ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಆಯಿ..
ನಿನಗೊಬ್ಬ ಮಗಳಿದ್ದಾಳೆ…
ನಿನ್ನ ಆಸೆ ಕನಸು ಎಲ್ಲವನ್ನೂ
ಕನಸಾಗೇ ಬಿಟ್ಟವಳು…
ನನಸು ಮಾಡುವ ಕಸುವಿಲ್ಲದವಳು…

ಸರಯು ಫೇಸ್ಬುಕ್ಕಿನಲ್ಲಿ ಹಾಕಿದ್ದ ಕವನವೇ ಅನ್ನಪೂರ್ಣಳನ್ನು ಕಾಡುತ್ತಿತ್ತು. ನಮ್ಮ ಮಕ್ಕಳು ಯಾವಾಗಲೂ ನಮಗೆ ಸಣ್ಣವರೇ ಎನಿಸುತ್ತಾರೆ. ಆದರೆ ಅವರು ಏನೆಲ್ಲ ಯೋಚಿಸುತ್ತಾರೆಂಬುದು ತಲ್ಲಣ ಮೂಡಿಸುತ್ತದೆ.

ಜಿರಿ ಜಿರಿ ಮಳೆ.. ಬೆಳಗು ಜಾವಕ್ಕೇ ಶುರುವಾದದ್ದು.. ಬರಬರಾಂತಲೂ ಬರದೇ, ನಿಂತೂ ಹೋಗದೇ.. ಇದೊಳ್ಳೆ ರಗಳೆ ಆಯಿತು.

ಅನ್ನಪೂರ್ಣ ನೆತ್ತಿಗೆ ಸೆರಗು ಹೊದ್ದು ಅಂಗಳಕ್ಕಿಳಿದಳು. ನೆಲತುಂಬ ಚೊಟ್ಟು ಮೇಲಾಗಿ ತೇಲುತ್ತಿದ್ದ ಪಾರಿಜಾತ. ಎಷ್ಟು ಪ್ರೀತಿಯಿಂದ ಬೆಳೆಸಿದ್ದು! ಮೆಟ್ಟಲಾದರೂ ಮನಸ್ಸಾಗುತ್ತದಾ? ಅಯ್ಯೋ, ಈ ಬಟನ್ ಗುಲಾಬಿಯ ಹೆಂಕಲು… ನಿನ್ನೆ ಮಾತ್ರ ನೆಟ್ಟಿದ್ದು, ಬುಡದ ಮಣ್ಣೆಲ್ಲ ಕೊಚ್ಚಿ ಹೋಯಿತು.

ಅನ್ನಪೂರ್ಣ ಬಗ್ಗಿ ಬುಡ ಮಾಡುತ್ತಿದ್ದಾಗ, “ಆಯಿ.. ಆಯಿ, ನಿಂಗೆ ತಲೆಸಮ ಇಲ್ವಾ?” ಎಂದು ಸರಯು ಕಿಟಕಿಯಿಂದ ಇಣುಕಿದಳು.

“ಈ ಮಳೆಲೂ ಅದೆಂತ ಕಾಮಗಾರಿಯಿದು ನಿಂದು! ಒಂದು ಗಳಿಗೆಯಾದರೂ ನಿನ್ನ ಗಿಡಗಳ ವಸವಂತ ಬಿಟ್ಟಿದ್ದಿದ್ರೆ…”

ಸರಯು ರಪ್ಪನೆ ಕಿಟಕಿ ಮುಚ್ಚಿ ಹೋದಳು.

ಕೆಸರು ಮಣ್ಣಿನಲ್ಲಿ ಮುಳುಗಿದ್ದ ಅನ್ನಪೂರ್ಣಳ ಬೆರಳುಗಳು ಕ್ಷಣಕಾಲ ಗಲಿಬಿಲಿಗೊಂಡವು. ಎದೆಯೊಳಗಿನ ಕಸಿವಿಸಿಯಂತೆ.

ಮನೋಹರನ ಮನೆಗೆ ಇವತ್ತು ಫೋನ್ ಮಾಡ್ತೇವೆ ಅಂತ ಹೇಳಿದ್ದರಲ್ಲವಾ…

—

ಸರಯು ಕಾಲೇಜು ಮ್ಯಾಗಜೀನ್‌ನಲ್ಲಿದ್ದ ಒಬ್ಬನ ಫೋಟೋಗೆ ಬೆರಳು ಮಾಡಿ ಹೇಳಿದ್ದಳು.

“ನಿಂಗೆ ಗೊತ್ತಾ ಆಯಿ, ಇಷ್ಟು ದಿನದಲ್ಲಿ ನನ್ನ ಕಾಲಿಗೆ ಎಂತ ಆಗಿದೆ ಅಂತ ಕೇಳದೇ ಇರುವ ಒಬ್ಬನೇ ಒಬ್ಬ ಅಂದ್ರೆ ಇವ.”

ಹೀಗೆ ಪರಿಚಿತನಾದ ಮನೋಹರ ಸರಯುವಿನ ಮಾತಿನಲ್ಲಿ ಆಗಾಗ್ಗೆ ಇಣುಕಲು ಶುರುವಾದ. ಅವಳ ಫೇಸ್ಬುಕ್ಕಿನ ಪ್ರತೀ ಪೋಸ್ಟಿಗೂ ಲೈಕು ಮಾಡುತ್ತಿದ್ದ. ಹುಟ್ಟಿದ ದಿನಕ್ಕೆ ಮನೆಗೂ ಬಂದ. ಬಂದವ ಅನ್ನಪೂರ್ಣಳ ಒಂದೊಂದು ಗಿಡ, ಎಲೆ, ಹೂವು, ಮೊಗ್ಗು, ಚಿಗುರು ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಂಡು ಹರಟೆ ಹೊಡೆದಿದ್ದ.

ತಾನು ಗಿಡಗಳನ್ನು ಬೆಳೆಸಿದ್ದಕ್ಕಿಂತ ಹೆಚ್ಚು ಮುಚ್ಚಟೆಯಿಂದ ಅವನು ಸರಯುವನ್ನು ಕಾಣುತ್ತಿದ್ದಾಗ ಅನ್ನಪೂರ್ಣಳ ಎದೆಯ ಭಾರ ಇಳಿದಿತ್ತು.

ಗಂಡನೊಟ್ಟಿಗೆ ಮನೋಹರನ ಮನೆಗೆ ಮಗಳ ಮದುವೆ ಪ್ರಸ್ತಾಪಕ್ಕೆ ಹೋಗುವವರೆಗೂ.

ಮನೋಹರನ ತಾಯಿ ಮಾತಿಗೆ ಮಾತು ಕೂಡಿಸುತ್ತಾ ಪಿಸುಗುಟ್ಟಿದ್ದರು.

“ಮನೋಹರನ ಇಷ್ಟವೇ ನಮ್ಮ ಇಷ್ಟ. ಆದ್ರೆ ಈ ಚಪ್ರದಲ್ಲಿ ನಮ್ಮ ಮಗಳ ಮದುವೆಯೂ ಆಗಬೇಕು. ನಿಮ್ಮ ಮಗ ಪುನೀತನಿಗೆ ನಮ್ಮ ಮಧುಮಿತಾಳನ್ನು ಕೊಡೋಣ ಅಂತ…”

ಎದೆಯ ಮೇಲೊಂದು ಬಂಡೆಗಲ್ಲನ್ನೇ ಎಸೆದಂತೆ ಅನ್ನಿಸಿತ್ತು.

ಹುಟ್ಟಿನಿಂದಲೇ ಬುದ್ಧಿ ಬೆಳವಣಿಗೆ ಸರಿಯಾಗಿರದ ಮಧುಮಿತಾಳನ್ನು ಪುನೀತನಿಗೆ ತಂದುಕೊಳ್ಳುವುದೇ?

“ಯೋಚನೆ ಮಾಡಿ ಫೋನ್ ಮಾಡುತ್ತೇವೆ” ಎಂದು ವಾಪಸಾಗಿದ್ದರು.

“ಹೇಗಾದರೂ ಅವಳನ್ನು ದಡ ಸೇರಿಸಬೇಕು ಅಂತ ಇರೋದಿಲ್ವಾ ತಂದೆತಾಯಿಗಳಿಗೆ?” ಎಂದು ಗಂಡ ಹೇಳಿದ್ದರೂ ಅನ್ನಪೂರ್ಣಳಿಗೆ ಮನಸ್ಸಿರಲಿಲ್ಲ.

“ಮನೋಹರನಿಲ್ಲದೇ ನಾ ಬದುಕೋಲ್ಲ ಆಯಿ,” ಸರಯು ಕಿರುಚಿದ್ದಳು.

—

ಮೂರರ ಕೂಸು ಸರಯು. ಎರಡು ಚೋಟು ಜಡೆ, ಉಬ್ಬಿದ ಗಲ್ಲ, ಹೊಳಪು ಕಣ್ಣು. ಹಾಳು ತೇವಕ್ಕೆ ಆಲ್ಬಮಿನಲ್ಲಿ ಇಟ್ಟಲ್ಲೇ ಫೋಟೋ ರವಿಸಿ ಹೋಗಿದೆ. ಆದರೂ ಅನ್ನಪೂರ್ಣಳಿಗೆ ಅದನ್ನು ಹೊತಾಕಲಿಕ್ಕೆ ಆಗಿಲ್ಲ.

ಅವತ್ತು ಹೀಗೆಯೇ ಮಳೆ. ಸೋನೆ. ಇಡೀ ದಿನ ಅಣ್ಣನ ಹಿಂದೆ ಬಸವನ ಬಾಲದಂತೆ ಆಡುವ ಸರು ಅಂಗಿಪೂರ್ತಿ ಕೆಸರು ಮಾಡಿಕೊಂಡು ಬಂದಿದ್ದಳು.

ತೇವಕ್ಕೆ ಜಾರಿರಬೇಕು ಅಂದುಕೊಂಡರೆ ಕೂಸು ದಿನ ದಿನಕ್ಕೂ ಬೀಳತೊಡಗಿತು. ಮನೆಯೊಳಗಿನ ಸಪಾಟಿ ನೆಲದಲ್ಲೂ ನಡೆಯುತ್ತಲೇ ಬೀಳುವುದು.

“ಅದರ ಒಂದು ಕಾಲು ಉದ್ದವೇ ಆಯಿ,” ಎಂದು ಪುನೀತ್ ಹೇಳಿದಾಗ ಅನ್ನಪೂರ್ಣ ಕಂಗಾಲಾಗಿದ್ದಳು.

ಆಸ್ಪತ್ರೆಗಳ ಹಾದಿ ಸವೆಸಿದ ಮೇಲೆ ‘ಬ್ಲೌನ್ಟ್ಸ್ ಡಿಸೀಸ್’ ಎಂದು ಪಟ್ಟಕೊಟ್ಟರು. ಕಾಲಿನ ಮೂಳೆ ಸೊಟ್ಟಿಗೆ ಬೆಳೆಯುತ್ತಿದೆ. ಆಪರೇಷನ್ ಆಗಬೇಕು ಎಂದರು.

ಒಂದಲ್ಲ, ಎರಡಲ್ಲ, ಮೂರು ಸಲ ಆಪರೇಷನ್ ಆಯ್ತು. ಗ್ರಹಚಾರ, ಶಾಂತಿ, ಹರಕೆ ಎಲ್ಲವೂ ಆಯಿತು. ಆದರೂ ಸರಯು ಕುಂಟುತ್ತಲೇ ಬಂದಳು.

ಅವಳ ಕಣ್ಣೀರಿನ ಜೊತೆ ಕಣ್ಣಿನ ಹೊಳಪೂ ಇಂಗಿಹೋಯಿತು.

ಸರಯು ಬೆಳೆದಂತೆಲ್ಲ ಕಾಂಪ್ಲೆಕ್ಸ್ ಆಗುತ್ತಾ ಹೋದಳು. ವಾರಗಟ್ಟಲೆ ಮಾತಿಲ್ಲ. ಯಾರದ್ದೋ ಕೊಂಕು ಮಾತಿಗೆ ಮನಸ್ಸು ಹುಳಿಯಾದರೆ ಆಯಿಯ ಮೇಲೆ ಕಿರುಚಾಟ.

“ನೀನೇ ನನ್ನ ಕುಂಟಿ ಮಾಡಿದ್ದು!”

ಅನ್ನಪೂರ್ಣ ರೂಮಲ್ಲಿ ನಿಲ್ಲಲಾಗದೆ ಹೊರಗೋಡಿದ್ದಳು.

ಅಂಗಳದ ಬಳ್ಳಿ ಗುಲಾಬಿಯ ಮೊಗ್ಗು ಅರೆಬಿರಿದು ನಗುತ್ತಿತ್ತು.

“ಸರಯೂ… ನನ್ನ ಮಗಳೇ…” ಎಂದು ಅದನ್ನು ಸವರಿದವಳು ಮೊಗ್ಗು ಅರಳಿ ಹೂವಾಗುವುದನ್ನು ನೋಡುತ್ತಾ ಕಣ್ಣೀರು ಒರೆಸಿಕೊಂಡಿದ್ದಳು.

ಹಾಗೆ ಶುರುವಾಗಿತ್ತು ಅವಳ ಗಿಡಗಳ ಪ್ರಪಂಚ.

ಯಾವ ಗಿಡದಲ್ಲಿ ಚಿಗುರು? ಯಾವುದರಲ್ಲಿ ಮೊಗ್ಗು? ಯಾವ ದಿನ ಹೂ ಅರಳಬಹುದು? ಇದೇ ಅವಳ ಬದುಕಾಯಿತು.

—

ಆದರೆ ಇವತ್ತು ಸಮಸ್ಯೆಗೆ ಪರಿಹಾರ ಹುಡುಕಬೇಕಿತ್ತು. ಒಂದು ಕಡೆ ಮಗಳ ಬದುಕು, ಇನ್ನೊಂದೆಡೆ ಮಗನ ಭವಿಷ್ಯ.

ಕಷ್ಟಪಟ್ಟು ಮನಸ್ಸು ಗಟ್ಟಿ ಮಾಡಿಕೊಂಡು ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದ ಪುನೀತನ ಬಳಿ ಬಂದಳು.

“ಪುನೀತ್…”

ಅವಳ ಧ್ವನಿಯಲ್ಲಿ ನಡುಕವಿತ್ತು.

ಮನೋಹರನ ತಾಯಿ ಇಟ್ಟ ಷರತ್ತನ್ನು ಒಂದೊಂದಾಗಿ ಬಿಡಿಸಿ ಹೇಳಿದಳು.

ಪುನೀತ್ ಮಾತ್ರ ನಿರಾಳವಾಗಿ ನಕ್ಕ.

“ಇಷ್ಟಕ್ಕೇನಾ ಆಯಿ ನೀನು ಇಷ್ಟು ಯೋಚನೆ ಮಾಡ್ತಿರೋದು? ನಾನು ಈ ಮದುವೆಗೆ ಸಿದ್ಧ.”

ಅನ್ನಪೂರ್ಣ ದಿಗ್ಭ್ರಮೆಯಿಂದ ಅವನ ಮುಖ ನೋಡಿದಳು.

“ನನಗೊಂದು ವಿಷಯ ಹೇಳೋದು ಬಾಕಿ ಇತ್ತು. ನಾನು ಬೆಂಗಳೂರಿನಲ್ಲಿ ನನ್ನ ಜೊತೆ ಕೆಲಸ ಮಾಡೋ ಹುಡುಗಿಯ ಜೊತೆ ಲಿವಿಂಗ್ ರಿಲೇಷನ್‌ಷಿಪ್‌ನಲ್ಲಿದ್ದೇನೆ. ಮದುವೆ, ಸಂಸಾರ ಅನ್ನೋದರಲ್ಲಿ ನನಗೆ ನಂಬಿಕೆಯೇ ಇಲ್ಲ. ಆದರೆ ಸರಯುವಿನ ಬದುಕು ಸೆಟ್ ಆಗುತ್ತೆ ಅಂದ್ರೆ ಈ ಮದುವೆಗೆ ಹೂಂ ಅಂತೀನಿ.”

ಅನ್ನಪೂರ್ಣಳ ಎದೆಯೊಳಗೆ ಏನೋ ಕುಸಿದಂತಾಯಿತು.

“ಮಧುಮಿತಾಳಿಗೆ ಹುಟ್ಟಿನಿಂದ ಸಿಂಡ್ರೋಮ್ ಇದ್ರೆ ಹೆಚ್ಚು ಕಾಲ ಬದುಕೋದು ಸಂಶಯ ಅಂತ ಮೆಡಿಕಲ್ ಸೈನ್ಸ್ ಹೇಳುತ್ತೆ. ನಾನು ಬರಿ ಹೆಸರಿಗೆ ಮದುವೆಯಾಗ್ತೀನಿ. ಅವಳ ಚಾಕರಿಗೊಂದು ಹೋಮ್ ನರ್ಸ್ ಇಟ್ಟರಾಯ್ತು. ಸರಯುವಿಗೆ ಮನೋಹರ ಸಿಗಬೇಕು. ಅಷ್ಟೇ.”

ಮಗನ ಮಾತು ಮುಗಿದರೂ ಅನ್ನಪೂರ್ಣಳ ಕಿವಿಯಲ್ಲಿ ಆ ಮಾತುಗಳೇ ಮೊಳಗುತ್ತಿದ್ದವು.

ತಂಗಿಯ ಮೇಲಿನ ಪ್ರೀತಿಯಿಂದ ಮಗ ತ್ಯಾಗ ಮಾಡುತ್ತಿದ್ದಾನೋ? ಅಥವಾ ಮದುವೆಯನ್ನೂ, ಮನುಷ್ಯರ ಬದುಕನ್ನೂ ಇಷ್ಟೊಂದು ಲೆಕ್ಕಾಚಾರದ ವ್ಯಾಪಾರವಾಗಿ ನೋಡುತ್ತಿದ್ದಾನೋ?

ಮಗಳ ಕಾಲು ಕುಂಟಾಗಿದ್ದರೆ, ಮಗನ ಆಲೋಚನೆ ಮತ್ತು ಮನಸ್ಥಿತಿಯೇ ಹೀಗೆ ಹಾದಿತಪ್ಪಿದೆಯಲ್ಲಾ ಎನ್ನುವ ನೋವು ಅವಳನ್ನು ಸುತ್ತುವರಿಯಿತು.

—

ಮಳೆಗೆ ಕಾಡು ಗಿಡ, ಕಳೆ, ತಗಟೆ ಸೊಪ್ಪು ದಂಡಿಯಾಗಿ ಬೆಳೆದಿತ್ತು. ಹೂತೋಟಕ್ಕಿಂತ ಇದೇ ಹೆಚ್ಚು ಕಾಣ್ತಿದೆ ಎಂದು ಅನ್ನಪೂರ್ಣ ಸಣ್ಣ ಕತ್ತಿ ಹಿಡಿದು ಬಂದಳು.

ಆಗ ಸರಯು ಕಂಗಾಲಾಗಿ ಓಡಿಬಂದಳು.

“ಆಯಿ… ಮಧುಮಿತಾ ಮೆತ್ತಿ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ಲಂತೆ. ಸೀರಿಯಸ್. ಆಸ್ಪತ್ರೆಗೆ ಐಸಿಯುನಲ್ಲಿ ಇಟ್ಟಿದ್ದಾರಂತೆ. ನಾ ಹೋಗಬೇಕು.”

ಪುನೀತನೊಡನೆ ಅವಳನ್ನು ಆಸ್ಪತ್ರೆಗೆ ಕಳುಹಿಸಿ ಅನ್ನಪೂರ್ಣ ಮತ್ತೆ ಕಳೆ ಕೀಳತೊಡಗಿದಳು.

ಮನಸ್ಸು ಗಿರಗಿಟ್ಲೆ ಆಡುತ್ತಿತ್ತು.

ಜೀವನವೆಂದರೆ ಹೀಗೇ ಅಲ್ಲವೇ? ಈ ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ.

ತಲೆಗೆ ಪೆಟ್ಟು ಹೆಚ್ಚಾಗಿಯೇ ಬಿದ್ದಿದೆಯೋ ಏನೋ…

ಚಿಕ್ಕ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಂಡರೂ ಬಾನಗಡಿ ಮಾಡಿಕೊಂಡಳಲ್ಲ!

ಜೀವಕ್ಕೆ ಅಪಾಯವಾದರೆ?

ಬೇಸರಕ್ಕಿಂತ, ವಿಷಾದಕ್ಕಿಂತ ಒಳಗೊಳಗೆ ತಾನು ನಿರಾಳವಾಗುತ್ತಿದ್ದೇನಾ?

ಎಲ್ಲ ಸಮಸ್ಯೆಗಳಿಗೂ ಅದು ಒಂದು ಪರಿಹಾರವಾಗಬಹುದಿತ್ತಲ್ಲ…

ಅಂದರೆ ಮಧುಮಿತಾಳ ಸಾವನ್ನು ತಾನು ಬಯಸುತ್ತಿದ್ದೇನೆಯೇ?

“ಅಯ್ಯೋ ದೇವರೇ! ಎಂಥ ಸಣ್ಣತನ!”

ಕೈ ನಡುಗಿ ಕತ್ತಿ ಕೆಳಗೆ ಬಿತ್ತು.

ತಾನು ಬೆಳೆಸಿರುವ ಹೂಗಿಡಗಳಿಗೋಸ್ಕರ ನಿಷ್ಕಾರುಣ್ಯವಾಗಿ ಕಳೆಗಿಡಗಳನ್ನು ಸವರಿ ಹಾಕುತ್ತಿದ್ದೇನಲ್ಲ…

ಕಳೆಯಾದರೂ ಅದೂ ಗಿಡವೇ ಅಲ್ಲವೇ?

ಧಡಕ್ಕನೆದ್ದು ನಿಂತಳು ಅನ್ನಪೂರ್ಣ.

—

About The Author

Leave a Reply

You cannot copy content of this page

Scroll to Top