ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ವೀಣಾ ಹೇಮಂತ್‌ ಗೌಡ ಪಾಟೀಲ

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ “ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ಮನೆಯ ಎಲ್ಲಾ ಕೆಲಸಗಳನ್ನು ಆಕೆ ತಲೆಯ ಮೇಲೆ ಹೊತ್ತು ಮಾಡುತ್ತಿದ್ದಳು. ಮನೆಯ ಪ್ರತಿಯೊಬ್ಬರ ಅಗತ್ಯಗಳು ಆಕೆಗೆ ಗೊತ್ತಿತ್ತು. ಕಳೆದ ಮೂರು ದಶಕಗಳಿಂದ ಗಂಡನ ಮನೆಯನ್ನು ತನ್ನದೇ ಎಂದು ಭಾವಿಸಿ ಆಕೆ  ಅತ್ತೆ ಮಾವ ಬದುಕಿ ಇರುವವರೆಗೂ ಊಟ-ಉಪಚಾರ, ಔಷಧಿ, ಆರೋಗ್ಯ ಎಂದು ಎಲ್ಲ ರೀತಿಯಿಂದ ಕಾರ್ಯನಿರ್ವಹಿಸಿದಳು.ಗಂಡನ ಹಿಂದೆ ಮುಂದೆ ಸುತ್ತಾಡಿ ಆತನ ಬೇಕು ಬೇಡಗಳನ್ನು ಪೂರೈಸಿದಳು. ಮನೆಯವರ ಅಗತ್ಯಕ್ಕೆ ತಕ್ಕಂತೆ ಎಲ್ಲ ಬಗೆಯ ಅಡುಗೆಗಳನ್ನು ಹೊತ್ತು ಹೊತ್ತಿಗೆ ಮಾಡಿ ಬಡಿಸಿದಳು. ಮನೆಯ ಸಂಪ್ರದಾಯ ರೀತಿ ನೀತಿಗಳನ್ನು ತನ್ನದಾಗಿಸಿಕೊಂಡು ನಡೆಸಿಕೊಂಡು ಬರುತ್ತಿದ್ದಾಳೆ.ಖುದ್ದು ತನ್ನ ಮಕ್ಕಳ ಊಟ, ಉಪಚಾರ, ಓದು, ಮನೆಪಾಠ ಎಲ್ಲವನ್ನು ಆಕೆಯೇ ನಿರ್ವಹಿಸಿದಳು. ಅವರ ಸುಸ್ಥಿರ ಆರೋಗ್ಯಕ್ಕೆ ಅವಶ್ಯಕವಾದ ಎಲ್ಲವನ್ನು ಆಕೆ ನಿರ್ವಂಚನೆಯಿಂದ ಮಾಡಿದಳು. ಮಕ್ಕಳನ್ನು ಸ್ವಾವಲಂಬಿಯನ್ನಾಗಿ ಬೆಳೆಸಿದಳು.ಊರಿನ ಪ್ರತಿಷ್ಠಿತ ಮನೆತನವಾದ ಕಾರಣ ಅವರ ಮನೆಗೆ ಬರುವ ಹೋಗುವ ಅತಿಥಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು ಅಂತೆಯೇ ಆಕೆ ಅವರೆಲ್ಲದ ಚಹಾ ತಿಂಡಿಗಳ ಸರಬರಾಜು ಎಂದು ಎಲ್ಲವನ್ನು ಮಾಡುತ್ತಿದ್ದಳು. ಭಾರತೀಯ ಸಂಸ್ಕೃತಿಯಲ್ಲಿ.ಸಾಂಪ್ರದಾಯಿಕವಾಗಿ ನಡೆದು ಬಂದ ಎಲ್ಲ ಪದ್ಧತಿಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದ ಆಕೆಗೆ ಓರ್ವ ಪರಿಪೂರ್ಣ ಗೃಹಿಣಿ, ಕರ್ತವ್ಯನಿಷ್ಠ ವ್ಯಕ್ತಿ ಎಂಬ ತೃಪ್ತಿ ದೊರಕಿತ್ತು…. ಆದರೆ ಆಕೆಗೆ ದೊರೆಯಬೇಕಾದ ಗೌರವ ಸಮ್ಮಾನಗಳು ?? ಇಂದಿಗೂ ಆಕೆ ಅವುಗಳನ್ನು ನಿರೀಕ್ಷಿಸುತ್ತಿದ್ದಾಳೆ.ಇದೀಗ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂಬುದು ನಿಜ. ಆದರೆ ವೈಯುಕ್ತಿಕ ನೆಲೆಯಲ್ಲಿ ಆಕೆಗೆ ಮಾತ್ರ ಮಕ್ಕಳಿಂದ ಯಾವುದೇ ರೀತಿಯ ಸಹಾಯ ಸಹಕಾರ ದೊರೆಯುತ್ತಿಲ್ಲ.ಇನ್ನು ಪತಿಯನ್ನಂತೂ ಕೇಳಲೇಬೇಡಿ.ಮಾಡೋಕೆ ಆಗದಿದ್ದರೆ ಹೊರಗಿನಿಂದ ತರಿಸಿ ಇಡು. ಅಷ್ಟಕ್ಕೂ ಇರೋ ನಾಲ್ಕು ಜನರಿಗೆ ಅಡುಗೆ ಮಾಡೋದು ಕೂಡ ಒಂದು ಕಷ್ಟದ ಕೆಲಸವೇ? ಎಂದು ಹೀಗಳೆಯುತ್ತಾರೆ . ಇಂತಹ ಗಂಡಸರು ಅಡುಗೆ ಮನೆಯ ಕೆಲಸ ಎಂದರೆ ಕೇವಲ ಅಡುಗೆ ಮಾಡುವುದು ಮಾತ್ರ ಎಂದು ಭಾವಿಸಿರುತ್ತಾರೆ.ಅಡುಗೆ ಮನೆಯಲ್ಲಿ ಗ್ಯಾಸ್ ಕಟ್ಟೆಯನ್ನು ಒರೆಸುವುದರಿಂದ ಹಿಡಿದು ಪಾತ್ರೆ ತೊಳೆಯುವ, ಎಲ್ಲವನ್ನು ನೀಟಾಗಿ ಜೋಡಿಸಿಡುವ, ತರಕಾರಿಗಳನ್ನು ತೊಳೆದು ಹೆಚ್ಚಿ ಒಗ್ಗರಣೆ ಹಾಕಿ ಪಲ್ಯ ಮಾಡುವ ಅದಕ್ಕೆ ಜೊತೆಯಾಗಿ ಅನ್ನ ಸಾರು ಚಪಾತಿ ರೊಟ್ಟಿ ಮಾಡುವ ಕೆಲಸ ಒಂದೇ, ಎರಡೇ? ಇನ್ನು ಇದರ ಜೊತೆಗೆ ಸಾರಿಗೆ, ಪಲ್ಯಗಳಿಗೆ ಹಾಕುವ ಮಸಾಲೆ ಪುಡಿ ಮತ್ತಿತರ ಪುಡಿಗಳ ತಯಾರಿ ಸುಮ್ಮನೆ ಆಗುತ್ತದೆಯೇ?ಅದರಲ್ಲೂ ದಿನದ ಮೂರು ಹೊತ್ತು ಕಡ್ಡಾಯವಾಗಿ ಅಡುಗೆ ತಿಂಡಿ ಮಾಡಲೇಬೇಕಿರುತ್ತದೆ. ಇದರ ಜೊತೆಗೆ ಅಡುಗೆ ಮನೆಯ ರಂಪವನ್ನು ಸ್ವಚ್ಛ ಮಾಡುವುದು. ಮತ್ತೆ ಮನೆಯ ಸದಸ್ಯರಿಗೆ ಹೊತ್ತು ಹೊತ್ತಿಗೆ ಚಹಾ, ಕಾಫಿ, ತಿಂಡಿಯನ್ನು ಅವರು ಇದ್ದ ಜಾಗಕ್ಕೆ ಸರಬರಾಜು ಮಾಡುವುದು. ಅವರು ತಿಂದು ಕುಡಿದು ಅಲ್ಲಲ್ಲಿ ಇಟ್ಟ ತಟ್ಟೆ ಲೋಟಗಳನ್ನು ಅಡುಗೆ ಮನೆಗೆ ತಂದು ತೊಳೆದು ಸ್ವಸ್ತಾನಕ್ಕೆ ಸೇರಿಸುವುದು ಸುಮ್ಮನೆ ಮಾತಲ್ಲ ಅಲ್ವೇ? ಇದೆಲ್ಲಾ ಗಂಡಸರಿಗೆ  ಗೊತ್ತಾಗುತ್ತದೆಯೇ?ಇಂತಹ ನೂರಾರು ಸಾವಿರಾರು ಹೆಣ್ಣು ಮಕ್ಕಳ ಗೋಳಿನ ಬಾಳನ್ನು ಗಂಡಸರು ಅರಿತಿದ್ದಾರೆಯೇ?ಮುಂಜಾನೆಯಿಂದ ಸಾಯಂಕಾಲದವರೆಗೂ ಎಡಬಿಡದೇ ಕೆಲಸ ಮಾಡುವ ಆಕೆ ಒಂದೊಮ್ಮೆ ಎಲ್ಲಾದರೂ ಹೊರಗೆ ಸುತ್ತಾಡಿ ಬರುವ ಆಶಯವನ್ನು ವ್ಯಕ್ತಪಡಿಸಿದಾಗ ನಮ್ಮ ಹಾಗೆ ಹೊರಗೆ ಹೋಗಿ ದುಡಿದರೆ ಗೊತ್ತಾಗುತ್ತದೆ ! ಎಷ್ಟು ಕಷ್ಟ ಇದೆ ಅಂತ.ತಣ್ಣಗೆ ಫ್ಯಾನಿನ ಕೆಳಗೆ ನೆರಳಲ್ಲಿ ಇರ್ತಿ ನೋಡು.. ನಿನಗೇನು ಗೊತ್ತು ನಮ್ಮ ಕಷ್ಟ! ಎಂದು ಹಂಗಿಸುತ್ತಾರೆ ಮತ್ತೆಕೆಲವೊಮ್ಮೆ ಗಿಡದಲ್ಲಿ ದುಡ್ಡು ಬಿಡುತ್ತಾ ಹೇಗೆ? ಹಾಗೇನಾದರೂ ಬಿಟ್ಟಿದ್ದರೆ ಹರಿದುಕೊಂಡು ಬಾ…ಬೇರೆ ದೇಶಕ್ಕೂ ಹೋಗಿ ತಿರುಗಾಡಿ ಬರೋಣಂತೆ ಎಂಬ ವ್ಯಂಗ್ಯದ ಮಾತುಗಳು ಬರುತ್ತವೆ.ಇನ್ನು ಕೆಲವೊಮ್ಮೆ ಈ ವ್ಯಂಗ್ಯ ತುಸು ಅತಿರೇಕಕ್ಕೆ ಹೋಗಿ ಮನೆಯ ಹಿತ್ತಲಿನ ಕರಿಬೇವಿನ ಗಿಡ ಸುತ್ತುವ ನಡಿ ಎಂದುಎಲ್ಲರಿಗೂ ಹಂಗಿಸಿ ತಮಾಷೆ ಮಾಡಿ ಆಕೆ ತನ್ನ ಸುತ್ತಾಡುವ ಆಸೆಗೆ ಎಳ್ಳು ನೀರು ಬಿಡುವಂತೆ ಮಾಡುತ್ತಾರೆ.ಮತ್ತೆ ಒಂಚೂರು ಆಸೆಯಿಂದ ಸ್ನೇಹಿತೆಯರ ಜೊತೆಗೆ ಕಿಟ್ಟಿ ಪಾರ್ಟಿ, ಚೀಟಿ ಹಾಕೋದು ಅಂತ ಮಾಡುವ ಆಶಯವನ್ನು ಹೇಳಿದಾಗ ಹು ಇದೊಂದು ಕಡಿಮೆ ಇತ್ತು. ಅದೇನು ಹೆಣ್ಣು  ಮಕ್ಕಳೋ ಏನೋ? ಪ್ರತಿ ತಿಂಗಳು ಕಿಟ್ಟಿ ಪಾರ್ಟಿಯಂತೆ. ವೈವಿಧ್ಯಮಯ ಬಟ್ಟೆಗಳಂತೆ, ಹುಚ್ಚುಚ್ಚಾರ ಅಲಂಕಾರಗಳಂತೆ, ಫ್ಯಾನ್ಸಿ ಡ್ರೆಸ್ ಅಂತೆ… ಇವರಿಗೆಲ್ಲ ಮಾಡೋದಿಕ್ಕೆ ಬೇರೆ ಕೆಲಸ ಇಲ್ಲ ನೋಡಿ .ಗಂಡಸರು ಕಷ್ಟಪಟ್ಟು ದುಡಿದು ತರ್ತಾರೆ ಇವ್ರು ಚಿತ್ರವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಮಜಾ ಮಾಡಿ ಫೋಟೋ ತಕ್ಕೊಂಡು ಸ್ಟೇಟಸ್ ಗೆ ಇಡುವುದರಲ್ಲಿ ಆಯ್ತು… ಹೀಗಾದ್ರೆ ಗಂಡ ಉದ್ದಾರ ಆದಹಾಗೆ ಎಂಬ ಮಾತುಗಳು ಅವರ ಬಾಯಿಂದ ಸಲೀಸಾಗಿ ಬರುತ್ತವೆ.ಇನ್ನು ಹೆಣ್ಣು ಮಕ್ಕಳೇ ಸೇರಿ ಟ್ರಿಪ್ ಹೋಗ್ತೀವಿ ಅಂತ ಹೇಳಿದಾಗ ಇನ್ನು ಇದೊಂದು ಕಡಿಮೆ ಇತ್ತು ನೋಡು. ಹೆಣ್ಣು ಮಕ್ಕಳೆಲ್ಲ ತಾವು ತಾವೇ ಹೊರಟು ನಿಂತು ಬಿಟ್ಟರು. ಮನೆ ಮಕ್ಕಳು ಎಲ್ಲವನ್ನು ಮರೆತಿದ್ದಾರೆ. ಸರ್ಕಾರದವರು ಇವರಿಗೆ ಬಸ್ ಫ್ರೀ ಮಾಡಿ ನಮಗೆ ಸಂಕಷ್ಟ ತಂದಿಟ್ಟರು ಎಂದು ಅವರನ್ನು ಹಂಗಿಸುತ್ತಾರೆ.ಒಂದೊಮ್ಮೆ ರಾತ್ರಿಯ ಊಟಕ್ಕೆ ಬೇಗನೇ ಗಂಡ ಮನೆಗೆ ಬರದೇ ಹೋದಾಗ ಆಕೆ ಪದೇ ಪದೇ ಕರೆ ಮಾಡಿದರೆ, ಇಡೀ ದಿನ ಮನೆಯಿಂದ ಹೊರಗೆ ಇದ್ದು ಈಗಲೂ ಕೂಡ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಪಾರ್ಟಿ ಮಾಡುವಾಗ ಗಂಡಸರು ಕೂಡ ತಮ್ಮ ಹೆಂಡಂದಿರನ್ನು ಕುರಿತು  ರಾತ್ರಿ 8 ಘಂಟೆ ಆಯ್ತು ಅಂದ್ರೆ ಶುರುವಾಯಿತು ನೋಡಪ್ಪ ಈ ಹೆಣ್ಣು ಮಕ್ಕಳ ಕಿರಿಕಿರಿ. ಅಲ್ಲ ಇವರಿಗೇನು ಕಡಿಮೆ ಮಾಡಿದ್ದೀವಿ ಅಂತ ಈ ರೀತಿ ವರ್ತಿಸ್ತಾರೋ ಗೊತ್ತಿಲ್ಲ ಎಂದು ಸ್ನೇಹಿತರೆಲ್ಲ ಸೇರಿ ಆಡಿಕೊಳ್ಳುತ್ತಾರೆ.ಹೆಣ್ಣುಮಕ್ಕಳೇನಾದರೂ ಮನೆಯಿಂದ ಹೊರಗೆ ಹೋಗಿ ನಾಲ್ಕು ಕಾಸು ಸಂಪಾದಿಸುವ ನಿಟ್ಟಿನಲ್ಲಿ ದುಡಿಯುವ ಆಸೆಯನ್ನು ವ್ಯಕ್ತಪಡಿಸಿದರೆ ನಿನಗಾರು ಕೊಡ್ತಾರಪ್ಪ ನೌಕರಿ? ಅಷ್ಟಕ್ಕೂ ನೀವು ಓದಿರೋದಾದ್ರೂ ಏನು? ದೊಡ್ಡ ದೊಡ್ಡ ಡಿಗ್ರಿ ಮಾಡಿದವರು ತಲೆ ಮೇಲೆ ಮಣ್ಣು ಹೊತ್ತು ನಿಂತಿದ್ದಾರೆ ಅಂತದ್ದರಲ್ಲಿ ನಿಮ್ಮಂಥವರಿಗೆ ನೌಕರಿ ಕೊಟ್ಟರೆ ಅವರು ಅಂಗಡಿ ಬಾಗಿಲು ಹಾಕಿಕೊಂಡು ಹೋಗಬೇಕು ಅಷ್ಟೇ ! ಎಂದು ಹಂಗಿಸುತ್ತಾರೆ.ಅದಾಗ್ಯೂ ಅವರು ಹಠ ಬಿಡದೆ ಹೋದಾಗ ಮನೆ ಮತ್ತು ಮಕ್ಕಳ ಜವಾಬ್ದಾರಿ ನಿನ್ನದೇ …ನಂತರ ಇಲ್ಲದ ತಗಾದೆ ತಗೀಬಾರದು ಅಂತ ಹೆಂಡತಿಗೆ ತಾಕೀತು ಮಾಡುತ್ತಾರೆ. ಇನ್ನು ಮುಂದೆ ನಾನು ನಿನಗೆ ಯಾವುದಕ್ಕೂ ಹಣ ಕೊಡೋದಿಲ್ಲ ನಿನ್ನ ದುಡಿಮೆಯಲ್ಲೇ ನಿನ್ನ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳಬೇಕು ಎಂದು ಮೊದಲೇ ಆಕೆಗೆ ಎಚ್ಚರಿಸುತ್ತಾರೆ.ಇನ್ನು ಆಕೆ ಒಳ್ಳೆಯ ಉದ್ಯೋಗದಲ್ಲಿ ಇದ್ದರೆ ದುಡಿತೀನಿ ಅಂತ ಧಿಮಾಕು ತೋರಿಸಬೇಡ. ಅದೆಷ್ಟೇ ಇದ್ದರೂ ಮಕ್ಕಳ ಅಂಡುತೊಳೆಯೋದು ತಪ್ಪೋದಿಲ್ಲ ಎಂದು ಕಿಚಾಯಿಸುತ್ತಾರೆ.ದುಡಿಯುತ್ತಿರುವ ಆಕೆ ಕೆಲಸದ ಒತ್ತಡದಲ್ಲಿ ತುಸು ಜೋರಾಗಿ ಮಾತನಾಡಿದರೆ ನಾನು ಮೊದಲೇ ಹೇಳಿದ್ದೆ ನಿನಗೆ ನಿನ್ನ ಕೈಲಿ ಆಗುವ ಕೆಲಸ ಅಲ್ಲ ಇದು ಎಂದು. ನೀನೇನು ದುಡಿದು ಮನೆ ಮತ್ತು ಮಕ್ಕಳನ್ನು ಸಾಕಬೇಕಾಗಿಲ್ಲ ಬಿಟ್ಟುಬಿಡು ಎಂದು ಆರಾಮಾಗಿ ಹೇಳುತ್ತಾರೆ.ಅಕಸ್ಮಾತ್ ಆಕೆ ಏನಾದರೂ ಒಳ್ಳೆಯ ಸಂಬಳದ ನೌಕರಿಯಲ್ಲಿದ್ದರೆ ಬೇರೊಂದು ರೀತಿಯಲ್ಲಿ ಆಕೆಯನ್ನು ಶೋಷಿಸುತ್ತಾರೆ…… ಹಾಗಾದರೆ ಹೆಣ್ಣು ಮಕ್ಕಳ ಕಷ್ಟ ಗಂಡಸರಿಗೆ ಗೊತ್ತಾಗುತ್ತಿಲ್ಲವೇ?ಖಂಡಿತವಾಗಿಯೂ ಗೊತ್ತಾಗುತ್ತದೆ ಆದರೆ ಅವರದ್ದು ಧೃತರಾಷ್ಟ್ರನ ಕುರುಡು. ಗೊತ್ತಿಲ್ಲದವರಿಗೆ ತಿಳಿಸಿ ಹೇಳಬಹುದು ಗೊತ್ತಿದ್ದು ಗೊತ್ತಿಲ್ಲದವರಂತೆ ಇದ್ದರೆ ?ಖಂಡಿತವಾಗಿಯೂ ಹೆಣ್ಣು ಮಕ್ಕಳ ಬದುಕನ್ನು ಕೇವಲ ಒಂದು ದಿನ ಬದುಕಲು ಗಂಡಸರಿಗೆ ಸಾಧ್ಯವಿಲ್ಲ. ಆದರೆ ಇದನ್ನು ಒಪ್ಪಿಕೊಳ್ಳಲು ಅವರ ಸೋ ಕಾಲ್ಡ್ ಪುರುಷಾಹಂಕಾರ ಸಮ್ಮತಿ ನೀಡುವುದಿಲ್ಲ. ಹೆಂಗಸರು ಇರುವುದೇ ತಮ್ಮ ಚಾತರಿಗೆ ತಾವು ಇರುವುದೇ ಅವರನ್ನು ಆಳಲು ಎಂಬ ಭಾವ ಎಲ್ಲಿಯವರೆಗೂ ಪುರುಷರನ್ನು ಹಿಡಿದಿಡುತ್ತದೆಯೋ ಅಲ್ಲಿಯವರೆಗೂ ಪುರುಷರು ಖಂಡಿತವಾಗಿಯೂ ಸುಧಾರಿಸುವುದಿಲ್ಲ.ಅರ್ಥವಾದರೂ ಸಹಾಯ ಮಾಡಲಾಗದೇ ಇರುವುದು ಕೈಲಾಗದತನವೋ, ಅವಜ್ಞೆಯೋ ನೀವೇ ಹೇಳಿ ? ವೀಣಾ ಹೇಮಂತ್ ಗೌಡ ಪಾಟೀಲ್

“ಹೆಂಗಸರ ಕಷ್ಟ ಗಂಡಿಗೆ ಗೊತ್ತೇ??” ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ

“ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ‘ಹೊಲದಂಬಾರಿ” ಬಯಲು ಕವಿಗೋಷ್ಠಿ

ಇತರೆ ಸಂಗಾತಿ “ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ ‘ಹೊಲದಂಬಾರಿ” ಬಯಲು ಕವಿಗೋಷ್ಠಿ ​ರಾಣೇಬೆನ್ನೂರಿನ ಕೂನಬೇವು ಗ್ರಾಮದ  ಚಂಸು ಪಾಟೀಲ್ ರವರ ಹೊಲದ ಮಣ್ಣಿನ ಮಡಿಲೊಳಗೆ ಜರುಗಿದ ” ಹೊಲದಂಬಾರಿ”  ಅಪರೂಪದ ಬಯಲು ಕವಿಗೋಷ್ಠಿಯು ಯಶಸ್ವಿಯಾಗಿ ನಡೆಯಿತು. ​ ರಾಣೇಬೆನ್ನೂರಿನ ‘ಕಾಗದ ಸಾಂಗತ್ಯ ಸಾಂಸ್ಕೃತಿಕ ವೇದಿಕೆ’. ದಸರಾ ಹಬ್ಬದ ಸಾಂಪ್ರದಾಯಿಕ ಸಂಭ್ರಮಕ್ಕೆ ಮಣ್ಣಿನ ತೇವಾಂಶ ತುಂಬಲು ರೂಪುಗೊಂಡ ಪರಿಕಲ್ಪನೆಯ “ಹೊಲದಂಬಾರಿ”. ನಗರದ ಸದ್ದು-ಗದ್ದಲದಿಂದ ಆಚೆ ಬಂದು, ಕೂನಬೇವು ಗ್ರಾಮದ ರೈತನ ಹಸಿರು ಹೊಲದಂಗಳದಲ್ಲಿ ನಡೆದ ಈ ಬಯಲು ಕವಿಗೋಷ್ಠಿ ಸಮಕಾಲೀನ ಸಾಹಿತ್ಯ ವಲಯದಲ್ಲಿ ಹೊಸದೊಂದು ಚಿಂತನೆಯ ಕದ ತಟ್ಟಿದೆ. ​ವಿಸ್ಮಯದ ಚಾಲನೆ: ​ಕಾರ್ಯಕ್ರಮದ ಆರಂಭವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿತ್ತು. ಯಾವುದೇ ರಾಜಕಾರಣಿಯ ಕೈಯಿಂದ ರಿಬ್ಬನ್ ಕತ್ತರಿಸುವ ಅಥವಾ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಜಡ ಸಂಪ್ರದಾಯ ಇಲ್ಲಿರಲಿಲ್ಲ. ಬದಲಿಗೆ, ವೃತ್ತಿಯಿಂದ ಕೃಷಿಕರಾಗಿದ್ದು, ಪ್ರವೃತ್ತಿಯಿಂದ ಸಂವೇದನಾಶೀಲ ಕವಿಯಾಗಿ ಹಲವು ಕವನ ಸಂಕಲನಗಳನ್ನು ನಾಡಿಗೆ ಕಟ್ಟಿಕೊಟ್ಟಿರುವ ಹಿರಿಯ ಕೃಷಿ ಕವಿ ಚಂ.ಸು. ಪಾಟೀಲ್ ಅವರು ಹೊಲದಂಗಳಕ್ಕೆ ನೇಗಿಲೊಡನೆ ಬಂದಿಳಿದರು.​ಅವರು ಕಪ್ಪು ಮಣ್ಣಿನ ನೆಲದ  ಮೇಲೆ ನೇಗಿಲಿನಿಂದ ಪ್ರೀತಿಯ ಒಂದು ಸಾಲು (ಗೆರೆ) ಎಳೆದಾಗ, ಅಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರ ಕಣ್ಣುಗಳಲ್ಲಿ ಬೆರಗು ಮೂಡಿತ್ತು. ಬಿದಿರಿನ ತಟ್ಟೆಯಲ್ಲಿದ್ದ ನವಧಾನ್ಯಗಳ ಜೊತೆಗೆ, ಭಾಗವಹಿಸಿದ ಪ್ರತಿಯೊಬ್ಬ ಕವಿಯೂ ತಾವು ಕೈಬರಹದಲ್ಲಿ ಬರೆದು ತಂದಿದ್ದ ಕವಿತೆಯ ಸಾಲುಗಳ ಚೀಟಿಗಳನ್ನು ಆ ನೇಗಿಲ ಸಾಲಿಗೆ ಭಕ್ತಿಯಿಂದ ಬಿತ್ತಿದರು. ನಂತರ ಕೃಷಿಕರ ಒರಟು ಕೈಗಳು ಆ ಅಕ್ಷರ-ಧಾನ್ಯಗಳ ಮೇಲೆ ಮಣ್ಣು ಮುಚ್ಚಿದವು; ಮಣ್ಣಿನ ಕೊಡದಿಂದ ಹನಿ ನೀರೆರೆದು, “ಅಕ್ಷರ ಬಿತ್ತಿದ್ದೇವೆ, ಭಾವದ ಫಸಲು ತೆಗೆಯಲಿದ್ದೇವೆ” ಎಂದು ಘೋಷಿಸಿದಾಗ ಇಡೀ ಹೊಲದಂಗಳದಲ್ಲಿ ಅಪ್ಪಟ ಪ್ರಕೃತಿಯ ಚಪ್ಪಾಳೆ ಮೊಳಗಿತು. ​ಚಾಲನೆ ನೀಡಿ  ಮಾತನಾಡಿದ ಚಂ.ಸು. ಪಾಟೀಲ್, “ರೈತ ಹೊಲದಲ್ಲಿ ಕಾಳು ಬಿತ್ತಿದರೆ ಜಗತ್ತಿಗೆ ಅನ್ನವಾಗುತ್ತದೆ; ಅದೇ ನೆಲದ ಮೇಲೆ ಭಾವ ಬಿತ್ತಿದರೆ ಬದುಕಿಗೆ ಕಾವ್ಯವಾಗುತ್ತದೆ. ಅನ್ನ ಕೊಡುವ ಮಣ್ಣು ಮತ್ತು ಅರಿವು ಕೊಡುವ ಅಕ್ಷರ ಬೇರೆ ಬೇರೆಯಲ್ಲ. ಇವತ್ತು ಕವಿಗಳು ಎಸಿ ಹಾಲ್ ಬಿಟ್ಟು ನಮ್ಮ ಹೊಲದ ಬದುವಿಗೆ ಬಂದಿರುವುದು ಈ ನೆಲದ ಸಂಸ್ಕೃತಿಗೆ ಸಂದ ಬಹುದೊಡ್ಡ ಗೌರವ. ಕಾವ್ಯ ಮತ್ತು ಕೃಷಿ ಎರಡೂ ಸಮ್ಮಿಲನಗೊಂಡಿದೆ. ಒಬ್ಬ ಸೂಕ್ಷ್ಮ ಸಂವೇದನೆಯ ಕಲಾವಿದನ ಕಣ್ಣೋಟ ಮತ್ತು ಅಂಕಣಕಾರನ ಸಾಮಾಜಿಕ ಕಾಳಜಿ ಒಟ್ಟಾಗಿ ಬೆರೆತಾಗ ಇಂತಹದೊಂದು ನೈಸರ್ಗಿಕ, ಕಲಾತ್ಮಕ ಕಲ್ಪನೆ ಮೈದಳೆಯಲು ಸಾಧ್ಯ ಎಂಬುದನ್ನು ನಾಮದೇವ ಕಾಗದಗಾರರು ಸಾಬೀತುಪಡಿಸಿದ್ದಾರೆ. ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೇಖಕ, ಕಲಾವಿದ ನಾಮದೇವ ಕಾಗದಗಾರರು ಮಾತನಾಡುತ್ತಾ“ನಮ್ಮ ಬಹುತೇಕ ಸಾಹಿತ್ಯಿಕ ಚಟುವಟಿಕೆಗಳು ನಗರಕೇಂದ್ರಿತವಾಗುತ್ತಾ, ಜೀವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಕಾವ್ಯ ಹುಟ್ಟುವುದೇ ಮಣ್ಣಿನ ತೃಷೆಯಿಂದ, ಹಸಿರಿನ ಕಂಪಿನಿಂದ. ಆ ಕಾವ್ಯವನ್ನು ಮತ್ತೆ ಅದರ ಹುಟ್ಟೂರಾದ ನೆಲದ ಮಡಿಲಿಗೇ ಕರೆದೊಯ್ಯುವ ಹಂಬಲವೇ ‘ಹೊಲದಂಬಾರಿ’. ಕೃಷಿಕನ ಬೆವರು ಸುರಿಯುವ ಜಾಗದಲ್ಲಿ ಕವಿಯ ಸಾಲುಗಳು ಮೊಳೆಯಬೇಕು; ಆಗ ಮಾತ್ರ ಅಕ್ಷರಕ್ಕೆ ಪ್ರಾಮಾಣಿಕ ತೂಕ ಬರುತ್ತದೆ. ಯಾವುದೇ ಕೃತಕ ಚೌಕಟ್ಟುಗಳಿಲ್ಲದೆ ಮಣ್ಣಿನ ಮೇಲೆ ಕುಳಿತು ಕಾವ್ಯ ಸಂಭ್ರಮಿಸುವುದು ಬದುಕಿನ ಪರಮ ಸತ್ಯಕ್ಕೆ ಮುಖಾಮುಖಿಯಾದಂತೆ ಎಂದು ಹೇಳಿದರು.ಪತ್ರಕರ್ತರಾದ ನಿಂಗರಾಜ ಗುದಗೇರ, ಕೆ.ಎಸ್ ನಾಗರಾಜ  ಇತರರು ಉಪಸ್ಥಿತರಿದ್ದರು ಈ ಗೋಷ್ಠಿಯಲ್ಲಿ ಹಿರಿಯ ಕವಿಮನಗಳ ಅನುಭವದ ಜೊತೆಗೆ ಕಾಲೇಜು ಯುವ ಕವಯಿತ್ರಿಯರ ಹೊಸ ಸಂವೇದನೆಗಳು ಮುಖಾಮುಖಿಯಾದರು. ​ಭಾವದ ಫಸಲು ಎಂಬ ವಿಭಾಗದಲ್ಲಿ ಹಿರಿಯ ಕವಿಮನಗಳಾದ ಸಾಹಿತಿ ಡಾ. ಎಂ.ಈ.ಶಿವಕುಮಾರ ಹೊನ್ನಾಳಿ,ಡಾ. ಲಕ್ಷ್ಮೀಕಾಂತ ಮಿರಜಕರ ಶಿಗ್ಗಾಂವಿ, ನಾಗರಾಜ ಹುಡೇದ ಹಾವೇರಿ, ರಮೇಶ ಬಡಿಗೇರ ಹಲಗೇರಿ, ಎಸ್.ಹೆಚ್.ಪಾಟೀಲ್ ರಾಣೇಬೆನ್ನೂರ, ದಾಕ್ಷಾಯಣಿ ಉದಗಟ್ಟಿ ರಾಣೇಬೆನ್ನೂರ  ಅವರು ಭಾಗವಹಿಸಿ ಕವನ ವಾಚಿಸಿದರು.  ಹಾಗೂ​ಕಾವ್ಯದ ನವ ಚಿಗುರು ವಿಭಾಗದಲ್ಲಿ ಯುವ ಕವಯಿತ್ರಿಯರುಸ್ಥಳೀಯ ಕೆ.ಎಲ್.ಇ.ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿಯರಾದ ಜಾಸ್ಮಿನ್.ಬಿ.ದೊಡ್ಡಮನಿ, ಅನುಪಾ ಕೋಗಿಲೇ, ಚೈತ್ರಾ ಪೂಜಾರ ಚಿಕ್ಕಕುರುವತ್ತಿ, ಸುಮಾ ರಾಮಣ್ಣನವರ ಚಿಕ್ಕಕುರುವತ್ತಿ ಹಾಗೂ ನಮ್ರತಾ ಚಂದ್ರಪ್ಪ ಭಂಗೇರ್, ವರ್ಷಾ ಬೆಳಕೇರಿ  ಅವರು ಕವಿತೆಗಳನ್ನು ವಾಚಿಸಿದರು. ​ಬದುವಿನ ಮೇಲೆ ಅರಳಿದ ಕಾವ್ಯದ ಮೆರುಗು​ಕಾರ್ಯಕ್ರಮಕ್ಕೆ ಯಾವುದೇ ಕೃತಕ ವೇದಿಕೆ ಇರಲಿಲ್ಲ, ಬದಲಿಗೆ ಹೊಲದ ಮಣ್ಣೇ ರಂಗಮಂಟಪವಾಗಿತ್ತು. ಮರದ ನೆರಳಿನಲ್ಲಿ, ಹೊಲದ ಒಡ್ಡು-ಬದುಗಳ ಮೇಲೆ ಆಸೀನರಾಗಿದ್ದರು.​ಕವಿಗಳು ಒಬ್ಬೊಬ್ಬರಾಗಿ ಬಯಲು ಗಾಳಿಯ ಲಯಕ್ಕೆ ತಕ್ಕಂತೆ ತಮ್ಮ ಕವನಗಳನ್ನು ವಾಚಿಸಿದರು. ಕೆಲವರು ಹಸಿರು ಜೋಳದ ಸಾಲುಗಳ ನಡುವೆ ಹೆಜ್ಜೆ ಹಾಕುತ್ತಾ ಕವಿತೆ ಓದಿದರೆ, ಇನ್ನು ಕೆಲವರು ಮಣ್ಣಿನ ಹೆಂಟೆಯ ಮೇಲೆ ಕುಳಿತು ರೈತನ ಬದುಕಿನ ಬವಣೆ, ಮಳೆ-ಬೆಳೆಯ ಸಂಕಷ್ಟ ಮತ್ತು ದಸರೆಯ ನೈಜ ಸಡಗರವನ್ನು ಕಾವ್ಯರೂಪದಲ್ಲಿ ಬಿಚ್ಚಿಟ್ಟರು. ಗಾಳಿಗೆ ತಲೆಯಾಡಿಸುತ್ತಿದ್ದ ಹಸಿರು ಪೈರುಗಳು, ತಂಪೆರೆಯುವ ಅಕ್ಟೋಬರ್ ಗಾಳಿ ಮತ್ತು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಪಕ್ಷಿಗಳ ಚಿಲಿಪಿಲಿ ಧ್ವನಿಗಳು ಕಾವ್ಯವಾಚನಕ್ಕೆ ನೈಸರ್ಗಿಕ ಸಂಗೀತದಂತೆ ಸಾಥ್ ನೀಡಿದವು. ಕಾವ್ಯವು ಕಾಗದದಿಂದ ನೇರವಾಗಿ ಗಾಳಿಯ ತರಂಗಗಳಿಗೆ, ಅಲ್ಲಿಂದ ಮಣ್ಣಿನ ಕಣಗಳಿಗೆ ಪ್ರವಹಿಸುವಂತಿತ್ತು ಆ ವಾತಾವರಣ ಹೊಸ ದಿಕ್ಕಿನ ಮುನ್ನುಡಿ. ​ದಸರಾ ಹಬ್ಬವೆಂದರೆ ಕೇವಲ ಅರಮನೆಯ ವೈಭವವಷ್ಟೇ ಅಲ್ಲ; ಅದು ರೈತನ ಕಣಜ ತುಂಬುವ, ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಕೃಷಿ ಸಂಸ್ಕೃತಿಯ ಹಬ್ಬವೂ ಹೌದು ಎಂಬುದನ್ನು ‘ಹೊಲದಂಬಾರಿ’ ಅತ್ಯಂತ ಅರ್ಥಪೂರ್ಣವಾಗಿ ನೆನಪಿಸಿಕೊಟ್ಟಿದೆ.​ ವಿನೂತನ ಪರಿಕಲ್ಪನೆ ಮತ್ತು ಕಾಗದ ಸಾಂಗತ್ಯದ ಈ ಪ್ರಯತ್ನವು, ಕೇವಲ ಸಭಾಂಗಣಗಳಿಗೆ ಸೀಮಿತವಾಗುತ್ತಿದ್ದ ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾಗಿದೆ. ನೇಗಿಲಿನ ಗೆರೆಯಲ್ಲಿ ಬಿತ್ತಿದ ಆ ಅಕ್ಷರಗಳು ಕೇವಲ ಮಣ್ಣಿನೊಳಗೆ ಮಾತ್ರವಲ್ಲ, ಸಾಹಿತ್ಯಾಸಕ್ತರ ಎದೆಯಾಳದಲ್ಲೂ ಹೊಸ ಆಲೋಚನೆಗಳಾಗಿ ಮೊಳಕೆಯೊಡೆದಿವೆ. ಕಾವ್ಯವೆಂಬುದು ಬದುಕಿನಿಂದ ಪ್ರತ್ಯೇಕವಲ್ಲ, ಅದು ಮಣ್ಣಿನ ಗುಣ ಮತ್ತು ಬೆವರಿನ ಧ್ವನಿ ಎಂಬುದನ್ನು ‘ಹೊಲದಂಬಾರಿ’ ಸಾರಿತು.  ಡಾ. ಎಂ. ಈ. ಶಿವಕುಮಾರ್ ಹೊನ್ನಾಳಿ.

“ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾದ‘ಹೊಲದಂಬಾರಿ” ಬಯಲು ಕವಿಗೋಷ್ಠಿ Read Post »

You cannot copy content of this page

Scroll to Top