ಕಾವ್ಯ ಸಂಗಾತಿ
ಡಾ. ನಟರಾಜ್ ಆರ್ಯ
“ಅರಳಿಯ ನೆರಳು”


ಬೆಟ್ಟ ಗುಡ್ಡದ ತೋಳಲಿ
ಕೆರೆಯೂರ ಕೇರಿ;
ಅರಳಿಯ ನೆರಳಲಿ
ಊರು ಉಸಿರಾಡಿತು.
ಕರುಗಳ ಮೊರೆ,
ಒಲೆ ಹೊಗೆ,
ಒನಕೆಯ ತಾಳಕೆ
ಬೆಳಗು ಮೂಡಿತು.
ಹುಟ್ಟು ಬಂದರೆ
ಅರಳಿಯ ಕೆಳಗೆ;
ಸಾವು ಬಂದರೂ
ಅರಳಿಯ ಕೆಳಗೆ.
“ಅರಳಿ ಕಡೀಬೇಡಯ್ಯ…
ಒಳಗ ದೇವರಿರ್ತಾರೆ…”
ಹಿರಿಯರ ನುಡಿ
ಗಾಳಿಯಲಿ ತೇಲಿತು.
ಹೊನ್ನಯ್ಯನ ಕೊಡಲಿ
ಬೇರಿಗೆ ಇಳಿಯಿತು.
ಕೊಂಬೆ ಮುರಿಯಿತು.
ಗೂಡು ಉದುರಿತು.
ಮರಿ ಬಿತ್ತು.
ಊರು ಮೌನವಾಯಿತು.
ತಾಯಿಹಕ್ಕಿ ಅತ್ತಿತು;
ಗಾಳಿ ನಿಟ್ಟುಸಿರಿಟ್ಟಿತು;
ಅರಳಿಯ ಎಲೆಗಳು
ಮಾತಿಲ್ಲದೆ ಉದುರಿದವು.
ಅರಳಿ ಬಿದ್ದ ಮೇಲೆ
ಬಿಸಿಲು ಹರಡಿತು;
ಕೇರಿಯ ದಾರಿಯಲಿ
ನೆರಳು ಕಳೆದುಹೋಯಿತು.
ಹೂವಯ್ಯ
ಕಣ್ಣು ಮುಚ್ಚಿದ.
ಅರಳಿ ಬಿದ್ದ ಜಾಗದಲ್ಲಿ
ಇಂದಿಗೂ
ಗಾಳಿ ಬೀಸಿದರೆ
ಮೌನ ಅಲುಗಾಡುತ್ತಿದೆ.
ಡಾ. ನಟರಾಜ್ ಆರ್ಯ




ನನಗೆ ನನ್ನ ಬಾಲ್ಯ ಮತ್ತು ನನ್ನ ಹಳ್ಳಿ ಕಣ್ಣಿಗೆ ಕಟ್ಟಿದ ಹಾಗಾಯತು ನಿಮ್ಮ ಕವಿತೆ ಧನ್ಯವಾದಗಳು ಸರ್