ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಬೆಟ್ಟ ಗುಡ್ಡದ ತೋಳಲಿ
ಕೆರೆಯೂರ ಕೇರಿ;
ಅರಳಿಯ ನೆರಳಲಿ
ಊರು ಉಸಿರಾಡಿತು.

ಕರುಗಳ ಮೊರೆ,
ಒಲೆ ಹೊಗೆ,
ಒನಕೆಯ ತಾಳಕೆ
ಬೆಳಗು ಮೂಡಿತು.

ಹುಟ್ಟು ಬಂದರೆ
ಅರಳಿಯ ಕೆಳಗೆ;
ಸಾವು ಬಂದರೂ
ಅರಳಿಯ ಕೆಳಗೆ.

“ಅರಳಿ ಕಡೀಬೇಡಯ್ಯ…
ಒಳಗ ದೇವರಿರ್ತಾರೆ…”
ಹಿರಿಯರ ನುಡಿ
ಗಾಳಿಯಲಿ ತೇಲಿತು.

ಹೊನ್ನಯ್ಯನ ಕೊಡಲಿ
ಬೇರಿಗೆ ಇಳಿಯಿತು.

ಕೊಂಬೆ ಮುರಿಯಿತು.
ಗೂಡು ಉದುರಿತು.
ಮರಿ ಬಿತ್ತು.
ಊರು ಮೌನವಾಯಿತು.

ತಾಯಿಹಕ್ಕಿ ಅತ್ತಿತು;
ಗಾಳಿ ನಿಟ್ಟುಸಿರಿಟ್ಟಿತು;
ಅರಳಿಯ ಎಲೆಗಳು
ಮಾತಿಲ್ಲದೆ ಉದುರಿದವು.

ಅರಳಿ ಬಿದ್ದ ಮೇಲೆ
ಬಿಸಿಲು ಹರಡಿತು;
ಕೇರಿಯ ದಾರಿಯಲಿ
ನೆರಳು ಕಳೆದುಹೋಯಿತು.

ಹೂವಯ್ಯ
ಕಣ್ಣು ಮುಚ್ಚಿದ.

ಅರಳಿ ಬಿದ್ದ ಜಾಗದಲ್ಲಿ
ಇಂದಿಗೂ
ಗಾಳಿ ಬೀಸಿದರೆ
ಮೌನ ಅಲುಗಾಡುತ್ತಿದೆ.


About The Author

6 thoughts on “ಡಾ. ನಟರಾಜ್ ಆರ್ಯ ಅವರ ಕವಿತೆ “ಅರಳಿಯ ನೆರಳು””

  1. ನನಗೆ ನನ್ನ ಬಾಲ್ಯ ಮತ್ತು ನನ್ನ ಹಳ್ಳಿ ಕಣ್ಣಿಗೆ ಕಟ್ಟಿದ ಹಾಗಾಯತು ನಿಮ್ಮ ಕವಿತೆ ಧನ್ಯವಾದಗಳು ಸರ್

  2. ಈ ಕವಿತೆ ನಮ್ಮ ಈಗಿನ ಪರಿಸ್ಥಿತಿಯನ್ನು ಬಣ್ಣಿಸುತ್ತದೆ..ಬಹಳ ಅರ್ಥಪೂರ್ಣವಾಗಿ ಈ ಕವಿತೆ ಮೂಡಿ ಬಂದಿದೆ..ಈ ಕವಿತೆ ಭಾವನೆ ಮತ್ತು ಮನುಷ್ಯನ ಜೀವನದ ಅದೋಗತಿಯನ್ನು ಪ್ರತಿಬಿಂಬಿಸುತ್ತದೆ..
    ನಟರಾಜ್ ಸರ್ ಅಭಿನಂದನೆಗಳು ಇಂಥ ಅದ್ಭುತ ಕವಿತೆಗೆ.

  3. ಡಾ.ಎಚ್. ನಟರಾಜ್ ಅವರು ಈಗಾಲೇ ಕಾವ್ಯ ಕ್ಷೇತ್ರದಲ್ಲಿ ವಿಹಾರ ಮಾಡಿದ್ದಾರೆ. ಅವರ ಕವಿತೆಗಳು ಸಾಕಷ್ಟು ಸಂಚಲನ ಮೂಡಿಸಿವೆ. ಈ ಕವಿತೆಯೂ ಮಣ್ಣಿನ ಗುಣದ ಸಂಸ್ಕೃತಿ ಬಿಂಬಿಸಿದೆ. ಅಭಿನಂದನೆಗಳು ಸರ್.

  4. ಜೀವ ವೃಕ್ಷದ ಬಗ್ಗೆ ಬರೆದ ಈ ಕವಿತೆ, ಎಲ್ಲರಿಗೂ ಪಾಠ.

Leave a Reply

You cannot copy content of this page

Scroll to Top