ವೈದ್ಯ ಸಂಗಾತಿ
ಡಾ.ಸೌಮ್ಯ ಕೆ.ವಿ.
“ಅಯ್ಯೋ… ನಾನೇಕೆ ವೈದ್ಯಳಾದೆ?!”
ವೈದ್ಯ ದಿನಾಚರಣೆ ಅಂಗವಾಗಿ


ಪ್ರತಿ ವರ್ಷ ಜುಲೈ 1 ಬಂತೆಂದರೆ ಸಾಕು, ಮೊಬೈಲ್‌ನಲ್ಲಿ ‘ಹ್ಯಾಪಿ ಡಾಕ್ಟರ್ಸ್ ಡೇ’ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತದೆ. ಅನೇಕ ವರ್ಷಗಳ ಹಿಂದೆ ಇದೇ ದಿನ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..
ಪಿಯುಸಿ ಮುಗಿದಾಗ ನನ್ನೆದುರು ಎರಡು ದಾರಿಗಳಿದ್ದವು—ಒಂದು ಇಂಜಿನಿಯರಿಂಗ್, ಮತ್ತೊಂದು ವೈದ್ಯಕೀಯ. ಏನೋ ಒಂದು ಸಾಧನೆ ಮಾಡಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ನಾನು ಆರಿಸಿಕೊಂಡಿದ್ದು ಬಿಳಿ ಕೋಟಿನ ವೈದ್ಯಕೀಯ ವೃತ್ತಿಯನ್ನು.
ಆದರೆ ವಾಸ್ತವದ ದಿನಗಳು ಆರಂಭವಾದಾಗ ಹೋಲಿಕೆಯೆಂಬ ಭೂತ ಕಾಡತೊಡಗಿತು. ನನ್ನ ಜೊತೆಯಲ್ಲೇ ಇಂಜಿನಿಯರಿಂಗ್ ಆರಿಸಿಕೊಂಡ ಗೆಳೆಯರೆಲ್ಲಾ ನಾಲ್ಕೇ ವರ್ಷಕ್ಕೆ ಓದು ಮುಗಿಸಿ, ಕೈತುಂಬಾ ಸಂಬಳ ಗಳಿಸುತ್ತಾ, ಕಾರು-ಬಂಗಲೆ ಎಂದು ಸೆಟಲ್ ಆಗಿಬಿಟ್ಟಿದ್ದರು. ಇತ್ತ ನಾನೋ ಐದೂವರೆ ವರ್ಷದ ಎಂಬಿಬಿಎಸ್, ಆಮೇಲೆ ಪೋಸ್ಟ್ ಗ್ರಾಜುಯೇಷನ್, ಹಗಲು-ರಾತ್ರಿ ಎನ್ನದೆ ಡ್ಯೂಟಿ, ಎಕ್ಸಾಮ್ಸ್… ಹೀಗೆ ಜೀವನದ ಅಮೂಲ್ಯ ದಿನಗಳನ್ನು ಪುಸ್ತಕಗಳ ಮಧ್ಯೆಯೇ ಕಳೆದುಬಿಟ್ಟಿದ್ದೆ. ಗೆಳೆಯರು ಗಳಿಕೆಯನ್ನು ಎಣಿಸುತ್ತಿದ್ದರೆ, ನಾನು ಇನ್ನೂ ಕರಿಯರ್ ರೂಪಿಸಿಕೊಳ್ಳುವ ಹೋರಾಟದಲ್ಲಿದ್ದೆ. ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಮೂಡಿಬಿಡುತ್ತಿತ್ತು—”ಅಯ್ಯೋ… ನಾನೇಕೆ ವೈದ್ಯಳಾದೆ?!”
ಒಮ್ಮೆ ವೈದ್ಯರ ದಿನದ ಪ್ರಯುಕ್ತ ನನ್ನ ಇಂಜಿನಿಯರಿಂಗ್ ಗೆಳತಿ ಟ್ರೀಟ್ ಕೊಡಿಸೆಂದು ಒತ್ತಾಯ ಮಾಡಿದಳು. ಅವಳಂತೆ ಐಷಾರಾಮಿ ಹೋಟೆಲ್ ನಲ್ಲಿ ಟ್ರೀಟ್ ಕೊಡುವಷ್ಟು ನನ್ನ ಪರ್ಸ್ ಭಾರವಿರಲಿಲ್ಲ. ಹೀಗಾಗಿ ಚಾಟ್ಸ್ ತಿನ್ನಲು ಬೀದಿ ಬದಿಯ ಗಾಡಿಯೊಂದರ ಬಳಿ ಹೋಗಿದ್ದೆವು. ತಿನ್ನುತ್ತಿರುವಾಗ, ಆ ಚಾಟ್ಸ್ ಅಂಗಡಿಯಾತ ನನ್ನನ್ನು ಗುರುತಿಸಿ ಅತ್ಯಂತ ಪ್ರೀತಿ, ಗೌರವದಿಂದ ಮಾತನಾಡಿಸಿದ. ಅಷ್ಟೇ ಅಲ್ಲ, ಕೊನೆಯಲ್ಲಿ ಹಣ ನೀಡಲು ಹೋದಾಗ ಕೈಮುಗಿದು, “ಬೇಡ ಮೇಡಂ, ದುಡ್ಡು ತಗೋಳಲ್ಲ” ಎಂದ. ನಾನು ಆಶ್ಚರ್ಯದಿಂದ ನೋಡಿದಾಗ, ಕೃತಜ್ಞತೆಯ ಕಣ್ಣುಗಳಿಂದ ಅವನು ನೆನಪಿಸಿದ—”ಅಂದು ಮಧ್ಯರಾತ್ರಿ ನನ್ನ ಮಗನಿಗೆ ತಲೆಗೆ ಬಲವಾದ ಗಾಯವಾಗಿ ರಕ್ತ ಸುರಿಯುತ್ತಿದ್ದಾಗ, ನೀವೇ ಹೊಲಿಗೆ ಹಾಕಿ ಗುಣಪಡಿಸಿದ್ರಿ . ಆ ಉಪಕಾರಕ್ಕೆ ಬೆಲೆ ಕಟ್ಟೋಕಾಗುತ್ತಾ?”
ಅವನ ಕಣ್ಣಲ್ಲಿದ್ದ ಆ ದೈವಿಕ ಕೃತಜ್ಞತೆಯನ್ನು ನೋಡಿ ನನ್ನ ಪಕ್ಕದಲ್ಲಿದ್ದ ಇಂಜಿನಿಯರಿಂಗ್ ಗೆಳತಿ ಸಂಪೂರ್ಣ ಆಶ್ಚರ್ಯಚಕಿತಳಾಗಿ ಮೂಕವಿಸ್ಮಿತಳಾದಳು. ಹಣದಿಂದ ಕೊಳ್ಳಲಾಗದ ಕೋಟಿ ರೂಪಾಯಿಯ ಗೌರವ ಅದಾಗಿತ್ತು.
ಆ ಕ್ಷಣ ನನ್ನ ಕಣ್ಣುಗಳು ತೇವಗೊಂಡವು. ಇಂಜಿನಿಯರಿಂಗ್ ಗೆಳೆಯರು ಗಳಿಸಿದ್ದು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದರೆ, ಒಬ್ಬ ವೈದ್ಯಳಾಗಿ ನಾನು ಗಳಿಸಿದ್ದು ಜನರ ಅಭಿಮಾನ, ಪ್ರೀತಿ ಮತ್ತು ಕೋಟ್ಯಂತರ ರೂಪಾಯಿ ಕೊಟ್ಟರೂ ಸಿಗದ ಆಶೀರ್ವಾದ. ಆ ಕ್ಷಣವೇ ನನ್ನೊಳಗಿನ ವಿಷಾದ ಮಾಯವಾಗಿ, ಹೆಮ್ಮೆಯಿಂದ ಹೃದಯ ಹೇಳಿತು—”ನಾನು ವೈದ್ಯಳಾಗಿದ್ದು ವ್ಯರ್ಥವಾಗಲಿಲ್ಲ!”
-ಡಾ ಸೌಮ್ಯ ಕೆ.ವಿ.



