ಕಾವ್ಯ ಸಂಗಾತಿ
ಜ್ಯೋತಿ ಮಾಳಿ
ಗಜಲ್


ಮಾತು ಮನವ ಕೆದುಕುವಾಗ ಮೌನವೇ ಉತ್ತಮ
ಸತ್ಯ ಬದುಕು ಕದಡುವಾಗ ಮೌನವೇ ಉತ್ತಮ
ಸಂಭಾಷಣೆ ಸಂಪ್ರೀತಿಯಿಂದ ಕೂಡಿದರೆ ರಸಗವಳ
ನುಡಿಯಲಿ ಹುಡಿ ಹಾರುವಾಗ ಮೌನವೇ ಉತ್ತಮ
ಮಾತು ಹೃದಯ ಹೃದಯಗಳನು ಕಟ್ಟಿ ಆಳಬಹುದು
ಅರಿಕೆಯಿಂದ ಅಪಾಯವೆಂದಾಗ ಮೌನವೇ ಉತ್ತಮ
ನುಡಿದರೆ ಈ ಜಗವು ಮೆಚ್ಚಿ ಹಾರ ಹಾಕುವಂತಿರಬೇಕು
ನಡೆ ನುಡಿಗಳು ಬೇರೆಯಾದಾಗ ಮೌನವೇ ಉತ್ತಮ
ಒಲವು ಗೆಲುವುಗಳು ಸೇಡಿನ ಕಿಡಿಯಲಿ ಸುಡುತಿವೆ ಸಾಕಿ
ಜ್ಯೋತಿ ಬೆಳಗದೆ ಬೂದಿಯಾದಾಗ ಮೌನವೇ ಉತ್ತಮ
ಜ್ಯೋತಿ ಮಾಳಿ ಬೆಳಗಾವಿ



