ಕಾವ್ಯ ಸಂಗಾತಿ
ಡಾ.ಹಸೀನಾ ಹೆಚ್.ಕೆ
ಗಜಲ್


ಕತ್ತಲನು ಸೀಳಿ ಸಂಸಾರಕೆ ಸಿರಿ ಕಾಂತಿಯಾದವಳು ಹೆಣ್ಣು
ಅಶಾಂತಿಯ ಗೋಡೆ ಮುರಿದು ಮನೆಗೆ ಭಾತಿಯಾದವಳು ಹೆಣ್ಣು
ಸಂಕೋಲೆಗಳ ತೂರಿ ಸಮಾನತೆಯ ಬಾನಲಿ ಹಾರುತಿಹಳು
ಬದುಕಿನ ಪಯಣದಲಿ ಬೆಳಕಾಗಿ ನೀತಿಯಾದವಳು ಹೆಣ್ಣು
ಕಣ್ಣೀರಿನ ಕಡಲನ್ನೇ ಭೇದಿಸಿ ನಗುವಿನ ಖಜಾನೆಯಾಗುತ್ತಾಳೆ
ಜಗದ ಕಣ್ಣಾಗಿ ಸೌಜನ್ಯ ಕಲಿಸಿ ಶಾಂತಿಯಾದವಳು ಹೆಣ್ಣು
ಅಬಲೆಯೆಂಬ ಕೀಳು ಮನಸುಗಳ ಯೋಚನೆ ಕಿತ್ತೆಸೆದವಳು
ಅಂಧಕಾರವ ಅಳಿಸಿ ಅರಿವಿನ ಕಣ್ತೆರೆಸಿ ಜ್ಯೋತಿಯಾದವಳು ಹೆಣ್ಣು
ಕೇವಲ ರೂಪದ ಗೊಂಬೆಯಲ್ಲ ಹೆಣ್ಣು ಜ್ಞಾನ ದೀವಿಗೆಯಿವಳು
ಹಸೀನಾ ಅರಿವಿನ ಕಿಡಿಯಾಗಿ ಮಾನವತೆಗೆ ರೀತಿಯಾದವಳು ಹೆಣ್ಣು
ಡಾ.ಹಸೀನಾ ಹೆಚ್.ಕೆ ಶಿವಮೊಗ್ಗ



