ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬಣ್ಣವಿಲ್ಲವೆಂದು ಬಯ್ಯುವ ಬಿಳಿ ಪುಟದೊಳಗೂ ತುಸು ಚಂದವಿದೆ
ಲೋಪಗಳಿವೆಯೆಂದು ನಾ  ಜರಿವ ಜಗದೊಳಗೂ ತುಸು ಚಂದವಿದೆ

ಎಲ್ಲಾ ರಾಗಗಳನು, ಯಾರು ಹಾಡುವವರಿದ್ದಾರಿಲ್ಲಿ ಹೇಳು
ಯಾರೂ ಗುನುಗುನಿಸದ ಪದ್ಯದೊಳಗೂ ತುಸು ಚಂದವಿದೆ

ಆಕಾಶಕ್ಕೂ, ಅನುದಿನ ಆನಂದ ನೀಡಲು ಸಾಧ್ಯವಾಗುವುದೇ
ಕಪ್ಪೆಂದು ಕಡೆಗಣಿಸಿದ ಮೋಡದೊಳಗೂ ತುಸು ಚಂದವಿದೆ

ವರ್ಣನೆಗೂ ನಿಲುಕದ  ಮಾತುಗಳಿಗಿಲ್ಲಿ ಬರವಿಲ್ಲ ನಿಜ
ಪದಗಳಿಂದ ಮುನಿಸಿಕೊಂಡ ಮೌನದೊಳಗೂ ತುಸು ಚಂದವಿದೆ

ಜಂಜಾಟವಿಲ್ಲದ ಜೀವನ ಬರೀ ಕಲ್ಪನೆಯಷ್ಟೇ ವಾಣಿ
ನೋವು ತುಂಬಿದ ನಯನದೊಳಗೂ ತುಸು ಚಂದವಿದೆ


About The Author

Leave a Reply

You cannot copy content of this page

Scroll to Top