ಶರಣ ಸಂಗಾತಿ
ಜಯಲಕ್ಷ್ಮಿ ಕೆ
“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ”


ಕಾಯಕ ತತ್ವದ ಮೂಲಕ ವ್ಯಕ್ತಿಗತ ವಿಕಾಸದ ಪಥವನ್ನು ಜಗತ್ತಿಗೆ ತೋರಿದ ಶರಣನೆಂದರೆ ವಚನಕಾರ ಹಡಪದ ಅಪ್ಪಣ್ಣ. ಕ್ಷೌರ ಮಾಡುವ ವೃತ್ತಿಯ ಮೂಲಕ ಜನರ ಮುಖಗಳನ್ನು ಅಂದಗೊಳಿಸುತ್ತಿದ್ದ ಹಡಪದ ಅಪ್ಪಣ್ಣ ತನ್ನ ವಚನ ಸಾಹಿತ್ಯದ ಮೂಲಕ ಜನರ ಮನದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳ ಕೊಳೆ ತೊಳೆದು ವೈಚಾರಿಕ ಚಿಂತನೆಗೆ ದಾರಿ ತೋರಿದನು. ವ್ಯಕ್ತಿಯಾಗಲಿ ಸಮಾಜವಾಗಲಿ ಮೌಲ್ಯಗಳ ತಳಹದಿಯಲ್ಲಿ ಸಾಗುದರಿಂದ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ತನ್ನ ವೃತ್ತಿ ಮತ್ತು ಪ್ರವೃತ್ತಿಗಳ ಮೂಲಕ ಜಗತ್ತಿಗೆ ಸಾರಿದವನು ಹಡಪದ ಅಪ್ಪಣ್ಣ.
ಮಾಡುವ ಕೆಲಸ ಯಾವುದೇ ಇರಲಿ ಮೇಲು ಕೀಳು ಎಂದು ಭಾವಿಸದೆ , ತಮ್ಮ ಹೆಸರಿನ ಹಿಂದೆ ಕಾಯಕವನ್ನು ಅಂಟಿಸಿಕೊಂಡು ಆ ಕಾಯಕಕ್ಕೆ ಅಂತಿದ್ದ ಜಾತಿಯ ಲೇಪವನ್ನು ತೊಡೆದು ಹಾಕಿದವರು ವಚನಗಾರರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮೇಧಾರ ಕೇತಯ್ಯ ಮೊದಲಾದವರಂತೆ ಹಡಪದ ಅಪ್ಪಣ್ಣ ಕೂಡಾ ತನ್ನ ಕುಲಕಸುಬನ್ನು ಸತ್ಯ ಶುದ್ಧ ಕಾಯಕವನ್ನಾಗಿ ಪರಿವರ್ತಿಸಿಕೊಂಡವನು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದ ಚೆನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗಳ ಪುತ್ರನಾದ ಹಡಪದ ಅಪ್ಪಣ್ಣನವರು ಚೆನ್ನಮಲ್ಲೇಶ್ವರರಿಂದ ದೀಕ್ಷೆಯನ್ನು ಪಡೆದರು. ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯ ನಡವಳಿಕೆಗಳನ್ನು ತೊಡೆದು ಹಾಕಿದ ಕೀರ್ತಿ ಶರಣ ಅಪ್ಪಣ್ಣನಿಗೆ ಸಲ್ಲುತ್ತದೆ. ತನ್ನ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪ್ರಾಮಾಣಿಕವಾಗಿ ಕಾಯಕ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ರಕ್ಷಾ ಕವಚವಾಗಿ, ಅವರ ಬಲಗೈ ಭಂಟನಾಗಿ, “ವಿಶ್ವದ ಪ್ರ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ” ಎಂದೇ ಪ್ರಸಿದ್ಧವಾದ ಅನುಭವ ಮಂಟಪದಲ್ಲಿ ಬಸವಣ್ಣನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ಷಮತೆ ಮೆರೆದವರು.
ಬೆಳಗೆದ್ದು ಹಡಪದ( ಕ್ಷೌರಿಕ ) ನ ಮುಖವನ್ನು ನೋಡಿದರೆ ಅಪಶಕುನ ಎಂದು ಪರಿಭಾವಿಸಿದ್ದ ಆ ಕಾಲದಲ್ಲಿ ” ತಮ್ಮನ್ನು ಕಾಣಲು ಬರುವ ಯಾವ ವ್ಯಕ್ತಿಯಾದರೂ ಸರಿ, ಮೊದಲು ತನ್ನ ಕಾರ್ಯದರ್ಶಿ ಹಡಪದ ಅಪ್ಪಣ್ಣನನ್ನು ನೋಡಿಯೇ ತನ್ನ ಬಳಿಗೆ ಬರತಕ್ಕದ್ದು ” ಎನ್ನುವ ಬಸವಣ್ಣನವರ ನಿಯಮ ಅವರು ಶರಣ ಅಪ್ಪಣ್ಣನವರಿಗೆ ನೀಡಿದ್ದ ಆದ್ಯತೆ ಹಾಗೂ ಅವನ ಮೇಲಿನ ನಂಬಿಕೆ,ವಿಶ್ವಾಸ, ಗೌರವಾದರ ಸಂಕೇತವಾಗಿದೆ.
ಕಾಯಕ ನಿಷ್ಠೆ, ದಾಸೋಹ, ಆಚಾರ -ವಿಚಾರ ಇತ್ಯಾದಿಗಳ ಬಗೆಗಿನ ಹಡಪದ ಅಪ್ಪಣ್ಣನ ಚಿಂತನೆಗಳು ಅವರು ರಚಿಸಿದ ವಚನಗಳಲ್ಲಿ ಬಿಂಬಿತವಾಗಿವೆ. ಜನ ಸಮುದಾಯದಲ್ಲಿದ್ದ ಮೂಢ ನಂಬಿಕೆ ಹಾಗೂ ಶೋಷಣೆಯನ್ನು ವಚನಗಳ ಮೂಲಕವೇ ತೀವ್ರವಾಗಿ ಖಂಡಿಸುತ್ತಾ, ಪ್ರಾಮಾಣಿಕವಾಗಿ ತನ್ನ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂತೋಷವಾಗಿದ್ದ ಹಡಪದ ಅಪ್ಪಣ್ಣನನ್ನು ಜಗಜ್ಯೋತಿ ಬಸವಣ್ಣನವರು ” ನಿಜ ಸುಖಿ ” ಎಂದೇ ಕರೆದರು. ಇವರು ಸುಮಾರು ಇನ್ನೂರ ಐವತ್ತು (250) ವಚನಗಳನ್ನು ರಚಿಸಿದ್ದು ಅವೆಲ್ಲವೂ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಪೂರ್ವ ಕೊಡುಗೆಯೇ ಆಗಿವೆ.
” ನುಡಿದರೆ ಗುರುವಾಗಿ ನುಡಿಯಬೇಕು
ನಡೆದರೆ ಪರವಾಗಿ ನಡೆಯಬೇಕು
ಕುಳಿತರೆ ಲಿಂಗವಾಗಿ ಕುಳಿತಿರಬೇಕು
ಇದ್ದರೆ ಜಂಗಮನಾಗಿ ಇರಬೇಕು
ಈ ನಾಲ್ಕರ ಹೊಂದಿಕೆಯನ್ನರಿಯದವನು ಎಷ್ಟು ದಿನವಿದ್ದರೂ ಫಲವೇನು ಹೇಳಾ…
ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ..
ಎನ್ನುವ ಶರಣ ಹಡಪದ ಅಪ್ಪಣ್ಣ ನಮ್ಮ ನಡೆ ನುಡಿ ಬದುಕೆಲ್ಲ ಗುರು ಲಿಂಗ ಜಂಗಮ ಎನ್ನುವ ತ್ರಿವಿಧಗಳಿಗೆ ಮೆಚ್ಚುಗೆಯಾಗುವಂತಿರಬೇಕು ಎಂದಿದ್ದಾರೆ. ನಮ್ಮ ನಡೆಗೂ ನುಡಿಗೂ ಸಾಮರಸ್ಯವಿರಬೇಕು ಎನ್ನುವುದನ್ನು ” ನುಡಿದರೇನಯ್ಯಾ.. ನಡೆ ಇಲ್ಲದನ್ನಕ್ಕ…
ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ” ಎಂಬ ವಚನನ ಮುಖೇನ ಪ್ರತಿಪಾದಿಸಿದ್ದಾರೆ.
” ಮನವನರಿದವಂಗೆ ಮತದ ಹಂಗೇಕೋ… ನಿತ್ಯವನರಿದಂಗೆ ತೀರ್ಥದ ಹಂಗೇಕೋ ” ಎನ್ನುವ ಮೂಲಕ ಜಾತಿ ಮತ ದೇವರುಗಳ ವಿಚಾರವಾಗಿ ಜನ ಮನದಲ್ಲಿಇರಬೇಕಾದ ಅರಿವಿನ ಸ್ಪಷ್ಟ ಚಿತ್ರಣ ಮೂಡಿಸುತ್ತಾ ” ಅರಿವೆಂಬುದೇ ಆಚಾರ, ಆಚಾರವೆಂಬುದೇ ಅರಿವು ” ಎಂದು ವಚನಗಳ ಮೂಲಕ ಸಾರಿದ್ದಾರೆ.
ಹೆಸರು ಮತ್ತು ಕೀರ್ತಿ ನಮ್ಮನ್ನರಸಿ ಬರಬೇಕೇ ಹೊರತು ಮನುಷ್ಯ ಅವುಗಳನ್ನು ಅರಸಿ ಹೋಗಬಾರದು ಎನ್ನುವ ಅವರ ನಿಲುವು ” ವಂದನೆಗಾಗಿ ನಿಲ್ಲಬೇಡ, ನಿಂದೆಗಂಜಿ ಓದಬೇಡ, ” ಎನ್ನುವ ವಚನದ ಮೂಲಕ ವ್ಯಕ್ತವಾದರೆ ” ದ್ವಂದ್ವ ಬುದ್ಧಿಯ ಕಳೆದು ನಿಂತವನ ಬಸವ ಪ್ರಿಯ ಕೂಡಲಚೆನ್ನಬಸವಣ್ಣ ಪೊರೆವ ” ಎನ್ನುವ ವಚನದಲ್ಲಿ ನಾವು ಇತರರ ಸಮ್ಮುಖದಲ್ಲಿ ಆಡುವ ಮಾತಿಗೂ ಅವರ ಹಿಂದೆ ಅವರ ಬಗ್ಗೆ ಪರರೊಂದಿಗೆ ಆಡುವ ಮಾತಿಗೂ ವ್ಯತ್ಯಾಸವಿರಬಾರದು ಎನ್ನುವ ವಿವೇಕವಿದೆ. ಕಲ್ಯಾಣ ಕ್ರಾಂತಿಯ ವರೆಗೂ ಬಸವಣ್ಣನ ಜೊತೆಯಲ್ಲಿಯೇ ಇದ್ದು ತದ ನಂತರ ಕೂಡಲಸಂಗಮಕ್ಕೆ ತೆರಳಿ ಅಲ್ಲಿ ಲಿಂಗೈಕ್ಯರಾದ ಹಡಪದ ಅಪ್ಪಣ್ಣನ ಸರಳ ವ್ಯಕ್ತಿತ್ವ ಮತ್ತು ಉದಾತ್ತ ಚಿಂತನೆಗಳು ಆದರ್ಶಪ್ರಾಯ ಮತ್ತು ಅನುಕರಣೀಯ.
ತನ್ನ ಕಾಯಕ ಮತ್ತು ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ 892 ನೇ ಜನುಮ ದಿನಾಚರಣೆಯನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ.
ಜಯಲಕ್ಷ್ಮಿ ಕೆ
ಮಡಿಕೇರಿ.



