ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಜಲ್

ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ. ಪುಟಿಯುತ್ತಿದ್ದಪುಳಕಗಳೆಲ್ಲಾಎತ್ತಹೋದವೋಅರಳುತ್ತಿದ್ದಕನಸುಗಳೆಲ್ಲಾಎತ್ತಹೋದವೋ ಕಣ್ಣಂಚಿನಲ್ಲಿನೋವಿನಹನಿತುಳುಕುತ್ತಲೇಇದೆನಲಿಯುತ್ತಿದ್ದಭಾವನೆಗಳೆಲ್ಲಾಎತ್ತಹೋದವೋ ಸುಡುಸುಡುತ್ತಿದೆಅವ್ಯಕ್ತಬೇಗೆಒಡಲಾಳದಲ್ಲಿಅರಳುತ್ತಿದ್ದನವಿರುಹೂಗಳೆಲ್ಲಾಎತ್ತಹೋದವೋ ಹೃದಯವೀಣೆಯತಂತಿಯಾಕೋಮುರಿದಂತಿದೆಹಾಡುತ್ತಿದ್ದಮಧುರರಾಗಗಳೆಲ್ಲಾಎತ್ತಹೋದವೋ ಮೌನದಲಿರುವಬೆಳದಿಂಗಳೂಉರಿಬಿಸಿಲಾದಂತಿದೆಹರಡುತ್ತಿದ್ದತಂಪುಕಿರಣಗಳೆಲ್ಲಾಎತ್ತಹೋದವೋ ಹೆಪ್ಪುಗಟ್ಟಿದನೋವಿನಲ್ಲಿಅಳುತ್ತಿದೆಶ್ರೀಯಮನಸುರಿಯುತ್ತಿದ್ದಪ್ರೇಮದಹನಿಗಳೆಲ್ಲಾಎತ್ತಹೋದವೋ *********************************

ಗಜಲ್ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮೌ..ನದ ನಡುವಿನ ಮೌನ ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಡಿನ ನಟ್ಟ ನಡುವೆ, ಟೆಂಟ್ ನೊಳಗೆ ಮಲಗಿದ್ದೆ. ಚಿಕ್ಕಮಗಳೂರಿನ ಭದ್ರಾ ರಕ್ಷಿತಾರಣ್ಯದಲ್ಲಿ ಸ್ಕೌಟ್ ಕ್ಯಾಂಪ್ ಅದು. ವಿದ್ಯುತ್ ದೀಪಗಳು ಇರಲಿಲ್ಲ, ಕತ್ತಲು ಸುತ್ತಲೂ.  ವರ್ಷಗಳ ಹಿಂದೆ ದೂರ ನಕ್ಷತ್ರ ಗಳಿಂದ ಯಾತ್ರೆ ಹೊರಟು ಯಾತ್ರೆಯ ದಣಿವಿನಿಂದ ಮಂದವಾದ ಕಿರಣಗಳು, ತಂಗದಿರನ ಸೌಮ್ಯ ಬೆಳಕು ಮಾತ್ರ ಆ ಕಾಡನ್ನು ತಬ್ಬಿದ್ದವು. ಟೆಂಟು ಸುತ್ತಲೂ ಗಗನಕ್ಕೆ ಗೆಲ್ಲು ಚಾಚಿದ ಬೃಹತ್ ವೃಕ್ಷಗಳು. ಅವುಗಳಿಂದಾಚೆಗೆ ಕತ್ತಲೆ ಅಂದರೆ ಕತ್ತಲೆಯೇ. ಟೆಂಟ್ ನೊಳಗೆ ಕಣ್ಣೆಷ್ಟು ಅರಳಿಸಿದರೂ ಅರಿವಿಗೇ ಎಟುಕದಟಷ್ಟು ಕತ್ತಲೆ. ಅದಕ್ಕಿಂತ ಗಾಢ ಅನುಭೂತಿ ಮೌನದ್ದು. ಎಲ್ಲೋ ದೂರದ ಪ್ರಾಣಿಗಳ ಕೂಗನ್ನು ಬಿಟ್ಟರೆ ಅಲ್ಲಿ ಶಬ್ಧಶೂನ್ಯತ್ವ. ಆ ಮೌನದ ತಂಪಿನಲ್ಲಿ ಮನಸ್ಸು ತಣಿದು ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತೆ. ನಮ್ಮ ಎದೆಬಡಿತ ನಮಗೇ ಕೇಳ ತೊಡಗುತ್ತೆ. ಸಾಗರದ ಅಲೆಗಳು ಶಾಂತವಾದಾಗ ಆಳದಲ್ಲಿ ಸದ್ದಿಲ್ಲದೆ ನಡೆಯುವ ಹರಿವಿನ ಅನುಭೂತಿ ಆಗುತ್ತೆ. ಆಳದಲ್ಲಿ ಈಜಾಡುವ ಮೀನುಗಳು, ಬೃಹತ್ ತಿಮಿಂಗಿಲಗಳು, ರಕ್ತಕ್ಕಾಗಿ ಹಸಿದು ಅಸಹನೆಯಿಂದ ಸರಸರನೆ ಈಜುವ ಶಾರ್ಕ್ ಗಳು ಮತ್ತು ಇನ್ನಿತರ ಜಲಚರಗಳು ತಮ್ಮ ಚಲನೆಯಿಂದ ನಡೆಯುವ ತಲ್ಲಣಗಳು ಅರಿವಿಗೂ ಬರುತ್ತವೆ. ಹೃಷೀಕೇಶದ ತಪ್ಪಲಿನಿಂದ, ಹಿಮಾಲಯದ ಏರು ಆರಂಭ. ಹತ್ತಾರು ಕಿಲೋಮೀಟರ್ ಹತ್ತಿದರೆ ವಸಿಷ್ಠ ಗುಹೆ. ಅದರೊಳಗೆ ಕುಳಿತರೂ ಅಷ್ಟೇ, ರಾತ್ರೆಯ ಕತ್ತಲು, ಹಿಮಾಲಯದ ತಂಪಿಗೆ, ಮನಸ್ಸು ಸ್ಪಟಿಕೀಕರಿಸಿ ಮೌನ ಸಂಭವಿಸುತ್ತೆ. ಒಂದು ವಿಷಯ ಗಮನಿಸಿ. ಮೌನ ಎಂದರೆ ನಾಲಿಗೆಯನ್ನು ಸುಮ್ಮನಿರಿಸುವುದಲ್ಲ, ಕಿವಿ ಮುಚ್ಚುವುದೂ ಅಲ್ಲ. ನಮ್ಮ ಇಂದ್ರಿಯಗಳು ಹೊರಗಿನ  ಅಲೆಗಳಿಗೆ ಸ್ಪಂದಿಸುತ್ತಲೇ ಇರುತ್ತವೆ. ದೃಶ್ಯ, ಶಬ್ದ, ಸ್ಪರ್ಶ, ರಸಸ್ವಾದ, ವಾಸನೆ ಇವುಗಳನ್ನು ಗ್ರಹಿಸಿ ಪ್ರತಿಕ್ರಿಯೆ ಕೊಡುತ್ತವೆ. ಇವು ದೇಹದ ಚಟುವಟಿಕೆಗಳಿಗೆ ಅಗತ್ಯವೂ ಹೌದು. ಮೌನದ ಮೊದಲನೆಯ ಹಂತದಲ್ಲಿ, ಈ ಇಂದ್ರಿಯಗಳನ್ನು ಸಂಪೂರ್ಣ ಶಾಂತವಾಗಿಸಬೇಕು. ಅದು ಮೌನದ ಮೊದಲ ಹಂತ. ಮೌನದ ಎರಡನೆಯ ಹಂತದಲ್ಲಿ, ಭಾವ ಮತ್ತು ಕಲ್ಪನೆಗಳನ್ನು ಮೌನಕ್ಕೆ ಶರಣಾಗಿಸುವ ಕ್ರಿಯೆ. ಕಣ್ಣು ಮುಚ್ಚಿದರೆ, ಹೊರಗಿನ ದೃಶ್ಯ ಕಾಣದಿರಬಹುದು. ಆದರೆ ಮನಸ್ಸು, ಇಷ್ಟವಾದ, ಹಲವು ದೃಶ್ಯಗಳನ್ನು ಮನ:ಪಟಲದ ಮುಂದೆ ತಂದು ಆನಂದಿಸುತ್ತದೆ. ಹಾಗೆಯೇ ಶಬ್ಧವೂ. ಕಿವಿ ಮುಚ್ಚಿದರೂ, ಮನಸ್ಸಿನೊಳಗೆ ಇಷ್ಟವಾದ ಯಾವುದೋ ಹಾಡು, ಇನಿಯೆಯ ಪ್ರೀತಿಯ ಮಾತುಗಳು, ಮೇಷ್ಟ್ರು ಬೈದ ಮಾತುಗಳು, ಹೀಗೆ ಹತ್ತು ಹಲವು ಶಬ್ಧಗಳು ನಿಃಶಬ್ಧದ ಬಾಗಿಲು ಮುರಿದು ಒಳ ನುಗ್ಗುತ್ತವೆ. ಈ ಕಾನ್ಶಿಯಸ್ ಮೈಂಡ್ ಅನ್ನು ಮೌನವಾಗಿಸುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ಧ್ಯಾನಕ್ಕೆ ಮನಸ್ಸನ್ನು ಸಮರ್ಪಿಸಿದರೆ, ಮೌನದ ತುರೀಯಕ್ಕೆ ಪ್ರಜ್ಞೆ ತಲಪುತ್ತೆ. ಇದರ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ.  “ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ” ಅರಬಿಂದೋ ಅವರ ಧ್ಯಾನ ಯೋಗದಿಂದ ಪ್ರೇರಣೆ ಪಡೆದು ೧೯೪೮ರಲ್ಲಿ, ಬೇಂದ್ರೆ ಮತ್ತು ವಿ.ಕೃ. ಗೋಕಾಕ್ ಅವರು, ಇತರ ಸಮಾನ ಮನಸ್ಕ ಗೆಳೆಯರ ಜತೆಗೆ ಮೌನ ಸಪ್ತಾಹ ಆಚರಿಸುತ್ತಾರೆ. ಆ ಮೌನ ಸಪ್ತಾಹದಲ್ಲಿ, ಮೌನಾಚರಣೆಯ ಗರ್ಭದ ಆಳಚಿಂತನೆಯಿಂದ ಅವರು ಬರೆದ ಕವನ ” ಅಸ್ಮಿತಾ” ಅದರ ಕೊನೆಯ ಸಾಲುಗಳು ಹೀಗಿವೆ. “ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ ಶ್ರುತಿಯನ್ನು ಹಿಡಿದಿರುವೆಯಾ ? ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು ಓಂವೇದ ಪಡೆದಿರುವೆಯಾ ? ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಫೂರ್ತಿಸಿತ್ತು ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ ಸ್ಮಿತವಾಗಿ ಮೂರ್ತಿಸಿತ್ತು.” ಮೌನದಾಚೆಗಿನ ಧ್ಯಾನಸ್ಥ ಸ್ಥಿತಿಯಿಂದ, ” ಸ್ಮಿತವೆ ವಿಸ್ಮಿತವಾಯ್ತು, ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಪೂರ್ತಿಸಿತ್ತು, ” ಶಬ್ದಗಳ ಶಬ್ಧಕ್ಕೆ ಮೀರಿದ ಸಾಲುಗಳಿವು. ಕಳಿಂಗ ಯುದ್ಧದ ನಂತರದ ರಾತ್ರೆ, ಚಕ್ರವರ್ತಿ ಅಶೋಕ ತಾನೇ ಹರಿಸಿದ ರಕ್ತದ ಕೋಡಿಯನ್ನು ನೋಡಿ ಹಲವು ಚಿಂತನೆಗಳಿಗೊಳಗಾಗುತ್ತಾನೆ. ರಾತ್ರೆಯಿಡೀ ಆತನ ಮೌನ, ಮಾರನೆಯ ದಿನ ತನ್ನ ಬದುಕನ್ನೇ ಅಹಿಂಸೆಗೆ ಸಮರ್ಪಣೆ ಮಾಡುವ ನಿರ್ಧಾರದ ಹಿಂದೆ ಯುದ್ಧಾನಂತರದ ಮೌನವಿದೆ. ಧಾರಾಕಾರವಾಗಿ ಸುರಿದ ಮಳೆ, ಸಿಡಿಲು, ಕೋಲ್ಮಿಂಚು, ನಂತರ ಎಲ್ಲವೂ ಮೌನವಾಗುತ್ತೆ. ತಡೆಯಲಾದ ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತ ನಂತರವೂ ಒಂದು ಸುದೀರ್ಘ ಮೌನವಿರುತ್ತದೆ. ಗಂಡ ಹೆಂಡತಿಯರ ಜಗಳದ ನಂತರದ ಮೌನಕ್ಕೆ ಔಷಧೀಯ ಗುಣವಿದೆ. ಮೌನ ಖಾಲಿ ಹಾಳೆಯಂತೆ. ಅದರಲ್ಲಿ ನೀವೇನು ಕಾಣ ಬಯಸುತ್ತೀರೋ,ಅದನ್ನು ಬರೆಯಬಹುದು. ಅದಕ್ಕೇ ಮೌನವನ್ನು ಕವಿಗಳು ಕಾಡಿ ಕಂಡು ಹಾಡಿ, ಬಳಸಿದ್ದಾರೆ. ಬೇಂದ್ರೆಯವರ “ಏಲಾಗೀತ” ದಲ್ಲಿ ಮೌನದ ಅಪೂರ್ವ ಸಾಲು ಹೀಗಿದೆ. “ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು  ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. “ ಮೌನ, ಶಬ್ಧಕ್ಕೆ ಹಾಸಿಗೆ ಅನ್ನುತ್ತಾರೆ,ಬೇಂದ್ರೆಯವರು ಗೋಪಾಲಕೃಷ್ಣ ಅಡಿಗರ ಈ ಕೆಳಗಿನ ಕವನ ಆರಂಭವಾಗುವುದೇ ಮೌನದಿಂದ. “ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು; ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಭೂಮಿಯೇ ಮೌನವನ್ನು ಬೆಚ್ಚಗೆ ಅಪ್ಪಿಕೊಂಡು ಪುಳಕಗೊಳ್ಳುವಾಗ, ಆಕೆ ಧಾರಿಣಿಯಾಗುತ್ತಾಳೆ. ಹಿಂದುಸ್ತಾನಿ ಸಂಗೀತದಲ್ಲಿ, ಒಂದು ಸ್ವರವನ್ನ ಬಿಗಿ ಹಿಡಿದು ಕಡಿಯದ ಧಾರೆಯಂತೆ ಮಾಡುವ ಸುದೀರ್ಘ ಆಲಾಪಕ್ಕೆ, ಧಾರಣೆ ಅನ್ನುವುದಿದೆ. ಧಾರಣೆಯಲ್ಲಿ ಸ್ವರಸಮರ್ಪಣೆಯ ಧ್ಯಾನಸ್ಥ ಮನಸ್ಸಿದೆ. “ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಪ್ರಕೃತಿಯ ಕ್ರಿಯೆಗಳು ಮೌನವನ್ನು ಜತೆ ಜತೆಗೇ ಹೊತ್ತು ತರುತ್ತವೆ. ನಾವು ನಡೆಯುವಾಗ, ಎರಡು ಹೆಜ್ಜೆಗಳ ನಡುವೆ ಮೌನವಿದೆ. ನಾವು ಬರೆಯುವ ವಾಕ್ಯಗಳಲ್ಲಿ ಪದಗಳ ನಡುವೆ ಮೌನವಿದೆ. ಸ್ಫುರಿಸುವ ಭಾವ ವೈವಿಧ್ಯಗಳ ನಡುವೆ ಮೌನವಿದೆ. ನಿತ್ಯಕವಿ ನಿಸಾರ್ ಅಹಮದ್ ಅವರ ಬೇಸರಾಗಿದೆ ಮಾತು ಕವನದ ಕೆಲವು ಸಾಲುಗಳು ಹೀಗಿದೆ ನೋಡಿ. ” ಬೇಸರಾಗಿದೆ ಮಾತು, ಭಾರವಾಗಿದೆ ಮೌನ ನೋವು ಕರಗಿದೆ ಕಣ್ಣಲ್ಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿಯದಂತೆ ಭಾವ ಕುಟುಕಿದೆ ಮನದಲಿ ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ ಹೊಸತು ಬದುಕಿನ ಬಯಕೆಗೆ” ಅಡಿಗೆ ಚುಚ್ಚಿದ ಮುಳ್ಳು, ಒಳಗಡೆಯೆ ಮುರಿದು, ನೋವೇ ಕಣ್ಣೀರಲ್ಲಿ ಕರಗಿದ ದುಃಖದಿಂದ, ಮೌನ ಸಹಜವೂ ಹೌದು, ಆ ಮೌನ ಭಾರವೂ ಹೌದು. ಆದರೆ ಅಂತಹ ಮೌನ ನೋವಿನ ಹಿಂದಿನ ಬಂಧನದ ಅರಿವನ್ನು ತಿಳಿಯಾಗಿಸಲು ದಾರಿಯಾಗುತ್ತೆ. ಎಲ್ಲ ನಂಟನು ತೊರೆದು ನಗ್ನವಾದ ಜೀವ, ಹೊಸ ಬದುಕಿನತ್ತ ಕದ ತೆರೆಯುತ್ತೆ. ಈ ಎಲ್ಲ ನಂಟನು ತೊರೆದು ನಗ್ನವಾಗುವ ಕ್ರಿಯೆಯ ಮೂಲದಲ್ಲಿ ಮೌನ ಸೃಜಿಸಿದ ಮಂಥನವಿದೆ. ಹುಟ್ಟಿದ ನೆಲದಿಂದ ಗಿಡವನ್ನು ಕಿತ್ತು ತೆಗೆದರೆ ಗಿಡಕ್ಕೆಷ್ಟು ನೋವಾಗಬಹುದು. ಹಾಗೆ ಬೇರು ಸಹಿತ ಕಿತ್ತ ಗಿಡವನ್ನು ದೂರದ ಅರಿಯದ ಹೊಲದಲ್ಲಿ ನೆಟ್ಟರೆ?. ಮದುವೆಯಾಗಿ ಪ್ರೀತಿಯ ತನ್ನ ಮನೆ  ತವರುಮನೆಯಾಗುವ ಮಾರ್ಪಾಡಿನಲ್ಲಿ, ತಿಳಿಯದ ಇನ್ನೊಂದು ಮನೆ ಸ್ವಂತದ್ದಾಗಿಸಲೇ ಬೇಕಾದ ಟ್ರಾನ್ಸಿಷನ್ ಹೂಮನಸ್ಸಿನ ಹುಡುಗಿಗೆ ಹೇಗನಿಸಬಹುದು?. ಗಂಡನ ಮನೆಯ ಆ ಮೊದಲ ದಿನದ ಮೌನದ ಬಗ್ಗೆ ಬಹುಷಃ ಕೆ ಎಸ್ ನ ಅವರಿಗಿಂತ ಚಂದ ಯಾರೂ ಬರೆಯಲಾರರು. “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ” ಅಂತಹ ತಳಮಳ, ತನ್ನವರ ಅಗಲಿಕೆಯ ದುಃಖ,  ಭಾವೋದ್ವೇಗ, ಭಯ, ಎಲ್ಲವನ್ನೂ ಈ ಮೊದಲ ದಿನ ಮೌನ, ಮೌನವಾಗಿಯೇ ಹೇಳಿಬಿಡುತ್ತೆ. ಪು ತಿ ನ ಅವರ “ಯದುಗಿರಿಯ ಮೌನ ವಿಕಾಸ” ಎಂಬ ಕವನವೂ ಮೌನ ಪ್ರತಿಮೆಯ ಸುತ್ತ ಹಲವು ರೂಪಗಳ ಕೆತ್ತಿದೆ.. ಈ ಕವಿತೆಯ ಬಗ್ಗೆ ಬರೆಯಲು ಒಂದು ಪೂರ್ತಿ ಲೇಖನವೂ ಸಣ್ಣದಾದೀತು, ಮುಂದೊಂದು ದಿನ ಬರೆಯುವೆ. “ಅಲೆಯೊಳಗಿನ ಮೌನ”  ಎಂಬ ಗಜಲ್ ಸಂಕಲನದಲ್ಲಿ ಶ್ರೀದೇವಿ ಕೆರೆಮನೆ ಅವರ ಕವಿತೆಯೂ ಪ್ರೀತಿ ಸಂವಾದದ ಸಾಲುಗಳಲ್ಲಿ ಮೌನಕ್ಕೆ ಹಲವು ಅರ್ಥಪ್ರಯೋಗ ಮಾಡಿದೆ. “ಯುಗಾಂತರದಿಂದಲೂ ಮೌನಕ್ಕೆ ಜಾರಿದಂತೆ ಮನಸ್ಸು ಹೆಪ್ಪುಗಟ್ಟುತ್ತಿದೆ ನಿನ್ನ ಒಂದು ಮಾತು ನನ್ನ ಬದುಕಿಗೆ ಮರಳುವಂತೆ ಮಾಡುತ್ತಿದೆ ಮೌನದಿಂದ ನನ್ನನ್ನು ಕೊಲ್ಲುವ ಇರಾದೆ ಏಕೆ ನಿನಗೆ ನಿನ್ನ ಮೌನ ನನ್ನನ್ನು ಇರಿದಿರಿದು ಸಾಯಿಸುತ್ತಿದೆ. ಮುಗಿದ ಮಾತುಗಳ ಮೌನದರಮನೆಗೆ ರಾಣಿಯಾಗಲಾರೆ ಅರಮನೆಯ ಸಂಕಲೆ ನನ್ನನ್ನು ದಿಕ್ಬಂಧನಕ್ಕೆ ಒಳಪಡಿಸುತ್ತಿದೆ ಮಾತಿಗೂ ಬರಗಾಲ ತಂದಿಡುವ ಆಶಯವಾದರೂ ನಿನಗೇಕೆ? ಮಾತು ಈಗ ದೂರದಲ್ಲಿ ಸೆಳೆಯುವ ಮೃಗಜಲದಂತೆ ಗೋಚರಿಸುತ್ತಿದೆ. ಸಾಕುಬಿಡು ನಿನ್ನ ಗಾದೆ ಮಾತಿನ ಥಳುಕಿಗಷ್ಟು ಬೆಂಕಿಯಿಡು ಬದುಕಿಸುವ ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ. ಎಂದಾದರೂ ಬದುಕು ಮೌನದ ಕಣಿವೆಯೊಳಗೆ ಜಾರಲೇ ಬೇಕು ‘ಸಿರಿ’ ಒಂದಾಗಿಸುವ ಮೃದು ಮಾತನ್ನಷ್ಟೇ ಬೇಡುತಿದೆ.” ಮೌನ ವಿರಹಸೂಚಕವಾಗಿ, ಮೌನವೇ ಎದೆಗಿರಿಯುವ ಆಯುಧವಾಗಿ, ಮೌನ ಅರಮನೆಯಾಗಿ, ಸಂಕಲೆಗಳಾಗಿ,  ಮಾತಿನ ಬರಗಾಲವಾಗಿ,  ಮೌನ,ಬದುಕಿನ ಅನಿವಾರ್ಯ ಕಣಿವೆಯಾಗಿ ಚಿತ್ರಿಸಲ್ಪಟ್ಟದ್ದು ಕವಯಿತ್ರಿಯ ಸೃಜನಶೀಲತೆಗೆ ಸಾಕ್ಷಿ. ಅಲೆಯೊಳಗಿನ ಮೌನ ಎಂಬ ಸಂಕಲನದ ಶೀರ್ಷಿಕೆಗೂ ವಿಶೇಷ ಅರ್ಥವಿದೆ. ನಾದ ಎಂಬುದು ಒಂದಕ್ಕೊಂದು ಜೋಡಣೆಯಾಗಿ ಕಾಲಗತಿಯಲ್ಲಿ ಸಂಚರಿಸುವ ಅಲೆಯ ಪ್ರವಾಹ. ಆ ನಾದದೊಳಗೆ, ತರಂಗಾವರ್ತನಗಳೊಳಗೆ ಮೌನ ಕಾಣುವ ಅನನ್ಯ ನೋಟ ಕವಯಿತ್ರಿ ಅವರದ್ದು. ಜನವರಿ ಇಪ್ಪತ್ತಾರು, ಕೆ ಎಸ್ ನ ಅವರ ಮತ್ತು ಮೂವತ್ತೊಂದು ಬೇಂದ್ರೆಯವರ ಜನ್ಮ ದಿನ. ಅವರಿಬ್ಬರ ದಿವ್ಯ ಭವ್ಯ ಚೇತನಗಳಿಗೆ ಶಿರಬಾಗಿ ನಮಿಪೆ. ********************************************************** ಮಹಾದೇವ ಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಕಥಾಗುಚ್ಛ

ಅಧ್ಯಾತ್ಮಿಕ ತುಡಿತದೆಡೆಗೆ ಮನ

ಕಥೆ ಅಧ್ಯಾತ್ಮಿಕ ತುಡಿತದೆಡೆಗೆ ಮನ ಬಸವರಾಜ ಕಾಸೆ ಆತ ಪ್ರಕಾಶ, ಅದೇನೋ ಚಿಕ್ಕವನು ಇದ್ದಾಗಿನಿಂದಲೇ ದೇವರೆಂದರೆ ಆತನಿಗೆ ಅಪಾರ ಭಕ್ತಿ. ಅವನ ಮನಸ್ಸು ಸದಾ ಅಲೌಕಿಕ ಕಡೆಗೆ ತುಡಿಯುತ್ತಿತ್ತು. ಆತನ ಮೈ ಬಣ್ಣ ಕಡುಕಪ್ಪು. ಆದರೆ ಶ್ವೇತ ಬಣ್ಣದ ಅತ್ಯಂತ ಸುಂದರ ಭಾವನೆಗಳಿದ್ದವು. ಆ ಬಣ್ಣದ ಕಾರಣದಿಂದ ಬಂಧುಗಳಿಂದಲೇ ಒಂದಿಷ್ಟು ತಿರಸ್ಕಾರಕ್ಕೆ ಒಳಗಾಗಿದ್ದ. ಆತನದು ಕೆಳಜಾತಿ ಎನ್ನುವ ಕಾರಣಕ್ಕೆ ಇನ್ನೂ ಹೊರಗಿನ ಜನಗಳಿಂದ ಅಸಡ್ಡೆಗೆ ಒಳಗಾಗಿದ್ದ. ಇವೆಲ್ಲವೂ ಒಂದೊಂದಾಗಿ ಬೆಳೀತಾ ಬೆಳೀತಾ ಆತನ ಅರಿವಿಗೆ ಬರತೊಡಗಿತು. ಇದರಿಂದಾಗಿ ಆತ ಹೆಚ್ಚೆಚ್ಚು ಇತರರೊಂದಿಗೆ ಬೆರೆಯುವುದನ್ನು ಬಿಟ್ಟು ಒಬ್ಬಂಟಿಯಾಗಿ ಉಳಿಯತೊಡಗಿದ. ಇದರಿಂದ ಆಚೆ ಬೇರೆ ಒಂದಕ್ಕೆ ಅವನು ಸದಾ ಚಡಪಡಿಸುತ್ತಿದ್ದ. ಮತ್ತೆ ಈ ಜಾತಿ ಅಂತಹ ಅನಿಷ್ಟ ಕಟ್ಟಳೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದೇ ಹಂಬಲಿಸುತ್ತಿದ್ದನು. ಬಣ್ಣ ನೋಡಿ ಹೀಯಾಳಿಸುವವರೇ ಈ ಬಣ್ಣ ಒಪ್ಪಿ ಮೆಚ್ಚಬೇಕು ಎಂದೆಲ್ಲಾ ಹಾತೊರೆಯುತ್ತಿದ್ದ. ಕೃಷ್ಣನೂ ಸಹ ಕಪ್ಪು, ಆದರೆ ಕೃಷ್ಣನೆಂದರೆ ಅದೆಂತಹ ಮೋಹ ಅಂತೆಯೇ ಈ ಕಪ್ಪು ಅಂದರೂ ಸಹ ಅಂತಹ ಒಂದು ವ್ಯಾಮೋಹ, ಎಲ್ಲಾ ದೇವರುಗಳು ಎಂತೆಂತಹ ಜಾತಿ, ಅವರನ್ನೊಮ್ಮೆ ಕೇಳಿ ಬರಬೇಕು ಎಂಬ ತರಾತುರಿ. ಬಣ್ಣ, ಜಾತಿ ಮೊದಲಾದ ಮನುಷ್ಯ ಸೃಷ್ಟಿ ದಬ್ಬಾಳಿಕೆಗಳ ಅಂತ್ಯ ಎನ್ನುವ ಆತನ ಗುರಿಯೊಂದಿಗೆ ಅಧ್ಯಾತ್ಮದೆಡೆಗಿನ ಒಲವು ದಿನ ಕಳೆದಂತೆ ಹೆಚ್ಚಾಗತೊಡಗಿತು. ಯಾವುದಾವುದೋ ಧ್ಯಾನ ಶಿಬಿರಗಳಲ್ಲಿ ವರ್ಷಗಟ್ಟಲೆ ಕಳೆದ. ಯೋಗ ಸಿದ್ದಿಯನ್ನು ರೂಢಿಗತ ಮಾಡಿಕೊಂಡ. ಪಾಠ ಪ್ರವಚನಗಳಲ್ಲೇ ಸದಾ ಮಗ್ನನಾಗಿರುತ್ತಿದ್ದ. ಅದೆಷ್ಟೋ ವರ್ಷಗಳು ಕಳೆದರೂ ಆತ ಇನ್ನೂ ಸರಿಯಾಗಿ ಮಾರ್ಗದರ್ಶನ ನೀಡುವ ಗುರುವಿನ ಹುಡುಕಾಟದಲ್ಲಿ ಇದ್ದ. ಜಾತಿಗೆ ಒಂದೊಂದು ಮಠ. “ನಿಮ್ಮ ಸೇವೆ ಮಾಡುವೆ, ಮಾರ್ಗದರ್ಶನ ನೀಡಿ” ಅವರೆಲ್ಲಾ ಕೇಳಿದೊಂದೆ “ನಿನ್ನದು ಯಾವ ಜಾತಿ”. ಅಲ್ಲಿಯೂ ಇವನಿಗೆ ಸ್ಥಳವಿರಲಿಲ್ಲ. ತನ್ನದೇ ಜಾತಿಯ ಮಠಕ್ಕೆ ಹೋದರೆ ಅಲ್ಲಿ ಬಣ್ಣದ ನೆಪ. ಹೆಚ್ಚಿನ ಮಠಗಳು ನೂರಾರು ವೈವಿಧ್ಯಮಯ ವ್ಯಾಪಾರಗಳು ಕುದುರುವ ಮತ್ತು ನಡೆಸುವ ಪುಣ್ಯ ಸ್ಥಳಗಳಾಗಿದ್ದವು. ಈತ ನಡೆ ಮುಂದೆ, ನಡೆ ಮುಂದೆ ಎಂದು ಖಾಲಿ ಜೋಳಿಗೆಯೊಂದನ್ನು ನೇತು ಹಾಕಿಕೊಂಡ ಫಕೀರ ದೇಶ ಸುತ್ತುತ್ತಾ ಹೊರಟ. ಆದರೆ ಅವನ ಆ ಜೋಳಿಗೆ ಜ್ಞಾನದಿಂದಲೇ ತುಂಬಿಕೊಂಡಿತು. ಪ್ರತಿ ಪ್ರದೇಶಕ್ಕೆ ಹೋದಾಗಲೂ ಹೊಸ ಹೊಸ ಅನುಭವ, ವಿಚಿತ್ರ ವಿಚಿತ್ರ ಜನಗಳ ಪರಿಚಯ, ವಿಭಿನ್ನ ಪರಿಸರದ ಸ್ವಾದ ಸವಿಯುತ್ತಲೇ ನಡೆದೇ ಇದ್ದ. ಆತನಿಗೆ ವಿಶ್ರಾಂತಿ ಬೇಕು ಎನಿಸಿದಾಗ ಸಿಗುವ ಸ್ಥಳವೇ ನೆಮ್ಮದಿ ತಾಣ. ಎಲ್ಲಿ ಏನು ಸಿಗುತ್ತೋ ಅದೇ ಆಹಾರ. ಜೀವನದ ಎಲ್ಲಾ ಜಂಜಾಟಗಳಿಂದ ದೂರ ಆಗಿದ್ದ ಆತನಿಗೆ ಸ್ವಾರ್ಥಗಳ ಪರಿಕಲ್ಪನೆಯೇ ನಡುಕ ಹುಟ್ಟಿಸುತ್ತಿತ್ತು. ಅದೆಷ್ಟೋ ವರ್ಷಗಳ ಕಾಲ ನಡೆದು ಎಲ್ಲಾ ದೇವ ಸನ್ನಿದಿಗಳಿಗೆ ಭೇಟಿ ನೀಡಿದ. ಕೊನೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿ ಇದ್ದ ಅಘೋರಿಗಳ ಪರಿಚಯಿಸಿಕೊಂಡು ಮುಕ್ತಿ ಮಾರ್ಗದೆಡೆಗೆ ಮುಕ್ತ ಮನಸ್ಸಿನಿಂದ ನನ್ನನ್ನು ಮುನ್ನೆಡೆಸಿ ಎಂದು ವಿನಂತಿಸಿದ. ಕೊನೆಗೆ ಒಬ್ಬ ಅಘೋರಿ ಕಠಿಣ ಯಾಗ, ಪರಿಶ್ರಮ, ತಪೋಧ್ಯಾನಗಳ ಕುರಿತು ನಿರಂತರವಾಗಿ ತಿಳಿಸುತ್ತಾ ಹೋದ. ಭಯಂಕರವಾದ ವಿಭಿನ್ನ ತಪಸ್ಸುಗಳನ್ನು ಆಚರಿಸತೊಡಗಿದ. ಆತನಿಗೆ ಈ ಜಗದ ಪರಿವೆ ಇರದೇ ಅದರಲ್ಲಿಯೇ ಕಳೆದು ಹೋಗಿ ಬಿಟ್ಟಿದ. ಭಂಗಿ ಸೇದುವುದೇ ಆತನ ಶಕ್ತಿ ಹೆಚ್ಚು ಮಾಡುತಿತ್ತು. ಇನ್ನೂ ಆಹಾರವಂತೂ ಸಿಕ್ಕಿದೆಲ್ಲವೂ ತಿನ್ನತೊಡಗಿದ. ರಹಸ್ಯ ವಿದ್ಯೆಗಳು ಎಲ್ಲಾವನ್ನು ತನ್ನೊಳಗೆ ಅರಗಿಸಿಕೊಳ್ಳತೊಡಗಿದ. ಆತನಿಗೆ ಅದೊಂದು ಸುಂದರ ಪ್ರಪಂಚವೇ ಆಗಿ ಹೋಗಿತ್ತು. ಆತನ ಮೈ ಮನಸ್ಸು ಹೇಗೇಗೋ ಹದಗೊಂಡು ಮತ್ತೊಂದು ರೂಪವೇ ಪಡೆದಿತ್ತು. ಹೀಗಾದರೆ ತನ್ನ ಗುರಿ ಎಂದುಕೊಂಡು ಹಿಮಾಲಯ ಬಿಟ್ಟು ಮತ್ತೆ ದೇಶ ಸುತ್ತುತ್ತಾ ಹಿಂತಿರುಗತೊಡಗಿದ. ಮತ್ತೆ ದಾರಿಯುದ್ದಕ್ಕೂ ಅಪರಿಚಿತ ಜನರೊಂದಿಗೆ ಓಡಾಟ, ಆತನ ದಿವ್ಯ ತೇಜಸ್ಸಿನ ಮುಖ ಮತ್ತು ಇರುವ ಜ್ಞಾನಕ್ಕೆ ಅಲ್ಲಲ್ಲಿ ಜನ ಸೋತು ಹೋದರು. ದಾರಿಯಲ್ಲಿ ಎಲ್ಲೇ ಏನೇ ಪ್ರವಚನ ನಡೆಯುತ್ತಿದ್ದರೂ ಅಲ್ಲಿ ಹೋಗಿ ವಾದಿಸತೊಡಗಿದ. ದೊಡ್ಡ ದೊಡ್ಡ ಸ್ವಾಮೀಜಿಗಳೇ ಬೆರಗಾಗುವಂತೆ ತನ್ನ ಸಿದ್ದಾಂತಗಳನ್ನು ಪ್ರತಿಪಾದಿಸತೋಡಗಿದ. ಹೋದಲ್ಲಿ ಎಲ್ಲಾ ತನ್ನದೇ ಉಪದೇಶಗಳನ್ನು ನೀಡತೊಡಗಿದ. ಅಧ್ಯಾತ್ಮಿಕತೆಯ ಉತ್ತುಂಗ ತಲುಪಿದ ಆತನ ಬೋಧನೆಗಳು ಸರಳವಾಗಿ ಜನರ ಮನಸ್ಸಿಗೆ ನಾಟಿದವು. ಈತನ ಈ ಕಾರ್ಯಗಳೆಲ್ಲವೂ ಜನರಿಂದ ಜನರಿಗೆ ಹಬ್ಬಿ ಮಾಧ್ಯಮಗಳ ಮೂಲಕ ಎಲ್ಲರನ್ನೂ ತಲುಪತೊಡಗಿದ. ಆತನ ಈ ದಾರಿಯಲ್ಲಿ ಎಷ್ಟೋ ಜನ ಆತನ ಭಕ್ತರಾದರೆ ಇನ್ನೂ ಕೆಲವರು ಆತನ ಶಿಷ್ಯಂದಿರೇ ಆದರು. ತನ್ನ ಸ್ವಂತ ಊರು ತಲುಪುವಷ್ಟರಲ್ಲಿ ಆತನ ಖ್ಯಾತಿ ಮನೆ ಮಾತಾಗಿತ್ತು. ಜಾತಿ, ಬಣ್ಣಗಳ ಮೀರಿ ಬೆಳೆದ ಆತನಿಗೆ ಅನುಯಾಯಿಗಳೇ ಆಶ್ರಮವೊಂದನ್ನು ಕಟ್ಟಿಸಿಕೊಟ್ಟರು. ಕಾಲ ಕಳೆದಂತೆ ವಿದೇಶಿ ಹಣವೂ ಹರಿದು ಬಂತು. ಅಣ್ಣ ಎಂದು ಆತನ ಶಿಷ್ಯಂದಿರೇ ಕರೆಯುತ್ತಿದ್ದರಿಂದ ಆತ ಅಣ್ಣ ಎಂದೇ ಹೆಸರು ವಾಸಿಯಾದ. ಕೈ ಕುಲುಕುವ ಒಂದು ಹೊಸ ಪದ್ಧತಿಯನ್ನು ರೂಡಿಸಿಕೊಂಡ ಆತನ ಕೈ ಕುಲುಕಲು ಇಂದು ಶ್ವೇತ ಬಣ್ಣದವರು, ಉಚ್ಚ ಜಾತಿಯವರು ಸರದಿಯಲ್ಲಿ ನಿಂತರೂ ಆತನ ದರುಶನವೇ ಇನ್ನೂ ಸಿಗುತ್ತಿಲ್ಲ. ****************************************

ಅಧ್ಯಾತ್ಮಿಕ ತುಡಿತದೆಡೆಗೆ ಮನ Read Post »

ಅಂಕಣ ಸಂಗಾತಿ

ಅಂಕಣ ಬರಹ ಮಕ್ಕಳು ಮಾತ್ರ ಹೀಗಿರಲು ಸಾಧ್ಯ ಅಲ್ಲವಾ.. ಹೆರಿಗೆ ನೋವು ಶುರುವಾಗುವ ಸೂಚನೆಗಳಿದ್ದವು. ಅಂದು ಬೆಳಗ್ಗೆ ಮಗ್ಗಲು ಬದಲಾಯಿಸುವಾಗಲೇ ಎಂಥದೋ ನೋವಿನ ಸಳುಕು ಚುಳ್ ಎನ್ನಲು ಶುರುಮಾಡಿತ್ತು. ನಿಧಾನ ಎದ್ದು ನೆಲಕ್ಕೆ ಕಾಲು ಊರಿದಾಗ ಪಾದಗಳು ನೋಯುತ್ತಿದ್ದವು. ಇನ್ನು ಈ ದೇಹದ ಭಾರ ಹೊರಲಾರೆ ಎನ್ನುವಷ್ಟು  ಊದಿಕೊಂಡಿದ್ದ ಪಾದಗಳು ಇಡಲಾರದೆ ಹೆಜ್ಜೆ ಇಡುತ್ತಿದ್ದವು. ಮೆಲ್ಲಗೆ ಹೋಗಿ ಹಲ್ಲುಜ್ಜಿ, ಮುಖ ತೊಳೆದು ಬಂದೆ. ಹೆರಿಗೆ ನೋವು ಶುರುವಾಗಿಯೇ ಬಿಟ್ಟಿತು… ಸಮುದ್ರದ ಅಲೆಯಂತಹ ನೋವದು. ಬಿಟ್ಟು ಬಿಟ್ಟು ಬರುತ್ತಿತ್ತು. ನಾವು ಆಸ್ಪತ್ರೆಗೆ ಹೊರಡಲು ತಯಾರಾದೆವು. ಆದರೆ ಎಷ್ಟು ಹೊತ್ತಾದರೂ ನೋವು ತೀವ್ರವಾಗಲಿಲ್ಲ. ಒಂಥರಾ ಭಯ ಒಂಥರಾ ಗಾಬರಿ… ಸರಿ ಎಂದು ಆಸ್ಪತ್ರೆಗೆ ಹೊರಟೆವು. ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಂದುಕೊಂಡೆವು. ಆದರೆ ಅವನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವುದಿಲ್ಲ ಎಂದು ಹಟ ಹಿಡಿದ. ಗತ್ಯಂತರವಿಲ್ಲದೆ ಅವನನ್ನೂ ಕರೆದುಕೊಂಡು ಹೊರಟೆವು. ಅವನಿಗೋ ದೊಡ್ಡ ಕುತೂಹಲ. ಅಮ್ಮನ ಹೊಟ್ಟೆಯಿಂದ ಪಾಪು ಹೇಗೆ ಬರುತ್ತದೆ, ಪಾಪು ಹೇಗಿರುತ್ತದೆ ಎಂದು. ಸಾಲದ್ದಕ್ಕೆ ಅವನಿಗೆ ತಮ್ಮ ಬೇಕಾಗಿತ್ತು. ನಿನಗೆ ತಂಗಿ ಬೇಕೋ ತಮ್ಮ ಬೇಕೋ ಅಂತ ಯಾವಾಗ ಕೇಳಿದರೂ ನನಗೆ ತಮ್ಮನೇ ಬೇಕು ಎನ್ನುತ್ತಿದ್ದ. ನಾವೇ ಲ್ಲ ನಗುತ್ತಿದ್ದೆವು. ಆಸ್ಪತ್ರೆಗೆ ಹೋದಾಗ ಹೆಚ್ಚು ಕಡಿಮೆ ಸಂಜೆಯಾಗಿತ್ತು. ಹೋಗಿ ಅಡ್ಮಿಟ್ ಆದೆವು. ರಾತ್ರಿ ಹತ್ತಾದರೂ ಹೆರಿಗೆ ಆಗಲಿಲ್ಲ. ಮಗನಿಗೆ ನೀನು ಮಲಗು ಪುಟ್ಟಾ ಬೆಳಗ್ಗೆ ಹೊತ್ತಿಗೆ ಪಾಪು ಬಂದಿರುತ್ತದೆ, ಆಗ ನೋಡುವಿಯಂತೆ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ಹಟ ಹಿಡಿದು ಕೂತಿದ್ದ. ತಮ್ಮ ಬಂದ ಮೇಲೆಯೇ ಮಲಗುತ್ತೇನೆ ಎಂದು. ನಂತರ ಡಾಕ್ಟರ್ ಬಂದು ಚೆಕಪ್  ಮಾಡಿ ಹೆರಿಗೆ ನಾರ್ಮಲ್ ಆಗುವುದಿಲ್ಲ ಸಿಸೇರಿಯನ್ ಮಾಡಬೇಕು ಎಂದರು. ಸರಿ ಎಲ್ಲ ಸಿದ್ಧವಾಯಿತು. ನನ್ನನ್ನು ಓಟಿ ಗೆ ಕರೆದೊಯ್ಯುತ್ತಿದ್ದರು, ಪಾಪ ಮಗನ ಮುಖ ಇಷ್ಟಾಗಿತ್ತು. ಆ ಕ್ಷಣ ಅವನ ಮುಖ ನೋಡುವಾಗ ಸಧ್ಯ ಎಲ್ಲ ಸುಗಮವಾಗಿ ಆದರೆ ಸಾಕಪ್ಪಾ ಎಂದು ದೇವರಲ್ಲಿ  ಬೇಡಿಕೊಳ್ಳಬೇಕೆನಿಸಿತು. ಅಂತೂ ಎಲ್ಲ ಸಸೂತ್ರ ಆಯಿತು. ಆದರೆ ಮಗನ ಆಸೆ ಮಾತ್ರ ಈಡೇರಲಿಲ್ಲ. ತಮ್ಮನ ಬದಲಾಗಿ ತಂಗಿ ಬಂದಳು. ಅನೆಸ್ತೀಶಿಯ ನೀಡಿದ್ದರಿಂದ ದೇಹ ಇನ್ನು ಅದರ ಪ್ರಭಾವದಿಂದ ಹೊರಬಂದಿರಲಿಲ್ಲ. ಅಕ್ಷರಶಃ ಹೆಣದ ರೀತಿಯಲ್ಲಿ ಓಟಿಯಿಂದ ವಾರ್ಡಿಗೆ ಶಿಫ್ಟ್ ಮಾಡಿದರು. ಇದನ್ನೆಲ್ಲ ನೋಡುತ್ತಿದ್ದ ಮಗನಿಗೆ ಎಷ್ಟು ಭಯವಾಯಿತೋ… ಪಾಪ ಕಣ್ಣಲ್ಲಿ ನೀರು ತುಂಬಿತ್ತ. ಬಾರೋ ಇಲ್ಲಿ… ಹತ್ರ ಬಾರೋ… ನೋಡಿಲ್ಲಿ ನಂಗೇನು ಆಗಿಲ್ಲ ಅಂತ ಕರೆದೆ. ಪಾಪ ಪೆಚ್ಚು ಪೆಚ್ಚಾಗಿ ಬಂದು ಕುಳಿತುಕೊಂಡ. ಅವನ ಮೈತಡವಿದೆ, ಮುದ್ದು ಮಾಡಿದೆ. ಆಮೇಲೆ ನೋಡೋ ನಿನ್ನಚತಂಗಿ ಬಂದಿದಾಳೆ ಅಂದೆ. ಎಲ್ಲರೂ ನಗಲು ಶುರು ಮಾಡಿದರು. ಅಯ್ಯೋ ಪಾಪ ಸಿದ್ಧಾಂತನಿಗೆ ತಂಗಿ ಬರಲಿಲ್ಲ…. ಎಂದು ಗೇಲಿ ಮಾಡಿದರು. ಅವನಿಗೂ ನಗು ಬಂತು. ಅವನಿಗೆ ಪಾಪುವನ್ನು ನೋಡುವುದೇ ಸಂಭ್ರಮ ಎನಿಸಿಬಿಟ್ಟಿತ್ತು. ಅವನಿಗಿದ್ದಿದ್ದೆಲ್ಲ ಒಂದೇ ತಂಗಿಯಾದರೆ ನನ್ನವಜೊತೆ ಆಡಲು ಬರುವುದಿಲ್ಲ ತಮ್ಮನಾದರೆ ನನ್ನ ಜೊತೆ ಆಡಲು ಬರುತ್ತಾನೆ ಎಂದು. ಆದರೆ ಹೊಸ ಪಾಪುವುನ ಮುಖ ನೋಡಿದಾಕ್ಷಣ ಅದೆಲ್ಲವೂ ಗಾಳಿಗೆ ತೂರಿ ಹೋಯಿತು. ತಂಗಿಯ ಮುಖ ನೋಡಿಯಾದ ಮೇಲೆಯೇ ಅವ ಮಲಗಿದ್ದು. ಮರುದಿನ ಸರಿ ತಂಗಿ ಬಂದಾಯಿತಲ್ಲ ಮನೆಗೆ ಹೋಗೋಣ ನಡಿಯೋ ಎಂದರೆ ಕೇಳುತ್ತಲೇ ಇಲ್ಲ ನಾನೂ ತಂಗಿಯ ಜೊತೆಯೇ ಇರುತ್ತೇನೆ ಎಂದು ಹಟ ಹಿಡಿದ. ಹಂಗೂ ಹಿಂಗೂ ಮಾಡಿ ಮೂರು ದಿನ ಆಸ್ಪತ್ರೆಯಲ್ಲೇ ಕಳೆದ. ನಾಲ್ಕನೇ ದಿನ ಯಾಮಾರಿಸಿ ಅವನನ್ನು ಮನೆಗೆ ಕಳಿಸಿದ್ದೆವು. ಈಗಲೂ ಅದನ್ನೆಲ್ಲ ನೆನೆದರೆ ವಿಪರೀತ ನಗು ಬರುತ್ತದೆ. ಈಗಂತೂ ಮಗಳಿಗೆ ಮೂರು ವರ್ಷ. ಇಬ್ಬರೂ ಒಮ್ಮೊಮ್ಮೆ ಪರಮಾಪ್ತ ಗೆಳೆಯರು ಒಮ್ಮೊಮ್ಮೆ ಹಾವು ಮುಂಗಸಿಗಳು. ಒಂದಂತೂ ಅಚ್ಚರಿ ನನಗೆ ಮಕ್ಕಳ ಮುಗ್ಧತೆ ಕುತೂಹಲ ಯಾಪರಿ ಇರುತ್ತದಲ್ಲಾ ಎಂದು. ಅಂದು ಮನೆಯಲ್ಲಿ ಹಬ್ಬವಿತ್ತು. ಮಗ ಪದೇ ಪದೇ ಕಿತಾಪತಿ ಮಾಡುತ್ತಿದ್ದ. ತಂಟೆ ಮಾಡುತ್ತಾನೆಂದು ಮಗನನ್ನು ಅದು ಮಾಡಬೇಡ ಇದು ಮಾಡಬೇಡ ಅಂತ ಪದೇ ಪದೇ ಅನ್ನುತ್ತಿದ್ದೆವು. ಇದರಿಂದ ಬಹುಶಃ ಅವನಿಗೆ ಬೇಸರವಾಗಿರಬೇಕು. ನಂತರ ಅಲ್ಲಿಂದ ಅವ ಹೊರಟುಹೋದ. ಸುಮಾರು ಹೊತ್ತಾದರೂ ಅವ ಎಲ್ಲೂ ಕಾಣಿಸಲಿಲ್ಲ. ನಮ್ಮದೆಲ್ಲ ಕೆಲಸ ಆದಮೇಲೆ ಎಲ್ಲಿ ಹೋದ ಅಂತ ನೋಡಿದರೆ ಪಕ್ಕದ ಪ್ಯಾಸೇಜಿನಲ್ಲಿ ಇದ್ದಾನೆ! ನೋಡಿದರೆ ತನ್ನ ಯೂನಿಫಾಮ್ ಶೂಗಳನ್ನು ನೀಟಾಗಿ ತೊಳೆದು ಅದಕ್ಕೆ ವಿಭೂತಿ, ಗಂಧ, ಅರಶಿಣ, ಕುಂಕುಮ ಹಚ್ಚಿ ಉದುಕಡ್ಡಿ ಬೆಳಗುತ್ತಿದ್ದಾನೆ! ಯಪ್ಪಾ ಅವತ್ತಿನಷ್ಟು ನಾವೆಲ್ಲ ಎಂದೂ ನಕ್ಕಿರಲಿಲ್ಲ ಕಾಣುತ್ತದೆ. ತನ್ನ ಪಾದುಕೆಯ ಪೂಜೆಯನ್ನು ತಾನೇ ಮಾಡಿಕೊಂಡ ಮಹಾನುಭಾವ ಅವನು…. ಮೊನ್ನೆ ನನ್ನ ಪುಟ್ಟ ಮಗಳು ನಾನೂ ಅಡುಗೆ ಮಾಡ್ತೀನಿ ಅಂತ ಹೇಳಿ ಹಟ ಮಾಡಿ ಕಿಚನ್ ಸೆಟ್ (ಆಟದ ಕಿಚನ್ ಸೆಟ್) ಕೊಡಿಸಿಕೊಂಡು ತಂದುಕೊಂಡಳು. ಮನೆಗೆ ಬಂದು ಅಡುಗೆ ಮಾಡಿದ್ದೇ ಮಾಡಿದ್ದು… ಮರು ದಿನ ತರಕಾರಿ ತೆಗೆದುಕೊಳ್ಳಲಿಕ್ಕೆಂದು ಫ್ರಿಜ್ ತೆಗೆದ ನನಗೆ ಕಂಡದ್ದು ಮಾತ್ರ ಆಶ್ಚರ್ಯ. ಅದ್ಯಾವಾಗಲೋ ಗೊತ್ತಿಲ್ಲ ಮಗಳು ತನ್ನ ಪ್ಲಾಸ್ಟಿಕ್ ತರಕಾರಿಗಳನ್ನು ತನ್ನ ಪುಟ್ಟ ಪ್ಯಾನ್ ಒಂದಕ್ಕೆ ಹಾಕಿ ಫ್ರಿಜ್ಜಿನಲ್ಲಿ ಇಟ್ಟಿದ್ದಳು. ಅವಳ ಪಪ್ಪನನ್ನೂ ಕರೆದು ತೋರಿಸಿದೆ. ಇಬ್ಬರೂ ನಕ್ಕೆವು. ಅವಳ ಮುಗ್ಧತೆ ಮತ್ತು ಜಾಣ್ಮೆಗೆ ಮುದ್ದುಕ್ಕಿ ಬಂತು… ಮಕ್ಕಳಿಗೆ ಹೇಗೆ ಇವೆಲ್ಲ ಹೊಳೆಯುತ್ತವೆ ಎಂದು ಸದಾ ಆಶ್ಚರ್ಯವಾಗುತ್ತಿರುತ್ತದೆ ನನಗೆ. ಅದರಲ್ಲೂ ಸದಾ ಮಕ್ಕಳ ಜೊತೆಯೇ ಕಾಲ ಕಳೆಯುವ ನಮ್ಮಂಥವರಿಗೆ ಇಂತಹ ಅನುಭವಗಳು ನಿತ್ಯವೂ ಆಗುತ್ತಿರುತ್ತವೆ. ನಾವು ಎಷ್ಟೇ ತಿಳಿದವರಾಗಿದ್ದರೂ ಮಕ್ಕಳ ಮುಗ್ಧತೆಯ ಮುಂದೆ ಸೋತುಬಿಡುತ್ತೇವೆ. ನಮ್ಮ ಗತ್ತು, ಅಹಂಕಾರ, ದೊಡ್ಡತನ…. ಎಲ್ಲವೂ ಮಕ್ಕಳ ಮುಂದೆ ಮಂಡಿಯೂರುತ್ತವೆ. ನಾವು ನಮ್ಮನ್ನು ಕಳೆದುಕೊಂಡುಬಿಡುತ್ತೇವೆ ಅವರ ಮುಂದೆ. ಮಕ್ಕಳು ಮಾತ್ರ ಹೀಗಿರಲು ಸಾಧ್ಯವೇನೋ ಅಲ್ಲವಾ… ಕಲ್ಲುಸಕ್ಕರೆಯಂತಹ ಇಂಥ ಅನುಭವಗಳು ಸದಾ ನಮ್ಮ ಬದುಕಿನ ತಿಜೋರಿಯನ್ನು ತುಂಬಿಕೊಳ್ಳುತ್ತಿರಲಿ ಎನ್ನುವ ಆಸೆಯೊಂದು ಮಾತ್ರ ಸದಾ ಜೀವ ಹಿಡಿದು ಕೂರುತ್ತದೆ… ************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

You cannot copy content of this page

Scroll to Top