲ. ಸ್ಕೂಲ್ ಬ್ಯಾಗ್ ಎಸೆದು ಕಮಲಿಯನ್ನೂ ಬಿಟ್ಟು ಓಡಿ ಹೋದಳು. ಬಂದ ದಾರಿಗೆ ಸುಂಕವಿಲ್ಲದಂತೆ ತಿರುಗಿದ ಕಮಲಿಯನ್ನು ಸ್ಯಾಂಡ್ರಾ ಹತ್ತಿರ ಕರೆಯುತ್ತ “ಇಲ್ಬಾ, ನೀನು ಗುಡ್ ಗರ್ಲ್ ಅಲ್ಲವಾ? ಚಾಕಲೇಟ್ ಕೊಡ್ತೀನಿ. ಅಲ್ಲಿರೋ ಮುಳ್ಳು, ಕಂಟಿಗಳನ್ನು ಆಯ್ದು ತರ‍್ತೀಯಾ?” ಎಂದು ಕೇಳಿದಳು. “ಕಮಲಿ, ತಕಂಬಾರೆ, ಫೋಟೋ ತೆಗೆಸ್ಗೊಂಡು ಇಬ್ರೂ ಬಿರ‍್ನೆ ಶಾಲೆಗೆ ಹೊಂಟು ಬಿಡಾಣ” ಎಂದು ಚಿಕ್ಕಿ ಕೂಗಿದಾಗ ಕಮಲಿಗೆ ಬೇರೆ ದಾರಿಯಿಲ್ಲ. ಚೀಲವಿಟ್ಟು ಆರಿಸಲು ನಡೆದಳು.

ಸುತ್ತೆಲ್ಲ ಜನರಿಗೂ ಕುತೂಹಲ. ಸುಮ್ಮನೆ ನೋಡುತ್ತಿದ್ದರು. ಗೋಪಾಲನ ಮೇಕಪ್‌ನಲ್ಲಿ ಚಿಕ್ಕಿಯ ಕೆನ್ನೆ ಇನ್ನೂ ಬತ್ತಿತು. ಕಣ್ಣು ಆಳಕ್ಕಿಳಿದಿದ್ದವು. ಜಡೆ ಬಿಚ್ಚಲು ಹೇಳಿದ ಸ್ಯಾಂಡ್ರಾ ಕ್ಯಾಮೆರಾದಲ್ಲಿ ಅವಳನ್ನು ನಿಲ್ಲಿಸಿ, ಕೂಡಿಸಿ ಎರಡು ಫೋಟೊ ತೆಗೆದಳು. ಚಿಕ್ಕಿಗೆ ಖುಷಿಯೋ ಖುಷಿ. ಇನ್ನೂ ಹಲ್ಕಿರಿದಳು. ಉಹ್ಞೂಂ, ಅವಳಿಗೆ ತೃಪ್ತಿಯಾಗಲಿಲ್ಲ. ಕಮಲಿ ತಂದ ಮುಳ್ಳು-ಪೊದೆಗಳನ್ನು ಹರಡಿ ಅದರ ಪಕ್ಕ ಕುಳಿತುಕೊಳ್ಳಲು ಹೇಳಿದಳು. ಮಲಗಿಕೊಳ್ಳಲು ಹೇಳಿದಳು. ಮಲಗಿದ ಚಿಕ್ಕಿಗೆ ಅಲ್ಲೇ ಮೇಕಪ್. ಮತ್ತೆ ಮತ್ತೆ ಕೂದಲು ಕೆದರುವುದೂ ಇದ್ದೇ ಇತ್ತು. ಆಗಲೂ ಸಮಾಧಾನವಾಗದ ಸ್ಯಾಂಡ್ರಾ ಚಿಕ್ಕಿಯ ಸಮವಸ್ತ್ರ ತೆಗೆದು ಒಳಗಿನ ಹರಿದ ಪೆಟಿಕೋಟ್ ಮೇಲೆ ಮಲಗಿಸಿ ಭಂಗಿ ಸರಿಪಡಿಸಿದಳು. ಪಕ್ಕದಲ್ಲೇ ಒಂದು ಫಲಕವನ್ನಿಟ್ಟಳು. ಚಿಕ್ಕಿಗೆ ಇಷ್ಟು ಜನರ ಮುಂದೆ ಮಲಗುವುದು, ಅದೂ ಹರಿದ ಪೆಟಿಕೋಟ್ ಮೇಲೆ ಅವಮಾನವೆನಿಸಿದರೂ ವಿಧಿಯಿರಲಿಲ್ಲ. ಒಪ್ಪಿಕೊಂಡಾಗಿತ್ತಲ್ಲ. “ಐ ಸೀ, ಗುಡ್” ಎಂಬ ಉದ್ಗಾರಗಳು ಕೇಳಿ ಬಂದವು.

ಸಮವಸ್ತ್ರ ಧರಿಸಿದ ಚಿಕ್ಕಿಯ ಮೇಕಪ್ ಒರೆಸಿದ ಗೋಪಾಲ್. ಸ್ಯಾಂಡ್ರಾ ಇಬ್ಬರ ಕೈಗೂ ಒಂದೊಂದು ಚಾಕಲೇಟನ್ನಿಟ್ಟಳು. “ನನ್ನ ಫೋಟೊ ಯಾವಾಗ ಕೊಡಾದು?” ಎಂದು ಕೇಳಿದ ಚಿಕ್ಕಿಗೆ ಸ್ಯಾಂಡ್ರಾ ನಗುತ್ತ “ನಾಳೆ ಬಿಟ್ಟು ನಾಡಿದ್ದಲ್ಲಿ ಪೇಪರ‍್ನಲ್ಲಿ ಬರುತ್ತೆ. ನೋಡ್ಕೊ.” ಎಂದಳು. ಚಿಕ್ಕಿಗೆ ಖುಷಿಯೋ ಖುಷಿ. “ಯಾವ ಪಫರ‍್ನಲ್ಲಿ ಬತ್ತದೆ?” ಎಂದು ಕೇಳಿದವಳಿಗೆ ಸ್ಯಾಂಡ್ರಾ “ಇಂಗ್ಲೀಷ್ ಪೇಪರ್ `ಟೈಮ್ಸ್ ಆಫ್ ಇಂಡಿಯಾ’ ದಲ್ಲಿ ಬರುತ್ತೆ. ಇಲ್ಲಿ ನಡೆದ್ದೆಲ್ಲ ಯಾರಿಗೂ ಹೇಳ್ಬೇಡಿ. ಫೋಟೋ ಬಂದ ಮೇಲೆ ನೋಡಿ. ಈಗ ಶಾಲೆಗೆ ಓಡಿ” ಎಂದು ಕಳಿಸಿದಳು ಸ್ಯಾಂಡ್ರಾ. ಚಿಕ್ಕಿ ದೂರ ನಿಂತು ಕಾಯುತ್ತಿದ್ದ ಕಮಲಿಯತ್ತ ಓಡಿದಳು.

“ಕಮಲಿ, ನಾ ಫೋಟೊ ತಗೀವಾಗ ನಗ್ತಿದ್ನ? ಚೆಂದಾಕ ಬಿದ್ದದಾ ನನ್ನ ಫೋಟೊ?” ಅತಿ ಉತ್ಸಾಹ ಅವಳಿಗೆ. ಕಮಲಿಗೆ ಅಷ್ಟೇನೂ ಆನಂದವಿಲ್ಲ. ತನ್ನ ಫೋಟೊ ಬರಲಿಲ್ಲವೆಂದು ಕೊಂಚ ಅಸೂಯೆ ಕಾಡಿತ್ತು. “ಸಾಲ್ಯಾಗೆ, ಮನ್ಯಾಗೆ ಏನೇನೂ ಹೇಳಾದು ಬೇಡ ಕಮಲಿ, ಆ ಯಮ್ಮ ಪೇಪರ್ ಬರಾಗಂಟ ಯೋಳ್ಬೇಡ ಅಂದವ್ಳೆ. ಇಲ್ಲಾಂದ್ರೆ ಈವೊತ್ತೆ ಸುಗುಣ, ವಿಮಲ, ಸುನೀತರಿಗೆ ಯೋಳ್ತಿದ್ದೆ. ಪೇಪರ‍್ನಲ್ಲಿ ಫೋಟೊ ಬಿದ್ದರೆ ಎಲ್ಲಾರೂ ನೋಡ್ತಾರೆ ಅಲ್ವಾ? ಇಡೀ ದೇಶಕ್ಕೆ ಬತ್ತದಂತೆ ಪೇಪ್ರು. ಅಷ್ಟು ಜನಾ ನನ್ನ ನೋಡ್ತಾರೆ. ಮೇಷ್ಟಿçಗೂ ಗೊತ್ತಾಯ್ತದೆ. ಅವ್ವಂಗ್ ತೋರಿಸಿದ್ರೆ ಬಾಯ್ ಮೇಲೆ ಬೆರಳಿಟ್ಕಂತಾಳೆ. ಬರೀ ತಮ್ಮಂದೇ ಚಿಂತೆ ಅವ್ಳಿಗೆ. ನನ್ ಕಡೆ ಗ್ಯಾನಾನೇ ಇಲ್ಲ……….” ಚಿಕ್ಕಿಯ ಎಲ್ಲ ಮಾತುಗಳಿಗೂ ಕಮಲಿ `ಹ್ಞೂಂ’ ಗುಟ್ಟುತ್ತ ನಡೆದಿದ್ದಳು. ಅವಳಿಗೇನೋ ನಿರಾಸೆ. “ನೀನ್ ಯಾರ ತಾವನೂ ಯೋಳ್ಬೇಡ ಮತ್ತೆ ” ಎಂದು ಚಿಕ್ಕಿ ಕೈ ಅಲುಗಿಸಿ ಹೇಳಿದಾಗ ಕಮಲಿ ತಲೆ ಮೇಲೆ ಕೈ ಇಟ್ಟುಕೊಂಡು “ನನ್ನಾಣೆ, ದೇವ್ರಾಣೆ. ಯೋಳಲ್ಲ” ಎಂದ ಮೇಲೆ ಸುಮ್ಮನಾದದ್ದು. ಇಷ್ಟೆಲ್ಲ ಮಾತುಗಳ ಮಧ್ಯೆ ಶಾಲೆ ಹತ್ತಿರ ಬಂದಿತ್ತು. ಯಾರೋ ತನಿಖಾಧಿಕಾರಿ ಬಂದಿದ್ದರಿಂದ ಎಲ್ಲರೂ ಹೆಡ್‌ಮೇಷ್ಟ್ರ ರೂಮಲ್ಲಿ ಒಂದುಗೂಡಿದ್ರು. ದಾನಪ್ಪ ಮೇಷ್ಟ್ರಿಗಂತೂ ತುಂಬಾ ಕೆಲಸ. ಇವ್ರು ಬಂದದ್ದೂ ಗಮನವಿಲ್ಲ. ಗೆಳತಿಯರಿಗೆಲ್ಲ ಹಾರಿಕೆಯ ಉತ್ತರ ಕೊಟ್ಟು ಪಾರಾಗಿದ್ದರು.

ಮರುದಿನ ಹೇಗೆ ಕಳೆದಳೋ ಚಿಕ್ಕಿ. `ನಾಳೇನೇ ಪೇಪರ‍್ನಾಗೆ ಬತ್ತದೆ’ ಎಂಬ ಉತ್ಸಾಹ. `ಫೋಟೋ ಹೇಗೆ ಬಿದ್ದಿರಬೌದು?’ ಎಂಬ ಕಾತುರ. ಅವ್ವ, ಅಪ್ಪ ನೋಡಿದ್ರೆ ಏನ್ಹೇಳಬೌದು? ನನ್ಮಗಳ ಫೊಟೊ ಪೇಪರ‍್ನಾಗೆ ಬಿದ್ದದೆ’ ಅಂತ ಊರ‍್ಗೆಲ್ಲ ತೋರ್ಸಾಕಿಲ್ವ?’ ಏನೇನೋ ಸವಿಗನಸುಗಳು. ರಾತ್ರಿಯೆಲ್ಲ ಫೋಟೋದ ಕನವರಿಕೆ. ಬೆಳಿಗ್ಗೆ ಬೇಗ ಎದ್ದು ಮುಸುರೆ ತೊಳೆದು, ಕಸ ಗುಡಿಸಿ ಅವ್ವನನ್ನು ಖುಷಿ ಪಡಿಸಿ “ಅವ್ವಾ, ಎಲ್ಡ್ರುಪಾಯಿ ಕೊಡವ್ವಾ” ಎಂದಾಗ ಗಾಬರಿಯಿಂದ ಅವ್ವ“ಯಾಕೇಳು? ಸೆಗಣಿ ತಿನ್ನಕ್ಕಾ?” ಎಂದು ತಲೆ ಮೊಟಕಿದಳು. ಚಿಕ್ಕಿ ತಲೆ ಕೆರೆಯುತ್ತ “ಇಲ್ಲವ್ವ, ಇಂಗ್ಲೀಸ್ ಮೇಸ್ಟ್ರು ಬೇಡವ್ರೆ. `ಎಲ್ರೂವೆ ಪೇಪರ್ ತಂದು ಅದರಾಗಿರೊ ಅಕ್ಸರಾ ಗುರ್ತು ಹಿಡಿದು ಓದಾದು ಕಲೀಬೇಕು’ ಅಂತ ಯೋಳವ್ರೆ. ಕೊಡವ್ವ” ಎಂದು ಕಾಡಿದಳು. ಒಳಗೆ ಮಲಗಿದ್ದ ಅಪ್ಪನಿಗೆ ಕೇಳಿಸಿತು. “ವೋದಕ್ಕೆ ಕೇಳ್ತದಲ್ಲ ಕೂಸು, ಮತ್ತೆಂತಾದಕ್ಕಿಲ್ಲ. ಕೊಟ್ಕಳಸು” ಎಂದು ಆಜ್ಞೆ ಮಾಡಿದ. ಸಿಡಿ-ಮಿಡಿಗುಟ್ಟುತ್ತಲೇ ಕೊಟ್ಟವಳ ಕೈಯಿಂದ ಈಸ್ಕೊಂಡು ಒಂದೇ ಓಟ ಕಮಲಿಯ ಮನೆಗೆ. ಅದೇ ತಾನೇ ಎದ್ದು ಕಣ್ಣುಜ್ಜುತ್ತಿದ್ದ ಕಮಲಿಯನ್ನೆಳೆದುಕೊಂಡು “ಲೇಟಾದ್ರೆ ಇಂಗ್ಲೀಸ್ ಪೇಪರ್ ಖಾಲಿಯಾಗ್ತವೆ” ಎನ್ನುತ್ತ ಸಾಬಿಯ ಅಂಗ್ಡಿಗೆ ಓಡಿದಳು.

ನಿತ್ಯ ಬೀಡಿ-ಕಾಡಿ ಅಪ್ಪನಿಗಾಗಿ ಒಯ್ಯುವ ಚಿಕ್ಕಿ ಈವತ್ತು ಇಂಗ್ಲೀಷ್ ಪೇಪರ್ ಕೇಳಿದ್ದು ಸಾಬಿಗೇ ಆಶ್ಚರ್ಯ “ಇಂಗ್ಲೀಷ್ ಯಾರಿಗೆ ಒದಾಕೆ ಬತ್ತದೆ ಮನೇಲಿ? ಕನ್ನಡ ಪೇಪರ್ ಕೊಡ್ಲಾ?” ಎಂದ. ಚಿಕ್ಕಿ “ಉಹ್ಞೂಂ; ಇಂಗ್ಲೀಸೇ ಬೇಕು. ನೆಂಟರು ಬತ್ತವ್ರೆ” ಎನ್ನುತ್ತ ಉಗುಳು ನುಂಗಿದಳು. “ಓ ಅಂಗಾ” ಎಂದ ಸಾಬಿ ಕೊಟ್ಟು ಕಳಿಸಿದ. ಇಬ್ಬರೂ ಆಲದ ಮರದ ಬುಡದಲ್ಲಿ  ಕುಳಿತು ಮೈಯೆಲ್ಲ ಕಣ್ಣಾಗಿ ನೋಡಿದರು. ಎಲ್ಲೂ ಫೋಟೊ ಕಾಣಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ನೋಡಿದರೂ ಪ್ರಯೋಜನವಾಗಲಿಲ್ಲ. ಕಮಲಿ “ಇಲ್ಲಾ ಕಣೇ, ಇದರಲ್ಲಿ ಫೋಟೊ ಬಿದ್ದಿಲ್ಲ. ಈವತ್ತಲ್ಲ ನಾಳೆ ಬರಬೌದು. ನಾ ಮನೇಗ್ ಹೋಗ್ತೀನಿ. ಭೋ ಕೆಲ್ಸ ಅದೆ. ಎದ್‌ಗಳಿಗ್ಗೇ ಬಂದಿದೀನಿ. ಅವ್ವ ಬೈತದೆ” ಎಂದು ಗೆಳತಿಯ ಕೈ ಹಿಡಿದು ಸಂತೈಸಿ ಓಡಿದಳು.

ಚಿಕ್ಕಿಗೋ ಭಾರೀ ನಿರಾಸೆ. ಭ್ರಮನಿರಸನ. ನಂಬಲೇ ಸಾಧ್ಯವಾಗುತ್ತಿಲ್ಲ. ಅಷ್ಟೆಲ್ಲ ಮೇಕಪ್ ಮಾಡಿ ಫೋಟೊ ತೆಗೆದ್ರೂ ಬಿದ್ದಿಲ್ಲ ಅಂದ್ರೆ……..`ಆ ಬಿಳೀ ಮೆಡಂ ಚಾಕಲೇಟ್ ಕೊಟ್ಟು ನಾಳೆ ಅಂತ ಯೋಳಿದ್ದಲ್ವ?’ ಮತ್ತೆ ಪೇಪರ್ ತೆಗೆದು ಮೊದಲಿನಿಂದ ಕೊನೆಯವರೆಗೂ ನೋಡಿ ಇಟ್ಟಳು. ಮೊದಲ ಪುಟದ ಫೋಟೋ, ಅದೇ ಯಾರೋ ಮಲಗಿದಂತಿತ್ತು. ಮತ್ತೊಮ್ಮೆ ನೋಡಿದಳು. ಪಕ್ಕದಲ್ಲೇ ಫಲಕವಿದೆ. `ಅಣು ವಿಕಿರಣದಿಂದ ಪರಿಸರ ನಾಶ, ಜೀವನ ನಾಶ’ ಎಂಬ ಬರಹವಿದೆ. ಪಕ್ಕದಲ್ಲೇ ಹುಡುಗಿಯೊಬ್ಬಳು ಸತ್ತು ಬಿದ್ದ ಫೋಟೊ, ಅದೂ ಮುಳ್ಳು ಕಂಟಿಗಳ ಮಧ್ಯೆ. ಚಿಕ್ಕಿ ಆ ಚಿತ್ರವನ್ನು ಮತ್ತೆ ಗಮನಿಸಿದಳು. ಅದು ತನ್ನದೇ ಎಂದು ಯಾವ ದೃಷ್ಟಿಕೋನದಿಂದಲೂ ಗೊತ್ತಾಗುತ್ತಿಲ್ಲ. ಆದರೆ ಆ ಕಿವಿಯೋಲೆ…ಹ್ಞಾಂ, ನಕ್ಷತ್ರದ ಕಿವಿಯೋಲೆ ತನ್ನದೇ. ಹಾಗಾದರೆ ಈ ಫೋಟೊ ತನ್ನದೇ. ಹೀಗೆ ತನ್ನನ್ನು ಸತ್ತು ಬಿದ್ದಂತೆ ತೋರಿಸಿದ್ದಾ……? ಮೇಡಮ್, ಮೇಕಪ್‌ಮ್ಯಾನ್‌ನಿಂದ ಹಿಡಿದು ಎಲ್ಲರ ಮುಖಗಳೂ ಅವಳ ನೆನಪಲ್ಲಿ ಮೂಡಿ ಬಂದವು. ಕಣ್ಣ ಹನಿಗಳು ಜಾರಿ ಪೇಪರ‍್ನಲ್ಲಿನ ಫೋಟೊ ಕಲಸಿಹೋಯಿತು.

ಇತ್ತ ಆಫೀಸ್‌ನಲ್ಲಿ “ಕನ್‌ಗ್ರಾಚುಲೇಷನ್ಸ ಸ್ಯಾಂಡ್ರಾ, ಫೆಂಟಾಸ್ಟಿಕ್, ಟಚಿಂಗ್ ಫೋಟೊ, ಸೂಪರ್ಬ” ಇತ್ಯಾದಿ ಪ್ರಶಂಸೆಗಳಿಂದ ಸ್ಯಾಂಡ್ರಾ ಉಬ್ಬಿಹೋಗಿದ್ದಳು. ವಿನೀತ “ಪಾಪ, ಆ ಹುಡುಗಿ ಎಷ್ಟ್ ಆಸೆಯಿಂದ ಬಂದಿತ್ತೊ? ಈ ಫೋಟೊ ನೋಡಿದ್ರೆ……….” ಎಂದು ಲೊಚಗುಟ್ಟಿದ. “ಅವಕ್ಕೆಲ್ಲಿ ಓದಕ್ ಬರುತ್ತೋ” ಎಂದು ಕೂದಲು ಹಾರಿಸಿ ನಕ್ಕಳು ಸ್ಯಾಂಡ್ರಾ.

*********

One thought on “ಚಿಕ್ಕಿಯ ಫೋಟೋ

  1. ಬಣ್ಣದ ಮಂದಿಯ ಬಣ್ಣದಾಟವನ್ನರಿಯದ ಮುಗ್ಧ ಮನಸಿನ ಚಿತ್ರಣ ಹೃದಯ ಸ್ಪರ್ಶಿಯಾಗಿದೆ

Leave a Reply

Back To Top