ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ರಂಗಭೂಮಿ

“ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ಗೊರೂರು ಅನಂತರಾಜು

ಕಾವ್ಯ ಸಂಗಾತಿ ಗೊರೂರು ಅನಂತರಾಜು “ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ನೂರು ಸಿನಿಮಾ ಕನಸು ಹೊತ್ತು ಬೆಂಗಳೂರಿಗೆ ಬಂದೆ. ಆದರೆ ಮಾಡಲು ಸಾಧ್ಯವಾಗಿದ್ದು ಒಂದೆ ಸಿನಿಮಾ ಅದು ಮಂದಾಕಿನಿ ಎಂದರು ರಮೇಶ್ ಸುರ್ವೆ. ಕಥೆ, ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲಾ ನನ್ನದೆ. ಸಿನಿಮಾ ನೋಡಿದವರು ಒಂದು ಸಾವಿರ. ಚಿತ್ರದಲ್ಲಿ ಮನರಂಜನೆ  ಇತ್ತು. ಅದೃಷ್ಟ ಕೈ ಕೊಟ್ಟಿತ್ತು. ಸಾಮಾಜಿಕ ಜಾಲ ತಾಣದಲ್ಲಿ ನೋಡಿದವರು ಬಹಳ ಇರಬಹುದು. ಬಾನಿಗೆ ಭಾಸ್ಕರ್ ಚೆಂದ..ಎಂಬ ನನ್ನ ಗೀತೆಗೆ ೨೦೦೮ರಲ್ಲಿ ಹಿನ್ನೆಲೆ ಗಾಯನಕ್ಕೆ ನಂದಿತಾ ಅವರು ಪ್ರಶಸ್ತಿ ಪಡೆದರು.. ಎಂದು  ಸುರ್ವೆ ಸಮಾಧಾನಗೊಂಡರು. ಇವರು ನನಗೆ ಹಲವು ವರ್ಷಗಳಿಂದ ಪರಿಚಿತರು. ಸುರ್ವೆ ಪತ್ರಿಕೆ. ಇಂಜಿನಿಯರ್ ಡೈರಿ ಎರಡೂ ಪತ್ರಿಕೆಗಳ ಸಂಪಾದಕರು. ಸಿನಿಮಾ ರಂಗ ಇವರ ಕೈ ಹಿಡಿಯಲ್ಲಿಲ್ಲ. ಆದರೆ ಬರವಣಿಗೆ ಕೈ ಬಿಡಲಿಲ್ಲ.ನಾನು ಜನಿಸಿದ್ದು ಇಟಗಿಯಲ್ಲಿ ದಿ. ೫.೫.೧೯೫೮ರಂದು. ಇಟಗಿ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿಗೆ ಸೇರಿದ್ದು ಮಹಾದೇವ ದೇವಸ್ಥಾನದಿಂದ ಇತಿಹಾಸ ಪ್ರಸಿದ್ಧವಾಗಿದೆ.  ನಾನು ಓದಿದ್ದು ಪಿಯುಸಿವರೆಗೆ.  ನನ್ನ ಮೊದಲ ಕವಿತೆ ಮೊರಾರ್ಜಿ ಸ್ವಾಗತ ಗೀತೆ. ಬರೆದು ವಾಚಿಸಿದ್ದೆ. ದಿನಕರ ದೇಸಾಯಿ ಅವರ ಚುಟುಕು ನನಗೆ ಇಷ್ಟ. ಮೊದಲಿಗೆ ನನ್ನ ಕವಿತೆಗಳು ದುಡಿಮೆ, ವಾಸವಿ, ವಿಶ್ವ ಪರ್ಯಟನೆ, ವಿನೋದವಾಣಿ ಪತ್ರಿಕೆಗಳಲ್ಲಿ ಬೆಳಕು ಕಂಡವು. ನನ್ನ ತಂದೆ ಮಾರುತಿರಾವ್ ಸುರ್ವೆ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು. ಅಜ್ಜ ಗೋವಿಂದರಾವ್ ಸುರ್ವೆ ಕರಣಿಕರು. ಕರಾರು ಪತ್ರ ಆಸ್ತಿ ಪತ್ರ ಬರೆಯುವ ಪರಿಣಿತರು.    ಚಿಕ್ಕಪ್ಪ ಕೇಶವರಾವ್ ಭಜನಾ ಕಲಾವಿದರು. ಮಾವ ವಾಸುದೇವರಾವ್ ಬಯಲಾಟದಲ್ಲಿ ಆಂಜನೇಯ ಪಾತ್ರ ಮಾಡಿದ್ದರು.  ಇವರೆಲ್ಲಾ  ಪ್ರಭಾವ ನನ್ನ ಮೇಲಿತ್ತು. ಪ್ರಾಚಾರ್ಯ ಸೂರ್ಯನಾರಾಯಣರಾವ್ ಪ್ರೋತ್ಸಾಹದಿಂದ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕಾಲಿಟ್ಟೆ. ೧೦ ನಿಮಿಷದ ಭೀಮ ಏಕಪಾತ್ರಾಭಿನಯದಲ್ಲಿ ಗದೆ ಎತ್ತಿ ಆರ್ಭಟಿಸಿದೆ. ಇವೇ ೮೫ ಪ್ರದರ್ಶನ ಆಗಿವೆ. ಸೇತು ಮಾದವರಾವ್ ಹಂಜಕ್ಕಿ ಅವರ ಮಾರ್ಗದರ್ಶನದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೋಣಾಚಾರ್ಯ ಪಾತ್ರ ನಿರ್ವಹಿಸಿದಾಗ ನನಗೆ ವಯಸ್ಸು ೧೮. ನನಗೆ ಮೊದಲು ಗುಬ್ಬಿ ಕಂಪನಿ ಜೊತೆ ಒಂದು ವರ್ಷದ ಗೆಳತನವಿತ್ತು. ಚಿತ್ರನಟಿ ಶೃತಿ ಅವರ ತಾಯಿ ರಾಧಾ ರುಕ್ಮಿಣಿ ಲವಕುಶ ಪಾತ್ರ ಮಾಡುತ್ತಿದ್ದರು.  ನನ್ನ ರಂಗಾಸಕ್ತಿ ಗಮನಿಸಿ ವೀರಣ್ಣನವರು ನಾಟಕ ನೋಡಲು ಅವರ ಕ್ಯಾಂಟಿನ್‌ನಲ್ಲಿ ಊಟ ತಿಂಡಿ ನೀಡಿದರು. ಇದರಿಂದ  ನನ್ನ ರಂಗಾಸಕ್ತಿ ಹೆಚ್ಚಿತು. ಕುಕನೂರು ರಹಮಾನರ ಕಂಪನಿ, ಮಹಾಂತೇಶ ಶಾಸ್ತ್ರಿಗಳ ಕಂಪನಿ, ಹಾರಾಪೂರ ರಾಮರಾವ್ ದೇಸಾಯಿ ಕಂಪನಿ, ಬನಶಂಕರಿ ನಾಟ್ಯ ಸಂಘ, ಹುಮ್ನಾಬಾದ್ ಕಂಪನಿಗಳ ಸಹವಾಸ.  ಇಲ್ಲೆಲ್ಲಾ ಏಕದೃಶ್ಯ ಪಾತ್ರಕ್ಕೆ ಮಾತ್ರ ಸೀಮಿತ.   ೧೯೭೭ರಲ್ಲಿ ಬೆಂಗಳೂರಿಗೆ ಬಂದೆ. ಆದರ್ಶ ಫಿಲಂ ಇನ್ಸ್ಟ್ಯೂಟ್ ಸೇರಿದೆ. ಬಿ.ವಿ.ಕಾರಂತರು, ಗಿರೀಶ್ ಕಾಸರವಳ್ಳಿ ಪ್ರಾಚಾರ್ಯರು. ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ನಾಗಾಭರಣ, ಟಿ.ಎಸ್.ರಂಗ, ಜಿ.ವಿ.ಅಯ್ಯರ್, ಸುಂದರರಾಜ್, ಆರ್.ಟಿ.ರಮಾ, ರಾಜನ್ ನಾಗೇಂದ್ರ ಮುಂತಾದ ದಿಗ್ಗಜರ ಪಾಠ ಮತ್ತು ಒಡನಾಟ ದೊರಕಿತು. ೧೯೭೮ರಲ್ಲಿ  ಬೆಂಗಾಲಿ ನಾಟಕ ಕನ್ನಡಿಕರಿಸಿ ಬರೆದ ಪರಮೇಶಿ ಪಂಗನಾಮ ರವೀಂದ್ರ ಕಲಾಕ್ಷೇತ್ರದಲ್ಲಿ  ಪ್ರಯೋಗ ಕಂಡಿತು. ಹಾಸ್ಯನಟ ವೈಜನಾಥ ಬಿರಾದಾರ ನನ್ನೊಂದಿಗೆ ನಟಿಸಿದ್ದರು. ಇದು ೨೦ ಪ್ರಯೋಗ ಕಂಡಿದೆ. ನನ್ನ ೨ನೇ ನಾಟಕ ಕುಟುಂಬದಲ್ಲಿ ಕುರುಕ್ಷೇತ್ರ.  ನನ್ನೊಟ್ಟಿಗೆ ನಟಿಸಿದವರು ಮೈಸೂರು ರಮಾನಂದ, ವೈಜನಾಥ ಬಿರಾದರ, ಜಯಶ್ರೀ.  ಜಲೀಲನ ಜಟಕಾ,  ಕಿತಾಪತಿ ಕೃಷ್ಣಯ್ಯ ನನ್ನ ಇನ್ನೆರೆಡು ನಾಟಕಗಳು. ಹಾಸ್ಯವೇ ಈ ನಾಟಕಗಳ ಜೀವಾಳ.  ೩೦ ನಿಮಿಷಗಳ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಏಕಪಾತ್ರಾಭಿನಯ ಸ್ತ್ರಿಪ್ಟ್ ಬರೆದು ಅಭಿನಯಿಸಿರುವೆ. ಛತ್ರಪತಿ ಶಿವಾಜಿ, ಕೆಂಪೇಗೌಡ ಮೊದಲಾಗಿ ವಿವಿಧ ಪಾತ್ರಗಳ ವೇಷ ಧರಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪೋಟೋಗಳು ನನ್ನ ಆಲ್ಬಂನಲ್ಲಿವೆ.  ಇದು ಸುರ್ವೆ ಅವರ ನಾಟಕ ಸಿನಿಮಾ ರಂಗದ ಕಿರುನೋಟ. ಇನ್ನೂ ಪತ್ರಿಕೆ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಇವರ ಸಾಧನೆ ಬಹಳಷ್ಟಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ನೂರು ಸಿನಿಮಾ ಕನಸು ಹೊತ್ತು ಬಂದೆ, ರಂಗನಟನಾದೆ”  ರಮೇಶ್ ಸುರ್ವೆ ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಗಿರಿಜಾ ನಿರ್ವಾಣಿ ಹಾಸನ ಅವರ ಕೃತಿ “ಕರಿ ಮುಗಿಲು (ಕವನ ಸಂಕಲನ)ಅವಲೋಕನ,ಶಿವಲೀಲಾ ಹುಣಸಗಿ

ಪುಸ್ತಕ ಸಂಗಾತಿ ಶಿವಲೀಲಾ ಹುಣಸಗಿ ಗಿರಿಜಾ ನಿರ್ವಾಣಿ ಹಾಸನ “ಕರಿ ಮುಗಿಲು“ ಕವಯತ್ರಿಗಿರಿಜಾ ನಿರ್ವಾಣಿಯವರು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು.’ಕರಿಮುಗಿಲು’ ಇವರ ಎರಡನೇ ಕೃತಿಯಾಗಿದೆ.ಗಿರಿಜಾರವರ ಮನಸ್ಸು ಮತ್ತು ಕಾಯಕ ಸದಾ ಚೈತನ್ಯದಿಂದ ಕೂಡಿದ್ದು.ವೃತ್ತಿಗೆ ಸೇರಿದ ಎಲ್ಲ ಶಿಕ್ಷಕರ ಹೃದಯ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ಮಾಧ್ಯಮವೆಂದರೆ ತಪ್ಪಾಗದು.ಯಾವಾಗಲೂ ಒಂದಿಲ್ಲೊಂದು ಕ್ರಿಯಾತ್ಮಕ ಹಾಗೂ ಕ್ರಿಯಾಶೀಲ ಗುಣದಿಂದ ಕೂಡಿರುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಗಿರಿಜಾರವರು.ಮಕ್ಕಳೊಂದಿಗೆ ಮಕ್ಕಳಾಗಿ ನಲಿಯುವ ಭಾಗ್ಯ ಶಿಕ್ಷಕರಿಗೆ ಭಗವಂತ ನೀಡಿದ ಕೊಡುಗೆಯಿದೆ.ಸಂತೃಪ್ತ ಭಾವ ಮೂಡುತ್ತದೆ.ಅದನ್ನು ಯಥೇಚ್ಛವಾಗಿ ಅನುಭವಿಸುವ ಯೋಗ ಎಲ್ಲರಿಗೂ ಒಲಿದರೆ ಅದರಷ್ಟು ಅದೃಷ್ಟ ಯಾರಿಗುಂಟು,ಯಾರಿಗಿಲ್ಲ..ಕವಿತೆಗಳ ವಿಮರ್ಶೆ ಮಾಡುವಷ್ಟು  ಅನುಭವ ನನಗಿಲ್ಲ.ಆದರೆ ಕವಿತೆಗಳನ್ನು ಓದಿ ಆಸ್ವಾಧಿಸುವ ಸಹೃದಯ ನನಗಿದೆ.ಕವಿತೆ ಬರೆಯುವ ಹುಚ್ಚು ಎಲ್ಲರಿಗೂ ದಕ್ಕುವುದಿಲ್ಲ.ದಕ್ಕಿದ್ದೆಲ್ಲವೂ ಕವಿತೆಯಾಗುವುದಿಲ್ಲ.ಓದುಗರ ಮನದಲ್ಲಿ ನೆಲೆ ನಿಲ್ಲುವುದಿಲ್ಲ..ಅದೊಂದು ತಪಸ್ಸು. ಓದು,ಬರಹ,ಅರಿವಿನ ಪಥ ಹುಡುಕ ಹೊರಟವನಿಗೆ ಗಿರಿಜಾರ ಕರಿಮುಗಿಲು ಕೊಂಚ ಆಶಾ ಭಾವ ಹುಟ್ಟು ಹಾಕುವುದರಲ್ಲಿ ಸಂಶಯವಿಲ್ಲ.. ಮುನ್ನುಡಿಯನ್ನು ಹಿರಿಯ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾ ಅವರು;”ಯಾವುದೇ ಸೃಜನಶೀಲ ಬರಹಗಾರ ಮೊದಲಿಗೆ ಕವಿಯಾಗಲು ಬಯಸುತ್ತಾನೆ;ಆದರೆ ಬರಬರುತ್ತಾ ಕಾವ್ಯದ ಜೊತೆಗಿನ ಸಂಬಂಧ ಬಹಳ ಕಠಿಣ ಭಾವ ಮೂಡುವುದು”.” ಕಾವ್ಯ ಪ್ರತಿಭೆಯೆಂಬುದು ಬಂದೂಕು ಇದ್ದಂತೆ;ಕವಿಯ ಪ್ರತಿಭೆಯಿಂದ ಮಾತ್ರ. ಶಬ್ದಗುಂಡುಗಳು ತೀವ್ರ ತರವಾಗಿ ಹಾರಿ ಅಜ್ಞಾನ ಎಂಬ ವೈರಿಯನ್ನು ಕೊಲ್ಲಬಲ್ಲವು” ಎಂಬ ಸಾಲುಗಳು ಸಾಕು.ಒಬ್ಬ ಕವಿಗಿರಬೇಕಾದ ತಾಳ್ಮೆ ಕಾಯಕನಿಷ್ಠೆ ಜೊತೆಗೆ ಸಮಾಜದ ಒಳಹರಿವನ್ನು ಗುರುತಿಸಿ ತೀಕ್ಷ್ಣವಾಗಿ ಖಂಡಿಸುವ ಎದೆಗಾರಿಕೆ ಬೆರಳೆಣಿಕೆಯಷ್ಟು ಕವಿಗಳಿಗೆ ಸಾಧ್ಯ.ನಿಷ್ಠುರವಾಗಿ ಎಲ್ಲರಿಂದಲೂ ದೂರಾಗುವ ಮುನ್ಸೂಚನೆ ದಕ್ಕಿ ದೂರಾದ ಉದಾಹರಣೆ ಕೂಡ ಇದೆ.ಹೀಗಾಗಿ ಕಾಲಕ್ಕೆ ತಕ್ಕಂತೆ ಕವಿಗಳು ಕೂಡ ಬದಲಾಗುತ್ತಿದ್ದಾರೆ…ಅಂದರೆ ತಪ್ಪಿಲ್ಲ….ಗಿರಿಜಾರವರು ತಮ್ಮ ಅನುಭವದ ಮೂಸೆಯಲ್ಲಿ ಮಿಂದೆದ್ದ ಜನಪರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸೃಜನಶೀಲ ಬರಹಗಾರ್ತಿ. “ಕರಿಮುಗಿಲು” ಕವನ ಸಂಕಲನ ಒಟ್ಟು 63 ಕವನಗಳನ್ನು ಹೊಂದಿದೆ. ಪ್ರತಿ ಕವಿ ಮನಸು ಆರಾಧಿಸುವುದು ” ನಿಸ್ವಾರ್ಥ ಪ್ರೀತಿ”ಯನ್ನು ಅದು “ರಾಧಾ ಕೃಷ್ಣ” ಇಂದಿಗೂ ಅಜರಾಮರ.ಎಷ್ಟೋ ಪ್ರೀತಿಗಳು ನನಸಾಗದೇ ಕನಸಾಗಿ ಉಳಿದಿವೆ..ಆದರೆ ಕವಯತ್ರಿಯ ಪ್ರೇಮದಲಿ ಸ್ವತಃ ತಾನೆ ಕೃಷ್ಣನಾಗಿ ರಾಧೆಯನ್ನು ಪಡೆದ ಪ್ರೀತಿ ಮೆಚ್ಚುವಂತಹುದು. ಕನಸಿನಲ್ಲಿ ಬಂದವಳು ನನಸಾಗಿ ನಿಂತಳುಭವ ಬಂಧನಗಳ ಬೆಸೆದುಬಾಳೆಂಬ ಪಥದಿ ಒಲವೆಂಬ ಹೂಚಲ್ಲಿಜೀವನವೆಂಬ ಬಂಡಿಯ ಎಳೆದೇವೂ..                                            –  ಕನಸಿನ ರಾಧೆ ಪ್ರೀತಿಯಂದರೆ ಹಾಗೆಯೇ, ಒಮ್ಮೆ ಹೃದಯದಿ ಬೆರೆತು ನಿಂತಾದ ಮೇಲೆ ಅದು ತನ್ನ ನಶೆಯನ್ನು ಹಂತಹಂತವಾಗಿ ಇಡೀ ಜೀವನದುದ್ದಕ್ಕೂ ಬೆಸುಗೆಯಾಗಿ ನಿಲ್ಲುವಂತೆ ಮಾಡುವುದಾಗಿದೆ.ದಾಂಪತ್ಯ ರಸವತ್ತಾಗಿರಲು ದಂಪತಿಗಳು ವಿರಸದತ್ತ ಸಾಗದೇ ನವರಸದತ್ತ ಒಲವ ಹರಿಸಿದರೆ ಪ್ರೇಮಕ್ಕೊಂದು ಬೆಲೆ..ತನ್ನ ಉಸಿರಾದ ಜೀವಕ್ಕೆ ಕೊಡುವ ಗೌರವ. ಹೋಗದಿರು ನೆರಳೆ ನೀ ನನ್ನ ಬಿಟ್ಟುಬಯಸಿ ಬಂದೆ ಅಪ್ಪುಗೆಯನಿಲ್ಲು ನಿಲ್ಲು ಅಂತರಾಳದ ಬಿಂಬವೆಆಗಸದಿ ತೇಲುತ್ತಿಹ ಮೋಡವೇ                                        –  ಓ ನನ್ನ ಪ್ರಿಯತಮ ಕವಯತ್ರಿ ಗಿರಿಜಾ ನಿರ್ವಾಣಿಯವರು,ಸಾಧಿಸುವ ಹಾದಿ ಯಾವತ್ತೂ ಹೂಗಳಿಂದ ಕೂಡಿರುವುದೆಂದು ತಿಳಿದರೇ ಅದು ಸಾಧನೆಯ ಮೊದಲ ಅಡತಡೆ..ಕಾರಣ ಸಾಧಿಸುವ ಛಲಗಾರನಿಗೆ ಮಾತ್ರ ಸಾಧನೆಯ ಮಹತ್ವ ಗೊತ್ತು..ಹಠವಿರಬೇಕು ತನ್ನ ಗುರಿಯ ತಾನು ಮುಟ್ಟಲು.ಎಷ್ಟೋ ಹಗೆ ಸಾಧಿಸುವವರ ಮುಂದೆ ಸೋಲದೇ,ಸೋಲನ್ನು ಗೆಲುವಿನ ಮೆಟ್ಟಿಲು ಮಾಡಿಕೊಳ್ಳುವ ಗುಣ ಹೊಂದಬೇಕು…ಸ್ವತಃ ಕ್ರೀಡಾಪಟುವಾದ ಗಿರಿಜಾರವರು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಾಧಿಸಬೇಕಾದ ಹಾದಿಯನ್ನು ಸರಳವಾಗಿ ಉದಾ.ಮೂಲಕ ವ್ಯಕ್ತ ಪಡಿಸಿದ್ದಾರೆ. ಸಾಧಕನಿಗೆ ಛಲವಿರಬೇಕೆ ವಿನಃಅಸೂಯೆ ಇರಬಾರದುಏನಾದರೂ ಆಗಲಿ ಎಂತಾದರುಆಗಲಿ ಸಾಧಿಸುವ ಅಟ್ಟ ಛಲವಬಿಡಬೇಡವೆಂದ ನಮ್ಮಪ್ಪ ನಿಮ್ಮಪ್ಪ ಬಸಪ್ಪ                                –   ಸಾಧನೆಯ ಹಾದಿ ಹೆಣ್ಣು ಮಕ್ಕಳ ಜೀವನ ಕಷ್ಟಕಾರ್ಪಣ್ಯಗಳ ಸಂಗಮ.ವೃದ್ಧಾಪ್ಯದಗೋಳು ಒಂದುತರ.ಅದರಲ್ಲೂ ಮದುವೆಯಾಗಿ ಮಕ್ಕಳಾಗಿದ ಮೇಲೆ ಅನುಭವಿಸುವ ನೋವನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಸಮಾಜದ ಅಂಕುಡೊಂಕಿನ ಭಾವಕ್ಕೆ ಸವಾಲಾಗಿ ಬರೆದಿದ್ದಾರೆ.ಬಂಜೆಯಾದರೂ ಪರವಾಗಿಲ್ಲ,ಮಕ್ಕಳಿದ್ದೂ ಬಂಜೆಯ ಬಾಳು ಕಾಣುವವರಿಗೆ ಇದರಂತ ಸಂಕಷ್ಟ ಬೇರೊಂದಿಲ್ಲ..ಸಮಾಜದಲ್ಲಿ ವೃದ್ದಾಶ್ರಮಗಳು ಹೆಚ್ಚುತ್ತಿರುವ ಬಗ್ಗೆ ಮಕ್ಕಳು ಏಕೆ ಬೇಕು ಎನ್ನುವುದನ್ನು ಮಾರ್ಮಿಕವಾಗಿ ಕವಿತೆಯ ಮೂಲಕ ವ್ಯಕ್ತ ಪಡಿಸಿದ್ದಾರೆ. ಕಷ್ಟ ಪಟ್ಟು ಕೂಲಿಯ ಮಾಡಿಹೊಟ್ಟೆಗೆ ಬಟ್ಟೆಯ ಕಟ್ಟಿ ತಾವುಕಟ್ಟಿದ ಮನೆಯೊಳಗೆ ಜಾಗವಿಲ್ಲಅವರ ಕೂಗು ದೇವರಿಗೆ ಕೇಳಿಸಬೇಕಲ್ಲ.. ಮನೆತುಂಬ ರಂಪಾಟ ಮಾಡಿಮಕ್ಕಳು ಬಂದಾಗ ಕಿವಿ ಚುಚ್ಚುತ್ತಾರನಿಮ್ಮಪ್ಪನ ಹತ್ತಿರ ಮನೆಭಾಗ ಕೇಳಿಒಟ್ಟಿಗೆ ಇರಲು ಆಗೋಲ್ಲ ಅಂತಾರ                          – ಬಂಜೆ ಎನ್ನುವ ಪದ ಒಂದೇ ಸಾಕು ನವಮಾಸ,ಹಣೆಯ ಸಿಂಧೂರ,ತಾಯಿಹಕ್ಕಿ,ಜೀವನವೊಂದು ನಾಟಕ,   ಸೂರು,ಜೀವನ ನೀರ ಮೇಲಿನ ಗುಳ್ಳೆ,ಬಯಕೆ ಹೂ ಬಿಡದ ಬಳ್ಳಿನಾನು,ಎಂಬೆಲ್ಲ ಕವಿತೆಗಳು ಸ್ರ್ರೀ ಪರ ಮತ್ತು ಶೋಷಿತ ಮನಕೆ ಧೈರ್ಯ,ನೈಜತೆಯನ್ನು ಸಾರುವ ಮತ್ತು ಜೀವನದ ವಿವಿಧ ಮಜಲುಗಳನ್ನು ಎತ್ತಿಹಿಡಿಯುವ ಪ್ರಯತ್ನ ಮಾಡಿರುವುದು ಶ್ಲಾಘನೀಯ. ಕವನ ಸಂಕಲನದ ಶೀರ್ಷಿಕೆ ಕವಿತೆ “ಕರಿಮುಗಿಲು” ಮರವು ಬಾಗಿ ಗಿಡವು ನೆಲವನ್ನು ಕಚ್ಚಿದೆಬಾರಿ ಬಿರುಗಾಳಿ ಬೀಸಿ ಮೋಡ ಮಳೆ ಸುರಿಸಿದೆಸುರಿವ ಮಳೆಯ ಸದ್ದಿಗೆಮಗುವು ಮಲಗದೆ ಎದ್ದಿದೆಪಕ್ಷಿಗಳ ಕಲರವು ಮುಗಿಲು ಮುಟ್ಟಿದೆರೆಕ್ಕೆ ಬಡಿದು ಸದ್ದು ಮಾಡದೆಮುದುಡಿ ಎಲೆಗಳ ಮರೆಯಲಿ ಮಲಗಿವೆ                                          -ಕರಿಮುಗಿಲುರೈತನ ಮೊಗದಲ್ಲಿ ಜೀವಕಳೆ ಬರಬೇಕು ಎಂದರೆ,ಇಳೆಗೆ ವರುಣ ತಂಪೆರೆಯಬೇಕು..ಹಚ್ಚ ಹಸಿರು ಜೀವಜಗತ್ತಿನ ಉಸಿರೆಂಬುದನ್ನು ಸಾರಿ ಸಾರಿ ಹೇಳಬೇಕು..ಅಂದಾಗ ಮಾತ್ರ ಧರಣಿ ಹರಿಣಿಯಂತೆ ಕುಣಿದು ಕುಪ್ಪಳಿಸಲು ಸಾಧ್ಯ.ಕರಿಮುಗಿಲು ಚೈತನ್ಯವನ್ನು ಹಿಡಿದಿಟ್ಟುಕೊಂಡ ಜೀವಸೆಲೆ…ಇದನ್ನು ಆರಾಧಿಸುವ ಮಣ್ಣಿನ ಮಕ್ಕಳು ಬಲ್ಲರು.ಅನ್ನದಾತ ನೀಡುವ ಬೆಳೆ ಅಮೃತಕ್ಕೆ ಸಮಾನ..ಕವಯತ್ರಿ ಜಗತ್ತಿನ ಜೀವಾಳ ಸೂರ್ಯನನ್ನು ಐಶ್ವರ್ಯದ ಸಂಕೇತವೆಂಬಂತೆ ಭಾವಿಸಿದ್ದು ಪ್ರಸ್ತುತ..ಉಷೆಯ ಕಿರಣ,ಶ್ರಾವಣ ಮಾಸದ ಜಡಿಮಳೆ,ತಾಯಿಮಡಿಲು, ಬೇಸರ,ಚಿಗುರೊಡೆದ ಹೊಂಗೆಮರ,ಇಳೆ ಮಳೆ..ಹೀಗೆ ಪ್ರಕೃತಿಯನ್ನು ವಿಧ ವಿಧವಾಗಿ ವರ್ಗೀಕರಿಸಿ ತಮ್ಮೊಳಗಿನ ಭಾವವನ್ನು ಕವಿತೆಯಲ್ಲಿ ಪ್ರತಿನಿಧಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ,, “ಕರಿಮುಗಿಲು” ಕವನಸಂಕಲನ ತನ್ನದೇ ಆದಂತಹ ವಿವಿಧ ಮಜಲುಗಳನ್ನು ಹೊತ್ತು ಕವಯತ್ರಿಯ ಮನದಂಗಳದಲ್ಲಿ ಅರಳಿರುವ ಹತ್ತಾರೂ ಭಾವದ ಹೂವುಗಳಾಗಿವೆ.ದೇಶ ಸೇವೆಯೆಂದ ಹಿಡಿದು ಮನುಷ್ಯನ ಸ್ವಾರ್ಥಕ್ಕೆ ಬಲಿಯಾದ ಎಲ್ಲ ವಾಸ್ತವತೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.ಅವರ ಅಕ್ಷರ ಪ್ರೀತಿ ಕನ್ನಡ ಸಾಹಿತ್ಯ ಕಣಜಕ್ಕೆ ಹೊಸ ಆಯಾಮಗಳಿಂದ ತುಂಬುವ ಶಕ್ತಿ ನೀಡಲೆಂದು ಹಾರೈಸುತ್ತೇನೆ. ಶಿವಲೀಲಾ ಹುಣಸಗಿ ಯಲ್ಲಾಪುರ.

ಗಿರಿಜಾ ನಿರ್ವಾಣಿ ಹಾಸನ ಅವರ ಕೃತಿ “ಕರಿ ಮುಗಿಲು (ಕವನ ಸಂಕಲನ)ಅವಲೋಕನ,ಶಿವಲೀಲಾ ಹುಣಸಗಿ Read Post »

ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಮೋಡದ ಚಪ್ಪರದ ಕೆಳಗೆ”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಮೋಡದ ಚಪ್ಪರದ ಕೆಳಗೆ” ಒಂದು ದಿನಭೂಮಿಯ ಮೇಲೆ ನಡೆಯುತ್ತಿದ್ದ ನಾನುಹಠಾತ್ತನೆ ಆಕಾಶದ ಮಡಿಲೇರಿದೆ. ಕಿಟಕಿಯಾಚೆ ನೋಡಿದಾಗ—ಕೆಳಗೆ ಬಿಟ್ಟು ಬಂದ ಭೂಮಿಒಂದು ಹಸಿರು ನೆನಪಿನಂತೆ ದೂರವಾಗುತ್ತಿತ್ತು;ಮೇಲೆ—ಅಂತ್ಯವಿಲ್ಲದ ನೀಲಿಯೊಂದುನನ್ನ ಕಣ್ಣಿಗೆ ಕಣ್ಣಿಟ್ಟು ನಗುತ್ತಿತ್ತು. ಅಲ್ಲಿಯೇ ನೆನಪಾಯಿತು— ಚಿಕ್ಕವಳಿದ್ದಾಗಒಮ್ಮೆ ಆಕಾಶದತ್ತ ಕೈಚಾಚಿ“ನಾನೂ ಹಾರಬೇಕು”ಎಂದು ಮನಸ್ಸಿನಲ್ಲಿ ಹೇಳಿಕೊಂಡಿದ್ದೆ. ಆಗರೆಕ್ಕೆಗಳಿರಲಿಲ್ಲ. ಇಂದು ರೆಕ್ಕೆಗಳಿಲ್ಲದಿದ್ದರೂನಾನು ಹಾರುತ್ತಿದ್ದೆ! ಮನುಷ್ಯನ ಕನಸಿಗೆರೆಕ್ಕೆ ಬೇಕೇನು?ಒಂದು ಪುಟ್ಟ ಕಿಟಕಿ ಸಾಕು;ಒಂದು ವಿಮಾನ ಸಾಕು;ಆಶ್ಚರ್ಯದಿಂದ ನೋಡುವಒಂದು ಜೀವಂತ ಕಣ್ಣು ಸಾಕು. ವಿಮಾನ ಮೋಡವನ್ನು ಸೀಳಿತು. ಅದು ಮೋಡವೋ?ಬಿಳಿಯ ಬೆಟ್ಟವೋ?ಸಾಗರದ ಮೇಲೆ ಹೆಪ್ಪುಗಟ್ಟಿದ ಅಲೆಯೋ?ದೇವರು ಬಿಚ್ಚಿಟ್ಟಬೆಳ್ಳಿಯ ಹಾಸಿಗೆಯೋ? ಒಮ್ಮೆ ಅದು ಬೆಟ್ಟವಾಗಿ ಕಂಡಿತು,ಮತ್ತೊಮ್ಮೆ ಸಾಗರವಾಗಿ,ಮತ್ತೊಮ್ಮೆ ನದಿಯಂತೆಆಕಾಶದೊಳಗೆ ಹರಿಯಿತು. ಮರಗಳೆಲ್ಲ ಕೆಳಗೆಹಸಿರು ಅಕ್ಷರಗಳಾಗಿ ಕಾಣಿಸಿದವು;ಮನೆಗಳು—ಮಕ್ಕಳು ಮಣ್ಣಿನಲ್ಲಿ ಕಟ್ಟಿದಆಟದ ಬೊಂಬೆಗಳಂತೆ. ನಾನು ಮಾತ್ರಆಕಾಶದ ಪುಸ್ತಕದೊಳಗೆಒಂದು ಪುಟ್ಟ ಅಕ್ಷರ. ಮೋಡಗಳ ಮಧ್ಯೆನೀಲಿ ಮತ್ತೆ ನೀಲಿಯೇ! ಭೂಮಿಯ ಮೇಲೆಇಷ್ಟೊಂದು ನೀಲಿಯನ್ನುಎಲ್ಲಿ ಮರೆಮಾಡಿಟ್ಟಿದ್ದೀಯೆ ಆಕಾಶವೇ? ನಿನ್ನನ್ನು ಮುಟ್ಟಬೇಕೆಂದರೆಕೈ ಸಾಲದು;ಹಿಡಿಯಬೇಕೆಂದರೆಬೆರಳು ಸಾಲದು;ಕುಡಿಯಬೇಕೆಂದರೆಕಂಠ ಸಾಲದು. ನೋಡಿ ತಣಿಯಬಹುದು—ಆದರೆನಿನ್ನನ್ನು ಒಳಗೊಳ್ಳಲು ಸಾಧ್ಯವಿಲ್ಲ. ಅಷ್ಟರಲ್ಲಿಒಂದು ಮೋಡದ ಬೃಹತ್ ಚಪ್ಪರವಿಮಾನದ ಕೆಳಗೆ ಹರಡಿಕೊಂಡಿತು. ಅದರ ಮೇಲೆಸೂರ್ಯನ ಬೆಳಕು ಬಿದ್ದಿತ್ತು. ಬಿಳಿ ಮೋಡದ ಮೇಲೆಚಿನ್ನದ ಹೊಳಪು. ನನಗೆ ಅನಿಸಿತು— ಇದು ಮೋಡವಲ್ಲ;ಭೂಮಿಯ ದುಃಖಗಳನ್ನುಮೇಲಿನಿಂದ ಮುಚ್ಚಿಟ್ಟದೇವರ ಮೌನದ ಹೊದಿಕೆ. ಅದರ ಕೆಳಗೆಎಷ್ಟು ಮನೆಗಳು,ಎಷ್ಟು ಬದುಕುಗಳು,ಎಷ್ಟು ಕಣ್ಣೀರು,ಎಷ್ಟು ನಗು! ನಾವು ಮೇಲಿದ್ದೇವೆ;ಆದರೆಬದುಕು ಕೆಳಗೇ ನಡೆಯುತ್ತಿದೆ. ಒಬ್ಬ ರೈತಮಣ್ಣಿನ ಎದೆಯಲ್ಲಿ ಬೀಜ ಬಿತ್ತುತ್ತಿದ್ದಾನೆ. ಒಬ್ಬ ತಾಯಿಮಗುವಿನ ಕೈ ಹಿಡಿದು ನಡೆಯುತ್ತಿದ್ದಾಳೆ. ಒಬ್ಬ ವೃದ್ಧಮನೆಯ ಬಾಗಿಲಲ್ಲಿ ಕುಳಿತುಹಾದುಹೋಗುವವರನ್ನು ನೋಡುತ್ತಿದ್ದಾನೆ. ಒಬ್ಬ ಮಗುಆಕಾಶದತ್ತ ನೋಡಿ“ಅಲ್ಲಿ ವಿಮಾನ!”ಎಂದು ಕೈಬೀಸುತ್ತಿರಬಹುದು. ಅವನಿಗೆ ಗೊತ್ತಿಲ್ಲ— ಆ ವಿಮಾನದ ಕಿಟಕಿಯೊಳಗೆಕುಳಿತಿರುವ ಮತ್ತೊಬ್ಬ ಮಗುಅವನನ್ನೇ ನೆನಪಿಸಿಕೊಳ್ಳುತ್ತಿದೆ ಎಂದು! ಆ ಕ್ಷಣದಲ್ಲಿಆಕಾಶ ಮತ್ತು ಭೂಮಿಒಂದೇ ಕಥೆಯ ಎರಡು ಪುಟಗಳೆಂದು ತಿಳಿಯಿತು. ವಿಮಾನ ಇನ್ನೂ ಮೇಲೇರಿತು. ಮೋಡಗಳ ಹೊಟ್ಟೆಯೊಳಗೆನಾವು ಹಕ್ಕಿಗಳಂತೆ ತೇಲುತ್ತಿದ್ದೆವು. ಅಲ್ಲಿಮೇಲಿಲ್ಲ, ಕೆಳಗಿಲ್ಲ;ಹತ್ತಿರವಿಲ್ಲ, ದೂರವಿಲ್ಲ;ಕೇವಲ ನೀಲಿ— ಅದರೊಳಗೆಬಿಳಿಯ ಕನಸುಗಳು. ನಾನು ಕಣ್ಣುಮುಚ್ಚಿದೆ. ಒಮ್ಮೆನಾನು ಹಾರಬೇಕೆಂದಿದ್ದೆ. ಒಮ್ಮೆನಾನು ಹಾಡಬೇಕೆಂದಿದ್ದೆ. ಒಮ್ಮೆನನ್ನೊಳಗಿನ ಎಲ್ಲ ಗಡಿಗಳನ್ನು ದಾಟಬೇಕೆಂದಿದ್ದೆ. ಆದರೆ ಜೀವನರೆಕ್ಕೆಗಳನ್ನು ಕೊಡಲಿಲ್ಲ. ಇಂದು ತಿಳಿಯಿತು— ಜೀವನ ರೆಕ್ಕೆ ಕೊಡಲಿಲ್ಲವೆಂದಲ್ಲ;ಅದು ರೆಕ್ಕೆಗಳನ್ನುಬೇರೊಂದು ರೂಪದಲ್ಲಿ ಕೊಟ್ಟಿತ್ತು. ಕನಸಾಗಿ ಕೊಟ್ಟಿತ್ತು.ಕವಿತೆಯಾಗಿ ಕೊಟ್ಟಿತ್ತು.ಕಣ್ಣಾಗಿ ಕೊಟ್ಟಿತ್ತು. ಹೀಗಾಗಿನಾನು ಹಕ್ಕಿಯಾಗಲಿಲ್ಲ— ನನ್ನ ಕಣ್ಣುಗಳೇ ರೆಕ್ಕೆಗಳಾದವು. ವಿಮಾನ ಮೋಡವನ್ನು ದಾಟುತ್ತಿದ್ದಂತೆನನ್ನೊಳಗೂ ಏನೋ ದಾಟಿತು. ಭಯವೊಂದು ಕೆಳಗೆ ಉಳಿಯಿತು. ಆಸೆ ಮಾತ್ರಮೇಲಕ್ಕೆ ಬಂತು. ನಾನು ಆಕಾಶವನ್ನು ನೋಡಲಿಲ್ಲ— ಆಕಾಶವೇ ನನ್ನೊಳಗೆ ಇಳಿಯಿತು. ಜ್ಯೋತಿರ್ಲಿಂಗದಂತೆಕಲ್ಲಿನೊಳಗೆ ಶಕ್ತಿ ಅಡಗಿರುವಂತೆ,ಈ ನೀಲಿಯೊಳಗೂಕಾಣದ ಒಂದು ಮಹಾಶಕ್ತಿ. ಎಷ್ಟು ನೋಡಿದರೂಅನುಭವವೇ ಅನುಭವ. ಹೇಳಲು ಬಂದರೆಪದಗಳು ಬಡವಾಗುತ್ತವೆ. ವರ್ಣಿಸಲು ಕುಳಿತರೆವರ್ಣಗಳೇ ಸೋಲುತ್ತವೆ. ಆಕಾಶವನ್ನುಕವಿತೆಯಲ್ಲಿ ಹಿಡಿಯಬಹುದೇ? ಮೋಡವನ್ನುಕೈಯಲ್ಲಿ ಕಟ್ಟಬಹುದೇ? ನೀಲಿಯನ್ನುಪಾತ್ರೆಯಲ್ಲಿ ತುಂಬಬಹುದೇ? ಇಲ್ಲ. ಅದಕ್ಕೇನಾನು ಮೌನವಾಗಿ ನೋಡಿದೆ. ವಿಮಾನದ ಕಿಟಕಿಯಾಚೆಮೋಡಗಳ ಬಿಳಿ ಬೆಟ್ಟಗಳುಮತ್ತೆ ಮತ್ತೆ ಹುಟ್ಟುತ್ತಿದ್ದವು. ನನ್ನೊಳಗಿನ ಮಗುಅವುಗಳ ಮೇಲೆ ಓಡಾಡುತ್ತಿತ್ತು. ನನ್ನೊಳಗಿನ ಹಕ್ಕಿರೆಕ್ಕೆ ಬಿಚ್ಚುತ್ತಿತ್ತು. ನನ್ನೊಳಗಿನ ಕವಿಒಂದು ಮಾತು ಮಾತ್ರ ಹೇಳುತ್ತಿದ್ದ— “ಭೂಮಿಯ ಮೇಲೆ ಬದುಕುವುದು ಬದುಕು;ಆದರೆಒಮ್ಮೆ ಆಕಾಶವನ್ನು ಒಳಗಿನಿಂದ ನೋಡುವುದುಬದುಕಿನ ಅರ್ಥವನ್ನು ಬದಲಿಸುವುದು.” ವಿಮಾನ ಮುಂದಕ್ಕೆ ಸಾಗಿತು. ಮೋಡಗಳು ಹಿಂದೆ ಸರಿದವು. ಆದರೆಆ ದಿನ ಕಂಡ ಆಕಾಶಹಿಂದೆ ಸರಿಯಲಿಲ್ಲ. ಅದು ಇನ್ನೂ ನನ್ನೊಳಗಿದೆ— ಒಂದು ಅಂತ್ಯವಿಲ್ಲದ ನೀಲಿಯಾಗಿ,ಒಂದು ಬಿಳಿಯ ಮೋಡವಾಗಿ,ಒಂದು ಹಾರಲಾರದ ಹಕ್ಕಿಯ ಕನಸಾಗಿ… ಮತ್ತುವಿಮಾನ ಕಿಟಕಿಯ ಬಳಿ ಕುಳಿತುಮೊದಲ ಬಾರಿಗೆಆಕಾಶವನ್ನು ನೋಡಿದಆ ಪುಟ್ಟ ಆಶ್ಚರ್ಯವಾಗಿ. ವನಜಾಕ್ಷಿ ಬೆಟ್ಟದಾಲೂರು.(ಕಾಶಿ ಅಯೋಧ್ಯೆ ಯಾತ್ರೆ ಸಂದರ್ಭದಲ್ಲಿ ಬರೆದಿದ್ದು  ಇಂದು ಟೈಪಿಸಿದೆ)

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಮೋಡದ ಚಪ್ಪರದ ಕೆಳಗೆ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ರತಿಮ ಶರಣ ಘಟ್ಟಿವಾಳಯ್ಯ ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಘಟ್ಟಿವಾಳಯ್ಯ  ಅಗ್ರ ಪ್ರಸಿದ್ಧ ಶರಣ ಮತ್ತು ವಚನಕಾರರು. ಇವರ ಮೂಲ ಹೆಸರು ಮುದ್ದಣ. ಶರಣ ಘಟ್ಟಿವಾಳಯ್ಯನವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ. ಬಳ್ಳಿಗಾವೆಯು ೧೨ನೆಯ ಶತಮಾನದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಘಟ್ಟಿವಾಳಯ್ಯನವರು ಯೌವನದಲ್ಲಿದ್ದಾಗ ಬಳ್ಳಿಗಾವೆಯ ಸಮೀಪದ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಶಿವನ ಧ್ಯಾನದಲ್ಲಿ ತೊಡಗುತ್ತಾ, ಮದ್ದಳೆಯನ್ನು ಬಾರಿಸುವ ಸೇವೆ (ಕಾಯಕ) ಮಾಡುತ್ತಿದ್ದರು.  ನಂತರದ ದಿನಗಳಲ್ಲಿ ಬೇರೆ ಕಾರಣಗಳಿಂದ ಇವರು ಕಲ್ಯಾಣಕ್ಕೆ ತೆರಳಿ ಬಸವಣ್ಣನವರ ಒಡನಾಡಿಯಾದರು. ವೈವಾಹಿಕ ಜೀವನ ಮತ್ತು ವೈರಾಗ್ಯ ಘಟ್ಟಿವಾಳಯ್ಯನವರು ಆರಂಭದಲ್ಲಿ ಮದುವೆಯಾಗಿ ಸಂಸಾರ ಹೂಡಿದ್ದರು. ಆದರೆ ಇವರ ಹೆಂಡತಿಗೆ ಇವರ ಆಧ್ಯಾತ್ಮಿಕ ಒಲವು ಮತ್ತು ಭಕ್ತಿಯ ತೀವ್ರತೆ ಇಷ್ಟವಾಗಲಿಲ್ಲ. ಅವಳು ಲೌಕಿಕ ಸುಖ ಮತ್ತು ಸಂಪತ್ತಿಗೆ ಆಸೆಪಟ್ಟು ಅನ್ಯ ಪುರುಷನ ಸಂಗ ಬೆಳೆಸಿದಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಆಕರಗಳು ಉಲ್ಲೇಖಿಸುತ್ತವೆ. • ವೈರಾಗ್ಯದ ಹಾದಿ:  ಹೆಂಡತಿಯ ಈ ವಿಷಮ ನಡವಳಿಕೆ ಮತ್ತು ಕೌಟುಂಬಿಕ ಕ್ಲೇಶಗಳಿಂದ ಸಂಪೂರ್ಣವಾಗಿ ಬೇಸತ್ತ ಮುದ್ದಣನು ಲೌಕಿಕ ಸಂಸಾರವನ್ನು ತೊರೆದು ತೀವ್ರ ವೈರಾಗ್ಯ ತಳೆದರು. ನಂತರ ಕಲ್ಯಾಣಕ್ಕೆ ಬಂದು ‘ಘಟ್ಟಿವಾಳಯ್ಯ’ ಎಂಬ ಹೆಸರಿನಿಂದ ಪ್ರಸಿದ್ಧ ಶರಣರಾದರು.  ಸಂಸಾರದ ವಿಷಮ ಪರಿಸ್ಥಿತಿಯಿಂದ ಬೇಸತ್ತು ಸಂಪೂರ್ಣ ವೈರಾಗ್ಯ ತಳೆದ ಇವರು ಕಲ್ಯಾಣದ ಶಿವಶರಣರ ಒಡನಾಡಿಯಾದರು. ಇವರ ಜೀವನ ಮತ್ತು ವ್ಯಕ್ತಿತ್ವದ ಪ್ರಮುಖ ವಿವರಗಳು ಇಲ್ಲಿವೆ: • ಕಾಯಕ:  ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತಾ, ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದರು. ನರ್ತನ ಕಾಯಕದಲ್ಲಿ ತೊಡಗಿರುವಾಗಲೇ ಇವರು ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ. ಕೆಲವೊಂದು ಆಕರಗಳ ಪ್ರಕಾರ ಗಂಧ ತೇಯುವುದು ಕೂಡ ಇವರ ಕಾಯಕವಾಗಿತ್ತು. • ಅಂಕಿತನಾಮ: ಇವರ ವಚನಗಳ ಅಂಕಿತನಾಮ “ಚಿಕ್ಕಯ್ಯಪ್ರಿಯ ಸಿದ್ದಲಿಂಗ” ಅಥವಾ “ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು”. • ವಚನ ಸಾಹಿತ್ಯ: ಕನ್ನಡದಲ್ಲಿ ಇವರ ಸುಮಾರು ೧೪೭ ರಿಂದ ೧೫೦ ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ತತ್ವನಿಷ್ಠೆ, ಸತ್ಯನಿಷ್ಠುರತೆ ಮತ್ತು ಸಮಾಜದ ಡೋಂಗುತನವನ್ನು ತಿದ್ದುವ ವೈರಾಗ್ಯದ ಭಾವನೆಗಳು ಎದ್ದು ಕಾಣುತ್ತವೆ. • ಪ್ರಶಂಸೆ: ಘಟ್ಟಿವಾಳಯ್ಯನವರ ಘನ ವ್ಯಕ್ತಿತ್ವವನ್ನು ಅಲ್ಲಮಪ್ರಭು, ಬಸವಣ್ಣ, ಮೋಳಿಗೆ ಮಾರಯ್ಯ ಮುಂತಾದ ಶ್ರೇಷ್ಠ ಶರಣರು ಕೊಂಡಾಡಿದ್ದಾರೆ. ಶರಣ  ಧರ್ಮದ ಪ್ರಮುಖ ಗ್ರಂಥವಾದ ‘ಶೂನ್ಯ ಸಂಪಾದನೆಯಲ್ಲಿ ಇವರಿಗಾಗಿಯೇ ಒಂದು ಪ್ರತ್ಯೇಕ ಅಧ್ಯಾಯವನ್ನು ಮೀಸಲಿಡಲಾಗಿದೆ. ಘಟ್ಟಿವಾಳಯ್ಯನವರ ಎರಡು ಪ್ರಮುಖ ವಚನಗಳು ಮತ್ತು ಅವುಗಳ ಸರಳ ವಿಶ್ಲೇಷಣೆ ಇಲ್ಲಿದೆ: ವಚನ ೧ ಅಟ್ಟು ಉಣ್ಣಬಲ್ಲವಂಗೆ ಅಡಿಗೆಯ ಹಂಗೇಕೆ? ಬೆಟ್ಟಿ ಬೆಳಗಬಲ್ಲವಂಗೆ ಕತ್ತಲೆಯ ಹಂಗೇಕೆ? ದಿಟ್ಟನಾದ ಭಕ್ತಂಗೆ ಭವದ ಹಂಗೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಚಿಂತನೆ ಈ ವಚನದಲ್ಲಿ ಘಟ್ಟಿವಾಳಯ್ಯನವರು ಸ್ವಾವಲಂಬನೆ ಮತ್ತು ಆಧ್ಯಾತ್ಮಿಕ ದೃಢತೆಯನ್ನು ಸುಂದರವಾದ ಉಪಮೆಗಳ ಮೂಲಕ ವಿವರಿಸಿದ್ದಾರೆ. • ಸ್ವಾವಲಂಬನೆ: ತಾನೇ ಸ್ವತಃ ಅಡುಗೆ ಮಾಡಿ ಉಣ್ಣಲು ತಿಳಿದಿರುವವನಿಗೆ ಮತ್ತೊಬ್ಬರ ಅಡುಗೆಯ ಹಂಗು (ಆಶ್ರಯ) ಇರುವುದಿಲ್ಲ. ತಾನೇ ದೀಪವನ್ನು ಹಚ್ಚಿ ಬೆಳಕನ್ನು ಮೂಡಿಸಬಲ್ಲವನಿಗೆ ಕತ್ತಲೆಯ ಭಯವಾಗಲಿ ಅಥವಾ ಕತ್ತಲೆಯನ್ನು ಓಡಿಸಲು ಬೇರೆಯವರ ಸಹಾಯವಾಗಲಿ ಬೇಕಿರುವುದಿಲ್ಲ. • ಆಧ್ಯಾತ್ಮಿಕಸಂದೇಶ:  ಅದೇ ರೀತಿ, ಭಕ್ತಿಯ ಮಾರ್ಗದಲ್ಲಿ “ದಿಟ್ಟ” (ದೃಢವಾದ ನಿಷ್ಠೆ ಉಳ್ಳವನು) ಆದವನಿಗೆ ಸಂಸಾರದ ಮಾಯೆ ಅಥವಾ ಭವಬಂಧನಗಳ ಭಯವಿರುವುದಿಲ್ಲ. ತಾನೇ ಸ್ವತಃ ಅರಿವನ್ನು ಪಡೆದ ಭಕ್ತನು ಲೌಕಿಕ ಜಗತ್ತಿನ ಹಂಗಿಲ್ಲದೆ ಮುಕ್ತಿಯನ್ನು ಹೊಂದುತ್ತಾನೆ ಎಂಬುದನ್ನು ವಚನಕಾರರು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ವಚನ ೨ ಜ್ಞಾನಿಯೆಂಬೆನೆ ಕರ್ಮ ಬಿಡದು, ಭಕ್ತನೆಂಬೆನೆ ಆಶೆ ಬಿಡದು, ಯೋಗಿಯೆಂಬೆನೆ ಅಂಗ ಬಿಡದು, ಈ ಮೂವರ ನಡಾವಳಿ ಒಂದೂ ಕಾಣೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು. ವಿಶ್ಲೇಷಣೆ ಸಾರ. ಈ ವಚನದಲ್ಲಿ ಘಟ್ಟಿವಾಳಯ್ಯನವರು ಸಮಾಜದಲ್ಲಿ ಕಾಣಸಿಗುವ ಡೋಂಗುತನ ಮತ್ತು ವೈಚಾರಿಕ ಅಸ್ಥಿರತೆಯನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. • ನಕಲಿ ವೇಷಧಾರಣೆ: ಜಗತ್ತಿನಲ್ಲಿ ತಾವೇ ‘ಜ್ಞಾನಿಗಳು’ ಎಂದು ಬೀಗುವವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರು ಇನ್ನೂ ಲೌಕಿಕ ಕರ್ಮಗಳಲ್ಲಿಯೇ ಮುಳುಗಿರುತ್ತಾರೆ. ತಾವು ದೊಡ್ಡ ‘ಭಕ್ತರು’ ಎಂದು ತೋರ್ಪಡಿಸಿಕೊಳ್ಳುವವರ ಮನಸ್ಸಿನಲ್ಲಿ ಆಶೆ, ಆಕಾಂಕ್ಷೆಗಳು ತುಂಬಿರುತ್ತವೆ. ಇನ್ನು ತಾವೇ ‘ಯೋಗಿಗಳು’ ಎಂದು ಕರೆಯಿಸಿಕೊಳ್ಳುವವರಿಗೆ ದೇಹದ ಮೇಲಿನ ಮೋಹ (ಅಂಗಸುಖ) ಹೋಗಿರುವುದಿಲ್ಲ. • ಅಂತರಂಗದ ಶುದ್ಧಿ:  ಕೇವಲ ಬಾಹ್ಯ ವೇಷದಿಂದ ಜ್ಞಾನಿ, ಭಕ್ತ ಅಥವಾ ಯೋಗಿಯಾಗಲು ಸಾಧ್ಯವಿಲ್ಲ. ನುಡಿದಂತೆ ನಡೆಯದ ಈ ಮೂವರ ನಡವಳಿಕೆಯೂ ವ್ಯರ್ಥ ಎಂದು ಮಾರ್ಮಿಕವಾಗಿ ಹೇಳುತ್ತಾ, ಅಂತರಂಗ ಮತ್ತು ಬಹಿರಂಗದ ಶುದ್ಧಿಯೇ ನಿಜವಾದ ಧರ್ಮ ಎಂಬುದನ್ನು ಇಲ್ಲಿ ಪ್ರತಿಪಾದಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ಶರಣರು ಅಲ್ಲಮ ಬಸವಣ್ಣ ಚೆನ್ನಬಸವಣ್ಣ ಯಾವ ಯಾವ ಊರಿನಲ್ಲಿ ಐಕ್ಯವಾದರು ಎಂಬುದನ್ನು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ತಾನು ಕೈಕೊಂಡ ನೃತ್ಯ ಕಾಯಕದಲ್ಲಿ ನಿರತನಾಗಿದ್ದಾಗಲೇ ಬಯಲಾದನು ಎಂದು ತಿಳಿದು ಬರುತ್ತದೆ. ______________________ ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ರಾಮದುರ್ಗ ಪುಣೆ ೯೫೫೨೦೦೨೩೩೮

Read Post »

You cannot copy content of this page

Scroll to Top