ಧಾರಾವಾಹಿ ಸಂಗಾತಿ-36
ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ

ಅರ್ಜುನ ಉವಾಚ
ದಶರಥಸುತ ದಮನಿಸಿದ ದಶಕಂಠನನ್ನು

ಇಕ್ಷಾಕು ಮೊದಲಾದ ರಾಜಾಧಿರಾಜರನ್ನು ಹೊಂದಿದ ಶ್ರೇಷ್ಠಕುಲವಾಗಿತ್ತು ಸೂರ್ಯವಂಶ. ಅಯೋಧ್ಯೆಯನ್ನು ಆಧಾರವಾಗಿಟ್ಟುಕೊಂಡು ಇವರೆಲ್ಲರೂ ಆಳ್ವಿಕೆ ನಡೆಸಿದರು. ಹೀಗಿದ್ದ ರವಿಕುಲದಲ್ಲಿ, ಅಯೋಧ್ಯಾಪುರದಲ್ಲಿ ಪುತ್ರಕಾಮೇಷ್ಠಿ ಯಾಗದ ಫಲವಾಗಿ, ದಶರಥಪುತ್ರನಾಗಿ ಜನಿಸಿದ ಮಹಾವಿಷ್ಣು, ಶ್ರೀರಾಮಚಂದ್ರನೆಂಬ ಹೆಸರನ್ನು ಹೊತ್ತು. ಕೌಸಲ್ಯೆಯ ಗರ್ಭದೊಳಗಿಂದ ಈ ಇಳೆಗಿಳಿದ ಶ್ರೀರಾಮ ಬೆಳೆದದ್ದು ಲಕ್ಷಣ, ಭರತ, ಶತ್ರುಘ್ನರೆಂಬ ತಮ್ಮಂದಿರೊಡನೆ. ಕೌಶಿಕ ರಾಜನ ಯಾಗವನ್ನು ಕಾಪಾಡುವ ಹಿರಿದು ಹೊಣೆಯದು ಕಿರಿದು ವಯಸ್ಸಿನಲ್ಲಿಯೇ ಅವನದ್ದಾಯಿತು. ತಾಟಕಿಯೆಂಬ ರಕ್ಕಸಿಯನ್ನು ಕೊಂದ ಕೌಸಲ್ಯಾ ಸುತ. ಶಾಪದ ಫಲವಾಗಿ ಶಿಲೆಯಾಗಿದ್ದ ಗೌತಮ ಋಷಿಯ ಮಡದಿ ಅಹಲ್ಯೆಯನ್ನು ಉದ್ಧರಿಸಿದ ದಶರಥನಂದನ. ಮಿಥಿಲೆಯಲ್ಲಿ ನಡೆಯುತ್ತಿದ್ದ ಸೀತಾ ಸ್ವಯಂವರಕ್ಕೆ ಹೋದವನು ಶಿವಧನುಸ್ಸನ್ನು ಮುರಿದು, ಜನಕರಾಜನ ಸುತೆಯಾದ ಜಾನಕಿಯನ್ನು ಸತಿಯಾಗಿ ಪಡೆದ.
ಹೀಗೆ ಬದುಕಿನಲ್ಲಿ ಏಳಿಗೆಯನ್ನು ಗಳಿಸುತ್ತಾ, ಪ್ರವರ್ಧಮಾನಕ್ಕೆ ಬರುತ್ತಿರುವ ಮಗ ಶ್ರೀರಾಮನಿಗೆ ಅಯೋಧ್ಯೆಯ ಪೂರ್ಣ ಜವಾಬ್ದಾರಿಯನ್ನು ನೀಡಬೇಕು ಎನಿಸಿತು ದಶರಥನಿಗೆ. ರಘುಕುಲತಿಲಕನ ಪಟ್ಟಾಭಿಷೇಕಕ್ಕೆ ಮುಹೂರ್ತವದು ನಿಗದಿಗೊಂಡಿತು. ಈ ವಿಚಾರವನ್ನು ಮಂಥರೆಯ ಮೂಲಕ ತಿಳಿದಳು ಕೈಕೇಯಿ. ದಶರಥನ ಪ್ರೀತಿಯ ರಾಣಿ. ಮಂಥರೆಯ ಮತ್ಸರದ ನುಡಿಯದು ಕೈಕೇಯಿ ಮನವನ್ನು ಮಥಿಸಿತು ಹೀನವಾಗಿ. ತನ್ನ ಮಗ ಭರತನಿಗೇ ಪಟ್ಟ ದೊರೆಯಬೇಕೆಂದು ಹಠ ಹಿಡಿದಳು ಗಂಡನಲ್ಲಿ. ಹಿಂದೆ ಅವಳಿಗೆ ಕೊಟ್ಟಿದ್ದ ಮಾತು ಈಗವನ ಬಾಯಿಯನ್ನು ಮುಚ್ಚಿಸಿತು. ಭರತನಿಗೆ ದೊರಕಿತು ಅಯೋಧ್ಯೆಯ ಸಿಂಹಾಸನ. ಪ್ರಭುವಾಗಬೇಕಿದ್ದ ಶ್ರೀರಾಮನದ್ದು ವನದೆಡೆಗಿನ ಗಮನ. ಜೊತೆಗಿದ್ದದ್ದು ಒಲವಿನ ಮಡದಿ ಸೀತೆ, ಪ್ರಿಯ ಸೋದರ ಲಕ್ಷö್ಮಣ.
ವನವಾಸದ ಅವಧಿಯಲ್ಲಿ ಅದೆಷ್ಟೋ ರಕ್ಕಸರು ಕೊನೆಗಂಡರು, ರಾಮಬಾಣಕ್ಕೆ ಸಿಲುಕಿ. ಋಷಿಸಂತತಿಯದು ಸಂತಸ ಪಡೆಯಿತು, ಶ್ರೀರಾಮ ಸಹವಾಸದಲಿ.
ಹೀಗೆ ರಾಮ, ಲಕ್ಷö್ಮಣ, ಸೀತೆಯರು ದಂಡಕಾರಣ್ಯದಲ್ಲಿದ್ದಾಗ ಅವರನ್ನು ಕಂಡವಳು ರಾವಣ ಸೋದರಿ ಶೂರ್ಪನಖಿ. ರಾಮನಲ್ಲಿ ಮನಸ್ಸಾಯಿತು ಆಕೆಗೆ. ಲಕ್ಷö್ಮಣನಲ್ಲಿಗೆ ಕಳುಹಿಸಿಕೊಟ್ಟ ರಾಮ, ಆ ದುಷ್ಟೆಗೆ ಬುದ್ಧಿ ಕಲಿಸುವ ತೆರದಿ. ಅಂಗಭAಗಕ್ಕೆ ಒಳಗಾಗಿ ಅವಮಾನಕ್ಕೀಡಾದವಳು ಸೀತೆಯ ಚೆಲುವನ್ನು ಹೊಗಳಿದಳು ರಾವಣನಲ್ಲಿ. ಕಾಮದಾಸೆಯಲ್ಲಿ ಅಂಕುಶ ಮೀರಿದ ಲಂಕೆಯ ಅಧಿಪತಿ, ಕಪಟ ವೇಷದಿಂದ ರಾಮ ಲಕ್ಷö್ಮಣರನ್ನು ಮರುಳುಗೊಳಿಸಿ, ಸೀತೆಯನ್ನು ಅಪಹರಿಸಿದ.
ಕಾಣದಾದ ಸತಿಯನ್ನು ಹುಡುಕಿ ಹೊರಟ ಶ್ರೀರಾಮ ರಾವಣನನ್ನು ಎದುರಿಸಿ, ಬಿದ್ದಿದ್ದ ಜಟಾಯುವನ್ನು ಕಂಡ. ವಿವರವನ್ನು ಕೇಳಿದ. ಮಾರ್ಗಮಧ್ಯೆ ಕಬಂಧ ಎಂಬ ಅಸುರನನ್ನು ಕೊಂದ. ತನ್ನ ಆಗಮನಕ್ಕಾಗಿ ಕಾಯುತ್ತಿದ್ದ ಶಬರಿಗೆ ದರುಶನವನ್ನಿತ್ತು, ಅವಳನ್ನು ಧನ್ಯಗೊಳಿಸಿದ. ಆಂಜನೇಯ ಬಲವದು ಆ ಸಮಯದಲ್ಲಿಯೇ ಅವನನ್ನು ಸೇರಿತು. ವಾಲಿ ಸುಗ್ರೀವ ಸಹೋದರ ಕಲಹದಲ್ಲಿ ಭಾಗವಹಿಸಿ, ವಾಲಿಯನ್ನು ಕೊಂದ. ಸುಗ್ರೀವ ಸಹಾಯವನ್ನು ಸದಾ ತನ್ನದಾಗಿಸಿಕೊಂಡ. ಜಾಂಬವAತನ ನೆರವು ದೊರಕಿತು ರಘುಕುಲವೀರನಿಗೆ.
ಜನಕಸುತೆಯನ್ನು ಹುಡುಕುವುದಕ್ಕೆ ಅಂಜನಾಸುತನನ್ನು ಕಳುಹಿಸಿಕೊಟ್ಟ. ಅಮಿತ ಬಲದಿಂದ ಸಮುದ್ರವನ್ನು ಉಲ್ಲಂಘಿಸಿದ ಹನುಮಂತ. ಶ್ರೀರಾಮಸತಿ ಸೀತೆಗೆ ಶ್ರೀರಾಮಾಂಕಿತದ ಮುದ್ರಿಕೆಯನ್ನಿತ್ತ. ಅವಳ ಸಂದೇಶವನ್ನು ಶ್ರೀರಾಮನಿಗೆ ತಿಳಿಸುವ ಮಾತುಕೊಟ್ಟ. ರಾವಣನ ಅಶೋಕವನವನ್ನು ಧೂಳೀಪಟ ಮಾಡಿದ. ತಡೆಯಲು ಬಂದ ರಕ್ಕಸರನ್ನು ಕೊಂದ. ಬಾಲಕ್ಕೆ ಬಿದ್ದ ಬೆಂಕಿಯಿAದ ಲಂಕೆಯನ್ನೇ ಸುಟ್ಟ. ಸೀತೆಯಿತ್ತ ಸಂದೇಶವನ್ನು ಶ್ರೀರಾಮನಿಗೆ ಹೇಳಿದ.
ರಾಮ ರಾವಣರ ಮಧ್ಯೆ ನಡೆಯಿತದೋ ಘೋರ ಕಾಳಗ. ಅಸುರ ಕುಲದ ಹೆಸರೇ ಅಳಿದುಹೋಗುವಂತೆ ಪರಾಕ್ರಮ ತೋರಿದ ಶ್ರೀರಾಮಚಂದ್ರ. ರಾವಣ ಮರಣವನ್ನಪ್ಪಿದ. ವಿಭೀಷಣ ಲಂಕಾಧಿಪತಿ ಎನಿಸಿಕೊಂಡ.
ರಾವಣ ಸೆರೆಯಲ್ಲಿದ್ದ ಸೀತೆಯನ್ನು ಮರಳಿ ತನ್ನವಳನ್ನಾಗಿಸಿಕೊಂಡ ಶ್ರೀರಾಮ ಅಯೋಧ್ಯೆಯನ್ನು ಮರಳಿ ಕಂಡ. ತನ್ನವರೆಲ್ಲರನ್ನೂ ನೋಡಿ ಹರ್ಷಗೊಂಡ. ಮಗನ ಮೈಯ್ಯಲ್ಲಿದ್ದ ಗಾಯಗಳನ್ನು ಕಂಡೊಡನೆಯೇ ಕೌಸಲ್ಯೆ ಕರುಳದು ನೊಂದಿತು. “ನಿನ್ನ ಕೋಮಲಕಾಯವನ್ನು ನೋಯಿಸಿದವರು ಯಾರು?” ಎಂದು ಕೇಳುತ್ತಾ, ಪೂರ್ಣ ನೊಂದಳು ರಾಮಮಾತೆ. ತಾಯಿಯನ್ನು ಸಂತೈಸಿದ ಅವಳ ಪ್ರಿಯಸುತ.
ಅಯೋಧ್ಯೆಯ ಅಧಿಕಾರವದು ಈಗ ಶ್ರೀರಾಮನದ್ದಾಯಿತು. ಪಟ್ಟಾಭಿಷಿಕ್ತನಾದ ಪರಮ ಪಾವನ ಪುರುಷೋತ್ತಮ. ಒಂಭತ್ತು ಸಾವಿರ ವರ್ಷಗಳದು ಉರುಳಿಹೋದವು. ಶ್ರೀರಾಮನ ಆಳ್ವಿಕೆಯ ಆ ಕಾಲದಲ್ಲಿ ಪೂರ್ಣ ಅಯೋಧ್ಯೆ ಪರಿಪೂರ್ಣತೆಯನ್ನು ಹೊತ್ತುನಿಂತಿತು. ಎಲ್ಲಿ ನೋಡಿದರೂ ಸಮೃದ್ಧಿ, ಸಂಪನ್ನತೆ. ನೀತಿಶಾಸ್ತçಗಳಿಂದಲೇ ಹೆಸರು ಗಳಿಸಿತು ಅಯೋಧ್ಯೆ.
ಹೀಗಿದ್ದಾಗಲೇ ರಘುಕುಲವದು ತನ್ನಿಂದ ಮುಂದಕ್ಕೆ ಮುಂದುವರಿಯಬೇಕೆAಬ ಬಯಕೆ ಮೂಡಿತು ರಾಮನಲ್ಲಿ. ಸಂತಾನದ ಅಪೇಕ್ಷೆ ಅವನದ್ದು. ಏಕಾಂತದಲ್ಲಿ ಸತಿ ಸೀತೆಯ ಜೊತೆಗೆ ಮನದ ಭಾವನೆಯನ್ನು ಹಂಚಿಕೊAಡ.
“ಇಕ್ಷಾ÷್ವಕು ವಂಶ ಇದುವರೆಗೂ ಅವಿರತವಾಗಿ ಮುನ್ನಡೆಯುತ್ತಾ ಬಂದಿದೆ. ಈಗ ನಾನು ಮಕ್ಕಳನ್ನು ಪಡೆಯದೇ ಹೋದರೆ ನನ್ನಿಂದ ಈ ಕುಲ ಅಳಿಯಿತೆಂಬ ಕಳಂಕ ನನ್ನದಾಗುತ್ತದೆ. ಸಂಸಾರದ ಭ್ರಾಂತಿಯದು ತನ್ನಿಂದ ತೊಲಗಿಹೋಗಬೇಕಾದರೆ ಸಂತಾನದ ಏಳಿಗೆ ಆಗಬೇಕು. ಆದ್ದರಿಂದ ನಾವಿಬ್ಬರೂ ಕೂಡಿ ಸಂತಾನ ಪ್ರಾಪ್ತವಾಗಿಸಿಕೊಳ್ಳಬೇಕು ಎಂದು ಬಯಸುತ್ತಿದೆ ನನ್ನ ಮನಸ್ಸು” ಎಂದವನು ಅವಳ ಒಪ್ಪಿಗೆಯನ್ನು ಬಯಸಿದ.
ಸೀತೆ ಚಿತ್ತವದು ತಾಯ್ತನದೆಡೆಗೆ ಆಕರ್ಷಿತವಾಗಿತ್ತು. ಮಗುವನ್ನು ಹೊಂದುವ ಸಹಜ ಆಸೆ ಅವಳದಾಗಿತ್ತು. ಅದನ್ನೇ ಹೇಳಿಕೊಂಡಳು ಪತಿಯಲ್ಲಿ. ಅವನ ಆಕಾಂಕ್ಷೆಯೇ ತನ್ನ ಆಕಾಂಕ್ಷೆ ಎಂದು ನುಡಿದಳು. ಮುದ್ದು ಶಿಶುವನ್ನು ಪಡೆಯುವ ಹಿರಿದು ಭಾಗ್ಯವದು ಸಕಲ ಹೆಂಗಳೆಯರಿಗೆ ದೊರೆಯುವುದೇ! ಎಂದು ಸಂದೇಹ ವ್ಯಕ್ತಪಡಿಸಿದ್ದಳು.
ಹೀಗಿದ್ದಾಗಲೇ ಶ್ರೀರಾಮ ಆಸ್ಥಾನಕ್ಕೆ ಮುನಿಶ್ರೇಷ್ಠ ವಸಿಷ್ಠರ ಆಗಮನವಾಯಿತು. ಸಂತಾನದ ಬಯಕೆಯನ್ನು ಅವರಲ್ಲಿ ಹೇಳಿಕೊಂಡ ಶ್ರೀರಾಮ. “ನಿಮಗಿಬ್ಬರಿಗೂ ಸಂತಾನ ಭಾಗ್ಯವಿದೆ. ಮುಂದೆ ಒಳ್ಳೆಯದಾಗಲಿದೆ” ಎಂಬ ಒಳಿತಿನ ನುಡಿ ಅವರಿಂದ ಮೂಡಿಬಂತು. ಹರ್ಷಚಿತ್ತನಾದನು ಶ್ರೀರಾಮ. ಆಗಲೇ ವಸಂತಕಾಲವದು ಬಂತು…
ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ




