ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

*ಮನಸಿಗೆ ಮುದ ತಂದ ವನಸುಮದ ಕಂಪು*

*ಶೀರ್ಷಿಕೆ: ನಕ್ಕುಬಿಡು ಬಾನಕ್ಕಿ* ( ಗಜಲ್ ಸಂಕಲನ )
*ಕವಯಿತ್ರಿ : ಶ್ರೀಮತಿ ವನಜಾ ಜೋಶಿ*
*ಚರವಾಣಿ: 99012 39477*
*ಪ್ರಕಾಶಕರು : ಸಂಸ್ಕೃತಿ ಬುಕ್ ಏಜೆನ್ಸೀಸ್, ಮೈಸೂರು*
*ಪ್ರಥಮ ಮುದ್ರಣ: 2025*

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿರುವ, ಸೆಳೆಯುತ್ತಲೇ ಇರುವ ‘ ಕಾವ್ಯದ ರಾಣಿ ‘ ಗಜಲ್ ನ ರಚನೆಯಲ್ಲಿ ತೊಡಗಿರುವ ಕವಿ, ಕವಯಿತ್ರಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚೆಂಬುದು ತಿಳಿದು ಬಂದಿದೆ. ವೃತ್ತಿಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಈಗ ನಿವೃತ್ತ ಜೀವನವನ್ನು ತಮ್ಮ ಆಸಕ್ತಿಯ ಓದು ಹಾಗೂ ಬರವಣಿಗೆಯ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಶ್ರೀಮತಿ ವನಜಾ ಜೋಶಿಯವರು ಸಾಮಾಜಿಕ ಜಾಲತಾಣದ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ‘ ವನಸುಮ ‘ ಎಂಬ ತಖಲ್ಲುಸ್ ನಿಂದ ಗಜಲ್ ಕವಯಿತ್ರಿಯಾಗಿ ಪರಿಚಿತರಾಗಿದ್ದಾರೆ. ಅಂತೆಯೇ, ತಮ್ಮ ರಚನೆಗಳಿಂದ ಇತರರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪ್ರೌಢ ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿದ್ದು ಕಾಲಕ್ರಮೇಣ ಪ್ರಬುದ್ಧ ಕವಯಿತ್ರಿಯಾಗಿ ಗುರುತಿಸಿಕೊಂಡ ಇವರಿಗೆ ಛಂದೋಬದ್ಧವಾದ ಮುಕ್ತಕ ಮತ್ತು ಷಟ್ಪದಿಗಳ ರಚನೆಯ ಕಲೆಯೂ ಒಲಿದಿದೆ.

ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ವನಜಾ ಜೋಶಿಯವರು 2025 ರಲ್ಲಿ ಪ್ರಕಟಿಸಿದ ‘ ನಕ್ಕುಬಿಡು ಬಾನಕ್ಕಿ ‘ ಗಜಲ್ ಸಂಕಲನವು ತನ್ನ ಶೀರ್ಷಿಕೆ , ಸುಂದರ ಮುಖಪುಟ ಹಾಗೂ ಉತ್ತಮ ಮುದ್ರಣದಿಂದ ಮೊದಲ ನೋಟಕ್ಕೇ ಎಲ್ಲರ ಮನಗಳನ್ನು ಸೆಳೆಯುತ್ತದೆ. ಕೃತಿಯನ್ನು ವಿದ್ಯೆಯೆಂಬ ಅಮೃತವನ್ನಿತ್ತು ಅರಿವು ಮೂಡಿಸಿ ಬೆಳೆಸಿದ, ಹರಸಿದ ಎಲ್ಲ ಗುರುಗಳಿಗೆ ಅರ್ಪಿಸಿದ್ದಾರೆ. ಖ್ಯಾತ ಗಜಲ್ ಕವಿ, ಕನ್ನಡ ಪ್ರಾಧ್ಯಾಪಕ ಮತ್ತು ವಿಮರ್ಶಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರ ಮುನ್ನುಡಿಯ ಜೊತೆಗೆ ಗಜಲ್ ಕಾವ್ಯದ ಮೂಲ, ಬೆಳವಣಿಗೆ ಹಾಗೂ ರಚನೆಯ ನಿಯಮಗಳ ಬಗ್ಗೆ ಬೆಳಕು ಚೆಲ್ಲುವ ಅವರದೇ ಲೇಖನವೂ ಇರುವುದೊಂದು ವಿಶೇಷ. ಪ್ರಸಿದ್ಧ ಕಲಾವಿದ , ಸಂಶೋಧಕ ಮತ್ತು ಯಕ್ಷಗಾನ ಕ್ಷೇತ್ರದ ವಿಮರ್ಶಕರಾದ ಡಾ.ಎಂ. ಪ್ರಭಾಕರ ಜೋಶಿಯವರ ಬೆನ್ನುಡಿ ಕೃತಿಯ ಮೌಲ್ಯವನ್ನು ವೃದ್ಧಿಸಿದೆ.

‘ ನಕ್ಕುಬಿಡು ಬಾನಕ್ಕಿ’ ಸಂಕಲನದಲ್ಲಿ ಗಜಲ್ ಕವಯಿತ್ರಿ ( ಗಜಲ್ ಗೋ ) ಐದು, ಆರು, ಏಳು ಹಾಗೂ ಒಂಬತ್ತು ಷೇರ್ ಗಳನ್ನುಳ್ಳ ಮುರದ್ದಫ್, ಗೈರ್ ಮುರದ್ದಫ್, ಜುಲ್ ಕಾಫಿಯಾ, ತರಹೀ , ಸಂಪೂರ್ಣ ಮತ್ಲಾವನ್ನು ಒಳಗೊಂಡ ನೂರ ಇಪ್ಪತ್ತೊಂದು ಗಜಲ್ ಗಳ ಗುಚ್ಛವನ್ನೇ ಹೆಣೆದಿದ್ದಾರೆ. ಪ್ರೀತಿ, ವಿರಹ ,ಅಗಲಿಕೆ, ಪ್ರಕೃತಿ ಪ್ರೇಮ, ಪರಿಸರ ಪ್ರಜ್ಞೆ, ತಾಯ್ತನದ ಸಂಭ್ರಮ, ವೈಧವ್ಯ, ರವಿ, ಮಳೆ, ಬಾಳಿನ ನಶ್ವರತೆ….. ಮುಂತಾದ ವಿವಿಧ ವಸ್ತು, ವಿಷಯಗಳ ಬಗ್ಗೆ ನಿಯಮಬದ್ಧವಾಗಿ ಮೂಡಿ ಬಂದಿರುವ ಗಜಲ್ ಗಳು ‘ ಕವಿಯ ಕಲ್ಪನೆ ಸೀಮಾತೀತ ‘ ಎಂಬ ನುಡಿಯನ್ನು ಬಿಂಬಿಸಿವೆ. ಈ ಸಂಕಲನದ ಕೆಲವು ಗಜಲ್ ಗಳ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ.

ಕರಪಿಡಿದು ನಡೆವ ಜೋಡು ಜೀವಕೆ ಒಲವೇ ಬಲ ತಾನಾದಾಗ
ಬಾನ ತಾರೆಗಳ ಸಾಲು ಹುಟ್ಟಿವೆ ನಿನ್ನ ನೆನಪಲಿ ನಾನಿರುವಾಗ
                               ( ಗಜಲ್ 2 )

ಸುಖದ ಅತಿಯಾಸೆಗೆ ಕಳೆಯಿತೆಲ್ಲವೂ
ಭೂಮಿ ಬಿರುಕುಗಳು ಎಚ್ಚರ ಕೊಡುತಿವೆ
                         

( ಗಜಲ್ 9 )
                             
ಕೈ ಚೆಲ್ಲಿ ಕೂರುವುದ ತೊರೆದು ಮುಂದಡಿ ಇಡಬೇಕು
ಸಂದೇಹಗಳ ನಿವಾರಿಸಬೇಕು ಬದುಕಿನ ಪ್ರೀತಿಯಲಿ
                               ( ಗಜಲ್ 18 )
                       
ಮದವೇರಿದ ಹೋರಿಯಾಗಿದೆ ನಿನ್ನ ನೆನಪು
ಎದೆಯೊಳಗೆ ಗೋರಿಯಾಗಿದೆ ನಿನ್ನ ನೆನಪು

                               ( ಗಜಲ್ 21 )

ಕರುಳಲಿ ಚಿಗುರಿದ ಹೊಸ ಜೀವ ಮರೆಸುವುದು ಜಗವ
ವನಸುಮದ ನಿತ್ಯ ಗೆಲುವಿನಲಿ ಇದೆ ಎಂಥ ಹರುಷ

                              ( ಗಜಲ್ 33 )

ವಿಹಗ ಬೃಂದವು ಔತಣಕೆ ಬಂದಿಹುದು ಕೂ ಕುಕುಲು ಕೂ
ಬಗೆಬಗೆಯ ಶುಭ ಗೀತವ ಹಾಡಿಹುದು ಕೂ ಕುಕುಲು ಕೂ

                              ( ಗಜಲ್ 62 )

ನನ್ನವ್ವ ಇರಬೇಕಿತ್ತು ನೆಲತಾಯಿ ಹೊಸ ಕುಸುರಿಟ್ಟ ಸಮಯದಾಗ
ಎಂಥ ಚೆಲುವು ಇಂದು ತೋರಿದೆ ಅವನಿ ಹಸಿರುಟ್ಟ ಸಮಯದಾಗ

                                 ( ಗಜಲ್ 63 )

ಹುಟ್ಟುವಾಗಲೇ ನಿಶ್ಚಯವಾಗಿದೆ ಸಾವು
ನಾಲ್ಕು ದಿನದ ಬಾಳಲಿ ಆಗದಿರು ಬೇವು

( ಗಜಲ್ 67 )

ನೋಡುಗರ ಕಣ್ಮನ ತಣಿಸುವ ಅಲಂಕಾರವದು
ಅತ್ತಿತ್ತ ಸರಿವ ನೋಟದಿ ಚೇಳು ಹಾವುಗಳ ಕಂಡೆ

                                ( ಗಜಲ್ 91 )

ದೂರ ದೂರ ನಾವು ಹಾರಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿ
ಜಗದ ಬಿತ್ತರವನೆಲ್ಲ ನೋಡಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿ

( ಗಜಲ್  117 )

ಭಾವಗಳನ್ನು ಸುಲಲಿತವಾಗಿ, ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದನ್ನು ಕರಗತ ಮಾಡಿಕೊಂಡಿರುವ ವನಜಾ ಜೋಶಿಯವರ ಗಜಲ್ ಗಳಲ್ಲಿ ಕಾವ್ಯ ಪ್ರತಿಭೆ ಮಿಂಚಾಗಿ ಹೊಳೆದಿದೆ. ಅರಿವಿನ ವ್ಯಾಪ್ತಿಯನ್ನು ವರ್ಣಿಸುವ ಅಪರೂಪದ ಶಬ್ದಗಳ ಭಂಡಾರವೇ ಅವರಲ್ಲಿದೆ ಎಂಬುದನ್ನು ಕೆಲವು ರಚನೆಗಳಲ್ಲಿ ಬಳಸಲ್ಪಟ್ಟಿರುವ ತೇಜ, ಕದಿರು, ಹದುಳ, ವಲ್ಲರಿ, ಸಲಿಲ, ಸುಮಸಾರ, ಜವನಿಕೆ , ಜಾಳಿಗೆ, ಅಣ್ಣಿ….ಇತ್ಯಾದಿ ಪದಗಳು ಸಾಬೀತುಪಡಿಸಿವೆ. ಗಜಲ್ 62 ನೆಯ ರದೀಫ್ ‘ ಕೂ ಕುಕುಲು ಕೂ ‘ ಬಹಳ ವಿಶಿಷ್ಟವಾಗಿದ್ದು ಗಜಲ್ ವಾಚನಕ್ಕೆ ಹೊಸ ಮೆರುಗನ್ನು ತರುತ್ತದೆ ಎಂಬುದಂತೂ ಸತ್ಯ.

ನಲ್ಮೆಯ ಸಹೋದರಿ ವನಜಾ ಜೋಶಿಯವರ ಲೇಖನಿಯ ತೇವವೆಂದೂ ಆರದಿರಲಿ. ಭವಿತವ್ಯದಲ್ಲಿ ಅವರಿಂದ ಮತ್ತಷ್ಟು ಸತ್ವಪೂರ್ಣ ಗಜಲ್ ಸಂಕಲನಗಳು ಪ್ರಕಟಗೊಂಡು ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ. ತಾಯಿ ಸರಸ್ವತಿಯ ಆಶೀರ್ವಾದ ನಿರಂತರವಾಗಿ ಅವರ ಮೇಲಿದ್ದು ಎಲ್ಲ ಆಶೋತ್ತರಗಳು ಈಡೇರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ.


About The Author

Leave a Reply

You cannot copy content of this page

Scroll to Top