ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ

ರಂಗ ಸಂಗಾತಿ “ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ ರಚನೆ  : ಎಚ್ ಎಸ್ ಶಿವಪ್ರಕಾಶ್ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನಆಡಳಿತಾಧಿಕಾರಿಕನ್ನಡ ಪುಸ್ತಕ ಪ್ರಾಧಿಕಾರಪ್ರಥಮ ಮುದ್ರಣ  : 2011ಪುಟಗಳು : 534 ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತುಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು. ವೆಂಕಟೇಶ ಈಡಿಗರ*ರಾಣೇಬೆನ್ನೂರು**9008698311*

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ Read Post »

ಪುಸ್ತಕ ಸಂಗಾತಿ

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ

ಪುಸ್ತಕ ಸಂಗಾತಿ ವೆಂಕಟೇಶ ಈಡಿಗರ “ಸಾವಿರದ ಶರಣವ್ವ ಕನ್ನಡದ ತಾಯೇ“ ಅಂಕಿತ ಪ್ರಕಾಶನಪ್ರಕಾಶಕರು ಮತ್ತು ಮಾರಾಟಗಾರರು53ˌ ಶಾಮ್ ಸಿಂಗ್ ಕಾಂಪ್ಲೆಕ್ಸ್ಗಾಂಧಿ ಬಜಾರ್ .ಮುಖ್ಯ ರಸ್ತೆಬಸವನಗುಡಿ. ಬೆಂಗಳೂರುಪುಸ್ತಕದ ಬೆಲೆ — 250 ರೂ ಜನಪದವೇ ಜನಾನುರಾಗದ ಮೂಲಮಂತ್ರ ಎಂದು ನಂಬಿ ಮುನ್ನೆಡೆಯುತ್ತಿರುವ ಬಿತ್ತಿ ಬೆಳೆಸುತ್ತಿರುವ  ಹಿರಿಯ ಸಾಹಿತಿˌ  ನಾಟಕಕಾರರು ಹಾಗೂ ಜನಪದ ಕಲಾವಿದರಾದ ಚಂದ್ರಶೇಖರ ಕಂಬಾರರು ನೆಲಮೂಲ ಸಂಸ್ಕೃತಿಯಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕˌ ಕಾವ್ಯ. ಕಾದಂಬರಿ ಕಥೆ. ರೂಪಕ ಮುಂತಾದ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ ಮತ್ತು ರಚಿಸುತ್ತಿದ್ದಾರೆ. ರಂಗಭೂಮಿˌ ಸಿನಿಮಾ ಪತ್ರಿಕೆ ಮುಂತಾದ ಹಲವು ಮಾಧ್ಯಮಗಳಲ್ಲಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಕಲೆಗಳ ತಾಯಿಬೇರಿನಂತಿರುವ ಜನರ ಜೀವನ ವಿಧಾನದ ಮೂಲ ಸೆಲೆ ಜನಪದ ಚಟುವಟಿಕೆಗಳು ಜೀವನುತ್ಸಾಹದ ಸೆಲೆಗಳು ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ.  ಜೀವನದ ಜೀವಾಳ ಎಂದಿದ್ದಾರೆ.ಕನ್ನಡ ರಂಗಭೂಮಿಯ ಹಿರಿಮೆ ಪಾಲುದಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟು ಅದರ ಸೊಗಸನ್ನು ಮುಂದಿನ ಪೀಳಿಗೆಗೆ ಧಾರೆಯಾಗಿ ಎರೆದವರು. ಜನಪದ ಸಂಗೀತˌ ಜನಪದ ಸಾಹಿತ್ಯ ಹಾಗೂ ಜನಪದ ನಾಟಕಗಳನ್ನು ರಚಿಸುವುದರಿಂದಲೇ ನಾಡಿನ ನೆಲಮೂಲ ಸಂಸ್ಕೃತಿಗೆ ಘನತೆ ತಂದವರು. ಅದರಲ್ಲೂ ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಹಿರಿಯರಿಗಾಗಿ ಅನೇಕ ಪತಿಹಾಸಿಕ. ಜನಪದ. ವಾಸ್ತವವಾದಿ ಮುಂತಾದ ವಿಷಯಗಳನ್ನಿಟ್ಟುಕೊಂಡು ನಾಟಕ ರಚಿಸಿದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಿರುವುದರಿಂದ   *ಸಾವಿರದ ಶರಣವ್ವ ಕನ್ನಡದ ತಾಯೇ* ಎಂಬ ಏಕಾಂಕ ನಾಟಕಗಳ ಸಂಕಲವನ್ನು  ಮಕ್ಕಳಿಗಾಗಿ ರಚಿಸಿದ್ದಾರೆ. ಇನ್ನೂರ ನಾಲ್ಕು ಪುಟಗಳಿರುವ ಈ ಪುಸ್ತಕವನ್ನು ಕ್ರಿ ಶ 2023 ರಲ್ಲಿ  ಅಂಕಿತ ಪ್ರಕಾಶನವು ಮುದ್ರಣಗೊಳಿಸಿದೆ. ಮಕ್ಕಳಿಗಾಗಿಯೇ ರಚನೆಗೊಂಡ ಈ ಕೃತಿಯು ಹನ್ನೆರಡು ಏಕಾಂಕ ನಾಟಕಗಳನ್ನು ಒಳಗೊಂಡಿದೆ.ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳು ಪ್ರದರ್ಶನ ಮಾಡುವ  ಮಕ್ಕಳ ನಾಟಕಗಳೇ ರಚನೆಯಾಗುತ್ತಿಲ್ಲ. ಮತ್ತು  ರಚಿಸುವವರಿಲ್ಲ ಎಂಬ ಕೊರಗನ್ನು ಚಂದ್ರಶೇಖರ ಕಂಬಾರರು ಹೋಗಲಾಡಿಸಿದವರು. ಕಂಬಾರರೇ ರಚಿಸಿರುವ ಅಲಿಬಾಬ ಮತ್ತು 40 ಜನ ಕಳ್ಳರು. ಪುಷ್ಪರಾಣಿ ಮುಂತಾದ ಮಕ್ಕಳ ನಾಟಕಗಳಿವೆ. ಇವುಗಳ ಜೊತೆಗೆ ಮಕ್ಕಳು ಸುಲಭವಾಗಿ ಅಭಿನಯಿಸಬಹುದಾದ ಹನ್ನೆರಡು ನಾಟಕಗಳನ್ನು *ಸಾವಿರದ ಶರಣವ್ವ ಕನ್ನಡದ ತಾಯೆ* ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ. ಇವು ಜನಪದˌ ಪೌರಾಣಿಕ. ಐತಿಹಾಸಿಕ ನಾಟಕಗಳ ವಸ್ತು ಒಳಗೊಂಡವುಗಳಾಗಿವೆ.ತಂದೆ ಮಾತನ್ನು ಪರಿಪಾಲಿಸಿ ತಾಯಿಯ ಶಿರವನ್ನು ಕಡಿದ ಪರಶುರಾಮˌ  ವೀರ ಮೈಯೂರˌ ಚಾಲುಕ್ಯರ ಚಕ್ರೇಶ್ವರˌ ರಾಷ್ಟೃಕೂಟ ದೊರೆ ಅಮೋಘವರ್ಷ ನೃಪತುಂಗˌ ಬಾಹುಬಲಿˌ ಕಲ್ಯಾಣದ ಕೂಗುˌ  ಜಕಣಾಚಾರ್ಯˌ ಸಾಮ್ರಾಜ್ಯದ ಕತೆ. (ವಿಜಯನಗರ ಸಾಮ್ರಾಜ್ಯ ಸ್ಥಾಪನೆ)ˌ ಪುರಂದರದಾಸರುˌ ಸಾವಳಿಗಿ ಶಿವಲಿಂಗˌ ಕೆಂಪೇಗೌಡ ಹಾಗೂ ಕಿತ್ತೂರು ಚನ್ನಮ್ಮ  ಎಂಬ ಹನ್ನೆರಡು ನಾಟಕಗಳು ಮಕ್ಕಳಲ್ಲಿ ಕನ್ನಡ ನಾಡಿನ ವಿವಿಧ ಕಾಲಘಟ್ಟದ ಸಾಮಾಜಿಕ. ರಾಜಕೀಯˌ ಸಂಸ್ಕೃತಿˌ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯನ್ನು ತಿಳಿಸಲು ಸಹಕಾರಿಯಾಗಿವೆ.ಪಿತೃ ವಾಕ್ಯ ಪರಿಪಾಲಕನಾಗಿ ತಾಯಿಯ ಶಿರವನ್ನೇ ಕಡಿದ ಪರಶುರಾಮನ ಕತೆಯು ಕೊನೆಗೆ ತಾಯಿಯ ಜೀವವನ್ನೇ ವರವಾಗಿ ಪಡೆದು ತನ್ನ ಮಾತೃಹತ್ಯೆಯ ದೋಷದಿಂದ ಮುಕ್ತನಾಗುವ ಕತೆ ತಂದೆ ಮತ್ತು ತಾಯಿಯ ಮಹತ್ವವನ್ನು ಸಾರುತ್ತದೆ. ಕನ್ನಡದ ಮೊದಲ ಸಾಮ್ರಾಜ್ಯವೆಂದೆ ಹೇಳಿಕೊಳ್ಳಬಹುದಾದ ಕದಂಬ ವಂಶ ಸಂಸ್ಥಾಪಕನಾದ ಮೈಯೂರ ವರ್ಮ ಮೈಯೂರಶರ್ಮನಾಗಿ ಸಾಮ್ರಾಜ್ಯ ಕಟ್ಟಿದ ಕತೆಯಾಗಿದೆ. ಚಾಲುಕ್ಯ ಚಕ್ರೇಶ್ವರ ಎಂದು ಖ್ಯಾತನಾದ ಹಿಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರನಾಗಿ ಉತ್ತರದ ಹರ್ಷವರ್ಧನನ್ನು ಸೋಲಿಸಿದ ಸಾಹಸದ ಕತೆಯನ್ನು ಮನೋಜ್ಞವಾಗಿ ವಿವರಿಸಲಾಗಿದೆ.   ರಾಷ್ಟೃಕೂಟರ ಸಂಸ್ಥಾಪಕ ಅಮೋಘವರ್ಷ ನೃಪತುಂಗನು ಕನ್ನಡವನ್ನು ಹೇಗೆ ಉತ್ತುಂಗ ಮಟ್ಟಕ್ಕೆ ಹೊಯ್ದನು ಎಂದು ತಿಳಿಸುತ್ತದೆ.ಭರತ ಮತ್ತು ಬಾಹುಬಲಿಯ ಕತೆಯಂತೂ ತಿಳಿಯೇ ಇದೆ . ಚಕ್ರರತ್ನದ ಮೂಲಕ ಸಹೋದರರೆಲ್ಲರನ್ನೂ ಜಯಿಸಿದ ಭರತ ತಮ್ಮ ಬಾಹುಬಲಿಯನ್ನು ಸಕಲ ಯುದ್ದದಲ್ಲೂ ಗೆಲ್ಲಲಾಗದೆ ಕೊನೆಗೆ ಅಣ್ಣ ಭರತನಿಗೆ ಸಾಮ್ರಾಜ್ಯವನ್ನೇ ಬಿಟ್ಟು ಬಾಹುಬಲಿ ಶ್ರವಣಬೆಳಗೋಳಕ್ಕೆ ಹೋದ ಕತೆಯನ್ನು ಹೇಳುತ್ತದೆ. *ಕಲ್ಯಾಣದ ಕೂಗು* ನಾಟಕವು ಹನ್ನೆರಡನೇ ಶತಮಾನದ ಕಲ್ಯಾಣದ ಕ್ರಾಂತಿಯ ವಸ್ತುವನ್ನು ಹೊಂದಿದೆ. ಅಂತರ್ಜಾತಿ ವಿವಾಹ ಮಾಡಿ ಕ್ರಿಂತಿಗೆ ಕಾರಣನಾದ ಬಸವಣ್ಣ ಮತ್ತು ಶರಣರನ್ನು  ಬ್ರಾಹ್ಮಣ ಕುಲದವರು ಹೇಗೆ ಓಡಾಡಿಸಿ ಕೊಂದರು ಎಂಬ ಕತೆಯನ್ನು ವಿವರಿಸುತ್ತದೆ. ಶಿಲ್ಪಕಲೆಯ ಜತುರನಾದ ಜಕಣಾಚಾರ್ಯ ಮತ್ತು ಆತನ ಕೌಟುಂಬಿಕ ಕತೆಯನ್ನು ಅರುಹುವ *ಜಕಣಿಚಾರ್ಯ* ನಾಟಕವು ಕಲೆ ರಕ್ತಗತವಾಗಿ ಬರುತ್ತದೆ ಎಂಬುದರ ಜೊತೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಕುಟುಂಬವನ್ನೇ ತೊರೆದು ಬಂದು ಹೊಯ್ಸಳರ ಆಸ್ಥಾನದಲ್ಲಿದ್ದ ಜಕಣಾಚಾರ್ಯರು ಕೊನೆಗೆ ತಂದೆಯನ್ನು ಹುಡುಕಿಕೊಂಡು ಬಂದ ಡಂಕಣನು ತಂದೆಯನ್ನು ಮೀರಿಸುವಷ್ಟು ಶಿಲ್ಪಕಲಾ ಪಂಡಿತನಂತೆ ಬೆಳೆಯುತ್ತಾನೆ.  *ಸಾಮ್ರಾಜ್ಯದ ಕತೆ* ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರ ಜೀವನ ಮತ್ತು ಸಾಮ್ರಾಜ್ಯ ಕಟ್ಟಿದ ಪರಿಯನ್ನು ವಿವರಿಸುತ್ತದೆ. *ಪುರಂದರದಾಸರು* ನಾಟಕವೂ ಇದೆ ಹನ್ನೆರಡನೆಯ ಶತಮಾನದ ಕತೆಯಾಗಿದ್ದು ಶ್ರೀನಿವಾಸನಾಯಕ ಎಂಬ ಶ್ರೀಮಂತ ಬಂಗಾರದ ವ್ಯಾಪಾರಿಯೊಬ್ಬನು ಜೀವನದಲ್ಲಿ ಭಕ್ತಿಯನ್ನು ಹೊತ್ತಿಸಿಕೊಂಡು ದಾಸನಾಗುತ್ತಾನೆ. ಅವನೇ ಪುರಂದರದಾಸ. ಈ ಕತೆಯನ್ನು ವಿವರಿಸುತ್ತದೆ.  ಕೆರೆಗೆ ಹಾರವಾದ ಕತೆಯಂತೆ ಬೆಳಗಾವಿಯ ಭಾಗದಲ್ಲೂ ಈ ಘಟನೆ ನಡೆಯುತ್ತದೆ. ಹಿಂದು — ಮುಸ್ಲಿಂ ಬೇಧವನ್ನು ತೊಡೆದು ಹಾಕಲು ಸೂಫಿ ಮತ್ತು ಭಕ್ತಿಪಂಥಗಳು ಉದಯವಾಗುತ್ತವೆ. ಅಂತೆಯೇ ಸಾವಳಿಗಿ ಶಿವಲಿಂಗನೂ ಸಾಮರಸ್ಯದ ಬದುಕಿಗೆ ನಾಂದಿಯಾಡುತ್ತಾನೆ.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೈಡರನ್ನು ವಿಜಯನಗರದ ಸಾಮಂತ ಅರಸರಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹಾಗೂ ಕೆರೆ ಕಟ್ಟೆ. ಕೋಟೆ ಅರಮನೆಗಳನ್ನು ಕಟ್ಟಿ ನಾಡಿನ ಸಮೃದ್ದಿಗೆ ಕಾರಣರಾದ ಇತಿಹಾಸವನ್ನು ಈ ನಾಟಕ ತಿಳಿಸಿಕೊಡುತ್ತದೆ.ಇಲ್ಲಿರುವ ಹನ್ನೆರಡು ನಾಟಕಗಳಲ್ಲಿ ಹಲವು ಜಾನಪದ ಕತೆಯ ಮೂಲವನ್ನು ಹೊಂದಿವೆ. ಕೆಲವು ಇತಿಹಾಸದ ವಸ್ತುವನ್ನು ಹೊಂದಿದ್ದು ಮತ್ತೆ ಕೆಲವು ಪೌರಾಣಿಕ ವಿಷಯಾಧಾರಿತ ನಾಟಕಗಳಾಗಿವೆ. ಎಲ್ಲವೂ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬಿತ್ತುವಂತವುಗಳೇ ಆಗಿವೆ. ಜನಪದ ಉಳಿದರೆ ಎಲ್ಲವೂ ಉಳಿದು ಬೆಳೆಯುತ್ತದೆ ಎಂಬ ಲೇಖಕರ ಆಶಯ ಇಲ್ಲಿನ ಎಲ್ಲಾ ನಾಟಕಗಳಲ್ಲಿ ಎದ್ದು ಕಾಣುತ್ತದೆ. ನಾಟಕಗಳ ಮೂಲಕ ಮಕ್ಕಳಲ್ಲಿ  ನೈತಿಕ ಪ್ರಜ್ಞೆ. ಇತಿಹಾಸದ ಜ್ಞಾನ ಹಾಗೂ ಪೌರಾಣಿಕ ಕತೆಗಳ ಅರಿವನ್ನು ಮೂಡಿಸುವ ಮೂಲಕ ವಿಚಾರವಂತರನ್ನಾಗಿ ಮಾಡಬೇಕೆಂಬ ಆಶಯ ಲೇಖಕರದ್ದಾಗಿದೆ. ಕದಂಬˌ ಚಾಲುಕ್ಯˌ  ರಾಷ್ಟೃಕೂಟರು ವಿಜಯನಗರ ಸಾಮ್ರಾಜ್ಯ. ಬಸವಣ್ಣನವರ ಕಾಲˌ ಕೆಂಪೆಗೌಡ ಹಾಗೂ ಕಿತ್ತೂರರಾಣಿ ಚನ್ನಮ್ಮ ಇವರ ಕಾಲದ ಐತಿಹಾಸಿಕ ಜ್ಞಾನವನ್ನು ತಮ್ಮ ನಾಟಕಗಳ ಮೂಲಕ ತಿಳಿಸಿದ್ದಾರೆ. ಹಾಗೆಯೇ ಪುರಂದರದಾಸರು. ಬಾಹುಬಲಿ. ಸಾವಳಿಗಿ ಶಿವಲಿಂಗ ಜಕಣಾಚಾರ್ಯರಂತವರ ಜೀವನ ಸಾಧನೆಯನ್ನೂ ಕತೆಯಾಗಿ ರೂಪಾಂತರಿಸಲಾಗಿದೆ.ಇಲ್ಲಿರುವ ಹನ್ನೆರಡು ನಾಟಕಗಳೂ ಏಕಾಂಕ ನಾಟಕಗಳಾಗಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ಸಣ್ಣ ಪುಟ್ಟ ತಂಡಗಳಲ್ಲಿ ನಾಟಕ ತಯಾರಿಸಿ ಪ್ರದರ್ಶಿಸಲು ಅನುಕೂಲವನ್ನು ಹೊಂದಿವೆ. ಅತ್ಯಂತ ಸರಳ ಬಂಧದಲ್ಲಿ ರಚನೆಗೊಂಡಿರುವ ನಾಟಕಗಳು ಕತೆಯಂತೆ ನಿರಂತರವಾದ ದೃಶ್ಯಗಳನ್ನು ಹೊಂದಿರುವುದರಿಂದ ಪ್ರದರ್ಶನದ ತಾಂತ್ರಿಕ ತೊಂದರೆ ಎದ್ದು ಕಾಣುತ್ತದೆ. ದೃಶ್ಯಗಳು ಒಂದರ ನಂತರ ಒಂದಾಗಿ ಬರುವುದರಿಂದ ನಟರಿಗೆ ಅಭಿನಯಿಸಲು ತೊಂದರೆಯೂ ಆಗಬಹುದು ಎನಿಸುತ್ತದೆ. ಒಂದು ದೃಶ್ಯದಲ್ಲಿರುವ ಪಾತ್ರಧಾರಿಗಳು ಮುಂದೆ ಬರುವದೃಶ್ಯದಲ್ಲಿಯೂ ಬರುವುದರಿಂದ ನಿರಂತರವಾಗಿ ಅದೆ ಪಾತ್ರಗಳು ಅಭಿನಯಿಸಲು ತೊಡಕಾಗಬಹುದು ಎನಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಬದಲಿ ಪಾತ್ರಗಳು ಬರುವಂತೆ ಇದ್ದರೆ ಮತ್ತು ಮಧ್ಯೆ ಮಧ್ಯೆ ಸಂಗೀತ ಹಾಗೂ ನಾಟಕೀಯ ಸನ್ನಿವೇಷ ಬಂದರೆ ಅಭಿನಯಿಸಲು ಅನುಕೂಲವಾಗಹುದು ಎನಿಸುತ್ತದೆ. ಆದರೆ…ˌ ಇವು ಪಠ್ಯ ನಾಟಕಗಳಾದ್ದರಿಂದ ಹೀಗಿರಬಹುದು. ಪ್ರದರ್ಶಕ್ಕೆ ಬಂದಾಗ ನಿರ್ಧೇಶಕ ಮತ್ತು ನಟರ ಜಾಣ್ಮೆಯಿಂದ ಸಂಗೀತˌ ನಾಟಕೀಯತೆ ಹಾಗೂ ನಿರಂತರತೆಯ ತಾತ್ರಿಕ ದೋಷಗಳು ನಿವಾರಣೆಯಾಗಹುದು. ಲೇಖಕರ ಮತ್ತೊಂದು ಸಂತೃಪ್ತ ಭಾವ ಯಾವುದೆಂದರೆ ಇಂತಹ ಮಹನೀಯರೆಲ್ಲಾ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಘನವಾದ ಸಾಧನೆ ಮಾಡಿದ್ದಾರೆಲ್ಲ ಅದೆ ಕನ್ನಡದ ಹಿರಿಮೆ ಎನ್ನುತ್ತಾರೆ. ಅಂತಹ ಹಿರಿಮೆಯುಳ್ಳ ಕನ್ನಡ ನಾಡಿನಲ್ಲಿ ಹುಟ್ಟಿರುವುದೂ ನಮ್ಮ ಪುಣ್ಯ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ನಾಟಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ರಚಿಸಿದ್ದಾರೆ. ನಾಡು ನುಡಿ ನೆಲ ಜಲದ ವಿಷಯ ಹಾಗೂ ಸಂಸ್ಕೃತಿಕಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂಬುದನ್ನು ನಾಟಕಗಳು ತಿಳಿಸುತ್ತವೆ. ನಾಡಿನ ಸಮಸ್ತ ಕಲಾವಿದರು. ನಿರ್ದೇಶಕರುˌ ನಾಟಕ ತಂಡಗಳು ಹಾಗೂ ಪೋಷಕರು ಮಕ್ಕಳು. ಶಾಲಾ ಕಾಲೇಜಿನ ಶಿಕ್ಷಕರು ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಲಿ ಎಂಬ ಆಶಯ ಈ ಲೇಖನದ್ದಾಗಿದೆ. ವೆಂಕಟೇಶ ಈಡಿಗರರಾಣೇಬೆನ್ನೂರು

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ Read Post »

ಪುಸ್ತಕ ಸಂಗಾತಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ

ಪುಸ್ತಕ ಸಂಗಾತಿ ವೈ.ಎಂ.ಯಾಕೊಳ್ಳಿ “ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩”      ಕನ್ನಡದಲ್ಲಿ ಹೈಕು ಕಾವ್ಯ ಬಂದು ಅರ್ಧಶತಮಾನವೇ ಆಗಿರಬೇಕು. ೧೭೦ ರ ದಶಕದಲ್ಲಿ ಡಾ.ಕೆ.ಬಿ ಬ್ಯಾಳಿಯವರು ಮೊದಲ ಬಾರಿಗೆ ಕನ್ನಡದಲ್ಲಿ ಹೈಕು ಬರೆದರು . ಮತ್ತು ಕೆಲವು ಹೈಕುಗಳನ್ನು ಅನುವಾದ ಮಾಡುವ ಮೂಲಕ ಹೈಕು ಕಾವ್ಯವನ್ನು ಪರಿಚಯಿಸಿದರು . ಇದು ಮೂಲತ: ಜಪಾನಿ ಭಾಷೆಗೆ ಸೇರಿದ ಕಿರು ಪದ್ಯ ಪ್ರಕಾರ. ಇದನ್ನು ಭಾರತಕ್ಕೆ ತಂದವರು ವಿಶ್ವ ಕವಿ ರವೀಂದ್ರರೇ ಎಂದು ಹೇಳಲಾಗುತ್ತದೆ.     ಡಾ. ಬ್ಯಾಳಿಯವರ ನಂತರದಲ್ಲಿ ಹಲವಾರು ಜನ ಹೈಕು ಬರೆಯತೊಡಗಿದರು. ಈಗಂತೂ ಹೈಕು ಕಾವ್ಯ ಬರೆಯಲೆಂದೇ ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯಂಥವರು ಸಾಮಾಜಿಕ ಜಾಲತಾಣಗಳ ಗುಂಪನ್ನೆ ರಚಿಸಿದರು. ಒಬ್ಬೊಬ್ಬರೆ ನಾಲ್ಕು ಹ್ಯಕು ಸಂಕಲನಗಳನ್ನು ತಂದ ಉದಾಹರಣೆಗಳು ಇವೆ. ಚಿತ್ರದುರ್ಗದ ಮನೋಜ್ ಮಕರಂದ, ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು,ಬಾಗಲಕೋಟೆಯ ಶ್ರೀ ಬಿ .ಎಸ್ .ಬಿಜಾಪೂರ ಅವರು  ಈ ದಿಶೆಯಲ್ಲಿ ಅತಿ ಹೆಚ್ಚು ಹೈಕು ಸಂಕಲನಗಳನ್ನು ಕೊಟ್ಟಿದ್ದಾರೆ. ಈಗ ಹತ್ತಾರು ಜನರ ಹೈಕು ಸಂಕಲನಗಳು ಬಂದಿವೆ.           ಹೈಕು ೫/೭/ ೫ ಸಿಲೆಬಲ್ ಗಳ ಗಳಲ್ಲಿ ರಚಿತವಾಗುವ ಮೂರು ಸಾಲಿನ ಚಂದೋಪ್ರಕಾರ ಆದರೆ ಕನ್ನಡದಲ್ಲಿ ಸಿಲೆಬಲ್ ಗಳನ್ನು ಅಕ್ಷರಗಳೆಂದು ತಿಳಿದು ೫/೭/೫ ಅಕ್ಷರಗಳಿಗೆ ಸೀಮಿತಗೊಳಿಸಿದ ಹೈಕು ಕಾವ್ಯವನ್ನು ಬರೆಯುವ ಪದ್ಧತಿಯನ್ನು ಡಾ ಕೆ .ಬಿ ಬ್ಯಾಳಿಯವರು ಹಾಕಿದರು . ಅವರ ದಾರಿಯಲ್ಲಿ ಇಂದು ನೂರಾರು ಜನ ಹೈಕು ಬರೆಯುತ್ತಿದ್ದಾರೆ. ಹತ್ತರು ಹೈಕು ಸಮಕಲನಗಳೂ ಬಂದಿವೆ. ಆದರೆ ಇನ್ನೊಂದು ಬರ್ಗ ಇದೆ./. ಡಾ. ಸಿ ರವೀಂದ್ರನಾಥ, ರಮ್ಜಾನ್ ಹೆಬಸೂರ,ದೊಡ್ಡಣ್ನ ಗದ್ದನಕೇರಿ, ಡ ಪ್ರಕಸ ಖಾಡೆ, ಮನೋಜ ಮಕರಂದ  ಮೊದಲಾದವರು ಮೂರು ಸಾಲಿನ ಕಿರು ಪದ್ಯಪ್ರಕಾರವನ್ನು ಇರಿಸಿಕೊಂಡು ೫/೭/೫ ಅಕ್ಷರಗಳಿಗೆ ಅಷ್ಟು ಮಹತ್ವ ಕೊಡದೆ ಮೂರು ಸಾಲುಗಳ ಕವಿತೆಯನ್ನು ಹೈಕು ಎಂದು ಕರೆದು ಸಂಕಲನ ತಂದಿದ್ದಾರೆ. ಕೆಲವರು ಈ ಪದ್ದತಿಯನ್ನೂ ಅನುಸರಿಸಿರುವದು ಉಂಟು. ಒಟ್ಟಿನಲ್ಲಿ ಈ ಎರಡೂ ಬಗೆಯ ಹೈಕು ಸಂಲನಗಳು ಈಗ ಕನ್ನಡದಲ್ಲಿ ಬರುತ್ತಿವೆ. ಇದೆ ಸಾಲಿಗೆ ಸೇರಿದವರು ಧಾರವಾಡದ ಶ್ರೀ ರಾಮಚಂದ್ರ ಕುಲಕರ್ಣಿಯವರು. ವೃತ್ತಿಯಿಂದ ಬ್ಯಾಂಕ್ ಅಧಿಕಾರಿಯಾಗಿ ಈಗ ತಮ್ಮ ಸೇವೆಗೆ ರಾಜಿನಾಮೆ ಕೊಟ್ಟು ಪೂರ್ಣ ಸಾಹಿತ್ಯ ಸೇವೆಗೆ ಸಮರ್ಪಿಸಿಕೊಂಡಿರುವ ಶ್ರೀಯುತರ ಹೈಕುಗಳ ಮೂರು ಸಂಕಲನ ತಂದಿದ್ದಾರೆ. ಇನ್ನೆರಡು ಸಮಕಲನ ಪ್ರಕಟಣೆಯ ಹಂತದಲ್ಲಿವೆ.  ಅವು ೫/೭/೫ ಅಕ್ಷರಗಳ ಪರಿಮಿತಿಗೆ ಸೇರಿದ ಹೈಕುಗಳಲ್ಲ. ಮೂರು ಸಾಲಿನ ಸ್ವತಂತ್ರ ಮುಕ್ತಕಗಳು ಎನ್ನುವದನ್ನು ಗಮನಿಸಬೇಕು. ಅಕ್ಷರಮಿತಿಕಾವ್ಯಕ್ಕೆ ಕುತ್ತು ಹಾಗಾಗಿನಾ ಲಂಘನ ಮಾಡಿದೆ (ನನ್ನ ರಚನೆ) ಎನ್ನುವದು ಅವರ ವಿಚಾರ. ಇಲ್ಲಿ ಮೂರು ಸಾಲಿವೆ ಅದರೆ ಅಕ್ಷರಗಳ ಮಿತಿಯಿಲ್ಲದ ರಚನೆಗಳು.      ಹಾಗೆ ನೋಡಿದರೆ ಈ ಬಗೆಯ ಹೈಕುಗಳನ್ನು ಪ್ರಯೋಗ ಮಡಿದ ಸಿ ರವೀಂದ್ರನಾಥ  ಮೊದಲಾದವರಿಗಿಂತ ಮುಂಚೆಯೇ ಹೈಕು ಬರೆದವರು ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೯೯ ರಲ್ಲಿಯೇ ಅಂದರೆ ಇಂದಿಗೆ ೨೫ ವರ್ಷಗಳ ಹಿಂದೆಯೇ   ಅವರ ಹೈಕು ಸಂಕಲಕನ ಬಂದಿದ್ದವು.  ಒಂದೆರಡು ಸಂಕಲನಗಳಂತೂ ಮೂರು ಮೂರು ಮುದ್ರಣ ಕಂಡಿದ್ದವು.  ಹಾಯ್ ಹಾಯ್ಕು ಸರಣಿಯಲ್ಲಿ ಐದು ಸಂಕಲನಗಳನ್ನು ಅವರು ತಯಾರಿಸಿದ್ದಾರೆ ಈಗಾಗಲೇ ಮೂರು ಪ್ರಕಟವಾಗಿದ್ದು ಇನ್ನೆರಡು ಪ್ರಕಟಣೆಯ ಹಂತದಲ್ಲಿವೆ. ಅವರೇ ಹೇಳಿಕೊಂಡಂತೆ ಸುಮರು ೨೫೦೦ ಹೈಕುಗಳನ್ನು ರಚಿಸಿದ ಹೈಕು ಕವಿ ಅವರಾಗಿದ್ದಾರೆ.        ಹಾಯ್ ಹಾಯಕು -೩  ಸಂಕಲನ ಈಗ ನನ್ನ ಕ್ಯಲಿದೆ. ಅವರ ಹಾಯ್ ಹಾಯಕು ಸೀರಿಸ್ ನಲ್ಲಿ ಇದು ಮೂರನೆಯ ಕೃತಿಯಾಗಿದೆ. ಇಲ್ಲಿ ಸುಮಾರು ೪೫೦ ರಷ್ಟು ಹೈಕುಗಳನ್ನು ಒಂಬತ್ತು ಭಾಗವಾಗಿಸಿದ್ದಾರೆ ಮೊದಲ ಭಾಗಕ್ಕೆ ಯಾವುದೆ ಹೆಸರು ಕೊಡದೆ ಇರುವ ಕವಿ ನಂತರದಲ್ಲಿ ಉಲ್ಕಾಪಾತ(೨೬ ಹೈಕು)ದಿನದರ್ಶಿಕೆ ( ೧೭) ಮೋಡಗಳು (೧೪ ಹೈಕು)ನಿದ್ರೆ ( ೪೦  ಹೈಕುಗಳು) ಗಾಳಿಪಟ ( ೧೬ ಹೈಕುಗಳು )ಗುಡ್ಡ (೧೬ ಹೈಕುಗಳು),ಮೀನು ಮಾರ್ಕೆಟ್ಟು ( ೨೯ ಹೈಕುಗಳು)ಆಕಾಶ (೮ ಹ್ಯಕುಗಳು) ಹೀಗೆ ಬೇರೆಬೇರೆ ಭಾಗವಾಗಿಸಿ ಸಮಕಲನದಲಕ್ಲಿ ನೀಡಿದ್ದಾರೆ.      ರಾಮಚಂದ್ರ ಕುಲಕರ್ಣೀಯವರು ಬರೀ ಹೈಕು ಕವಿಗಳಲ್ಲ, ಹೈಕು ಮೀಮಾಂಸಕರೂ ಹೌದು. ಅವರ ಸಂಕಲನಗ ಆರಂಭದ ಪ್ರಸ್ತಾವಣೆಯಲ್ಲಿ ಹೈಕು ಕಾವ್ಯ ರಚಿನೆ ಕುರಿತ ಚಿಮತನೆ ಮೂಡಿ ಬಂದಿರುವದು ಉಪಯುಕ್ತವಾಗಿದೆ. ಅವರ ಹುಕುಗಳಲ್ಲಿ ಝೆನ್ ತತ್ವಜ್ಞಾನ ಅವಲಂಬಿಸಿದ ಬುದ್ದನ ತತ್ವಗಳನ್ನು ಸಾರುವ ಹಾಗೆಯೇ ನಿಸರ್ಗದ ಅಂತಸತ್ವ ಹೊಂದಿದ ಹೈಕು ಕಾವ್ಯ ತುಂಬ ತಾಜಾ ಸರಸ ಸುಂದರವಾಗಿ ಅರಳಿವೆ. ಬದುಕಿನ ತಾತ್ವಿಕ ಚಿಂತನೆ ಮಡುವ ಅನುಭಾವ ಪೂರ್ಣ ಹ್ಯಕಿಗೆ ಉದಾಹರಣೆಯಾಗಿ ಎಲ್ಲರೂ ಸಾಯುತ್ತೇವೆ.ಒಬ್ಬರಿಗೂ ನೆನಪಿಲ್ಲ ‘ಹಃ’ಮರೆವು ಸಾವಿಗೆ ವರ ಎಂಥ ಸುಂದರ ಸತ್ಯ! ಮರೆತಿದ್ದೇವೆ ಎಂತಲೇ ನಾವು ಆರಾಮ ಇದ್ದೇವೆ.   ಗೊತ್ತೇ ಸಖಿ ? ಹಕ್ಕಿಪಕ್ಕಿನಮಗಿಂತ ಮೊದಲೇಎದ್ದಿವೆ! ಗೆದ್ದಿವೆ! ಎದ್ದಿವೆ ಎನ್ನುವದು ಮತ್ರವಲ್ಲ ನಮ್ಮ ಮೇಲೆ ನಿಸರ್ಗ ಮಡಿದ ವಿಜಯ ಗೆದ್ದಿವೆ ಕೂಡಾ! ಇದೇ ನಿಜವಾದ ಸತ್ಯ. ಎಷ್ಟೆಲ್ಲ ಹೊಸರೋಗ!ಏನೆಲ್ಲ ಔಷಧಿ!ಪಥ್ಯ !ನರಳಿಕೆಯೊಂದೇ ಸತ್ಯ ವಾಸ್ತವವನ್ನು ಹೇಳುವ ಹೈಕು ಇದು. ನಾವು ನಿಸರ್ಗಕ್ಕೆ ಮಡಿದ ಅಘಾತದಿಂದ ಇಂದು ಪ್ರಾಣಿ ಪಕ್ಷಿಗಳು ಮನುಷ್ಯನ ಹೆಜ್ಜೆ ಕಂಡರೂ ಸಹಿಸಿಲಾರವು ಅವು ನಮ್ಮನ್ನಗಲಿ ದೂರ ಹೋಗಿವೆ. ಅವಕ್ಕೆ ತಮ್ಮದೇ ಜಾಗ ಬೇಕಾಗಿದೆ ಎನ್ನುವ ಕವಿ ಗುಬ್ಬಿ ಗುಳೆ ಹೋಗಿವೆತಮ್ಮ ಎದೆ ಬಡಿತಕೇಳಿಸುವಲ್ಲಿ ! ಪ್ರಾಣಿ ಪಕ್ಷಿಗಳನ್ನು ನೆಮ್ಮದಿಯಿಂದ ಬದುಕದಂತೆ  ಮಾಡಿದ ಮನುಷ್ಯ ಅವು ಗಡಿಪಾರು ಅಗುವಂತೆ ಮಡಿದ್ದಾನೆ ಎನ್ನುವದನ್ನು ಈ ಹೈಕು ಸೂಚಿಸುತ್ತದೆ.  ಆದರೆ ನಿಸರ್ಗಕ್ಕೆ ಅಂತ್ಯವಿಲ್ಲ ಅದು ಮತ್ತೆ ಚಿಗುರುತ್ತದೆ ಎನ್ನುವದಕ್ಕೆ ಮೊನ್ನೆ ಉರುಳಿತು ಮರಇಂದು ಮೋಟು ನೆತ್ತಿಯ ಮೇಲೆಕುಸುರು ಕುಸುರು ಚಿಗುರ ಎಂಥ ಅದ್ಭುತ ಅಲ್ಲವೇ!  ಲೌಕಿಕದ ಸತ್ಯಗಳಣ್ನೂ ಕಾಣವು ಕವಿ ಪ್ರೀತಿ ಯ ಬಗ್ಗೆ ಸಾಲು ಗಳು ಎಷ್ಟು ಮಾರ್ಮಿಕ ವಾಗಿವೆ ನೋಡಿ. ಒಲವು ಮಹಾ ಕೊಲೆಗಾರಪ್ರಾಣ ಹೀರಿದೆ ಎಷ್ಟೋಕಾಣುವಂತೆ! ಕಾಣದಂತೆ!! ಕಾಣುವಂತೆ ಸತ್ತವು ಕೆಲವು ಜೀವಗಳಾದರೆ ಕಾಣದಂತೆ, ಮುಚ್ಚಿಟ್ಟು ಸತ್ತವು ಎಷ್ಟೋ ಏನೋ? ಎನ್ನುವ ಉದ್ಘಾರ ಕವಿಯದು. ಕಾಣು ಪದವನ್ನು ದುಡಿಸಿಕೊಂಡ ರೀತಿಯಲ್ಲಿಯೆ ಕವಿತೆ ಅಡಗಿರುವದು. ಮೀನು ಮಾಕೇಟ್ಟಿನಲ್ಲಿ ಸಾಲಾಗಿ ಸತ್ತು ಮಲಗಿದ ಮೀನು ಗಳನ್ನು ಕಂಡ ಕವಿ   ಸಾವಿನ ಕಂತೆಸಾಲಾಗಿ ಮಲಗಿದೆಸಾವಿಗೂ ಬೆಲೆಯಿದೆ , ಸಂತೆ! ಮಾರಾಟಕ್ಕಿಟ್ಟ ಮೀನಿನ ಗುಂಪು ಕವಿಯಲ್ಲಿ ಮೂಡಿಸುವ ಆಘಾತ ಕವಿತೆಯಾಗಿ ಹೊರಹೊಮ್ಮಿದೆ.  ಕೌಟುಂಬಿಕ ಪರಿಸರವನ್ನು ಚಿತ್ರಿಸುವ ಹೈಕುಗಳಲ್ಲಿ ಹೆಂಡತಿಯ ಮೌನವನ್ನು ಕುರಿತು ಅವರು ಬರೆದ ಹೈಕು ಹೀಗಿದೆ. ನೀ ಸುಮ್ಮನಿದ್ಧೀ ಎಂದರೆನನಗೇನೋ ಗುಮಾನಿ!ಏನೋ ಆಟ, ಏನೋ ಬೇಟ ನಾಳೆ ಈ ಹೊತ್ತಿಗೆ! ಪ್ರತಿಯೊಂದು ಭಾಗದ ಹೈಕುಗಳೂ ಅರ್ಥಪೂರ್ಣ ರಚನೆಗಳಾಗಿರುವದು ಅವರ ಕಾವ್ಯ ಸಂಕಲನದ ಮಹತ್ವ ಹೆಚ್ಚಿಸಿವೆ.  ಸುಮ್ಮನೇ ಹೆಸರಿಸುತ್ತ ಹೋಗುವದಾದರೆ ಉಲ್ಕಾಪಾತಕ್ಕೆ ಉರುಳಿದ ಉಲ್ಕೆಯಪತನಕ್ಕೆ ಉಳಿದ ತಾರೆಗಳುಪಾಪ ! ಎಂದವು ದಿನದರ್ಶಿಕೆ ಭಾಗದ ಒಂದು ಹೈಕು ಆಸೆಯನ್ನೆ ತೂಗು ಬಿಟ್ಟೆನನ್ನೆದೆಯ ಗೋಡೆ ಮೊಳೆಗೆಈ ವರ್ಷ ಕೂಡ ಬದುಕುವೆ ಎಷ್ಟೊಂದು ಧನಾತ್ಮಕವಾದ ಚಿಂತನೆ! ಇನ್ನೊಂದು ಇದೆಬಾಗದ ಹೈಕು ವರ್ಷಕ್ಕೊಂದು ಹೊಸ ಕ್ಯಾಲೆಂಡರ್ಗರಿಗರಿ ಮುಗುಚುತ್ತದೆದುರ್ಬಲ ಸೋತ ಕೈಗಳು ಹೀಗೆ ಇಲ್ಲಿ ಹೈಕುಗಳು ಅವರೇ ಹೇಳಿದಂತೆ ‘ಕಿರಿದರಲ್ಲಿ ಪಿರಿದರ್ಥ’ ನೀಡಿವೆ. ಅವರು “ಹೈಕು ತತ್ ಕ್ಷಣಕ್ಕೆ ಮಿಂಚಿ ಮರೆಯಾಗುವ ಕಾವ್ಯಪ್ರಕಾರ ಅಲ್ಲ. ಅಂತರಾಳಕ್ಕೆ ಹೋಗಿ ಆನಂದದ ಸೆಲೆಯಾಗಿ ಚಿಮ್ಮಿಸುವ ಸಾಧನವಾಗಿ ಬಳಕೆಯಾಗುತ್ತದೆ” ಎಂದು ಹೇಳುವ ಅವರು ತೋರುವ ವಿನಯ ದೊಡ್ಡದು. “ಇಲ್ಲಿನ ನನ್ನೆಲ್ಲ ಹೈಕುಗಳನ್ನು ಅಪ್ಪಟ ಹಾಯ್ಕು ಗಳೆನ್ನುವ ಹಕ್ಕು ಧೈರ್ಯ ನನಗಿಲ್ಲ .. ಅರಿವುದಕ್ಕೆ ಇನ್ನೂ ಇದೆ. ಆ ಮಾರ್ಗದ ನವಿರುಯ ಅನುಭವಗಳ ಸರಳ ಅಭಿವ್ಯಕ್ತಿಗಳೇ ಈ ನನ್ನ ಹಾಯ್ಕುಗಳು” ಎನ್ನುವ ಮಾತು ಮುಖ್ಯವಾಗಿ ಕಾಣಿಸುತ್ತದೆ.  ಡಾ ವೈ.ಎಂ.ಯಾಕೊಳ್ಳಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ Read Post »

ಪುಸ್ತಕ ಸಂಗಾತಿ

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ

ಪುಸ್ತಕ ಸಂಗಾತಿ ಎ.ಹೇಮಗಂಗಾ ವನಜಾ ಜೋಶಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ *ಮನಸಿಗೆ ಮುದ ತಂದ ವನಸುಮದ ಕಂಪು* *ಶೀರ್ಷಿಕೆ: ನಕ್ಕುಬಿಡು ಬಾನಕ್ಕಿ* ( ಗಜಲ್ ಸಂಕಲನ )*ಕವಯಿತ್ರಿ : ಶ್ರೀಮತಿ ವನಜಾ ಜೋಶಿ**ಚರವಾಣಿ: 99012 39477**ಪ್ರಕಾಶಕರು : ಸಂಸ್ಕೃತಿ ಬುಕ್ ಏಜೆನ್ಸೀಸ್, ಮೈಸೂರು**ಪ್ರಥಮ ಮುದ್ರಣ: 2025*ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿರುವ, ಸೆಳೆಯುತ್ತಲೇ ಇರುವ ‘ ಕಾವ್ಯದ ರಾಣಿ ‘ ಗಜಲ್ ನ ರಚನೆಯಲ್ಲಿ ತೊಡಗಿರುವ ಕವಿ, ಕವಯಿತ್ರಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚೆಂಬುದು ತಿಳಿದು ಬಂದಿದೆ. ವೃತ್ತಿಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಈಗ ನಿವೃತ್ತ ಜೀವನವನ್ನು ತಮ್ಮ ಆಸಕ್ತಿಯ ಓದು ಹಾಗೂ ಬರವಣಿಗೆಯ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಶ್ರೀಮತಿ ವನಜಾ ಜೋಶಿಯವರು ಸಾಮಾಜಿಕ ಜಾಲತಾಣದ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ‘ ವನಸುಮ ‘ ಎಂಬ ತಖಲ್ಲುಸ್ ನಿಂದ ಗಜಲ್ ಕವಯಿತ್ರಿಯಾಗಿ ಪರಿಚಿತರಾಗಿದ್ದಾರೆ. ಅಂತೆಯೇ, ತಮ್ಮ ರಚನೆಗಳಿಂದ ಇತರರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪ್ರೌಢ ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿದ್ದು ಕಾಲಕ್ರಮೇಣ ಪ್ರಬುದ್ಧ ಕವಯಿತ್ರಿಯಾಗಿ ಗುರುತಿಸಿಕೊಂಡ ಇವರಿಗೆ ಛಂದೋಬದ್ಧವಾದ ಮುಕ್ತಕ ಮತ್ತು ಷಟ್ಪದಿಗಳ ರಚನೆಯ ಕಲೆಯೂ ಒಲಿದಿದೆ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ವನಜಾ ಜೋಶಿಯವರು 2025 ರಲ್ಲಿ ಪ್ರಕಟಿಸಿದ ‘ ನಕ್ಕುಬಿಡು ಬಾನಕ್ಕಿ ‘ ಗಜಲ್ ಸಂಕಲನವು ತನ್ನ ಶೀರ್ಷಿಕೆ , ಸುಂದರ ಮುಖಪುಟ ಹಾಗೂ ಉತ್ತಮ ಮುದ್ರಣದಿಂದ ಮೊದಲ ನೋಟಕ್ಕೇ ಎಲ್ಲರ ಮನಗಳನ್ನು ಸೆಳೆಯುತ್ತದೆ. ಕೃತಿಯನ್ನು ವಿದ್ಯೆಯೆಂಬ ಅಮೃತವನ್ನಿತ್ತು ಅರಿವು ಮೂಡಿಸಿ ಬೆಳೆಸಿದ, ಹರಸಿದ ಎಲ್ಲ ಗುರುಗಳಿಗೆ ಅರ್ಪಿಸಿದ್ದಾರೆ. ಖ್ಯಾತ ಗಜಲ್ ಕವಿ, ಕನ್ನಡ ಪ್ರಾಧ್ಯಾಪಕ ಮತ್ತು ವಿಮರ್ಶಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರ ಮುನ್ನುಡಿಯ ಜೊತೆಗೆ ಗಜಲ್ ಕಾವ್ಯದ ಮೂಲ, ಬೆಳವಣಿಗೆ ಹಾಗೂ ರಚನೆಯ ನಿಯಮಗಳ ಬಗ್ಗೆ ಬೆಳಕು ಚೆಲ್ಲುವ ಅವರದೇ ಲೇಖನವೂ ಇರುವುದೊಂದು ವಿಶೇಷ. ಪ್ರಸಿದ್ಧ ಕಲಾವಿದ , ಸಂಶೋಧಕ ಮತ್ತು ಯಕ್ಷಗಾನ ಕ್ಷೇತ್ರದ ವಿಮರ್ಶಕರಾದ ಡಾ.ಎಂ. ಪ್ರಭಾಕರ ಜೋಶಿಯವರ ಬೆನ್ನುಡಿ ಕೃತಿಯ ಮೌಲ್ಯವನ್ನು ವೃದ್ಧಿಸಿದೆ. ‘ ನಕ್ಕುಬಿಡು ಬಾನಕ್ಕಿ’ ಸಂಕಲನದಲ್ಲಿ ಗಜಲ್ ಕವಯಿತ್ರಿ ( ಗಜಲ್ ಗೋ ) ಐದು, ಆರು, ಏಳು ಹಾಗೂ ಒಂಬತ್ತು ಷೇರ್ ಗಳನ್ನುಳ್ಳ ಮುರದ್ದಫ್, ಗೈರ್ ಮುರದ್ದಫ್, ಜುಲ್ ಕಾಫಿಯಾ, ತರಹೀ , ಸಂಪೂರ್ಣ ಮತ್ಲಾವನ್ನು ಒಳಗೊಂಡ ನೂರ ಇಪ್ಪತ್ತೊಂದು ಗಜಲ್ ಗಳ ಗುಚ್ಛವನ್ನೇ ಹೆಣೆದಿದ್ದಾರೆ. ಪ್ರೀತಿ, ವಿರಹ ,ಅಗಲಿಕೆ, ಪ್ರಕೃತಿ ಪ್ರೇಮ, ಪರಿಸರ ಪ್ರಜ್ಞೆ, ತಾಯ್ತನದ ಸಂಭ್ರಮ, ವೈಧವ್ಯ, ರವಿ, ಮಳೆ, ಬಾಳಿನ ನಶ್ವರತೆ….. ಮುಂತಾದ ವಿವಿಧ ವಸ್ತು, ವಿಷಯಗಳ ಬಗ್ಗೆ ನಿಯಮಬದ್ಧವಾಗಿ ಮೂಡಿ ಬಂದಿರುವ ಗಜಲ್ ಗಳು ‘ ಕವಿಯ ಕಲ್ಪನೆ ಸೀಮಾತೀತ ‘ ಎಂಬ ನುಡಿಯನ್ನು ಬಿಂಬಿಸಿವೆ. ಈ ಸಂಕಲನದ ಕೆಲವು ಗಜಲ್ ಗಳ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಕರಪಿಡಿದು ನಡೆವ ಜೋಡು ಜೀವಕೆ ಒಲವೇ ಬಲ ತಾನಾದಾಗಬಾನ ತಾರೆಗಳ ಸಾಲು ಹುಟ್ಟಿವೆ ನಿನ್ನ ನೆನಪಲಿ ನಾನಿರುವಾಗ                               ( ಗಜಲ್ 2 ) ಸುಖದ ಅತಿಯಾಸೆಗೆ ಕಳೆಯಿತೆಲ್ಲವೂಭೂಮಿ ಬಿರುಕುಗಳು ಎಚ್ಚರ ಕೊಡುತಿವೆ                         ( ಗಜಲ್ 9 )                             ಕೈ ಚೆಲ್ಲಿ ಕೂರುವುದ ತೊರೆದು ಮುಂದಡಿ ಇಡಬೇಕುಸಂದೇಹಗಳ ನಿವಾರಿಸಬೇಕು ಬದುಕಿನ ಪ್ರೀತಿಯಲಿ                               ( ಗಜಲ್ 18 )                       ಮದವೇರಿದ ಹೋರಿಯಾಗಿದೆ ನಿನ್ನ ನೆನಪುಎದೆಯೊಳಗೆ ಗೋರಿಯಾಗಿದೆ ನಿನ್ನ ನೆನಪು                                ( ಗಜಲ್ 21 ) ಕರುಳಲಿ ಚಿಗುರಿದ ಹೊಸ ಜೀವ ಮರೆಸುವುದು ಜಗವವನಸುಮದ ನಿತ್ಯ ಗೆಲುವಿನಲಿ ಇದೆ ಎಂಥ ಹರುಷ                               ( ಗಜಲ್ 33 ) ವಿಹಗ ಬೃಂದವು ಔತಣಕೆ ಬಂದಿಹುದು ಕೂ ಕುಕುಲು ಕೂಬಗೆಬಗೆಯ ಶುಭ ಗೀತವ ಹಾಡಿಹುದು ಕೂ ಕುಕುಲು ಕೂ                               ( ಗಜಲ್ 62 ) ನನ್ನವ್ವ ಇರಬೇಕಿತ್ತು ನೆಲತಾಯಿ ಹೊಸ ಕುಸುರಿಟ್ಟ ಸಮಯದಾಗಎಂಥ ಚೆಲುವು ಇಂದು ತೋರಿದೆ ಅವನಿ ಹಸಿರುಟ್ಟ ಸಮಯದಾಗ                                  ( ಗಜಲ್ 63 ) ಹುಟ್ಟುವಾಗಲೇ ನಿಶ್ಚಯವಾಗಿದೆ ಸಾವುನಾಲ್ಕು ದಿನದ ಬಾಳಲಿ ಆಗದಿರು ಬೇವು ( ಗಜಲ್ 67 ) ನೋಡುಗರ ಕಣ್ಮನ ತಣಿಸುವ ಅಲಂಕಾರವದುಅತ್ತಿತ್ತ ಸರಿವ ನೋಟದಿ ಚೇಳು ಹಾವುಗಳ ಕಂಡೆ                                 ( ಗಜಲ್ 91 ) ದೂರ ದೂರ ನಾವು ಹಾರಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿಜಗದ ಬಿತ್ತರವನೆಲ್ಲ ನೋಡಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿ( ಗಜಲ್  117 )ಭಾವಗಳನ್ನು ಸುಲಲಿತವಾಗಿ, ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದನ್ನು ಕರಗತ ಮಾಡಿಕೊಂಡಿರುವ ವನಜಾ ಜೋಶಿಯವರ ಗಜಲ್ ಗಳಲ್ಲಿ ಕಾವ್ಯ ಪ್ರತಿಭೆ ಮಿಂಚಾಗಿ ಹೊಳೆದಿದೆ. ಅರಿವಿನ ವ್ಯಾಪ್ತಿಯನ್ನು ವರ್ಣಿಸುವ ಅಪರೂಪದ ಶಬ್ದಗಳ ಭಂಡಾರವೇ ಅವರಲ್ಲಿದೆ ಎಂಬುದನ್ನು ಕೆಲವು ರಚನೆಗಳಲ್ಲಿ ಬಳಸಲ್ಪಟ್ಟಿರುವ ತೇಜ, ಕದಿರು, ಹದುಳ, ವಲ್ಲರಿ, ಸಲಿಲ, ಸುಮಸಾರ, ಜವನಿಕೆ , ಜಾಳಿಗೆ, ಅಣ್ಣಿ….ಇತ್ಯಾದಿ ಪದಗಳು ಸಾಬೀತುಪಡಿಸಿವೆ. ಗಜಲ್ 62 ನೆಯ ರದೀಫ್ ‘ ಕೂ ಕುಕುಲು ಕೂ ‘ ಬಹಳ ವಿಶಿಷ್ಟವಾಗಿದ್ದು ಗಜಲ್ ವಾಚನಕ್ಕೆ ಹೊಸ ಮೆರುಗನ್ನು ತರುತ್ತದೆ ಎಂಬುದಂತೂ ಸತ್ಯ. ನಲ್ಮೆಯ ಸಹೋದರಿ ವನಜಾ ಜೋಶಿಯವರ ಲೇಖನಿಯ ತೇವವೆಂದೂ ಆರದಿರಲಿ. ಭವಿತವ್ಯದಲ್ಲಿ ಅವರಿಂದ ಮತ್ತಷ್ಟು ಸತ್ವಪೂರ್ಣ ಗಜಲ್ ಸಂಕಲನಗಳು ಪ್ರಕಟಗೊಂಡು ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ. ತಾಯಿ ಸರಸ್ವತಿಯ ಆಶೀರ್ವಾದ ನಿರಂತರವಾಗಿ ಅವರ ಮೇಲಿದ್ದು ಎಲ್ಲ ಆಶೋತ್ತರಗಳು ಈಡೇರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಎ. ಹೇಮಗಂಗಾ                            

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ Read Post »

ಪುಸ್ತಕ ಸಂಗಾತಿ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ

ಪುಸ್ತಕ ಸಂಗಾತಿ ಶೋಭಾ ನಾಗಭೂಷಣ ಎಂ.ಬಿ.ಸಂತೋಷ್‌ ಅವರ ಕೃತಿ, “ವಚನ ಸುಧೆ”ಗೊಂದು ಮುನ್ನುಡಿ,  ಪ್ರಥಮವಾಗಿ ತಮ್ಮ ನಲವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ಏಳನೇ ಆಧುನಿಕ ವಚನ ಸಂಕಲನವಾದ ‘ವಚನ ಸುಧೆ’ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವ  ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರಿಗೂ ಹಾಗೂ ಗುರುಮಾತೆಯಾದ ಶ್ರೀಮತಿ ರೇಖಾ ಸಂತೋಷ್ ಅವರಿಗೂ ವಿವಾಹ ವಾರ್ಷಿಕ ಮಹೋತ್ಸವಕ್ಕೆ ಶುಭಾಷಯಗಳನ್ನು ಕೋರುತ್ತೇನೆ.  ತಮ್ಮ ಈ ವಚನ ಸುಧೆ ಕೃತಿಗೆ ಮುನ್ನುಡಿ ಬರೆಯಬೇಕೆಂದು ಸೂಚಿಸಿ ಗುರುಗಳು ನನ್ನ ಸಾಹಿತ್ಯ ಕೃಷಿಗೆ ಆಶೀರ್ವದಿಸಿದ್ದಾರೆ. ಈ ವಚನ ಸುಧೆಗೆ ಮುನ್ನುಡಿಯನ್ನು ಬರೆಯುವುದು ನನಗೆ ಗರ್ವ ಮತ್ತು ಗೌರವ ಎರಡನ್ನೂ ಸಹ ತಂದುಕೊಟ್ಟಿದೆ. ನಾನು ಅವರಿಗೆ ಸದಾ ಕೃತಜ್ಞಳಾಗಿದ್ದೇನೆ.  ಮನುಜನ  ಜೀವನವು ಅನೇಕ ಅನುಭವಗಳ ಅಲೆಯಲ್ಲಿ ತೇಲುವ ಒಂದು ನಿರಂತರ ಪಯಣ.  ಈ ಪಯಣದಲ್ಲಿ ಕೆಲವೊಮ್ಮೆ ಸಂತೋಷದ ಹೊಳೆ ಹರಿದರೆ, ಮತ್ತೊಮ್ಮೆ ಸಂಕಟಗಳ ನೆರಳು ಆವರಿಸುತ್ತದೆ. ಇಂತಹ ಬದುಕಿನ ತಿರುವುಗಳಲ್ಲಿ ದಾರಿತೋರುವ ದೀಪವಾಗಿ, ಮನಸ್ಸಿನ ಮೌನಕ್ಕೆ ಮಾತಾಗುವ ಚಿಂತನೆಯಾಗಿ ಮೌಲ್ಯಗಳ ಮಣ್ಣಿನಲ್ಲಿ ಅರಳುವ ಜ್ಞಾನಪುಷ್ಪವಾಗಿ ನಮ್ಮೊಂದಿಗೆ ಸಾಗುವವು ವಚನಗಳು. ವಚನವೆಂದರೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಸತ್ಯಕ್ಕೆ ಸಾಕ್ಷಿಯಾದ ಅನುಭವದ ನಾದ, ಅಂತರಂಗದ ಅರಿವಿಗೆ ದಾರಿಯಾದ ಚಿಂತನೆಯ ಚಿಲುಮೆ.  ಕಾಲ ಬದಲಾಗುತ್ತಿದೆ. ಬದುಕಿನ ವೇಗ ಹೆಚ್ಚುತ್ತಿದೆ. ತಂತ್ರಜ್ಞಾನದ ಬೆಳಕಿನಲ್ಲಿ ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದರೂ, ತನ್ನೊಳಗಿನ ಮನುಷ್ಯತ್ವವನ್ನು ಅರಸುವ ಪ್ರಯತ್ನ ಕೆಲವೊಮ್ಮೆ ಮಸುಕಾಗುತ್ತಿದೆ. ಸಂಬಂಧಗಳು ಯಾಂತ್ರಿಕವಾಗುತ್ತಿರುವ, ಮೌಲ್ಯಗಳು ಪ್ರಶ್ನಿಸಲ್ಪಡುತ್ತಿರುವ, ಆತ್ಮಸಂತೋಷವನ್ನು ಹುಡುಕಾಡುತ್ತಿರುವ ಸಂದರ್ಭದಲ್ಲಿ ವಚನಸಾಹಿತ್ಯದ ಪ್ರಸ್ತುತತೆ ಇನ್ನಷ್ಟು ಗಾಢವಾಗುತ್ತವೆ. ಏಕೆಂದರೆ ವಚನಗಳು ಕೇವಲ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿ ಬೋಧಿಸಲ್ಪಟ್ಟವುಗಳಲ್ಲ, ಅವು ಸಮಾನತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಬದುಕಿನ ಶುದ್ಧತೆಗೆ ಕರೆ ನೀಡುವ ಆತ್ಮಧ್ವನಿಗಳಾಗಿವೆ.   ಪೂಜ್ಯ ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರ ಏಳನೇ ಆಧುನಿಕ ವಚನಸಂಕಲನವಾದ ಈ ವಚನ ಸುಧೆ ಕೃತಿಯು, ಅಮೃತಧಾರೆಯನ್ನು ಇಂದಿನ ಓದುಗರ ಮನಗಳಿಗೆ ತಲುಪಿಸುವ ವಿನಮ್ರ ಸಾಹಿತ್ಯರತ್ನವಾಗಿದೆ. ಈ ಕೃತಿಯಲ್ಲಿ ಅಡಕವಾಗಿರುವ ಪ್ರತಿಯೊಂದು ವಚನವೂ ಜೀವನದ ಯಾವುದೋ ಒಂದು ಮೌಲ್ಯವನ್ನು ಅನಾವರಣಗೊಳಿಸುವ ಕನ್ನಡಿಯಾಗಿದೆ. ಕೆಲವೊಮ್ಮೆ ಅವು ಪ್ರಶ್ನಿಸುತ್ತವೆ, ಕೆಲವೊಮ್ಮೆ ಎಚ್ಚರಿಸುತ್ತವೆ, ಕೆಲವೊಮ್ಮೆ ಕಿವಿಮಾತನ್ನು ಹೇಳುತ್ತಾ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಮಾತುಗಳಾಗುತ್ತವೆ. ಜೀವನದ ಗೊಂದಲಗಳ ನಡುವೆ ಅರ್ಥಪೂರ್ಣವಾದ ಬದುಕಿನ ದಿಕ್ಕನ್ನು ತೋರಿಸುವ ಶಕ್ತಿಯನ್ನು ವಚನಗಳು ಹೊಂದಿವೆ.    *ವಚನಸುಧೆ* – ‘ಸುಧೆ’ ಎಂದರೆ ಅಮೃತ. ಅಮೃತವು ನಿರ್ಜೀವದ ಸ್ಥಿತಿಗೆ ಜೀವಂತಿಕೆಯನ್ನು ನೀಡುವಂತಹದ್ದು. ಹಾಗೆಯೇ ಈ ವಚನ ಸುಧೆಯು ಮನಸ್ಸಿಗೆ ಅಮರತ್ವವನ್ನು ನೀಡುವಂತಹ ಅದೆಷ್ಟೋ ಜೀವನದ ಸತ್ಯಗಳನ್ನು ತಿಳಿಸುತ್ತಾ ಬದುಕನ್ನು ಮುನ್ನಡೆಸಲು ದೀವಟಿಗೆಯಾಗಿ ನಿಲ್ಲುತ್ತದೆ. ಬುದ್ಧಿ, ಮಾತು, ಹೆಣ್ಣು, ತಾಯಿ, ಸಂಸಾರ, ದಾಂಪತ್ಯ, ಮಾನವ ಸಂಬಂಧ, ಮೂಢನಂಬಿಕೆ ಹೀಗೆ ಇನ್ನೂ ಹಲವು ವಿಷಯಗಳ ಹಾಗೂ ಜೀವನದ ಸತ್ಯಗಳನ್ನು ತಿಳಿಸುವ ವಚನಗಳು ಈ ವಚನ ಸುಧೆಯಲ್ಲಿ ಹನಿ ಹನಿಯಾಗಿ ಕೂಡಿವೆ. ‘ಜಗದೀಶ’ ಎನ್ನುವ ಅಂಕಿತದೊಂದಿಗೆ ಸಾವಿರಾರು ವಚನಗಳನ್ನು ರಚಿಸಿರುವ ಶ್ರೀ ಎಂ ಬಿ ಸಂತೋಷ್ ಅವರು ತಮ್ಮ ಅಮೂಲ್ಯವಾದ ವಚನಗಳಿಂದ ಅದೆಷ್ಟೋ ಶರಣ ಸಹೃದಯರಿಗೆ ಸುಧೆಯನ್ನು ಉಣಬಡಿಸಿದ್ದಾರೆ. ಬಲವಂತದಿಂದ ಪಡೆದದ್ದುಬಹುಕಾಲ ಉಳಿಯುವುದಿಲ್ಲಇನ್ನೊಬ್ಬರ ಮನವ ನೋಯಿಸಿ ಪಡೆದದ್ದುನಮ್ಮನ್ನು ಹಾಳು ಮಾಡದೆ ಬಿಡುವುದಿಲ್ಲಕಷ್ಟಪಟ್ಟು ದುಡಿದದ್ದು ಎಂದಿಗೂ  ನಮ್ಮನ್ನು ಬಿಟ್ಟು ಹೋಗುವುದಿಲ್ಲ-ಜಗದೀಶ  ಈ ವಚನವು ದುಡಿಮೆಯ ಮಹತ್ವವನ್ನು ತಿಳಿಸುತ್ತದೆ. ಹತ್ತನೆಯ ಶತಮಾನದಿಂದಲೂ ಬಸವಣ್ಣನವರಾದಿಯಾಗಿ ದುಡಿಮೆಯ ಅಂದರೆ ಕಾಯಕದ ಮಹತ್ವವನ್ನು ಸಾರುತ್ತಲೇ ಬಂದಿದ್ದಾರೆ. ಕಾಯಕದ ಮೂಲಕವೇ ನಾವು ಕೈಲಾಸವನ್ನು ಕಾಣಬೆಕು ಎನ್ನುವ ಆದ್ಯ ವಚನಕಾರರ ಸಂದೇಶವನ್ನು ತಿಳಿಸುವ ಮತ್ತೊಂದು ವಚನ ಇಲ್ಲಿ ಮೂಡಿಬಂದಿದೆ. ನಾವು ಯಾವಾಗಲೂ ದುಡಿದು ತಿನ್ನಬೇಕೇ ಹೊರತು ಮತ್ತೊಬ್ಬರಿಂದ ಬಲವಂತವಾಗಿ ಕಿತ್ತು ತಿನ್ನುವ ಬುದ್ಧಿಯನ್ನು ಬಿಡಬೇಕು. ‘ಪರರ ಸ್ವತ್ತು ಪಾಶಾಣ’ ಎನ್ನುವುದನ್ನು ಅರಿಯಬೇಕು. ಬೇರೆಯವರನ್ನು ನೋಯಿಸಿ ಅವರ ಸ್ವತ್ತನ್ನು ಕಿತ್ತು ಅನುಭವಿಸಿದರೆ ಅವರ ನಿಟ್ಟುಸಿರು ನಮ್ಮನ್ನು ತಟ್ಟಿಯೇ ತೀರುತ್ತದೆ. ಈ ಸತ್ಯವು ಇಂದಿನ ಜನಮನಕ್ಕೆ ತಿಳಿದಿದ್ದರೂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೇ ಪಾಪ ಪುಣ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ತಾನು ಬದುಕುವುದಕ್ಕಾಗಿ ಸ್ವಾರ್ಥತೆಯಿಂದ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಅಂತಹ ಮನಸ್ಥಿತಿಗೆ ಈ ವಚನ ಕಿವಿ ಹಿಂಡಿ ಬುದ್ಧಿ ಹೇಳುತ್ತದೆ. ಆದಿ ಮತ್ತು ಅಂತ್ಯನೀನೇ ಆಗಿರುವಾಗಹೇ ದೇವ; ನನ್ನದೇನಿದೆನೀ ತೋರಿದ ದಾರಿಯಲ್ಲಿನಡೆಯುವುದಷ್ಟೇ ನನ್ನ ಕೆಲಸವಾಗಿದೆ – ಜಗದೀಶ   ಇಲ್ಲಿ ಮನುಷ್ಯ ತಾನು ಏನೇ ಸಾಧಿಸಿದ್ದರೂ ಸಹ ಸೃಷ್ಟಿ ನಿಯಮದಡಿ ಆ ದೈವ ಮಹಿಮೆಯ ಮುಂದೆ ಅವನು ಅಲ್ಪನೇ. ಜೀವನದ ಆದಿ ಅಂತ್ಯಗಳನ್ನು ನಿರ್ಧರಿಸುವವನು ಅವನೇ. ಹುಟ್ಟು ಉಚಿತ ಸಾವು ಖಚಿತ ಎನ್ನುವಂತೆ; ಹುಟ್ಟು ಎನ್ನುವ ಪ್ರಕೃತಿಯ ನಿಯಮವನ್ನು ಮೀರಿ ತನಗೆ ಬೇಕಾದ ಹಾಗೆ ನಿರ್ಧರಿಸಲು ಸಾಧ್ಯವೇ ಇಲ್ಲ. ಈಗ ಐವಿಎಫ್‌ನಂತಹ ತಂತ್ರಜ್ಞಾನದ ಮೂಲಕ ಅಥವಾ ಟೆಸ್ಟ್ ಟ್ಯೂಬ್ ಬೇಬಿ ಎನ್ನುವ ಪರಿಕಲ್ಪನೆ ಇದ್ದರೂ ಸಹ ಅದೂ ಕೂಡ ದೈವ ಕೃಪೆಯ ಜೀವಾಣುಗಳಿಂದ ಸೃಷ್ಟಿಸಲು ಸಾಧ್ಯವೇ ಹೊರತು ಜೀವಾಣುಗಳನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಸುದೀರ್ಘ ಆಯಸ್ಸಿಗಾಗಿ ಮನುಷ್ಯ ತನ್ನ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳಲು ಏನೇ ಕಸರತ್ತು ಮಾಡಿದರೂ, ಇತ್ತೀಚಿನ ಹಲವಾರು ಅಕಾಲಿಕ ಮರಣಗಳ ಉದಾಹರಣೆಗಳನ್ನು ನಾವು ಕಾಣಬಹುದು. ಹೀಗಿರುವಾಗ ಸಿಕ್ಕಿರುವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ದೇವರು ತೋರಿದ ಹಾದಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಾಗುವುದಷ್ಟೇ ನಮ್ಮ ಕಾಯಕವಾಗಬೇಕು ಎನ್ನುವ ಅಪೂರ್ವವಾದ ಸಂದೇಶವನ್ನು ತಿಳಿಸುವ ಈ ವಚನವು ಸಕಾಲಿಕವಾಗಿದೆ. ಸಂಬಂಧಗಳು ಹೇಗಿರಬೇಕೆಂದರೆಶ್ರೀಗಂಧದಂತೆ ಸುವಾಸನೆ ಬೀರಬೇಕುಸಂಬಂಧಗಳನ್ನು ಮುರಿಯುವ ಪ್ರಯತ್ನಯಾರೇ ಮಾಡಿದರೂ ಸುವಾಸನೆ ಮಾತ್ರಹಾಗೇ ಉಳಿಯಬೇಕು- ಜಗದೀಶ  ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ ಪರಸ್ಪರ ಮಾನವನ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಿದೆ ಅಥವಾ ಈ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ ಎಂದೇ ಹೇಳಬಹುದು. ಗಂಡ ಹೆಂಡತಿ ಮಗು ಮಾತ್ರ ಜೊತೆಗಿದ್ದರೇ ಅದೇ ಅವಿಭಕ್ತ ಕುಟುಂಬ ಎನ್ನುವ ಕಾಲ ಇದಾಗಿದೆ. ಇಲ್ಲಿ ತಂದೆ-ತಾಯಿ-ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಅತ್ತೆ-ಸೊಸೆ ಎನ್ನುವ ಸಂಬಂಧವು ಅದರ ಬೆಲೆಯನ್ನು ಕಳೆದುಕೊಂಡಿದೆ. ಕೇವಲ ಹಣದ ದಾಹ ಆಸ್ತಿಯ ಮೋಹವು ಈ ಎಲ್ಲಾ ಸಂಬಂಧವನ್ನು ದೂರ ಮಾಡುತ್ತಿದೆ. ಸಂಪತ್ತಿನ ಹಿಂದೆಯೇ ಓಡುತ್ತಿರುವ ಈ ಜಗತ್ತು ಸಂಬಂಧದ ಕಡೆಗೆ ಕಣ್ಪಟ್ಟಿಯನ್ನು ಕಟ್ಟಿಕೊಂಡಿದೆ. ಹಣಕ್ಕಾಗಿ, ಪತಿಷ್ಟೆಗಾಗಿ ಈ ಸಂಬಂಧಗಳು ಕಚ್ಚಾಡುವುದಷ್ಟೇ ಅಲ್ಲ ಜೀವ ತೆಗೆಯುತ್ತಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ ಅನೈತಿಕ ಸಂಬಂಧಗಳ ಅಟ್ಟಹಾಸವು ಇಂದು ಅನಾಚಾರಗಳಿಗೆ ಎಡೆಮಾಡಿಕೊಡುತ್ತಿವೆ. ಇಂತಹ ಸಂಬಂಧದಲ್ಲಿ ಶ್ರೀಗಂಧದಹಾಗೆ ಸುವಾಸನೆ ಬೀರುಂತೆ ಸಂಬಂಧಗಳು ಇರಬೇಕು ಎನ್ನುವ ವಚನಗಾರರ ಭಾವ ನಿಜಕ್ಕೂ ಸಂದರ್ಭೋಚಿತವಾಗಿದೆ. ಹೆಸರಿಗೆ ಮಾತ್ರ ಹಣ ಆಸ್ತಿಗಾಗಿ ಮಾತ್ರ ಸಂಬಂಧಗಳನ್ನು ನಿಭಾಯಿಸುತ್ತಾ ಬಾಳುವ ಜನರಿಗೆ ಪಾಠ ಹೇಳುವ ಮತ್ತೂ ಕೆಲವು ವಚನಗಳು ಕೂಡ ಇಲ್ಲಿವೆ. ಅಂತಹದ್ದೇ ಮತ್ತೊಂದು ವಚನವನ್ನು ನೋಡುವುದಾದರೆ, ಇಂದು ನಮ್ಮಲ್ಲಿರುವ ಸಂಪತ್ತುನಾಳೆ ಇಲ್ಲದೇ ಇರಬಹುದುಇಲ್ಲದ ಸಂಪತ್ತು ನಾಳೆಒಂದು ವೇಳೆ ಸಿಕ್ಕರೂ ಸಿಗಬಹುದುಆದರೆ ಪ್ರೀತಿ, ವಿಶ್ವಾಸ, ನಂಬಿಕೆಒಮ್ಮೆ ಕಳೆದುಕೊಂಡರೆ ಮತ್ತೆಜೀವನದಲ್ಲಿಬಾರದು- ಜಗದೀಶ  ಇಲ್ಲಿ ವಚನಕಾರರು ಇಂದಿನ ಪೀಳಿಗೆಯವರಿಗೆ ಜೀವನದಲ್ಲಿ ಯಾವುದು ಪ್ರಮುಖ ಎನ್ನುವುದರ ಬಗೆಗೆ ಕಿವಿಮಾತನ್ನು ಹೇಳುತ್ತಿದ್ದಾರೆ. ಹಣದ ಹಿಂದೆಯೇ ಬಿದ್ದಿರುವ ಜಗತ್ತಿಗೆ ಸಂಪತ್ತು ಎನ್ನುವುದು ಕ್ಷಣಿಕವಾದದ್ದು ಎನ್ನುತ್ತಾರೆ. ಸಂಪತ್ತು ಇಂದು ನಮ್ಮ ಬಳಿ ಅಗಾಧವಾಗಿರುತ್ತದೆ. ಆದರೆ ನಾಳೆ ಇಲ್ಲದೇ ಹೋಗಬಹುದು ಅಥವಾ ಇಂದು ಬಡವನಾದವನು ನಾಳೆ ಬಲ್ಲಿದನಾಗಬಹುದು. ನಾವು ನಮ್ಮ ಬಳಿ ಇರುವ ಸಂಪತ್ತನ್ನು ಕಳೆದುಕೊಂಡರೆ  ಯಾವುದೇ ನಷ್ಟವಿಲ್ಲ ಆದರೆ, ಜನರ ನಡುವೆ ಬದುಕುತ್ತಿರುವ ನಾವು ಅವರೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಹೊಂದಿರಬೇಕು. ಏಕೆಂದರೆ ಒಮ್ಮೆ ನಾವು ಇವುಗಳನ್ನು ಕಳೆದುಕೊಂಡರೆ ಎಂದಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳುವ ಈ ವಚನವು ಸಮಯೋಚಿತವಾದದ್ದು. ಸಾವಿರ ತಪ್ಪುಗಳನ್ನು ಮಾಡಿದ್ದರೂಕ್ಷಮಿಸುವ ಮತ್ತು ಬೆಳೆಸುವಗುಣವಿರುವುದು ಕೇವಲ ಜನ್ಮಕೊಟ್ಟತಂದೆ ತಾಯಿಗೆ ಮಾತ್ರ ಹಾಗಾಗಿತಂದೆ ತಾಯಿಯನ್ನು ಗೌರವಿಸುವಜವಾಬ್ದಾರಿ ನಮ್ಮದಾಗಬೇಕು- ಜಗದೀಶ   ಆಧುನಿಕತೆಯ ಈ ಜಗತ್ತಿನಲ್ಲಿ ಇಂದು ಸಾಂಪ್ರದಾಯಿಕ ಮನಸ್ಸಿನ ತಂದೆ ತಾಯಿ ಆಧುನಿಕತೆಯ ಸೋಗಿನಲ್ಲಿರುವ ಮಕ್ಕಳು ಇಂದು ತಂದೆ ತಾಯಿಯರನ್ನು ಹಲವಾರು ರೀತಿಯಲ್ಲಿ ದೂರುವುದನ್ನು ಕಾಣುತ್ತೇವೆ. ಮಕ್ಕಳು ಹುಟ್ಟಿದಾಗಿನಿಂದ ಏನೇ ತಪ್ಪುಮಾಡಿದ್ದರೂ, ಎಷ್ಟೇ ಕಷ್ಟಗಳನ್ನು ನೀಡಿದ್ದರೂ ತಂದೆ ತಾಯಿಯರು ಮಕ್ಕಳನ್ನು ಕ್ಷಮಿಸುತ್ತಾ, ಹೊಂದಾಣಿಕೆ ಮಾಡಿಕೊಳ್ಳುತ್ತಾ ತಾವು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾ ಅವರ ಏಳಿಗೆಗಾಗಿಯೇ ತಮಗೆ ಎಷ್ಟೇ ಕಷ್ಟವಾದರೂ ಶ್ರಮಿಸುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಯಶಸ್ಸನ್ನು ಕಾಣುವಲ್ಲಿ ತಮ್ಮ ಸ್ವಂತ ಸುಖವನ್ನೇ ಮರೆಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ ನಂತರ ವೃದ್ದಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎನ್ನುವ ಒಂದೇ ಒಂದು ನಿರೀಕ್ಷೆಯಷ್ಟೇ ಅವರದ್ದಾರುತ್ತದೆ. ಇಂದಿನ ಝೆನ್ ಜೀ ಮಕ್ಕಳು ಇದನ್ನು ಅರ್ಥಮಾಡಿಕೊಂಡರಷ್ಟೇ ಸಾಕು. ಆದರೆ, ಈಗ ನಡೆಯುತ್ತಿರುವುದಾದರೂ ಏನು? ತಂದೆ ತಾಯಿಯ ಕನಸನ್ನು ಈಡೇರಿಸಬೇಕಾಗಿದ್ದ ಮಕ್ಕಳು ತಾವು ವಿದ್ಯಾವಂತರಾಗಿ ಒಳ್ಳೆಯ ಕೆಲಸಕ್ಕೆ ಸೇರಿ ಹೆಚ್ಚು ಹಣಸಂಪಾದಿಸಿದ ನಂತರ ತಂದೆ ತಾಯಿಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮಕ್ಕಳು ಇಂದು ಅವರಿಗೆ ಎರಡು ಹೊತ್ತಿನ ಊಟ ಹಾಕಲೂ ಕೂಡ ಹಿಂದೆ ಮುಂದೆ ನೋಡುತ್ತಿರುವ ಮಕ್ಕಳನ್ನು ನೋಡುತ್ತಿದ್ದೇವೆ.  ಮಕ್ಕಳ ದೊಡ್ಡ ನಗರ ಜೀವನದ ವ್ಯಾಮೋಹ ಅಥವಾ ವಿದೇಶೀ ವ್ಯಾಮೋಹದಿಂದ ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ಅಥವಾ ಅವರನ್ನು ಒಂಟಿಯಾಗಿ ಬಿಟ್ಟು ಕಡೆಗಣಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರಿಗೆ ಬುದ್ಧಿವಾದ ಹೇಳುವಂತಹ ವಚನ ಇದಾಗಿದೆ. ಈ ವಚನದಲ್ಲಿ ತಂದೆ ತಾಯಿಯ ಜೀವನದ ಬಗ್ಗೆ ಆತಂಕವಿದೆ. ವೃದ್ಧಾಪ್ಯದ ಬಗ್ಗೆ ಕಾಳಜಿ ಇದೆ. ಇದರ ಮೂಲಕ ಸಮಾಜವನ್ನು ತಹಬದಿಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ನೀತಿಯುಕ್ತ ಜೀವನವನ್ನು ನಡೆಸುವ ಮಾರ್ಗದರ್ಶನವನ್ನು ತಮ್ಮ ವಚನಗಳಲ್ಲಿ ಮಾಡಿದ್ದಾರೆ. ಪ್ರೀತಿ ವಿಶ್ವಾಸವಿರಲಿನೋವು-ನಲಿವಾಗಲಿ ಪತಿ-ಪತ್ನಿಇಬ್ಬರೂ ಗೌರವದಿಂದ ಸಮನಾಗಿಹಂಚಿಕೊಂಡಾಗಲೇ ನಮ್ಮೀ ಬದುಕುಸುಂದರವಾಗುವುದಲ್ಲವೇ – ಜಗದೀಶ      ತಮ್ಮ ನಲವತ್ತನೇ ವರ್ಷದ ದಾಂಪತ್ಯದ ತುಂಬು ಜೀವನವನ್ನು ಸಂಭ್ರಮಿಸುತ್ತಿರುವ ಆಧುನಿಕ ವಚನಕಾರರಾದ ಶ್ರೀ ಎಂ.ಬಿ.ಸಂತೋಷ್ ಅವರು ದಾಂಪತ್ಯದ ಬಗ್ಗೆ ಹಲವು ಸಲಹೆಗಳು ಹಾಗೂ ಮಾರ್ಗದರ್ಶನವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಬೆಳಿಗ್ಗೆ ಮದುವೆ ಸಂಜೆ ವಿಚ್ಚೇದನ ಎಂದಿರುವ ಈ ಕಾಲದಲ್ಲಿಗಂಡ ಹೆಂಡತಿಯರ ನಡುವಿನ ಸಂಬಂಧವು ಬೀದಿಗೆ ಬಂದು ನಿಂತಿದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಸುಳ್ಳಾಗಿದೆ. ಇಂದು ಪ್ರೀತಿ ಪ್ರೇಮ ಮದುವೆಗಳು ನಡೆಯುವಷ್ಟೇ ವೇಗವಾಗಿ ವಿಚ್ಛೇದನಗಳು ನಡೆಯುತ್ತಿವೆ.  ಅಲ್ಲದೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ಅಹಂ ಭಾವ, ಸಂದೇಹ, ಮದುವೆಯಾಚೆಗಿನ ಅನೈತಿಕ ಸಂಬಂಧಗಳು, ಹಣದಾಸೆ ಇವೆಲ್ಲವೂ ಹೆಚ್ಚಾಗಿದೆ. ಇದರಿಂದ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ದಾರುಣವಾಗಿ ಕೊಲೆಗೈಯ್ಯಲೂ ಸಹ ಹಿಂಜರಿಯದೇ ಇರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ಇಂತಹ ಘಳಿಗೆಯಲ್ಲಿ ಯುವ ಜನತೆಗೆ ದಾಂಪತ್ಯ ಎನ್ನುವುದು ಯಶಸ್ವಿಯಾಗಬೇಕಾದರೆ ಪ್ರೀತಿ-ವಿಶ್ವಾಸ, ನೋವು ನಲಿವು ಇವೆಲ್ಲದರಲ್ಲಿಯೂ ಪತಿ-ಪತ್ನಿ ಪರಸ್ಪರ ಗೌರವದಿಂದ ಸಮಾನತೆಯಿಂದ ಬದುಕಿದಾಗಲೇ ಈ ಬದುಕು ಸುಂದರ ಎನ್ನುವ ಮಾರ್ಗದರ್ಶನ ಮಾಡುವವರ ಅವಶ್ಯಕತೆ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ Read Post »

ಪುಸ್ತಕ ಸಂಗಾತಿ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ

ಪುಸ್ತಕ ಸಂಗಾತಿ ಅಭಿಜ್ಞಾ ಪಿ.ಎಂ ಗೌಡ ಶ್ರೀಕಾಂತ್‌ ಪತ್ರೆಮರ “ವ್ಯಕ್ತಪತ್ರೆಗಳು” *ವ್ಯಕ್ತಪತ್ರೆಗಳ ಒಳ ಹೊಕ್ಕಾಗ*                ವ್ಯಕ್ತಪತ್ರೆಗಳು ಎಂಬ ಶೀರ್ಷಿಕೆಯೆ ಬಹಳ ಅರ್ಥಪೂರ್ಣವಾಗಿದೆ. ಈ ಕವನ ಸಂಕಲನವು ಶ್ರೀಕಾಂತ್ ಪತ್ರೆಮರ ರವರ ಚೊಚ್ಚಲ ಕೃತಿಯಾಗಿದ್ದು ಇದು ನೂರಕ್ಕೂ ಅಧಿಕ ಕವನಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡಿರುವ ಅದ್ಭುತ ಕೃತಿ ಎಂದರೆ ತಪ್ಪಾಗಲಾರದು. ಇದರೊಳಗಿರುವ ಒಂದೊಂದು ಕವನಗಳು ಕೂಡ ಒಂದೊಂದು ಕಥೆಯನ್ನು ಹೇಳುವಂತಿವೆ.ಇಲ್ಲಿನ ಕವನಗಳಲ್ಲಿ ಭಾವನೆಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಅತ್ಯಂತ ಸುಂದರ ಹಾಗೂ ಅರ್ಥಗರ್ಭಿತ ಪದಗಳಲ್ಲಿ ವ್ಯಕ್ತಪಡಿಸಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂಥರಾ ಆನಂದ. ಈ ಸಂಕಲನದಲ್ಲಿ ಶ್ರೀಕಾಂತ್ ಪತ್ರೆಮರ ರವರು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು, ಭಾವನೆಯನ್ನು ತುಂಬಿ ಕವನಗಳ ರಚನೆ ಮಾಡಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿನ ಕವನಗಳಲ್ಲಿ ಪ್ರೀತಿ, ಕರುಣೆ, ಕೋಪ, ದುಃಖ, ದೇಶಭಕ್ತಿ, ಪ್ರಕೃತಿಯ ಸೌಂದರ್ಯವನ್ನು ಮನಮುಟ್ಟುವಂತೆ ಹೇಳಿರುವುದಲ್ಲದೆ;ಕೆಲವೊಂದು ಕವನಗಳು ಲಯಬದ್ಧವಾಗಿ ರಚಿಸಿದ್ದಾರೆ. ಹಾಗಾಗಿ ಇಲ್ಲಿನ ಕೆಲವು ಕವನಗಳು ರಾಗವಾಗಿ ಹಾಡಲು ಮನಸ್ಸಿಗೆ ಮುದ ನೀಡುವಂತಿವೆ.ಪತ್ರೆಮರ ರವರು ​ತಮ್ಮ ಕಲ್ಪನಾ ಲೋಕದ ಮೂಲಕ ಸಾಮಾನ್ಯ ಸಂಗತಿಗಳಿಗೂ ಒಂದು ವಿಶಿಷ್ಟ ರೂಪವನ್ನು ಕೊಟ್ಟಿರುವುದು ಹಾಗು ಸುದೀರ್ಘವಾದ ಕಥೆಯನ್ನು ಹೇಳುವ ಬದಲು, ಕೆಲವೇ ಸಾಲುಗಳಲ್ಲಿ ಇಡೀ ಭಾವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯವೆನಿಸಿದೆ.ಅದರ ಜೊತೆಗೆ ಪ್ರಕೃತಿಯ ಐಸಿರಿ , ವಸುಂಧರೆಯ ಸೌಂದರ್ಯ; ಅವಳ ಅನನ್ಯ ಅಪ್ರತಿಮ ಒಡಲಿನಲಿ ತುಂಬಿರುವ ಅಗಾಧ ಅಂಶಗಳನ್ನು ಹೊತ್ತಿ ತರುವುದರ ಮೂಲಕ ಒಂದು ಪ್ರಚಲಿತ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವಿಧಾನ ನಾಡುನುಡಿಯ ಬಗ್ಗೆ ಗೌರವ, ಆದರಗಳು ಇತ್ಯಾದಿಗಳನ್ನು ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.“ಮನಸ್ಸಿನ ಆಳದಿಂದ ಉಕ್ಕಿ ಬರುವ ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ, ಲಯದ ಚೌಕಟ್ಟಿನಲ್ಲಿ ಪೋಣಿಸಿರುವುದನ್ನು ಕೂಡ ಈ ಕೃತಿಯಲ್ಲಿ ನೋಡಬಹುದಾಗಿದೆ.                 ಪತ್ರೆಮರ ರವರು ತಮ್ಮ ಆಂತರ್ಯದ ಮೌನ, ಪ್ರೀತಿ, ವಿರಹ, ಹಳಹಳಿಕೆ, ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುತ್ತಾ ಪತ್ರಗಳ ರೂಪದಲ್ಲಿ ಕಾವ್ಯವಾಗಿಸಿ ವ್ಯಕ್ತಪಡಿಸಿರುವುದನ್ನು ಈ ಕವನಗಳನ್ನು ಓದುತ್ತಿದ್ದಂತೆಯೇ ಗೊತ್ತಾಗುವುದು.ಭಾವನೆಗಳನ್ನು ವ್ಯಕ್ತಪಡಿಸಿರುವ ಈ ಕವನಗಳು ಸಾಮಾನ್ಯವಾಗಿ ಓದುಗನಿಗೆ ನೇರವಾಗಿ ಕವಿಯು ತನ್ನೊಳಗಿನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆಯೆ  ಆಪ್ತವೆನಿಸುವವು.                 ಪತ್ರೆಮರ ರವರು ತಮ್ಮ ಕವನ ಸಂಕಲನದಲ್ಲಿ ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಭಗವಂತನಲ್ಲಿ ಶರಣಾಗುವ ದಿವ್ಯ ಮಾರ್ಗವನ್ನು ತೋರುವಂತಹ ಭಕ್ತಿ ಸುಧೆಯನ್ನು ಹರಿಸಿರುವುದನ್ನು ಕಾಣಬಹುದು.ಬದುಕಿನ ಏಳು ಬೀಳುಗಳನ್ನು ಕಂಡಂತಹ ಆಪ್ತ ವಿಷಯಗಳನ್ನು ಕಥನ ರೂಪದಲ್ಲಿ ಬಿಂಬಿಸಿರುವುದು ಅರ್ಥಗರ್ಭಿತವಾಗಿದೆ. ಅಪ್ಪನ ನೋವು, ಹೆತ್ತವ್ವನ ಕಷ್ಟ,ಜೀವಸಖಿಯ ಗೀತೆಗಳನ್ನು ಎಳೆ ಎಳೆಯಾಗಿ ರಚಿಸಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಕವನಗಳು ತುಂಬಾ ಅರ್ಥಪೂರ್ಣವಾಗಿ ರಚನೆಗೊಂಡಿದೆ ಅದರಲ್ಲಿ ಕೆಲವೊಂದುಷ್ಟು ಕವನಗಳ ಸಾಲುಗಳು ತುಂಬಾ ಆಪ್ತವೆನಿಸಿತ್ತಿವೆ  *ತಾವರೆ ನಾವಾದರೆ* ಸುತ್ತಣ ಸುಂದರವಿದೆ ಒಳಗಣ ಅಂದಗೆಟ್ಟಿದೆಹಾಗೆಂದು ಅರಳದೇನು? ತಾವರೆ ಜೀವ ಚೈತನ್ಯದ ಚಾರುಲತೆ?       ಕವಿಯ ಈ ಸಾಲುಗಳಲ್ಲಿ ಅದೆಷ್ಟು ಅರ್ಥ ತುಂಬಿದ ನುಡಿಗಳಿವೆ. ನಮ್ಮ ಸುತ್ತಲಿನ ಪರಿಸರ ಎಷ್ಟೇ ಸುಂದರವಾಗಿದ್ದರೂ, ನಮ್ಮೊಳೊಗಿನ ಮನಸ್ಸು ಕುಸಿದಿರಬಹುದು; ಹಾಗೆಂದ ಮಾತ್ರಕ್ಕೆ ಬದುಕಿನ ಚೈತನ್ಯದ ಸಂಕೇತವಾದ ತಾವರೆ ಅರಳುವುದನ್ನು ನಿಲ್ಲಿಸುವುದಿಲ್ಲ.ನಾವು ತಾವರೆಯಂತಾದರೆ, ಎಂತಹ ಕಷ್ಟದ (ಕೆಸರಿನ) ಪರಿಸ್ಥಿತಿಯಲ್ಲೂ ಧೃತಿಗೆಡದೆ ನಮ್ಮೊಳಗಿನ ಜೀವಕಳೆಯನ್ನು ಜಾಗೃತವಾಗಿಟ್ಟುಕೊಂಡು ಮುನ್ನಡೆಯುತ್ತ,ನಮ್ಮನ್ನು ನೋಡುವ ಇಡೀ ಜಗತ್ತಿಗೆ ನಮ್ಮ ಮುಖದಲ್ಲಿನ ನಗು ಮತ್ತು ಸಕಾರಾತ್ಮಕತೆ ಸದಾ ಸ್ಪೂರ್ತಿ ನೀಡುವಂತಿರಬೇಕು ಎಂಬುದನ್ನ ತುಂಬಾ ಸೊಗಸಾಗಿ ಹೇಳಿದ್ದಾರೆ.  *ದೀವಟಿಕೆ*  ಮಾತಿರದ ಮೌನದಲಿ ಅರಳಿಸಿಹಳು ಹಣತೆಗಳೊಳಗಿಂದ ಬೆಳಕಿನ ಸಿಂಚನ ಮಾತಿರುವ ಮುನಿಸಿರುವ ಬದುಕಿನಲಿ ಪ್ರೀತಿಯ ಎದೆಗೂಡಲಿ ಮುಡಿದಿಹಳು ಜೀವಾತ್ಮದ ಜ್ಯೋತಿ ಸುಚೇತನವನು ಮಿಡಿದಿಹಳು ಸಖಳಾಗಿ ಸಕಲಕೆಲ್ಲಕು ದೀವಟಿಕೆ ಕವನದಲ್ಲಿ ಹೆಣ್ಣನ್ನು ಹಣತೆಗೆ ಹೋಲಿಸಿರುವ ಅವರ ಸಾಲುಗಳು ತುಂಬಾ ಚೆನ್ನಾಗಿವೆ ಮಾತುಗಳಿಲ್ಲದ ನಿಶ್ಯಬ್ದದ ಪರಿಸ್ಥಿತಿಯಲ್ಲಿ ಆಕೆ ಪ್ರೀತಿಯ ಹಣತೆಯನ್ನಿಟ್ಟು, ಬದುಕಿನಲ್ಲಿ ಜ್ಞಾನ ಮತ್ತು ಸಂತೋಷದ ಬೆಳಕನ್ನು ಚೆಲ್ಲುತ್ತ,ಮೌನದ ಬೆಳಕನ್ನು,ಪ್ರೀತಿಯ ಆಸರೆಯನ್ನು, ಆತ್ಮದ ಜಾಗೃತಿಯನ್ನು ಮಾಡುತ್ತಾ, ಕೊನೆಗೆ ತನ್ನ ಬದುಕಿನ ಪ್ರತಿಯೊಂದು ಅಣು-ಅಣುವಿನಲ್ಲೂ ತುಂಬಿ ಹೋಗಿ, ಜೀವನದ ಸಕಲಕ್ಕೂ ತಾನೇ ಸರ್ವಸ್ವವಾಗಿದ್ದಾಳೆ ಎಂಬುವುದನ್ನು ಈ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಅಮೂರ್ತ ಚಿಂತನೆಗೆ ಮೂರ್ತ ರೂಪ ನೀಡುವ ಇವರ ಕವನದ ಸಾಲುಗಳು, ಸಡಗರದ ಸಂಕ್ರಾಂತಿಯ ಕಿಚ್ಚು. ಎಳ್ಳು ಬೆಲ್ಲ ಸವಿಯುವ ಮೆಚ್ಚು, ಸಹಬಾಳ್ವೆ,ಸಮಾನತೆ,ಸಹಬಂಧಗಳ ಬಗ್ಗೆ ಮೂಡಿ ಬಂದಿರುವ ಸಾಲುಗಳ ತೇರು. ಕನ್ನಡ ನುಡಿ,ನಾಡಿನ ಕೆಚ್ಚೆದೆಯ ಬಗೆಗಿನ ಬರಹ ಅರ್ಥಪೂರ್ಣವಾಗಿದೆ.  *ಕನ್ನಡ ನುಡಿ* ವಿಶಾಲ ಕರುನಾಡಿನ ಊರು ಕೇರಿಗಳಲ್ಲಿಬಡವರ ಒಡಲುಗಳಲ್ಲಿ ಮಣ್ಣಿನ ಮಕ್ಕಳಲ್ಲಿಶ್ರಮಿಕ ಕಾರ್ಮಿಕರ ಉಸಿರಿನಲ್ಲಿ ಮತ್ತೆಲ್ಲರತುಟಿಗಳಲ್ಲಿ ನಲಿದಾಡುತಿರೆ ಭಯವೇಕೆ? ಕನ್ನಡ ನಾಡಿನ ಹಳ್ಳಿ-ಹಳ್ಳಿಗಳಲ್ಲಿ, ಬಡವರ ಹಾಗೂ ರೈತರ ಹೃದಯಗಳಲ್ಲಿ,ಕಷ್ಟಪಟ್ಟು ದುಡಿಯುವ ಕಾರ್ಮಿಕರ ಉಸಿರಿನಲ್ಲಿ ಕನ್ನಡ ನುಡಿ ರಾರಾಜಿಸುತ್ತಿದೆ. ಈ ಮಣ್ಣಿನ ಪ್ರತಿಯೊಬ್ಬರ ತುಟಿಗಳ ಮೇಲೂ ಕನ್ನಡವೇ ನಲಿದಾಡುತ್ತಿರುವಾಗ, ನಮ್ಮ ಭಾಷೆಗೆ ಯಾವುದೇ ಆಪತ್ತು ಬರುತ್ತದೆ ಎಂಬ ಭಯ ಪಡುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಬದುಕಿನೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಸದಾ ಸುರಕ್ಷಿತ ಮತ್ತು ಚಿರಂತನ ಎಂಬುವುದನ್ನು ಅದ್ಭುತವಾಗಿ ತಮ್ಮ ಕವನದ ಸಾಲುಗಳಲ್ಲಿ ಹೇಳಿದ್ದಾರೆ.       ಹಾಗೆಯೇ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ವಿಭಿನ್ನ ತತ್ವಗಳನ್ನು ಸರಳವಾಗಿ ಅರ್ಥೈಸುವ ಇವರ ಕವನದ  ಸಾಲುಗಳನ್ನು ಓದಲೇಬೇಕು.”ವ್ಯಕ್ತಿಯು ತನ್ನ ಅಸ್ಮಿತೆ  ಮತ್ತು ಕಣ್ಣೀರಿನ ಮೂಲಕ ತನ್ನೊಳಗಿನ ದುಃಖ-ದುಮ್ಮಾನಗಳನ್ನು ಅರಿತುಕೊಳ್ಳುವ ಬಗ್ಗೆ,ಪ್ರಕೃತಿಯ ಮುಗ್ಧತೆ (ಹಕ್ಕಿಯ ಹಾಡು) ಹಾಗೂ ಜೀವನದ ಸಂತೋಷದ ಸಾಕಾರ ರೂಪವಾದ ನಗುವಿನಲ್ಲೇ (ಸಿರಿ ನಿನ್ನ ನಗುವಿನಲ್ಲಿದೆ) ನಿಜವಾದ ಸಂಪತ್ತನ್ನು ಕಂಡುಕೊಳ್ಳುವ ಬಗ್ಗೆಗಿನ ಸಾಲುಗಳನ್ನು ಕಾಣಬಹುದು ಮತ್ತು ಈ ರೀತಿ ತನ್ನನ್ನು ತಾನು ಗೆದ್ದು, ಜಗತ್ತಿಗೆ ಪ್ರೀತಿ ಮತ್ತು ಜ್ಞಾನವನ್ನು ಹಂಚುವ ಮೂಲಕವೆಮನುಷ್ಯ ಕೊನೆಗೆ ‘ವಿಶ್ವಗುರು’ ಆಗುತ್ತ ಉದಾತ್ತ ಎತ್ತರಕ್ಕೆ ಬೆಳೆಯುವ ಈ ಕವನದ ಸಾಲುಗಳನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಅರ್ಥಪೂರ್ಣವಾದ ಸಾಲುಗಳಿವು.​ಒಟ್ಟಾರೆಯಾಗಿ ಅಸ್ತಿತ್ವ, ಪ್ರಕೃತಿ, ಭಾವನೆ, ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಭಿನ್ನ ಹಂತಗಳನ್ನು ಧ್ವನಿಸುವಂತಿವೆ. ಮುಂದುವರೆದಂತೆ ಈ ಎಲ್ಲ ಪರಿಕಲ್ಪನೆಗಳು ಮನುಷ್ಯನ ಜೀವನದ ಸುದೀರ್ಘ ಪಯಣವನ್ನು ಮತ್ತು ಅದರಲ್ಲಿ ಎದುರಾಗುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಂತಿರುವುದನ್ನು ನೋಡಬಹುದು. ಜಗತ್ತಿನ ಸತ್ಯವನ್ನು ಹುಡುಕುವ ‘ಶೋಧನಾ ಸವಾರಿ’ ಮತ್ತು ಸಾವಿನೆಡೆಗೆ ಸಾಗುವ ‘ಬಾಳಯಾನ’ಗಳು ‘ವಿಧಿ ಲಿಖಿತ’ದ ಚೌಕಟ್ಟಿಗೆ ಒಳಪಟ್ಟಿದ್ದರೂ, ಬದುಕು ಸಾರ್ಥಕವಾಗುವುದು ಪ್ರೀತಿಯ ಜ್ವಾಲೆಯಾದ ‘ಒಲುಮೆಯ ಕುಲುಮೆ’ಯಲ್ಲಿ ಬೆಂದು ಪಕ್ವವಾದಾಗ ಮಾತ್ರ. ಅಂತಿಮವಾಗಿ, ಜಗದ್ಜ್ಯೋತಿ ಬಸವೇಶ್ವರರು ತೋರಿದ ಕಾಯಕ, ಸಮಾನತೆ ಮತ್ತು ಭಕ್ತಿಯ ಮಾರ್ಗವು ಈ ಇಡೀ ಜೀವನದ ಪಯಣಕ್ಕೆ ಒಂದು ಸುಂದರವಾದ ಅರ್ಥವನ್ನು ಹಾಗೂ ಮುಕ್ತಿಯ ದಾರಿಯನ್ನು ಕಲ್ಪಿಸಿಕೊಡುತ್ತದೆ. ಇಂತಹ ಹಲವಾರು ಕವನಗಳನ್ನು ಓದಬೇಕಾದರೆ ಈ ಸಂಕಲನವನ್ನು ಖಂಡಿತ ಕೊಂಡು ಓದಿರಿ. ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಹಲವಾರು ಮಹಾನ್ ಕವಿಗಳು, ಸಂಗೀತಗಾರರ,ಬಗ್ಗೆ ತುಂಬಾ ಚೆಂದದ ಕವನಗಳಿವೆ.  *ಸಂಚಲನ* ಸಂಚಲನ ಕವನದಲ್ಲಿ ಮೂಡಿ ಬಂದಿರುವಂತಹ ಈ ಸಾಲುಗಳು ಮನಸ್ಸಿಗೆ ಮುದ ನೀಡುವಂತಿವೆ.“ದಟ್ಟ ಕಾನನದಿ ಫಲಪುಷ್ಪಗಳ ತೊನೆದ ತರುಲತೆಗಳು ತಂಗಾಳಿಗೆ ತೂಗುತ ತೇಲುತ ಜೀಕುವ ಜೋಗುಳದ ತರಂಗ ಲಾಲಿ ನಿತ್ಯ ಲೀಲೆ.” ಈ ಸಾಲುಗಳು ದಟ್ಟವಾದ ಅರಣ್ಯದಲ್ಲಿ ಪ್ರಕೃತಿ ಮತ್ತು ತಂಗಾಳಿಯ ನಡುವೆ ನಡೆಯುವ ಅದ್ಭುತ ಸುಂದರ ಬಾಂಧವ್ಯವನ್ನು ವರ್ಣಿಸುತ್ತಿವೆ. ಹೂವು-ಹಣ್ಣುಗಳಿಂದ ತುಂಬಿದ ಗಿಡಮರಗಳು ತಂಗಾಳಿಯ ಸೌಮ್ಯ ಸ್ಪರ್ಶಕ್ಕೆ ಲಯಬದ್ಧವಾಗಿ ತೂಗುತ್ತಾ, ಪ್ರಕೃತಿಯೇ ಒಂದು ದಿವ್ಯ ಜೋಗುಳವನ್ನು ಹಾಡುತ್ತಿರುವಂತೆ ಭಾಸವಾಗುತ್ತಿವೆ. ಕಾಡಿನ ಈ ಧ್ವನಿ ಮತ್ತು ಹಸಿರಿನ ನೃತ್ಯವು ಮನಸ್ಸಿಗೆ ಶಾಂತಿಯನ್ನು ನೀಡುವ ಜೋಗುಳದ ತರಂಗದಂತಿದೆ. ಯಾವುದೇ ಹಸ್ತಕ್ಷೇಪವಿಲ್ಲದ ನಿಗೂಢ ಕಾನನದಲ್ಲಿ ಈ ನೈಸರ್ಗಿಕ ಸೌಂದರ್ಯವು ಪ್ರತಿದಿನವೂ ನಿರಂತರವಾಗಿ ನಡೆಯುವ ಒಂದು ದೈವಿಕ ಲೀಲೆಯಾಗಿದೆ ಎಂಬುವುದನ್ನು ತುಂಬಾ ಸುಂದರವಾಗಿ ಹೇಳುತ್ತಾ, ಇಲ್ಲಿ ಪ್ರತಿದಿನ ಪ್ರಕೃತಿಯ ಸಂಚಲನ ಹೇಗಾಗುತ್ತಿದೆ ಎಂಬುದನ್ನು ಈ ಸಾಲುಗಳಲ್ಲಿ ಬಿಂಬಿಸಿದ್ದಾರೆ.            ಇಲ್ಲಿನ ಕವನಗಳಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಶ್ರೀಕಾಂತ್ ಪತ್ರೆಮರ ರವರು ಯಾವುದೇ ತ್ರಾಸಕ್ಕೆ ಬೀಳದೆ ಹೆಚ್ಚಿನ ಪ್ರಾಸವಿಲ್ಲದೆ ಅರ್ಥಪೂರ್ಣವಾದಂತಹ ಕವನಗಳನ್ನು ನೀಡಿದ್ದಾರೆ. ಹಾಗೆಯೇ ತಮ್ಮ ಕವನಗಳಲ್ಲಿ ರೂಪಕ ಉಪಮೇಗಳನ್ನು ಅಲ್ಲಲ್ಲಿ ಸೇರಿಸಿ ಉತ್ತಮ ನಿದರ್ಶನಗಳೊಂದಿಗೆ ಸಾಲುಗಳನ್ನು ಹೆಣೆಯುತ್ತ ಹಲವಾರು ಕವನಗಳನ್ನು ರಚಿಸಿದ್ದಾರೆ. ಇಲ್ಲಿ ಭಾವ ತುಂಬಿದ ಸಾಲುಗಳಿದ್ದು,ಪ್ರಸ್ತುತ ವಿಚಾರಗಳನ್ನ ಸೇರಿಸುತ್ತಾ ಅರ್ಥಪೂರ್ಣವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ರಚಿಸಿದ್ದಾರೆ.                ಕವಿತೆ ಕಟ್ಟಲು ಒಬ್ಬ ಕವಿಗೆ ತನ್ನೆಲ್ಲ ಅಭಿಷ್ಟಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಶ್ರೀಕಾಂತ್ ಪತ್ರೆಮರ ರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಭಕ್ತಿಸುಧೆ, ಬದುಕಿನ ಏಳುಬೀಳಿಗೆ ಸಂಬಂಧಪಟ್ಟಂತಹ ಕವನಗಳು, ಹೆಣ್ಣು, ಕನ್ನಡ ನುಡಿ, ಮಹಾನ್ ವ್ಯಕ್ತಿಗಳ ಸಾಲುಗಳು, ಕಾಣದ ವೈರಾಣು, ನೀರಾಗಬೇಕು,ಕಂಬನಿ, ಹೊರಟೆ ಏಕೆ ನಿಷ್ಕಾರಣ.? ಜೋಪಡಿ, ಹುಲಿ ಉಳಿಸಿ, ಮದರಂಗಿ, ಮೇಘ ಮನ, ಕೊನೆಯೆಂದು,ಸ್ವಯಂ ಪ್ರೀತಿ,ನಿರುತ್ತರ, ನಿರಾಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತಹ ಕವನಗಳನ್ನು ನೋಡಬಹುದಾಗಿದೆ. ಕುತೂಹಲ ಭರಿತ ವಿಚಾರಗಳನ್ನ ನೀವು ತಿಳಿಯಬೇಕಾದರೆ ಈ ಸಂಕಲನವನ್ನು ಖಂಡಿತ ಓದಲೇಬೇಕು.ಈ ಅಂದರೆ ನೋವು, ನೋಲಿವು, ಅಕ್ಕರೆ, ಸಕ್ಕರೆ. ಹುರುಪು, ಉತ್ತೇಜನ. ಉತ್ಸಾಹ, ಧೈರ್ಯ, ಉಲ್ಲಾಸ, ಆಸೆ, ಆಕಾಂಕ್ಷೆ, ಅಭಿಷ್ಟಗಳು, ಹೆಣ್ಣು,ಪ್ರಕೃತಿ,ಗೆಳೆಯ, ಗೆಳತಿ ಹೀಗೆ ಎಲ್ಲಾ ರೀತಿಯ ಕವಿತೆಗಳು ಸಹ ಇಲ್ಲಿವೆ..       ಈ ಸಂಕಲನವು ಸುಮಾರು 100 ಕ್ಕು ಹೆಚ್ಚು ಕವನಗಳನ್ನು ಒಳಗೊಂಡಿದ್ದು ;ಇದರೊಳಗೆ ಓದುಗರ ಮನಸ್ಸಿನಲ್ಲಿ ಉಳಿಯುವ ಕವನಗಳನ್ನು ನೋಡಬಹುದಾಗಿದೆ. ಅಂದ ಹಾಗೆ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ, ಲಯಬದ್ದ ಕವನಗಳು ಹಾಗೂ ಒಂದಷ್ಟು ಛoದೋಬದ್ದ ಕವನಗಳನ್ನು ಹೊತ್ತು ತರಲೆಂದು ಆಶಿಸುವೆ.ಈ ಒಂದು ಕೃತಿಗೆ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ ಶೈಲಾ ಜಯಕುಮಾರ್ ರವರು ಅಮೂಲ್ಯವಾದ ನುಡಿತೋರಣವನ್ನು ಮುನ್ನುಡಿಯೊಂದಿಗೆ ಕಟ್ಟಿಕೊಟ್ಟಿರುವರು. ಹಾಗೂ ಈ ಕೃತಿಗೆ ತಮ್ಮದೇ ಬೆನ್ನುಡಿಯಿದ್ದು ತುಂಬಾ ಸೊಗಸಾಗಿದೆ.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಶುಭವಾಗಲಿ ಸರ್.ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಕನ್ನಡ ಸಾಹಿತ್ಯದ ಒಡಲಿನಲ್ಲಿ ಸೇರಿಕೊಳ್ಳಲೆಂದು ಹಾರೈಸುವೆ… ಅಭಿಜ್ಞಾ ಪಿ.ಎಂ ಗೌಡಮಂಡ್ಯ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ Read Post »

ಪುಸ್ತಕ ಸಂಗಾತಿ

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು

ಪುಸ್ತಕ ಸಂಗಾತಿ ಹರಿನರಸಿಂಹ ಉಪಾಧ್ಯಾಯ ಶಂಭೂರು ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ” ಅಂಬುಧಿಯ ಆಳಗಲ ಆಗಸದ ವಿಸ್ತಾರಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆಜಗವೊಂದು ಹಿಡಿ ತಾನೆ? ಚಕ್ರಪಾಣಿ || ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ. ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು   ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ. ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ. ಗುರುಚರಣ ಎಂಬ ಚೋಕಾದಲ್ಲಿ… ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/ನರಮಾನವ/ ನಿನ್ನಾರು ಕಾಯುವರು/ಗುರುಚರಣ/ ಅನುದಿನ ಪೂಜಿಸು/ನೀನೇ ಶ್ರೇಷ್ಠನಾಗುವೆ// ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು. ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ…. ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/ಸತ್ಯದ ಸಾವು/ ಸಂಭವಿಸಿರುವಾಗ/ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/ಹೇಳು ನೀ ಸೃಷ್ಟಿಕರ್ತ // ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ. ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/ಧರ್ಮಯುದ್ಧವೇ ಅಸ್ತ್ರ// ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ. ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು// ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ  ಪರಿ ಅತ್ಯಂತ ಸೊಗಸಾಗಿದೆ. ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು// ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ. ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ// ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ. ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ. ಭಾರತಾಂಬೆಯ / ಮುಕುಟದಿ ಶೌರ್ಯದಿ /ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು// ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ. ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ. ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ. ಹರಿನರಸಿಂಹ ಉಪಾಧ್ಯಾಯ(ಕವಿಗಳು)ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ+೯೧ ೯೯೮೦೯೨೧೧೧೧

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು Read Post »

ಪುಸ್ತಕ ಸಂಗಾತಿ

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು “ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..? ‘ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ನೀವು ನನ್ನನ್ನು ಹಿಂಸಿಸಬಹುದು, ನೀವು ಈ ದೇಹವನ್ನು ಸಹ ನಾಶಪಡಿಸಬಹುದು. ಆದರೆ ನೀವು ಎಂದಿಗೂ ನನ್ನ ಮನಸ್ಸನ್ನು ಬಂಧಿಸಲಾಗುವುದಿಲ್ಲ.             -ಮಹಾತ್ಮ ಎಂ.ಕೆ.ಗಾಂಧಿ. ಮಾಳೇಟಿರ ಸೀತಮ್ಮ ವಿವೇಕ್  ಅವರ ಇತ್ತೀಚಿನ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕವೊಂದರ ನಂತರ ಮೂಡಿ ಬರುತ್ತಿರುವ ನನ್ನ ಚೊಚ್ಚಲ ಕನ್ನಡ ಕೃತಿಯಾಗಿದೆ ಎನ್ನುವ ಮೇಡಂ ಅವರ ತವರು ಮನೆ ಹೆಸರು ಕಂಬೀರಂಡ. ಮೂರ್ನಾಡು ಬಾಡಗ ಗ್ರಾಮ. ಕೊಡಗು ಜಿಲ್ಲೆ. ಚರಿತ್ರೆ ಅಧ್ಯಯನಗಾರ್ತಿಯಾದ ಇವರ ಮನಸ್ಸು ಕೃತಿ ಸಾಕಷ್ಟು ಅಧ್ಯಯನ ನಡೆಸಿ ವಿಶಿಷ್ಟ ಮಾಹಿತಿ ಅನುಭವಗಳನ್ನು ಕ್ರೋಢೀಕರಿಸಿ ಬರೆದ ಕೃತಿ.  ಮಾನವ ಜೀವನದ ಅತಿ ಮಹತ್ವದ ಆದರೆ ಅತೀ ಅಲಕ್ಷಿತ ಶಕ್ತಿ ಮನಸ್ಸು. ಇದು ಕಾಣುವುದಿಲ್ಲ. ಕಾಣಿಸಿಕೊಳ್ಳುವ ಎಲ್ಲರಿಗೂ ಇದು ಸ್ಫರ್ಶಿಸಬಹುದಾದ ಅಂಗವೂ ಅಲ್ಲ. ಅದರ ಪ್ರತಿಯೊಂದು ಅನುಭವದ ಸ್ಫಂದನ. ಅದರಿಂದಲೇ ಈ ಕೃತಿಯಲ್ಲಿ ಕಾಣುವ ಮನ ಏವಂ ಮನುಷ್ಯಾಣಾಂ ಕಾರಣಂ ಬಂಧಂ ಮೋಕ್ಷಯೋ: ಎಂಬ ಪುರಾತನ ತತ್ವ ವಾಕ್ಯವು ಮನಸ್ಸಿನ ಸ್ವಭಾವವನ್ನು ನೇರವಾಗಿ ಸ್ಫಷ್ಟಪಡಿಸುತ್ತದೆ. ಮನಸ್ಸೆ ಬಂಧನಕ್ಕೂ ಕಾರಣ. ಅದೇ ಮುಕ್ತಿಗೂ ದಾರಿ ಎಂದಿದ್ದಾರೆ ಇವರ ಪತಿ ಮಾಳೇಟಿರ ವಿವೇಕಾನಂದ ಪೊನ್ನಪ್ಪನವರು.   ಮನಸ್ಸು ಒಂದು ಅಗೋಚರ ಅತೀಂದ್ರಿಯ ಶಕ್ತಿಯಾಗಿದೆ. ಹೆಣ್ಣು ಗಂಡೆನ್ನದೆ ಸರ್ವರೊಳಗೂ ಇರುವ ಮನಸ್ಸು ಪ್ರತಿಯೊಬ್ಬರಿಗಿರುವ ಅವರವರ ದೇಹದೊಂದಿಗೆ ಜೀವಮಾನವೆಲ್ಲ ಚಲಿಸುವ, ದೈಹಿಕ ಅರಿಹಂತಗಳಿಂದ ಸಮ್ಮಿಳಿತವಾಗಿರುವ ಅತೀಂದ್ರಿಯವಾಗಿದೆ. ಬುವಿಯಲ್ಲಿ ರೂಪ ತಾಳುವ ದೇಹದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿರುವ ಮನಸ್ಸಿಗೆ ಘಾಸಿಯಾದರೆ ಇಡೀ ಶರೀರವೇ ನಾಶವಾಗುತ್ತದೆ. ಅಂತಹ ಘನತ್ತರವಾದ ನಮ್ಮೊಳಗೆ ಇರುವ ಮನ: ಮಾತೃಕೆಯ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೆ ಇರುವುದರಿಂದಲೇ ನಾವು ಮಾತ್ರವಲ್ಲದೆ ಕುಟುಂಬ, ಸಮಾಜ, ದೇಶವೇ ಏರುಪೇರು ದೃಷ್ಟಿಕೊನವನ್ನು ಹೊಂದಿದೆ.ಮಾನವ ಸಂಘ ಜೀವಿ. ಎಲ್ಲರ ಮನಸ್ಸಿಗು ಒಟ್ಟಿಗೆ ಬಾಳುವುದೇ ಪ್ರಧಾನ ಬಯಕೆ ಆಗಿರುತ್ತದೆ. ಹಾಗೆಂದು ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ. ನನಗೆ ಜಿ.ಎಸ್. ಶಿವರುದ್ರಪ್ಪನವರ ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬ ಭಾವಗೀತೆ ನೆನಪಾಗುತ್ತದೆ. ಅದರಲ್ಲಿನ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲ್ಲಿ. ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬಾಳಿನಲಿ.. ಹೌದು ಮನಸ್ಸಿನ ಅರಿವಿಕೆ ಇಲ್ಲದೆ ಇರುವುದೇ ಆ ಹೊಂದಿಕೆ ಸಾಧ್ಯವಾಗದೆ ಇರಲು ಕಾರಣ.ಮೇಡಂ ಅವರು ತಮ್ಮ ವೈಯಕ್ತಿಕ  ಜೀವನಾನುಭವಗಳನ್ನು ಆತ್ಮ ಪರಿಶೀಲನೆಯ ಕಣ್ಣಿನಿಂದ ನೋಡುತ್ತಾ, ಸಂಕಟಗಳನ್ನು ಜ್ಞಾನವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಪ್ರಕೃತಿ ವಾತಾವರಣದಲ್ಲಿ ಬೆಳೆದ ಬಾಲ್ಯ, ವಿಭಿನ್ನ ಸಂಸ್ಕೃತಿಗಳ ಅನುಭವ, ಜೀವನದ ಕಠಿಣ ಘಟ್ಟಗಳು, ಆರೋಗ್ಯ ಸಂಕಟಗಳು, ಆತ್ಮ ಅನ್ವೇಷಣೆಯ ಕ್ಷಣಗಳು ಇವೆಲ್ಲವೂ ಈ ಕೃತಿಗೆ ಜೀವ ತುಂಬಿವೆ. ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ನಲ್ಲಿ ಸಂಭವಿಸಿದ ಮರಣಭಯದ ಅನುಭವ   ದಾಖಲಿಸುತ್ತಾರೆ.ನಮ್ಮ ಕುಟುಂಬ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿ ಮನಾಲಿಯ ಹಿಡಿಂಬ ದೇವಸ್ಥಾನ ಸಮೀಪದಿಂದ ಸುಮಾರು ೫ ಸಾವಿರ ಮೀ.ಗಿಂತಲೂ ಎತ್ತರದ ರೋಹತಂಗ್ ಪಾಸ್ ನ ಪರ್ವತದೆಡೆ  ಪ್ರಯಣ ಬೆಳಸಬೇಕಿತ್ತು. ಅದು ಹಿಮ ಪರ್ವತವಾಗಿ ಸ್ಥಳೀಯರು ಬೆಚ್ಚಗಿನ ಮೈಹೊದಿಕೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಅದೇ ರೀತಿ ತಯಾರಾಗಿ ಹೊರಟೆವು. ಅನೇಕ ತಿರುವುಗಳ ರಸ್ತೆ. ಕ್ರಮಿಸಬೇಕಾಗಿದ್ದ ಎತ್ತರ ನಾವಿದ್ದ ಸ್ಥಳದಿಂದ ತುಂಬಾ ಮೇಲೆ ಮೋಡ ಹರಡಿಕೊಂಡಂತೆ ಇತ್ತು. ಹಾಗಾಗಿ ನಮ್ಮ ವಾಹನದ ಚಾಲಕ ನಮಗೆ ಶ್ವಾಸಕೋಶ ಸಂಬಂಧಿ ತೊಂದರೆ ಇರುವವರಿಗೆ ಆಮ್ಲಜನಕ ಕೊರತೆ ಬಾಧಿಸಬಹುದೆಂದು ಮುನ್ಸೂಚನೆ ನೀಡಿದ್ದರು. ನನ್ನ ತಾಯಿಗೆ ಉಬ್ಬಸದ ಸಮಸ್ಯೆ ಇತ್ತು. ನಾವು ಅವರ ಬಗ್ಗೆ ಯೋಚಿಸುತ್ತಾ ವಾಹನದಲ್ಲಿ ಕುಳಿತು  ಎಲ್ಲವನ್ನು ಅಹ್ಲಾದಿಸುತ್ತ ತುತ್ತ ತುದಿ ತಲುಪಿದೆವು. ಇನ್ನೇನು ಹಿಮ ಹರಡಿದ್ದ ಜಾಗ  ಮುಟ್ಟಬೇಕು. ಅಷ್ಟು ಹತ್ತಿರದಲ್ಲಿ ಹಿಮಾವೃತ ಸುಂದರ ಪುಟ್ಟ ಗುಡ್ಡ! ಅದನ್ನು ನೋಡುತ್ತ ವಾಹನದಿಂದ ಎಲ್ಲರೂ ಖುಷಿಯಿಂದ  ಇಳಿದರು. ಸುತ್ತಮುತ್ತಲ ದೃಶ್ಯಗಳು ವರ್ಣಿಸಲು ಅಸಾಧ್ಯ!  ಸೌಂದರ್ಯ ಅಮೋಘ! ದೂರದಲ್ಲಿ ಹಿಮಚ್ಛಾದಿತ ಬೆಟ್ಟದ ತುದಿಯಲ್ಲಷ್ಟೇ ಸೂರ್ಯನ ಕಿರಣಗಳು ಹಾಯ್ದು ಬೆಟ್ಟ ಬೆಳ್ಳಿಯಂತೆ ಹೊಳೆಯುತ್ತಿತ್ತು. ಆ ಸೊಂಪನ್ನು ನೋಡ ನೋಡುತ್ತಿದ್ದಂತೆಯೇ ಆರೋಗ್ಯವಾಗಿದ್ದ ನಾನು ದೊಪ್ಪೆಂದು ಕುಸಿದ್ದು ಬಿದ್ದೆ! ಬಿದ್ದದ್ದು ನನಗೆ ತಿಳಿಯಲಿಲ್ಲ. ಎಷ್ಟು ಸಮಯದ ನಂತರ ಎಚ್ಚರವಾಯಿತು ತಿಳಿಯಲಿಲ್ಲ. ಅಲ್ಲಿ ನಾನು ಎದ್ದು ಕುಳಿತಾಗ ಕಿವಿಗೆ ಬಿದ್ದದ್ದು ನನ್ನ ತಾಯಿಯ ಪ್ರಶ್ನೆ. ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..ಎಂದು! ಆಗ ನಾನು ಅಲ್ಲಿದ್ದೆ. ಇಲ್ಲಿಗೆ ಹೇಗೆ ಬಂದೆ? ಎಷ್ಟು ಇಂಪಾದ ನಾದಗಳು ಅಹ್ಲಾದಕರ ಪರಿಮಳ ಅಲ್ಲಿ ಇದ್ದವಲ್ಲ ಎಂದಿದ್ದೆ. ಅಲ್ಲಿ ಆಗ ಬಿದ್ದಿದ್ದ ನನ್ನ ದೇಹದ ಸುತ್ತಲೂ ಜನ ಸೇರಿ ಮುಟ್ಟಿ ಉಪಚರಿಸುತ್ತಿದ್ದರೂ ಶರೀರಕ್ಕೆ ಯಾವುದೇ ಸ್ಫರ್ಶಾನುಭವ ಆಗುತ್ತಿಲ್ಲ! ಆದರೆ ನಾನು ಸಂಪೂರ್ಣ ಎಚ್ಚರವಾಗಿಯೇ ಇದ್ದೆ!  ಮೊದಲೇ ನಾನು ಪ್ರಕೃತಿ ಸೌಂದರ್ಯ ತಲ್ಲೀನ ಅಪ್ಪಟ  ಆರಾಧಕಿ. ಆ ಕಾರಣಕ್ಕೋ ಏನೋ ಯಾವ ಬೆಳ್ಳಿಬೆಟ್ಟ ನೋಡುತ್ತಿದ್ದೆನೋ ಅದರೆಡೆಗೆ ನಾನು ಆರಾಮಾಗಿ ಹೊಗುತ್ತಿದ್ದುದು ಚೆನ್ನಾಗಿಯೇ ತಿಳಿಯುತ್ತಿತ್ತು. ಹತ್ತಿರ ತಲುಪಿದಾಗ ಅದರ ಆಸುಪಾಸು ಇಂಪಾದ ನಾದ ಕೇಳಿಸುತ್ತಿತ್ತು. ಸುಂದರ ಹೂವಿನ ಪರಿಮಳ ಹರಡಿತ್ತು.  ಎಂದೂ ನೋಡಿರದ ಸುಂದರ ಪಕ್ಷಿಗಳು ಹಾರಾಡುತ್ತಾ ಇದ್ದಿದ್ದು ಗ್ರಹಿಸಿದ್ದೆ.  ನೀರು ಹರಿಯುವ ನಾದ ಬರುತ್ತಿದ್ದ ಕಡೆ ಹೋಗಲು ಅಣಿಯಾದಾಗ ದೂರದಲ್ಲಿ ಹೃದಯಕ್ಕೆ ಹತ್ತಿರವಾಗಿ ನನ್ನನ್ನು ಕರೆಯುತ್ತಿರುವುದು ಕೇಳಿಸಿ ಆ ಕೂಗು ಬಂದ ಕಡೆಗೆ ಆ ಸುಂದರ ತಾಣ ಬಿಟ್ಟು ಹೊರಡಲು ಮನಸ್ಸಿಲ್ಲದಿದ್ದರೂ ಗುಡ್ಡದಿಂದ ಇಳಿಯುತ್ತ ಹತ್ತಿರ ತಲುಪಿದಾಗ.. ಮುಖಕ್ಕೆ ನೀರು ಚಿಮುಕಿಸಿ ಮೂಗಿಗೆ ಕರ್ಪೂರವನ್ನು ಮೂಸಿಸುತ್ತಿರುವ ಕಾಲ್ಚೀಲ ಕಳಚಿ ಕಾಲು ತಿಕ್ಕುತ್ತಿರುವ ದೈಹಿಕ ಅನುಭವಗಳಾದವು. ಅಲ್ಲಿ ಕಣ್ಣು ತುಂಬಿಕೊಂಡು ಕರೆಯುತ್ತಿದ್ದವರು ನನ್ನ ತಾಯಿ! ನನ್ನ ಪತಿ ತಂಗಿ ಮಗ ಎಲ್ಲರು ಕರೆಯುತ್ತಿದ್ದರೂ ಅಮ್ಮನ ಕೂಗು ಮಾತ್ರ ಕೇಳಿಸುತ್ತಿದ್ದದ್ದು ಮಾತ್ರ ವಿಚಿತ್ರ ಎನಿಸಿತು. ಅದೇ ಹೃದಯದ ಕೂಗು, ಎದೆಯಾಳದ ಕೂಗು ಎಂಬುದು ಅರಿವಾಯಿತು.ಈ ದೇಹದಿಂದ ಪ್ರಜ್ಞೆ ಹೋಗುವಾಗ ಮತ್ತು ಬರುವಾಗ ಪೂರ್ಣ ಕತ್ತಲಲ್ಲಿ ಸಾಗಿದ್ದರೂ ಬರಿ ಕಣ್ಣಿಗೆ ಕಾಣದ ಪ್ರಕಾಶಮಾನವಾದ ಬೆಳಕಿನಲ್ಲಿ ಸಂಚರಿಸಿದ್ದೆ! ನನಗೆ ಕನಸುಗಳು ಸಾಕಷ್ಟು ಬಿದ್ದಿವೆ. ಆದರೆ ನನ್ನ ಮನಸ್ಸು ೫೦-೬೦ ಕಿ.ಮೀ. ದೂರದಷ್ಟಿದ್ದ ಬೆಟ್ಟದ ಸಮೀಪದವರೆಗೆ ದೇಹದೊಂದಿಗೆ ಪಯಣಿಸಿದಂತಹ ಅನುಭವ ಪಡೆದಿದ್ದು, ಅದೂ ಪೂರ್ಣ ಪ್ರಜ್ಞೆಯಲ್ಲಿ  ಎಂದಿಗೂ ಮರೆಯಲಾಗದು. ದೇಹಪ್ರಜ್ಞೆ ಕ್ಷೀಣಿಸಿದ ಕ್ಷಣ ಅನುಭವಿಸಿದ ಆಂತರಿಕ ಪ್ರಕಾಶ, ನಾದ, ಪರಿಮಳ, ಇವು ಮನಸ್ಸಿನ ಅತೀತ ಆಯಾಮಗಳ ಬಗ್ಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.ಇದಾದ ನಂತರ ತಾಯಿ ತಂದೆ ಇರುವವರೆಗೂ ನಾನಾಗಿಯೇ ನನ್ನ ಮರಣವನ್ನೆಂದೂ ಬಯಸಬಾರದೆಂಬ ಮನಸ್ಸು ಬೆಳೆದಿದೆ. ಅಷ್ಟೇ ಅಲ್ಲ ಯಾರ ಮರಣವನ್ನೂ ಬಯಸಬಾರದು. ತದ್ವಿರುದ್ದ ಗುಣದವರೊಂದಿಗೆ ಜೊತೆಯಲ್ಲೇ ವಾಸಿಸಬೇಕಾದಾಗಲೂ ಯಾರನ್ನೂ ದ್ವೇಷಿಸದೆ ನನ್ನ ಕರ್ತವ್ಯಗಳನ್ನು ಯಾವ ಕಾರಣಕ್ಕೂ ಕೈಬಿಡದೆ ಖುಷಿಯಿಂದ ಮಾಡುತ್ತಿರಬೇಕೆಂಬ ನಿಲುವು ತಾಳಿದೆ.. ಅದಾಗಿ ಮೇಡಂ ಧ್ಯಾನ ಯೋಗ ಸಾಧನೆ ಮೂಲಕ ಮಹರ್ಷಿ ಪ್ರಭಾಕರ್ ಗುರೂಜಿ, ಆಚಾರ್ಯ ಆದಿನಾಥ್, ಶ್ರೀ ರವಿಶಂಕರ್  ಆರ್ಟ್ ಆಫ್ ಲಿವಿಂಗ್ ಯೋಗ ಸಾಧಕರ ಮಾರ್ಗದರ್ಶನದಲ್ಲಿ ಮನಸ್ಸಿನ ಸ್ಕೈರ್ಯ ಮತ್ತು ಆತ್ಮಶಾಂತಿ ಕಂಡ ಅನುಭವಗಳು ಈ ಕೃತಿಯ ಆತ್ಮವಾಗಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ

ಪುಸ್ತಕ ಸಂಗಾತಿ ಸುನೀತ ಕುಶಾಲನಗರ ಜಯಲಕ್ಷ್ಮಿ ಕೆ, ಮಡಿಕೇರಿ “ನಡೆದಷ್ಟೂ ದಾರಿ” ಕೃತಿಯ ಹೆಸರು : ನಡೆದಷ್ಟೂ ದಾರಿಲೇಖಕಿ : ಜಯಲಕ್ಷ್ಮಿ ಕೆ ಮಡಿಕೇರಿಪುಟಗಳು : 188ಬೆಲೆ : 230.ಪ್ರಕಾಶಕರು : ಅಂಬಾರಿ ಪ್ರಕಾಶನಕುವೆಂಪುನಗರ, ಮೈಸೂರು ವೃತ್ತಿಯಲ್ಲಿ ಒಬ್ಬ ಅಧ್ಯಾಪಕಿಯಾಗಿ ಜಯಲಕ್ಷ್ಮಿ ಯವರು ಚಿರಪರಿಚಿತರು. ಪ್ರವೃತ್ತಿಯಿಂದ ಬರೆಹಗಾರ್ತಿಯಾಗಿ ಕೊಡಗು ಜಿಲ್ಲೆಯಲ್ಲಿ ಗುರುತ್ತಿಸಿಕೊಂಡವರು. “ನಡೆದಷ್ಟೂ ದಾರಿ” ಇವರ ಮೂರನೆಯ ಕೃತಿ. ಮೊದಲನೆಯದು ಚಪ್ಪಾಳೆಗೂ ಬೆಲೆಯಿದೆ.ಎರಡನೆಯದು ಮತ್ತೆ ವಸಂತ ಆಗಿದ್ದು ಈ ಕೃತಿ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ, ಮುನಿ ಗಂಗಮ್ಮ ಪ್ರಶಸ್ತಿ ಮತ್ತು ಉಮಾ ಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಳನ್ನು  ಗಿಟ್ಟಿಸಿಕೊಂಡಿದೆ.     ‘ ನಡೆದಷ್ಟೂ ದಾರಿ’ ಪುಸ್ತಕವನ್ನು ಓದುತ್ತಾ ಹೋದಂತೆ ಪುಸ್ತಕ ಮುಗಿಯುವವರೆಗೂ ಮುಚ್ಚಿಡಲಾಗಷ್ಟು ಕುತೂಹಲ ತಂದುಕೊಟ್ಟಿತು.ಲೇಖಕಿ ಬಳಸಿದ ಭಾಷೆ, ಭಾಷೆಯ ಮೇಲಿನ ಹಿಡಿತ, ಗಟ್ಟಿತನ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಇವರು  ಸಾಹಿತ್ಯ ಪರಂಪರೆಯನ್ನು ಓದಿಕೊಂಡು ವರ್ತಮಾನಕ್ಕೂ ಅಪ್ಡೇಟ್ ಆಗುತ್ತಿದ್ದಾರೆ  ಎಂದು  ಈ ಕೃತಿಯೇ ಸಾರಿ ಹೇಳಿದೆ. “ನಡೆದಷ್ಟೂ ದಾರಿ ಪಡೆದಷ್ಟೂ ಭಾಗ್ಯ” ಈ ಲೇಖನದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಆಸಕ್ತಿ ಹೀನನಾಗುವುದಕ್ಕೆ  ಕಾರಣ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಧ್ಯಾಪಕಿ ಲೇಖನದ ಮೂಲಕ ಕಲಿಯಲು ವಿಷಯದ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಪೋಷಕರು ಒತ್ತಡ ಹೇರಬಾರದು ಎಂದು ಹೇಳುತ್ತಾರೆ.  ‘ಬದುಕು ರೂಪಿಸುವ ಶಿಲ್ಪಿಗಳ ಬದುಕು’ ಎಂಬ ಲೇಖನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಶ್ರಮ,ಪಡೆಯುತ್ತಿರುವ ಕಡಿಮೆ ವೇತನ, ಪವಿತ್ರ ವೃತ್ತಿ ಎಂದು ಅರ್ಪಿಸಿಕೊಳ್ಳುವ ಇವರು ಎಲ್ಲೋ ಅಲಕ್ಷಿತರಾಗುತ್ತಿದ್ದಾರೆ. ಇವರಿಗೆ ಕೆಲಸದ ಒತ್ತಡ ಹೇರಿದರೆ ಸರ್ಕಾರಿ ಶಿಕ್ಷಕರಿಗೆ ಬೋಧನೇತರ ಕಾರ್ಯಗಳ  ಹೊರೆ ಎಂದು ಮುಕ್ತವಾಗಿ ಈ ಲೇಖನದಲ್ಲಿ ಶಿಕ್ಷಕರ ಬವಣೆಯನ್ನು ಬಿಚ್ಚಿಡುತ್ತಾರೆ. ಇವರ ಒಂದೊಂದು ಲೇಖನದ ವಸ್ತು ಸಾಮಾನ್ಯ ಅನಿಸಿದರೂ ಓದುತ್ತಾ ಅದರ ಗಹನತೆ  ಆಳವಾದದ್ದು ಎಂದು ವೇದ್ಯವಾಗುತ್ತದೆ.  ಜಯಲಕ್ಷ್ಮಿಯವರ ಲೇಖನಗಳ ಶೀರ್ಷಿಕೆಗಳ ಆಕರ್ಷಣೆ ಮತ್ತೊಂದು ವಿಶಿಷ್ಟವೆಂಬುದನ್ನು ಹೇಳಲೇಬೇಕಾಗುತ್ತದೆ. ಉದಾಹರಣೆಗೆ “ಕರಿಹಲಗೆಯ ಹಿಂದೆ ಕರಗುತ್ತಿದೆ ಕಾಯಗಳು”, “ಮನ  ಮರುಭೂಮಿಯಾಗುವ ಮುನ್ನ “ಹೀಗೆ ವೈವಿಧ್ಯಮಯ ಶಿರೋನಾಮೆಗಳೇ ಲೇಖನಗಳನ್ನು ಓದುವಂತೆ ಕುತೂಹಲ ಮೂಡಿಸುತ್ತವೆ.‘ಮಕ್ಕಳ ಹದಿಹರೆಯ’ ಲೇಖನದಲ್ಲಿ ಅಮ್ಮ,ತಾಯಿ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ. ಆಗಲು ಸಾಧ್ಯವೂ ಇಲ್ಲ. ದೇವರ  ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ?  ಎಂದು ಕೇಳಿರುವುದು  ಸದಾ ಕಾಡುವ ವಾಕ್ಯ ಮತ್ತು ಬದುಕಿನ ವಾಸ್ತವ. ‘ನಾನೂ ಕವಿಯಾಗಬೇಕು’ ಕವಿಯಾಗುವ ನಾನು ಮೊದಲು ಕಿವಿಯಾಗಬೇಕು ಮತ್ತು ಸಾಕಷ್ಟು ಓದಿಕೊಳ್ಳಬೇಕು.ಸಾಗರದಷ್ಟು ಓದಿದರೆ ಸಾಸಿವೆಯಷ್ಷು ಜ್ಞಾನ ವೃದ್ಧಿಗೆ ಸಾಧ್ಯ ಮತ್ತು ಆ ಮೂಲಕ ಭಾಷೆಯ ಹಿಡಿತ ಸಿದ್ಧಿಸುತ್ತದೆ ಎಂಬ ಇವರ ಅಭಿಪ್ರಾಯ ಬರೆಹಗಾರರೊಳಗೆ ಜಾಗ್ರತೆ ಮೂಡಿಸುವುದರ ಜೊತೆಗೆ ಮೆಲ್ಲಗೆ ತಿವಿದಂತೆ ಭಾಸವಾಗುತ್ತದೆ.   ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ ಇತರರಿಗೂ ಚಪ್ಪಾಳೆ ಕೊಡುವ, ಪ್ರಶಂಸಿಸುವ ಗುಣ ಇರಬೇಕು ‌ಎನ್ನುವ ಇವರು ಹತ್ತಾರು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಂದು ಉದಾಹರಣೆಗಳನ್ನು ಕೊಡುವುದರ ಮೂಲಕ ಈ ಲೇಖನದಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.‘ ಪುಸ್ತಕಂ ಹಸ್ತ ಭೂಷಣಂ’. ಎಂಬ ಲೇಖನದಲ್ಲಿ ಒಳ್ಳೆಯ ಪುಸ್ತಕಗಳೆಂದರೆ “ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇದಾವಿಗಳ ಜೀವನ ಸರ್ವಸ್ವ ” ಆಂಗ್ಲಕವಿ ಮಿಲ್ಟನ್ ರವರ  ಅದ್ಭುತ ಮಾತನ್ನು ಉಲ್ಲೇಖಿಸುತ್ತಾ ಪುಸ್ತಕದ ಮಹತ್ವವನ್ನು ವೇದ್ಯವಾಗಿಸಿದ್ದಾರೆ.   ತುಟಿಯಂಚಿನಲ್ಲಿ ನಗು ತರಿಸಿದ ಲೇಖನ ‘ಗೋಳಿನ ದನಿಗೆ ಕಿವಿಗಳಿಲ್ಲ’. ಈ ಲೇಖನವನ್ನು ಓದುತ್ತಾ ಹೋದಂತೆ ಧನಾತ್ಮಕ ಚಿಂತನೆ ಮತ್ತು ಮಾತು ಕೊಡುವ ಆತ್ಮ ವಿಶ್ವಾಸ  ಇವುಗಳ ಕೆಲವು ನಿದರ್ಶನಗಳೊಂದಿಗೆ  ಹೇಗೆ ಬದುಕನ್ನು ಸುಖದ ಸುಗ್ಗಿಯಾಗಿಸಬಹುದು ಎಂಬುದರ ಬಗ್ಗೆ  ಇವರ ಅನಿಸಿಕೆ ನಿಜಕ್ಕೂ ವಾಸ್ತವ  ಅನಿಸಿತು.’ ನೋವಲ್ಲೂ ನಲಿಯುವವನ ಸುತ್ತಲೇ ಈ ಜಗವೆಲ್ಲಾ ‘ ಈ ಮಾತು ನಮ್ಮ ಆಸುಪಾಸಿನ ಸತ್ಯ ಎನಿಸುವಷ್ಟು ನಮ್ಮನ್ನು ಸೆಳೆಯುತ್ತಾ ಹೋಗುತ್ತದೆ ಮತ್ತು ಅಗತ್ಯ ಬರೆಹ ಕೂಡಾ.   “ಹೇಗೆ‌ ಬೇಕಾದರೂ ಅರ್ಥೈಸಿಕೊಳ್ಳಿ” ಎಂಬ ಲೇಖನದಲ್ಲಿ ನಾವು ದಿನ ನಿತ್ಯ ಮಾಡುವ ವ್ಯಾಕರಣ ದೋಷಗಳು ವ್ಯಾಕರಣದ ಮಹತ್ವ ಹಾಗೂ ಗಮನಿಸಬೇಕಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.ಇಲ್ಲಿ ಇವರ ಭಾಷಾ ಪ್ರೇಮ ಧಾರಾಕಾರವಾಗಿ ಅನಾವರಣವಾಗಿದೆ. ಹಾಗೆ ಮುಂದುವರೆಯುತ್ತಾ ಹಬ್ಬಗಳು ಹೇಗೆ ನಮಗೆ ಉತ್ಸಾಹಕಾರಿ ಹಾಗೂ ಬದುಕಿಗೆ ಜೀವಂತಿಕೆ ತುಂಬುವ ಸೆಲೆ  ಎಂಬುದನ್ನು ತಮ್ಮ ಅನುಭವ ಮೂಸೆಯಲ್ಲಿ ‘ಜೀವನೋತ್ಸಾಹ ತುಂಬುವ ಹಬ್ಬಗಳು ‘ ಎಂಬ ಲೇಖನದ ಮೂಲಕ ಅನುಭಾವವಾಗಿಸಿದ್ದಾರೆ.        ಪುಸ್ತಕ ಸಂಸ್ಕೃತಿಯಿಂದ ಹೇಗೆ ಪ್ರಬುದ್ಧರಾಗಬಹುದು ಎಂದು ಹೇಳುತ್ತಾ ಹವ್ಯಾಸಗಳಲ್ಲಿ ಅತ್ತ್ಯುತ್ತಮ ಹವ್ಯಾಸ ಓದುಗಾರಿಕೆ ಎನ್ನುತ್ತಾರೆ. ಹೌದು! ಎಳೆವೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭಾಷಾ ಗಟ್ಟಿತನ ,ಮಾತನಾಡುವ ಧೈರ್ಯ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬುದನ್ನು ಎಳೆವೆಯಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರಾಗಿ, ಹಿರಿಯರಾಗಿ ತುಂಬಬೇಕಿದೆ ಎನ್ನುತ್ತಾರೆ. “ಹಾಸ್ಯ ಕವಿ ಬೀಚಿ ಸವ್ಯಸಾಚಿ ”  ಎಂಬ ಚೆಂದದ ಶೀರ್ಷಿಕೆಯ ಲೇಖನದಲ್ಲಿ “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೆ ಸ್ವಾಗತ” ಹಾಸ್ಯ ಬ್ರಹ್ಮ ಬೀಚಿಯವರ ಆತ್ಮಕಥನದಿಂದ ಆಯ್ದ ಸಾಲುಗಳನ್ನು ಬಳಸಿ ಬೀಚಿಯವರ ಸಾಹಿತ್ಯ ಸಾಧನೆಯನ್ನು ಸ್ಮರಿಸಿರುವುದು ಇವರ  ಓದಿನ ವಿಸ್ತಾರ ಮತ್ತು ಅಧ್ಯಯನವನ್ನು ಎತ್ತಿ ಹಿಡಿಯುತ್ತದೆ. ಈ ಕೃತಿಯಲ್ಲಿ ಶಿಕ್ಷಣವಿದೆ. ಸಂಸ್ಕೃತಿ, ಶಿಸ್ತು, ಸಂಸ್ಕಾರ, ಸಂಪ್ರದಾಯ ಎಲ್ಲವನ್ನು ಒಳಗೊಂಡ ಲೇಖನಗಳಿವೆ.ಮನಃಶಾಸ್ತ್ರಜ್ಞರ ಅಭಿಪ್ರಾಯಗಳು, ಶಿಕ್ಷಣ ತಜ್ಞರ ಸಲಹೆಗಳು, ಕವಿವಾಣಿಗಳು, ವಿಜ್ಞಾನಿಗಳ ಜ್ಞಾನ, ಲೋಕ ಜ್ಞಾನ ಇತ್ಯಾದಿ ವಿಚಾರಧಾರೆಗಳನ್ನು ಈ ಕೃತಿ ಕಟ್ಟಿಕೊಡುತ್ತದೆ.ಬಸವಣ್ಣನೆಂಬ ಸಾಧನೆಯ ಪ್ರತಿರೂಪದಿಂದ ಹಿಡಿದು ವೈವಿಧ್ಯಮಯ ವಸ್ತುಗಳನ್ನು  ಇಲ್ಲಿನ ಲೇಖನಗಳು ಹೊಂದಿವೆ.  ಶ್ರೀ ಸುಬ್ರಾಯ ಸಂಪಾಜೆಯವರು ಮುನ್ನುಡಿಯ ಮೂಲಕ  “ಈ ಕೃತಿ  ಒಂದು ಶಿಕ್ಷಣ ಸಂಹಿತೆಯೇ ಸರಿ ” ಎಂದು ಉಲ್ಲೇಖಿಸಿರುವುದು ಕೃತಿಯ ತೂಕವನ್ನು ಹೆಚ್ಚಿಸಿದೆ..  ಖ್ಯಾತ ಬರೆಹಗಾರ್ತಿ ಸ್ಮಿತಾ ಅಮೃತರಾಜ್ ಬೆನ್ನುಡಿಯ ಮೂಲಕ  ಓದಿದ ನಂತರ ಬಹಳ ಕಾಡುವ ಬರೆಹ  ಎಂದು ಹೇಳಿರುವುದು  ಇವರೊಬ್ಬರು  ಸಮರ್ಥ ಬರೆಹಗಾರ್ತಿ ಎಂಬುದಕ್ಕೆ  ಸಾಕ್ಷಿ ಎನ್ನುವಂತಿದೆ .  ಜಯಲಕ್ಷ್ಮಿ.ಕೆ. ಇವರ “ನಡೆದಷ್ಟೂ ದಾರಿ” ಕೃತಿಯು  ಸುಂದರ ಮುಖಪುಟ ಹೊಂದಿದ್ದು ಇದರಲ್ಲಿ ಸುಮಾರು 43 ಲೇಖನಗಳಿದ್ದು,184 ಪುಟಗಳಿರುವ ಈ ಕೃತಿಯ ಬೆಲೆ ರೂಪಾಯಿ 230 ಆಗಿರುತ್ತದೆ.    ಈ ಪುಸ್ತಕವೂ  ಪ್ರಶಸ್ತಿ  , ಗೌರವಕ್ಕೆ ಅರ್ಹವಾಗಿದ್ದು ಇವರು ಜಿಲ್ಲೆಯ ಭರವಸೆಯ ಲೇಖಕಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಯಲಕ್ಷ್ಮಿಯರಿಗೆ ಶುಭಹಾರೈಕೆಗಳು.   ಸುನೀತ ಕುಶಾಲನಗರ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

You cannot copy content of this page

Scroll to Top