ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು.

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ.

ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು.

ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು.

ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ.

*ಜೋಶಿ ಇಚ್ಛೆಯಂತೆ ಬೈಲಾ!*

ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ.

ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು.

*ಸಚಿವ ದರ್ಜೆ ಸ್ಥಾನ ಎಂಬ ಭೂತ*

ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು.

ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು.

*ಕೋಟಿಗಟ್ಟಲೆ ಹಣ ದುರುಪಯೋಗ!*

ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.
ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!)

*ನಾಲ್ವಡಿ ಅವರ ಫೋಟೋಗೆ ಖೋ!*

ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು.

ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ.

*ಸಾಹಿತಿಯನ್ನೆ ಆಯ್ಕೆ ಮಾಡಿ*

ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ ದೂರ ಇಡಬೇಕು. ಈಗ  ಜನ ಎಚ್ಚೆತ್ತುಕೊಂಡಿದ್ದಾರೆ. ಸಂಘಟನೆಯೂ ಬಲವಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸನ್ನು ನನಸಾಗಿಸುತ್ತ ಕನ್ನಡಪರ ನಿಲುವು ತೆಗೆದುಕೊಳ್ಳುವ ಅಧ್ಯಕ್ಷರಿಗೆ ಕಸಾಪ ಎದುರು ನೋಡುತ್ತಿದೆ.  ತಾಂತ್ರಿಕ ತೊಡಕು ಬಿಡಿಸಿಕೊಂಡು ಬರುವ ಡಿಶಂಬರಿಗೆ ಚುನಾವಣೆ ಆಗಲು ಆಡಳಿತಾಧಿಕಾರಿ ಕಾರ್ಯೋನ್ಮಖರಾಗಬೇಕು. ಸಾಹಿತ್ಯಮುಖಿಯಾಗಿ, ಕನ್ನಡಪರ, ಜನಪರ, ಪ್ರಾಮಾಣಿಕ ಸೇವೆ ಮಾಡಲು ಮುಂದಾಗುವವರಿಗೆ ನಮ್ಮ ಬೆಂಬಲ ಕೊಡೋಣ. ಕಳೆದು ಹೋದ ಕಸಾಪದ ಘನತೆ, ಗೌರವ, ಪರಂಪರೆ ಮುಂದುವರೆಸೋಣ.


About The Author

1 thought on ““ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ”

Leave a Reply

You cannot copy content of this page

Scroll to Top