ಪುಸ್ತಕಸಂಗಾತಿ ಕೆ.ಎನ್.ಚಿದಾನಂದ “ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು” ಗೊರೂರು ಅನಂತರಾಜು ಅವರ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು ಅಭಿವೃದ್ಧಿ ಎಂಬ ಬೃಹತ್ ಯೋಜನೆಗಳ ಹೆಸರಿನಲ್ಲಿ ತಮ್ಮ ಹುಟ್ಟೂರನ್ನು, ಬಾಲ್ಯದ ಸವಿನೆನಪುಗಳನ್ನು ಹಾಗೂ ತಲೆತಲಾಂತರದ ಮಣ್ಣಿನ ಬಂಧವನ್ನು ಜಲಸಮಾಧಿ ಮಾಡಿಕೊಂಡ ದುರಂತ ನೈಜತೆಯೇ ಗೊರೂರು ಅನಂತರಾಜು ಅವರ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು, ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ಕಟ್ಟುವಾಗ ಮುಳುಗಡೆಯಾದ ಗ್ರಾಮ ಉಲಿವಾಲ. ಆ ಗ್ರಾಮದ ಲೇಖಕರು ಮೋಹನ್ ಕುಮಾರ್ ವಿಸ್ತೃತವಾಗಿ ಮುಳುಗಡೆಯಾದ ಗ್ರಾಮದ ಸಂತ್ರಸ್ತ ಜನರ ಮಾನಸಿಕ ವೇದನೆ, ಆರ್ಥಿಕ ಸಂಕಷ್ಟ ಮರುಜೀವನಕ್ಕಾಗಿ ನಡೆಸಿದ ಹೋರಾಟವನ್ನು ಮಾನವೀಯ ಸಂವೇದನೆಯಿಂದ ಕಾದಂಬರಿಯಲ್ಲಿ ಕಟ್ಟಿಕೊಡುತ್ತಾರೆ. ಗೊರೂರು ಅನಂತರಾಜುರವರು ಈ ಕೃತಿಯಲ್ಲಿ ಪ್ರಕೃತಿ ಮತ್ತು ಮಾನವ ಸಂಬಂಧಗಳ ಮೌಲ್ಯವನ್ನು ಮರುಚಿಂತನೆಗೆ ಒಳಪಡಿಸುವ ಕಾದಂಬರಿ ಕೇವಲ ನಷ್ಟದ ಕಥೆಯನ್ನು ಹೇಳದೆ, ಸಂಕಷ್ಟಗಳ ನಡುವೆಯೂ ಮನುಷ್ಯ ಕಟ್ಟಿ ಬೆಳೆಸಿಕೊಳ್ಳುವ ಅಪ್ರತಿಮ ಸಹನಶೀಲತೆಯನ್ನು ಎತ್ತಿಹಿಡಿಯುತ್ತದೆ.ಕಾದಂಬರಿ ಕೇವಲ ಮುಳುಗಡೆಯಾದ ಒಂದು ಭೂಭಾಗದ ಕಥೆಯಲ್ಲ; ಅದು ತಮ್ಮ ಬೇರುಗಳನ್ನು ಕಳೆದುಕೊಂಡ ಅಸಂಖ್ಯಾತ ಜನರ ಮೌನ ಆಕ್ರಂದನ, ಅಸಹಾಯಕತೆ ಮತ್ತು ತೀವ್ರ ಮಾನವೀಯ ಸಂವೇದನೆಗಳ ಜೀವಂತ ಸಾಕ್ಷಿ. ತಮ್ಮ ಕಣ್ಣೆದುರೇ ಹುಟ್ಟಿದೂರು ಜಲಸಮಾಧಿಯಾಗುವುದನ್ನು ಕಂಡ ಜನರ ಆತಂಕ, ಸ್ಥಳಾಂತರದ ನಂತರ ಅನುಭವಿಸಿದ ಸಾಮಾಜಿಕ ಹಾಗೂ ಆರ್ಥಿಕ ಆಘಾತಗಳು ಮತ್ತು ಬದುಕನ್ನು ಮತ್ತೆ ಮೊದಲಿನಿಂದ ಕಟ್ಟಿಕೊಳ್ಳಲು ಅವರು ನಡೆಸಿದ ಕಠಿಣ ಹೋರಾಟವನ್ನು ಲೇಖಕರು ತಮ್ಮ ವಿಮರ್ಶಾ ಲೇಖನದಲ್ಲಿ ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ನಮ್ಮಲ್ಲಿ ಬೃಹತ್ ಆಣೆಕಟ್ಟುಗಳು, ಮಾನವ ನಾಗರಿಕತೆಗೆ ಬೆಳಕು ನೀಡಿದ್ದರೂ, ಸಾವಿರಾರು ಕುಟುಂಬಗಳನ್ನು ಸ್ವಂತ ನೆಲದಿಂದ ನಿರ್ದಯವಾಗಿ ಕಿತ್ತೆಸೆದಿವೆ. ಆ ಮನೆಗಳ ಒಲೆಗಳು ಆರಿಹೋಗಿವೆ; ಮಣ್ಣಿನೊಂದಿಗಿನ ತಲೆ ತಲಾಂತರದ ಬಂಧ ಕಡಿದುಬಿದ್ದಿದೆ. ವಿಮರ್ಶೆಯ ಸೂಕ್ಷ್ಮತೆ ವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಮೂಡಿಬಂದ ಲೇಖನ ಓದುಗನ ಅಂತರಂಗ ಕಲಕುತ್ತದೆ. ಆಡಳಿತ ವ್ಯವಸ್ಥೆಯ ನೀತಿಗಳು ಮತ್ತು ವಿಪರ್ಯಾಸಗಳನ್ನು ಪ್ರಶ್ನಿಸುತ್ತಲೇ, ಸಂಕಷ್ಟದ ಸಮಯದಲ್ಲೂ ಮನುಷ್ಯನ ಸಹನಶೀಲತೆ ಹಾಗೂ ಮರುಜೀವ ಪಡೆಯುವ ಅಪಾರ ಜೀವದಂಡದ ಶಕ್ತಿಯನ್ನು ಪ್ರಕಟಪಡಿಸುತ್ತದೆ. ಹಾಸನದ ಮಣ್ಣು ಕೇವಲ ಇತಿಹಾಸದ ಕಥೆ ಹೇಳುವುದಿಲ್ಲ; ಸಂಸ್ಕೃತಿ ಮತ್ತು ಜನಪದ ಐತಿಹ್ಯಗಳ ಮಹಾಕಾವ್ಯವನ್ನೇ ಉಸಿರಾಡಿಸುತ್ತದೆ. ಜಾನಪದ ಸಾಹಿತ್ಯ ಬೆಳೆದ ರೀತಿಯನ್ನು ಗೊರೂರು ಅನಂತರಾಜು ಅವರು ಹೇಳುತ್ತ, ಉಪನ್ಯಾಸಕರಾದ ಡಾ. ಬಿ. ಡಿ. ಕುಮಾರ್ ರವರ ಕೃತಿ ಹಾಸನ ಸೀಮೆಯ ಐತಿಹ್ಯಗಳು ಕೃತಿಯ ಕುರಿತಂತೆ ಇಲ್ಲಿನ ಪರಂಪರೆಯ ವೈಭವ, ಗ್ರಾಮೀಣ ಸೊಗಡು ಹಾಗೂ ಸ್ಥಳೀಯ ನಂಬಿಕೆಗಳನ್ನು ತೀಕ್ಷ್ಣ ವಿಮರ್ಶಾತ್ಮಕ ದೃಷ್ಟಿಯಲ್ಲಿ ತೆರೆದಿಡುತ್ತದೆ. ನಮ್ಮ ಸಾಂಸ್ಕೃತಿಕ ಬೇರುಗಳ ನೆನಪುಗಳನ್ನು ಜಾಗೃತಗೊಳಿಸಿ, ನಾಡಿನ ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಗೌರವಿಸಲು ಈ ಲೇಖನವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಮಂಟೇಸ್ವಾಮಿ ಕಾವ್ಯದ ಪವಾಡ ಸಾದೃಶ್ಯ, ಸಾಮಾಜಿಕ ಸಮಾನತೆಯ ಸಂದೇಶ ಹಾಗೂ ಜಾನಪದ ಧ್ವನಿಯನ್ನು ರಂಗಭೂಮಿಯ ಸನ್ನಿವೇಶಗಳಲ್ಲಿ ಅತ್ಯಂತ ಜೀವಂತವಾಗಿ ತೆರೆದಿಡುವ ಕೃತಿಯಿದು. ಗೊರೂರು ಅನಂತರಾಜು ಅವರು ಪಿ. ನಾಗರತ್ನಮ್ಮ ಮಳವಳ್ಳಿ ಅವರ ಸಂಪಾದಿತ ಕೃತಿಯನ್ನು ಓದಿ ಅದರ ಕುರಿತು ಬಹಳಷ್ಟು ಮಾಹಿತಿಯನ್ನು ಸ್ಮರಿಸಿಕೊಳ್ಳುತ್ತಾರೆ. ಮಂಟೇಸ್ವಾಮಿ ಅವರ ಜನಪದ ಸಾಹಿತ್ಯವು ನಿಕೃಷ್ಟರ ಉದ್ಧಾರ, ಭಕ್ತಿ ಮತ್ತು ಸಾಂಸ್ಕೃತಿಕ ಪ್ರತಿರೋಧದ ಆಳವಾದ ಅರ್ಥಗಳನ್ನು ವಿಶ್ಲೇಷಿಸುತ್ತದೆ. ನಮ್ಮ ನೆಲದ ಮೂಲ ಜನಪದ ಚೇತನವನ್ನು ಜಾಗೃತಗೊಳಿಸಿ, ಸಮಾನತೆಯ ಹಾದಿಯಲ್ಲಿ ಮುನ್ನಡೆಯಲು ಇದು ಓದುಗರಿಗೆ ಸ್ಪೂರ್ತಿ ನೀಡುತ್ತದೆ. ಉತ್ತರ ಕರ್ನಾಟಕದ ಜಾನಪದವು ಅಪ್ಪಟ ಮಣ್ಣಿನ ವಾಸನೆ ಹಾಗೂ ಹಳ್ಳಿಯ ಬದುಕಿನ ನವಿರು ಭಾವನೆಗಳನ್ನು ತನ್ಮಯತೆಯಿಂದ ಹಿಡಿದಿಟ್ಟು ನಾವು ಮನೆಗೆ ತಂದ ಕನ್ನಡಿ ಹೇಗೆ ನಮ್ಮನ್ನು ನೋಡುತ್ತದೆ ಎಂಬ ವಿಚಾರವನ್ನು ಗೊರೂರು ಅನಂತರಾಜು ಅವರ ನಾ ತಂದೀನಿ ನಿನ್ನ ನನ್ನನ್ಯಾಕ ನೋಡತಿ ಹೊಳ್ಳೊಳ್ಳಿ ಲೇಖನವು ತಿಳಿಸುತ್ತದೆ. ಈ ಕೃತಿಯ ಕರ್ತೃ ಡಾ. ಪ್ರಕಾಶ್ ಗ. ಖಾಡೆಯವರೊಂದಿಗಿನ ಪ್ರವಾಸದ ಅನುಭವಗಳನ್ನು ತಿಳಿಸುತ್ತದೆ. ಗ್ರಾಮೀಣ ಜೀವನದ ಪ್ರೀತಿ, ಹಾಸ್ಯ, ಸೌಹಾರ್ದ ಹಾಗೂ ಜನಪದ ಸಾಹಿತ್ಯದ ತೀವ್ರತೆಯನ್ನು ತೀಕ್ಷ್ಣವಾಗಿ ವಿಶ್ಲೇಷಿಸುತ್ತದೆ. ನಮ್ಮ ನೆಲದ ಮೂಲ ಸಂಸ್ಕೃತಿ ಮತ್ತು ನೈಜ ಮನುಷ್ಯ ಸಂಬಂಧಗಳ ಸೌಂದರ್ಯವನ್ನು ಮರು ಶೋಧಿಸಲು ಇದು ಓದುಗರಿಗೆ ಪ್ರೇರಣೆಯಾಗಿದೆ. ಕವಿ ಎಲ್.ಎನ್.ಮುಕುಂದರಾಜ್ ಅವರ ಕವಿತೆ ಹದ್ದು ಮತ್ತು ಜೀಮೂತ ವಿಮರ್ಶಿಸುತ್ತಾ ಈ ಕಾವ್ಯದ ವಸ್ತು ಸಂಸ್ಕೃತದಲ್ಲಿ ಸುಪ್ರಸಿದ್ಧವಾದ ಶ್ರೀಹರ್ಷನ ನಾಗನಂದ ನಾಟಕದ್ದು. ಪುರಾಣ ಕೇಂದ್ರಿತ ಪ್ರಜ್ಞೆಯನ್ನು ವರ್ತಮಾನದ ಸ್ಥಿತಿಗೆ ತರುವ ಕವಿ ಈ ವಸ್ತುವನ್ನು ನಮ್ಮ ಸಮಕಾಲೀನತೆಯಲ್ಲಿ ಇರಿಸಿ ಈ ಹೊತ್ತಿನ ಹದ್ದುಗಳು ನಮ್ಮ ಪರಿಸರದ ಜೀಮೂತವಾಹನ ರಂತಹ ಮುಗ್ಧರನ್ನು ಕುಕ್ಕಿ ತಿನ್ನುವ ಕರಾಳತೆಯನ್ನು ಚಿತ್ರಿಸಲು ಬಳಸುತ್ತಾರೆ. ಗರುಡನಿಗೆ ಸರದಿಯ ಪ್ರಕಾರ ಆಹಾರ ವಾಗಬೇಕಿದ್ದ ಶಂಖಚೂಡನೆಂಬ ನಾಗನನ್ನು ಉಳಿಸಲು ತಾನೇ ಗರುಡನಿಗೆ ಆಹಾರವಾಗುವ ಜೀಮೂತವಾಹನನ ತ್ಯಾಗಶೀಲತೆ ಉದಾತ್ತವಾದದ್ದು. ಆತನ ತ್ಯಾಗ ಪುರಾಣ ಪ್ರಜ್ಞೆಯೊಳಗೆ ಮೌಲ್ಯಾಧಾರಿತವಾದದ್ದೇ ಆಗಿದೆ. ಹದ್ದು ಮತ್ತು ಜೀಮೂತ ಕವಿತೆ ಜೀವನದ ಎತ್ತರದ ಧ್ಯೇಯಗಳು, ತ್ಯಾಗ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತೀಕ್ಷ್ಣ ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಬದುಕಿನ ಧ್ಯೇಯಗಳನ್ನು ಎತ್ತರಕ್ಕೇರಿಸಿಕೊಂಡು, ಸಮಾಜಕ್ಕೆ ಕರುಣಾ ಭಾವವನ್ನು ಪ್ರೇರೇಪಿಸುವ ಅದ್ಭುತ ಚಿಂತನೆಗಳ ಕವನವಿದು. ರಾಷ್ಟ್ರಕೂಟರ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಶಾಂತಿ, ಸಾಹಿತ್ಯ ಪ್ರೀತಿ ಮತ್ತು ಉದಾರತೆಯನ್ನು ರಂಗಭೂಮಿಯ ಕನ್ನಡಿಯಲ್ಲಿ ಕಟ್ಟಿಕೊಡುವ ಅಪೂರ್ವ ಯತ್ನವನ್ನು ಬಶೀರ್ ರವರು ಮಾಡಿದ್ದಾರೆ. ಗೊರೂರು ಅನಂತರಾಜು ಅವರು ಬಶೀರರ ನಾಟಕ ಕೃತಿಯನ್ನು ಸೊಗಸಾಗಿ ಪರಿಚಯಿಸಿದ್ದಾರೆ. ಈ ಲೇಖನವು ರಂಗಪಠ್ಯದ ತೀವ್ರತೆ, ರಾಜಧರ್ಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿಶ್ಲೇಷಿಸುತ್ತದೆ. ನಾಡಿನ ಇತಿಹಾಸದ ಹಿರಿಮೆಯನ್ನು ನೆನಪಿಸುತ್ತಾ, ಪ್ರತಿಯೊಬ್ಬರಲ್ಲೂ ಉನ್ನತ ಆದರ್ಶ ಮತ್ತು ಸಾಂಸ್ಕೃತಿಕ ಅಭಿಮಾನವನ್ನು ಜಾಗೃತಗೊಳಿಸುವ ಪ್ರೇರಣಾದಾಯಿ ನಾಟಕ ಇದು. ಅರಸಿಕೆರೆಯ ಲೇಖಕಿ ಸಾವಿತ್ರಮ್ಮ ಓಂಕಾರ್ ರವರ ಕೃತಿ ಸುಂದರ ನವಿಲಿಗೆ ಚೆಂದನ ಗರಿ ಕೃತಿಯಲ್ಲಿ ಒಟ್ಟು ಎಪ್ಪತ್ನಾಲ್ಕು ಜೀವನಗಾಥೆಗಳನ್ನು ಕ್ರೋಡೀಕರಿಸಿ ಬರೆದ ಕೃತಿ. ಇದನ್ನು ಗೊರೂರು ಅನಂತರಾಜು ಬಹಳ ಚೆಂದರ ಚೌಕಟ್ಟಿನಲ್ಲಿ ಪರಿಚಯಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ನೆರಳಾಗಿ ಅಲ್ಲ, ಸ್ವತಂತ್ರ ವ್ಯಕ್ತಿತ್ವದ ಭದ್ರ ಬನಿಯಾಗಿ ನಿಂತ ಕಸ್ತೂರ್ಬಾ ಅವರ ತ್ಯಾಗಮಯ ಬದುಕು ಸದಾ ಆದರ್ಶಪ್ರಾಯ. ಎಂ.ವಿ.ತ್ಯಾಗರಾಜು ಅವರು ಕಸ್ತೂರ್ಬಾ ಗಾಂಧಿಯವರನ್ನು ಕೇಂದ್ರೀಕರಿಸಿ ಬರೆದ ಕೃತಿಯಿದು. ಇದನ್ನು ಗೊರೂರು ಅನಂತರಾಜು ಪರಿಚಯಿಸಿದ್ದು ಆ ಕೃತಿಯಲ್ಲಿನ ಕಸ್ತೂರ್ಬಾ ಅವರ ಧೈರ್ಯ ಮತ್ತು ಮೌನ ಸಮರ್ಪಣೆಯನ್ನು ತೀಕ್ಷ್ಣವಾಗಿ ಬಿಂಬಿಸುತ್ತದೆ. ಭಾರತೀಯ ನಾರಿಶಕ್ತಿಯ ಅಪೂರ್ವ ಸಾಹಸ ಗಾಥೆಯನ್ನು ನೆನಪಿಸಿ, ತತ್ವ ಬದುಕಿಗೆ ಪ್ರೇರಣೆ ನೀಡುವ ಸಾಂಸ್ಕೃತಿಕ ಕೈಗನ್ನಡಿಯಿದು. ಬಾಳು ಎಂಬುದು ಸೋಲು ಗೆಲುವು, ಲಾಭ ನಷ್ಟಗಳ ನಿರಂತರ ಪಗಡೆಯಾಟ. ಭೇರ್ಯ ರಾಮ ಕುಮಾರ್ ಅವರ ಬಾಳೆಂಬ ಪಗಡೆಯಾಟ ಕವಿತೆಯು ಜೀವನದ ಸಂಕೀರ್ಣತೆ, ಚಂಚಲತೆ ಮತ್ತು ಅನುಭವದ ವೈವಿಧ್ಯಗಳನ್ನು ಆಳವಾದ ವಿಮರ್ಶಾತ್ಮಕ ದೃಷ್ಟಿಯಿಂದ ವಿಶ್ಲೇಷಿಸುತ್ತದೆ ಎಂದು ಗೊರೂರು ಅನಂತರಾಜು ಕವಿ ಕವಿತೆಯನ್ನು ಪರಿಚಯಿಸುತ್ತಾರೆ. ಅನಿಶ್ಚಿತತೆಯ ನಡುವೆಯೂ ಬದುಕಿನ ಮೌಲ್ಯವನ್ನು ಹುಡುಕುತ್ತಾ, ವಿವೇಕ ಮತ್ತು ಆಶಾವಾದದಿಂದ ಮುನ್ನಡೆಯಲು ಪ್ರೇರೇಪಿಸುವ ಜಾಣ್ಮೆಯ ವಿಚಾರಪೂರ್ಣ ಚಿಂತನೆಗಳ ಅಮೂಲ್ಯ ಕವಿತೆಯಿದು. ಮುಟ್ಟನಹಳ್ಳಿಯ ತ್ಯಾಗರಾಜ್ ಅವರ ಚಾರಣದ ಸಾಹಸ ಕಥನ ಒಂದು ಪುಟ್ಟ ಮಾರ್ಗದರ್ಶಿ ಗೈಡ್ ನಂತಿದ್ದು ಪುಷ್ಪಗಿರಿಯ ಬೆಟ್ಟದಲ್ಲಿ ಚಾರಣ ಪ್ರಿಯರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಗೊರೂರು ಅನಂತರಾಜು. ಸಾಗುವ ಹಾದಿ ಕೇವಲ ದಾರಿಯಲ್ಲ. ಅದು ಆತ್ಮಶೋಧನೆಯ ಮಹಾ ಸಾಹಸ. ಈ ಕೃತಿಯು ಪುಷ್ಪಗಿರಿಯ ಚಾರಣವ ಕಠಿಣ ಹಾದಿ, ನಿಸರ್ಗದ ಸವಾಲುಗಳು ಮತ್ತು ಮನಸ್ಸಿನ ಸಂಕಲ್ಪ ಶಕ್ತಿಯನ್ನು ಅನಾವರಣಗೊಳಿಸಿದೆ ಶ್ರಮ ಸಾಹಸ ಹಾಗೂ ಪ್ರಕೃತಿ ಪ್ರೇಮದ ಮಹತ್ವವನ್ನು ಸಾರಿದೆ. ಪ್ರತಿಯೊಬ್ಬರಲ್ಲೂ ನಿರಂತರ ಮುನ್ನಡೆಯುವ ಚೈತನ್ಯ ಮತ್ತು ಜಯಿಸುವ ಆತ್ಮವಿಶ್ವಾಸ ತುಂಬುವ ಸಾಹಸಿ ಕಥನ ಇದು. ರುದ್ರಪಟ್ಟಣದ ಶಿಕ್ಷಕ ಸಾಹಿತಿ ಹೊ.ರಾ.ಪರಮೇಶ್ ಅವರ ಕೃತಿ ಸಾವಿರದ ಸಾಸಿವೆ ಇದರಲ್ಲಿ ಹೈಕುಗಳು ಎಂಬ ವಿಶಿಷ್ಟ ಕಾವ್ಯ ಸಾಹಿತ್ಯ ವಿಧಾನದಲ್ಲಿ ರಚಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ವಿಧಾನವಾಗಿದ್ದು ಜೀವನ ಮೌಲ್ಯ ತಿಳಿಸುವ ಕೃತಿ. ಈ ಲೇಖನವು ಸಣ್ಣ ಸಣ್ಣ ವಿಚಾರಗಳ ಆಳಕ್ಕೆ ಇಳಿದು, ಸಾಹಿತ್ಯಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತದೆ. ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಎಚ್ಚರಿಸಿ, ಚಿಂತನೆಗಳಿಗೆ ಹೊಸ ದಾರಿ ತೋರಿಸುವ ಪ್ರೇರಣಾದಾಯಿ ಬರಹಗಳ ಸಂಗ್ರಹವಿದು. ಒಟ್ಟಾರೆ ಈ ಕೃತಿಯು ವಿವಿಧ ಪ್ರತಿಭಾನ್ವಿತ ಲೇಖಕರ ಐವತ್ತೆರಡು ಪುಸ್ತಕ ಪರಿಚಯದ ಲೇಖನಗಳಿಂದ ಕೂಡಿದ್ದು ಬದುಕಿನ ಮಹಾ ಸಂಘರ್ಷದ ನಡುವೆಯೂ ಭರವಸೆಯನ್ನು ಕಂಡುಕೊಳ್ಳುವ ಈ ತಲ್ಲಣಗಳ ಸಂದರ್ಭವು, ನೆಲ ಜಲ ಮತ್ತು ಮನುಷ್ಯ ಸಂಬಂಧಗಳ ಮೌಲ್ಯವನ್ನು ಮರುಚಿಂತನೆ ಮಾಡಲು ಪ್ರತಿಯೊಬ್ಬ ಓದುಗನಿಗೂ ಪ್ರೇರಣೆ ನೀಡುತ್ತದೆ. ಕಾಲದ ಕನ್ನಡಿಯಂತೆ ನಿಲ್ಲುವ ಈ ಕೃತಿಯು, ಸಾಹಿತ್ಯಾಸಕ್ತರಿಗೂ ಮತ್ತು ಸಾಮಾಜಿಕ ಚಿಂತಕರಿಗೂ ಒಂದು ಅಮೂಲ್ಯವಾದ ದಿಕ್ಸೂಚಿಯಂತಿದ್ದು ಲೇಖಕರಾದ ಗೊರೂರು ಅನಂತರಾಜುರವರಿಗೆ ಶ್ರೇಯೋವೃದ್ಧಿಯನ್ನು ತರಲಿ ಎಂದು ಹಾರೈಸುವೆ. ಕೆ.ಎನ್. ಚಿದಾನಂದ (ನಾನಂಚಿ)ಶಿಕ್ಷಕರು ಮತ್ತು ಸಾಹಿತಿ,ಸಂಸ್ಕೃತಿ ಚಿಂತಕರು, ಹಾಸನ.