ಕವಿತೆ
ಮಾಗಿ ಕಾಲ
ಡಾಲಿ ವಿಜಯ ಕುಮಾರ್. ಕೆ.ವಿ
ಆವರಿಸಿದ ಚಳಿ
ನನ್ನ ಮೈತಾಕದಂತೆ
ಎದೆಯ ಚಿಪ್ಪಿನೊಳಗೆ ಕಾದ
ನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆ
ಬರುವ ಮಾಸಗಳೆಲ್ಲ
ಮಾಘಮಾಸವನ್ನೇ
ಹೊತ್ತಿರಬಾರದೆ ಅನ್ನಿಸುತ್ತೆ…
ಒಲಿದ ಮನಸುಗಳ
ಮಾಗಿಸಿ.
ಬಿಗಿಯಾಗಿ ಬೆಸೆದು
ಬಲಿತ ಕನಸುಗಳ
ಮಿಲನವಾಗಿಸುವ
ಶಿಶಿರ ಋತು
ಪರಿಪೂರ್ಣತೆಯ ಭಾವಗಳ
ಪೂರ್ಣವಿರಾಮದಂತೆ.ನನಗೆ…
ಮನದ ಮಾತುಗಾರನ
ಮಂತ್ರಿಸಿ ವಶೀಕರಿಸುವ
ಮಾಘಮಾಸ
ಮಡದಿ ಮನದರಸರ
ಮನಸುಗಳ ಹೊಸೆದು
ಪ್ರತಿ ಹೊತ್ತಿನ ಪಾಲುದಾರಿಕೆಯ
ಪರಮ ಸುಖಕೆ
ಮುತ್ತುಗಳ ಮಳೆಗರೆಸುವ
ಪ್ರತಿ ಮಾಗಿಯೂ
ಇಲ್ಲಿ ಹೊಸ ವಸಂತಗಳೇ……
ಕಿಟಕಿಯಿಂದ
ತೂರಿ ಬರುವ
ಹೊಂಗಿರಣಗಳ ಅಲ್ಲೇ
ತಡೆದು ನಿಲ್ಲಿಸುವೆ.
ಇನಿಯನ
ಮುದ ನೀಡುವ
ಮುದ್ದು ಪ್ರೀತಿಯ
ಕದ್ದು ನೋಡದಿರಲೆಂದು….
ಅಂತದ್ದೊಂದು
ಸವಿ ಸಾಕಾಗುವಷ್ಟು
ಸವಿದೇಬಿಡುವೆ.
ಸುಮ್ಮನಿರಿ
ಚಿಲಿಪಿಲಿ ರಾಗಗಳೇ.
ಬೆಳಗಿನ ಕಾತರಿಕೆ ನನಗಿಲ್ಲ.
ಇಂದಿನ
ಕನಸುಗಳ ಕೈಚೆಲ್ಲಿದರೆ
ಮನ
ಮುಂದಿನ ಮಾಗಿಕಾಲಕ್ಕಾಗಿ
ಕಾದು ಕೂರಬೇಕು….
ಹೆಪ್ಪುಗಟ್ಟಿದ ಹಲವು ನೆನಪುಗಳ
ಜೊತೆಗೆ……
ಮಾಗಿ-ಶಿಶಿರ-ಚಳಿಗಾಲ
*******************************