ವಿಶೇಷ ಸಂಗಾತಿ
ಕವಿತಾ ಶ್ರೀನಿವಾಸ್ ನಾಯಕ್
ಊಸರವಳ್ಳಿ


ಊಸರವಳ್ಳಿ ತನ್ನ ರಕ್ಷಣೆಗೆ ಬಣ್ಣ ಬದಲಾಯಿಸುತ್ತದೆ. ಅದು ಪ್ರಕೃತಿಯ ಕೊಟ್ಟ ಗುಣ. ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಬಣ್ಣ ಬದಲಾಯಿಸಲು ಆರಂಭಿಸಿದಾಗ, ಸಂಬಂಧಗಳು, ನಂಬಿಕೆ ಮತ್ತು ಮಾನವೀಯತೆ ಗಾಯಗೊಳ್ಳುತ್ತವೆ.
ಕೆಲವರು ನಮ್ಮ ಎದುರು ತುಂಬಾ ಸಿಹಿಯಾಗಿ ಮಾತನಾಡುತ್ತಾರೆ. “ನೀವು ಇಲ್ಲದಿದ್ದರೆ ನಾವು ಏನೂ ಅಲ್ಲ” ಎಂದು ಹೊಗಳುತ್ತಾರೆ. ಆದರೆ ನಾವು ಬೆನ್ನು ತಿರುಗಿಸಿದ ಕ್ಷಣದಲ್ಲೇ ಅದೇ ನಾಲಿಗೆ ನಮ್ಮ ಬಗ್ಗೆ ವಿಷ ಉಗುಳುತ್ತದೆ. ಸಂದರ್ಭ ಬದಲಾದರೆ ಮಾತು ಬದಲಾಗುತ್ತದೆ, ಲಾಭ ಕಂಡರೆ ನಿಲುವು ಬದಲಾಗುತ್ತದೆ, ಅಧಿಕಾರ ಕಂಡರೆ ಮುಖವೇ ಬದಲಾಗುತ್ತದೆ.
ಇಂತಹವರನ್ನು ನೋಡಿದಾಗ ನೆನಪಾಗುವುದು ಊಸರವಳ್ಳಿಯೇ. ಆದರೆ ಒಂದು ವ್ಯತ್ಯಾಸ ಇದೆ. ಊಸರವಳ್ಳಿ ಬದುಕಲು ಬಣ್ಣ ಬದಲಾಯಿಸುತ್ತದೆ; ಕೆಲವು ಮನುಷ್ಯರು ಮತ್ತೊಬ್ಬರನ್ನು ಬಳಸಿಕೊಳ್ಳಲು ಬಣ್ಣ ಬದಲಾಯಿಸುತ್ತಾರೆ.
ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ದೃಶ್ಯ. ಮುಂದೆ ಹೊಗಳಿಕೆ, ಹಿಂದೆ ಟೀಕೆ. ಕೆಲಸ ಇದ್ದಾಗ ಆತ್ಮೀಯತೆ, ಕೆಲಸ ಮುಗಿದ ನಂತರ ಅಪರಿಚಿತನಂತೆ ವರ್ತನೆ. ನಿಜವಾದ ಸ್ನೇಹಕ್ಕಿಂತ ಸ್ವಾರ್ಥದ ಸಂಬಂಧಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ.
ಆದರೆ ಬಣ್ಣ ಬದಲಾಯಿಸುವವರಿಗಿಂತ, ಯಾವ ಪರಿಸ್ಥಿತಿಯಲ್ಲೂ ತಮ್ಮ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಬದಲಿಸದವರು ಸಮಾಜದ ನಿಜವಾದ ಸಂಪತ್ತು. ಅವರು ಕಡಿಮೆ ಇರಬಹುದು, ಆದರೆ ಅವರ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ.
ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿದೆ. ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯ ಬದಲಾಗಬಹುದು, ಆದರೆ ಸ್ವಾರ್ಥಕ್ಕಾಗಿ ಗುಣ ಬದಲಾದರೆ ಅದು ವ್ಯಕ್ತಿತ್ವದ ಸೋಲು.
ಆದ್ದರಿಂದ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದಕ್ಕಿಂತ, ಮರದಂತೆ ಗಟ್ಟಿಯಾಗಿ ನಿಂತು ನೆರಳು ಕೊಡುವ ವ್ಯಕ್ತಿಯಾಗೋಣ. ಬಣ್ಣ ಬದಲಾಯಿಸುವ ಬದುಕಿಗಿಂತ, ನಂಬಿಕೆಗೆ ಪಾತ್ರವಾಗುವ ಬದುಕು ಹೆಚ್ಚು ಮೌಲ್ಯಯುತ.
ವಂದನೆಗಳೊಂದಿಗೆ…
ಕವಿತಾ ಶ್ರೀನಿವಾಸ್ ನಾಯಕ್
ಕಾರ್ಕಳ, ಉಡುಪಿ ಜಿಲ್ಲೆ.



