ಧಾರಾವಾಹಿ-47
ಡಾ.ವಿಶ್ವನಾಥ್ ಎನ್ ನೇರಳೆ ಕಟ್ಟೆ

ಅರ್ಜುನ ಉವಾಚ
ನಮ್ಮ ಸೇನೆ ಮಡಿಯಿತು;
ಮಣಿಯಿತು,
ಮಣಿಪುರದ ಅರಸನಿಗೆ

“ನನ್ನನ್ನು ಮೊದಲು ಕಾಣಬೇಕಿತ್ತು ನೀನು. ಅದನ್ನು ಬಿಟ್ಟು ಪಾರ್ಥನನ್ನು ಕಂಡು ರಾಜಕಾರ್ಯವನ್ನು ಕೆಡಿಸಿದೆ. ನಿನ್ನ ದೇಹವನ್ನು ಹೆಚ್ಚಾಗಿ ನೋಯಿಸುವುದಿಲ್ಲ. ನೀನೀಗ ನನಗೆ ಮೈದುನ. ಸರಸ ಭಾವದಿಂದಲೇ ಯುದ್ಧ ಮಾಡೋಣ. ಕಂಗೆಡದಿರು” ಎಂದು ವ್ಯಂಗ್ಯದ ಮಾತುಗಳನ್ನಾಡಿ ಬಾಣಪ್ರಯೋಗಕ್ಕೂ ಮೊದಲೇ ಬಭ್ರುವಾಹನನನ್ನು ಚುಚ್ಚುವ ಪ್ರಯತ್ನ ಮಾಡಿದ ಪ್ರದ್ಯುಮ್ನ. ಮಾತು ಮುಗಿಸಿದಾಕ್ಷಣವೇ ನಾಲ್ಕು ಬಾಣಗಳು ಸಿಡಿದವು ಬಭ್ರುವಾಹನನ ಮೇಲೆ.
“ಸಂಗ್ರಾಮವಿದು. ಇಲ್ಲಿ ಸರಸ ಭಾವಕ್ಕೆ ಎಡೆಯಿಲ್ಲ. ಭಾವನಿರಲಿ, ಮೈದುನನಿರಲಿ, ಯಾರೇ ಆಗಿರಲಿ ಯುದ್ಧಕ್ಕಿಳಿದ ಮೇಲೆ ಸಮರವೊಂದೇ ಗುರಿ. ಬಿಲ್ಲು ಬಾಣಗಳಿಗೆ ಸಂಬAಧದ ಋಣವಿಲ್ಲ” ಎಂದು ಹೇಳಿದ ಬಭ್ರುವಾಹನ ಸಿಡಿಸಿದ್ದು ಸಹಸ್ರ ಶರಗಳನ್ನು, ಏಕಕಾಲಕ್ಕೆ.
ಪ್ರತಿಯಾಗಿ ಕೃಷ್ಣತನಯ ಪ್ರಯೋಗಿಸಿದ ಬಾಣಗಳು ಭೀಕರವಾಗಿ ತೋರಿದವು. ದಿಕ್ಕು, ಆಗಸ, ಭೂಮಿ ಇವುಗಳೆಲ್ಲಾ ಎಲ್ಲಿವೆ? ಎನ್ನುವುದನ್ನು ಪತ್ತೆಮಾಡಲಾಗದಂತೆ, ಸೂರ್ಯ- ಚಂದ್ರರನ್ನು ಗುರುತುಹಚ್ಚಲಾಗದಂತೆ ಹೊಮ್ಮಿದವು ಚಿಮ್ಮಿದವು ಬಾಣಗಳು. ಸುರಾಸುರರ ಕದನದಲ್ಲಿ, ಪ್ರಸಿದ್ಧ ವೀರರ ಯುದ್ಧದಲ್ಲಿ ಈ ಬಗೆಯ ಬಾಣಾಘಾತ ಆಗಿಲ್ಲ ಎನ್ನುವಂತೆ ಶರಪ್ರಯೋಗ ಮಾಡಿದ ಪ್ರದ್ಯುಮ್ನ.
ಅವನ ಬಾಣಪ್ರಯೋಗದಿಂದ ಕತ್ತಲು ಕವಿಯಿತು. ಆ ಅಂಧಕಾರವನ್ನು ದೂರಮಾಡುವಂತೆ ಬಭ್ರುವಾಹನನ ಬಿಲ್ಲುಬಾಣಗಳ ಕಾಂತಿಯದು ಕಂಡುಬAದಿತು. ಕವಿದ ಇರುಳನ್ನು ಕಿತ್ತೋಡಿಸುವಂತೆ ಪರಸ್ಪರ ಸಂಘರ್ಷಕ್ಕಿಳಿದವು ಪ್ರದ್ಯುಮ್ನ ಮತ್ತು ಬಭ್ರುವಾಹನನ ಬಾಣಗಳು.
ಆಗ ಬಭ್ರುವಾಹನನ ಬತ್ತಳಿಕೆಯಲ್ಲಿದ್ದ ಬಾಣಗಳು ಈಗ ಪ್ರದ್ಯುಮ್ನ ಶರೀರದಲ್ಲಿ. ತುಸು ಸಮಯಕ್ಕೆ ಮೊದಲು ಕೃಷ್ಣಸುತನ ಕರದಲ್ಲಿ ಶೋಭಿಸುತ್ತಿದ್ದ ಶರಗಳು ಈಗ ಮಣಿಪುರದರಸನ ಮೈಯ್ಯಲ್ಲಿ.
ಬಭ್ರುವಾಹನನ ಭೀಕರತೆಯನ್ನು ಸಹಿಸದವನಾದ ಪ್ರದ್ಯುಮ್ನ. ಕುಸುಮಾಸ್ತçವನ್ನೇ ಪ್ರಯೋಗಿಸಿದ, ಮೂರೂ ಲೋಕಗಳು ನಡುಗುವ ರೀತಿಯಲ್ಲಿ. ಕುದುರೆ ಸವಾರರ ಶಿರಗಳು ನೆಲಕ್ಕುರುಳಿದವು. ಕುದುರೆಗಳು ಮಡಿದವು. ಆನೆಯ ಮೇಲಿದ್ದವರು ಇಳೆಯ ಮೇಲಕ್ಕೆ ಬಿದ್ದರು. ಆನೆಗಳು ಭೂಮಿಯ ಮೇಲೆ ಹೊರಳಿ ಬಿದ್ದವು. ರಥ ಓಡಿಸುತ್ತಿದ್ದವರ ದೇಹಗಳು ಸೀಳಿಹೋದವು. ರಥದ ಮೇಲಿದ್ದು ಯುದ್ಧ ಮಾಡುತ್ತಿದ್ದವರ ಶರೀರವೂ ಇಬ್ಭಾಗವಾಯಿತು. ಇಂಥದ್ದೊAದು ಭೀಕರ ಪರಿಣಾಮ ಉಂಟುಮಾಡಿತು ಪ್ರದ್ಯುಮ್ನ ಪ್ರಯೋಗಿತ ಬಾಣ.
ಭೂಮಿಯಂತೆ ಒಂಭತ್ತು ಭಾಗಗಳಾಗಿ ಒಡೆದುಹೋಯಿತು ಆ ಯುದ್ಧಭೂಮಿ. ಯಮಪುರಿಯಂತೆ ನರಕಸದೃಶವಾಗಿ ತೋರಿತು. ಸಾಗರದ ನೀರು ಉಕ್ಕಿದಂತೆ ಅಲ್ಲೋಲ ಕಲ್ಲೋಲ ಸ್ಥಿತಿಯನ್ನಪ್ಪಿತು ರಣರಂಗ. ಜೀವನಚಕ್ರದ ರೀತಿಯಲ್ಲಿ ಪಾತಕಗಳಿಂದ ತುಂಬಿಹೋಯಿತು. ಶಿವಗಣಗಳೆನಿಸಿಕೊಂಡ ಭೂತ ಬೇತಾಳಗಳ ನೆಲೆಯಾಗಿ ಕೈಲಾಸಸಮಾನವಾಯಿತು. ರಕ್ತಮಾಂಸಗಳಿAದ ಕೂಡಿದ್ದ ರಣಭೂಮಿ ಅಸುರಲೋಕವನ್ನು ನೆನಪಿಸಿತು.
ಹೆಣಗಳ ಭಕ್ಷಣೆಗಾಗಿ ಬಂದಿದ್ದವು ಯಕ್ಷ ರಾಕ್ಷಸ ಭೂತ ಬೇತಾಳ ಗಣಗಳು. ಭಯಂಕರವಾಗಿ ತೋರಿತು ಕದನರಂಗ ಆ ಕ್ಷಣದಲ್ಲಿ. ಶವಗಳನ್ನು ತಿನ್ನಲು ಬಂದಿದ್ದ ಕೆಲವು ಪಿಶಾಚಿಗಳು ಮುರಿದುಬಿದ್ದಿದ್ದ ಆನೆಯ ಸೊಂಡಿಲುಗಳನ್ನು ಕಹಳೆಗಳಂತೆ ಊದಿದವು. ಇನ್ನೂ ಕೆಲವು ಪಿಶಾಚಿಗಳು ಸತ್ತ ಆನೆಗಳ ದಂತವನ್ನು ಮುರಿದು, ತಲೆಬುರುಡೆಗೆ ಸಿಕ್ಕಿಸಿ, ಅದಕ್ಕೆ ನರಗಳನ್ನು ತಂತಿಗಳನ್ನಾಗಿಸಿ ಸಂಗೀತ ವಾದ್ಯವನ್ನಾಗಿ ಮಾಡಿದವು, ಹಾಡಿದವು. ಮೃತ ಕುದುರೆಗಳ ಕಾಲಿನ ಗೊರಸುಗಳನ್ನು ಕಿತ್ತುತೆಗೆದು, ಅವುಗಳನ್ನೇ ತಾಳಗಳನ್ನಾಗಿಸಿಕೊಂಡು, ಜೋರಾಗಿ ಬಡಿಯುತ್ತಾ ಲಯವನ್ನಿತ್ತು ಸಂಭ್ರಮಿಸಿದವು ಇನ್ನೂ ಹಲವು ಪಿಶಾಚಿಗಳು. ಸತ್ತ ಆನೆಗಳ ಶಿರಗಳನ್ನೇ ಚರ್ಮವಾದ್ಯಗಳನ್ನಾಗಿಸಿ ಧ್ವನಿ ಹೊಮ್ಮಿಸಿದವು ಉಳಿದ ಪಿಶಾಚಿಗಳು. ಈ ಹಾಡು, ತಾಳ, ಲಯಗಳಿಗೆ ಅನುಗುಣವಾಗಿ ಕುಣಿಯತೊಡಗಿದವು ಅನಿತೂ ಪಿಶಾಚಿಗಳು. ಪ್ರದ್ಯುಮ್ನ ಬಭ್ರುವಾಹನರ ಮೆರೆದಾಟಕ್ಕೆ ಸಾಕ್ಷಿಯಾಗಿದ್ದ ರಣರಂಗವದು ಪಿಶಾಚಿಗಳ ನಾಟ್ಯರಂಗವಾಗಿ ತೋರಿತು ಆ ಗಳಿಗೆಯಲ್ಲಿ.
ತನ್ನ ಸೇನೆಯನ್ನು ಸಂಹರಿಸುತ್ತಲೇ, ರಕ್ತಪ್ರವಾಹವನ್ನು ಹರಿಸುತಲಿದ್ದ ಹರಿಸುತನ ಪರಿಯನ್ನು ಕಂಡು ಕ್ರೋಧಕ್ಕೊಳಗಾದ ಬಭ್ರುವಾಹನ. ನಮ್ಮ ಸೈನ್ಯದೆಡೆಗೆ ನುಗ್ಗಿಬಂತು ಅವನ ರಥ. ಅದೆಷ್ಟೋ ಸೈನಿಕರು ಆಹುತಿಯಾದರು ಅವನ ಕ್ರೋಧಕಿಡಿಗೆ.
ಬಿದ್ದಿದ್ದ ಆನೆಗಳು ಬೆಟ್ಟಗಳಂತೆ ತೋರಿದವು. ಮಡಿದಿದ್ದ ಕುದುರೆಗಳು ಬಂಡೆಗಲ್ಲುಗಳAತೆ ಕಾಣಿಸಿದವು. ಕಡಿದಿದ್ದ ಕೈ ಕಾಲು ದೇಹಗಳು ಮರಗಳಾಗಿ, ಮರದ ತುಂಡುಗಳಾಗಿ ಗೋಚರಿಸಿದವು. ರಕ್ತಪ್ರವಾಹವೇ ನದಿಯಾಗಿ, ಒಡೆದಿದ್ದ ತಲೆಬುರುಡೆಗಳೇ ದೋಣಿಗಳಾಗಿ ಮೂರ್ತಗೊಂಡಿದ್ದವು ಅದೊಂದು ಸಮಯದಲ್ಲಿ.
ಪ್ರದ್ಯುಮ್ನನ ಸಾರಥಿ, ಕುದುರೆಗಳು, ಧ್ವಜಗಳನ್ನು ಸರ್ವನಾಶ ಮಾಡಿದ ಬಭ್ರುವಾಹನ, ರಥವನ್ನೂ ಪುಡಿಗೈದ. ಹೊಸದು ರಥವನ್ನೇರಿ ನಿಂತ ಪ್ರದ್ಯುಮ್ನ. ಅದೂ ಚೂರಾಗಿಹೋಯಿತು ಬಭ್ರುವಾಹನನ ಬಿರುಸು ಬಾಣಕ್ಕೆ ಸಿಲುಕಿ. ಮತ್ತೊಂದು ರಥ ಬಂತು. ಅದಕ್ಕೂ ಇದೇ ಗತಿ. ಇನ್ನೊಂದು ರಥ ಬಂತು. ಇದಕ್ಕೂ ಅದೇ ಸ್ಥಿತಿ. ಹೀಗೆಯೇ ಪ್ರದ್ಯುಮ್ನ ಏರಿದ ಎಪ್ಪತ್ತು ರಥಗಳ ಹುಡಿಯೆಬ್ಬಿಸಿದ ಮಣಿಪುರದ ದೊರೆ.
ಭೂಮಿಯ ಮೇಲಿನ ಯುದ್ಧವದು ಸಾಕು ಎನಿಸಿತೇನೋ ಅವರಿಗೆ! ಗಗನಕ್ಕೇರಿದರು. ಅಲ್ಲಿ ಕದನ ಹೂಡಿದರು. ಸಿಡಿಲ ರಭಸದಲ್ಲಿ ಬಾಣಗಳು ಸಿಡಿಯಲ್ಪಟ್ಟವು. ಅಷ್ಟರಲ್ಲಿ, ಆಯುಧಗಳಿದ್ದ ಚೀಲ ಭೂಮಿಯ ಮೇಲೆಯೇ ಇದೆ ಎನ್ನುವುದು ಇಬ್ಬರಿಗೂ ನೆನಪಾಯಿತು. ಇಂದ್ರನ ವಜ್ರಾಯುಧದ ಹೊಡೆತಕ್ಕೆ ಪರ್ವತ ಕೆಡೆದುಬೀಳುವಂತೆ ಭೂಮಿಗೆ ಬಂದುಬಿದ್ದರು ಘನಶೂರರು.
ಪ್ರದ್ಯುಮ್ನ ಪರಾಕ್ರಮವದು ಸಾಲದಾಯಿತು ಮಣಿಪುರದರಸನನ್ನು ಮಣಿಸಲು. ಅನುಸಾಲ್ವ ಮತ್ತೆ ಬಭ್ರುವಾಹನನನ್ನು ಕೆಣಕಲು ಹೋದ. ವ್ಯಥೆಗೀಡಾದ. ಯೌವನಾಶ್ವ ಸೋಲು ಕಂಡ. ನೀಲಧ್ವಜ ಬಾಣದ ಏಟಿನ ಊಟವನ್ನುಂಡ.
ನಮ್ಮ ಕಡೆಯ ಬಹುತೇಕ ಮಂದಿ ಬಭ್ರುವಾಹನನೆದುರು ಸೋತುಹೋದರು. ಗೆಲುವಿನ ಹುಮ್ಮಸ್ಸಿನಲ್ಲಿ ಅವನು ಮೈಮರೆತು ಮೆರೆಯುತ್ತಿದ್ದ. ಅವನ ಆ ಆನಂದವನ್ನು ನೋಡಲಾಗಲಿಲ್ಲ ನನಗೆ.
ನಮ್ಮ ಪಕ್ಷದಲ್ಲಿ ಅವನನ್ನು ಎದುರಿಸಲು ಬಾಕಿಯಿದ್ದವರು ನಾನು, ಹಂಸಧ್ವಜ, ಸುವೇಗ ಮತ್ತು ವೃಷಕೇತು. ನಮ್ಮಲ್ಲಿ ಯಾರಾದರೊಬ್ಬರು ಈಗ ಅವನನ್ನು ಎದುರಿಸಬೇಕಿತ್ತು. ನಾನೇ ಯುದ್ಧರಂಗಕ್ಕೆ ಇಳಿಯುತ್ತೇನೆ ಎಂದುಕೊAಡೆ. ಬಭ್ರುವಾಹನನ ತಲೆಗೇರಿರುವ ಮದವನ್ನು ಇಳಿಸುತ್ತೇನೆ ಎಂದುಕೊAಡೆ. ಆದರೆ ಅದಾಗಲೇ ಉತ್ಸಾಹ ತೋರಿದ ಹಂಸಧ್ವಜ ರಾಜ.
ಡಾ.ವಿಶ್ವನಾಥ್ ಎನ್ ನೇರಳೆ ಕಟ್ಟೆ




