ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನಿನ್ನ ಎದೆ ಖಾಲಿ ಇದೆ
ಅದು ಇಂಚುಗಳ ಅಳತೆಗೆ ಒಗ್ಗುವುದು
ಅಲ್ಲಿ ತಲೆಯಾನಿಸಿ ನಿಟ್ಟುಸಿರುವೇನೆಂದರೆ
ಅಲ್ಲಿ ಮೊಳೆಗಳನ್ನು ಜಡಿಯಲಾಗಿದೆ

ನಿನ್ನ ಎದೆ ಬರಡಾಗಿದೆ
ಅಲ್ಲಿ ಸದಾ  ಜಿನುಗುವ ಪಸೆ
ಬತ್ತಿಹೋಗಿದೆ
ನಿನ್ನ ಎದೆಗೂ ಮೊಲೆಗಳು ಮೂಡಿರಬೇಕಿತ್ತು
ಹಸಿದ ಹಾಲುಗಲ್ಲುಗಳ
ತುಟಿಗಳಲಿ  ಎದೆ ಹಾಲು ಜಿನುಗುತ್ತಿತ್ತು

ನಿನ್ನದೆಯ ರೋಮಗಳನು
ಸವರುತ್ತಿದ್ದರೆ
ಮುಳ್ಳುಗಳು ಪರುಚುತ್ತಿವೆ
ಅದೆಷ್ಟು ವರುಷಗಳ ರಕ್ತದ ದಾಹವಿದೆ ಅವುಗಳಿಗೆ

ನಿನ್ನ ಬೆರಳುಗಳ ಸಹವಾಸ
ಸಾಕು
ಲಾಠಿಗಳನ್ನೆ ಪಠಿಸುತ್ತೀವೆ
ನಾಲಿಗೆಯ ತುಂಬ ಸಿಡಮದ್ದಿನ ವಾಸನೆಯ ಘಮಲು ತುಂಬಿದೆ

ಸಾಕು ದೊರೆಯೇ
ನಿನ್ನ
ನಾಟಕದ ಕೊನೆಯ ಅಂಕ
ನಟಿಸುವ ಆ ಪಟ್ಟುಗಳ ಗತ್ತು ಬಿನ್ನಾಣ
ಎಲ್ಲವನ್ನೂ ಅರಿತಿರುವೆ

ಹಸುಳೆಗಳು ಬೀದಿಗಳಿದಿವೆ
ಈಗಲಾದರೂ ನಟಿಸುವುದು ಸಾಕು
ಒಂದು ಕಡ್ಡಿ ಸಾಕು ಹೊತ್ತಿ ಉರಿಯಲು

ಮಕ್ಕಳಿದ್ದರೆ ಗೊತ್ತಾಗುತ್ತಿತ್ತು
ಅಪ್ಪನ ಎದೆಯೊಳಗೆ ಮೊಲೆಗಳಿವೆ..
ಅಳತೆಗಳಿಲ್ಲ..!
ಹೆಬಸೂರ ರಂಜಾನ್

About The Author

Leave a Reply

You cannot copy content of this page

Scroll to Top