ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ರುದ್ರಭೂಮಿಯಲೇ ಜ್ಞಾನೋದಯ             ಅಲ್ಲಮಪ್ರಭು ಭಾರತೀಯ ದಾರ್ಶನಿಕ ಚರಿತ್ರೆಯಲ್ಲಿ ಬಹಳ ದೊಡ್ಡ ಹೆಸರು. ಹನ್ನೆರಡನೆಯ ಶತಮಾನದ ಬಹುದೊಡ್ಡ ತಾತ್ವಿಕ ವಚನಕಾರ. ಇವನಷ್ಟು ನಿಖರ, ನೇರ ಮತ್ತು ಸ್ಪಷ್ಟವಾಗಿ ತಾತ್ವಿಕ ಸಂಘರ್ಷಕ್ಕೆ ನಿಲ್ಲುವ ಮತ್ತೊಬ್ಬನನ್ನು ಹುಡುಕಿದರೂ ವಚನಕಾರರಲ್ಲಿ ಸಿಕ್ಕುವುದು ಬಹಳ ಕಷ್ಟ ಮತ್ತು ವಿರಳ. ಸಾಮಾಜಿಕ ಸುಧಾರಣೆಯೇ ಪ್ರಮುಖ ಧ್ಯೇಯವಾಗಿ ನಡೆದ ಚಳುವಳಿಯ ಉಪೋತ್ಪನ್ನವಾಗಿ ಹುಟ್ಟಿದವು ವಚನಗಳು. ಕೊಂಡುಗೊಳಿ ಕೇಶಿರಾಜನಿಂದ ಕೊನೆ ಕೊನೆಯ ವಚನಕಾರನೆಂದು ಕರೆವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ಈ ವಚನ ಚಳುವಳಿಯ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ಹರಿದಿವೆ. ಇಂದಿನ ಸಮಾಜಿಕ ಸಾಮರಸ್ಯ-ಅಭಿವೃದ್ಧಿಗೆ ವಚನಕಾರರನ್ನು ಮಾದರಿಯೆಂದೇ ಭಾವಿಸಿರುವಾಗ, ವಚನಗಳ ಪ್ರಭಾವ ಕಾಲಾತೀತವಾಗಿ ನಿಂತಿರುವುದು, ವಚನಗಳ ಹೊಂದಿರುವ ಧ್ಯೇಯದ ತೀವ್ರತೆ ಮತ್ತು ತುರ್ತು ಎಷ್ಟು ಮಹತ್ತರವಾದುದು ಎಂದು ತಿಳಿಯುತ್ತದೆ. ಕಾಶ್ಮೀರದ ರಾಜನೂ ಕಲ್ಯಾಣಕ್ಕೆ ಬಂದು, ಕಾಯಕಕ್ಕೆ ತೊಡಗುವಲ್ಲಿ ಪ್ರೇರಣೆಯಾದವರೆಂದರೆ ಅವರ ಕಾಯಕ ನಿಷ್ಟೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳು ತಿಳಿಯುತ್ತದೆ. ಅನುಭವ ಜನ್ಯ ಜ್ಞಾನ, ಭಾರತೀಯ ತತ್ವಶಾಸ್ತ್ರ ಪರಂಪರೆಯ ಆಳವಾದ ಅಧ್ಯಯನ, ಮತ್ತು ಆ ತತ್ವಗಳನ್ನು ಒಡೆದು ಆ ಜಾಗದಲ್ಲಿ ಮತ್ತೊಂದನ್ನು ಕಟ್ಟುವ ವಚನಕಾರರ ಕಾರ್ಯ ಮುಖ್ಯವಾದದ್ದು. ತಮ್ಮ ಕಾಲದಲ್ಲಿನಿಂತು ಹಿಂದಿನ ತತ್ವಗಳನ್ನು ಒರೆಗೆ ಹಚ್ಚಿ ಉತ್ತರ ಕಂಡುಕೊಳ್ಳುವ-ಉತ್ತರ ದೊರೆಯದಿದ್ದರೆ ಸಾರಸಗಟಾಗಿ ತಿರಸ್ಕರಿಸುವ ಅವರ ಕಾರ್ಯ ಎಲ್ಲ ಕಾಲಕ್ಕೂ ಮಾದರಿ. ಸಾಮಾಜಿಕವಾಗಿ ಬಸವಣ್ಣನನ್ನೂ, ಧಾರ್ಮಿಕವಾಗಿ ಚೆನ್ನ ಬಸವ್ಣನನ್ನೂ ನೋಡಿದಹಾಗೆ ವೀರಶೈವದ ತಾತ್ವಿಕ ದೊಡ್ಡ ಸಾಧ್ಯತೆಯನ್ನ ಕಂಡದ್ದು ಅಲ್ಲಮಪ್ರಭುವಿಲ್ಲಿ. ನಿಷ್ಟುರ, ವಿಡಂಬನೆ, ಸಂಕೀರ್ಣ ಭಾಷಾ ಪ್ರಯೋಗ, ವಿರುದ್ಧ ನೆಲೆಗಳ ಚಿತ್ರ ಸರನಿಯ ಪ್ರತಿಮೆಗಳು ಅಲ್ಲಮನ ವಿಶೇಷತೆಗಳು. ಅವನ ವಚನಗಳ ಅಧ್ಯಯನ ಇತರ ಭಾರತೀಯ ದರ್ಶನಗಳ ಅಧ್ಯಯನಕ್ಕೆ ದಾರಿ ಮಾಡಿ ಹೊಸ ಹೊಳಹುಗಳನ್ನ ನೀಡುತ್ತವೆ. “ಬೆಡಗು” ಅಲ್ಲಮನ ವಚನಗಳ ಶೈಲಿ ಎಂದೇ ಹೇಳಬಹುದು. ಅವಧೂತ ಪರಂಪರೆಯಲ್ಲಿ ಬೆಡಗಿಗೆ ಬಹುದೊಡ್ಡ ಶಕ್ತಿಯಿದೆ. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ಪದದಲ್ಲಿ ಹೇಳಿ, ಸಾವಿರ ಅರ್ಥಗಳು ಒಮ್ಮಿದ್ದೊಮ್ಮೆಗೆ ಹುಟ್ಟಿಬಿಡುವಂತೆ ಮಾಡುವ ಮಾತಿನ ಅತೀಉತ್ಕೃಷ್ಟ ಅಭಿವ್ಯಕ್ತಿಯದು. ಅನಿಮಿಷನಿಂದ ಇಷ್ಟಲಿಂಗ ದೊರೆಯುವವರೆಗೂ ಮಾಯೆಯ ಹೊಡೆತಕ್ಕೆ ಸಿಕ್ಕಿ ಮದ್ದಲೆ ಬಾರಿಸಿ ತೊಳಲಿದವನು ಅನಂತರ ಅದಕ್ಕೆ ವಿಮುಖವಾದ ಮೋಹಬಂಧ ಕಿತ್ತೆಸೆದು ಆಚೆಗೆ ನಿಂತು ಎಲ್ಲವನೂ ಜಾಗೃತ ಪ್ರಜ್ಞೆಯ ಮೂಲಕವೇ ನೋಡುವ ಕಣ್ಣು ಅಲ್ಲಮನದು. ಅವನ ವಚನಗಳ ಹಿಂದೆ ಜಾಗೃತಪ್ರಜ್ಞೆ ನಿರಂತರವಾಗಿ ಹರಿದಿರುವುದು ಇಂದಿಗೂ ತಿಳಿಯುತ್ತಿದೆ. ಈ ಪ್ರಜ್ಞಾನದಿಯ ಹರಿಯುವಿಕೆ ನಿರಂತರವಾಗಿ ಕೊನೆಗೆ ಭೋರ್ಗರೆತದ ನದಿಯಾಗಿ ನಿಂತದ್ದು ಅತಿಶಯೋಕ್ತಿಯಲ್ಲ. ಆ ಪ್ರಜ್ಞಾನದಿಯ ನೀರನ್ನು ಒಂದೆಡೆ ನಿಲ್ಲಿಸಿ ಎಲ್ಲರಿಗೂ ದೊರೆವಂತೆ ಶೋನ್ಯಸಿಂಹಾಸನದಲ್ಲಿ ನೆಲೆಯೂರುವಂತೆ ಮಾಡಿದ ಬಸವಣ್ಣನ ಕಾರ್ಯವೂ ಬಹುದೊಡ್ಡದು. ಅಲ್ಲಮನ ವಚನಗಳಲ್ಲಿ ಅಮೂರ್ತದ ದೈವದ ದಿಕ್ಕಿಗೆ ಕರೆಕೊಡುವ ದಾರಿ ಕಾಣುತ್ತದೆ. ಬಸವಣ್ಣ ಮೂರ್ತದಿಂದ ಅಮೂರ್ತಕ್ಕೆ ಕರೆಕೊಟ್ಟರೆ, ಅಲ್ಲಮ ಬಹಳ ನೇರ ನಡಿಗೆ ಅಮೂರ್ತದ ಕಡೆಗೆ ಕರೆ ಕೊಡುತ್ತಾನೆ. ಮೇಲ್ನೋಟಕ್ಕೆ ಇದು ವೈರುಧ್ಯ ಎನಿಸಿದರೂ ಯಾವುದೇ ಧರ್ಮದ ಮೂಲ ನೆಲೆಯೂ ಮೂರ್ತದಿಂದ ಅಮೂರ್ತಕ್ಕೆ ಚಲನೆಯೇ ಅಗಿರುತ್ತದೆ. ಕಾಲಾನಂತರ ಆಚರಣೆ ಮುಂದಾಗಿ ಅದರೊಡಲಿನ ತತ್ವ ಹಿಂದೆ ಸರಿದು, ಪ್ರಜ್ಞೆಯು ನಿಂತ ನೀರಾಗಿ ಹೋಗುತ್ತದೆ. ಧರ್ಮದ ಮೂಲ ಧ್ಯೇಯ ಜ್ಞಾನೋಪಾಸನೆ – ಜ್ಞಾನಸಂಪಾದನೆ. ಇವುಗಳು ಆದಾಗ ತನ್ನಿಂದ ತಾನೇ ಅಮೂರ್ತಕ್ಕೆ ಚೆಲಿಸುತ್ತದೆ. ಅಂತಹಾ ಚೆಲನೆಗೆ ಸಂಬಂಧಿಸಿದ ಅಲ್ಲಮನ ವಚನವೊಂದು ಅದ್ಭುತವಾಗಿದೆ. ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು ಆ ದೇಶದಲ್ಲಿ ಬರನಾಯಿತ್ತು! ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು ಅವರ ಸುಟ್ಟ ರುದ್ರಭೂಮಿಯಲಿ ನಾ ನಿಮ್ಮನರಸುವೆ ಗುಹೇಶ್ವರ೧ ಮೊದಲ ಓದಿನಲ್ಲಿ ವಿಚಿತ್ರವೆಂಬಂತೆ ಕಂಡರೂ, ಇರದ ಒಳಗೆ ಬಹುದೊಡ್ಡ ಹಿಂದಿನ ಚಿಂತನೆಯನ್ನು ಒಡೆವ ಕ್ರಮವಿದೆ. ಇದು ಎರಡು ಪ್ರಮುಖ ಆಯಾಮಗಳಲ್ಲಿ ನಿರ್ವಚನಕ್ಕೆ ಒಳಪಡುತ್ತದೆ. ದೇಹದ ಮಟ್ಟದಲ್ಲಿ ಮತ್ತು ದೇಹವನ್ನು ನೆಚ್ಚಿಕೊಂಡು ಪ್ರಜ್ಞೆಯನ್ನು ಹಿಡಿತಕ್ಕೆ ತಂದುಕೊಳ್ಳುವ ತಂತ್ರಮಾರ್ಗಕ್ಕೆ ಏಕಕಾಲದಲ್ಲಿ ಅವುಗಳ ಕಾರ್ಯರೂಪದನ್ವಯ ಉತ್ತರ ಕೊಟ್ಟದ್ದಾಗಿದೆ. ದೇಹದ ಮಟ್ಟದಲ್ಲಿ ಈ ವಚನವು ‘ಉತ್ತರಾ ಪಥ’ ಎಂದರೆ ‘ತಲೆ’, ‘ಮೇಘವರ್ಷ’ವೆಂದರೆ ‘ಸುಧಾಧಾರಾ’ – ‘ಅಮೃತವರ್ಷಿಣಿ’ (ಜ್ಞಾನೋದಯವನ್ನ ಭಾರತೀಯ ತತ್ವಶಾಸ್ತ್ರಸಲ್ಲಿ ಗುರುತಿಸುವ ಪರಿಭಾಷೆ), ‘ದೇಶ’ಎಂದರೆ ‘ದೇಹ’, ‘ಪ್ರಾಣಿ’ಗಳು ಎಂದರೆ ‘ಪಂಚೇಂದ್ರಿಯ’ ಎನ್ನುವ ಅಂಶಗಳನ್ನು ತಿಳಿದರೆ, ದೇಹ ಮತ್ತು ಪಂಚೇಂದ್ರಿಯಗಳು ಲೋಲುಪತೆಯನ್ನು ಜ್ಞಾನೋದಯ ಕಾರಣದಿಂದ ಕಳೆದುಕೊಂಡರೆ, ಕಳೆದುಕೊಂಡು ಸುಮ್ಮನಾದರೆ, (ರಮಣರು ಇದನ್ನೇ ‘ಚುಮ್ಮಾಇರು’ ಎನ್ನುತ್ತಾರೆ)  ಅಲ್ಲಿ ಸುಟ್ಟ ರುದ್ರಭೂಮಿಯು ನಿರ್ಮಾಣವಾಗುತ್ತದೆ. ಲೋಲುಪತೆ ಕಳೆದ ಅನಂತರ ಘಟಿಸುವ ಶೂನ್ಯಭಾವದಲ್ಲಿ ದೈವದ ಅಥವಾ ದೈವತ್ವದ ಸಾಕ್ಷಾತ್ಕಾರ ಸಾಧ್ಯವೆನ್ನುವುದು ಅಲ್ಲಮನ ಅಭಿಪ್ರಾಯ. ಇದನ್ನೇ ಮತ್ತೊಂದು ಪ್ರಮುಖವಾದ ಆಯಾಮದಲ್ಲಿಯೂ ವಿವೇಚನೆ ಮಾಡಬಹುದು. ತಾಂತ್ರಿಕ ಪದ್ದತಿಗಳಲ್ಲಿ ‘ಪಂಚ ಮ  ಕಾರ’ಕ್ಕೆ ಬಹಳ ಪ್ರಾಧಾನ್ಯತೆ. ಮದ್ಯ, ಮಾಂಸ, ಮಾನಿನಿ, ಮೈಥುನ ಮತ್ತು ಮಂತ್ರಗಳ ಸಹಾಯದಿಂದ ಜ್ಞಾನವನ್ನು ಪಡೆಯಬಹುದೆಂದು ದೊಡ್ಡ ಚಲನೆಯನ್ನೇ ಉತ್ತರದಲ್ಲಿ ನಡೆಯಿತು. ಇಂದ್ರಿಯಕ್ಕೆ ಏನು ಬೇಕೋ ಅದನ್ನು ಪೂರೈಸಿಯೇ ಮನುಷ್ಯ ಅಸ್ಥಿತ್ವವನ್ನು ಕಂಡುಕೊಳ್ಳಬಹುದೆಂಬ ಮಾತಿಗೆ ಪ್ರಚೋದನೆಯಾಗಿ ಜ್ಞಾನಕ್ಕಿಂತ ಇಂದ್ರಿಯ ಸುಖಕ್ಕೆ ಒಳಗಾಗಿ ಹೋದವರೇ ಆ ಕಡೆಗೆ ಹೆಚ್ಚಾಗಿ ವಾಲಿದರು. ಇದರಿಂದ ಸಮಾಜದಲ್ಲಿ ಉಂಟಾಗುವ ಪ್ರಜ್ಞೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಜ್ಞಾನೋದಯಕ್ಕೆ ಅಶಿಸಿದವರು ಹೆಚ್ಚಾಗುವುದನ್ನ ಅರಿತ ಅಲ್ಲಮ, ಕಾಶ್ಮೀರದಲ್ಲಿ ಈ ಚಿಂತನೆ ಪ್ರಾರಂಭವಾಗಿದ್ದಕ್ಕೆ ಇಲ್ಲಿ ಕಲ್ಯಾಪಟ್ಟಣದಲ್ಲಿ ಕುಳಿದು ಅದು ಸರಿಯಲ್ಲವೆಂದು ಕೊಟ್ಟ ಉತ್ತರವೆಂದೇ ಎನಿಸುತ್ತಿದೆ.  ಇದೇ ಆಶಯವನ್ನು ಸ್ಪುರಿಸುವ ಮತ್ತೊಂದು ಅಲ್ಲಮನ ವಚನವನ್ನು ಗಮನಿಸಿ. ಊರೊಳಗಣ ಘನ ಹೇರಡವಿಯೊಳಗೊಂದು ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರೆರೆದು ಸಲುಹಲಿಕ್ಕೆ ಅದು ಸಾರಾಯದ ಫಲವಾಯಿತ್ತಲ್ಲಾ ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ ಬೇರಿಂದಲಾದ ಫಲವ ದಣಿದುಂಡವ ಊರಿಂದ ಹೊರಗಾದ ಕಾಣಾ ಗುಹೇಶ್ವರ ಈ ವಚನವು ಬಹಳ ಕುತೂಹಲಕರವಾದ ಕೆಲವು ಮಾಹಿತಿಗಳನ್ನು ಮೇಲೆ ಹೇಳಿದಷ್ಟೇ ನಿಖರವಾಗಿ ಬಿಟ್ಟುಕೊಡುತ್ತಿದೆ. ಇಲ್ಲಿನ ವಿಶೇಷತೆಯೇ ಎರಡು ಅರ್ಥಗಳನ್ನು ಸ್ಪುರಿಸುವ ಪದವಾದ ‘ಊರು’. ವಚನದ ಆರಂಬದಲ್ಲಿ ‘ಊರು’ ಪದವು ‘ದೇಹ’ವೆಂದು ಅರ್ಥವಾದರೆ, ಕೊನೆಯಲ್ಲಿ ಬರುವ ‘ಊರು’ ‘ತೊಡೆ’ ಎಂದು ಅರ್ಥವಾಗುತ್ತದೆ. ಇದೊಂದು ಇತ್ಯಾತ್ಮಕ ಚಲನೆಯ ಆಸೆಹೊತ್ತ ನೇತ್ಯಾತ್ಮಕ ಪ್ರತಿಮೆಗಳ ಸಹಜ ಸಂಘಟ್ಟಣೆಯಲ್ಲಿ ಮೂಡಿದ ಅರ್ಥ. ಇದರ ಅನುಸಂಧಾನವೂ ಬಹಳ ಕುತೂಹಲಕರವಾಗಿದೆ. ‘ಆರೈದು’ ಎಂಬ ಸಂಖ್ಯಾ ಪದವನ್ನು ಬಿಡಿಸಿದರೆ, ‘ಆರು’ ಷಟ್ ಚಕ್ರಗಳನ್ನು, ‘ಐದು’ ಪಂಚೇಂದ್ರಿಯಗಳನ್ನು ತಿಳಿಸುತ್ತಿದೆ. ಮುಖ್ಯವಾಗಿ ತಲೆಕೆಳಕಾದ ವೃಕ್ಷದ ಪ್ರತಿಮೆ ‘ಬೇರು ಮೇಲು ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು]’ ಬಂದಿದೆ. ಆ ಮರ ಕೊಡುವ ಫಲದ ಸ್ಥಾನ ಕೆಳಗಿದೆ. ಅದನ್ನರಿಸಿ ‘ಹಣ್ಣ ಮೆಲಿದವ ಘೋರಸಂಸಾರಭವಕ್ಕೆ ಸಿಕ್ಕಿದ’. ಮತ್ತೊಂದು ಉಲ್ಟಾ ಪ್ರತಿಮೆ ಕೊನೆಯಲ್ಲಿ ಕೊಡುತ್ತಾನೆ ‘ಬೇರಿಂದಲಾದ ಫಲ’. ಇದನ್ನು ಬಹಳ ಕಷ್ಟದಲ್ಲಿ ಸಾಧಿಸಿಕೊಳ್ಳಬೇಕಾದ ಸ್ಥಿತಿ. ಆ ಫಲವನ್ನು ‘ದಣಿದುಂಡವ’ವನು ‘ಊರಿಂದ ಹೊರಗಾದ’. ಈ ವಚನದಲ್ಲಿಯೂ ದೇಹ, ದೇಹದ ಲೋಲುಪತೆ ಮತ್ತು ಪ್ರಜ್ಞೆಯನ್ನು ಹಿಡಿದುಕೊಳ್ಳುವ ಸಾಧ್ಯತೆಯ ಬಗೆಗೆ ಮಾತನಾಡುತ್ತಿದ್ದಾನೆ. ‘ಸಿಕ್ಕಿದ’ ಮತ್ತು ‘ಹೊರಗಾದ’ ಎಂಬ ಎರಡು ಕ್ರಿಯಾಪದವನ್ನು ಗಮನಿಸಿ. ಭೂತದ ಕ್ರಿಯೆಯನ್ನು ಹೇಳುತ್ತ ವರ್ತಮಾನದ ನಡೆಯನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಮಪ್ರಭುವಿನ ನೇರ ಹಣಾಹಣಿ ತಂತ್ರಾಲೋಕದ ಕಡೆಗಿದೆ. ಮತ್ತದನ್ನು ನೆಚ್ಚಿಕೊಂಡು ನಡೆದವರಿಗೆ ಕೊಟ್ಟ ಪ್ರತಿಸ್ಪಂದನೆಯೂ ಅಗಿರಬಹುದು. ಮೆಲ್ನೋಟಕ್ಕೆ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಸಣ್ಣ ಸಣ್ಣ ಸಾಲನ್ನು ಹೊಂದಿರುವ ವಚನವೆಂದು ಕರೆಸಿಕೊಳ್ಳುವ ಪ್ರಕಾರವೊಂದು, ಹೇರಳವಾಗಿ ರಚನೆಯಾಗಿದ್ದ ಅತಿಹೆಚ್ಚು ಶಿಷ್ಟವಾದ ‘ಅನುಷ್ಟಪ್’ ಛಂಧಸ್ಸಿಗೆ ಮುಖಾಮುಖಿಯಾಗುವುದು ದೇಸಿ ಮತ್ತು ಮಾರ್ಗದ ಮುಖಾಮುಖಿಯಲ್ಲದೆ ಮತ್ತಿನ್ನೇನೂ ಅಲ್ಲ. ಸಂಕೀರ್ಣವಾಗಿಯೇ ಹೇಳುವುದಾದರೆ, ಹನ್ನೆರಡನೆಯ ಶತಮಾನ ಕನ್ನಡನಾಡಿನಲ್ಲಿ ಘಟಿಸಿದ ಸಾಹಿತ್ಯ ಚಳುವಳಿಯೊಂದರ ಉಪೋತ್ಪನ್ನವಾದ ವಚನ ರೂಪವೊಂದು ತನ್ನೆಲ್ಲಾ ತಾತ್ವಿಕ, ಶಾಸ್ತ್ರ ಮತ್ತು ಅನುಭವ ಜನ್ಯ ಜ್ಞಾನದಿಂದ ರೂಪುಗೊಂಡು – ಮತ್ತೊಂದು ಶಾಸ್ತ್ರೀಯ ಕಾವ್ಯರೂಪಕ್ಕೆ, ಅದರ ತಾತ್ವಿಕ ಮಾರ್ಗಕ್ಕೆ ಕೊಟ್ಟ ಸಂಘರ್ಷದ ಆಹ್ವಾನವೆಂದರೆ ಅತಿಶಯೋಕ್ತಿಯೇನಲ್ಲ. ಶೂನ್ಯಸಂಪಾದನೆಗಳಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವ ಬಹುಮುಖ್ಯವಾದ ಘಟ್ಟವೊಂದಿದೆ. ಆ ಭಾಗವು ತನ್ನ ನಾಟಕೀಯತೆ, ತತ್ವ, ವೀರಶೈವ ಧರ್ಮದ ಮೂಲ ತತ್ವಗಳ ಶೋಧ, ಶರಣರ ನಡೆ ನುಡಿಯಲ್ಲಿನ ವಿಶೇಷತೆ ಮುಂತಾದ ಅಂಶಗಳ ಅಭಿವ್ಯಕ್ತಿಯಿಂದ ಅತೀಉತ್ಕೃಷ್ಟ ಭಾಗವಾಗಿ ಇಂದಿಗೂ ಓದುಗರ ಮನದಲ್ಲಿ ನೆಲೆ ನಿಂತಿದೆ. ಅಕ್ಕನನ್ನು ಪರೀಕ್ಷಿಸಿ, ಅವಳು ಆ ಪರೀಕ್ಷೆಯಲ್ಲಿ ಗೆದ್ದ ನಂತರ ಬಸವಣ್ಣನು ಮಡಿವಾಳತಂದೆ ಮತ್ತು ಅಲ್ಲಮರ ಸಮಕ್ಷಮದಲ್ಲಿ ಅಕ್ಕನನ್ನು, ಅವಳ ಸತ್ವವನ್ನು ಕೊಂಡಾಡುತ್ತಾನೆ. ಆ ಸಂದರ್ಭದ ವಚನವೊಂದಲ್ಲಿ ಅಲ್ಲಮನನ್ನು ಸಂಬೋಧಿಸಿ “ತಲೆವೆಳಗಾದ ಸ್ವಯಜ್ಞಾನಿ” ಎಂಬ ವಿಶೇಷಣವೊಂದನ್ನು ಆರೋಪಿಸುತ್ತಾರೆ. ಈ ವಿಶೇಷಣ ನಿಜವಾಗಿ ಸಾರ್ಥಕವಾಗಿರುವುದು ಮೇಲಿನ ವಚನದಲ್ಲಿ ಅಲ್ಲಮ ಕೊಟ್ಟಿರುವ “ಬೇರು ಮೇಲು ಕೊನೆ ಕೆಳಕಾಗಿ ಸಸಿ ಹುಟ್ಟಿತ್ತು” ಎಂಬ ಪ್ರತಿಮೆ ಮತ್ತು ಆ ಪ್ರತಿಮೆ ಮಾಡುತ್ತಿರುವ ಕಾರ್ಯದಿಂದ. ಒಟ್ಟಾರೆ ಭಾರತೀಯ ತತ್ವಶಾಸ್ತ್ರದಲ್ಲಿ ಯಾವುದೇ ಮರವನ್ನು ಯಾವುದೇ ದೊಡ್ಡ ದಾರ್ಶನಿಕನ ಜ್ಞಾನೋದಯದ ನೆಲೆಯಾಗಿ ಕಾಣುವಾಗ ಅಂತಹಾ ವೃಕ್ಷವನ್ನೇ ತಲೆಕೆಳಕಾಗಿ ಮಾಡಿ, ತತ್ವಗಳಾಚೆ ಬದುಕಿದೆ ಎಂಬುದನ್ನು ದಿಟ್ಟವಾಗಿ ಸಾರಿದ “ತಲೆವೆಳಗಾದ ಸ್ವಯಜ್ಞಾನಿ” ಅಲ್ಲಮ. ಪರಾಮರ್ಶನ ಗ್ರಂಥಗಳು : ೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ  ೨೨೭. ಪು ೧೫೬ (೨೦೧೬) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವಚನ ಸಂಖ್ಯೆ ೯೬೪. ಪು ೨೨೭ (೨೦೧೬) ೩. ಎನ್ನ ಭಕ್ತಿ ಶಕ್ತಿಯು ನೀನೆ      ಎನ್ನ ಯುಕ್ತಿ ಶಕ್ತಿಯು ನೀನೆ      ಎನ್ನ ಮುಕ್ತಿ ಶಕ್ತಿಯು ನೀನೆ      ಎನ್ನ ಮಹಾಘನದ ನಿಲವಿನ ಪ್ರಭೆಯನ್ನುಟ್ಟು      ತಲೆವೆಳಗಾದ ಸ್ವಯಜ್ಞಾನಿ      ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕನ ನಿಲವ      ಮಡಿವಾಳನಿಂದಱಿದು ಬದುಕಿದೆನಯ್ಯಾ ಪ್ರಭುವೆ ಹಲಗೆಯಾರ್ಯನ ಶೂನ್ಯಸಂಪಾದನೆ.‌ ಸಂ. ಪ್ರೊ. ಎಸ್. ವಿದ್ಯಾಶಂಕರ, ಪ್ರೊ. ಜಿ.‌ ಎಸ್. ಸಿದ್ಧಲಿಂಗಯ್ಯ. ವಚನ ಸಂಖ್ಯೆ ೧೦೭೫. ಪು ೪೬೭ ( ೧೯೯೮ ). ****************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಕಾವ್ಯಯಾನ

ಅನಾವರಣ

ಕವಿತೆ ಅನಾವರಣ ಸಂಗೀತ ರವಿರಾಜ್ ಬರೋಬ್ಬರಿ ಆರ್ವರ್ಷದಿಂದೀಚೆಗೆ ನೋಡುತ್ತಿದ್ದ ಧಾರಾವಾಹಿಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಸುಳಿವು ಸಿಗುತ್ತಿದ್ದಂತೆಹೆಂಗಳೆಯರಿಗೆ ಮುಂಗುರುಳ ಹಿಂದಕ್ಕೆ ನೀವಿಕೊಳ್ಳಲು ಮನಸ್ಸಾಗದ ಚಡಪಡಿಕೆಉರುಳಿದ ವರ್ಷಗಳು ಲೆಕ್ಕಕ್ಕೆ ಇಲ್ಲದಂತೆಉಳಿದ ದಿನಗಳ ಲೆಕ್ಕಾಚಾರದ ಸಂತೆಯಲಿ ಮುಳುಗಿದೆ ಎಣಿಕೆ! ಕಂತುಗಳ ಕಂತೆ ವರ್ಷಾನುಗಟ್ಟಲೆ ದಾಟಿದರೂಮದುವೆಯಾಗಿ ತಿಂಗಳಿಗಾದ ಮಗುವಿಗಿನ್ನು ನಾಮಕರಣವೆ ಆಗಿಲ್ಲವಲ್ಲ!ಸೌಪರ್ಣಿಕ ಡೈವೋರ್ಸ್ ಪಡೆದ ಮೇಲೆಮುಂದೇಗೆಂದು ತೋರಿಸದೆ ಹೇಗೆ ಮುಗಿಸಬಲ್ಲರು?ಇವಳು ಹೇಗೆ ಹೆರಬಲ್ಲಳು ನಾನು ನೋಡುತ್ತೇನೆಎಂದು ಕಿರುಚಾಡುವ ವಿಲನ್ ಗೆ ಶಿಕ್ಷೆಯೆ ಆಗಿಲ್ಲ ,ಆರ್ವರ್ಷದಿಂದ ಪುನರ್ವಸುವಿಗೆ ಉದ್ಯೋಗವೆ ದಕ್ಕಿಲ್ಲ…ಇದಕ್ಕೆಲ್ಲ ಇನ್ನೊಂದಷ್ಟು ವರ್ಷ ಇರಲೇಬೇಕಲ್ಲ ?ಪ್ರತಿದಿನದ ಏಕತಾನತೆಗೆ ಸುಖ ಕೊಡುವ ಕಾಯುವಿಕೆಗಳು ……. ನಟನೆಯಲ್ಲಿ ಸ್ತ್ರೀಯರಿಗೆಲ್ಲ ಏನು ಮನೆಕೆಲಸವೆ ಇರುವುದಿಲ್ಲವಲ್ಲಸದಾ ಸಿಂಗರಿಸಿಕೊಂಡೆ ಇರುವ ಇವರು ಈವರೆಗು ನಮಗೆಲ್ಲ ಸೋಜಿಗ!ಲೋಕದೆಲ್ಲಾ ಸದ್ಗಹೃಣಿಯರಂತೆನಟನೆ ಮುಗಿದ ಬಳಿಕ ಅವರವರ ಮನೆಯಲ್ಲಿಅವರಿಗೆ ಲೆಕ್ಕವಿಲ್ಲದಷ್ಟು ಕೆಲಸದ ತವಕಸಾಕೆನ್ನುವ ವೃತ್ತಿಯ ನಡುವೆಯುಪ್ರತಿಭೆ ಸಂಪಾದನೆಯ ಹಾದಿ. ನಟನೆಗು ಬದುಕಿಗು ನಂಟೇನಿಲ್ಲ ಎಂಬರಿವಿದ್ದರುನಮ್ಮೊಳಗೆ ಪರಾಕಾಯ ಪ್ರವೇಶಿಸಿದ ಪಾತ್ರಗಳಿಗೆಉತ್ತರವಾಗಬೇಕು ಕತೆಗಳು..ತೆರೆ ಮೇಲೆ ಅಂಕ ಮುಗಿಯುವರೆಗು ಪಯಣಪಥಿಕರು ನಾವೋ ? ಅವರೋ?ತಿಳಿಯದ ಗೊಂದಲ….

ಅನಾವರಣ Read Post »

ಕಾವ್ಯಯಾನ

ಅಂದಿಗೂ- ಇಂದಿಗೂ

ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ್ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ ನೆರಳುಸದಾ ನನ್ನ ತಡುವುತ್ತಲೇ ಇತ್ತಲ್ಲಾ.. ನಾ ದೊಡ್ಡವಳಾದಾಗ, ಎದೆ ಮೂಡಿ ನಕ್ಕಾಗಕೆನೆಮೊಸರು, ಬೆಲ್ಲ ಕೊಬ್ಬರಿ ಸಿಕ್ಕಲೇ ಇಲ್ಲ,ಕಣ್ಣು ಕಿಸಿದು ನೋಡುವ ಗಂಡುಗಳುನಮ್ಮ ಸುತ್ತಲೂ ಇರಲೇಇಲ್ಲ.ಅಣ್ಣಂದಿರು ಮಾವಂದಿರು ಎಂದೂಬಂಧಕ್ಕೆ ಹೊರತಾಗಿ ನಡೆದುಕೊಳ್ಳಲೇ ಇಲ್ಲ.ಪ್ರೀತಿಯ ಹಂಚುವುದರಲ್ಲಿಜಿಪುಣತೆ ಇರಲಿಲ್ಲ. ಗದ್ದೆ ಕೆಲಸದ ಹೆಣ್ಣಾಳುಮೇಲುದರಿ ಬಿಚ್ಚಿ ಸೊಂಟಕ್ಕೆ ಸುತ್ತಿ,ಮೀನಖಂಡದವರೆಗೂ ಸೀರೆ ಎತ್ತಿ ದುಡಿವಾಗಅವಳಂದವ ಯಾರೂ ಕದ್ದುನೋಡುತ್ತಿರಲಿಲ್ಲ ಕಾಣಬಾರದ್ದಕಾಣುವ ಕಣ್ಣುಗಳು ಇರಲೇ ಇಲ್ಲ. ಇಂದಿಗೆ ….ಹೀಗೆಲ್ಲ ಇತ್ತೆಂದರೆ ನಂಬಲಾಗುವುದೇ ಇಲ್ಲ… **********************************

ಅಂದಿಗೂ- ಇಂದಿಗೂ Read Post »

ಕಾವ್ಯಯಾನ

ಕಿಟಕಿ-ಬಾಗಿಲು

ಕವಿತೆ ಕಿಟಕಿ-ಬಾಗಿಲು ಸ್ಮಿತಾ ಅಮೃತರಾಜ್.ಸಂಪಾಜೆ. ಮುಂಬಾಗಿಲು ಸದಾದಿಡ್ಡಿಯಾಗಿ ತೆರೆದೇಇರುತ್ತದೆ.ಬೆಳಕು ಕಂದಿದ ಮೇಲಷ್ಟೇಮುಚ್ಚಿಕೊಳ್ಳುತ್ತದೆ. ಬಾಗಿಲೆಡೆಗೆ ಮುಖವೂತೋರಿಸಲು ಬಿಡುವಿಲ್ಲದವರುಒಳಗೆ ಗಡಿಬಿಡಿಯಲ್ಲಿರುತ್ತಾರೆಅದಕ್ಕೇ ಬಾಗಿಲು ಸದಾತೆರೆದೇ ಇರುತ್ತದೆ. ಪುಣ್ಯಕ್ಕೆ ಪ್ರತೀ ಕೋಣೆಗಳಿಗೂಪುಟ್ಟ ಪುಟ್ಟ ಕಿಟಕಿಗಳಿವೆ.ಹೊರಕ್ಕೆ ನೋಡಲು ಹಾತೊರೆಯುವವರುಏನನ್ನೂ ನೋಡದೇ ಸಾಯುತ್ತಿದ್ದೇವೆ ಅಂತಹಲುಬುತ್ತಾ ಶಾಪ ಹಾಕುವಂತಿಲ್ಲ. ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆಅಂತ ಖಾತ್ರಿ ಪಡಿಸಿಕೊಂಡ ಮೇಲೂಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳುಬಿಗಿಯಲ್ಪಟ್ಟಿವೆ. ಬೆಟ್ಟ ಗುಡ್ಡ ಹಸಿರುದೂರದಲ್ಲಿ ಹರಿಯುವತೊರೆಯ ಸದ್ದುಚಿತ್ರ ಬಿಡಿಸುತ್ತಾ ಓಡುವಮುಗಿಲುಇಷ್ಟಿಷ್ಟೇ ಕಡಲಿಗಿಳಿಯುವಹಗಲು. ಅಂಗೈಯಷ್ಟಗಲ ಕಂಡರೂಅನಂತ ಆಗಸದಗಲಹಬ್ಬುತ್ತಿದೆ ಒಳಮನೆಯೊಳಗೂಕಲ್ಪನೆಯ ಚಿತ್ತಾರ. ಕಿಟಕಿ ಅರೆ ಮುಚ್ಚಿಕ್ಕೊಂಡೇಇರುತ್ತದೆ.ಆದರೂ ಬಿಗಿದ ಸರಳುಗಳಎಡೆಯಿಂದ ಬೆಳಕು ನುಸುಳಿಬರುತ್ತಲಿದೆ. ಮುಂಬಾಗಿಲು ಸದಾ ತೆರೆದೇಇರುತ್ತದೆ.ಅಡ್ಡಕ್ಕೆ ಜೋಡಿಸಿದ ಪುಟ್ಟಕಟ್ಟಳೆ ಕಾವಲಂತೆಕಾಯುತ್ತಿದೆ.ತೋರಿದಂತೆ ತೋರಗೊಡುವತೋರಿಕೆಯ ಬಾಗಿಲುಬಿಗಿದ ಕಿಟಕಿ ಸರಳುಗಳ ನಡುವೆಯೂಉಯ್ಯಾಲೆ ಕಟ್ಟಿ ತೂಗಿ ಹೋಗುವಕವಿತೆ ಸಾಲು. ಕಿಟಕಿ-ಬಾಗಿಲುಗಳುಎಲ್ಲಾ ಕಡೆಗಳಲ್ಲೂ ಇವೆ.ಕೆಲವೊಂದು ಕಡೆ ಪಾತ್ರಗಳುಅದಲು ಬದಲಾಗುತ್ತವೆ. ***********************************

ಕಿಟಕಿ-ಬಾಗಿಲು Read Post »

ಕಾವ್ಯಯಾನ

ಅರಿವೇ ಗುರು

ಕವಿತೆ  ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. ************

ಅರಿವೇ ಗುರು Read Post »

ವಾರದ ಕವಿತೆ

ವಾರದ ಕವಿತೆ ಜೋಕಾಲಿ ಚೈತ್ರಾ ಶಿವಯೋಗಿಮಠ ಮೇಲೆ ಮೇಲೆ ಮ್ಯಾಗಜೂರಿ ಜೀಕಬೇಕು ನಾನುಹಳ್ಳ ಹೊಳಿ ಕಡಲು ಕಾಣಬೇಕಹಸುರ ಹೊದ್ದ ಕಾನು ಮಗುವಿನ್ಹಾಂಗ ಕ್ಯಾಕಿ ಹಾಕಿಹಾರಬೇಕ ಮ್ಯಾಲೆಕಾಣಬೇಕ ಮನಿ ಮಾಳಿಗಿಹಬ್ಬಿದ ಹೂ ಬಳ್ಳಿ ಅಲ್ಲೆ ಜೋಕಾಲಿ ಕಟ್ಟಿ ಜೀಕಿದರರೆಕ್ಕಿ ಬ್ಯಾಡ ಪುಕ್ಕಾ ಬ್ಯಾಡಬೆಳ್ಳಿ ಮುಗಲ ಅನಾಯಾಸಹಂಗ ಮುಟ್ಟಬೋದು ನೋಡ ಬರ್ರಿ, ಬೆಟ್ಟ ಕಣವಿ ಗುಡಿ ಬಯಲದಾಟಿ ಮುಂದಕ ಜೀಕೋಣುಸ್ವಚ್ಛಂದ ಆಕಾಶದಾಗ ಹಕ್ಕಿಹಂಗಹಾಡಾ ಹಾಡಿ ಸಿಳ್ಳಿ ಹಾಕೋಣು ಹಾರಿದ್ಹಂಗ ಏರಿದ್ಹಂಗ ಚಂದಗಾಳಿ ಜೋಡಿ ಮುಂಗುರುಳ ಸರಸಚಂದವದು, ಸ್ವರ್ಗದ ಬಾಗಿಲು ತಟ್ಟಿಮತ್ತ ಹಿಂದಕ ಹೊರಳೊ ವಿಲಾಸ ಏರಿದ್ಹಾಂಗ ಮತ್ತಷ್ಟ ಮೇಲಕಕಾಣತಾದ ಚಂದದ ಸೃಷ್ಟಿಎಷ್ಟೇ ಮ್ಯಾಲೆ ಜೀಕಿದರೂನುಇರಲಿ ನೆಲದಕಡೆಗೂ ದೃಷ್ಟಿ *****************************************************

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8 ನಾನೂ ಶಾಲೆಗೆ ಸೇರಿದೆ… ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ ಇದ್ದಿತ್ತು. ಮಾಸ್ಕೇರಿಯ ಈ ಭಾಗದಲ್ಲಿ ನಾಡವರು ವಾಸ್ತವ್ಯ ಇರುವುದರಿಂದಾಗಿಯೇ ನಾಡು ಮಾಸ್ಕೇರಿ’ ಎಂದು ಕರೆಯುತ್ತಿದ್ದಿರಬೇಕು. ಊರಿನ ಉತ್ತರ ಭಾಗದಲ್ಲಿ ಕೆಲವು ಬ್ರಾಹ್ಮಣರ ಮನೆಗಳಿದ್ದವು. ಹಾರ್ವರು ವಾಸಿಸುವ ಕಾರಣದಿಂದಲೇ ಈ ಭಾಗವನ್ನು ಹಾರೂ ಮಾಸ್ಕೇರಿ’ ಎಂದು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಸೇರಿದ ಜಮೀನಿನ ಮೂಲೆಯಲ್ಲಿಯೂ ಒಂದೆರಡು ನಮ್ಮ ಆಗೇರರ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.             ನಮ್ಮ ಅಜ್ಜಿಯ ಕುಟುಂಬ ನಾಡುಮಾಸ್ಕೇರಿ ಭಾಗದಲ್ಲಿ ನಾರಾಯಣ ನಾಯಕ ಎಂಬ ನಾಡವ ಜಾತಿಯ ಜಮೀನ್ದಾರರೊಬ್ಬರ ಗೇರು ಹಕ್ಕಲಿನಲ್ಲಿ ವಾಸವಾಗಿದ್ದಿತ್ತು. ನಮ್ಮ ತಂದೆಯವರು ಇಲ್ಲಿಗೆ ಬಂದ ಬಳಿಕ ಅಜ್ಜಿಯ ಮನೆಯ ಸಮೀಪವೇ ನಾರಾಯಣ ನಾಯಕರ ಅನುಮತಿಯಿಂದ ಒಂದು ಚಿಕ್ಕ ಹುಲ್ಲಿನ ಮನೆ ನಿಮಿಸಿಕೊಂಡರು. ಅಷ್ಟು ಹೊತ್ತಿಗೆ ನನಗೆ ಒಬ್ಬ ತಮ್ಮ (ನಾಗೇಶ) ಒಬ್ಬಳು ತಂಗಿ (ಲೀಲಾವತಿ) ಬಂದಾಗಿತ್ತು.             ತಾಯಿಯ ತೌರಿನ ಕಡೆಯಿಂದ ಅಜ್ಜಿಮನೆಯಲ್ಲಿ ಅವ್ವನ ಚಿಕ್ಕಪ್ಪ ರಾಕಜ್ಜ ಮತ್ತು ಅವನ ಹೆಂಡತಿ ಮತ್ತು ರಾಕಜ್ಜನ ಚಿಕ್ಕಮ್ಮ ಜುಂಜಜ್ಜಿ ಎಂಬ ಮುದುಕಿ ವಾಸಿಸುತ್ತಿದ್ದರು. ಆದರೆ ಈ ಪ್ರತ್ಯೇಕತೆ ಬಹಳ ಕಾಲವೇನೂ ಇರಲಿಲ್ಲ. ನನಗೆ ಬುದ್ದಿ ತಿಳಿಯುವ ಹೊತ್ತಿಗೆ ರಾಕಜ್ಜನಿಗೆ ಇದ್ದ ಮೊದಲ ಹೆಂಡತಿ ತೀರಿಕೊಂಡಿದ್ದಾರೆ ಎಂದೂ ಈಗ ಇರುವವಳು ಅವನ ಎರಡನೆಯ ಹೆಂಡತಿ ಎಂದೂ ತಿಳಿದು ಬಂತು. ಆದರೂ ಅವರು ಅನ್ಯೋನ್ಯವಾಗಿ ಇದ್ದಂತೆ ನಮಗೆ ಕಾಣಿಸುತ್ತಿತ್ತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿಯೇ ರಾಕಜ್ಜನ ಎರಡನೆಯ ಹೆಂಡತಿ ತನ್ನ ತೌರಿಗೆಂದು ಅಂಕೋಲೆಯ ಬಾಸಗೋಡ ಎಂಬ ಊರಿನ ಕಡೆ ಹೋದವಳು ಮತ್ತೆ ಎಂದೂ ತಿರುಗಿ ಬಾರದೇ ಅಲ್ಲಿಯೇ ಯಾರನ್ನೋ ಕೂಡಿಕೆ’ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಬಂದಿತ್ತು. ಆ ಬಳಿಕ ರಾಕಜ್ಜ ಮತ್ತು ಜುಂಜಜ್ಜಿ ನಮ್ಮದೇ ಮನೆಯ ಭಾಗವಾಗಿ ಹೋದರು. ರಾಕಜ್ಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಜುಂಜಜ್ಜಿ ಮನೆಯಲ್ಲಿಯೇ ಇದ್ದು ಅವ್ವನಿಗೆ ಮನೆಗೆಲಸದಲ್ಲಿ ನೆರವಾಗುತ್ತ ನಾವು ಮೂವರು ಮರಿಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಉಳಿದುಕೊಂಡಳು.             ಇಷ್ಟೆಲ್ಲ ಪುರಾಣ ಹೇಳಿದ ಕಾರಣವೆಂದರೆ ನನ್ನನ್ನು ಮೊಟ್ಟ ಮೊದಲು ಶಾಲೆಗೆ ಕರೆದೊಯ್ದು ಸೇರಿಸಿದವಳೇ ಈ ಜುಂಜಜ್ಜಿ. ನನ್ನ ಹಠ, ತುಂಟತನ ಎಲ್ಲವನ್ನೂ ನಿರಾಳವಾಗಿ ಹಚ್ಚಿಕೊಂಡಿದ್ದ ಜುಂಜಜ್ಜಿಯೇ ಹಾರೂಮಾಸ್ಕೇರಿ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಕರೆದೊಯ್ದಿದ್ದಳು. ನನಗೆ ಇನ್ನೂ ಸರಿಯಾಗಿ ನೆನಪಿದೆ….. ಒಂದು ಪಾಯಿಜಾಮ, ನೆಹರೂ ಶರ್ಟ ಧರಿಸಿ ನಾನು ತುಂಬಾ ಜಬರ್ದಸ್ತ ಆಗಿಯೇ ಶಾಲೆಗೆ ಹೊರಟಿದ್ದೆ. ಆದರೆ ಅಲ್ಲಿಗೆ ಹೋದ ಬಳಿಕ ಶಾಲೆಯೆಂಬ ಶಾಲೆಯನ್ನು ಅದರೊಳಗಿರುವ ಮಾಸ್ತರರನ್ನೂ ಅಲ್ಲಿರುವ ಮಕ್ಕಳನ್ನೂ ಕಂಡದ್ದೇ ನನಗೆ ಕಂಡಾಬಟ್ಟೆ ಅಂಜಿಕೆಯಾಗಿ ಜುಂಜಜ್ಜಿಯ ಸೀರೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತ ಶಾಲೆಯೇ ಬೇಡವೆಂದು ಹಠ ಮಾಡತೊಡಗಿದ್ದೆ. ಯಾರೋ ಮಾಸ್ತರರೊಬ್ಬರು ಸಂತೈಸಿ ಕರೆದೊಯ್ಯಲು ಮುಂದೆ ಬಂದಾಗ ಮತ್ತಷ್ಟು ಭಯಗೊಂಡು ಚೀರಾಟ ಮಾಡಿದೆ. ಜುಂಜಜ್ಜಿಗೆ ನನ್ನನ್ನು ಸಂತೈಸುವುದೇ ಕಷ್ಟವಾಗಿ ಒದ್ದಾಡುತ್ತ ನನ್ನನ್ನು ಹೇಗೋ ರಮಿಸಿ ಶಾಲೆಯ ಪಕ್ಕದಲ್ಲೇ ಇರುವ ಗೋವಿಂದ ಶೆಟ್ಟಿ ಎಂಬುವರ ಚಹಾದಂಗಡಿಗೆ ಕರೆತಂದಳು.             ಅಂಗಡಿಯ ಮುಂಗಟ್ಟಿನಲ್ಲೇ ಇರುವ ಒಲೆಯಮೇಲೆ ಇರುವ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕೊತಕೊತ ಕುದಿಯುತ್ತಿತ್ತು. ಅದರ ಮೇಲೆ ಚಹಾಪುಡಿ, ಸಕ್ಕರೆ ಬೆರೆಸಿದ ಕಿಟ್ಲಿ’ ಹೊಗೆಯುಗುಳುತ್ತ ಸುತ್ತೆಲ್ಲ ಚಹಾದ ಗಮ್ಮನೆ ಪರಿಮಳ ಹರಡುತ್ತ ಕುಳಿತಿತ್ತು. ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಒಲೆಯ ಮೇಲಿಟ್ಟ ಆ ದೊಡ್ಡ ಪಾತ್ರೆಯೊಳಗಿಂದ ಕೇಳಿ ಬರುತ್ತಿದ್ದ ಕಿಣಿ ಕಿಣಿ ಶಬ್ಧ. ಅದೊಂದು ವಿಚಿತ್ರ ಮಾಯಾ ಪೆಟ್ಟಿಗೆಯೆಂಬಂತೆ ಅಚ್ಚರಿಯಿಂದ ನೋಡುತ್ತ ನನ್ನ ಅಳು ಯಾವುದೋ ಕ್ಷಣದಲ್ಲಿ ನಿಂತು ಹೋಗಿತ್ತು.             ಚಹದಂಗಡಿ ಚಾಲೂ ಸ್ಥಿತಿಯಲ್ಲಿ ಇದೆ ಎಂಬುದನ್ನು ಗಿರಾಕಿಗಳಿಗೆ ತಿಳಿಸಲು ಪಾತ್ರೆಯಲ್ಲಿ ಒಂದು ತೂತು ಬಿಲ್ಲೆ’ (ಆಗಿನ ಕಾಲದ ಒಂದು ನಾಣ್ಯ) ಯನ್ನು ಹಾಕಿ ಇಡುವರೆಂದೂ ಅದು ನೀರು ಕುದಿಯುವಾಗ ಹಾರಾಡುತ್ತ ಪಾತ್ರೆಯ ತಳಕ್ಕೆ ಬಡಿದು ಲಯಬದ್ಧವಾದ ಕಿಣಿ ಕಿಣಿ ಸಪ್ಪಳ ಹೊರಡುವುದೆಂದೂ ತಿಳಿಯಲು ನಾನು ನನ್ನ ಎರಡನೆಯ ತರಗತಿಯವರೆಗೂ ಕಾಯಬೇಕಾಯಿತು.             ಉಸೂಳಿ ಅವಲಕ್ಕಿ’ ಗೋವಿಂದ ಶೆಟ್ಟರ ಸ್ಪೇಶಲ್ ತಿಂಡಿಯಾಗಿತ್ತು. ಚೆನ್ನಾಗಿ ಬೇಯಿಸಿದ ಒಟಾಣೆ ಕಾಳುಗಳಿಗೆ ಒಗ್ಗರಣೆ ಹಾಕಿ ಸಿದ್ಧಪಡಿಸಿದ ಉಸೂಳಿ’ಯನ್ನು ಅವಲಕ್ಕಿ ಶೇವು ಬೆರೆಸಿಕೊಡುತ್ತಿದ್ದ ಶೆಟ್ಟರಿಗೆ ಅವುಗಳನ್ನು ಸಮಪ್ರಮಾಣದಲ್ಲಿ ಬೆರೆಸುವ ಹದ ತಿಳಿದಿತ್ತಂತೆ. ಹಾಗಾಗಿಯೇ ಗೋವಿಂದ ಶೆಟ್ಟರ ಉಸೂಳಿ ಅವಲಕ್ಕಿ ಸುತ್ತಲಿನ ನಾಡವರು, ಹಾಲಕ್ಕಿಗಳು, ನಾಮಧಾರಿಗಳು ಆಗೇರರಿಗೆಲ್ಲ ಮರಳು ಹಿಡಿಸುವಷ್ಟು ಪ್ರಿಯವಾದ ತಿಂಡಿಯಾಗಿತ್ತು.             ಜುಂಜಜ್ಜಿ ನನಗೆ ಅಂದು ಉಸೂಳಿ ಅವಲಕ್ಕಿ ಪೊಟ್ಟಣ ಕೊಡಿಸಿದಳು. ಅದನ್ನು ತಿಂದಾದ ಬಳಿಕ ಅದೇ ಅಂಗಡಿಯಲ್ಲಿ ಸಿಗುವ ನಾಲ್ಕು ಚಕ್ಕುಲಿಗಳನ್ನೂ ನನ್ನ ನೆಹರೂ ಶರ್ಟಿನ ಎರಡೂ ಕಿಶೆಗಳಲ್ಲಿ ತುಂಬಿದ ಬಳಿಕವೇ ನಾನು ಶಾಲೆಗೆ ಎಂಟ್ರಿಕೊಟ್ಟಿದ್ದೆ.             ನಾಡುಮಾಸ್ಕೇರಿಯವರೇ ಆದ ವೆಂಕಟ್ರಮಣ ಗಾಂವಕರ ಎಂಬುವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು. ಅಜಾನು ಬಾಹು ವ್ಯಕ್ತಿತ್ವ, ಅಚ್ಚಬಿಳಿಯ ಕಚ್ಛೆ ಪಂಚೆಯುಟ್ಟು ಅಂಥದ್ದೇ ಬಿಳಿಯ ನೆಹರೂ ಶರ್ಟ್ ತೊಟ್ಟ ವೆಂಕಟ್ರಮಣ ಗಾಂವಕರ ಕಟ್ಟುನಿಟ್ಟಿನ ಶಿಸ್ತಿಗೆ ಶಾಲೆಯ ಸಹ ಶಿಕ್ಷಕರೂ ಅಂಜಿ ವಿಧೇಯತೆ ತೋರುತ್ತಿದ್ದರು. ನನ್ನಂಥ ಮಕ್ಕಳು ಅವರ ಮುಂದೆ ಸುಳಿಯಲೂ ಭಯ ಪಡುತ್ತಿದ್ದರು. ಶಾಲೆಯ ವಾತಾವರಣದಿಂದ ಪಾರಾಗಿ ಹೊರಬರುವ ತವಕದಲ್ಲೇ ಇದ್ದ ನನ್ನನ್ನು ಇನ್ನೋರ್ವ ಗುರುಗಳು ಆತ್ಮೀಯವಾಗಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತ ನನ್ನ ಭಯ ನಿವಾರಿಸಿ ಶಾಲೆಯ ಕುರಿತು ಪ್ರೀತಿ ಹುಟ್ಟಿಸಿದರು. ಅವರು ಕುಚೆನಾಡ ತಿಮ್ಮಣ್ಣ ಮಾಸ್ತರರೆಂದೂ ಅಂಕೋಲಾ ತಾಲೂಕಿನ ಬೇಲೇಕೇರಿ ಊರಿನವರೆಂದೂ ನನಗೆ ಅರಿವಾಗಲು ವರ್ಷಗಳೇ ಕಳೆದಿದ್ದವು… ಅಂತೂ ಜುಂಜಜ್ಜಿಯ ದೇಖರೇಖಿಯಲ್ಲಿ ನಾನೂ ಶಾಲೆಗೆ ಸೇರಿದೆ… ******* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top