ಅಂಕಣ ಬರಹ

ಘೋರಾರಣ್ಯದಲ್ಲಿ ಹಾರುವ ಹಂಸೆ

white duck on water during daytime

ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ.

Basavanna

                        ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’.

ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ

ಆಡುವ ನವಿಲ ಕಂಡು,

ಹಾರುವ ಹಂಸೆಯ ಕಂಡು,

ಕೂಗುವ ಕೋಳಿಯ ಕಂಡು,

ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪

            ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ.

            ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ.

                        ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ.

                        ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು  ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. )

                        ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ.

                        ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ.  ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ.

                        ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ-

thick forests - Picture of Jim Corbett National Park, Nainital District -  Tripadvisor

                        ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು.

                        ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ.


   ಅಡಿಟಿಪ್ಪಣಿಗಳು

೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧)

( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.)

೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪)

೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧)

೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬)

೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ೵ ಕದಂಬಲಿಂಗದಲ್ಲಿಗೆ

       ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮

       ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬

**************************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top