ಅಂಕಣ ಬರಹ

ಅಂಕಣ ಬರಹ

South Indian Farmers' Movements: October 2019

ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು:

“ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು, ಬೆಳೆದ ಫಸಲಿಗೆ ಸೂಕ್ತಬೆಲೆ ಪಡೆಯುವುದು. ಆದರೆ ಮಾರುಕಟ್ಟೆ ಮತ್ತು ಹಣಕಾಸು ಅವರ ನಿಯಂತ್ರಣದಲ್ಲಿಲ್ಲ. ಆ ಸಮಸ್ಯೆಗೆ ಕಾರಣವಾಗಿರುವುದು ಪ್ರಭುತ್ವಗಳು ಅನುಸರಿಸುತ್ತಿರುವ ಮಾರುಕಟ್ಟೆಪರ ನೀತಿ. ಜನರಿಂದ ಆಯ್ಕೆಯಾದ ಪ್ರಭುತ್ವಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳು ಅರ್ಥಾತ್ ಉದ್ಯಮಪತಿಗಳು. ಆದ್ದರಿಂದ ಪ್ರಭುತ್ವದ ನೀತಿಗಳನ್ನು ಟೀಕಿಸುವ, ತಿದ್ದುವ, ಚುನಾವಣೆಗಳಲ್ಲಿ ಬದಲಿಸುವ ಕೆಲಸವನ್ನೂ ರೈತಚಳುವಳಿ ಮಾಡಬೇಕಿದೆ. ಸಾಧ್ಯವಾದರೆ ತಾನೇ ಅಧಿಕಾರ ಹಿಡಿಯುವತ್ತ ಚಲಿಸಬೇಕಿದೆ. ಚಳುವಳಿಯ ಈ ರಾಜಕೀಯ-ಆರ್ಥಿಕ ಆಯಾಮದ ಬಗ್ಗೆ ಚಿಂತಕರು ಈಗಾಗಲೇ ಸಾಕಷ್ಟು ಚರ್ಚಿಸಿದ್ದಾರೆ. ಲೇಖಕನಾಗಿ ನಾನು ಅದರ ಬಗ್ಗೆ ಹೇಳಲಾರೆ. ಯಾವುದೇ ಆರ್ಥಿಕ ರಾಜಕೀಯ ಚಳುವಳಿಗಳಿಗೆ ಇರಬೇಕಾದ ಸಾಂಸ್ಕೃತಿಕ ಆಯಾಮದ ಬಗ್ಗೆ ನನ್ನ ಆಲೋಚನೆ ಹಂಚಿಕೊಳ್ಳುತ್ತೇನೆ.

ಸಾಂಸ್ಕೃತಿಕ ಆಯಾಮವು ನಮ್ಮ ಆಲೋಚನ ಕ್ರಮಕ್ಕೆ ಸಂಬಂಧಿಸಿದ್ದು; ಸಮಾಜದ ಮೌಲ್ಯಾದರ್ಶಗಳಿಗೆ, ನಾವು ನಿತ್ಯ ಬಳಸುವ ಭಾಷೆಗೆ ಸಂಬಂಧಿಸಿದ್ದು. ವ್ಯವಸ್ಥೆಯನ್ನು ಆರೋಗ್ಯಕರ ದಿಸೆಯಲ್ಲಿ ಬದಲಿಸಲು ತೊಡಗಿರುವ ಚಳುವಳಿಗಾರರು, ವೈಯಕ್ತಿಕ ಜೀವನದಲ್ಲಿ ಹೇಗೆ ಚಿಂತಿಸುತ್ತಾರೆ ಮತ್ತು ಬದುಕುತ್ತಾರೆ ಎನ್ನುವುದಕ್ಕೂ ಸಂಬಂಧಿಸಿದ್ದು. ಅನೇಕ ಚಳುವಳಿಗಾರರು, ಪುರುಷವಾದ, ಕೋಮುವಾದ, ಜಾತಿವಾದ, ನೈತಿಕ ಭ್ರಷ್ಟತೆಗೆ ಒಳಗಾಗಿರುವುದುಂಟು. ಮನೆಯಲ್ಲಿ, ಅಥವಾ ಸಾರ್ವಜನಿಕ ಪರಿಸರದಲ್ಲಿ, ಅಪ್ರಜಾಪ್ರಭುತ್ವವಾದಿ ಆಗಿರಬಹುದು. ಆದ್ದರಿಂದ ಚಳುವಳಿಗೆ ದೃಷ್ಟಿಕೋನವನ್ನು ಪ್ರಭಾವಿಸುವ ಸಾಂಸ್ಕøತಿಕ ನೀತಿಯೂ ಮುಖ್ಯವಾದುದು.

ಈ ಹೊತ್ತಲ್ಲಿ ನೆನಪಾಗುವುದು ಪ್ರೊ. ನಂಜುಂಡಸ್ವಾಮಿ ಹಾಗು ಕಡಿದಾಳು ಶಾಮಣ್ಣ. ಇಬ್ಬರೂ ಕೇವಲ ರೈತರ ಆರ್ಥಿಕ ಬೇಡಿಕೆಗಾಗಿ ಚಳುವಳಿ ಕಟ್ಟಿದವರಲ್ಲ. ಸಮಾಜದ ಮೌಲ್ಯಗಳ ಬದಲಾವಣೆಗೂ ಯತ್ನಿಸಿದವರು. ಇಬ್ಬರೂ ಮಾರ್ಕ್ಸ್ ಕುವೆಂಪು ಲೋಹಿಯಾ ಓದಿಕೊಂಡಿದ್ದವರು. ಶಾಮಣ್ಣನವರು ಸರೋದ್ವಾದನ, ಫೋಟೊಗ್ರಫಿ, ರೈತಚಳುವಳಿ, ಕನ್ನಡ ಚಳುವಳಿ ನಡುವೆ ವ್ಯತ್ಯಾಸವನ್ನೇ ಮಾಡಿದವರಲ್ಲ. ಲೋಹಿಯಾ ಸಮಾಜವಾದಿ ಹಿನ್ನೆಲೆಯಿಂದ ಬಂದ ರೈತಸಂಘಟನೆಯ ಮೊದಲ ತಲೆಮಾರಿನ ನಾಯಕರ ರಾಜಕೀಯ ಕ್ರಿಯೆಗೆ ಆಳವಾದ ಸಾಂಸ್ಕೃತಿಕ ಬೇರುಗಳಿದ್ದವು. ಅವರು ಕನ್ನಡದ ವಿಚಾರ ಸಾಹಿತ್ಯದಿಂದ ಪ್ರೇರಣೆ ಪಡೆಯುತ್ತಿದ್ದವರು. ಕುವೆಂಪು ಅವರ `ಸಾಲದಮಗು’ `ಧನ್ವಂತರಿಯ ಚಿಕಿತ್ಸೆ’ `ನೇಗಿಲಯೋಗಿ’ ಮುಂತಾದ ಕೃತಿಗಳು ರೈತಚಳುವಳಿಗೆ ಇಂಬಾಗಿದ್ದುದನ್ನು ಬಲ್ಲವರು. ಆದರೆ ಹೊಸತಲೆಮಾರಿನ ಎಷ್ಟು ರೈತ ಕಾರ್ಯಕರ್ತರು ಕುವೆಂಪು ಸಾಹಿತ್ಯವನ್ನು ಎಷ್ಟು ಓದಿದ್ದಾರೆಯೊ ತಿಳಿಯದು. ಕುವೆಂಪು ಮಾತ್ರವಲ್ಲ, ತೇಜಸ್ವಿ ಲಂಕೇಶ್ ಅನಂತಮೂರ್ತಿ ಬೆಸಗರಹಳ್ಳಿ ದೇವನೂರು ಅವರ ಕತೆ ಕಾದಂಬರಿ ಲೇಖನಗಳೂ ರೈತ ಕಾರ್ಯಕರ್ತರ ಪಠ್ಯಗಳೇ. ಯಾಕೆಂದರೆ, ಇವರ ಸಾಹಿತ್ಯದಲ್ಲಿ ರೈತಾಪಿ ಹಳ್ಳಿಗಳ ಸಂಭ್ರಮ ಮತ್ತು ಕ್ರೌರ್ಯಗಳ ಚಿತ್ರಣವಿದೆ; ಗೋವಿನ ರಾಜಕಾರಣ ಮತ್ತು ಹಸುವಿನ ವಾಸ್ತವತೆಯ ಬಗ್ಗೆ ಚಿಂತನೆಯಿದೆ. ಕೋಮುವಾದ ಕೇವಲ ಮುಸ್ಲಿಮರ ಹಗೆಯಲ್ಲ, ರೈತರ ವಿರೋಧಿ ಕೂಡ ಎಂಬ ತಿಳುವಳಿಕೆಯಿದೆ.

ಪ್ರತಿ ಜನಪರ ಚಳುವಳಿಗಳಿಗೂ ಅದರದ್ದೇ ಆದ ಅಜೆಂಡಾ ಇರುತ್ತದೆ, ಇರಬೇಕು ಕೂಡ. ಇದರ ಜತೆಗೆ ಅದು ನಾಡಿನ ಉಳಿದ ಸಮಸ್ಯೆಗಳ ಬಗ್ಗೆ ಯಾವ ದೃಷ್ಟಿಕೋನ ಇರಿಸಿಕೊಂಡಿದೆ ಎಂಬ ಅಂಶವೂ ಮುಖ್ಯ. ಇದಕ್ಕಾಗಿ ಪ್ರತಿ ಚಳುವಳಿಗೂ ಇನ್ನೊಂದು ಜನಪರ ಚಳುವಳಿಯ ಜತೆ ಬೆರೆಯುವ ಕೊಂಡಿ ಇರಬೇಕು.

ನಂಜುಂಡಸ್ವಾಮಿ, ಶಾಮಣ್ಣ ಅವರಿಗೆ ನಾಡಿನ ಪ್ರಜಾಪ್ರಭುತ್ವವಾದಿ ವಿಚಾರವಾದಿ ದಲಿತ ಮತ್ತು ಭಾಷಾ ಚಳುವಳಿಗಳ ಜತೆ ನಂಟಿತ್ತು. ಮಹಿಳಾ ಚಳುವಳಿಗಳ ಜತೆ ಅಷ್ಟು ಸಕೀಲ ಸಂಬಂಧವಿರಲಿಲ್ಲ. ಹೊಸತಲೆಮಾರಿನ ರೈತಚಳುವಳಿಗಾರರಿಗೆ ಕರ್ನಾಟಕವನ್ನು ಆರೋಗ್ಯಕರವಾಗಿ ಕಟ್ಟಬೇಕೆಂದು ಯತ್ನಿಸುತ್ತಿರುವ ಎಲ್ಲ ಜನಪರ ಚಳುವಳಿಗಳ ಸಹವಾಸ ಬೇಕಾಗಿದೆ. ಚಳುವಳಿಯ ಸಭೆಗಳಲ್ಲಿ ರೈತನೊಬ್ಬ ಗಂಡಸು ಎಂಬ ಗ್ರಹಿಕೆಯಲ್ಲೇ ಚರ್ಚೆ ನಡೆಯುತ್ತಿರುತ್ತದೆ. `ರೈತ’ ಶಬ್ದದಲ್ಲಿ ರೈತಮಹಿಳೆಯೇ ಇದ್ದಂತಿಲ್ಲ. ಇದು ಕೇವಲ ಪದರಚನೆಗೆ ಸಂಬಂಧಿಸಿದ ಮಾತಲ್ಲ. ಆಲೋಚನೆಗೂ ಕ್ರಿಯೆಗೂ ಸಂಬಂಧಿಸಿದ್ದು. ರೈತಸಂಘಟನೆಯಲ್ಲಿ ರೈತಾಪಿ ಚಟುವಟಿಕೆಯ ಬೆನ್ನುಲುಬಾದ ಮಹಿಳೆಯರ ಸಂಖ್ಯೆ ಯಾಕಿಷ್ಟು ಕಡಿಮೆ? ರೈತ ಸಂಘಟನೆಗಳಲ್ಲಿ ದಲಿತರು ಯಾಕೆ ಕಡಿಮೆ? ಇದಕ್ಕೆ ನಮ್ಮ ಸಮಾಜದಲ್ಲೇ ಸಾಮಾಜಿಕ ಆರ್ಥಿಕ ಕಾರಣಗಳಿರಬಹುದು. ಮಹಿಳೆಯರನ್ನು ದಲಿತರನ್ನು ರೈತಕೂಲಿಗಳನ್ನು ಒಳಗೊಳ್ಳದ ತನಕ ರೈತ ಚಳುವಳಿ ಪೂರ್ಣಗೊಳ್ಳುವುದು ಸಾಧ್ಯವೇ? ದಲಿತರ ಸಮಸ್ಯೆಗೆ ರೈತರು ತುಡಿಯದೆ ಹೋದರೆ, ರೈತರ ಸಮಸ್ಯೆಗೆ ದಲಿತರು ಮಿಡಿಯದೆ ಹೋದರೆ, ಹೊಸ ಸಂಚಲನ ಸಾಧ್ಯವಿಲ್ಲ. ಮಹಿಳೆಯರ ಮತ್ತು ದಲಿತರ ಭಾಗವಹಿಸುವಿಕೆ, ರೈತ ಚಳುವಳಿಗೆ ಬೇರೊಂದೇ ಸಂವೇದನೆಯನ್ನು ಹಾಯಿಸಬಲ್ಲದು. ಚಳುವಳಿಗಳಿಗೆ ಲೇಖಕರ ಬುದ್ಧಿಜೀವಿಗಳ ಜತೆ ಒಡನಾಟವಿದ್ದರೆ ಹೊಸ ವಿಚಾರಗಳು ಹಾಯುತ್ತವೆ. ಬುದ್ಧಿಜೀವಿಗಳಿಗೆ ಜನಪರ ಚಳುವಳಿಗಳ ಲಗತ್ತಿಲ್ಲದೆ ಹೋದರೆ, ಚಿಂತನೆಗೆ ಸಿಗಬೇಕಾದ ತೀಕ್ಷ್ಣತೆ ಮತ್ತು ನೈತಿಕತೆ ಸಿಗದೆ ಹೋಗುತ್ತದೆ.

ರಾಜಕೀಯ-ಆರ್ಥಿಕ ಚಳುವಳಿಗಳಿಗೆ ಸಾಂಸ್ಕೃತಿಕ ವಿವೇಕ ಒದಗಿಸುವ ಕೆಲಸವನ್ನು ಉದ್ದಕ್ಕೂ ಕಲೆ ಮತ್ತು ಸಾಹಿತ್ಯಲೋಕಗಳು ಮಾಡಿಕೊಂಡು ಬಂದಿವೆ.ಕನ್ನಡ ಲೇಖಕರಿಂದ ಆಧುನಿಕ ಕಾಲದ ಚಳುವಳಿಗಳು ಶಕ್ತಿ ಪಡೆದಿವೆ.

ಕನ್ನಡದಲ್ಲಿ ದಲಿತರನ್ನು ಮಾಂಸಾಹಾರಿಗಳನ್ನು ಮಹಿಳೆಯರನ್ನು ಹೀಯಾಳಿಸುವ ನುಡಿಗಟ್ಟು ಗಾದೆಗಳಿವೆ. ಈ ವಿಷಯದಲ್ಲಿ ರೈತ ಚಳುವಳಿ ಎಷ್ಟು ಸೂಕ್ಷ್ಮವಾಗಿದೆಯೊ ಕಾಣೆ. ಕರ್ನಾಟದಲ್ಲಿ ಮಾಂಸಾಹಾರದ ಮೇಲೆ ನಿರಂತರ ಹಲ್ಲೆಗಳಾದವು. ಉಚ್ಚಜಾತಿಗಳ ಆಹಾರಕ್ರಮವನ್ನು ಎಲ್ಲರ ಮೇಲೆ ಹೇರಲು ಯತ್ನಿಸಲಾಯಿತು. ಮಧ್ಯಾಹ್ನ ಶಾಲಾಮಕ್ಕಳಿಗೆ ಮೊಟ್ಟೆಕೊಡುವ ಯೋಜನೆಗೆ ಕೆಲವರು ವಿರೋಧಿಸಿದರು. ಇದೆಲ್ಲ ರೈತ ಚಳುವಳಿಯ ವಿಷಯಗಳಲ್ಲವೆ? ವಾಸ್ತವವಾಗಿ ಕೋಳಿ ಆಹಾರದಲ್ಲಿ ಬಳಕೆಯಾಗುವ ಮೆಕ್ಕೆಜೋಳವು ಕೋಳಿಸಾಕಣೆಯ ಹಿಂದಿದೆ. ಮೊಟ್ಟೆ ಮಾಂಸ ಮೀನು ಹಾಲು ಒಳಗೊಂಡಂತೆ ಎಲ್ಲ ಆಹಾರದ ಹಿಂದೆ ರೈತಾಪಿತನವಿದೆ. ಆಹಾರ ಸಂಸ್ಕøತಿ ಮೇಲಿನ ಹಲ್ಲೆಗಳು ರೈತಚಳುವಳಿಯ ಭಾಗವಾಗದೆ ಹೋದರೆ, ಅದಕ್ಕೆ ಹೊಸವಿಸ್ತರಣೆ ಹೇಗೆ ಸಿಗುತ್ತದೆ? ಅಧಿಕಾರಿಗಳು ರಾಜಕಾರಣಿಗಳು ಬುದ್ಧಿಜೀವಿಗಳು ಪೋಲೀಸರು ಜನಸಾಮಾನ್ಯರ ಆಶೋತ್ತರಕ್ಕೆ ಮಿಡಿಯುವಂತೆ ಸಂವೇದನಶೀಲರಾಗಬೇಕು ಎಂದು ಚಳುವಳಿಗಳು ಅಪೇಕ್ಷಿಸುತ್ತವೆ. ಆದರೆ ಹೀಗೆ ಅಪೇಕ್ಷಿಸುವ ಚಳುವಳಿಗಳಿಗೂ ಇತರರ ನೋವಿಗೆ ಮಿಡಿಯುವ ಸಂವೇದನಶೀಲತೆಯ ಅಗತ್ಯವಿದೆಯಲ್ಲವೇ? ಸಾಂಸ್ಕøತಿಕ ಎಚ್ಚರ ಮತ್ತು ವಿವೇಕಗಳು ವ್ಯಕ್ತಿಗೆ, ಸಮಾಜಕ್ಕೆ ಮಾತ್ರವಲ್ಲ, ಸಮಾಜ ಬದಲಿಸಬೇಕೆನ್ನುವ ಚಳುವಳಿಗಳಿಗೂ ತೀಕ್ಷ್ಣತೆಯನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವೀಯ ವಿಸ್ತರಣೆ ನೀಡುತ್ತವೆ.

ಒಮ್ಮೆ ಕೇರಳ ಪ್ರವಾಸದಲ್ಲಿದ್ದಾಗ ಕಲ್ಲಿಕೋಟೆಯ ಹತ್ತಿರ, ಎಳೆಯ ತೆಂಗಿನಗರಿಗಳಿಂದ ಮಾಡಿದ ದೊಡ್ಡದೊಡ್ಡ ಕೋಳಿಯ ಪ್ರತಿಕೃತಿಗಳನ್ನು ಹೊತ್ತುಕೊಂಡು ಕುಣಿವ ಕೋಳಿಯಾಟ್ಟಂ ಮೆರವಣಿಗೆಯನ್ನು ನೋಡುವ ಅವಕಾಶವೊದಗಿತು. ಕೇರಳದ ಜನಪರ ಚಳುವಳಿಗಾರರು ಈ ಆಚರಣೆಗಳಲ್ಲಿ ತಮ್ಮದೇ `ಕೋಳಿ’ಗಳ ಜತೆ ಭಾಗವಹಿಸಿದ್ದರು. ಅವರ ಕೋಳಿಪ್ರತಿಮೆಗಳ ಮೇಲೆ ಎಲ್ಲ ಧರ್ಮಗಳ ಚಿಹ್ನೆಗಳೂ ಇದ್ದವು. ಇದು ಚಳುವಳಿಗಳು ಜನರ ಭಾವನಾತ್ಮಕ ಲೋಕದೊಳಗೆ ವೈಚಾರಿಕತೆ ಬಿಟ್ಟುಕೊಡದೆಯೂ ಸಂಬಂಧ ಇರಿಸಿಕೊಳ್ಳುವ ಸೂಕ್ಷ್ಮವಾದ ಪರಿ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತಚಳುವಳಿಯ ಸಾಂಸ್ಕøತಿಕ ಸಂಬಂಧಗಳು ಕ್ಷೀಣವೆನಿಸುತ್ತವೆ. ಕುಟ್ಟುವ ಬೀಸುವ ಹಂತಿಯ ರಾಶಿಪೂಜೆಯ ಹಾಡುಗಳ ಹಿಂದೆ ರೈತಾಪಿಗಳಿದ್ದಾರೆ. ರೈತರೇ ರಿವಾಯತ್ ಹಾಡುಗಳನ್ನು ಹಾಡುವುದು; ಸಂತರ ಉರುಸು ಇಲ್ಲವೇ ಆರೂಢರ ಜಾತ್ರೆ ಮಾಡುವುದು. ರೈತ ಚಳುವಳಿಗೆ ಈ ಸಾಂಸ್ಕøತಿಕ ಲೋಕದ ಜತೆಗೆ ಯಾವ ಬಗೆಯ ನಂಟಿದೆಯೊ ನಾನರಿಯೆ. ಚಳುವಳಿಗಳ ಕಾರ್ಯಕರ್ತರು ಕರೆ ಬಂದಾಗ ಮುಷ್ಕರ ಮಾಡುವ ಸೈನಿಕರಾಗಿ ಮಾತ್ರ ಇರುವುದು ಯಾಂತ್ರಿಕ ಸಂವೇದನೆ ಅನಿಸುತ್ತದೆ.

ಸಿದ್ಧಾಂತಗಳ ಪಕ್ಷಗಳ ಸಂಘಟನೆಗಳ ಜತೆ ಯಾಂತ್ರಿಕ ಮತ್ತು ಗುಲಾಮೀ ಸಂಬಂಧ ಇರಿಸಿಕೊಂಡ ಎಲ್ಲರೂ ಕುಬ್ಜರಾಗುವುದು ಮಾತ್ರವಲ್ಲ, ತಮ್ಮ ಸಿದ್ಧಾಂತ ಸಂಘಟನೆಗಳನ್ನೂ ಕುಬ್ಚಗೊಳಿಸುವರು. ಸಂಸ್ಕøತಿ ಧರ್ಮಗಳ ರಕ್ಷಣೆ ಮಾಡುವುದಕ್ಕೆಂದೇ ತಯಾರಿಸಲಾಗಿರುವ ಮತಾಭಿಮಾನಿಗಳನ್ನು ಗಮನಿಸಿ. ಅವರ ವ್ಯಕ್ತಿತ್ವವನ್ನು ಒಳ್ಳೆಯ ಸಂಗೀತ ಆಸ್ವಾದಿಸುವ, ಅತ್ಯುತ್ತಮ ಸಾಹಿತ್ಯ ಓದುವ, ಸಿನಿಮಾ ನೋಡುವ-ಒಟ್ಟಿನಲ್ಲಿ ವ್ಯಕ್ತಿತ್ವ ವಿಸ್ತರಣೆ ಮಾಡಬಲ್ಲ ಯಾವ ಹವ್ಯಾಸಗಳೂ ಇರದಂತೆ ಬಿರುಸಾಗಿ ರೂಪಿಸಲಾಗಿರುತ್ತದೆ. ನಾಯಕರು ಹೇಳಿದ್ದನ್ನು ಪಾಲಿಸುವಂತೆ ಗುಲಾಮೀಕರಣ ಅಲ್ಲಿರುತ್ತದೆ. ಅವರಲ್ಲಿ ಕೆಲವು ಓದುಗ ಹವ್ಯಾಸವುಳ್ಳವರು ಇರಬಹುದು. ಆದರೆ ಅವರನ್ನು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿರುವ ಲೇಖಕರನ್ನು ಬಿಟ್ಟು ಬೇರೆಯವರು ಬರೆದದ್ದರ ಕಡೆ ಕಣ್ಣುಹಾಯಿಸದಂತೆ ಮಾಡಲಾಗಿರುತ್ತದೆ. ಸಂವೇದನೆಯನ್ನು ಹೀಗೆ ಒಣಗಿಸಿದ ನೆಲದ ಮೇಲೆ ಕ್ರೌರ್ಯ ಅಸಹನೆ ಅಸೂಕ್ಷ್ಮತೆಗಳು ಸುಲಭವಾಗಿ ಹುಟ್ಟುತ್ತವೆ.

ಚಳುವಳಿಗಳು ತಮ್ಮನ್ನು ಸಾಂಸ್ಕೃತಿಕ ಅಭಿರುಚಿಗಳಿಂದ ಸಮೃದ್ಧಗೊಳಿಸಿಕೊಳ್ಳದೆ ಹೋದರೆ, ಅವುಗಳ ಆರ್ಥಿಕ ಸಾಮಾಜಿಕ ರಾಜಕೀಯ ಚಿಂತನೆ ಮತ್ತು ಕ್ರಿಯೆಗಳು ಮುಕ್ಕಾಗಬಹುದು; ಏಕಮುಖಿಯಾಗಿ ಬೇಗನೆ ದಣಿಯಬಹುದು. ಅವಕ್ಕೆ ರಾಜಕೀಯ ಸ್ಪಷ್ಟತೆಯಷ್ಟೆ ಮುಖ್ಯವಾಗಿ ಮನಸ್ಸನ್ನು ಆರ್ದ್ರವಾಗಿಡುವ ಸಾಂಸ್ಕೃತಿಕ ಅಭಿರುಚಿಗಳೂ ಇರಬೇಕು. ರೈತರು ಕಾರ್ಮಿಕ ದಲಿತರು ಆಸ್ಥೆ ತೋರುವುದರಿಂದ ಮಧ್ಯಮವರ್ಗದ ಚಟುವಟಿಕೆಗಳಾಗಿ ಮಾರ್ಪಟ್ಟಿರುವ ಸಾಂಸ್ಕೃತಿಕ ಲೋಕಗಳಿಗೂ ಮರುಜೀವ ಬರುತ್ತದೆ. ಇದು ಜೀವಂತಿಕೆಯನ್ನು ಕೊಟ್ಟು ಪಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಎಂಬ ಭೇದಗಳು ಅಂತಿಮವಾಗಿ ಇಲ್ಲವಾಗುತ್ತವೆ; ಶಿಷ್ಟ-ಜಾನಪದಗಳು ಏಕೀಭವಿಸುತ್ತವೆ. ಅಂತಹ ಚಳುವಳಿಯ ಸಂಗ ಮಾಡಿದ ಲೇಖಕರು-ಕಲಾವಿದರು ತಮ್ಮ ಮಂಕುತನ ಕಳೆದುಕೊಂಡು ಹೊಸಹುಟ್ಟನ್ನು ಪಡೆಯಬಲ್ಲರು. ಇದು ಚಿಂತಕರು ಹಾಗೂ ಚಳುವಳಿಗಳು ಪರಸ್ಪರರನ್ನು ಕೊಂದುಕೊಂಡು ಬದುಕಿಕೊಳ್ಳುವ ಸೃಜನಶೀಲ ಉಪಾಯ.’’

*****************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

2 thoughts on “

Leave a Reply

Back To Top