ಧಾರಾವಾಹಿ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ನೋಟ -37 ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು. ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು. ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ ಊಟಕ್ಕೆ ಬಂದುಬಿಡಬಹುದಿತ್ತು ಅಂತ.ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು. ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು. ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು. ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ ಕುಮಾರ್. ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು. ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು. ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.ಆಗ FEAP Front End Application Programme ಹೊಸದಾಗಿ ಚಾಲ್ತಿಯಲ್ಲಿತ್ತು. 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್‌ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್‌ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್‌ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು. ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್‌ಡಿ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ
ಅಂಕಣ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-36 ನಾವು ಆ ಶಾಖೆಗೆ ಹೋದಾಗ ಶಾಖಾಧಿಕಾರಿ ಆಗಿದ್ದವರು ಶ್ರೀ ಸತ್ಯನಾರಾಯಣ ಅವರು. ಅವರು ಮೂಲತಃ ಶ್ರೀನಿವಾಸಪುರರದವರು. ನನ್ನ ತಂದೆಯ ಊರು ಸಹ ಅದೇ ಆಗಿದ್ದು ಕೆಲವು ಹಳಬರನ್ನು ನೆನೆಸಿಕೊಂಡು ಮಾತನಾಡುತ್ತಿದ್ದೆವು. ಅವರಿಗೆ ಆಫೀಸಿನಲ್ಲೇ ಹೃದಯಘಾತ ಆಗಿತ್ತು. .ನಂತರ ಚೇತರಿಸಿಕೊಂಡರು. ಆದರೆ ನಮಗೆಲ್ಲ ಒಂದು ರೀತಿಯ ಶಾಕ್ ಆಗಿದ್ದಂತೂ ನಿಜ .ಆಗ ಇಷ್ಟೆಲ್ಲ ಹೃದಯಾಘಾತಗಳ ವಿಷಯ ಕೇಳದೆ ಇದ್ದರಿಂದ ಅದು ಅಪರೂಪದ ಸಂಗತಿಯಾಗಿತ್ತು. ಹಾಗೆಯೇ ಶಾಖೆ ಎರಡರಲ್ಲಿ ಅತ್ಯಂತ ನೆನಪಿನಲ್ಲಿ ಉಳಿದ ವಿಷಯವೆಂದರೆ ಜನವರಿ ಒಂದನೆಯ ತಾರೀಕು ನಾವು ಹೆಂಗಳೆಯರೆಲ್ಲ ಸೇರಿ ಗೋಸಾಯಿ ಘಾಟ್ ಗೆ ಪ್ರವಾಸ ಹೋಗಿದ್ದು. ಆ ಬಾರಿ ಜನವರಿ ಒಂದನೆಯ ತಾರೀಕು ಶನಿವಾರ ಬಂದದ್ದು ಅಂದು ನಮಗೆ ಅರ್ಧ ದಿನ ಮಾತ್ರ ಕಚೇರಿ ಆದ್ದರಿಂದ ನೀವು ಪ್ರವಾಸವನ್ನು ಯೋಚಿಸಿದೆ ಕೆಳಗಡೆ ಇದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಒಂದು ಸಣ್ಣ ಮೆಟದ ಬುಕ್ ಮಾಡಿಕೊಂಡು ಮದ್ಯಾಹ್ನ ಹೊರಟೆವು ಎಲ್ಲರೂ ಅವರವರ ಮನೆಯಿಂದ ವಿಶೇಷ ತಿಂಡಿಗಳನ್ನು ಮಾಡಿಕೊಂಡು ಬರುವುದಾಗಿ ನಾನು ಅಂದು ಅವರೇ ಕಾಳು ರೊಟ್ಟಿ ಮಾಡಿ ತಂದಿದ್ದೆ. ಹತ್ತು ರೊಟ್ಟಿಗಳು ನಮಗಾಗಿ ಹಾಗೂ ಮತ್ತೆ ಎರಡು ಬೇರೆ ಬಾಕ್ಸ್ ನಲ್ಲಿ ಮಂಜುಗಾಗಿ. ತುಂಬಾ ಖುಷಿಯಾಗಿ ತಿಂದಿದ್ದ ಅಂದು.ಸರಿ ಅಲ್ಲಿ ಮಧ್ಯಾಹ್ನ ಹೋದ ತಕ್ಷಣ ಎಲ್ಲರೂ ಡಬ್ಬಿಗಳಿಂದ ಹಂಚಿಕೊಂಡು ತಿಂದದ್ದಾಯಿತು. ಇನ್ನು ಮೂರು ರೊಟ್ಟಿಗಳು ಉಳಿದಿದ್ದನ್ನು ರಾಜಿ ಮನೆಗೆ ತೆಗೆದುಕೊಂಡು ಹೋದಳು. ಸುಮಾ ತಂದಿದ್ದ ಉಳಿದ ಪೂರಿ ಆಲೂಗೆಡ್ಡೆ ಪಲ್ಯ ನಾನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ಹೊತ್ತು ನೀರಿನಲ್ಲಿ ಇಳಿದು ಹಾಡಿ ನಂತರ ದೋಣಿಯಲ್ಲಿ ಒಂದು ರೌಂಡ್ ಹೋಗಿ ಬಂದು ಐದು ಗಂಟೆಗೆ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದೆವು ಪ್ರತಿ ವರ್ಷ ಜನವರಿ ಒಂದನೆಯ ತಾರೀಕು ಆ ದಿನ ನಾವು ಹೋದ ಪ್ರವಾಸದ ನೆನಪು ಆಗುತ್ತಲೇ ಇರುತ್ತದೆ.ಹಾಗೆ ಮತ್ತೊಂದು ಕಹಿ ನೆನಪು ಎಂದರೆ ಪ್ರತಿ ನಿಧಿ ಬಾಂಧವರೂ ಪರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನದೊಂದು ಸಣ್ಣ ಚಿನ್ನದ ಸರ ಕಳೆದುಹೋದದ್ದು. ನಂಜನಗೂಡಿನ ಗೆಳತಿ ಇಂದುಮತಿ ಅವರ ತಮ್ಮನ ಮೂಲಕ ದುಬೈ ನಿಂದ ತರಿಸಿದ್ದ ೫ ಗ್ರಾಂ ನ ಸರ. ಬಹಳ ವರ್ಷಗಳಿಂದ ಭೇಟಿ ಆಗದೆ ಇದ್ದ ಪಿಯುಸಿ ಗೆಳತಿ ಲತಾ ಅವರ ನೆರೆಯ ಮನೆಗೆ ನಾವು ಗೃಹಪ್ರವೇಶಕ್ಕೆ ಹೋಗಿದ್ದು ಅವಳು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ಆಗಿನು ಮೊಬೈಲು ಕಾಲಿಟ್ಟ ಸಮಯ ಅವಳ ಬಳಿ ನನ್ನ ಬಳಿ ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ ಹಾಗಾಗಿ ಮತ್ತೆ ಸ್ನೇಹ ಮುಂದುವರಿಸಲು ಆಗಲಿಲ್ಲ. ಮೊದಲೇ ಹೇಳಿದಂತೆ ಮನೆಯ ಬಳಿ ಇದ್ದ ಶಾಖೆ ಐದಕ್ಕೆ ವರ್ಗಾವಣೆ ಕೇಳಿದ್ದು ಆದರೆ ಅಲ್ಲಿ ಹೆಚ್ ಜಿ ಎ ಅಂದರೆ ನಮ್ಮ ಪೋಸ್ಟ್ ಖಾಲಿ ಇರಲಿಲ್ಲ. ಅಲ್ಲಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನ ಜೊತೆಗೆ ಬಂದು ರಿಪೋರ್ಟ್ ಆದ ಮೊದಲನೇ ಸ್ಥಾನ ಹಾಗೂ ನನ್ನದು ಎರಡನೆಯ ಸ್ಥಾನ. ಅಲ್ಲಿ ಪೋಸ್ಟ್ ಖಾಲಿ ಇಲ್ಲ ಅಂದಮೇಲೆ ಈ ವರ್ಷ ನಮಗೆ ವರ್ಗಾವಣೆ ಇಲ್ಲ ಎಂದು ಖಾತ್ರಿ ಯಾಗಿತ್ತು ಆದರೆ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿ ಇದ್ದುದರಿಂದ ಇನ್ನೂ ಒಂದು ವರ್ಷ ಹಾಯಾಗಿ ಇರಬಹುದು ಆದರೆ ಈ ಶಾಖೆ ಇವಾಗ ಕಟ್ಟಡಕ್ಕೆ ಅಂದರೆ ಬನ್ನಿ ಮಂಟಪಕ್ಕೆ ಸ್ಥಳಾಂತರ ಗೊಳ್ಳುವ ಯೋಜನೆ ಇತ್ತು. ಹಾಗಾಗಿ ಸ್ಥಳಾಂತರಗೊಳ್ಳುವ ಮೊದಲು ನಮಗೆ ವರ್ಗಾವಣೆ ಸಿಕ್ಕಿದರೆ ಒಳ್ಳೆಯದು ಎಂದಿತ್ತು. ಏಕೆಂದರೆ ನಮ್ಮ ಏರಿಯಾದಿಂದ ಬನ್ನಿಮಂಟಪಕ್ಕೆ ಎರಡೆರಡು ಬಸ್ ಹಿಡಿದು ಹೋಗಬೇಕಿತ್ತು. ಬಹಳ ದೂರವೂ ಇತ್ತು. ಆ ದೇವರಿಗೆ ನಮ್ಮ ಮೊರೆ ಕೇಳಿಸಿತೇನೋ ಎಂಬಂತೆ ಆ ವರ್ಷ ಶಾಖೆ ಎರಡರ ಇಬ್ಬರಿಗೆ ಸಹಾಯಕ ಅಧಿಕಾರಿಗಳಾಗಿ ಬಡ್ತಿ ಸಿಕ್ಕಿತು ಗಿರಿಜಾ ಮತ್ತು ರೇಣುಕುಮಾರಿ ಇಬ್ಬರು ಪದೋನ್ನತಿ ಹೋಗಲು ಒಪ್ಪಿಗೆ ಕೊಟ್ಟಿದ್ದರಿಂದ ನಮಗೆ ಅಲ್ಲಿ ಎರಡು ಪೋಸ್ಟ್ ಖಾಲಿ ಆಗಿತ್ತು, ಇನ್ನು ವರ್ಗಾವಣೆ ಆದೇಶ ಬರುವುದಷ್ಟೇ ಬಾಕಿ. ನಾನು ರಜೆ ಹಾಕಿದ್ದೆ. ಒಂದ್ಸಲ ನಮ್ಮ ಮನೆಯಲ್ಲಿ ಕಾಲ್ ಮಾಡಿದ್ದಳು ನನ್ನ ರಿಲವಿಂಗ್ ಆರ್ಡರ್ ಬಂದಿದ್ದು 15ನೆಯ ತಾರೀಕು ನಾವು ಆಗಬೇಕಿತ್ತು ಅಂದೇ ಮಧ್ಯಾಹ್ನ ನಾವಿಬ್ಬರೂ ಯಾಕೆಯವರಿಗೆ ಊಟ ಕೊಡಿಸೋಣವ ಎಂದು ಕೇಳಿದಳು ಆಯಿತು ಎಂದು ಹೇಳಿ ಹಬ್ಬದ ಮಾರನೆಯ ದಿನ ಮಧ್ಯಾಹ್ನ ನಮ್ಮ ಪಾರ್ಟಿ ಕೊಟ್ಟು ಸಂಜೆಗೆ ರಿಲೀಸ್ ಆದದ್ದು 1೭ನೆಯ ತಾರೀಕು ಸೋಮವಾರ ನಾವು ಶಾಖೆ ಐದಕ್ಕೆ ರಿಪೋರ್ಟ್ ಆಗಬೇಕಿತ್ತು ಈ ಹಿಂದೆ ನಂಜನಗೂಡಿನಲ್ಲಿ ನಮಗೆ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿಕೆ ರವಿ ಅವರೇ ಅಲ್ಲಿ ಈಗ ಶಾಖಾಧಿಕಾರಿಗಳು ಅವರು ಶಾಖೆಗೆ ಫೋನ್ ಮಾಡಿ ನನಗೆ ಹೊಸ ವ್ಯವಹಾರ ವಿಭಾಗ ಕೊಡುವುದಾಗಿ ತಿಳಿಸಿದರು. ವತ್ಸಲಾಗೆ ಮಾರುಕಟ್ಟೆ ವಿಭಾಗ. ನನ್ನದೇನೂ ಅಭ್ಯಂತರವಿರಲಿಲ್ಲ. ಅಂತೂ ಇಂತೂ ಶಾಖೆ ಐದಕ್ಕೆ ಬಂದು ರಿಪೋರ್ಟ್ ಆದೆವು. ಮೊಟ್ಟ ಮೊದಲ ಬಾರಿ ಡ್ಯೂಟಿ ರಿಪೋರ್ಟ್ ಜೊತೆಗೆ ವರ್ಗಾವಣೆ ಕೋರಿಕೆ ಪತ್ರ ಇರಲಿಲ್ಲ. ಮುಂದೆ ನಿವೃತ್ತಿಯಾಗುವವರೆಗೂ ಬರೋಬರಿ 21 ವರ್ಷ ಇದೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಅಂದಾಜು ಸಹ ಅಂದು ಇರಲಿಲ್ಲ. ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಇದ್ದ ಆ ಶಾಖೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಕೆ ಜಿ ಐ ಡಿ ಕಚೇರಿಯೂ ಸಹ ಇತ್ತು. ರಸ್ತೆಯ ಎಡಬದಿಯಲ್ಲಿ ಇದ್ದ ಆ ಶಾಖೆ 2 ಅಂತಸ್ತಿನದಾಗಿತ್ತು ನನ್ನ ಹೊಸ ವ್ಯವಹಾರ ವಿಭಾಗ ಮೊದಲನೆಯ ಮಹಡಿಯಲ್ಲಿ ಇತ್ತು. ಮೊದಲಿಂದ ಪರಿಚಿತರಾಗಿದ್ದ ಶೈಲಾ ವೀಣಾ ಮಂಗಳ ಶಾಂತ ಹಾಗೂ ಎದುರು ಮನೆಯಲ್ಲಿ ಇದ್ದ ಸಾವಿತ್ರಿ ಎಲ್ಲರೂ ಇಲ್ಲೇ ಇದ್ದರು. ಹೊಸ ವಾತಾವರಣ ಅನಿಸಲೇ ಇಲ್ಲ ತುಂಬಾ ಬೇಗ ಅಂದುಕೊಳ್ಳುವಂತೆ ಆಯಿತು.ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ರಾಜೇಂದ್ರ ಅವರು ಸಹಾಯಕ ಆಡಳಿತ ಅಧಿಕಾರಿಗಳಾಗಿ ಇದ್ದರೆ ಸಹಾಯಕ ರಾಗಿ ನನ್ನದೇ ಹೆಸರಿನ ಜಿ ಸುಜಾತ ಮತ್ತು ಗುರುರಾಜ್ ಅವರು ಅಲ್ಲಿ ಇಬ್ಬರು ಹೆಜ್ಜೆಯಗಳಿದ್ದು ನಮ್ಮದೇ ಯೂನಿಯನ್ ನ ಸಿ ಚಂದ್ರಕುಮಾರ್ ಅವರು ಸಹ ಅದೇ ವಿಭಾಗದಲ್ಲಿ ಇದ್ದರು. ಆಗಿಲ್ಲ ಪಾಲಿಸಿಗಳು ಹೆಚ್ಚಾಗಿ ಬರುತ್ತಿದ್ದು ಆ ವಿಭಾಗದಲ್ಲಿ ಕೈ ತುಂಬಾ ಕೆಲಸ ಇತ್ತು ಆಸಕ್ತಿದಾಯಕವಾಗಿಯೂ ನಾನು ಈ ಮೊದಲು ಅದೇ ಹೊಸ ವ್ಯವಹಾರ ವಿಭಾಗದಲ್ಲಿ ಮಾಡಿದಾಗ ಪೂರ್ತಿ ಮಾನ್ಯುಯಲ್ ಕೆಲಸಗಳಿತ್ತು ಈಗ ಎಲ್ಲವೂ ಕಂಪ್ಯೂಟರ್ನಲ್ಲಿ ಮಾಡಬೇಕಿತ್ತು ಹೊಸದಾಗಿ ಕಲಿಯುವ ಆಸಕ್ತಿಯು ತುಂಬಾ ಖುಷಿಯಾಗುವಂತಿತ್ತು. ರವೀಶ್ ಅವರು ಊರಿನಲ್ಲಿ ಇದ್ದಾಗ ಮದ್ಯಾಹ್ನ ಊಟಕ್ಕೂ ಸಹ ಕರೆದುಕೊಂಡು ಹೋಗಿ ಬಂದು ಬಿಡುತ್ತಿದ್ದರು. ಸಕಲೇಶಪುರ ಬಿಟ್ಟ ಮೇಲೆ ಮಧ್ಯಾಹ್ನ ಮನೆಯ ಬಿಸಿಯೂಟ ಮತ್ತೆ ದೊರೆಯಿತು ಅನ್ನಬಹುದು.(ಮುಂದುವರೆಯುವುದು) ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-35 ಮೈಸೂರು ಶಾಖೆ ಎರಡಕ್ಕೆ ಬಂದು ರಿಪೋರ್ಟ್ ಮಾಡಿಕೊಂಡಿದ್ದು ಆಯಿತು. ಮಾಮೂಲಿನಂತೆ ಇಲ್ಲಿಯೂ ಒಂದು ಕೈಯಲ್ಲಿ ಕರ್ತವ್ಯ ಹಾಜರಾಗುವ ಪತ್ರ ಇದ್ದರೆ ಮತ್ತೊಂದು ಕೈಯಲ್ಲಿ ವರ್ಗಾವಣೆ ಅರ್ಜಿ. ಈ ಬಾರಿ ಮನೆಗೆ ಹತ್ತಿರದ ಶಾಖೆ ೫ ಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೆ. ಇಲ್ಲಿ ನನಗೆ ಮತ್ತೆ ನನ್ನ ಮೆಚ್ಚಿನ ಪಾಲಿಸಿ ಸೇವಾ ವಿಭಾಗ ಕೊಟ್ಟರು. ಪಾಲಿಸಿಯ ಪುನರುಜ್ಜೀವನ, ಅಸೈನ್ಮೆಂಟ್ ಮತ್ತು ನಾಮನಿರ್ದೇಶನ ಹಾಗೂ ಪಾಲಿಸಿಗಳ ಅಲ್ಟ್ರೇಶನ್ ಇಷ್ಟು ವಿಭಾಗಗಳ ಮೇಲ್ವಿಚಾರಣೆ ನನ್ನದು. ಈ ಮೂರು ವಿಭಾಗಗಳಿಗೂ ಒಬ್ಬೊಬ್ಬರು ಸಹಾಯಕರು ಇದ್ದರು. ನನ್ನದೇ ಬ್ಯಾಚ್ ನ ಶ್ರೀಹರಿ ಸುಬ್ರಹ್ಮಣ್ಯ ಶೋಭಾ ಮತ್ತು ಪುಟ್ಟ ಲಕ್ಷ್ಮಿ ಈ ವಿಭಾಗದ ಸಹಾಯಕರು. ಈ ಹಿಂದೆ ನಂಜನಗೂಡಿನಲ್ಲಿ ನನ್ನ ಜೊತೆ ಉನ್ನತ ಶ್ರೇಣಿ ಸಹಾಯಕರಾಗಿದ್ದ ಜಗದೀಶ್ ಅವರು ಈಗ ಆಡಳಿತ ಅಧಿಕಾರಿಯಾಗಿ ಶಾಖೆಯಲ್ಲಿ ಇದ್ದರು. ಬಹುತೇಕ ಬಹುತೇಕ ಎಲ್ಲರೂ ಮೊದಲಿನಿಂದ ಪರಿಚಯದವರೇ ಆಗಿದ್ದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪವೂ ಕಷ್ಟವಾಗಲಿಲ್ಲ. ಬೇರೆ ವಿಭಾಗಗಳಿಂದ ವರ್ಗವಾಗಿ ಬಂದಿದ್ದ ಹೇಮಗೋಮತಿ ಮತ್ತು ರೇಖಾ ಮಾತ್ರ ಹೊಸ ಪರಿಚಯ ಆದರೂ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ನನ್ನದೇ ಬ್ಯಾಚ್ನ ಅನಿತ ಗಾಯಿತ್ರಿ ಹಾಗೂ ಶೋಭಾ ಈ ಮುಂಚೆ ಮಂಡ್ಯದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಗಾಯಿತ್ರಿ ದೇವಿ ಸಹಪಾಠಿ ಸುಮಾ ಇವರೆಲ್ಲರೂ ಇದೇ ಬ್ರಾಂಚ್ ನಲ್ಲಿ ಇದ್ದರು. ಪ್ರಸೂತಿ ರಜೆಗೆ ಹೋಗಿದ್ದ ಮಂಜುಳಾ ಸಹ ವಾಪಸ್ ಆಗಿದ್ದು ಅವಳು ಸಹ ತುಂಬಾ ಕ್ಲೋಸ್ ಆದಳು. ಈ ಮುಂಚೆ ನಾನು ಪ್ರಸ್ತಾಪಿಸಿದ ಮಂಡ್ಯ ಬ್ರಾಂಚ್ ನಲ್ಲಿದ್ದ ಪ್ರೈಮರಿ ಶಾಲೆಯ ಸಹಪಾಠಿ ಮಂಜುನಾಥ್ ಸಹ ಇಲ್ಲಿಯೇ ಇದ್ದಿದ್ದು .ಬಹಳ ವರ್ಷಗಳಿಂದ ಅವರೆಲ್ಲ ಒಟ್ಟಿಗೆ ಅದೇ ಶಾಖೆಯಲ್ಲಿ ಕೆಲಸ ಮಾಡಿದ್ದರಿಂದ ಏಕವಚನದಲ್ಲಿಯೇ ಮಾತನಾಡಿಸಿಕೊಳ್ಳುವಷ್ಟು ಆತ್ಮೀಯತೆ ಇತ್ತು ಒಂದು ರೀತಿಯ ಕೋಝೀ ವಾತಾವರಣ. ಆ ಬ್ರಾಂಚ್ ನಲ್ಲಿ ಮನೆಯ ಸದಸ್ಯರ ಹಾಗೆ ಎಲ್ಲರೂ ಹೊಂದಿಕೊಂಡು ಇದ್ದದ್ದು ತುಂಬಾ ಖುಷಿ ಕೊಟ್ಟಿತ್ತು ಇದುವರೆಗೆ ನಾನು ಕೆಲಸ ಮಾಡಿದ ಯಾವುದೇ ಶಾಖೆ ಗಿಂತ ಇಲ್ಲಿ ತುಂಬಾ ಆತ್ಮೀಯತೆಯ ಅನುಬಂಧ ಇದ್ದದ್ದು ಕಾಣಿಸುತ್ತಿತ್ತು. ಹಾಗಾಗಿ ಕೆಲಸಗಳನ್ನು ಸಹ ಹಂಚಿಕೊಂಡಿದೆ ಮಾಡಿಬಿಡುತ್ತಿದ್ದರಿಂದ ತುಂಬಾ ಸುಗಮವಾಗಿ ನಡೆಯುತ್ತಿತ್ತು. ನಂಜನಗೂಡು ಶಾಖೆ ಬಿಡುವ ಸ್ವಲ್ಪ ಮೊದಲು ನಾವು ಮಾರುತಿ ಒಮ್ಮೆ ಗಾಡಿಯನ್ನು ಖರೀದಿಸಿದವು ನಮ್ಮ ಮನೆಯವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲು ಈ ವ್ಯವಸ್ಥೆ. ಆ ಸಮಯದಲ್ಲಿ ಮೊಬೈಲ್ ಗಳು ಹೆಚ್ಚು ಜನಪ್ರಿಯ ವಾಗುತ್ತಿತ್ತು ಅದೇ ಬಿಲ್ಡಿಂಗ್ನ ಒಂದು ಕಡೆ ಬಿ ಎಸ್ ಎನ್ ಎಲ್ ಸಿಮ್ ಗಳನ್ನು ಕೊಡುತ್ತಿದ್ದರು. ಸುಲಭವಾಗಿಯೇ ಸಿಮ್ ಸಿಕ್ಕಿತು .ಮೊದಲ ನೋಕಿಯಾ ಮೊಬೈಲ್ ರವೀಶ್ ಖರೀದಿಸಿದರು ಆಗ ಅದರ ಬೆಲೆ ಹತ್ತು ಸಾವಿರ ರೂಪಾಯಿಗಳು ಆಗ ಮೊಬೈಲ್ ದರಗಳು ಸ್ವಲ್ಪ ಹೆಚ್ಚೇ ಇದ್ದವು. ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಪದೋನ್ನತಿ ಆಗಿ ಉಪ ಶಾಖಾಧಿಕಾರಿಗಳಾಗಿ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಶಾಖೆಗೆ ವರ್ಗಾವಣೆ ಆಯಿತು. ಛಾಯಾ ಸಹ ಬೆಂಗಳೂರಿಗೆ ಅರ್ಜಿ ಕೋರಿದಳು ಬಹಳ ಬೇಗನೆ ಅವಳಿಗೂ ಬೆಂಗಳೂರಿನ ಸಿಎ ಬ್ರಾಂಚ್ ಗೆ ವರ್ಗ ಸಿಕ್ಕಿತು ಈಗ ಅವರು ಬೆಂಗಳೂರಿನ ಹಲಸೂರಿನಲ್ಲಿ ಮೊದಲು ನಂತರ ಸಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ನನಗೆ ಓಡಾಡಲು ಸಹ ಅನುಕೂಲವಾಗಿತ್ತು. ಆಫೀಸಿನ ಎದುರಿಗೆ ಬಸ್ ಸ್ಟ್ಯಾಂಡ್. ಯಾವಾಗಲಾದರೂ ಬೆಂಗಳೂರಿಗೆ ಹೋದಾಗ ಬೆಳಿಗ್ಗೆ ಎದ್ದು ಹೊರಟು ನೇರ ಆಫೀಸಿಗೆ ವಾಪಸ್ ಬರುತ್ತಿದ್ದೆ. ಹಾಗೆ ಒಮ್ಮೆ ವಾಪಸ್ ಬರುವಾಗ ಎಸ್ ಎಲ್ ಭೈರಪ್ಪನವರ ಸಹಪಾಠಿ ವೃದ್ಧರೊಬ್ಬರು ನನ್ನ ಪಕ್ಕದ ಸೀಟ್ ನಲ್ಲಿಯೇ ಕುಳಿತಿದ್ದು ದಾರಿಯುದ್ದಕ್ಕೂ ಭೈರಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಚರ್ಚೆ ಮಾಡುತ್ತಾ ಬಂದಿದ್ದು ಒಂದು ಸುಂದರ ಸವಿ ನೆನಪು. ಅವರು ಅಕ್ಕಿಹೆಬ್ಬಾಳದವರಾಗಿದ್ದು ಅಲ್ಲಿನ ಜಾತ್ರೆಗೆ ಬನ್ನಿ ಎಂದು ಆಮಂತ್ರಣವನ್ನು ಸಹ ಕೊಟ್ಟಿದ್ದರು. ನನ್ನ ಸಹಪಾಠಿ ಮಂಜುವಿನ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು ಮೊದಲಿನಿಂದ ನಮ್ಮ ಮನೆಗೆ ಬರುತ್ತಿದ್ದು ಅಮ್ಮನ ಕೈ ರುಚಿ ನೋಡುತ್ತಿದ್ದವನಿಗೆ ಆಗಲಿಂದ ಅಕ್ಕಿ ಮಸಾಲೆ ರೊಟ್ಟಿ ಎಂದರೆ ತುಂಬಾ ಇಷ್ಟ ನಾನು ಡಬ್ಬಿಗೆ ಅದನ್ನು ತಂದ ದಿನಗಳಲ್ಲೆಲ್ಲ ನನ್ನ ಡಬ್ಬಿಯನ್ನು ಅವನೇ ತೆಗೆದುಕೊಂಡು ಬಿಟ್ಟು ನನಗೆ ಕೆಳಗಿನ ಹೋಟೆಲ್ ನಿಂದ ಮಸಾಲೆ ದೋಸೆ ತರಿಸಿ ಕೊಟ್ಟುಬಿಡುತ್ತಿದ್ದ ಅದರಲ್ಲೂ ಅವರೇ ಕಾಳು ರೊಟ್ಟಿ ಮಾಡಿದಾಗಲಂತೂ ನಾನು ಅವನಿಗಾಗಿಯೇ ಪ್ರತ್ಯೇಕ ಎರಡು ರೊಟ್ಟಿ ಮಾಡಿ ಡಬ್ಬಿಯಲ್ಲಿ ತಂದುಕೊಡುತ್ತಿದೆ ಅಷ್ಟು ಖುಷಿಯಾಗಿ ತಿನ್ನುತ್ತಿದ್ದ ಜೀವನದಲ್ಲಿ ಅಷ್ಟೊಂದು ಉತ್ಸಾಹ ತುಂಬಿಕೊಂಡಿದ್ದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಂತೂ ನನಗೆ ಇಂದಿಗೂ ಅರಗಿಸಿಕೊಳ್ಳಲಾಗದ ಆಘಾತ. ಫೆಬ್ರವರಿ ತಿಂಗಳ ಮೊದಲ ಭಾಗದಲ್ಲಿ ಒಂದು ಹೊಸ ಬೆಳವಣಿಗೆ ಆರಂಭವಾಯಿತು. ಚುನಾವಣಾ ಕಚೇರಿಯಿಂದ ನಮ್ಮ ಸಿಬ್ಬಂದಿಗಳ ಪಟ್ಟಿಯನ್ನು ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದುವರೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಉಪಾಧ್ಯಾಯರು ಶಿಕ್ಷಕರುಗಳನ್ನು ಮಾತ್ರ ಈ ಡ್ಯೂಟಿಗೆ ತೆಗೆದುಕೊಳ್ಳುತ್ತಿದ್ದದ್ದು ಈ ಬಾರಿ ರಾಜ್ಯ ಹಾಗೂ ಕೇಂದ್ರ ಎರಡು ಕಡೆಯ ಚುನಾವಣೆಗಳು ನಡೆಯುತ್ತಿದ್ದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆ ಉಂಟಾಗಿದ್ದು ಬ್ಯಾಂಕುಗಳು ಹಾಗೂ ಭಾರತೀಯ ಮತ್ತು ಸಾಮಾನ್ಯ ವಿಮೆ ನೌಕರರನ್ನು ಚುನಾವಣಾ ಡ್ಯೂಟಿಗೆ ಕರೆಯುವ ಪರಿಪಾಠ ಆರಂಭವಾಯಿತು ಇಲ್ಲಿಂದ ಮೊದಲುಗೊಂಡು ಚುನಾವಣೆ ಘೋಷಣೆ ಎಂದ ತಕ್ಷಣ ನಮಗೆಲ್ಲ ದುಃಸ್ವಪ್ನಗಳು ಕಾಡಲು ಆರಂಭವಾಗಿತ್ತು. ಚುನಾವಣೆ ಹೆಸರು ಕೇಳಿದರೆ ಬೆಚ್ಚಿ ಬೀಳುವಷ್ಟು ಚುನಾವಣೆ ಕರ್ತವ್ಯಗಳ ಕಾಟ. ನಿವೃತ್ತಿಯ ಕಡೆಯ ವರ್ಷದಲ್ಲಿಯೂ ಸಹ ಈ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕಾಯಿತು. ಏಪ್ರಿಲ್ 26 2004 ರಂದು ಚುನಾವಣೆಗಳು ನಿಗದಿಯಾಗಿತ್ತು. ಅದಕ್ಕೆ ಮುಂಚೆ ಒಂದು ವಾರದಲ್ಲಿ ತರಬೇತಿಗೆಂದು ಕರೆದಿದ್ದರು ಮೈಸೂರಿನ ಟೌನ್ ಹಾಲ್ ನಲ್ಲಿ ತರಬೇತಿ ಒಂದು ರೀತಿಯ ದೊಂಬಿಯೇ ಅದು. ಯಾವ ವಿಷಯಗಳು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ಅವರು ಹೇಳಿಕೊಟ್ಟಿದ್ದು ಸರಿಯಾಗಿರಲಿಲ್ಲ ಎಂಬುದು ಒಂದು ಕಾರಣವಾದರೆ ಅವೆಲ್ಲವೂ ನಮಗೆ ಮೊಟ್ಟಮೊದಲಿಗೆ ಬಾರಿ ಆದ್ದರಿಂದ ಎಲ್ಲಾ ಹೊಸದು ಎನಿಸತೊಡಗಿತ್ತು. ಶಾಖೆಯ ಎಲ್ಲಾ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ಕರೆ ಬಂದಿತ್ತು. ನನಗೆ ಎ ಪಿ ಆರ್ ಒ ಅಂದರೆ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಕಾರ್ಯ ಇತ್ತು .ಅಕಸ್ಮಾತ್ ಪಿ ಆರ್ ಓ ಬರಲಿಲ್ಲ ಎಂದರೆ ನಾನೇ ಆ ಕರ್ತವ್ಯವನ್ನು ನಿರ್ವಹಿಸಬೇಕಿತ್ತು, ಮೊದಲೇ ಹೆದರುವವರ ಮೇಲೆ ಕಪ್ಪೆ ಎಸೆದಂತಾಗಿತ್ತು ನನ್ನ ಪರಿಸ್ಥಿತಿ. ನಾವು ಕಾರ್ಯನಿರ್ವಹಿಸಬೇಕಾಗಿದ್ದು ಹುಣಸೂರು ತಾಲೂಕು. ಚುನಾವಣೆಯ ಹಿಂದಿನ ದಿನವೇ ಮಹಾರಾಜ ಕಾಲೇಜು ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗಿದ್ದು ಅಲ್ಲಿಂದ ಏರ್ಪಾಡು ಮಾಡಿದ್ದ ಬಸ್ಗಳಲ್ಲಿ ಹೋಗಿದ್ದಾಯಿತು. ಅಲ್ಲಿ ಬೂತ್ ನಂಬರ್ ಹಾಗೂ ಕಾರ್ಯನಿರ್ವಹಿಸಬೇಕಾಗಿದ್ದ ಶಾಖೆ ಹಾಗೂ ನಾವು ಹತ್ತಬೇಕಿದ್ದ ಬಸ್ ನಂಬರ್ ತಿಳಿಸಿದರು. 12 ಗಂಟೆಗೆ ಬಸ್ ಹೊರಡುವುದು ಎಂದು ತಿಳಿಯಿತು ಅಲ್ಲಿಯೇ ಕ್ಯಾಂಪ್ ಹಾಕಿದ್ದ ಹೋಟೆಲ್ ನಲ್ಲಿ ತಿಂಡಿ ತಿಂದು ನಮ್ಮ ನಮ್ಮ ಬೂತ್ ನವರ ಪರಿಚಯ ಮಾಡಿಕೊಂಡು ಅವರಿಂದ ಸಾಮಗ್ರಿಗಳನ್ನು ಪಡೆದೆವು ವಿದ್ಯಾವರ್ಧಕ ಕಾಲೇಜಿನ ಲೆಕ್ಚರರ್ ಒಬ್ಬರು ಖಾಸಗಿ ಶಾಲೆಗೆ ಶಿಕ್ಷಕಿ ಗೀತಾ ಇನ್ನೊಬ್ಬರು ಹಾಗೂ ಉಳಿದಿದ್ದರು ಸರ್ಕಾರಿ ರಾಜ್ಯ ಸರ್ಕಾರಿ ನೌಕರರು ನಮ್ಮ ತಂಡದಲ್ಲಿ ಇದ್ದರು. ಅಂತೂ ಇಂತೂ ಹನ್ನೆರಡುವರೆಗೆ ಬಸ್ ಹೊರಟಿದ್ದು ದಾರಿಯ ಮದ್ಯ ಹುಣಸೂರಿನ ಹೋಟೆಲ್ ನಲ್ಲಿ ನಿಲ್ಲಿಸಿ ಊಟ ಮಾಡಿದೆವು. ನಮ್ಮ ಪಿ ಆರ್ ಓ ಅವರಿಗೂ ಇದೆ ಮೊದಲ ಚುನಾವಣಾ ಅನುಭವ ತುಂಬಾ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ನಾಲ್ಕು ಗಂಟೆಯ ವೇಳೆಗೆ ನಮ್ಮನ್ನು ಬಳಿ ಬಿಟ್ಟರು ಅಲ್ಲಿ ಇಲ್ಲ ವ್ಯವಸ್ಥೆಗಳನ್ನು ಮಾಡಿ ಕೊಂಡೆವು. ರಾತ್ರಿ ಅಲ್ಲಿ ಹಳ್ಳಿಯವರೆ ಅಡುಗೆಯ ವ್ಯವಸ್ಥೆ ಮಾಡಿದ್ದರು. ನಾನು ಮತ್ತು ಗೀತಾ ಅವರು ನಾನು ತೆಗೆದುಕೊಂಡು ಹೋಗಿದ್ದ ಚಪಾತಿ ಹಾಗೂ ಹಾಗಲಕಾಯಿ ಗೊಜ್ಜುಗಳಲ್ಲಿ ರಾತ್ರಿಯ ಊಟ ಮುಗಿಸಿದೆವು .ಹಳ್ಳಿಯ ಶಾಲೆ, ಸದ್ಯ ನಮಗೆ ಶಿಕ್ಷಕರು ಉಪಯೋಗಿಸುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಬಿಟ್ಟು ಕೊಟ್ಟಿದ್ದರು. ಆದರೆ ಸ್ನಾನಕ್ಕೆ ಮಾತ್ರ ವ್ಯವಸ್ಥೆ ಇರಲಿಲ್ಲ ಬೆಳಗಾಗುವ ಮೊದಲೇ ಸ್ನಾನ ಮಾಡಿಕೊಂಡಿದ್ದರಂತೆ .ನಮಗೆ ಮಾತ್ರ ಅಂದು ಸ್ನಾನ ಭಾಗ್ಯ ಸಿಗಲಿಲ್ಲ.ಬೆಳಿಗ್ಗೆ 7.30ಗೆ ಚುನಾವಣೆ ಆರಂಭವಾಯಿತು ಎರಡೆರಡು ಸ್ಥಾನಗಳಿಗೆ ಆದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಲು ಇತ್ತು ಬೆಳಿಗ್ಗೆ 7.30 ಇಂದ ಸಂಜೆ ಆರು ಗಂಟೆಯ ತನಕ ಚುನಾವಣೆಗಳು ತಿಂಡಿ ತಿನ್ನಲು ಸಹ ಬಿಡುವಾಗಲಿಲ್ಲ ನಮಗೆಲ್ಲ ಕೈ ತುಂಬಾ ಕೆಲಸ ಇದ್ದುದರಲ್ಲಿ ಪಿ ಆರ್ ಓ ಅವರೇ ಮೇಲ್ವಿಚಾರಣೆ ಮಾಡಿಕೊಳ್ಳುತ್ತ ನಾವು ಕೆಲಸ ಮಾಡುತ್ತಲೇ ತಿನ್ನುವ ಹಾಗೆ ಬ್ರೆಡ್ ಚಾ ಬಾಳೆಹಣ್ಣು ಬಿಸ್ಕತ್ತು ಇವುಗಳನ್ನು ಸರಬರಾಜು ಮಾಡಿದರು ಒಂದು ಗಂಟೆಯ ವೇಳೆಗೆ ಸ್ವಲ್ಪ ಜನಸಂದಣಿ ಕಡಿಮೆಯಾಗಿದ್ದರಿಂದ ಒಬ್ಬೊಬ್ಬರಾಗಿ ಹೋಗಿ ಊಟ ಮಾಡಿಕೊಂಡು ಬಂದೆವು .ನನಗೆ ಅಲ್ಲಿಯ ಅಡಿಗೆ ಹೇಗಪ್ಪಾ ತಿನ್ನುವುದು ಎಂದು ಚಿಂತೆ .ಆದರೆ ಬೆಳಿಗ್ಗೆ ತಂದಿಟ್ಟಿದ್ದ ಉಪ್ಪಿಟ್ಟು ಹಾಗೆ ಇತ್ತು ಅದನ್ನ ತಿಂದು ಮೊಸರನ್ನ ತಿಂದು ಹೇಗೋ ಕಥೆ ಮುಗಿಸಿದ್ದಾಯಿತು. ಸಂಜೆ ಆರು ಗಂಟೆಗೆ ಮುಕ್ತಾಯ ಎಂದಿದ್ದರು ಆ ವೇಳೆಗೆ ಇದ್ದವರನ್ನೆಲ್ಲ ಮತದಾನ ಮಾಡಲು ಅವಕಾಶ ಮಾಡಿಕೊಡಲೇಬೇಕಿತ್ತು, ಆರು ಗಂಟೆಯ ನಂತರವೂ 60 70 ಜನ ಇದ್ದರು ನಮ್ಮ ಬೂತ್ ನಲ್ಲಿ 95% ಮತದಾನ ಆಗಿತ್ತು, ಅದು ಏಳು ಗಂಟೆಯ ವೇಳೆಗೆ ಮುಗಿದು ನಾವು ಎಲ್ಲಾ ಸ್ಟೇಟ್ಮೆಂಟ್ ಗಳನ್ನು ತಯಾರಿಸಿಕೊಳ್ಳುವ ವೇಳೆಗೆ 8.30 ಆಗಿತ್ತು ಬಸ್ ಆಗ ಬಂತು ಸಣ್ಣಪುಟ್ಟ ಉಳಿದದ್ದನ್ನು ಅಲ್ಲಿಗೆ ಮುಗಿಸಿಕೊಂಡು ಎಂದು ಹೊರಟುಬಿಟ್ಟವು ಮತ್ತೆ ಹುಣಸೂರು ತಾಲೂಕು ಕಚೇರಿಯಲ್ಲಿ ತುಂಬಾ ಜನ ಸಂದಣಿ. ಏನೊಂದು ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಹೇಗೋ ನುಗ್ಗಿ ಅಂತೂ ಎಲ್ಲವನ್ನು ಸಲ್ಲಿಸುವ ವೇಳೆಗೆ ರಾತ್ರಿ 10:30 ಆಗಿ ಹೋಗಿತ್ತು. ನಂತರ ಮೈಸೂರಿಗೆ ಹೊರಡುವ ಬಸ್ನಲ್ಲಿ ಕುಳಿತು ಹೊರಟೆವು. ನಮ್ಮ ಪಿ ಆರ್ ಓ ಬಳಿ ಇದ್ದ ಮೊಬೈಲಿನಿಂದ ನನ್ನ ತಾಯಿಯ ಮನೆಯ ಲ್ಯಾಂಡ್ಲೈನ್ ಗೆ ಫೋನ್ ಮಾಡಿ ನಮ್ಮ ಪತಿಗೆ ವಿಷಯ ತಿಳಿಸಿ ಅವರು ಬಂದು ಬಸಪ್ಪ ಹಾಸ್ಪಿಟಲ್ ಬಳಿ ನನಗಾಗಿ ಕಾಯುತ್ತಿದ್ದರು. ಅಂತೂ ಇಂತೂ ನಾಳೆ ಮುಗಿಸಿ ಮನೆಗೆ ಬಂದಾಗ ಆ ದಿನ ದಾಟಿ ಹೋಗಿತ್ತು. ಈ ಶಾಖೆಯಲ್ಲಿ ಇದ್ದಾಗಲೇ ಮತ್ತೊಮ್ಮೆ ಹೈದರಾಬಾದ್ ತರಬೇತಿಗೆ ಕರೆ ಬಂತು ಅದು ಮತ್ತೆ ನಾನು ಹಾಗೂ ನಂದಶ್ರೀ ಕುಲಕರ್ಣಿ ಕಟ್ಟಿ ಜೊತೆಯಾಗಿ ಹೈದರಾಬಾದಿಗೆ ಹೋಗಿದ್ದೆವು. ಮಕ್ಕಳನ್ನು ಅವರ ತಾಯಿ ಮನೆಗೆ ಬಿಟ್ಟು ಹೋಗಬೇಕಾಗಿತ್ತು. ಮೊದಲು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಬಿಟ್ಟು ನಂತರ ಹೈದರಾಬಾದ್ ಟ್ರೈನ್ ಹಿಡಿದದ್ದು ಇಂದಿನಂತೆ ಹೈದರಾಬಾದ್ ತರಬೇತಿ ತುಂಬಾ ಆಸಕ್ತಿದಾಯಕವಾಗಿ ಚೆನ್ನಾಗಿಯೂ ಇತ್ತು. ಈ ಬಾರಿ ಬರಿ ಬಿರ್ಲಾ ಮಂದಿರ ಮಾತ್ರ ನೋಡಿದ್ದು ಖರೀದಿಯೇ ಹೆಚ್ಚು. ನನ್ನ ತಂಗಿಯರಿಗೆ ಹಾಗೂ ಈಗಾಗಲೇ ನನ್ನ ಮೈದುನನಿಗೆ ಮದುವೆಯಾಗಿ ನಾನು ಓರಗಿತ್ತಿಗೆ ಸೀರೆ ತೆಗೆದುಕೊಂಡಿದ್ದೆ ನನ್ನ ನಾದಿನಿ ಮೂರು ಜನರಿಗೂ ಹೈದರಾಬಾದ್ ಸರಗಳು. ತುಂಬಾ ಖುಶಿ ಕೊಟ್ಟ ಪ್ರವಾಸ ಅದು.(ಮುಂದುವರೆಯುವುದು) ಸುಜಾತಾ ರವೀಶ್ಮೈಸೂರು
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ–32 ನಮ್ಮ ಆಫೀಸಿನ ಮುಂದಿನ ರಸ್ತೆಯಲ್ಲಿಯೇ ಒಂದು ಎಂಟು ನಿಮಿಷ ನಡೆದರೆ ಸಂತೆ ನಡೆಯುವ ಸಂತೆ ಮಾಳ ಅಥವಾ ಬಯಲು. ನಾವು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಬೇಗ ಬೇಗ ಊಟ ಮುಗಿಸಿ ಸಂತೆಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾನು ಇಂದುಮತಿ ಮತ್ತು ಶಶಿಕಲಾ ಹೋಗುತ್ತಿದ್ದೆವು.. ನಂತರ ಗಂಗಾ ಮತ್ತು ಫಾತಿಮಾ ವರ್ಗವಾಗಿ ಬಂದಮೇಲೆ ಅವರೂ ಬರುತ್ತಿದ್ದರು.ಮೊದಲಿಗೆ ಸಂತೆಯಲ್ಲಿದ್ದ ಮೂರು ನಾಲ್ಕು ಸಾಲುಗಳನ್ನು ಒಂದು ಬಾರಿ ಕಣ್ಣಾಡಿಸಿ ಬರುವುದು. ನಂತರ ಎಲ್ಲಿ ಚೆನ್ನಾಗಿದೆಯೋ ಹಾಗೂ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ತೆಗೆದುಕೊಳ್ಳುವುದು.. ನಾನು ಅಮ್ಮನ ಮನೆಗೂ ಸೇರಿಸಿ ತರಕಾರಿ ತೆಗೆದುಕೊಂಡು ಬರುತ್ತಿದ್ದೆ .ಸಾಮಾನ್ಯ ನನ್ನ ಬ್ಯಾಗ್ ತೂಕವಾಗಿ ಇರುತ್ತಿತ್ತು. ಈಗಾದರೆ ಅಷ್ಟು ಭಾರ ಹೊತ್ತು ಎಂಟು ನಿಮಿಷ ನಡೆಯಲು ಆಗುತ್ತಿತ್ತೋ ಇಲ್ಲವೋ ಹಾಗಂತು ನಿರಾಯಾಸವಾಗಿ ತೆಗೆದುಕೊಂಡು ಬರುತ್ತಿದ್ದೆವು. ಸಂಜೆ ಮಾತ್ರ ಆಟೋ ಹಿಡಿದು ಹೋಗುತ್ತಿದ್ದೆವು. ಸಾಮಾನ್ಯ ಅಲ್ಲಿ ತರಕಾರಿ ಬೆಳೆದವರೇ ತಂದು ಮಾರುತಿದ್ದುದರಿಂದ ತುಂಬಾ ತಾಜಾ ಆಗಿಯೂ ಇರುತ್ತಿತ್ತು ಅಲ್ಲದೆ ಮೈಸೂರಿಗಿಂತ ಬಹಳ ಕಡಿಮೆ ದರದಲ್ಲಿಯೇ ಸಿಗುತ್ತಿದ್ದುದಿ ಒಂದು ಕಾರಣ. ಸೊಪ್ಪಂತೂ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ನಾವು ಸಂತೆಯಲ್ಲಿ ಸೊಪ್ಪನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ ತೆಗೆದುಕೊಂಡು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ ಎನ್ನುವುದು ಒಂದು ಕಾರಣವಾದರೆ ರೈಲ್ವೆ ಸ್ಟೇಷನ್ ಪಕ್ಕದಲ್ಲಿಯೇ ಒಂದು ತರಕಾರಿ ಮಾರುಕಟ್ಟೆ ಇತ್ತು. ಅಲ್ಲಿ ತುದಿಯಲ್ಲಿಯೇ ಒಂದು ಅಜ್ಜಿ ಸೊಪ್ಪು ಮಾರುತ್ತಾ ಕುಳಿತಿರುತ್ತಿತ್ತು. ಸಾಮಾನ್ಯ ಆಕೆಯ ಬಳಿಯೇ ತೆಗೆದುಕೊಂಡು ರೈಲು ಹತ್ತುತ್ತಿದ್ದುದು. ಅದು ಶುಕ್ರವಾರ ಮಾತ್ರ ಸೊಪ್ಪು ತೆಗೆದುಕೊಳ್ಳದೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದೆವು.. ಕಸಿ ಮಾಡಿದ ದೊಡ್ಡ ಗಾತ್ರದ ಬದನೆಕಾಯಿ ಒಳಗೆ ಒಂದು ಬೀಜವು ಇರದೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು. ಎಳೆ ಹುರಳಿ ಕಾಯಿ ಗೋರಿಕಾಯಿ ಹೀರೆಕಾಯಿಗಳು ನೋಡಿದರೆ ತಿನ್ನುವಷ್ಟು ಆಸೆ ಆಗುತ್ತಿತ್ತು. ಕ್ಯಾರೆಟ್ ಸಹ ಚೆನ್ನಾಗಿಯೇ ಸಿಗುತ್ತಿತ್ತು. ಹೀಗಾಗಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರೇ ಕಾಯಿ ಮತ್ತು ಸೊಪ್ಪು ಮಾತ್ರ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ತೆಗೆದುಕೊಳ್ಳುತ್ತಿದ್ದು ಹೊತ್ತುಕೊಂಡು ಹೋಗಬೇಕಲ್ಲ ಎನ್ನುವುದು ಒಂದಾದರೆ ಅಲ್ಲೂ ಸಹ ಇದೇ ದರದಲ್ಲಿ ಸಿಗುತ್ತಿದ್ದುದು ಮತ್ತೊಂದು ವಿಶೇಷ. ಮತ್ತೊಂದು ಬಾರಿ ವರ್ಗಾವಣೆ ಚಕ್ರ ಉರುಳಿತು. ಈ ಬಾರಿ ಸುಲೋಚನಾ ಅವರಿಗೆ ಚಾಮರಾಜನಗರದಿಂದ ನಂಜನಗೂಡಿಗೆ ವರ್ಗ ಸಿಕ್ಕಿತ್ತು .ಅದರ ಜೊತೆಯಲ್ಲಿ ಈ ಮೊದಲು ನನ್ನ ಜೊತೆ ವಿಭಾಗೀಯ ಕಚೇರಿಯಲ್ಲಿ ಇದ್ದ ಸುಮಾ ಸಹ ಕೆಆರ್ ಪೇಟೆಯಿಂದ ನಂಜನಗೂಡಿಗೆ ವರ್ಗವಾಗಿ ಬಂದಳು. ನಮ್ಮ ರೈಲಿನಲ್ಲಿ ಓಡಾಡುವ ಬಳಗಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯಿತು. ಫಾತಿಮಾ ಹಾಗೂ ವೈದೇಹಿ ಅವರು ಅದರ ಮುಂದಿನ ಸುತ್ತಿನಲ್ಲಿ ವರ್ಗವಾಗಿ ಬಂದರು. ಅವರಿಬ್ಬರೂ ಬಸ್ ನಲ್ಲಿ ಓಡಾಡುತ್ತಿದ್ದರು.ಸುಲೋಚನ ಬಂದದ್ದು ಒಂದು ಅನುಕೂಲ ಏನಾಯಿತೆಂದರೆ ಮೈಸೂರಿನಿಂದ ನೀರು ಹೊತ್ತುಕೊಂಡು ಹೋಗುವುದು ತಪ್ಪಿತು. ಅವರ ಮನೆಯಿಂದ ಆಟೋದಲ್ಲಿ ಬರುತ್ತಿದ್ದುದರಿಂದ ದಿನಾ ನಾನೇ ನೀರು ತರುತ್ತೇನೆ ಎಂದು ಹೇಳಿದ್ದರು. ರಜೆ ತೆಗೆದುಕೊಳ್ಳದ ಚಿಕ್ಕ ಪುಟ್ಟ ಹಬ್ಬಗಳು ನಂಜನಗೂಡಿನ ದೊಡ್ಡ ಜಾತ್ರೆ ಇಂತಹ ದಿನಗಳೆಲ್ಲ ಅವರ ಮನೆಗೆ ಆಟೋದಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅವರಿಗೆ ಕಚೇರಿ ಸೇವಾ ವಿಭಾಗವನ್ನು ಕೊಟ್ಟಿದ್ದರು. ಸುಮಾಗೆ ಲೆಕ್ಕ ಪತ್ರ ವಿಭಾಗ. ಈ ಸುತ್ತಿನಲ್ಲಿ ನನಗೆ ಮೊದಲೇ ಹೇಳಿದಂತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಕೊಟ್ಟರು .ಅಲ್ಲಿ ನಾನು ಲೋನ್ಸ್ ಅಂದರೆ ಸಾಲ ವಿಭಾಗಕ್ಕೆನಿಯುಕ್ತಳಾದೆ. ಅಲ್ಲಿ ಆಗ ನಾರಾಯಣಸ್ವಾಮಿ ಅವರು ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದರು. ಆಗೆಲ್ಲ ಒಂದೇ ಸಾವಿರದ ಒಳಗೆ ಸಾಲ ಇದ್ದಾಗ ಅದನ್ನು ನಗದು ರೂಪದಲ್ಲಿಯೇ ಕೊಡುತ್ತಿದ್ದರು .ಹಾಗಾಗಿ ಒಂದು ರೀತಿಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು ಆದರೂ ಖುಷಿ ಕೊಡುತ್ತಿತ್ತು. ತುಂಬಾ ಅನಿವಾರ್ಯ ಸ್ಥಿತಿಯಲ್ಲಿ ಸಾಲ ಬೇಕಾದವರಿಗೆ ತಕ್ಷಣ ಮಾಡಿಕೊಟ್ಟಾಗ ಅವರು ತೋರಿಸುತಿದ್ದ ಕೃತಜ್ಞತಾ ಭಾವ ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಹೋದ ಕೆಲವು ದಿನಗಳಲ್ಲೇ ಅಲ್ಲಿನ ನಿಯತಕಾಲಿಕೆಗಳ ವಿತರಣೆ ಕೆಲಸ ಮತ್ತೆ ಈ ಶಾಖೆಯಲ್ಲಿಯೂ ನನ್ನನ್ನೇ ಅರಸಿ ಬಂದಿತ್ತು ಅದು ತುಂಬಾ ಇಷ್ಟದ ಕೆಲಸವಾದ್ದರಿಂದ ಒಪ್ಪಿಕೊಳ್ಳಲು ನಿರಾಕರಿಸಲಿಲ್ಲ. ಆಗ ಪಾಲಿಸಿ ಸೇವಾ ವಿಭಾಗದಲ್ಲಿನ ನಮ್ಮ ತಂಡ ತುಂಬಾ ಚೆನ್ನಾಗಿತ್ತು ನಾಗಮಣಿ ಗಿರಿಜಾ ಮತ್ತು ನಾನು ಉನ್ನತ ದರ್ಜೆ ಸಹಾಯಕಿಯರು. ಈ ಸಮಯದಲ್ಲಿ ತುಂಬಾ ದುಃಖಕರ ಘಟನೆ ಒಂದು ನಡೆಯಿತು .ಹೊಸ ವ್ಯವಹಾರ ವಿಭಾಗದಲ್ಲಿ ನನ್ನ ಜೊತೆಗೆ ಸಹಾಯಕರಾಗಿ ಇದ್ದ ಮಹಾದೇವನ್ ಅವರ ಆಘಾತಕಾರಿ ಸಾವು. ಉತ್ತರ ಭಾರತಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದಾಗ ಗಂಗಾನದಿಯ ನೀರಿನ ಸೆಳೆತಕ್ಕೆ ಅವರ ಪತ್ನಿ ಕೊಚ್ಚಿ ಹೋದರು .ಅವರನ್ನು ಹಿಡಿಯಲು ಇವರು ಅವರ ಹಿಂದೆಯೇ ಧುಮುಕಿದರು. ಬೇರೆ ನುರಿತ ಈಜುಗಾರರು ಅವರಿಬ್ಬರನ್ನು ದಡಕ್ಕೆ ಎಳೆದು ತರುವಷ್ಟರ ಮಹದೇವನ್ ಅವರ ಪ್ರಾಣ ಹೋಗಿಬಿಟ್ಟಿತ್ತು. ನಂತರ ಅವರ ಪತ್ನಿಗೆ ಅವರ ಕೆಲಸ ಸಿಕ್ಕಿತು ಇತ್ತೀಚೆಗೆ ಅವರ ಮಗಳ ಮದುವೆಯೂ ಆಯಿತು. ಆದರೂ ಬಹಳ ದಿನಗಳ ಕಾಲ ಕಾಡಿದ ಸಾವು ಅದು. ಮತ್ತೆ ಸಂತೆಯ ವಿಷಯಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ಹುಲ್ಲಹಳ್ಳಿ ಸರ್ಕಲ್ ನಿಂದ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ನಮ್ಮ ಆಫೀಸ್ ಇರುವುದು. ಸಂತೆ ನಡೆಯುತ್ತಿರುವುದು ಶುಕ್ರವಾರ. ನಮ್ಮ ಶಾಖೆಯಲ್ಲಿ ಮಹಿಳೆಯರ ಶೌಚಾಲಯ ಕ್ಯಾಶ್ ಕೌಂಟರ್ ನ ಎದುರಿಗೆ ಎಲ್ಲರ ಕಣ್ಣಿಗೆ ಬೀಳುವಂತೆಯೇ ಇತ್ತು .ಸಂತೆಯ ದಿನ ಸಂತೆಗೆ ಹೋಗುವ ಹೆಂಗಸರು ಸಂತೆಯ ಮಾರಾಟಗಾರ್ತಿ ಹೆಂಗಸರು ಎಲ್ಲರಿಗೂ ನಮ್ಮ ಶಾಖೆಯ ಶೌಚಾಲಯ ಒಂದು ಸಾರ್ವಜನಿಕ ಶೌಚಾಲಯದ ತರಹ ಆಗಿ ಹೋಗಿತ್ತು. ಸದಾ ತೆರೆದೇ ಇರುತ್ತಿದುದರಿಂದ ಮುಂಬಾಗಿಲಿನಿಂದ ಪ್ರವೇಶಿಸಿ ನೇರ ಅಲ್ಲಿಗೆ ಹೋಗಿ ಬಿಡುತ್ತಿದ್ದರು .ಪ್ರವೇಶ ನಿಷೇಧ ಎಂಬ ಬೋರ್ಡ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ತುಂಬಾ ಗಲೀಜು ಮಾಡಿ ಇಡೀ ಮಧ್ಯಾಹ್ನ ನಮಗೂ ಅದನ್ನು ಉಪಯೋಗಿಸಲು ಸಾಧ್ಯವಾಗದೆ ಮಹಡಿಯ ಮೇಲಿದ್ದ ಬೇರೊಂದು ಶೌಚಾಲಯವನ್ನು ನಾವು ಸಿಬ್ಬಂದಿಯವರು ಉಪಯೋಗಿಸಿಬೇಕಾಗಿತ್ತು. ಮಾರನೆಯ ದಿನ ಬಂದ ಸ್ವಚ್ಛತಾ ಸಿಬ್ಬಂದಿಯವರು ಶಾಖಾಧಿಕಾರಿಗಳ ಬಳಿ ಅದನ್ನು ಹೇಳಿ ನಂತರದಲ್ಲಿ ಅಲ್ಲಿಗೆ ಬೀಗ ಹಾಕಿ ಬೀಗದ ಕೈ ಸಿಬ್ಬಂದಿಗಳಿಗೆ ಮಾತ್ರ ಗೊತ್ತಿರುವ ಜಾಗದಲ್ಲಿ ಇಡಿಸಲಾಯಿತು .ಒಂದೆರಡು ಮೂರು ವಾರ ಬಂದವರು ಮುಚ್ಚಿದ ಬಾಗಿಲನ್ನು ನೋಡಿ ನಮ್ಮನ್ನು ಕೇಳಿದರು .ಆದರೆ ಅದು ಎಲ್ಲರ ಉಪಯೋಗಕ್ಕೆ ಅಲ್ಲ ಎಂದು ತಿಳಿದ ಮೇಲೆ ನಂತರದಲ್ಲಿ ಜನ ಹಾಗೆ ಬರುವುದು ಕಡಿಮೆಯಾಯಿತು. ಆದರೆ ನಾನು ವಾಪಸ್ ಮೈಸೂರಿಗೆ ಬರುವವರೆಗೂ ಶುಕ್ರವಾರದ ದಿನ ಅದಕ್ಕೆ ಬೀಗ ಹಾಕಿಯೇ ಇಡುತ್ತಿದ್ದೆವು.ಅದು ತಪ್ಪು ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿದರೂ ಬಂದವರು ಕನಿಷ್ಠ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ ತುಂಬಾ ಗಲೀಜು ಮಾಡಿ ಬಿಡುವುದರಿಂದಲೂ, ಮಧ್ಯಾಹ್ನದ ವೇಳೆ ನಾವು ಆ ಮಹಿಳಾ ಕೊಠಡಿಯಲ್ಲಿ ಊಟ ಮಾಡಬೇಕಾಗಿದ್ದರಿಂದ ಆ ಕೊಳಕನ್ನು ಸಹಿಸಲು ಸಾಧ್ಯವಾಗದಿದ್ದುದು ಈ ನಡೆಗೆ ಕಾರಣವಾಗಿತ್ತು .ನಂತರ ಸ್ವಚ್ಛತಾ ಸಿಬ್ಬಂದಿ ವಿರೋಧ ಬಂದ ಮೇಲಂತೂ ನಮ್ಮ ಅಪರಾಧಿ ಮನೋಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ನಾವು ಮಹಿಳಾ ಬೋಗಿಯಲ್ಲೇ ದಿನ ಓಡಾಡುತ್ತಿದ್ದುದು ಎಂದು ಹೇಳಿದೆನಲ್ಲ ಅಲ್ಲಿ ನಮಗೆ ಬೇರೆ ಬ್ಯಾಂಕಿನ ಮತ್ತು ರಾಜ್ಯ ಸರ್ಕಾರಿ ನೌಕರಿಯ ಗೆಳತಿಯರು ಸಿಕ್ಕಿದರು. ಕೆನರಾ ಬ್ಯಾಂಕಿನ ನನ್ನದೇ ಹೆಸರಿನ ಸುಜಾತ ಎನ್ನುವವರು ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಗೀತಾ ಮತ್ತು ಸರಸ್ವತಿ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದ ಉಮಾ ಮತ್ತು ಇನ್ನೊಬ್ಬರು ಹೆಸರು ಮರೆತು ಹೋಗಿದೆ. ಮತ್ತೆ ಕಡ ಕೊಳದ ಹಿಟ್ಟಿನ ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದ ಪೂರ್ಣಿಮಾ ಮತ್ತು ಅನಿತಾ ನಾವೆಲ್ಲ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಉಮಾ ಅವರ ಮನೆಯಲ್ಲಿ ಜಾಜಿ ಹೂ ಬಿಡುತ್ತಿದ್ದುದರಿಂದ ಅವರು ತರುತ್ತಿದ್ದರು. ಆದರೆ ಕಟ್ಟಲು ಸಮಯವಾಗುತ್ತಿರಲಿಲ್ಲ . ದಿನಾ ರೈಲಿನಲ್ಲಿ ನಾನೇ ಕಟ್ಟಿಕೊಡುತ್ತಿದ್ದೆ . ನನಗೂ ಅದರಲ್ಲಿ ಪಾಲು ಇರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಾನು ಮನೆಯಲ್ಲಿ ತಿನ್ನಲು ಸಮಯವಾಗದಿದ್ದದರಿಂದ ಹಾಗೂ ಬೇಗ ಆಗುತ್ತಿದುದರಿಂದ ತಿಂಡಿಯನ್ನು ಸಹ ರೈಲಿನಲ್ಲಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಆ ಸಮಯದಲ್ಲಿ ಪೂರ್ಣಿಮಾ ಅವರು ಗರ್ಭಿಣಿಯಾಗಿದ್ದರು. ಅವರಿಗೆ ನಮ್ಮ ಮನೆಯ ಮೆಂತ್ಯದ ಹಿಟ್ಟಿನ ಗೊಜ್ಜು ಹಾಗೂ ಹುಳಿ ಅನ್ನ ತುಂಬಾ ಇಷ್ಟವಾಗುತ್ತಿತ್ತು. ಸಾಮಾನ್ಯ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಹೆರಿಗೆ ರಜೆ ಹೋಗುವ ಮೊದಲು ನಾವು ನಮ್ಮ ಬೋಗಿಯಲ್ಲಿ ಅವರಿಗೆ ಒಂದು ಸೀರೆ ಬಳೆ ಮಲ್ಲಿಗೆ ಹೂವು ಕೊಟ್ಟು ಅಂದಿನ ದಿನ ಸಿಹಿ ತಿನಿಸು ಮಾಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆನಂತರದಲ್ಲಿ ಅವರು ನನ್ನ ತಂಗಿಯ ಪತಿ ಮುರಳಿ ಅವರ ಸಂಬಂಧಿ ಎಂದು ತಿಳಿಯಿತು. ಈಗಲೂ ಅವರ ಸಂಪರ್ಕ ಇದೆ ಸರಸ್ವತಿ ಅವರ ಮಗನ ಮದುವೆಗೆ ಆಹ್ವಾನಿಸಿದ್ದರು. ಅದಕ್ಕೂ ಹೋಗಿದ್ದೆ .ಈಗ ಅವರು ಎಲ್ಲ ನಿವೃತ್ತರಾಗಿರಬಹುದು. ಇತ್ತೀಚೆಗೆ ನನ್ನ ಗೆಳತಿ ಸಹೋದ್ಯೋಗಿ ಮಂಗಳಾಂಬ ಅವರ ಮಗನ ಮದುವೆಯಲ್ಲಿ ಉಮಾ ಮತ್ತು ಪರಮೇಶ್ವರ ಅವರು ಸಿಕ್ಕಿದ್ದರು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು ಈಗ ಅವರು ಸಹ ಸಂಪರ್ಕದಲ್ಲಿ ಇದ್ದಾರೆ.ತುಂಬಾ ಚೆನ್ನಾಗಿ ಬಾಂಧವ್ಯ ಇತ್ತು. ರೈಲಿನಲ್ಲಿ ಓಡಾಡುವುದೆಂದರೆ ತುಂಬಾ ಸಂತೋಷವಾಗುತ್ತಿತ್ತು. ಗೆಳತಿಯರು ಅಷ್ಟೇ ಅನ್ಯೋನ್ಯವಾಗಿದ್ದೆವು. ಅದನ್ನೆಲ್ಲ ನೆನೆದರೆ ತುಟಿ ಅಂಚಿನಲ್ಲಿ ಮುಗುಳ್ನಗೆ ಬಿರಿಯುತ್ತದೆ. ಖುಷಿಯ ಕ್ಷಣಗಳು ನೆನಪಾಗುತ್ತದೆ. ಸವಿ ನೆನಪುಗಳು ಬೇಕು ಸವಿಯಲೀ ಬದುಕು ಅಲ್ಲವೇ?(ಮುಂದುವರೆಯುವುದು) ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-32 ಫೆಬ್ರವರಿ ಕಡೆಯ ವಾರದಲ್ಲಿ ನಮಗೆ ವರ್ಗಾವಣೆಯ ಆದೇಶ ಬಂದದ್ದು ಮಾರ್ಚ್ ಆರನೆಯ ತಾರೀಕು ರಿಲೀವ್ ಆಗಬೇಕಿತ್ತು. ಯಾವಾಗಲೂ ಶನಿವಾರ ಮಧ್ಯಾಹ್ನ ರಿಲೀಫ್ ಆಗುವಂತೆ ಬರುತ್ತಿದ್ದ ಆದೇಶ ಈ ಬಾರಿ ಸೋಮವಾರ ಸಂಜೆ ರಿಲೀವ್ ಆಗುವ ಹಾಗೆ ಬಂದಿತ್ತು. ಐದನೆಯ ತಾರೀಕು ಶಿವರಾತ್ರಿ ಬಂದಿದ್ದರಿಂದ ನಾವು ಮೈಸೂರಿಗೆ ಹೋಗಲೇಬೇಕಿತ್ತು. ಹಾಗಾಗಿ ಅಂದೇ ಬಂದು ಅಂದೆ ವಾಪಸ್ ಆಗುವ ಸರ್ಕಸ್ ಸಹ ಮಾಡಿ ಬಿಟ್ಟೆವು. ಆರನೆಯ ತಾರೀಕು ಬೆಳಿಗ್ಗೆ 5:30 ಬಸ್ಸಿಗೆ ಹೊರಟು ಸಕಲೇಶಪುರಕ್ಕೆ ಬಂದೆವು. ಅಂದೇ ನಾವು ಶಾಖಾ ಸಿಬ್ಬಂದಿಗೆ ಊಟ ಕೊಡಿಸುವ ಕಾರ್ಯಕ್ರಮ ಸಹ ಇತ್ತು .ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ಮಧ್ಯಾಹ್ನ ನಮ್ಮದೇ ಆತಿಥ್ಯದ ಊಟ ಮಾಡಿ ಶಾಖಾಧಿಕಾರಿಗಳನ್ನು ವಿನಂತಿಸಿಕೊಂಡು ನಾಲ್ಕು ವರೆಗೆ ವಿದಾಯ ಸಮಾರಂಭವನ್ನು ಆಯೋಜಿಸಿಕೊಂಡು ಅಂತೂ ಇಂತೂ ಆರು ಗಂಟೆ ಬಸ್ಸಿಗೆ ಮೈಸೂರಿಗೆ ಹತ್ತಿದೆವು ಬಂದು ತಲುಪಿದಾಗ ರಾತ್ರಿ 11:00 ಗಂಟೆ. ಸುಲೋಚನ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಎದ್ದು ನಂಜನಗೂಡಿಗೆ ಹೋಗಿ ಅಲ್ಲಿಂದ ಚಾಮರಾಜನಗರಕ್ಕೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು . ನಾನು ಸೋಮವಾರ ಬೆಳಿಗ್ಗೆ ಅಂದರೆ ಏಳನೆಯ ತಾರೀಕು ಮಾರ್ಚ್ 2000 ರಂದು ನಂಜನಗೂಡಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಮಾಮೂಲಿನಂತೆ ಒಂದು ಕೈಯಲ್ಲಿ ಬ್ಯೂಟಿ ರಿಪೋರ್ಟ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆಗೆ ಅರ್ಜಿ. ಅಶೋಕಪುರಂ ರೈಲ್ವೆ ಸ್ಟೇಷನ್ ಗೆ ಹೋಗಿ ಮೂರು ತಿಂಗಳ ಪಾಸ್ ರೆಡಿ ಮಾಡಿಸಿಕೊಂಡು ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಅಲ್ಲಿಯೇ ಸಹಿ ಮಾಡಿ ಮಹಿಳಾ ಭೋಗಿಗೆ ಹತ್ತಿದೆ. ಅಲ್ಲಿಯೇ ನಮ್ಮ ಶಾಖೆಯ ಜಯಲಕ್ಷ್ಮಿ ಅವರ ಭೇಟಿಯು ಆಯಿತು. ಈಗ ಶಾಖೆ ಮೊದಲಿನಂತೆ ದೇವಸ್ಥಾನದ ಬಳಿಯ ಬಜಾರ್ ರಸ್ತೆಯಲ್ಲಿ ಇರದೆ ತನ ಸ್ವಂತ ಕಟ್ಟಡಕ್ಕೆ ಶಿಫ್ಟ್ ಆಗಿತ್ತು .ನಂತರ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ಬಲಗಡೆ ನಮ್ಮ ಶಾಖಾ ಕಚೇರಿ ಇತ್ತು. ಮುಖ್ಯ ರೈಲ್ವೆ ಸ್ಟೇಷನ್ ನಿಂದ ಶಾಖೆಗೆ ಬರಲು ತಡವಾಗುತ್ತಿದ್ದ ಕಾರಣ ಎಲ್ಲರೂ ಸುಜಾತಪುರಂ ರೈಲ್ವೆ ಸ್ಟೇಷನ್ ನಲ್ಲಿಯೇ ಇಳಿದು ಅಲ್ಲಿ ಓಡಾಡುತ್ತಿದ್ದ ಖಾಸಗಿ ಟೆಂಪೋಗಳಲ್ಲಿ ಹುಲ್ಲಹಳ್ಳಿ ಸರ್ಕಲ್ಗೆ ಬಂದು ಇಳಿಯುತ್ತಿದ್ದೆವು. ಆಗ ಆ ಟೆಂಪೋಗಳಲ್ಲಿ ಚಾರ್ಜ್ ಒಂದು ರೂಪಾಯಿ ಮಾತ್ರ ಇತ್ತು .ಹುಲ್ಲಹಳ್ಳಿ ಸರ್ಕಲ್ ನಿಂದ 3-4 ನಿಮಿಷದ ನಡಿಗೆ ನಮ್ಮ ಶಾಖೆಗೆ. ಸಂಜೆ ಮಾತ್ರ ಮುಖ್ಯ ಸ್ಟೇಶನ್ಗೆ ನಡೆದು ಹೋಗಲು ಸಮಯ ಇತ್ತು. ಕೆಲವೊಮ್ಮೆ ಸುಸ್ತಾಗಿದ್ದಾಗ ಹೊರಡಲು ತಡವಾದರೆ ಅಥವಾ ಸಂತೆಯಲ್ಲಿ ಕೊಂಡ ತರಕಾರಿಗಳಿದ್ದರೆ ಆಗ ಮೂರು ನಾಲ್ಕು ಜನ ಸೇರಿ ಆಟೋದಲ್ಲಿ ಸ್ಟೇಷನ್ನಿಗೆ ಬರುತ್ತಿದ್ದೆವು. ಮೊದಲಿನಿಂದ ಪರಿಚಯವಿದ್ದ ಜಯಲಕ್ಷ್ಮಿ ಮತ್ತು ನಾಗಮಣಿ ಜೊತೆಗೆ ಹೊಸ ಪರಿಚಯವಾದ ಕವಿತಾ ನಿಕ್ಕಮ್ ವಿದ್ಯಾ ಚಂದ್ರಶೇಖರ್ ಮೊದಲಾದವರು. ಆಂಧ್ರಪ್ರದೇಶದ ರಜನಿ ಸಹ ಇಲ್ಲಿಯೇ ಇದ್ದಳು .ಮುಂದೆ ಅವಳು ಪದೋನ್ನತಿ ತೆಗೆದುಕೊಂಡು ಈಗ ಹೈದರಾಬಾದ್ ನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ. ಅಲ್ಲಿಯೇ ಪರಿಚಯವಾದದ್ದು ನಮ್ಮದೇ ಯೂನಿಯನ್ ನಲ್ಲಿ ಇದ್ದ ಇಂದುಮತಿ. ಮೊದಲು ಬಸ್ ನಲ್ಲಿ ಓಡಾಡುತ್ತಿದ್ದಳು ನಂತರ ಅವರ ಸ್ವಂತ ಮನೆ ನಮ್ಮ ಮನೆಯ ಬಳಿಗೆ ಇದುದರಿಂದ ಅಲ್ಲಿಗೆ ಶಿಫ್ಟ್ ಆದ ಮೇಲೆ ನನ್ನ ಜೊತೆಗೆ ರೈಲಿನಲ್ಲಿ ಓಡಾಡಲು ಆರಂಭಿಸಿದಳು. ನನಗೆ ತುಂಬಾ ಆಪ್ತ ಗೆಳತಿ. ಈಗಲೂ ನಮ್ಮ ಸ್ನೇಹ ಅಷ್ಟೇ ಸದೃಢವಾಗಿದೆ ನಂಜನಗೂಡು ನನಗೆ ಕೊಟ್ಟ ಅನರ್ಘ್ಯ ಸ್ನೇಹ ರತ್ನಗಳಲ್ಲಿ ಅವಳು ಒಬ್ಬಳು. ಈ ಹಿಂದೆ ಮಂಡ್ಯದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ಮಂಜುಳಾ ಮತ್ತು ಮೊದಲೇ ಪರಿಚಿತರಾಗಿದ್ದ ಶಶಿಕಲಾ ಗಿರಿಜಾ ಇವರೆಲ್ಲ ಇದೇ ಶಾಖೆಯಲ್ಲಿ ಇದ್ದರು ತುಂಬಾ ಸ್ನೇಹ ಮಯ ವಾತಾವರಣ ತುಂಬಾ ಖುಷಿಯಾಗಿತ್ತು.ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇಳಿದ ತಕ್ಷಣ ಅಲ್ಲಿ ಒಬ್ಬ ಕಾಯಂ ಆಗಿ ಸೈಕಲ್ಲಿನಲ್ಲಿ ಹೂವ ಮಾರುತಿದ್ದ .ಅವನ ಬಳಿ ಹೂವು ಕೊಂಡು ಮುಂದೆ ನಮ್ಮ ಪ್ರಯಾಣ .ಅಲ್ಲೇ ಮಧ್ಯದಲ್ಲಿ ಇದ್ದದ್ದು ಸುಬ್ಬಣ್ಣನ ಹೋಟೆಲ್ ಇಡ್ಲಿ ಚಟ್ನಿ .ಜೊತೆಗೆ ಟೊಮ್ಯಾಟೋ ಗೊಜ್ಜು ಕೊಡುತ್ತಿದ್ದರು ತುಂಬಾ ರುಚಿಯಾಗಿರುತ್ತಿತ್ತು. ಕೆಲವೊಮ್ಮೆ ತಿಂಡಿ ಸರಿಯಾಗಿ ತಿನ್ನದೆ ಬರುತ್ತಿದ್ದಾಗ ಅಥವಾ ತಿಂಡಿ ತಿನ್ನದೇ ಬಂದಾಗ ಅಲ್ಲಿ ಇಡ್ಲಿ ತಿಂದು ಮುಂದುವರೆಯುವುದು. ಇಲ್ಲದಿದ್ದರೆ ವೈಟು ಕಾಫಿ ಕುಡಿದು ಹೋಗುತ್ತಿದ್ದೆವು. ಮಧ್ಯಾಹ್ನ 12 ಗಂಟೆ ಹಾಗೂ ಅಪರಾಹ್ನ ನಾಲ್ಕು ಗಂಟೆಯ ಕಾಫಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಒಂದು ಮಲಯಾಳಿ ಬೇಕರಿಯಲ್ಲಿ ಬೇಸಿಗೆ ಕಾಲವಾದರೆ ವಿವಿಧ ಹಣ್ಣುಗಳ ಜ್ಯೂಸ್ ಸಹ ಸಿಗುತ್ತಿತ್ತು. ಅಲ್ಲದೆ ಶಾಖೆಯ ಮುಂದೆಯೇ ಒಬ್ಬ ಎಳನೀರು ಮಾರುತ್ತಾ ನಿಂತಿರುತ್ತಿದ್ದ. ಒಟ್ಟಿನಲ್ಲಿ ನಮ್ಮ ಹೊಟ್ಟೆ ಪೂಜೆಗೆ ಮೋಸ ಬಂತು ಇರಲಿಲ್ಲ. ಸ್ವಲ್ಪ ದಿನಗಳಾದ ನಂತರ ಟೆಂಡರ್ ಕರೆದು ನಮ್ಮ ಶಾಖೆಯಲ್ಲಿಯೇ ವಾಹನ ನಿಲುಗಡೆ ಜಾಗದಲ್ಲಿ ಒಂದು ಕ್ಯಾಂಟೀನ್ ಓಪನ್ ಆಯಿತು. ಸತೀಶ್ ಎನ್ನುವವರು ಅದನ್ನು ಆರಂಭಿಸಿದ್ದರು ಬೆಳಗಿನ ಹೊತ್ತು ಏನಾದರೂ ಒಂದು ತಿಂಡಿ ಮಧ್ಯಾಹ್ನ ಅಣ್ಣ ಸಾಂಬಾರ್ ಮಜ್ಜಿಗೆ ಹಾಗೂ ಸಂಜೆಯ ಹೊತ್ತು ಏನಾದರೂ ಕರಿದ ತಿಂಡಿ ಸಿಗುತ್ತಿತ್ತು ಕಾಫಿ ಟೀ ಮಜ್ಜಿಗೆ ಯಾವಾಗಲೂ ಸಿಗುತ್ತಿತ್ತು.ಯಾರಾದರೂ ಒಬ್ಬರು ಊಟ ತರದಿದ್ದರೆ ಕ್ಯಾಂಟೀನ್ ನಲ್ಲಿಯೇ ತರಿಸಿಕೊಳ್ಳುತ್ತಿದ್ದೆವು. ಇಬ್ಬರು ಮೂವರು ತಂದಿಲ್ಲದಿದ್ದಾಗ ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇದ್ದ ರಾಮಪ್ರಸಾದ್ ಹೋಟೆಲಿಗೆ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನದ ಹೊತ್ತು ಮೂರು ಗಂಟೆಗೆ ರೈಲು ಇದ್ದುದರಿಂದ ಪ್ರತಿ ಶನಿವಾರ ಯಾವುದಾದರೂ ಹೋಟೆಲ್ ಗೆ ಅಥವಾ ಕ್ಯಾಂಟೀನ್ ನವರು ಚೆನ್ನಾಗಿರುವ ತಿಂಡಿ ಮಾಡಿದರೆ ಅದನ್ನೇ ತಿಳಿದುಕೊಳ್ಳುತ್ತಿದ್ದೆವು ಅಂದು ಡಬ್ಬಿ ತರುವುದು ನಮಗೆಲ್ಲಾ ನಿಷಿದ್ಧ. ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದ ಉನ್ನತ ದರ್ಜೆ ಸಹಾಯಕರು ವರ್ಗಾವಣೆಯಾಗಿ ಹೋಗಿದ್ದರಿಂದ ಮಾರ್ಚ್ ವರ್ಷಾಂತ್ಯದ ಬಿಜಿ ಸಮಯವೂ ಆಗಿದ್ದರಿಂದ ನನ್ನನ್ನು ಹೊಸ ವ್ಯವಹಾರ ವಿಭಾಗಕ್ಕೆ ನಿಯುಕ್ತಿಗೊಳಿಸಿದರು. ಅಲ್ಲಿ ಶ್ರೀವತ್ಸ ಮತ್ತು ಮಹಾದೇವನ್ ಅವರು ಸಹಾಯಕರು. ನಾಗರಾಜ್ ಅವರು ಸಹಾಯಕ ಆಡಳಿತ ಅಧಿಕಾರಿಗಳು ಆಗ ತುಂಬಾ ಪ್ರಪೋಸಲ್ಗಳು ಬರುತ್ತಿತ್ತು ಕೆಲಸವು ಹೆಚ್ಚು ಇರುತ್ತಿತ್ತು ವರ್ಷಾಂತ್ಯವಾದ್ದರಿಂದ ಕೆಲವೊಂದು ರಜೆಯ ದಿನ ಭಾನುವಾರಗಳಲ್ಲೂ ಬರಬೇಕಿತ್ತು. ಶನಿವಾರವಂತೂ ಸಂಜೆಯ ರೃಲಿಗೇ ವಾಪಸ್ ಆಗುತ್ತಿದ್ದುದು. ಆದರೂ ಸಹ ತುಂಬಾ ಖುಷಿಯ ವಾತಾವರಣ. ಎಲ್ಲರೂ ಹೊಂದಿ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಹೊರೆ ಎನಿಸುತ್ತಿರಲಿಲ್ಲ. ನಾಲ್ಕೈದು ತಿಂಗಳ ಬಳಿಕ ಶಾಖಾಧಿಕಾರಿಗಳು ಅವರ ಕೊಠಡಿಗೆ ಕರೆಸಿ ನನ್ನನ್ನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಲು ಸೂಚಿಸಿದರು. ಆಗ ಆ ವಿಭಾಗದಲ್ಲಿ ಒಬ್ಬರೇ ಉನ್ನತ ಶ್ರೇಣಿ ಸಹಾಯಕರು ಪ್ರಸಾದ್ ಎಂಬುವವರು ಇದ್ದು ಸಹಾಯಕರು ಯಾರು ಇರಲಿಲ್ಲ. ಹಾಗಾಗಿ ನನ್ನನ್ನು ಅಲ್ಲಿಯೇ ಕೆಲಸ ಮಾಡಲು ವಿನಂತಿಸಿರು. ನನಗೆ ಹೊಸ ವ್ಯವಹಾರ ಹಾಗೂ ವಿಕ್ರಯ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಇದ್ದುದು .ಸಕಲೇಶಪುರದಲ್ಲಿ ಸ್ವಲ್ಪ ದಿನಗಳ ಕಾಲ ಕಚೇರಿ ಸೇವಾ ವಿಭಾಗದಲ್ಲಿ ಮಾಡಿದ್ದೆ. ಆದರೆ ಪಾಲಿಸಿ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ .ಹಾಗಾಗಿ ಶಾಖಾಧಿಕಾರಿಗಳಿಗೆ ಮುಂದಿನ ಬದಲಾವಣೆಯ ಸಮಯದಲ್ಲಿ ನನಗೆ ಪಾಲಿಸಿ ಸೇವಾ ವಿಭಾಗವನ್ನೇ ಕೊಡಬೇಕು ಎಂದು ಕೋರಿಕೊಂಡೆ ಅವರು ಸಹ ಒಪ್ಪಿಕೊಂಡರು.ವಿಕ್ರಯ ವಿಭಾಗದಲ್ಲಿ ಪ್ರಸಾದ್ ಮತ್ತು ನಾನು ಒಳ್ಳೆಯ ಸೇವೆ ಸಲ್ಲಿಸಿದ್ದೆವು. ಇಬ್ಬರೂ ಒಳ್ಳೆಯ ಕೆಲಸಗಾರರಾದ್ದರಿಂದ ಹಂಚಿಕೊಂಡು ಮಾಡುತ್ತಿದ್ದೆವು. ೨೦೦೦ ನನಗೆ ಅಷ್ಟೇನೂ ಖುಷಿಯದ್ದಾಗಿರಲಿಲ್ಲ. ಅಮ್ಮನ ಆರೋಗ್ಯ ಆಗಾಗ್ಗೆ ಹದಗೆಟ್ಟು ಆಸ್ಪತ್ರೆಗೆ ಸೇರಿಸುವುದು ಕರೆದುಕೊಂಡು ಬರುವುದು ನಡೆದೇ ಇತ್ತು. ಆದರೂ ಛಾಯ ಮತ್ತು ಪ್ರಸನ್ನ ಅವರು ಪಿರಿಯಾಪಟ್ಟಣದಲ್ಲಿ ಮಾಡಿದ್ದ ಮನೆಗೆ ಹೋಗಿ ಸ್ವಲ್ಪ ದಿನ ಇದ್ದು ಬಂದಿದ್ದರು. ನಾವೂ ಒಂದೆರಡು ಬಾರಿ ಹೋಗಿ ಬಂದಿದ್ದೆವು. ಕೊನೆಗೆ ಯಾವ ಪ್ರಯತ್ನವೂ ಫಲ ಕೊಡದೆ ಜನವರಿ ೬ ೨೦೦೦ ದಂದು ನಮ್ಮನ್ನೆಲ್ಲಾ ಬಿಟ್ಟು ಅಮ್ಮ ಹೊರಟೇ ಬಿಟ್ಟಳು. ಅಂದು ಸೋಮವಾರ . ಹಿಂದಿನವಾರ ರಜೆ ಹಾಕಿ ಅಮ್ಮನ ಜೊತೆಯಲ್ಲೇ ಇದ್ದೆ. ಅಂದು ರೈಲಿನಲ್ಲಿ ಹೊರಟು ಕಛೇರಿ ತಲುಪುವಷ್ಟರಲ್ಲಿ ಫೋನ್ ಬಂದಿದೆ. ನಾನು ತಲುಪಿದ ಕೂಡಲೇ ತುಂಬಾ ಸೀರಿಯಸ್ ವಾಪಸ್ ಹೋಗಿ ಎಂದು ಸ್ಕೂಟರ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿದರು. ಮೈಸೂರಲ್ಲಿ ರವೀಶ್ ಬಂದು ಮನೆಗೆ ಕರೆದುಕೊಂಡು ಬಂದರು.ಊರುಗಳಿಂದ ಎಲ್ಲಾ ಬಂದು ಸೇರಿ ಅಮ್ಮನನ್ನು ಅಂತಿಮ ಬಾರಿಗೆ ಕರೆದುಕೊಂಡು ಹೊರಟಾಗ ಸಂಜೆ. ನಾನು ದಿನಾ ವಾಪಸಾಗುವ ರೈಲು ಕೂ ಅಂತ ಕೂಗ್ತಿತ್ತು. ಶಾಖಾಧಿಕಾರಿಗಳು ಕೆಲವರು ಸ್ನೇಹಿತರು ಸುಲೋಚನಾ ಎಲ್ಲ ಬಂದಿದ್ದರು. ಈಗಲೂ ಸಂಜೆ ರೈಲಿನ ಕೂಗು ಕಿವಿಗೆ ಬಿದ್ದಾಗಲೆಲ್ಲಾ ಅಂದಿನ ಆ ಸಂಜೆಯ ಮಡುಗಟ್ಟಿದ ದುಃಖ ಮರುಕಳಿಸುತ್ತದೆ.ಈಗಲೂ ಇದನ್ನು ಬರೆಯುವಾಗ ಕಣ್ಣು ತುಂಬಿ ನೀರು ಹರಿದು ಮಂಜಾಗುತ್ತಿದೆ. ಸಧ್ಯಕ್ಕೆ ನಿಲ್ಲಿಸುವೆ.(ಮುಂದಿನ ವಾರಕ್ಕೆ ಮುಂದುವರೆಯುವುದು) ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-31 ಈ ಮನೆಯ ಬಾಲ್ಕನಿಯಲ್ಲಿ ನಿಂತರೆ ಇಡೀ ಸಂತೆಯೇ ಕಾಣುತ್ತಿತ್ತು ಗುರುವಾರದ ದಿನ ಬಂತು ಬೆಳಗ್ಗೆ 6 ಗಂಟೆಯಿಂದಲೇ ಜನಗಳ ಗಾಡಿಗಳ ಓಡಾಟ ಮತ್ತೆ ಸಂಜೆಯವರೆಗೂ ಇದೇ ರೀತಿ ರಸ್ತೆ ಬ್ಯುಸಿ ಇರುತ್ತಿತ್ತು. ಸಂಜೆ ಸಂತೆ ಕೆ ಬಂದ ಕೆಲವು ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು ಹಳೆಯ ಮನೆಯ ಬಳಿಯಿದ್ದ ಪರಿಚಿತರು ಬರುತ್ತಿದ್ದರು ಹಾಗಾಗಿ ಗುರುವಾರ ನಾವು ಸಂಜೆ ತುಂಬಾ ಬ್ಯುಸಿ ಆಗಿಬಿಡುತ್ತಿದ್ದೆವು. ಅದೇ ರಸ್ತೆಯ ಕೊನೆಯಲ್ಲಿ ಬಸ್ ಡಿಪೋ ಇದುದರಿಂದ ಬಹಳಷ್ಟು ಬಸ್ ಓಡಾಟ ಸದಾ ಇರುತ್ತಿತ್ತು .ಹೀಗಾಗಿ ಬಾಲ್ಕನಿ ಸದಾ ಧೂಳಾಗಿಯೇ ಇರುತ್ತಿತ್ತು . ಆಗ ಪುಟ್ಟ ಮಗುವಾಗಿದ್ದ ನನ್ನ ತಂಗಿಯ ಮಗ ನಿಶ್ಚಯ್ ಗಂತೂ ಓಡಾಡುತ್ತಿದ್ದ ಆ ಕೆಂಪು ಬಸ್ ಗಳನ್ನು ನೋಡುವುದೇ ಒಂದು ಖುಷಿ.ಈ ಮನೆಯಲ್ಲಿ ಇದ್ದಾಗಲೇ ನಮ್ಮ ಅತ್ತೆ ಮಾವ ಸಹ ಬಂದು ಒಂದು ವಾರ ಇದ್ದರು ನಮ್ಮ ಅತ್ತೆಯ ತಾಯಿಯ ಮನೆ ಸಕಲೇಶಪುರದ ಹತ್ತಿರದ ಊರೇ ಆದ್ದರಿಂದ ಅಲ್ಲಿಗೂ ಒಮ್ಮೆ ಹೋಗಿ ಬಂದರು. ನನ್ನ ಮೈದುನ ಹಾಗೂ ಓರಗಿತ್ತಿ ಸಹ ಒಮ್ಮೆ ಇಲ್ಲಿಗೆ ಬಂದಿದ್ದರು. ಅವರೊಂದಿಗೆ ನಾವು ಹೊರನಾಡು ಹೋಗಿ ದೇವಿ ದರ್ಶನ ಮಾಡಿ ಬಂದೆವು ದಿನವೇ ಐ ಆರ್ ಡಿ ಎ ಬಿಲ್ ಸಹ ಮಂಡಿಸಲ್ಪಟ್ಟು ಇದ್ದಕ್ಕಿದ್ದಂತೆ ಆ ದಿನ ಸ್ಟ್ರೈಕ್ ಕೊಟ್ಟಿದ್ದರು ಹಾಗಾಗಿ ರಜೆಯ ಬದಲು ಸ್ಟ್ರೈಕ್ ನಲ್ಲಿ ಭಾಗವಹಿಸುವ ಹಾಗೆ ಆಯಿತು. ಏನಿದು ಐಆರ್‌ಡಿಎ ಬಿಲ್? ಇದುವರೆಗೆ ಏಕಸ್ವಾಮ್ಯವಾಗಿ ಇದ್ದ ಭಾರತೀಯ ಜೀವವೀಮನಿಗಮ ಮತ್ತು ವಿಮಾ ವಲಯ ಈಗ ಒಂದು ಪ್ರಾಧಿಕಾರದ ಮಿತಿಗೆ ಒಳಪಟ್ಟು ಹೊರಗಿನ ಸಂಸ್ಥೆಗಳು ಸಹ ಜೀವವಿಮ ವಹಿವಾಟು ನಡೆಸಲು ಅರ್ಹವಾಗುತ್ತಿದ್ದವು. ಭಾರತೀಯ ಜೀವ ವಿಮಾ ನಿಗಮದ ಸಾರ್ವಭೌಮತ್ವಕ್ಕೆ ಉಂಟಾಯಿತು. IRDAI ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮಾ ಕ್ಷೇತ್ರವನ್ನು (Insurance Sector) ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ವೋಚ್ಚ ಸಂಸ್ಥೆಯಾಗಿದೆ.ಇದನ್ನು 1999 ರಲ್ಲಿ ‘IRDA ಕಾಯ್ದೆ’ಯ ಅಡಿಯಲ್ಲಿ ರಚಿಸಲಾಯಿತು.ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ IRDAI ಅಸ್ತಿತ್ವಕ್ಕೆ ಬಂದಿತು.ಕೇಂದ್ರ ಕಚೇರಿ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿದೆ. IRDAI ಸ್ಥಾಪನೆಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ:ವಿಮಾದಾರರ ಹಿತರಕ್ಷಣೆ: ವಿಮೆ ಮಾಡಿಸಿದ ಗ್ರಾಹಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡುವುದು.ಕ್ಷೇತ್ರದ ನಿಯಂತ್ರಣ: ವಿಮಾ ಕಂಪನಿಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುವುದು.ಅಭಿವೃದ್ಧಿ: ವಿಮಾ ಕ್ಷೇತ್ರವು ವ್ಯವಸ್ಥಿತವಾಗಿ ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸುವುದು.IRDAI ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ:ಪರವಾನಗಿ ನೀಡುವುದು: ಹೊಸ ವಿಮಾ ಕಂಪನಿಗಳಿಗೆ ವ್ಯವಹಾರ ನಡೆಸಲು ಪರವಾನಗಿ (License) ನೀಡುವುದು ಮತ್ತು ಅದನ್ನು ನವೀಕರಿಸುವುದು.ನಿಯಮಗಳ ರೂಪಣೆ: ವಿಮಾ ಪಾಲಿಸಿಗಳು ಹೇಗೆ ಇರಬೇಕು, ಪ್ರೀಮಿಯಂ ದರಗಳು ಮತ್ತು ಕ್ಲೈಮ್ (Claim) ಇತ್ಯರ್ಥದ ಬಗ್ಗೆ ನಿಯಮಗಳನ್ನು ರೂಪಿಸುವುದು.ದೂರುಗಳ ಪರಿಹಾರ: ವಿಮಾ ಕಂಪನಿ ಮತ್ತು ಗ್ರಾಹಕರ ನಡುವೆ ವಿವಾದ ಉಂಟಾದಾಗ ಅದನ್ನು ಬಗೆಹರಿಸಲು ವೇದಿಕೆ ಕಲ್ಪಿಸುವುದು.ಬಂಡವಾಳದ ಮೇಲ್ವಿಚಾರಣೆ: ವಿಮಾ ಕಂಪನಿಗಳು ಗ್ರಾಹಕರ ಹಣವನ್ನು ಹಿಂತಿರುಗಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸುವುದು.ತರಬೇತಿ ಮತ್ತು ಶಿಕ್ಷಣ: ವಿಮಾ ಏಜೆಂಟ್‌ಗಳಿಗೆ ಬೇಕಾದ ಅರ್ಹತೆ ಮತ್ತು ತರಬೇತಿಯ ಮಾನದಂಡಗಳನ್ನು ನಿಗದಿಪಡಿಸುವುದು. ಅಂದಿನ ದಿನಗಳಲ್ಲಿ ಈ ವಿದ್ಯಮಾನಗಳು ತುಂಬಾ ಆತಂಕವನ್ನು ಹುಟ್ಟಿಸಿದ್ದು ಮುಂದಿನ ದಿನಗಳು ಹೇಗೋ ಏನೋ ಎಂಬ ದಿಗಿಲು ಸಹ ಉಂಟಾಗಿತ್ತು. ಆದರೆ ಜೀವ ವಿಮಾನ ನಿಗಮ ತನ್ನ ಸಮರ್ಥ ಆರ್ಥಿಕ ನೀತಿ ಹಾಗೂ ದಕ್ಷ ಆಡಳಿತ ವಿಧಾನಗಳಿಂದ ಈ ಹೊರಗಿನ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜೂನ್ 1999ರಲ್ಲಿ ನನ್ನ ತಂಗಿ ಪ್ರಯಾಣ ವಿವಾಹ ಆಯಿತು. 15 ದಿನಗಳ ಕಾಲ ರಜೆ ತೆಗೆದುಕೊಂಡು ಹೋಗಿ ಮದುವೆ ಮುಗಿಸಿ ಬಂದಾಯಿತು. ಮದುವೆ ತಿಂಡಿಗಳನ್ನು ಇಟ್ಟಿದ್ದ ಬ್ಯಾಗ್ ಸಕಲೇಶಪುರಕ್ಕೆ ಬರುವಾಗ ಮರೆತು ಬಂದಿದ್ದೆವು. ರವೀಶ್ ಸಹ ಅಂದು ನನ್ನ ಜೊತೆಗೆ ಬಂದುಬಿಟ್ಟಿದ್ದರು ಇನ್ನು ತಿಂಡಿಗಳು ಮಿಸ್ ಆಗುತ್ತದೆ ಎಂದು ಅಷ್ಟು ಆಯಾಸವಾಗಿದ್ದರು ಸಹ ಮಧ್ಯಾಹ್ನವೇ ನಮ್ಮ ತಂದೆ ಅದನ್ನೆಲ್ಲ ತೆಗೆದುಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬಿ ಬರುತ್ತದೆ ಆ ಪ್ರೀತಿಗೆ ಯಾವುದು ತಾನೇ ಸಾಟಿಯಾದೀತು?ಅಣ್ಣ ಅಲ್ಲಿದ್ದಾಗಲೇ ನವ ವಿವಾಹಿತ ಜೋಡಿಯು ಸಹ ಸಕಲೇಶಪುರಕ್ಕೆ ಬಂದಿದ್ದರು ಅಲ್ಲಿ ಸುತ್ತ ಮುತ್ತಲಿನ ಹಾರ್ಲೆ ಎಸ್ಟೇಟ್ ಟೀ ಫ್ಯಾಕ್ಟರಿ ಅವೆಲ್ಲವನ್ನು ಆಗ ಹೋಗಿ ನೋಡಿಕೊಂಡು ಬಂದೆವು. ಸುಲೋಚನಾ ಸಹ ನಮ್ಮೊಂದಿಗೆ ಆಗ ಬಂದಿದ್ದರು.ಮದ್ದೂರಿನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದ ನನ್ನ ತಂಗಿ ಔಅಯಳಿಗೆ ಮದುವೆಯ ನಂತರ ಹುಣಸೂರಿಗೆ ವರ್ಗ ಆಯಿತು. ಅವಳ ಪತಿ ಪ್ರಸನ್ನ ಅವರು ಸಹ ಜೀವವಿಮನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಆರ್ ನಗರಕ್ಕೆ ಸೇರಿದಂತಿದ್ದ ಬೆಟ್ಟದ ಪುರದಲ್ಲಿ ಇದ್ದರು. ಅವರು ನಮಗೆ ಬ್ಯಾಚ್ ನ ಹಿಂದಿನ ಮೊದಲ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿ ಸಹಾಯಕರಾಗಿ ಆಯ್ಕೆಯಾದವರು ನಂತರ ಅಭಿವೃದ್ಧಿ ಅಧಿಕಾರಿಯಾಗಿ ಬದಲಾವಣೆ ತೆಗೆದುಕೊಂಡಿದ್ದರು .ಇಬ್ಬರಿಗೂ ಮಧ್ಯದ ಜಾಗವಾದ ಪಿರಿಯಾಪಟ್ಟಣದಲ್ಲಿ ಮನೆ ಮಾಡಿದ್ದರು.ಅಲ್ಲಿ ಕಚೇರಿ ಸೇವಾ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು ಆಗ ಹಿಂದಿ ದಿನಾಚರಣೆಯ ಸಂದರ್ಭ ಬಂದಿತ್ತು. ಆಗ ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವ ಹಾಗೆ ಒಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಸಹ ಏರ್ಪಡಿಸಿದೆವು ನಾನು ಮತ್ತು ಸುಲೋಚನಾ ಸೇರಿ ಅದನ್ನು ನಡೆಸಿಕೊಟ್ಟವು ಅಲ್ಲಿ ಎಲ್ಲರಿಗೂ ಅದು ತುಂಬಾ ಇಷ್ಟವಾಗಿತ್ತು. ಹೀಗೆ ಒಂದು ಕನ್ನಡದ ಅಂತ್ಯಾಕ್ಷರಿ ಮಾಡಿ ಎಂದು ಹೇಳಿ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡರು. ಆಗೊಮ್ಮೆ ಕನ್ನಡ ಅಂತ್ಯಾಕ್ಷರಿಯನ್ನು ಸಹ ನಡೆಸಿಕೊಟ್ಟಿದ್ದೆವು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಅವುಗಳಿಗೆ ಬಹುಮಾನಗಳನ್ನು ಆರಿಸಿ ತರುವುದು ಇವೆಲ್ಲವೂ ತುಂಬಾ ಖುಷಿ ಕೊಟ್ಟ ಕೆಲಸ. ನನಗೆ ಸಹಾಯಕ ಆಗಿದ್ದ ರಘು ಅವರು ಅಲ್ಲಿನ ಅಂಗಡಿಗಳ ಮಾಲೀಕರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಒಳ್ಳೆಯ ಚೌಕಾಸಿ ನಡೆಸಿ ಗುಣಮಟ್ಟದ ಸಾಮಾನುಗಳನ್ನು ಆದಷ್ಟು ರಿಯಾಯಿತಿಯಲ್ಲಿ ಕೊಂಡು ಬರುತ್ತಿದ್ದೆವು.ನಾವು ಹೋಗಿದ್ದಾಗ ಉಮೇಶ್ ಭಟ್ ಎನ್ನುವವರು ಅಲ್ಲಿನ ಉಪ ಶಾಖಾಧಿಕಾರಿಗಳಾಗಿದ್ದವು ಅವರು ನಟಿ ವಿನಯ ಭಟ್ ಅವರ ಕುಟುಂಬ ಸ್ನೇಹಿತರು ಒಮ್ಮೆ ಸಕಲೇಶಪುರದ ಬಳಿ ಶೂಟಿಂಗ್ ಗೆ ಬಂದಿದ್ದ ವಿನಯ ಭಟ್ ಅವರು ಅವರ ಮನೆಗೆ ಬಂದಿದ್ದರಂತೆ. ಆಗ ನಮ್ಮ ಶಾಖೆಯ ಎಲ್ಲರೂ ಅವರ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದರಂತೆ ನಾನು ಸುಲೋಚನಾ ಆಗ ರಜೆ ಹಾಕಿ ಮೈಸೂರಿಗೆ ಬಂದು ಬಿಟ್ಟಿದ್ದೆವು. ಹಾಗಾಗಿ ನಮಗೆ ಆ ಭೇಟಿ ಸಾಧ್ಯವಾಗಲಿಲ್ಲ ನಮಗೆ ಪುಸ್ತಕದ ಮೇಲಿನ ಪ್ರೀತಿ ನೋಡಿ ಉಮೇಶ್ ಭಟ್ ಅವರು ಹಸ್ತ ಸಾಮುದ್ರಿಕೆಯ ಬಗ್ಗೆ ಇದ್ದ ಒಂದು ಇಂಗ್ಲಿಷ್ ಪುಸ್ತಕವನ್ನು ನಮಗೆ ಅವರು ವರ್ಗವಾಗಿ ಹೋಗುವಾಗ ಉಡುಗೊರೆಯಾಗಿ ಕೊಟ್ಟಿದ್ದರು. ಅವರು ಹೋದ ನಂತರ ಮೈಸೂರಿನ ಬ್ರಾಂಚ್ ಒಂದರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಜೇಂದ್ರ ಪ್ರಸಾದ್ ಎನ್ನುವವರು ಉಪಶಾಖಾಧಿಕಾರಿಗಳಾಗಿ ಬಂದಿದ್ದರು. ನಾವು ವಾಪಸ್ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ರವೀಶ್ ಅವರನ್ನು ಕರೆದುಕೊಂಡು ಹೋಗಿ ಸಕಲೇಶಪುರದ ವಿಶೇಷವಾದ ಕಾಫಿ ಬೊಡ್ಡೆಯ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದು ಈಗಲೂ ನಮ್ಮ ಮನೆಯಲ್ಲಿ ಇದೆ ಸಕಲೇಶಪುರದಲ್ಲಿ ಕೆಲಸ ಮಾಡಿದ ದಿನಗಳ ನೆನಪಿನ ಕುರುಹಾಗಿ. ಛಾಯಾ ಮತ್ತು ಪ್ರಸನ್ನ ನಿರ್ಮಲ ಟ್ರಾವೆಲ್ಸ್ ನ ಮಧ್ಯ ಇಂಡಿಯಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿದರು. ನಮ್ಮ ತಂದೆ ತಾಯಿ ಹಾಗೂ ಪ್ರಸನ್ನ ಅವರ ತಂದೆ ತಾಯಿ ಅವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇತ್ತು ನಮಗೂ ಹೇಗೂ ಎಲ್ ಟಿ ಸಿ ದೊರೆಯುತ್ತಿದ್ದರಿಂದ ನಾನು ಮತ್ತು ರವೀಶ್ ಸಹ ಹೊರಡಲು ನಿಶ್ಚಯಿಸಿದೆವು. ಭಾರತೀಯ ಜೀವವಿಮಾನ ನಿಗಮದಲ್ಲೇ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರಸನ್ನ ಅವರ ಅಣ್ಣ ಪ್ರಭಾಕರ್ ಹಾಗೂ ಅವರ ಪತ್ನಿ ಶಾಮಲಾ ಮತ್ತು ಮಗಳು ಪ್ರೇರಣಾ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ಹನ್ನೆರಡು ಜನಗಳ ನಮ್ಮ ಗುಂಪು ಮಂಗಳೂರಿನಿಂದ ಹೊರಟ ಆ ಪ್ರವಾಸದಲ್ಲಿ ಸೇರಿದೆವು ತುಂಬಾ ಚೆನ್ನಾಗಿ ನಡೆದ ಪ್ರವಾಸ ಈಗಲೂ ಒಂದು ಸವಿ ನೆನಪು. ನಾವು ಸಕಲೇಶಪುರದಿಂದಲೇ ಮಂಗಳೂರಿಗೆ ಹೋಗಿದ್ದೆವು ಮತ್ತು ಮಂಗಳೂರಿನಿಂದಲೇ ಮತ್ತೆ ವಾಪಸ್ಸಾದೆವು. ಅವರೆಲ್ಲ ಹೊರಡುವಾಗ ಮಂಗಳೂರಿಗೆ ಬಂದಿದ್ದರು. ವಾಪಸ್ ಆಗುವಾಗ ಹುಬ್ಬಳ್ಳಿಯಿಂದಲೇ ಮೈಸೂರಿಗೆ ವಾಪಸ್ ಹೋದರು. ನನ್ನ ಕಡೆಯ ತಂಗಿ ವೈಶಾಲಿ ಮತ್ತು ಮುರಳಿ ಮಗು ಚಿಕ್ಕವನಿದ್ದುದರಿಂದ ಬರಿ ಮಂಗಳೂರು ಪ್ರವಾಸಕ್ಕೆ ಮಾತ್ರ ಜೊತೆಯಾಗಿ ನಂತರ ಮೈಸೂರಿಗೆ ವಾಪಸ್ ಆದರು. ಹಾಗೆ ಹೀಗೆ ಎನ್ನುವಂತೆ ದಿನಗಳು ಕಳೆದು ಮುಂದಿನ ಪದೋನ್ನತಿಗಳ ಸಮಯ ಬಂದೇ ಬಿಟ್ಟಿತು. ಆ ಬಾರಿ ಅದು ತಡವಾಗಿ ಮಾರ್ಚ್ ತಿಂಗಳ ತನಕ ಎಳೆದುಕೊಂಡು ಹೋಗಿದ್ದು. ಬಹಳ ಕಾಲದಿಂದ ನಿರೀಕ್ಷೆ ಇದ್ದ ವರ್ಗಾವಣೆ ಪಟ್ಟಿ ಪ್ರಕಟವಾಗಿತ್ತು ನನಗೆ ನಂಜನಗೂಡಿಗೆ ಸಿಕ್ಕಿತ್ತು ಸ್ವಲ್ಪವೇ ಅಂತರದಿಂದ ಸುಲೋಚನಾ ಅವರಿಗೆ ನಂಜನಗೂಡು ತಪ್ಪಿ ಹೋಗಿ ಚಾಮರಾಜನಗರಕ್ಕೆ ವರ್ಗಾವಣೆ ಸಿಕ್ಕಿತು. ಓಡಾಡಬಹುದಾಗಿತ್ತು ಅವರ ಮನೆ ನಂಜನಗೂಡಿನಲ್ಲಿ ಇದ್ದುದರಿಂದ. ಸ್ವಲ್ಪ ಸಮಾಧಾನ ಅಷ್ಟೇ. ಆದರೆ ಮತ್ತೊಂದು ಸಮಸ್ಯೆ ಎದುರಾಗಿತ್ತು.ನಾವಿದ್ದ ಮನೆಯ ಮಾಲೀಕ ತುಂಬಾ ಸಾಲದ ಸುಳಿಗಳಿಗೆ ಸಿಕ್ಕಿಕೊಂಡು ಮನೆ ಕೋರ್ಟ್ ಆದೇಶದಲ್ಲಿ ಇತ್ತು. ನಾವು ಕೊಟ್ಟಿದ್ದ ಮುಂಗಡ ಹಣ 15000 ವಾಪಸ್ ಮಾಡುವ ಸ್ಥಿತಿಯಲ್ಲಿ ಆತ ಇರಲಿಲ್ಲ .ಆದರೆ ನಾವು ಮನೆಯನ್ನು ಬಿಡಲೇಬೇಕಿತ್ತು. ಕೆಲವರು ಕೊಟ್ಟ ಸಲಹೆಯಂತೆ ಒಂದೆರಡು ಹಳೆಯ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಮನೆಯ ಬೀಗವನ್ನು ಸಕಲೇಶಪುರದಲ್ಲೇ ಇದ್ದ ರವೀಶ್ ಅವರ ಊರಿನವರೇ ಆದ ಸತ್ಯ ಮತ್ತು ಮೋಹನ್ ಅವರಿಗೆ ಕೊಟ್ಟು ಬಂದೆವು. ಆ ಕಾಲಕ್ಕೆ ೧೫೦೦೦ ಸಣ್ಣ ಮೊತ್ತವೇನಲ್ಲ. ವಾಪಸ್ಸು ಬಾರದಿದ್ದರೆ ಹೇಗಪ್ಪಾ ಅಂತಲೂ ಚಿಂತೆ. ಆದರೆ ನಮ್ಮ ತಂದೆ ಮಾತ್ರ ಭರವಸೆ ಇಟ್ಟುಕೊಂಡು ಹೇಳುತ್ತಿದ್ದರು ಕಷ್ಟಪಟ್ಟು ದುಡಿದ ಹಣ ಖಂಡಿತ ವಾಪಸ್ ಬಂದೆ ಬರುತ್ತದೆ ಎಂದು ಅವರ ಆಶೀರ್ವಾದದಂತೆ ಒಂದೆರಡು ತಿಂಗಳ ಬಳಿಕ ಆ ಮನೆಯನ್ನು ಬೇರೊಬ್ಬರು ಕೊಂಡುಕೊಂಡು ಮುಂಗಡ ಹಣ ವಾಪಸ್ ಕೊಟ್ಟು ಕೀ ಪಡೆದುಕೊಂಡರಂತೆ. ಫೋನ್ ಮಾಡಿ ತಿಳಿಸಿದ ಮೇಲೆ ರವೀಶ್ ಅವರು ಹೋಗಿ ಹಣ ತೆಗೆದುಕೊಂಡು ಬಂದರು ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಮೊದಲು ನಾವಿದ್ದ ಮನೆ ಕಟ್ಟಿದ್ದಾಗ ವಾರ್ಡ್ರೋಬ್ ಕೆಲಸಗಳನ್ನು ಮಾಡಿರಲಿಲ್ಲ ಹೀಗಾಗಿ ನಾವು ವಾಪಸ್ ಬರುವಾಗ ಮತ್ತೆ ಮನೆಗೆ ಪೇಂಟ್ ಮಾಡಿಸಿ ವಾರ್ಡ್ರೋಬ್ ಗಳನ್ನು ಮಾಡಿಸಿಕೊಂಡು ಬಂದೆವು..(ಮುಂದಿನವಾರಕ್ಕೆ) ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-30 ಸುಜಾತಾ ರವೀಶ್ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೩೦ ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು. ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು. ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ. ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ. ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು. ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು. ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು. ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭…….. ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ ಸಹಾಯಕ ಅಧಿಕಾರಿಯಾಗಿ ಹೋಗಿದ್ದು. ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್ ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್ ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು. ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು. ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್

