ವಾರದ ಕವಿತೆ
ಅಡುಗೆಮನೆ ಜಗತ್ತು
ಉಮಾ ಮುಕುಂದ್
ಕಬ್ಬಿಣದ ತವದ ಮೇಲೆರೆದ
ದೋಸೆಯ ರುಚಿ ಮತ್ತು ಗರಿ
ನಾನ್ ಸ್ಟಿಕ್ ತವದ ದೋಸೆಗೆ ಬಂದೀತು ಹೇಗೆ?
ಅಂಟಿಸಿಕೊಳ್ಳದ್ದು ಆಪ್ತವಾದೀತು ಹೇಗೆ?
ಉಪ್ಪಿನಕಾಯಿ ಜಾಡಿಗೆ ತುಂಬಿಸಿ
ಮುಚ್ವಿಟ್ಟರೆ ಮುಗಿಯಲಿಲ್ಲ
ಆಗಾಗ್ಗೆ ಕೈಯಾಡಿಸಬೇಕು ತೆಗೆದು
ಕೆಡದಂತಿರಿಸಿಕೊಳ್ಳಲು.
ಅಡುಗೆಮನೆ ಕೈಒರೆಸು
ಅನಿವಾರ್ಯವಾದರೂ
ಮನೆಯವರಿಗೆ ಸಸಾರ
ಕೆಲಕೆಲವು ಜನರ ಹಾಗೆ.
ಬೇಕಾದ್ದು, ಬೇಡದ್ದು ತುಂಬಿ
ಮುಚ್ಚಿಬಿಡುವ ಕಪಾಟಿನಡುಗೆಮನೆಗಿಂತಾ
ಇಟ್ಟಿದ್ದು, ಕೆಟ್ಟದ್ದು ಕಾಣುವ ಅಡುಗೆಮನೆಯಾದರೆ
ಆಗಾಗ ಶುಚಿಗೊಳಿಸಿಕೊಂಡೇವು.
ತರಕಾರಿ ಸಹಜ ಬಣ್ಣ ಉಳಿಸಿಕೊಳ್ಳಲು
ಬೇಯುವಾಗಿಷ್ಟು ಉಪ್ಪು ಉದುರಿಸಿದರಾಯ್ತು
ಮನುಷ್ಯರ ನಿಜಬಣ್ಣ ತಿಳಿಯಲು
ಉಪಾಯವೇನಾದರೂ ಇದ್ದಿದ್ದರೆ…
ಮೊಂಡಾದ ಚಾಕು, ಈಳಿಗೆಗೆ
ಸಾಣೆ ಹಿಡಿಯಬೇಕು ಆಗಾಗ್ಗೆ
ಮೊನಚು ಕಳಕೊಂಡ ಸಂಬಂಧಗಳಿಗೂ ಹಾಗೇ…
ಕೊನೆ ಗುಟುಕಿನವರೆಗೂ ಬಿಸಿ
ಆರದಹಾಗೆ ಕಾಫಿ ಬೆರೆಸುವುದೂ
ಕೊನೆವರೆಗೂ ಬಿಸುಪು ಕಾಯ್ದುಕೊಂಡು
ಬದುಕುವುದೂ ಎಲ್ಲರಿಗೂ ಸಿದ್ಧಿಸುವುದಲ್ಲ.
ಸಿಟ್ಟು, ಅಸಹನೆ, ಅತೃಪ್ತಿ ಎಲ್ಲವನ್ನೂ
ಹಿಟ್ಟಿನೊಂದಿಗೆ ಮಿದ್ದು ಮಿದ್ದು
ಲಟ್ಟಿಸಿ ಬೇಯಿಸಿದ ಚಪಾತಿ
ತಿನ್ನಲು ಬಲು ಮೃದು, ಮಧುರ.
ಜ಼ೊರೋ ಎಂದು ನಲ್ಲಿ ತಿರುಗಿಸಿ
ಇನ್ನೆರಡು ತೊಳೆದರೆ ಮುಗಿಯಿತು
ಎನ್ನುವಷ್ಟರಲ್ಲೇ ನಿಂತ ನೀರು!
ಇದ್ದಾಗ ತಿಳಿಯದ ಬೆಲೆ, ಹೋದಾಗ ಹಳಹಳಿಕೆ.
*************************************
ಪ್ರೇರಣೆ: ಬಿ.ವಿ.ಭಾರತಿಯವರ ಕವಿತೆಯಿಂದ
ಸುಂದರ, “ಅಂಟಿಸಿ ಕೊಳ್ಳದ್ದು,
ಆಪ್ತವಾದೀತು ಹೇಗೆ?”
ವಂಡರ್ಫುಲ್ ❤️
ಪಾಕಶಾಲೆಯ ಪಾಠ !
Beautiful lines Uma.