ಜೀವನ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗುವ ಬಾಳಿಗೆ ಕರಗುವ ಮನಸ್ಸು


ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ.
ದಯೆ ಎಂದರೇನು?
ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ.
‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.
ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು.
ಸಹಾನುಭೂತಿ
ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ.
ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’
ಆಲಿಸಿ
ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.
ಸಕಾರಾತ್ಮಕತೆ
ಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್‌ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು.
ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’
ಪ್ರಕೃತಿ
ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು.
ಕ್ಷಮಾ ಗುಣ
ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.
ಭಾವನಾತ್ಮಕತೆ
ಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು.
‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ.
ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’
ಬದುಕಲು ಬಿಡೋಣ
ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ.
ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು
ಜಯಶ್ರೀ.ಜೆ. ಅಬ್ಬಿಗೇರಿ



