ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನದಿಗಳ ಕೊನೆಗೆ ಸೇರುವುದು ಸಮುದ್ರವನ್ನೇ ಎಂದು ಹೇಳುವುದು ಸಹಜವಾದ ಮಾತು. ಆದರೆ ಕೆಲವು ನದಿಗಳು ಸಮುದ್ರ ಸೇರದೆ ಕೆರೆ-ತೊರೆಗಳಾಗಿ ವಸುಂಧರೆಯ ಚೆಲುವನ್ನು ಹೆಚ್ಚಿಸುತ್ತವೆ. ಈ ಮಾತನ್ನು ಏಕೆ ಹೇಳುತ್ತಿರುವೆ ಎಂದರೆ ಸಿಂಗಲ್ ಪೇರೆಂಟ್ಸ ಅಥವಾ ಏಕ ಪೋಷಕತ್ವ ಇದು ಇತ್ತೀಚಿನ  ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳುತ್ತಿರುವ ಮತ್ತು ನೋಡುತ್ತಿರುವ ವಿಷಯವಾಗಿದೆ. ನಾನು ತುಂಬಾ ಹತ್ತಿರದಲ್ಲಿ ನೋಡಿರುವುದಕ್ಕೆ ಈ ವಿಚಾರ ಬರೆಯಲು ತೆಗೆದುಕೊಂಡೆ ಎಲ್ಲೋ ಕೇಳಿದಾಗ, ಮತ್ತೆಲ್ಲೂ ಓದಿದಾಗ, ಯಾರನ್ನೋ ನೋಡಿದಾಗ ಮನಸ್ಸಿಗೆ ಅಷ್ಟು ನಾಟದೆ ಇರಬಹುದು.
 ಆದರೆ ನಮ್ಮ ಆತ್ಮೀಯರು ಇಂತಹ ಪರಿಸ್ಥಿತಿಗಳನ್ನ ಎದುರಿಸಿದಾಗ ಸಹಜವಾಗಿ ನೋವಾಗುತ್ತದೆ. ಮಾನಸಿಕ ಯಾತನೆ ಉಂಟಾಗುತ್ತದೆ.
ಜೊತೆಗಾರ ಅಥವಾ ಜೊತೆಗಾತಿ ಇದ್ದು ಅನೇಕ ಸಮಸ್ಯೆಗಳನ್ನ ಇಂದು ಎದುರಿಸುತ್ತಿರುವಾಗ ಒಂಟಿಯಾಗಿ ಎಲ್ಲವನ್ನೂ ಎದುರಿಸುವುದು ಇದೆಯಲ್ಲ ಅದು ಹೇಳಲಸಾಧ್ಯ ಹಿಂಸೆ, ಅದರಲ್ಲೂ ಒಬ್ಬ ಹೆಣ್ಣುಮಗಳು ಸಿಂಗಲ್ ಪೇರೆಂಟ್ಸ್  ಆದಾಗ ತಂದೆ ಪ್ರೀತಿ, ತಾಯಿ ಪ್ರೀತಿ ಒಬ್ಬಳೇ ನೀಡುತ್ತಾ ಅನೇಕ ಸವಾಲುಗಳನ್ನು ಎದುರಿಸುತ್ತಾ ಹೋರಾಡಬೇಕು. ವಿಚ್ಛೇದನ, ಸಂಗಾತಿ ಸಾವು, ಅಥವಾ ದತ್ತು ತೆಗೆದುಕೊಂಡು ಸಾಕುವುದು,ಇದರ ಹಂತವಾಗಿರುತ್ತದೆ        “ಯಾವ ಹಾದಿಯಲ್ಲಾದರು ನಡೆ, ನಿನ್ನ ಆತ್ಮವಿಶ್ವಾಸವೇ ನಿನಗೆ ದಾರಿ ದೀಪ” ಎಂಬ ಕುವೆಂಪುರವರ ಮಾತು ಸ್ಪೂರ್ತಿ ನೀಡುತ್ತದೆ. ಜೀವನ ಪಥದಲ್ಲಿ ಒಂಟಿಯಾಗಿ ಸಾಗುವಾಗ ಮಗುವಿನ ಸುಖ ಸಂತೋಷ, ವಿದ್ಯಾಭ್ಯಾಸ ಆರೋಗ್ಯ ಹೀಗೆ ಹತ್ತು ಹಲವಾರು ಜವಾಬ್ದಾರಿ ಹೊರುವ ದೀಪ ಸ್ತಂಭವಿದ್ದಂತೆ, ಬಿರುಗಾಳಿಯೇ ಬರಲಿ ,ಸುನಾಮಿ ಅಲೆಗಳೇ ಅಪ್ಪಳಿಸಲಿ  ಮಗುವಿನ ಭವಿಷ್ಯಕ್ಕಾಗಿ ಎಲ್ಲವನ್ನು ಎದುರಿಸುತ್ತಲೆ ಸಾಗುತ್ತಾಳೆ.
ಒಮ್ಮೆ ತಮ್ಮ ಸಂಬಂಧಗಳಿಂದ ಹೊರ ಬಿದ್ದು ಸಿಂಗಲ್ ಪೇರೆಂಟ್ ಎಂಬ ಹಣೆ ಪಟ್ಟಿ ಬಿದ್ದ ಮೇಲೆ ಅವಳ ಅಸ್ತಿತ್ವವನ್ನೇ ಅಲ್ಲಾಡಿಸಿ ಅವಳ ಜಂಘಾಬಲ ಉಡುಗಿಸಿ ಬಿಡುತ್ತಾರೆ ಸುತ್ತಮುತ್ತಲಿನವರು. ಗಂಡ ಇಲ್ಲದೆ ಇರುವ ಮಹಿಳೆಯರು  ಮೇಲೆ ಒಂದು ತೆರನಾದ ಅನುಕಂಪ, ಅಯ್ಯೋ ಪಾಪ ಹೀಗಾಗಬಾರದಿತ್ತು ,ಮಗು ಚಿಕ್ಕದು ಎಂಬ ಕಾರಣಗಳಿಂದ, ಒಂದು ಕಡೆಯಿಂದ ಮಾನಸಿಕ ಬೆಂಬಲ ಅಥವಾ ಆರ್ಥಿಕ ಬೆಂಬಲ ಕೂಡ ದೊರೆಯಬಹುದು, ಅವಳ  ಕಷ್ಟಕ್ಕೆ ಎಲ್ಲರೂ ಸಾತ್ ಕೊಡಬಹುದು.  ಆದರೆ ಎಲ್ಲರಿಗೂ ಹೀಗೆ ಆಗಬೇಕು ಎಂಬುವ ಹಾಗಿಲ್ಲ, ಅವಳಿಗೆ ತವರು ಮನೆಯಲ್ಲಿ, ಗಂಡನ ಮನೆಯಲ್ಲಿ ಸ್ಥಾನ ಸಿಗದೇ ಒಂಟಿಯಾಗಿ ಸಮಾಜದ ಕೊಂಕು ನುಡಿಗಳನ್ನ ,ಸಮಸ್ಯೆಗಳನ್ನ ಎದುರಿಸುತ್ತಾ ಮಗುವನ್ನು ಬೆಳೆಸಿ ಒಳ್ಳೆಯ ಶಿಕ್ಷಣ ,ಆರೋಗ್ಯ ಕೊಟ್ಟು ಪಾಲನೆ ಪೋಷಣೆ ಮಾಡುವುದು ಒಂದು ದೊಡ್ಡ ಸವಾಲು ಎಂಬುದು ಸುಳ್ಳಲ್ಲ.
ವಿಚ್ಛೇದಿತ ಮಹಿಳೆಗೆ ಇಂತಹ ಸಂಪೂರ್ಣ ಬೆಂಬಲ ಸಿಗಲಾರದು ಏಕೆಂದರೆ ಡಿವೋಸ೯ ತಗೋತಾ ಇರೋದೇ ಮೊದಲು ಕುಟುಂಬದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ, ಹೊಂದಿಕೊಂಡು ಹೋಗುವುದರ ಬಗ್ಗೆ ಸಾಕಷ್ಟು ತಿಳಿ ಹೇಳಿರುತ್ತಾರೆ. ಸಮಸ್ಯೆಗಳನ್ನು ಬಗೆಹರಿಸಿರುತ್ತಾರೆ. ಆದರೆ ಅವಳ ದಿಟ್ಟ ನಿರ್ಧಾರ ಕೆಲವರಲ್ಲಿ ಅಸಮಾಧಾನ ಉಂಟು ಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವಳು ಏಕಾಂಗಿ ಹೋರಾಟ ನಡೆಸಲೇ ಬೇಕಾಗುತ್ತದೆ ತನ್ನ ದುಡಿಮೆಯೊಂದಿಗೆ ಮಗುವಿನ ಆಗುಹೋಗುಗಳ ಜವಾಬ್ದಾರಿ ಹೆಗಲೇರುತ್ತದೆ. ಎಲ್ಲಾ ಸಮಸ್ಯೆಗಳನ್ನ ಒಂಟಿಯಾಗಿ ನಿಭಾಯಿಸುತ್ತಾ ಆರ್ಥಿಕವಾಗಿ, ಮಾನಸಿಕವಾಗಿ ,ಸಾಮಾಜಿಕವಾಗಿ, ಸದೃಡರಾಗಬೇಕಾಗುತ್ತದೆ. ಮಗು ದೊಡ್ಡದಾಗುತ್ತಾ ಬಂದಂತೆ ಮಗುವಿನ ಬದುಕಿನ ಮಜಲುಗಳನ್ನು ತಿಳಿಸಬೇಕಾಗುತ್ತದೆ. ಎಲ್ಲ ರೀತಿಯ ಪ್ರೀತಿಯ ಹೂಮಳೆ ಸುರಿಸಬೇಕಾಗುತ್ತದೆ, ಕೆಲವೊಮ್ಮೆ ಇದೆಂತಹ ಬದುಕು ಅನ್ನಿಸದಿರದು. ಮಗುವಿಗಾಗಲಿ, ತನಗೆ ಆಗಲಿ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆಸ್ಪತ್ರೆ, ಮನೆ, ಮಗು ,ಹಣ ಇವೆಲ್ಲವು ಪೇಡಂಭೂತವಾಗಿ ಕಾಡುತ್ತದೆ .ಇತ್ತೀಚೆಗೆ ಸಿಂಗಲ್ ಪೇರೆಂಟ್ ಎಂಬುದು ಟ್ರೆಂಡ್ ಆಗಿದೆ, ಇದೆಲ್ಲ ಕಾಮನ್ ಎಂಬ ಮಾತು ಎಲ್ಲರ ಬಾಯಲ್ಲೂ ಸಹಜವಾಗಿ ಬರತೊಡಗಿದೆ. ಹಿರಿಯರ ವಿರೋಧ ಸದಾ ಇದಕ್ಕೆ ಇದ್ದೇ ಇರುತ್ತದೆ ,ಅವರ ಮನಸ್ಸು ಇಂಥವುಗಳಿಗೆ ಒಪ್ಪದು, ಆದರೆ ಜಮಾನ ಬದಲಾಗಿದೆ. ಭಾವನೆಗಳ ನೆಲಗಟ್ಟಿನ ಮೇಲೆ ಬದುಕು ಸಾಗುತ್ತಿಲ್ಲ. ನಾನು ಎಂಬ ಅಹಂ ತಾಂಡವವಾಡುತ್ತಿದೆ.ಅಡ್ಜೇಸ್ಟ ಆಗಬೇಕಾ?,ನಾನೇ ಆಗಬೇಕಾ? ಯಾಕೆ  ಆಗಬೇಕು, ನಾನು ದುಡಿತಾ ಇಲ್ವಾ,ಎಂಬ ಪ್ರಶ್ನೆಗಳ ಸುರಿಮಳೆ, ಇಬ್ಬರಲ್ಲೂ ಅಹಂ ಹೆಚ್ಚಾದಂತೆ ಸಂಬಂಧಗಳ ನಡುವೆ ಬಿರುಕು ಸರ್ವೇಸಾಮಾನ್ಯ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವರಿಬ್ಬರ ಜಗಳ ಮನಸ್ತಾಪಗಳಿಂದ ಮಗು ಖಿನ್ನತೆಗೆ ಒಳಗಾಗಬಹುದು. ಅಥವಾ ದುರ್ಮಾರ್ಗ, ದುರಭ್ಯಾಸಗಳಗತ್ತ ವಾಲಬಹುದು.ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸಮಾಧಾನದಿಂದ ಕುಳಿತು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ!? ಕುಳಿತು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಒಂದು ವೇಳೆ ಇದು ಅಸಾಧ್ಯ ಎಂದಾಗ ಅನಿವಾರ್ಯ. ಆದರೆ ಮಕ್ಕಳ ಬೆಳವಣಿಗೆಯಲ್ಲಿ ಇಬ್ಬರ ಪಾತ್ರ ಎಷ್ಟು ಮುಖ್ಯವಾದದ್ದು .ಒಂಟಿಯಾದಾಗ ಆ ಜವಾಬ್ದಾರಿ ದ್ವಿಗುಣವಾಗುತ್ತೆ ಮಗುವಿನ ಮನಸ್ಥಿತಿಗೆ ಸ್ಪಂದಿಸುತ್ತಾ ಅವರಲ್ಲಿ ಒಂದು ಸಕಾರಾತ್ಮಕ ಸದೃಢ ಭಾವನೆ ಬೆಳೆಸಿ ಒಂಟಿಯಾಗಿದ್ದರು ಎಷ್ಟು ಚೆನ್ನಾಗಿ ಮಗುವನ್ನು ಬೆಳೆಸಿದ್ದಾರೆ, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಎಂದು ಬಾಯಿ ಮೇಲೆ ಬೆರಳು ಇಡುವಂತಾಗಬೇಕು, ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕಬೇಕು ಅಷ್ಟೇ….


About The Author

Leave a Reply

You cannot copy content of this page

Scroll to Top