ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನ್ನನ್ನು ತಂದೆಯೆಂದು ಕರೆದು ನನ್ನ ಶುದ್ಧ ಚಾರಿತ್ರ್ಯಕ್ಕೆ ಧಕ್ಕೆ ತಂದನಲ್ಲಾ ಎಂಬ ಕೋಪ ಕಾಡಿತು ನನ್ನನ್ನು. ನನ್ನ ಆಪ್ತರ ಕಣ್ಣ
ನನಗೆ ಸಂಬಂಧಪಡದವನು ನಲ್ಲಿ ನನ್ನ ಮಗನೆಂದೆನಿಸಿ ಯುದ್ಧ ವಿಮುಖನಾಗಿ, ಶರಣಾಗತಿಯನ್ನು ಸಾರಿ ಈ ವೀರಾರ್ಜುನನ ಪರಾಕ್ರಮದ ಹೆಸರಿಗೆ ಕಳಂಕ ತಂದನಲ್ಲಾ ಎಂಬ ಕ್ರೋಧವೂ ಮೂಡಿತು. ನನ್ನನ್ನು ಅವಮಾನಕ್ಕೆ ಈಡುಮಾಡಿದವನ ಚಿತ್ತವನ್ನು ಕ್ಷಣಕ್ಷಣ ಕಣಕಣ ನೋಯಿಸಿ, ಅವನ ಮನಕ್ಕೆ ಮರಣವನ್ನು ತರಬೇಕೆಂಬ ಬಗೆಯ ಉತ್ಸುಕತೆ ನನ್ನದಾಯಿತು. ಆಗದವರನ್ನು ಕೊಲ್ಲುವುದರಲ್ಲಿ ಎರಡು ಬಗೆಗಳಿವೆ. ಬಾಣ ಖಡ್ಗಗಳಿಂದ ಶರೀರವನ್ನು ಘಾಸಿಗೊಳಿಸಿ, ಗಾಯಕ್ಕೆ ಸಿಲುಕಿದ ದೇಹಕ್ಕೆ ಉಪ್ಪು ಸವರಿ ಇನ್ನಿಲ್ಲದ ಯಾತನೆಯನ್ನು ನೀಡಿ ಸಾಯಿಸುವುದು ಒಂದು ಬಗೆ. ಹಾಗೇನೂ ಮಾಡದೆ ನುಡಿಯ ಕಿಡಿಗಳನ್ನು ಸೂಸಿ, ಟೀಕೆಯ ಬೆಂಕಿಯನ್ನು ಎದೆಗಿಟ್ಟು, ಅಪಹಾಸ್ಯದ ಜ್ವಾಲೆಯನ್ನೆಬ್ಬಿಸಿ ಉರಿಉರಿಸಿ ಹಾಕುವುದು ಇನ್ನೊಂದು ಬಗೆ. ಯುದ್ಧಕ್ಕೆ ನಿಂತ ವೀರನಲ್ಲ ಬಭ್ರುವಾಹನ. ಮಾತಿನ ಬಾಣಗಳಿಂದಲೇ ಅವನ ಪ್ರಾಣ ತೆಗೆಯುವುದು ಸರಿಯೆಂದು ತೋರಿತು ನನಗೆ.
ನನ್ನ ಪಾದದ ಬಳಿಯಲ್ಲಿ ಕುಳಿತಿದ್ದ ಅವನನ್ನು ಬಲವಾಗಿ ಒದೆದೆ. “ಎಲವೋ ಹೇಡಿ. ನನಗೆ ಜನಿಸಿದವ ನೀನಾಗಿದ್ದರೆ ಈ ಪರಿಯಲ್ಲಿ ಯುದ್ಧಕ್ಕೆ ಹೆದರಿ ಶರಣು ಬರುತ್ತಿರಲಿಲ್ಲ. ಮೊದಲು ಅಶ್ವವನ್ನು ಕಟ್ಟಿದವನು ನೀನು. ಈಗ ಯುದ್ಧ ಮಾಡದೆಯೇ ಅದನ್ನು ಬಿಟ್ಟು ಕಳುಹಿಸುವುದಕ್ಕೆ ಸಿದ್ಧನಾಗಿದ್ದೀಯಲ್ಲಾ! ನೀನಂತೂ ನನ್ನ ಮಗನಲ್ಲ” ಎಂದೆ ರೋಷಾವೇಶದಿಂದ.
ನನ್ನ ಕಾಲಿನ ಒದೆತಕ್ಕೆ ಎರಡು ಹೆಜ್ಜೆಗಳಷ್ಟು ಆಚೆಗೆ ಬಿದ್ದ ಬಭ್ರುವಾಹನ. ಅರ್ಜುನನ ಮಗ ನೀನೆಂಬ ಯೋಚನೆಯನ್ನು ಅವನಲ್ಲಿ ಬಿತ್ತಿದವಳು ಅವನ ತಾಯಿ. ಅವಳ ಮಾತನ್ನು ಕೇಳಿಸಿಕೊಂಡು ತಾನೇ ಅವನಿಲ್ಲಿಗೆ ಬಂದದ್ದು! ಹಾಗಿರುವಾಗ ಅವಳನ್ನೂ ತೆಗಳದೇ ಇರಬಾರದು ಎನಿಸಿತು. ಅವನು ಹೇಳಿದ ಹೆಸರೇನದು?! ಚಿತ್ರಾಂಗದೆ! ಅದೇ ಹೆಸರನ್ನು ಮುಂದುಮಾಡಿಕೊAಡು ಬೈಯ್ಯತೊಡಗಿದೆ.
“ಆ ಚಿತ್ರಾಂಗದೆಗೆ ವೈಶ್ಯನಿಂದ ಜನಿಸಿದ ಪುತ್ರ ನೀನು. ಅದಂತೂ ಖಚಿತ. ನನಗೆ ಜನಿಸಿದವನಲ್ಲ. ನನ್ನ ಮಗನಾಗಿದ್ದರೆ ಕ್ಷಾತ್ರಧರ್ಮವನ್ನು ಬಿಟ್ಟು ಈ ಬಗೆಯಲ್ಲಿ ವರ್ತಿಸುತ್ತಿರಲಿಲ್ಲ” ಎಂದು ಅಬ್ಬರಿಸಿದೆ, ಅವನ ಕರುಳ ಬಳ್ಳಿಯನ್ನು ಹಿಡಿದೆಳೆದು.
ನಾನವನ ತಾಯಿಯನ್ನು ನಿಂದಿಸಿದ್ದು ಅತಿಯಾಗಿಯೇ ನೋಯಿಸಿತು ಅವನನ್ನು. ಅವನ ಮುಖಭಾವದಲ್ಲಿಯೇ ಅದು ಗೋಚರವಾಗುತ್ತಿತ್ತು. ನೆಲದ ಮೇಲೆ ಬಿದ್ದವನಿಗೆ ಇನ್ನೊಂದು ಬಲವಾದ ಹೊಡೆತವಿಕ್ಕಿದರೆ ಪೂರ್ಣವಾಗಿ ಮಣ್ಣುಮುಕ್ಕುತ್ತಾನೆ ಎಂಬ ಯೋಚನೆ ಬಂತು. ಯಾರೇ ಆಗಿರಲಿ, ಇನ್ನೊಬ್ಬರ ಜೊತೆಗಿನ ಕೀಳು ಹೋಲಿಕೆಯನ್ನು ಸಹಿಸಲಾರರು. ಇದು ನನಗೆ ಗೊತ್ತಿತ್ತು. ನನ್ನ ಮಗನೆಂದು ಸುಳ್ಳು ಹೇಳಿಕೊಂಡು ಬಂದವ ಈ ಬಭ್ರುವಾಹನ. ನನ್ನ ನಿಜತನಯನಾದ ಅಭಿಮನ್ಯುವಿನ ಪರಾಕ್ರಮವನ್ನು ಮುಂದುಮಾಡಿಯೇ ಇವನನ್ನು ಹಿಂದಕ್ಕೆಳೆಯುತ್ತೇನೆ ಎಂದುಕೊAಡೆ.
“ಸುಭದ್ರೆಗೆ ನನ್ನಿಂದ ಜನಿಸಿದವ ಅಭಿಮನ್ಯು. ಕುರುಕ್ಷೇತ್ರ ಯುದ್ಧವದು ನಡೆಯುತ್ತಿದ್ದಾಗ ಏಕಾಂಗಿಯಾಗಿ ಚಕ್ರವ್ಯೂಹದ ಒಳಹೊಕ್ಕ. ಯುದ್ಧದ ಸಹವಾಸವಿದು ನಿನಗೆ ಬೇಡ ಎಂಬ ಧರ್ಮರಾಯನ ಮಾತಿಗೂ ಕಿವಿಗೊಡಲಿಲ್ಲ. ಅಂತಹ ಪರಾಕ್ರಮಿಯಾಗಿದ್ದ ಅವನು. ಶತ್ರುಸೇನೆಯನ್ನು ಪುಡಿಗಟ್ಟಿ ವೀರಮರಣವನ್ನು ಹೊಂದಿದ. ಅಂತಹ ಸಮರ್ಥನನ್ನು ನನ್ನ ಮಗ ಎಂದು ಒಪ್ಪಿಕೊಳ್ಳುತ್ತೇನೆ. ಅದುಬಿಟ್ಟು ನಿನ್ನಂಥ ಹೇಡಿಯನ್ನು ಮಗನೆಂದು ಸ್ವೀಕರಿಸಲಾದೀತೇ!” ಎಂದು ಚುಚ್ಚಿದೆ.
ಸಂತಸದಿAದ, ತುಂಬು ಆನಂದದಿAದ ನನ್ನ ಬಳಿಗೆ ಬಂದಿದ್ದವನು ಬಭ್ರುವಾಹನ. ಅವನ ಮೊಗದ ನಲಿವದು ಕಡಿಮೆಯಾಗುತ್ತಾ ಆಗುತ್ತಾ ನೋವಿನ ಛಾಯೆ ದಟ್ಟವಾಗತೊಡಗಿತ್ತು. ನನಗಿನ್ನೂ ಸಮಾಧಾನ ಆಗಿರಲಿಲ್ಲ.
“ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ. ನರಿ ಹುಟ್ಟುವುದಿಲ್ಲ. ವೀರನೆಂದು ಜಗತ್ತು ಗುರುತಿಸುತ್ತದೆ, ಗೌರವಿಸುತ್ತದೆ ನನ್ನನ್ನು. ನನ್ನಂತಹ ಪರಾಕ್ರಮಿಗೆ ಮಗನಾಗಿ ನಿನ್ನಂತಹ ಕಡುಹೇಡಿ ಜನಿಸುವುದು ಸಾಧ್ಯವೇ! ಕದನಗೈಯ್ಯದೆ ಕುದುರೆಯನ್ನು ಬಿಟ್ಟುಕೊಡುವ ಮನಸ್ಸು ಮಾಡಿದೆಯೇಕೆ! ಸಾಹಸಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ವೀರರಿಗೆ ಸೇನೆ ಬೇಕು; ಛತ್ರ ಚಾಮರಗಳ ಸೊಗಸಿರಬೇಕು. ಆದರೆ ನಿನಗೆ ಚತುರಂಗ ಬಲವೇಕೆ! ಛತ್ರ ಚಾಮರಗಳು ಅದೇಕೆ! ಶತ್ರುಗಳನ್ನು ಕೊಲ್ಲಲು ನೆರವಾಗುವ ಆಯುಧಗಳಾದರೂ ಬೇಕೇ ನಿನಗೆ! ಜೀವದಾಸೆಯನ್ನು ಬಿಡು. ಹೋಗು” ಎಂದು ಹಂಗಿಸಿದೆ ಅವನನ್ನು.
ಅವನ ತಾಯಿಯನ್ನು ಆಗ ಬೈದದ್ದು ಸಾಲದು ಎನಿಸಿತು. ಮತ್ತೆ ಬೈದೆ. “ನಿನ್ನ ಮಾತೆ ಚಿತ್ರಾಂಗದೆ ನರ್ತಕಿಯಾಗಿರಬೇಕು. ಯಾವುದೋ ಗಂಧರ್ವನಾಯಕನ ಮಗಳಾಗಿರಬೇಕು. ಅವಳು ನಟನೆಯಲ್ಲಿ ಪರಿಣತಿ ಪಡೆದವಳಿರಬೇಕು. ಇಲ್ಲವಾದರೆ ನೀನು ಈ ಬಗೆಯಲ್ಲಿ ಮಣಿಪುರವನ್ನು ಆಳುವ ಅರಸನ ನಟನೆಯನ್ನು ಮಾಡಲು ಸಾಧ್ಯವಿಲ್ಲ. ನಿನ್ನದಿದು ನಿಜ ರಾಜ ಪರಾಕ್ರಮವಲ್ಲ. ಶಕ್ತಿವಂತನ ನಟನೆಯಷ್ಟೇ ನಿನ್ನದು. ಬಹಳ ಪೌರುಷ ತೋರಿದ್ದೀಯ ಬಿಡು! ಕುದುರೆಯನ್ನು ತಡೆದ ಹೋರಾಡಿದ ಅರಸರೆಲ್ಲಾ ಇಲ್ಲಿಯೇ ಇದ್ದಾರೆ. ಅವರ ಮುಂದೆ ಹೋಗು” ಎಂದು ಕುಹಕದ ನುಡಿಯನ್ನಾಡಿದೆ.
ನನ್ನ ಬಿರುಸಿನ ನುಡಿಗೆ ಕನಲಿದ ಕಳ್ಳಸುತ ಬಭ್ರುವಾಹನ. ಸುಬುದ್ಧಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡ. ನನ್ನ ಬಾಯಿಯಿಂದ ಹೊರಬಿದ್ದ ಪ್ರತಿಯೊಂದು ಅಕ್ಷರಗಳೂ ಬತ್ತಳಿಕೆಯಿಂದ ಹೊರಬಂದ ಬಾಣಗಳಂತೆ ಅವನನ್ನು ನೋಯಿಸಿದ್ದವು. ಅವನನ್ನು ಮಾತ್ರವೇ ಬೈದಿದ್ದರೆ ಸಹಿಸಿಕೊಳ್ಳುತ್ತಿದ್ದನೋ ಏನೋ, ಅವನ ತಾಯಿಯನ್ನು ತೆಗಳಿದ್ದನ್ನು ಸಹಿಸಿಕೊಳ್ಳುವುದಕ್ಕಾಗಲಿಲ್ಲ ಅವನಿಗೆ.
“ನನ್ನ ತಾಯಿಯನ್ನೇ ಬೈದೆಯಲ್ಲಾ! ನಿನ್ನ ತಲೆಯನ್ನು ಉರುಳಿಸದೆ ಬಿಡುವವನು ನಾನಲ್ಲ. ಇದಂತೂ ನಿಜ” ಎಂದು ಪ್ರತಿಜ್ಞೆಗೈದವನು ತನ್ನವರ ಜೊತೆಗೆ ಅಲ್ಲಿಂದ ಹೊರಟುಹೋದ. ನನಗೆ ಮರಳಿಸಲೆಂದು ಅವನು ತಂದಿದ್ದ ಕುದುರೆಯದು ಮತ್ತೆ ಮರಳಿ ಅವನ ಲಾಯವನ್ನು ಸೇರಿಕೊಂಡಿತು.
ನನ್ನವರ ಜೊತೆಗೆ ಶಿಬಿರಕ್ಕೆ ಮರಳಿದ ನನ್ನೊಳಗೆ ಬಭ್ರುವಾಹನ ನುಡಿಯ ನರ್ತನ. ಅವನು ಹೇಳಿದ್ದ ಮಾತದು ನಿಜವಿರಬಹುದೇ! ಎಂಬ ಯೋಚನೆ ಮತ್ತೆ ಮತ್ತೆ ಕಾಡಿತು. ಬಭ್ರುವಾಹನ ನನ್ನೊಡನೆ ಯುದ್ಧ ಹೂಡದೆ ಇನ್ನು ಸುಮ್ಮನಿರುವವಂತೂ ಅಲ್ಲ ಎನ್ನುವುದು ದೃಢವಾಗಿತ್ತು. ಅವನು ನನ್ನ ಮಗನೇ ಆಗಿದ್ದರೆ ನನ್ನೊಂದಿಗಿನ ಅವನ ಯುದ್ಧ ಹಿಂದೆ ತ್ರೇತಾಯುಗದಲ್ಲಿ ಲವಕುಶರು ಶ್ರೀರಾಮನ ಜೊತೆಗೆ ಹೋರಾಡಿದಂತಿರುತ್ತದೆ ಎನಿಸಿತು. ನನ್ನೊಳಗೀಗ ಶ್ರೀರಾಮ ಕಥನದ ಹಿರಿದಕ್ಷರಗಳು ಮೂಡತೊಡಗಿದವು…


About The Author

Leave a Reply

You cannot copy content of this page

Scroll to Top