ಕಥಾ ಸಂಗಾತಿ
ರೋಹಿಣಿ ಜೆ
“ಹಾರಾಟ ಮುಗಿದ ಹಕ್ಕಿ!”


ಒಂದೂರು.. ಊರ ಬಾಗಿಲಲೊಂದು ಅರಳಿ ಮರ. ಅದರ ಮೇಲೆ ಒಂದು ಹಕ್ಕಿ ಗೂಡು. ತಂದೆ ತಾಯಿ ಎರಡು ಮರಿಗಳು ಅದರಲ್ಲಿ ವಾಸವಾಗಿದ್ದವು. ಹಗಲಲ್ಲಿ ಹಾರಾಡುತ್ತ ಇರುಳಲ್ಲಿ ಆಕಾಶ ನೋಡುತ್ತ ಸಂಭ್ರಮಿಸುತ್ತ ಎಲ್ಲ ಚಂದಿತ್ತು. ಕಿರಿಯ ಮರಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದವು. ತನ್ನ ಗೂಡಿನಲ್ಲಿ ಇರುವವರೆಗೂ ಆ ಹಕ್ಕಿಮರಿಗೆ ಹಸಿವು ಎಂದರೆ ಏನು ಅಂತಾನೆ ಗೊತ್ತಾಗುತ್ತಿರಲಿಲ್ಲ, ಆ ಮರದಿಂದ ಈ ಮರ ಈ ಮರದಿಂದ ಆ ಕೊಂಬೆ ಹಾರುತ್ತಾ ನಲಿದಾಡುತ್ತಾ ಎಲ್ಲದಕ್ಕೂ ಹಠ ಮಾಡುತ್ತಾ ಕಾಲ ಕಳೆಯುತ್ತಾ ಇತ್ತು. ಮಳೆ ಗಾಳಿ ಜೋರಾಯ್ತು ಅಂದ್ರೆ ಗೂಡು ಸೋರುತ್ತಾ ಇತ್ತು. ಬೀಳುವ ಭಯ ಕಾಡ್ತಾ ಇತ್ತು. ಆದರೆ ಅಪ್ಪ ಅಮ್ಮ ರೆಕ್ಕೆಯಲ್ಲಿ ಅಪ್ಪಿ ಆ ಭಯ ಕಾಡದ ಹಾಗೆ ನೋಡ್ಕೊಳ್ತಿದ್ವು, ಊಟ ಮಾಡಲಿಕ್ಕೆ ತುಂಬಾ ಹಠ ಮಾಡುತ್ತಿತ್ತು. “ತಿನ್ನು, ತಿನ್ನು” ಅಂತ ಅದರ ಹಿಂದೆನೇ ಬೀಳ್ತಾ ಇದ್ರು. ಹಕ್ಕಿಮರಿ ಬೆಳೆಯುತ್ತಾ ಹೋಯಿತು ಸ್ವಲ್ಪ ದೊಡ್ಡದಾಗುತ್ತಾ ಅದರ ಆಸೆಗಳು ಕೂಡ ದೊಡ್ಡದಾಗಲಿಕ್ಕೆ ಶುರುವಾಯಿತು. ತನ್ನ ಗೂಡು ಚಿಕ್ಕದು ಅನ್ನಿಸಲಿಕ್ಕೆ ಶುರುವಾಯಿತು. ಕೆಲವು ಪಕ್ಷಿಗಳ ಗೂಡು ಬಹಳ ಗಟ್ಟಿಮುಟ್ಟಾಗಿತ್ತು ಇದರ ಅಪ್ಪ ಅಮ್ಮ ತನ್ನ ಶಕ್ತಿ ಮೀರಿ ಈಗಿರುವ ಗೂಡನ್ನು ಕಟ್ಟಿದ್ದು ಇನ್ನೂ ಅದಕ್ಕಿಂತ ಹೆಚ್ಚು ಅವುಗಳಿಂದ ನಿರೀಕ್ಷೆ ಮಾಡಲಿಕ್ಕೆ ಆಗ್ತರ್ಲಿಲ್ಲ. ಈ ಹಕ್ಕಿಗೆ ಮಳೆಗಾಲದಲ್ಲಿ ಸೋರದ, ಬಿರುಗಾಳಿಗೆ ಬೀಳದ ಗಟ್ಟಿ ಮನೆ ಒಂದನ್ನು ಕಟ್ಟಬೇಕೆಂಬ ಆಸೆ ಮೂಡತೊಡಗಿತು. ಅಷ್ಟೇ ಅಲ್ಲ ತನ್ನನ್ನು ಮುದ್ದಿನಿಂದ ಸಾಕಿದ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ಕೊನರತೊಡಗಿತು.
ಹೀಗಿರುವಾಗ ಅಪ್ಪ ಅಮ್ಮ ಬೇಡುವ ಅಗೋಚರವಾದ ಆ ʼದೇವʼನನ್ನು ತಾನೂ ಬೇಡಿತು. ಅವನು ತಥಾಸ್ತು ಅಂದನೋ ಇಲ್ಲ ಅದರ ವಿಧಿಯೇ ಅಂತಿತ್ತೋ ಯಾರಿಗೆ ಗೊತ್ತು! ಯಾವುದೋ ಹಕ್ಕಿಗಳ ಮೂಲಕ ಇದಕ್ಕೆ ಹಣ್ಣಿನ ಸಾಮ್ರಾಜ್ಯದ ಪರಿಚಯ ಆಯ್ತು. ಅಲ್ಲಿ ಹೋದರೆ ಊಟ, ಸಂಪತ್ತು ಯಾವುದಕ್ಕೂ ಕೊರತೆ ಇಲ್ಲ ಎನಿಸಿತು. ತಾನು ಶ್ರೀಮಂತರಾಗಿ ತನ್ನವರನ್ನು ಶ್ರೀಮಂತವಾಗಿಸುವ ಬಯಕೆ ಚಿಗುರೊಡೆಯಿತು. ಹಿಂದೆ ಮುಂದೆ ಯೋಚನೆ ಮಾಡದೆ ಆದದ್ದಾಗಲಿ ಏನಾದರೂ ಸಾಧಿಸಲೇಬೇಕೆಂದು ತನ್ನ ಸೋದರಹಕ್ಕಿಯನ್ನು ಅಪ್ಪ ಅಮ್ಮರ ಜೊತೆ ಇರಲು ಹೇಳಿ ಮರಿ ಹಕ್ಕಿ ಹೊರಟು ನಿಂತಿತು. ತಂದೆ ಹಕ್ಕಿ ಇದನ್ನು ಕಂಡು ತುಂಬಾ ದುಃಖಿಸಿತು “ಬೇಡ ಮಗು ಇಲ್ಲೇ ಇರೋಣ ಇದ್ದಿದ್ರಲ್ಲಿ ಖುಷಿಯಾಗಿ, ದೂರದ ಕಾಣದ ಊರಿನ ಸಹವಾಸ ಯಾಕೆ?”. ಹಕ್ಕಿಮರಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಲದ್ದಕ್ಕೆ ಅದರ ತಾಯಿ ಹಕ್ಕಿ ತನ್ನ ಮರಿಗೆ ಬೆಂಬಲ ಕೊಟ್ಟಿತು. “ಹೋಗಿ ಬಾ ಕಂದಾ, ಒಳ್ಳೆಯದಾಗಲಿ ನಿನಗೆ” ಎಂದು. ಇತ್ತ ತನ್ನ ಗಂಡನನ್ನು ಸಂತೈಸಿತು “ಇರಲಿ ಬಿಡು ಅದರಿಂದಲಾದರೂ ನೆಮ್ಮದಿ ಕಾಣೋಣ, ನಾವೂ ಎಲ್ಲರಂತೆ ಬದುಕಬಹುದು”. ಒಂದು ದಿನ ಅದು ಹೊರಡುವ ಸಮಯ ಬಂದೇ ಬಿಟ್ಟಿತು. ಪ್ರೀತಿ ಭಯ ಆತಂಕಗಳಿಂದ ಕಣ್ತುಂಬಿಕೊಂಡು ಬೀಳ್ಕೊಟ್ಟವು.
ಹಾರಿತು, ಹಾರಿತು ದೂರದ ತೀರಕೆ ಹಣ್ಣಿನ ರಾಜ್ಯವನ್ನು ಹುಡುಕಿಕೊಂಡು ಬಹಳ ಕ್ರಮಿಸಿದ ಬಳಿಕ ಕೊನೆಗೊಂದು ದಿನ ಸಿಕ್ಕೆ ಬಿಟ್ಟಿತು ಹಣ್ಣಿನ ಸಾಮ್ರಾಜ್ಯ. ಹೌದು ಇಲ್ಲಿ ಎಲ್ಲವೂ ಚಂದ ಎಷ್ಟೊಂದು ಹಣ್ಣುಗಳು! ಬಣ್ಣ ಬಣ್ಣದ ಹಣ್ಣುಗಳು, ಹೂವುಗಳು ಬಹುಪಾಲು ಹೆಸರೇ ಗೊತ್ತಿಲ್ಲ! ಎಲ್ಲ ಹೊಸಬಗೆಯವು. ಆ ಹಕ್ಕಿ “ಸುಂದರ ಹೂ, ಹಣ್ಣಿನ ತೋಟ ಸ್ವರ್ಗ ಅಂದ್ರೆ ಇದೇ ಏನು! ಮನುಷ್ಯರು ಮಾತಾಡ್ತಾರಲ್ಲ ಅದು” ಎಂದುಕೊಂಡಿತು ಮನದಲಿ. ಹೊಸದರಲ್ಲಿ ಎಲ್ಲವೂ ಸೊಗಸೆನಿಸಿತು. ಇದು ಗರಿಬಿಚ್ಚಿ ರ್ತಿಸಿತು ಮೇಲಿಂದ ಕೆಳಗೆ ಜಿಗಿದು, ಟಪಟಪ ರೆಕ್ಕೆಬಡಿದು ಅದರ ಖುಷಿ ಸಂಭ್ರಮಕ್ಕೆ ಕೊನೆ ಇರಲಿಲ್ಲ “ಅಂತು ತಾನು ಸಾಧಿಸಿಬಿಟ್ಟೆ ಇನ್ನು ನನ್ನ ಮನೆಯ ಕಷ್ಟಗಳೆಲ್ಲ ಪರಿಹಾರವಾದಂತೆಯೇ ನನ್ನ ಪಾಲಿಗೆ ಬರಿ ಸುಖವೇ ಇನ್ನು” ಎಂದುಕೊಂಡಿತು.
ಹೊಸ ಜಾಗ, ಹೊಸ ಗಿಡ ಮರಗಳು, ಹೊಸ ಮುಖಗಳು ಎಲ್ಲವೂ ಹೊಸದು. ಅಲ್ಲಿದ್ದ ಹಕ್ಕಿಗಳು ಪ್ರೀತಿಯಿಂದ ಸ್ವಾಗತಿಸಿದವು. ಇದು ಸುಮ್ಮನೆ ಪಿಳಿ ಪಿಳಿ ಮುಖ ನೋಡಿತು. ಯಾರು ಯಾರೋ ಮಾತಾಡಿಸಿದವು ಇದಕೆ ಭಾಷೆ ತಿಳಿಯುತ್ತಿಲ್ಲ. ನಕ್ಕು ಸುಮ್ಮನಾಯಿತು. ಹಣ್ಣುಗಳಂತೂ ಕಣ್ಣು ಕೋರೈಸುವಂತೆ ದಪ್ಪ ದಪ್ಪದಾಗಿ ಹಲವು ಬಣ್ಣಗಳಲ್ಲಿ ಮಾಗಿದ್ದವು. ಕೆಲವೊಂದಕ್ಕೆ ನೇರವಾಗಿ ಬಾಯಿಟ್ಟಿತು. ಇಲ್ಲ ಯಾಕೋ ತಿನ್ನಲ್ಲಾಗುತ್ತಿಲ್ಲ. ಹಣ್ಣೇನೋ ಮಾಗಿದೆ ಘಮಗುಡುತ್ತಿದೆ ಇದರ ನಾಲಿಗೆ ಮಾತ್ರ ರುಚಿ ಎನಿಸದು. ಈಗ ಅದಕ್ಕೆ ಹಸಿವಿನ ಬೆಲೆ, ಊಟದ ಬೆಲೆ ತಿಳಿಯುತ್ತಾ ಹೋಯಿತು. ಅಪ್ಪ ಅಮ್ಮನ ನೆನಪು ಕಾಡಕೊಡಗಿತು. ನಿಧಾನವಾಗಿ ತಿನ್ನುತ್ತಾ ತಿನ್ನುತ್ತಾ ಅಭ್ಯಾಸ ಮಾಡಿಕೊಂಡಿತು. ಕೊನೆಗೆ ಅದರಲ್ಲೇ ರುಚಿ ಕಂಡುಕೊಂಡಿತು ತನ್ನೂರಿಗೂ ಈ ಹಣ್ಣುಗಳನ್ನು ಒಯ್ದು ತನ್ನವರಿಗೂ ಅಭ್ಯಾಸ ಮಾಡಿಸಬೇಕೆಂದುಕೊಂಡಿತು. ಒಂದು ಹಣ್ಣು ಒಯ್ದರೆ ಸಾಕು ವರ್ಷಕ್ಕಾಗುವಷ್ಟು ಊಟ. ಅಷ್ಟೇನೂ ಭಾರವೂ ಇಲ್ಲ ಹಣ್ಣು. ಪ್ರತಿ ಬಾರಿ ಎರಡೆರಡು ಹೊಯ್ದು ಒಂದು ಊಟಕ್ಕೆ, ಒಂದು ಮಾರಾಟಕ್ಕೆ ಅದರಿಂದ ಬಂದ ಲಾಭದಿಂದ ಗಟ್ಟಿ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಆಸೆಪಟ್ಟಿತು. ಎರಡು ಹಣ್ಣು ಎತ್ತಿಕೊಂಡು ಹಾರಿಹೋಯಿತು. ಕುಟುಂಬದಲ್ಲಿ ಎಲ್ಲ ಸಂಭ್ರಮ ಪಟ್ಟವು. ಹಕ್ಕಿ ಮತ್ತೆ ಹಾರಿ ಹಣ್ಣಿನ ಸಾಮ್ರಾಜ್ಯಕ್ಕೆ ಬಂದಿತು. ಏಕೆಂದರೆ ಅಲ್ಲಿ ನಿಲ್ಲುವಂತಿರಲಿಲ್ಲ! ಇಲ್ಲಿ ಹಣ್ಣಿನ ಸಾಮ್ರಾಜ್ಯದ ಒಡೆಯ ನಿಯಮ ವಿಧಿಸಿದ್ದ ಒಂದು ಹಣ್ಣು ಒಯ್ದರೆ ನಾಲ್ಕು ದಿನಕ್ಕೆ, ಎರಡು ಹಣ್ಣು ತೆಗೆದುಕೊಂಡು ಹೋದರೆ ಎರಡೇ ದಿನಕ್ಕೆ ವಾಪಸ್ ಬರಬೇಕಿತ್ತು. ಹೀಗೆ ವರ್ಷಗಳೇ ಕಳೆದು ಹೋದವು. ತನ್ನ ಕುಡಿಯನ್ನು ಮತ್ತೆ ಕಳಿಸಲು ಬೇಸರ ತಂದೆ ತಾಯಿ ಹಕ್ಕಿಗಳಿಗೆ ಆದರೆ ಹೊಟ್ಟೆಪಾಡು, ತಂದೆ ಹಕ್ಕಿಗೂ ವಯಸ್ಸಾಗುತ್ತಿತ್ತು ಆಹಾರ ಹೊಂದಿಸುವುದು ಕಷ್ಟವಾಗತೊಡಗಿತು.
ಇತ್ತೀಚಿಗೆ ಈ ಹಕ್ಕಿ ಇನ್ನೂ ದೊಡ್ಡದಾಗಿತ್ತು ಅಷ್ಟೇ ಅಲ್ಲ ಅದರ ಸ್ವಾರ್ಥವೂ ಹೆಚ್ಚಿತ್ತು ಈಗ ಅದು ಒಮ್ಮೆಲೇ ಐದೈದು ಹಣ್ಣುಗಳನ್ನು ಸಂಪಾದಿಸುವ ಶಕ್ತಿ ಬೆಳೆಸಿಕೊಂಡಿತ್ತು ಹಾಗಾಗಿ ತಾನು ಬಯಸಿದಂತೆ ಗಟ್ಟಿಯಾದ ಸುಭದ್ರವಾದ ಸುಂದರವಾದ ಅಕ್ಕಪಕ್ಕದ ಗೂಡಿನ ಹಕ್ಕಿಗಳೆಲ್ಲ ಮೆಚ್ಚುವಂತಹ ʼಹಕ್ಕಿಗೂಡುʼ ಒಂದನ್ನು ಕಟ್ಟಿತು. ಬಂದಂತಹ ನೆಂಟರಿಷ್ಟರು ಬಂಧುಗಳೆಲ್ಲ ಹರಸಿ ಸಂಭ್ರಮಿಸಿ ಹೋದರು. ಜೊತೆಗೆ ಕೇಳಿಯೂ ಹೋದರು “ಏನು ಹಣ್ಣಿನ ರಾಜ್ಯದಲ್ಲೇ ಉಳಿದುಬಿಡುವ ಬಯಕೆಯೇ? ಇತ್ತ ಬರುವ ಮನಸಾಗದೆ! ನಿನ್ನ ಹೆತ್ತವರಿಗೂ ವಯಸ್ಸಾಯ್ತು ಬಂದುಬಿಡು”. ಇಂತಹ ನೂರಾರು ಪ್ರಶ್ನೆಗಳು, ಮಾತುಗಳು ಚೂಪಾದ ಬಾಣದಲ್ಲಿ ಚುಚ್ಚಿದಂತೆ ಭಾಸವಾಗುತ್ತಿತ್ತು. ಅಲ್ಲಿ ಹಣ್ಣಿನ ಸಾಮ್ರಾಜ್ಯದಲ್ಲಿ ಬಿಡುಗಡೆ ಅಷ್ಟು ಸುಲಭವಿರಲಿಲ್ಲ ಇಲ್ಲಿ ತನಗೆ ವಹಿಸಿದ ಎಲ್ಲ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ, ಸುತ್ತ ಪ್ರೀತಿ ಹಂಚುತ್ತಾ ಯಾರಿಗೂ ನೋವಾಗದೆ, ಎಲ್ಲರೊಡನೆ ಹೊಂದಿಕೊಂಡು ಎಷ್ಟೆಲ್ಲ ದುಡಿದರೂ ಹಣ್ಣಿನ ಸಾಮ್ರಾಜ್ಯದ ಒಡೆಯ ಕರುಣೆ ತೋರುವಂತೆ ಕಾಣಲಿಲ್ಲ. ಹಕ್ಕಿಗೆ ಸಂಕಟ ಹೆಚ್ಚಾಗತೊಡಗಿತು, ಪಶ್ಚಾತ್ತಾಪದಲ್ಲಿ ಬೇಯತೊಡಗಿತು. ತನ್ನವರು, ಬಂಧುಗಳಿಂದ ದೂರಾಗಿ ಒಂಟಿತನ ಕಾಡತೊಡಗಿತು. ಸಂಬಂಧಿಗಳ ಸಂಭ್ರಮದಲಿ, ಸಂತಾಪಗಳಲಿ ಭಾಗವಹಿಸಲಾಗಲಿಲ್ಲ. ಇದೆಲ್ಲದರ ನಡುವೆ ತನ್ನ ತಂದೆಯನ್ನೂ, ಆಪ್ತ ಸಂಬಂಧಿಗಳನ್ನು ಕಳೆದುಕೊಂಡಿತು! ಈಗಂತೂ ಅದಕ್ಕೆ ಹುಚ್ಚುಹಿಡಿಯುವುದೊಂದೇ ಬಾಕಿ ವಿಲವಿಲ ಒದ್ದಾಡಿತು. ಕಾದನೆಲದಲ್ಲಿ ಹೊರಳಾಡಿತು. ಬೇಡಿತು, ಕಾಡಿತು ಹಣ್ಣಿನ ಸಾಮ್ರಾಜ್ಯದ ಒಡೆಯನ ಕಣ್ಣು ತೆರೆಯಲೇ ಇಲ್ಲ. ಅದರ ಜೊತೆಯಾದ ಅದೇ ಸಾಮ್ರಾಜ್ಯದ ಇತರ ಹಕ್ಕಿಗಳು ಅದನ್ನು ಅಪ್ಪಿ ಸಂತೈಸತೊಡಗಿದವು. ಆದರೆ ಪಾಪ ಅವಕ್ಕೂ ಮನೆ ಕುಟುಂಬ ಇದರ ಜೊತೆ ಎಷ್ಟು ಹೊತ್ತು ಇರಲಾದೀತು. ಅವುಗಳ ಪ್ರೀತಿಯೇನೋ ಅಗಾಧವಾಗಿತ್ತು. ಆದರೆ ಎಲ್ಲರ ನಡುವೆ ಇದಕ್ಕೆ ಕೊರಗು ಕಾಡಲು ಶುರು ಆಯ್ತು ಈಗ ಯಾವ ಹಣ್ಣನ್ನ ಹುಡುಕಿ ಬಂದಿತ್ತೋ ಆ ಹಣ್ಣಲ್ಲಿ ರುಚಿ ಕಳೆದುಕೊಳ್ಳಲಾರಂಭಿಸಿತು. “ಹಣ್ಣು ಈಗ ಮೊದಲಿಗಿಂತಲೂ ರುಚಿಯಾಗಿವೆ” ಅಲ್ಲಿನ ಹಕ್ಕಿಗಳು ಹೇಳುತ್ತವೆ. ಆದರೆ ಇದರ ನಾಲಿಗೆಗೆ ರುಚಿ ಎನಿಸುತ್ತಿಲ್ಲ. ಇದೆಲ್ಲದರ ಮಧ್ಯ ತಿಂಗಳಿಗೆ ಒಂದೊಂದು ಗರಿ ಉದುರಲಾರಂಭಿಸಿತು. ನೋಡು ನೋಡುತ್ತಲೇ ಹಕ್ಕಿ ಹಣ್ಣಾಗಿ ಗರಿಕಳಚಿ ಬೋಳಾಗತೊಡಗಿತು. ಈಗ ಮತ್ತಷ್ಟು ಭಯ ಉಂಟಾಯಿತು ಅದಕೆ. ತನ್ನ ಮನೆಯ ತುಂಬಾ ರಾಶಿ ಹಣ್ಣುಗಳಿವೆ ಯಾವುದಕ್ಕೂ ಕೊಕ್ಕು ಹಚ್ಚಲಾಗುತ್ತಿಲ್ಲ ಬಣ್ಣ ಬಣ್ಣದ ರಾಶಿ ಹೂವುಗಳಿವೆ ಸಂಭ್ರಮಿಸಲಾಗುತ್ತಿಲ್ಲ. ಏನೇನೋ ಪ್ರಯತ್ನ ಪಡ್ತಿದೆ ಎಲ್ಲ ಸರಿ ಮಾಡಬೇಕು, ಇದೆಲ್ಲದರಿಂದ ಹೊರ ಬರಬೇಕು, ನಾನು ಮರಳಿ ಗೂಡು ಸೇರಬೇಕು, ತನ್ನವ್ವನ ಮಡಿಲಲ್ಲಿ ಮಲಗಬೇಕು. ಇಲ್ಲ ಹಣ್ಣಿನ ಸಾಮ್ರಾಜ್ಯದ ಒಡೆಯ ಹೃದಯ ಕಲ್ಲಾಗಿಸಿದ್ದ..! ಒಂದೊಂದಾಗಿ ತನ್ನದೆಲ್ಲವನ್ನು ಕಳೆದುಕೊಂಡ ಹಕ್ಕಿ ಗೂಡಿಂದ ಹೊರಬರುವುದನ್ನು ನಿಲ್ಲಿಸಿ ಬಿಟ್ಟಿತು. ತನ್ನೂರಿಗೆ ಹೋಗುವಾಗ ಮಾತ್ರ ಸಂಭ್ರಮಿಸಿ ಮತ್ತೆ ಅಲ್ಲಿಂದ ಬರುವಾಗ ದಾರಿಯುದ್ದಕ್ಕೂ ಕಣ್ಣೀರುಗರೆಯುತ್ತ ಬರುತ್ತಿತ್ತು.
ಇತ್ತ ಎಲ್ಲ ಇದ್ದು ತನ್ನವರಿಂದ ದೂರ ಉಳಿದು ನರಳುವ ಪಾಡು ತನ್ನದಾದರೆ ಅತ್ತ ಕಟ್ಟಿದ ಗೂಡಲ್ಲಿ ಯಾರು ವಾಸವಿರದೆ ಯಾವುದೋ ಬರಸಿಡಿಲಿಗೆ ಬಲಿಯಾಗಿ ಕುಟುಂಬ ದಿಕ್ಕಾಪಾಲಾಗಿ ಇರುವ ಪರಿಸ್ಥಿತಿ ಮತ್ತೊಂದೆಡೆ. ಕೊನೆಗೆ ಹಕ್ಕಿ ಹಣ್ಣೊಂದರ ಮೇಲೆ ಕುಳಿತು ಯೋಚಿಸತೊಡಗಿತು ಕಣ್ಣೀರು ಅದರ ಪಾದ ಸವರಿ ಹಣ್ಣಿನ ಮೇಲೆ ಹರಿಯತೊಡಗಿತು. “ತಾನು ಸಾಧಿಸಿದ್ದಾದರೂ ಏನು…! ಹೊಟ್ಟೆಪಾಡಿಗಾಗಿ ಆ ದೇವರನ್ನು ಹಣ್ಣಿನ ಸಾಮ್ರಾಜ್ಯದ ದಾರಿ ತೋರಿಸು ಎಂದು ಬೇಡಿದ್ದೇ ತಪ್ಪಾಯ್ತೇ.. ಅನ್ನ ಬೇಡಿದ್ದಕ್ಕೆ ಈ ಪರಿ ಶಿಕ್ಷೆಯೇ, ಯಾವ ತಪ್ಪಿಗೆ! ಯಾರಿಗೆ ತೊಂದರೆ ಕೊಟ್ಟಿದ್ದಕ್ಕೆ!” ಸುಮ್ಮನೆ ಪಶ್ಚಾತಾಪದಲ್ಲಿ ಬೇಯತೊಡಗಿತ್ತು. ಯೋಚನೆಯಲಿ ಹಕ್ಕಿ ಮತ್ತಷ್ಟು ಹಣ್ಣಾಯಿತು. ಈಗ ಅದಕ್ಕೆ ಈ ಹಣ್ಣುಗಳನ್ನು ನೋಡಿ ವಾಕರಿಕೆ ಶುರುವಾಯಿತು. ಹಸಿವೂ ಪ್ರಾಯಶ್ಚಿತ ರೂಪದಿ ಇಂಗತೊಡಗಿತು. “ಇಲ್ಲ, ಇಲ್ಲ ಆಗುತ್ತಿಲ್ಲ” ಕೊಕ್ಕಿನಿಂದ ಒಂದು ಚೂರು ತಿನ್ನಲಾಗುತ್ತಿಲ್ಲ, ದುಸ್ತರವಾಯಿತು ಮಲಗಲೂ ಕೂಡ. ಬದುಕಲು ಬಹಳ ಕಷ್ಟ ಪಡುತ್ತಿದೆ ಜೀವವಿದ್ದಾಗಲೇ ತನ್ನ ಗೂಡು ಸೇರಬೇಕೆಂಬ ಹಂಬಲ ಹಿಡಿದು ಉಸಿರಾಡುತಿದೆ. ಇನ್ನೇನೋ ಇದು ಉಳಿಯುವುದೇ ಇಲ್ಲ ಎನ್ನುವುದು ಅವನಿಗೆ ಅರಿವಾಯಿತೋ ಏನೋ ಅವನು ಎಲ್ಲ ಬಲ್ಲವ! ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದ ಎಷ್ಟೋ ರ್ಷಗಳ ನಂತರ! ಅದರ ಸುತ್ತಮುತ್ತ ವಾಸವಿದ್ದ ಹಕ್ಕಿಗಳೆಲ್ಲ ಸಂಭ್ರಮಿಸಿದವು “ಹೋ!!” ಎಂದು. ಇದು ತನ್ನ ಬಾಡಿಗೆಗೂಡಿನಿಂದ ಹೊರಬರಲಾಗದೆ ತೆವಳುತ್ತಾ ಇಣುಕಿ ನೋಡಿತು ನಂಬಲಾಗುತ್ತಿಲ್ಲ ಅದಕ್ಕೆ. ಹೌದು! ಹಣ್ಣಿನ ಸಾಮ್ರಾಜ್ಯದ ಒಡೆಯ ಕಣ್ಣು ತೆರೆದಿದ್ದಾನೆ! ಇಷ್ಟು ರ್ಷ ಕಾಡಿ ಬೇಡಿದರೂ ಮೂಕನಾಗಿದ್ದನವ ಇಂದು ಕಣ್ಣು ತೆರೆದ. ಹಕ್ಕಿಗೆ ಸಂಭ್ರಮಿಸಬೇಕೋ, ಸಂಕಟಪಡಬೇಕೋ ತಿಳಿಯುತ್ತಿಲ್ಲ ತಾನು “ವಾಪಸ್ ತನ್ನೂರಿಗೆ ತೆರಳುವೆನೇ, ಇಲ್ಲಿಂದ ಪರ್ತಿ ಪ್ರಮಾಣದಲ್ಲಿ ಬಿಡುಗಡೆ ಹೊಂದಿ ನನ್ನ ಊರಲ್ಲಿ ನೆಲೆಸುವ ಭಾಗ್ಯ ನನಗೆ ದೊರೆತೀತೇ, ಅಥವಾ ಮತ್ತಾವುದೋ ಜನ್ಮದ ತಪ್ಪಿನ ಲೆಕ್ಕ ತೆಗೆದು ಶಿಕ್ಷೆ ರೂಪದಿ ಮತ್ತೊಂದು ಹಣ್ಣಿನರಾಜ್ಯಕ್ಕೆ ಎಸೆಯುವನೇ?” ಏನೊಂದು ತೋಚುತ್ತಿಲ್ಲ. ಏನನ್ನು ನಂಬಲಾಗುತ್ತಿಲ್ಲ. ಹಣ್ಣಿನ ಸಾಮ್ರಾಜ್ಯದ ಒಡೆಯ ಬಳಿ ಕರೆದು ಹೇಳಿದ “ನೀನಿನ್ನು ಹೊರಡಬಹುದು, ನಿನ್ನ ಸಮಯ ಮುಗಿಯಿತು”. ಖುಷಿಯಲ್ಲಿ ಹಕ್ಕಿ ಹಾರಲು ಪ್ರಯತ್ನಿಸಿತು ಆಗುತ್ತಿಲ್ಲ, ತಿನ್ನಲು ಪ್ರಯತ್ನಿಸಿತು ಆಗುತ್ತಿಲ್ಲ. ಏನು ಮಾಡುವುದು ತಿಳಿಯದೆ ಹಣ್ಣಿನ ಸಾಮ್ರಾಜ್ಯದ ಒಡೆಯನನ್ನೇ ಕೇಳಿತು. “ನಾನೀಗ ಶಕ್ತಿಹೀನ ಎಲ್ಲವನ್ನು ಕಳೆದುಕೊಂಡಿದ್ದೇನೆ”. ಕರುಣಾಳು ದಯಾಮಯಿ ಅವ ಹೇಳಿದ “ಸರಿ, ನಿನ್ನ ಊರಿಗೆ ಹೋಗಿ ತಲುಪುವಷ್ಟು ಶಕ್ತಿಯನ್ನು ನೀಡುತ್ತೇನೆ ಮುಂದಿನದು ನಿನ್ನ ಜವಾಬ್ದಾರಿ”. ಅಷ್ಟಕ್ಕೆ ಹಕ್ಕಿ ಸಂಭ್ರಮಿಸಿ ನಲಿದಾಡಿತು ಅವನ ಮಹಿಮೆಯನ್ನು ಕೊಂಡಾಡಿತು. ದೂರದ ತೀರಕೆ ಹಾರಿತು ಹಾರಿತು ತಾನು ಹಾರಿ ಬಂದಿದ್ದ ದಿಕ್ಕಿಗೆ. ಆದರೆ ಕಣ್ಣು ಮಂಜು ಮಂಜು ನೋಡಿದರೆ ಯಾವುದೋ ಹೊಸ ಊರು!
“ಅಯ್ಯೋ ನಾನು ದಾರಿ ತಪ್ಪಿದೆನೇ? ಅಥವಾ ದಾರಿ ತಪ್ಪಿಸಲಾಯಿತೇ?” ಚಿಂತಿಸತೊಡಗಿತು. ಇದೂ ಹಣ್ಣಿನ ಸಾಮಾಜ್ಯವೇ. ಆದರೆ ಅಲ್ಲಿಯ ಹಣ್ಣುಗಳಂತಲ್ಲ ಮತ್ತೆ ಹೊಸ ಬಗೆಯವು, ಹೊಸ ಜನ. ಹಕ್ಕಿಗೆ ತಲೆ ತಿರುಗಲಾರಂಭಿಸಿತು. ಏನಾಗುತ್ತಿದೆ ಇಲ್ಲಿ ತನ್ನ ಸುತ್ತ. “ಯಾವ ತಪ್ಪಿಗೆ ಈ ಶಿಕ್ಷೆ?” ಆ ಸಾಮ್ರಾಜ್ಯದ ಒಡೆಯನನ್ನು ಕೇಳಿತು. ಅವ ನಕ್ಕು ಕಣ್ಮುಚ್ಚಿ ಕುಳಿತಿದ್ದ. ಅಲ್ಲಿಯ ಹಕ್ಕಿಗಳು “ಆಗುವುದೆಲ್ಲ ಒಳ್ಳೆಯದಕ್ಕೆ ಬಾ ನಾವಿದ್ದೀವಿ ನಿನ್ನ ಜೊತೆ” ಎಂದವು. ಇಲ್ಲ ಹಕ್ಕಿಗೆ ಇರಲಾಗುತ್ತಿಲ್ಲ ಆದರೆ ಇರದೆ ಬೇರೆ ಆಯ್ಕೆಯೂ ಇರಲಿಲ್ಲ. ಅದಕ್ಕರಿವಿರದೆ ಯಾವುದೋ ಮಾಯಾ ಹಗ್ಗವೊಂದು ಬಂಧಿಸಿತ್ತು. ಬಿಡುಗಡೆ ಎಂದು ಜೊತೆಗಿದ್ದ ಹಕ್ಕಿಗಳನ್ನು ಕೇಳಿತು. “ನೀನೀಗ ಬಂದಿದ್ದೀಯಾ ಅವನ ಕೃಪೆಯಾಗಬೇಕು” ಎಂದವು. ಹೀಗೇ ಅಲ್ಲೂ ಎಷ್ಟೋ ರ್ಷಗಳು ಕಳೆದವು. ಈಗಂತೂ ಹಕ್ಕಿ ತನ್ನ ಕೆಲಸವನ್ನು ಮಾಡಿಕೊಳ್ಳುವುದು ಕಷ್ಟವೆನಿಸತೊಡಗಿತು. ರೆಕ್ಕೆಗಳನ್ನೆಲ್ಲ ಕಳೆದುಕೊಂಡು ಬೋಳುಬೋಳಾಯಿತು. ಹೆಚ್ಚು ಬೋಳುಮರದ ಮೇಲೆಯೇ ಕೂರುತ್ತಿತ್ತು. ಅದರ ಗೋಳಿನ ಕಥೆಯ ಕೇಳಲು ಯಾರಿರಲಿಲ್ಲ ಕೊನೆಗೊಂದು ದಿನ ಇಲ್ಲಿಂದಲೂ ಆ ಮಾಯಾ ಹಗ್ಗ ಕಳಚಿ ಹೊರಟಿತು. ಆದರೂ ಹಾರಲಾಗುತ್ತಿಲ್ಲ. ಈ ಬಾರಿ ಆ ಕರುಣಾಮಯನ ಹತ್ತಿರ ಹೋಗಿ ಬೇಡಲಿಲ್ಲ. ಅವನು ಮತ್ತೊಂದು ರಾಜ್ಯದ ದಾರಿ ತೋರಿದರೆ ಕಷ್ಟ. ಉಸಿರನ್ನು ನನ್ನೂರಲ್ಲಿಯೇ ಬಿಡಬೇಕು. ಹೀಗೆಂದುಕೊಂಡು ಗಟ್ಟಿ ಮನಸ್ಸು ಮಾಡಿ ಕಣ್ಣುಮುಚ್ಚಿ ಬಲವನ್ನೆಲ್ಲ ಕ್ರೋಢೀಕರಿಸಿ ಹಾರಿತು. ರೆಕ್ಕೆಗಳು ಸಹಕರಿಸಿದವು. ಬೇಗ ಬೇಗ ಗೂಡು ಸೇರುವ ತವಕ, ತವರನ್ನು ಕಾಣುವ ತವಕ ಹೇಗೆ ಬಂದು ತಲುಪಿದೆ ಎನ್ನುವುದೇ ತಿಳಿಯಲಿಲ್ಲ.
ದೂರದಿಂದಲೇ ತಾನು ಕಟ್ಟಿದ್ದ ಗೂಡನ್ನು ನೋಡಿ ಕಣ್ ತುಂಬಿಕೊಂಡಿತು ಮರಳಿ ಗೂಡಿಗೆ ಬಂದು ಬಿದ್ದುಕೊಂಡಿತು. ಈಗ ಅದರಲ್ಲಿ ಮೊದಲ ಬಲವಿಲ್ಲ ಎರಡೂ ಸಾಮ್ರಾಜ್ಯದಲ್ಲಿ ಸಂಪಾದಿಸಿದ ಸಾಕಷ್ಟು ಸಂಪತ್ತಿದೆ ಏನಾದರೂ ತಿಂದು ಶಕ್ತಿ ಪಡೆಯೋಣ ಎಂದರೆ ಏನು ತಿನ್ನಲಾಗುತ್ತಿಲ್ಲ. ಹಸಿವಾಗ್ತಿದೆ ಆದರೂ ತಿನ್ನಲಾಗುತ್ತಿಲ್ಲ, ಇಲ್ಲಿನ ಆಹಾರ ತಿನ್ನುವುದೇ ಮರೆತು ಹೋಗಿದೆ. ತನ್ನಿಷ್ಟದ ಕಾಳುಗಳನ್ನೂ ಜರ್ಣಿಸಲು ಇಂದು ಕಷ್ಟವಾಗುತ್ತಿದೆ.. ನಿತ್ರಾಣಗೊಂಡ ಹಕ್ಕಿ ಉಣ್ಣುವುದ ಮರೆತು ಕುಳಿತಿದೆ. ಅದರವ್ವ ಗುಟುಕನಿಟ್ಟರೂ ಹೋಗದಾಗಿದೆ, ಅದರ ಒಡಹುಟ್ಟು ಜೊತೆಯಲಿ ಕುಳಿತು ತಲೆಸವರಿದರೂ ಸ್ಪಂದನಾಶೂನ್ಯವಾಗಿ ನಿಶ್ಚಲಗೊಂಡಿದೆ. ಏನೊಂದು ಬೇಡವಾಗಿದೆ. ಎಲ್ಲವೂ ಬದಲಾಗಿದೆ ಈಗ ಬಹಳ ರ್ಷಗಳೇ ಕಳೆದಿವೆ ತನ್ನ ಕುಟುಂಬ ಬಿಟ್ಟು. ಎಲ್ಲೆಡೆ ಅಪರಿಚಿತ ಮುಖಗಳೇ ಹೆಚ್ಚು. ಸಂಬಂಧಿಕರು ಕಂಡಂತೆ ಮಾಡಿ ಸುಮ್ಮನಿದ್ದಾರೆ. ಅವಶ್ಯಕತೆ ಇದ್ದಾಗ ಅಥವಾ ಏನೇನೋ ನೆಪಹೇಳಿ ಸಂಪತ್ತಿಗೆ ಕೈಚಾಚಲು ಮಾತ್ರ ಬರುತ್ತಿವೆ. ನಿನ್ನ ಕಷ್ಟ ಏನು ಎಂದು ಸಾಂತ್ವನದ ಮಾತೊಂದಕ್ಕೂ ಯಾರೂ ತಯಾರಿಲ್ಲ. ಏನನ್ನು ಸಾಧಿಸಿದೆ ತಾನು? ಕೊರಗುತ್ತಿದೆ ಇಲ್ಲಿಯೂ! ಪ್ರೀತಿ ಅಕ್ಕರೆಯಲಿ ಸುಧಾರಿಸುವುದೋ ಅಥವಾ ತನಗೆ ಒಗ್ಗದ ಎಲ್ಲರನ್ನ ದ್ವೇಷಿಸಲು ತೊಡಗಿ ಮತ್ತೆ ಒಂಟಿಯಾಗಿ ಎಲ್ಲರಿಂದ ದೂರಾಗುವುದೋ, ಹೇಗೆ ಕೊನೆಗಾಣುವುದೋ?. ತನ್ನ ಬಾಲ್ಯ, ಹಣ್ಣಿನ ಸಾಮ್ರಾಜ್ಯದ ಸಿಹಿಕಹಿ ನೆನಪು ಎಲ್ಲ ಬಾಧಿಸತೊಡಗಿದೆ. ಹಕ್ಕಿ ಹಾರಲಾಗದೆ, ಹೊರಬರಲಾಗದೆ ಕೊರಗುತ್ತಾ ಕುಳಿತಿದೆ. ಕಣ್ಣುಗಳೆಲ್ಲ ಒಳಹೋಗಿ ಮುದುರಿ ಕುಳಿತ ಹಕ್ಕಿಗೆ ಹಲವು ಪ್ರಶ್ನೆಗಳು ಮತ್ತೆ ಮತ್ತೆ ಅದರ ಸುತ್ತ ಮುತ್ತಿ ಕಾಡುತ್ತಿವೆ! ತನ್ನ ಬಿಟ್ಟರೆ ಇನ್ನಿಲ್ಲ ಎಂದು ಹಾರಾಡುತ್ತಿದ್ದ ಹಕ್ಕಿ, ಹಾರಿ ಹಾರಿ ಹೋದ ಹಕ್ಕಿ ಇಂದು ಜೀವನದ ಹಾರಾಟವನ್ನೆ ಮುಗಿಸುವ ಹಂತ ತಲುಪಿ ಮೂಲೆಸೇರಿದೆ.
ರೋಹಿಣಿ ಜೆ




