ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ತಂದೆ-ತಾಯಿ ವೃದ್ಧಾಶ್ರಮ ಸೇರಲು ಕಾರಣವೇನು? – ಒಂದು ಸತ್ಯದ ವರದಿ.” ವನಜಾ ಮಹಾಲಿಂಗಯ್ಯ

ಸತ್ಯ ಸಂಗಾತಿ ವನಜಾ ಮಹಾಲಿಂಗಯ್ಯ “ತಂದೆ-ತಾಯಿ ವೃದ್ಧಾಶ್ರಮ ಸೇರಲು ಕಾರಣವೇನು? – ಒಂದು ಸತ್ಯದ ವರದಿ.” “ಮಕ್ಕಳನ್ನು ಬೆಳೆಸಲು ತಂದೆ-ತಾಯಿ ಇಡೀ ಬದುಕನ್ನೇ ಸವೆಸುತ್ತಾರೆ, ಕೊನೆಗೆ ಅದೇ ಮಕ್ಕಳು ಅವರಿಗೆ ಮನೆಯಲ್ಲಿ ಒಂದು ಮೂಲೆಯನ್ನೂ ಕೊಡುವುದಿಲ್ಲ.” ಇದು ಒಂದೇ ಕಾರಣದಿಂದ ಆಗುವುದಿಲ್ಲ. ಹಲವು ಕಾರಣಗಳಿವೆ.  ಬದಲಾದ ಕುಟುಂಬ ವ್ಯವಸ್ಥೆಹಿಂದೆ ಜಂಟಿ ಕುಟುಂಬ ಇತ್ತು. ಅಜ್ಜ, ಅಜ್ಜಿ ಮನೆಯ ಆಧಾರ ಸ್ತಂಭವಾಗಿದ್ದರು. ಈಗ ಅಣು ಕುಟುಂಬ (Husband, Wife, One Child). ಇಬ್ಬರೂ ಕೆಲಸಕ್ಕೆ ಹೋಗಬೇಕು, ಮನೆಯಲ್ಲಿ ವಯಸ್ಸಾದವರನ್ನು ನೋಡಿಕೊಳ್ಳಲು ಯಾರೂ ಇಲ್ಲ. “ನಮಗೆ ಆಗುತ್ತಿಲ್ಲ, ಅಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾರೆ” ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ. ಆಸ್ತಿ – ದೊಡ್ಡ ಕಾರಣಇದು ಅತ್ಯಂತ ಕಹಿ ಸತ್ಯ. ತಂದೆ ಆಸ್ತಿಯನ್ನು ಮಕ್ಕಳಿಗೆ ಹಂಚಿದ ಕೂಡಲೇ ತಂದೆಯ ಬೆಲೆ ಕಡಿಮೆಯಾಗುತ್ತದೆ. “ನೀವು ನಿಮ್ಮ ಪಾಲು ಕೊಟ್ಟಾಯಿತು, ಈಗ ನಮ್ಮ ಮನೆಯಲ್ಲಿ ನಿಮ್ಮ ಮಾತು ನಡೆಯುವುದಿಲ್ಲ” ಎನ್ನುವ ಪರಿಸ್ಥಿತಿ ಬರುತ್ತದೆ. ಆಸ್ತಿ ಇರುವವರೆಗೆ ಮಾತ್ರ ತಂದೆ-ತಾಯಿ ಬೇಕು.  ಸೊಸೆ – ಅತ್ತೆ ಜಗಳವಲ್ಲ, ಮಗನ ಮೌನವೇ ಕಾರಣ. ಎಲ್ಲರೂ ಸೊಸೆಯನ್ನು ದೂರುತ್ತಾರೆ, ಆದರೆ ನಿಜವಾದ ಕಾರಣ ಮಗ. ಮಗ ತಾಯಿಯ ಕಡೆಯೂ ನಿಲ್ಲುವುದಿಲ್ಲ, ಹೆಂಡತಿಯ ಕಡೆಯೂ ನಿಲ್ಲುವುದಿಲ್ಲ. ಹೊಂದಾಣಿಕೆ ಮಾಡಲು ಹೋಗದೆ ಸುಲಭದ ದಾರಿ ಹುಡುಕುತ್ತಾನೆ – ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು. ಹೆಂಡತಿಯ ಮಾತಿಗೆ ಬೆಲೆ ಕೊಟ್ಟು, ತಾಯಿಯ ಕಣ್ಣೀರನ್ನು ಮರೆಯುತ್ತಾನೆ. ವಿದೇಶ ಮತ್ತು ನಗರದ ಆಸೆ.ಮಕ್ಕಳು ಬೆಂಗಳೂರು, ಅಮೇರಿಕಾ, ದುಬೈಗೆ ಹೋಗುತ್ತಾರೆ. ಅಲ್ಲಿ ಚಿಕ್ಕ ಮನೆ, ದುಬಾರಿ ಜೀವನ. “ಅಮ್ಮ-ಅಪ್ಪ ಹಳ್ಳಿಯಿಂದ ಬಂದರೆ ನಮ್ಮ Modern Life ಗೆ ಹೊಂದುವುದಿಲ್ಲ” ಎನ್ನುವ ಭಾವನೆ. ತಿಂಗಳು ತಿಂಗಳು ದುಡ್ಡು ಕಳಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುತ್ತಾರೆ. ದುಡ್ಡು ಪ್ರೀತಿಯಾಗುವುದಿಲ್ಲ ಅಲ್ಲವೇ?. ತಂದೆ-ತಾಯಿಯಲ್ಲೂ ತಪ್ಪು ಇರುತ್ತದೆ – ಸತ್ಯವನ್ನು ಒಪ್ಪಿಕೊಳ್ಳೋಣ.ಕೆಲವೊಮ್ಮೆ ತಂದೆ-ತಾಯಿ ಕೂಡ ಮಕ್ಕಳ ಸಂಸಾರದಲ್ಲಿ ಅತಿಯಾಗಿ ಮೂಗು ತೂರಿಸುತ್ತಾರೆ. “ನನ್ನ ಮಗನಿಗೆ ಹೀಗೆ ಮಾಡಬೇಡ, ಹೀಗೆಯೇ ಮಾಡು” ಎಂದು ಸೊಸೆಯ ಪ್ರತಿಯೊಂದು ವಿಷಯದಲ್ಲೂ ಬೈಯ್ಯುವುದು. ಹಳೆಯ ಕಾಲದ ಆಲೋಚನೆಗಳನ್ನು ಈಗಿನ ಮಕ್ಕಳ ಮೇಲೆ ಹೇರುವುದು. ಇದರಿಂದ ಮನೆಯಲ್ಲಿ ಪ್ರತಿದಿನ ಜಗಳ.  ನಮಗೆ ತಾಳ್ಮೆ ಕಡಿಮೆಯಾಗಿದೆ.ಹಿಂದೆ ತಂದೆ-ತಾಯಿ ಗದರಿದರೂ ಮಕ್ಕಳು ಸಹಿಸಿಕೊಳ್ಳುತ್ತಿದ್ದರು. ಈಗ ಸಹಿಸಿಕೊಳ್ಳುವ ಶಕ್ತಿ ಇಲ್ಲ. ವಯಸ್ಸಾದವರು ಮಕ್ಕಳಂತೆ – ಅವರಿಗೆ ಸಿಟ್ಟು ಬರುತ್ತದೆ, ಮಾತು ಪುನರಾವರ್ತಿಸುತ್ತಾರೆ, ಅನಾರೋಗ್ಯದಿಂದ ಹಠ ಮಾಡುತ್ತಾರೆ. ಇದನ್ನು ಅರ್ಥಮಾಡಿಕೊಳ್ಳದೆ “ಕಿರಿಕಿರಿ ಮಾಡುತ್ತಿದ್ದಾರೆ” ಎಂದು ದೂರ ತಳ್ಳುತ್ತೇವೆ. “ಕೊನೆಯ ಮಾತು “ ವೃದ್ಧಾಶ್ರಮದಲ್ಲಿರುವ 90% ತಂದೆ-ತಾಯಂದಿರು ದುಡ್ಡಿಗಾಗಿ ಅಳುವುದಿಲ್ಲ. ಅವರು ಅಳುವುದು – “ನನ್ನ ಮಗ ನನ್ನನ್ನು ಒಂದು ಮಾತು ಕೇಳಲಿಲ್ಲವಲ್ಲ” ಎಂದು. ಪರಿಹಾರ ಒಂದೇ – ತಂದೆ-ತಾಯಿಯನ್ನು ದೇವರಂತೆ ನೋಡಬೇಕಿಲ್ಲ, ಕನಿಷ್ಠ ಮನುಷ್ಯರಂತೆ ನೋಡಿದರೆ ಸಾಕು. ಅವರಿಗೆ ಬೇಕಿರುವುದು ದೊಡ್ಡ ಬಂಗಲೆ ಅಲ್ಲ, ದಿನಕ್ಕೆ 10 ನಿಮಿಷ ಪ್ರೀತಿಯ ಮಾತು.  ಅವರು ನಮ್ಮನ್ನು ನಡೆಸಲು ಕಲಿಸಿದರು, ನಾವು ಅವರನ್ನು ಕೈಹಿಡಿದು ನಡೆಸಬೇಕಾದ ವಯಸ್ಸು ಇದು. ನಿಮ್ಮ ಮನೆಯಲ್ಲಿ ಹಿರಿಯರಿದ್ದಾರೆಯೇ ? ಅವರಿಗೆ ದಿನಾ ಒಂದು ಕರೆ ಮಾಡಿ ಮಾತನಾಡಿಸಿ. ಅದೇ ಅವರಿಗೆ ಮಹಾನವಮಿ ಹಬ್ಬ. ವನಜಾ ಮಹಾಲಿಂಗಯ್ಯ.

“ತಂದೆ-ತಾಯಿ ವೃದ್ಧಾಶ್ರಮ ಸೇರಲು ಕಾರಣವೇನು? – ಒಂದು ಸತ್ಯದ ವರದಿ.” ವನಜಾ ಮಹಾಲಿಂಗಯ್ಯ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂಣ೯ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂಣ೯ ಹಿರೇಮಠ ಗಜಲ್ ನಿನ್ನ ಕಣ್ಣ ಕೊಳದಲಿ ಒಲವಿನ ಹಂಸೆಗಳ ಆಟ ಕಂಡೆನಿನ್ನ ಭಾವಬಿತ್ತಿಲಿ ಪ್ರೇಮದ ಅಕ್ಷರಗಳ ತೋಟ‌ ಕಂಡೆ ಮಂದಹಾಸದಿ ಮುಖಾರವಿ೦ದ ಅರಳಿ ನಗುತಿಹುದುನಿನ್ನಧರಗಳ ದಳದಲಿ ಹೂ ದುಂಬಿಗಳ ಕೂಟ ಕಂಡೆ ಪಿಸು ಮಾತುಗಳ ಪುಳಕವು ಮೈಮನ ಅರಳಿಸುತಿದೆಬಿಗಿದ ಬಾಹು ಬಂಧನದಲಿ ತೋಳುಗಳ ಕಾಟ ಕಂಡೆ ಹಗಲಿರುಳು ಬಿಟ್ಟಿರಲಾರದಂತ ಪ್ರೀತಿಯೇ ತುಂಬಿದೆದೇಹ ದೇಗುಲದ ತುಂಬಾ ಚಿತ್ತಾರಗಳ ಮಾಟ ಕಂಡೆ ನಿನ್ನ ಗುಂಗಿನಲಿ ಹುಚ್ಚಿಯಾಗಿರುವೆ ಕೊಚ್ಚು ವಿರಹಮನ ಮಂದಾರದಲಿ ಸವಿ ನೆನಪುಗಳ ಪುಟ ಕಂಡೆ ಸಲುಗೆಯ ಸರಸ ಸಾಮಿಪ್ಯವೇ ಸ್ವರ್ಗ ನನಗಿಂದುರತಿ ಮನ್ಮಥರ ಒಡನಾಟದಲಿ ಜೀವಿಗಳ ಹಠ ಕಂಡೆ ಅನುಳ ಮನ ಮಂದಾರವು ಅರಳಿದ ಸುಮವಾಗಿದೆಶಿವಪಾರ್ವತಿಯರ ಅನುರಕ್ತ ಹೃದಯಗಳ ತಟ ಕಂಡೆ ಡಾ ಅನ್ನಪೂಣ೯ ಹಿರೇಮಠ

ಡಾ ಅನ್ನಪೂಣ೯ ಹಿರೇಮಠ ಅವರ ಗಜಲ್ Read Post »

ಕಥಾಗುಚ್ಛ

“ಅವ್ವರಸಿ” ಶ್ರೀಧರ ಗಸ್ತಿ ಧಾರವಾಡ ಅವರ ಸಣ್ಣ ಕಥೆ

ಕಥಾ ಸಂಗಾತಿ ಶ್ರೀಧರ ಗಸ್ತಿ ಧಾರವಾಡ “ಅವ್ವರಸಿ”           ಹಗಲನ್ನು ತನ್ನೊಡಲಲ್ಲಿ ಬಾಚಿಕೊಂಡ ರಾತ್ರಿಯ ಸಮಯ. ಅದೇ ತಾನೇ ಊಟ ಮುಗಿಸಿ ಹಾಸಿಗೆಯ ಮೇಲೆ ಒರಗಿದ್ದೆ. ಅವ್ವ ಮತ್ತೇ ನೆನಪಾದಳು. ಲವಲವಿಕೆ ಇಲ್ಲದ ಅವಳ ಮುಖ, ಕೃಶವಾದ ದೇಹ, ಕ್ಷೀಣವಾದ ಧ್ವನಿ ಕಣ್ಣ ಮುಂದೆ ಬಂದಂತಾಯಿತು. ಆ ರೀತಿ ಅವ್ವನನ್ನು ನಾನೆಂದೂ ನೋಡಿರಲಿಲ್ಲ. ನನಗೆ ಅವಳ ಮುಂದೆ ಹೇಳಲೂ ಆಗಲಿಲ್ಲ. ಧ್ವನಿವರ್ಧಕವೇ ಬೇಡವಾದ ಗಟ್ಟಿ ದನಿ ಆಕೆಯದು. ಅಂತಹ ನಮ್ಮವ್ವ ಅಂದು ಸಪ್ಪೆ ಅನಿಸಿದಳು. ಕರುಳು ಹಿಂಡಿದಂತಾಯಿತು. ಮನಸ್ಸಿನ ತಳಮಳದ ನಡುವೆ ಹಾಸಿಗೆಯ ಮೇಲೆ ಹೊರಳಾಡಿದೆ. ಗೋಕಾಕದ ಬಿಸಿಲು, ದೇಹವನ್ನು ಬಳಲಿಸಿತ್ತು. ಆ  ದಣಿವಿಗೆ ನನ್ನ ದೇಹ ಮೆಲ್ಲನೇ ನಿದ್ರೆಗೆ ಜಾರಿತ್ತು. ಫೋನ್ ರಿಂಗಾಯಿತು. ಇಷ್ಟು ಬೇಗ ಬೆಳಗಾಯಿತೇ ಎಂದು ಗಡಿಬಿಡಿಯಿಂದ ಎದ್ದೆ. ಅಕ್ಕ ಸುಮಾಳ ಫೋನು. ಟೈಂ ನೋಡಿಕೊಂಡೇ ಮಧ್ಯರಾತ್ರಿ 2 ಗಂಟೆ.  ನೋಡುತ್ತಲೇ ಕಾಲುಗಳು ಕಂಪಿಸಿದಂತಾಯಿತು. ತುಟಿ ಒಣಗಿತು. ದೇಹ ಸ್ಥಿಮಿತ ಕಳೆದುಕೊಂಡಿತು.‌ ಪಾತಾಳವೇ ಕುಸಿದ ಅನುಭವ.‌ ಬೆವರು ತನಗರಿವಿಲ್ಲದೇ ದಳದಳನೇ ಸುರಿಯುತಿತ್ತು. ಫೋನ್ ರಿಸಿವ್ ಮಾಡಿದೆ. ‘ಏ ಏನು ಸುಮಕ್ಕ?’ ಇಷ್ಟೊತ್ತಿನಲ್ಲಿ ಅಂದೆ. “ಅವ್ವ ಯಾಕೋ ಗಾಬರಿ ಮಾಡಾತಾಳ;ನೀ ಹೆಂಗರೇ ಮಾಡಿ ದೌಡ್ನ ಬಂದಬಿಡು? ಒಂದ ಸವನ ಸಿರದರನ ಕರೆಸು,ಸಿರದರನ ಕರಸು ಅನ್ನಾತಾಳ. ದೊಡ್ಡ ಡಾಕ್ಟರ್ ಬಂದು ಒಳಗ ಕರಕೊಂಡ ಹೋಗಿದಾರು ನೀ ದೌಡ್ನ ಬಂದು ಬಿಡು” ಅಂದಳು. ನನ್ನ ಗಾಬರಿಯ ಮಾತುಗಳಿಗೆ ನನ್ನ ಹೆಂಡತಿಯು  ಎದ್ದು ಕುಳಿತಳು. ನೌಕರಿಗಾಗಿ ಹುಟ್ಟಿದ ಊರನ್ನು ಬಿಟ್ಟಿದ್ದ ನನಗೆ ಸ್ಥಳೀಯರ ಪರಿಚಯ ಕಡಿಮೆ. ಪಕ್ಕದ್ಮನೆಯ ನನ್ನ ಕಸಿನ್  ಶಿವರಾಜನನ್ನು ಎಬ್ಬಿಸಿದೆ. ನಾನು ದಡಬಡನೇ ಬಾಗಿಲು ಬಡಿಯುವ ಸಪ್ಪಳಕ್ಕೆ ಎಲ್ಲರೂ ಎದ್ದರು. ಅವರಿಗೂ ವಿಷಯ ತಿಳಿಸಿದೆ. ತಕ್ಷಣ ಒಂದ ಗಾಡಿ ಬೇಕು ಅಂದೆ. ಆತ ತನ್ನ ಗೆಳೆಯನ ಟ್ರಾಕ್ಸ ತರಿಸಿದ, ನನ್ನ ಹೆಂಡ್ತೀನೂ ಬರ್ತಿನಂದ್ಳು, ನಮ್ಮ ಮಾವಾನೂ ಬಂದ.ಹುಡುಗರನ್ನು ನಮ್ಮ ಸಣ್ಣವ್ವಳಿಗೆ ಒಪ್ಪಿಸಿ ಹೊರಟೆವು.             ಗಾಡಿ ಶಿರಢಾಣ ದಾಟಿ ಘಟಪ್ರಭಾ ಮ್ಯಾಲ ಫಾಲ್ಸ್ ರೋಡಗುಂಟ ಹೊಂಟಿತ್ತು.  ಸುಂಯ್ಯನೇ ಬೀಸುತಿದ್ದ ಗಾಳಿ ಬೇಸಿಗೆಯ ಸಮಯದಲ್ಲಿ ಹಿತಕರವಾಗಿತ್ತು. ನನಗೆ ಮಾತ್ರ ಮೈಯಲ್ಲಿ ನಡುಕ.  ಬೀಸುತಿದ್ದ ಗಾಳಿಯ ವೇಗ ಕ್ರಮೇಣ ಹೆಚ್ಚಾಯಿತು. ಎಲ್ಲರೂ ಮುದುರಿಕೊಳ್ಳುತಿದ್ದರು. ನನಗೆ ಮಾತ್ರ ಬೆವರಿಳಿಯುತಿತ್ತು. ಪದೆಪದೇ ಅವ್ವ ಕಣ್ಣಮುಂದೆ ಬಂದು ನಿಲ್ಲುತಿದ್ದಳು. ಆಕೆಯ ಸಂಕಟ;ಬದುಕಿನುದ್ದಕೂ ಅವಳನುಭವಿಸಿದ ನೋವು, ಆ ದಯನೀಯ ಕರಾಳ ದಿನಗಳು ನೆನಪಾದವು. ದಶಕದ ಹಿಂದೆ ಅಪ್ಪ ಹೋದಾಗಿನ ಸಂಕಟ ನೆನೆಸಿಕೊಂಡು, ಮತ್ತೇ ಕುಸಿದ ಅನುಭವ. ಕಷ್ಟಗಳ ಮೂಟೆ ಹೊತ್ತುಕೊಂಡೇ ಜೀವನ ಸಾಗಿಸಿದ್ದ ನನ್ನವ್ವ, ಹೊರಗೆ ಬಂದ ದಿನಗಳಿವು. ಆ ಎಲ್ಲ ದಿನಗಳು ನನ್ನೊಳಗೆ ಆವಿರ್ಭವಿಸಿ ಕಣ್ಮುಂದೆ ಬಂದಂತಾಯಿತು. ಅವ್ವ ನಾಲ್ಕು ದಿನದ ಹಿಂದೆ ಎದೆನೋವು ಅಂತ ಚಡಪಡಿಸಿದ್ದಳು. ಭಾಳ ತ್ರಾಸ ಅಂತ ಗೊತ್ತಾದ ಕೂಡ್ಲೇ ಕೆಲಸಕ್ಕೆ ರಜಾ ಹಾಕಿ ಬಂದು ಬಿಟ್ಟಿದ್ದೆ.  ಮಾರನೇ ದಿನಾನೇ ಗೋಕಾಕದ ಗಡಗಿ ದವಾಖಾನೇಕ ತೋರಸಾಕಂತ ಬಂದ್ವಿ. ಡಾಕ್ಟರ್ ಚೆಕ್ ಮಾಡಿ ರಕ್ತ ಪರೀಕ್ಷೆ ಮಾಡಾಕ ಬರದ್ರು. ಎಂಡೋಸ್ಕೋಪಿ ಮಾಡಿದ್ರು. ರಿಪೋರ್ಟ್ ಬರಲಿಕ್ಕೆ ಇನ್ನೂ ತಡ ಇತ್ತು. ಅವ್ವ ಊಣಲಾರದಕ್ಕ ನಾವ್ಯಾರೂ ಉಂಡಿದ್ದಿಲ್ಲ. ಆಕಿನss ಎಲ್ಲಾರ್ಗೂ ಊಟ ಮಾಡಲಿಕ್ಕೆ ಹೇಳಿದ್ಲು. ಹಸಿದ ಹೊಟ್ಟೆಗಳಿಗೆ ಏನಾದ್ರೂ ಬೇಕಿತ್ತು. ಗಡಿಬಿಡಿವಳಗ ರೊಟ್ಟಿಗಂಟು ತಂದಿದ್ದಿಲ್ಲ. ರೊಟ್ಟಿ ಖಾನಾವಳಿಗೆ ಬಂದ್ವಿ. ನನಗ  ರೊಟ್ಟಿ ಅಂದ್ರ ಇಷ್ಟಾ; ಅದಕ್ಕ ಅವ್ವ ತನ್ನ ಅಗಲಾಗಿಂದ ಒಂದ ರೊಟ್ಟಿ ತಗದು ನನಗೆ ಹಾಕಿದ್ದು ನೆನಪಾತು, ಯಾಕೋ ದು:ಖ ಉಮ್ಮಳಿಸಿ ಬಂತು, ಕಣ್ಣಾಗಿನ ನೀರು ದಳದಳನೇ ಹರಿತಿದ್ವು. ‘ಅವ್ವ ನಿನಗ ಆರಾಮ ಇಲ್ಲಬೇ ಊಟಾ ಮಾಡು, ಮತ್ತ ಬೇಕಂದ್ರ ತುಗೋಳ್ಳೋಣಂತ’ ಅಂತ ಹೇಳಿದೆ. ಬ್ಯಾಡಾಪಾ ನನಗ ಒಂದ್ರೊಟ್ಟಿ ಸಾಕು ನೀ ಉಣ್ಣ, ಅಂತ ಅಂದ್ಳು. ಯಾಕೋ ಆಕಿ ಧ್ವನಿ ಒಳಗ ಭಯ ಇದ್ದಂಗ ಅನಿಸ್ತು. ನಮ್ಮವ್ವ ಅಂದು ಬ್ಯಾರೇನ ಕಂಡಳು. ಕಡಕ್ಕಾಗಿ ಮಾತಾಡೋ ನನ್ನವ್ವಳ ದನಿ ದನಿವಾರಿಸಿಕೊಳ್ಳಾಕ ಚಾಲು ಮಾಡಿದ್ದು ನನಗ ಗೊತ್ತಾಗಲೇ ಇಲ್ಲ.            ಊಟ ಮಾಡಿ ಮತ್ತೇ ದವಾಖಾನೇಕ ಬಂದ್ವಿ ರಿಪೋರ್ಟ್ ಬಂದಿತ್ತು. ನಿಮ್ಮ ತಾಯಿಗೆ ಹಾರ್ಟ್ ಅಟ್ಯಾಕ್ ಆಗಿದೆ, ಇನ್ನೊಂದಿನ ಲೇಟ್ ಮಾಡಿದ್ರೂ ನಿಮ್ಮವ್ವ ಉಳಿತೀರಕ್ಕಿಲ್ಲ, ಅಂತಾ ಡಾಕ್ಟರ್ ಮಹೇಶ ನನ್ನ ಕರದ ಹೇಳಿದ್ರು. ಅಡ್ಮಿಟ್ ಮಾಡ್ರಿ ಸರಿ ಹೋಗ್ತದ ಅಂದಾಗ ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ನಾವೂ ತಯಾರಿ ಒಳಗ ಬಂದಿದ್ದರಿಂದ ಸುಮಕ್ಕಳಿಗೆ ವಿಷಯ ತಿಳಿಸಿದೆ, ದೊಡ್ಡಕ್ಕ ಮಾದೇವಿನೂ ಬಂದಿದ್ಳು. ಅವ್ವಾಗ ಈ ವಿಷಯಾನ ಹೇಳ್ಲಿಲ್ಲ. ಡಾಕ್ಟರ್ ಆಗಲೇ ಅವರ ಕೆಲಸ ಶುರು ಮಾಡಿದ್ರು. ಅವ್ವಾನ ಕೂಡಾ ಮಾತಾಡ್ತಾ ದೊಡ್ಡಕ್ಕ ಮತ್ತು ಅವರ ಮಕ್ಕಳು ಚುಲೋ ಆಗ್ತಾ ಇರೋದನ್ನ ಮಾತಾಡಿದ್ವಿ. ಸುಮಕ್ಕಳ ಮಗ ವಿನೋದಂತೂ ದೊಡ್ಡ ಸಾಹೇಬ ಆಗ್ತಾನ ತುಗೋಪ ಅಂವ ಶ್ಯಾನ್ಯಾ ಅದಾನ ಅಂದ್ಳು. ತಮ್ಮ ರಾಜಪ್ಪನ ಬಗ್ಗೆ ಮಾತಾಡ್ತಾ ಕುಡಿಲಿಲ್ಲಂದ್ರ ಅದೆಷ್ಟ ಚೆಂದ ಮಾತಾಡ್ತಾನ,ಕುಡದಂದ್ರ ದಾರಿ ಬಿಡ್ತಾನ ನೋಡ ,ಯಾವಾಗ ಚುಲೋ ಆಗ್ತಾನೋ ಏನೋ ಅಂವನ ಮಕ್ಕಳೂ ಹಂಗ ಆಗ್ಯಾವ, ಅಂವನ ಹೆಂಡ್ತಿನೂ ಹಂಗ ಅದಾಳ ಅಂತ ನಮ್ಮವ್ವ ದೊಡ್ಡ ಉಸಿರು ಹಾಕಿದ್ಲು.  ಹೆಂಗರೆ ಮಾಡಿ ಕುಡ್ಯೋದ ಬಿಡಸೋ ಅಂತ ಕೇಳಿಕೊಂಡಳು. ಹಿಂಗ ಮನಿದು, ಅಕ್ಕ ಪಕ್ಕದವರ್ದು,  ಮತ್ತ ಎಲ್ಲಾ ಸಂಬಂಧಿಕರದ್ದು, ಊರಾಗಿನವರ್ದು, ಹುಟ್ಟಿದವರ್ದು, ಸತ್ತವರ್ದು, ಮದುವೆಯಾದವರ್ದು ಹಿಂಗ ಒಂದ್ಸಲ ನಮ್ಮೂರ ರೌಂಡ್ ಹೊಡಿಸಿ ಬಿಟ್ಟಳು ನಮ್ಮವ್ವ.  ನಾ ಊರಿಗೆ ಬಂದಾಗೊಮ್ಮೆ ಹಿಂಗ, ನಮ್ಮವ್ವ  ರಿಪೋರ್ಟ್ ಮಾಡ್ತಿದ್ದಳು. ಆರಾಮ ಇಲ್ಲಾರ್ಕ ನಿನ್ನೆಯಿಂದ ಚಡಪಡಸ್ತಿದ್ದಳು. ಎಲ್ಲಾನೂ ಮಾತಾಡ್ತಾ ಸಂಜೆಯಾಗಿದ್ದು ಗೊತ್ತಾಗಲಿಲ್ಲ.‌ ದಾವಾಖಾನೆಯಲ್ಲಿ  ಪೇಷಂಟ್ ಜೊತೆ ಒಬ್ಬರೇ ಇರಬೇಕಂದ್ರು. ದೊಡ್ಡಕ್ಕ ಯಾವುದೋ ಕೆಲಸದ ಮ್ಯಾಲೆ ಊರಿಗೆ ಹೋಗಬೇಕಿತ್ತು. ನನಗಿಂತ ಸುಮಕ್ಕಳೇss ಅವ್ವನ ಕೂಡ ಇದ್ರ ಒಳ್ಳೆದಂದ್ಕೊಂಡು ಡಾಕ್ಟರ್ ಕೂಡ ಮಾತಾಡಿದೆ.  ಅವ್ರೂ ಸಹ ಒಬ್ರ ಇರ್ರಿ! ನಿಮ್ಮೂರೇನು ಇಲ್ಲೇ ಐತಲ್ಲ ಏನ ಚಿಂತೆ ಮಾಡ್ಬೇಡಿ ಹೋಗಿ ಬರ್ರಿ ಅಂದ್ರು. ಇಬ್ಬರಿಗೂ ಚಾ ತಂದಕೊಟ್ಟೆ, ಹಸಿವು ಇಲ್ಲಾರ್ದಕ್ಕ ರಾತ್ರಿ ಊಟ ಬ್ಯಾಡಂದ್ರು; ಇಬ್ಬರಿಗೂ ನಾಲ್ಕ ಪ್ಲೇನ್ ದೋಸೆ ತಂದಕೊಟ್ಟೆ. ಅವ್ವಾ, ಅಪ್ಪನ ನೆನಸಿಕೊಂಡು ಕಣ್ಣಾಗ ನೀರ ತಂದ್ಲು. ಅಲ್ಲೋ ಎಷ್ಟ ಕಾಳಜಿ ಮಾಡ್ತಿ? ನಿಮ್ಮಪ್ನಂಗ? ಮೊದಲss ಊರಿಗೆ ಹೋಗು, ಸಣ್ಣ ಮಕ್ಕಳದಾವ ನಿನ್ನ ಹೇಂತಿ ಒಬ್ಬಕೀನ ಏನ ಮಾಡ್ಯಾಳು? ಲಾಸ್ಟ್ ಬಸ್ ತಪ್ಪಿದ್ರ ಏನ ಮಾಡ್ತಿ ? ಅಂತ ನನ್ನ ಹೆಂಡತಿ ಮತ್ತು ಮಕ್ಕಳ ಬಗ್ಗೆ ಕಾಳಜಿ ಮಾಡಿದ್ದಳು. ಆಯ್ತಬೇ ನಾ ಬರ್ತಿನಿ ಅಂದಾಗ, ಧಾರವಾಡಕ್ಕೋಗಿ ಈ ಬೇ ಗೀ ಎಲ್ಲ ಕಲತ ಬಂದಾನ ಹೋಗೋಗ ದೌಡ ಅಂದ್ಳು. ಮುಗುಳ್ನಗ್ತಾ ಹೊರಗ ಬಂದೆ. ಮತ್ಯಾಕೋ ಕರದ್ಳು, “ಮಂಜವ್ವಗ ಫೋನ್ ಮಾಡಿದ್ದೇನೋ ಅಂದ್ಳು” ‘ಇಲ್ಲ’ ಅಂದೇ, “ನೋಡ ಆಕೀssನ ಮರೀತೇರಪಾ ನೀವುsss? ಗರೀಬ ಮಗಳ ಆಕಿ, ಹುಚ್ಚೇರಂತಾಕಿ, ಆಕಿ ಕಡೆನೂ ದೇಖರೇಕಿ ಇರಲಿಪಾ” ಅಂದ್ಲು. ಆಕಿ ಮಾತೆಲ್ಲಾ ನೆನಪಾಗಿ ಅಳು ಬಂತು ತಡಕ್ಕೋಳ್ಳಾಕಾಗಲಿಲ್ಲ‌.ಜೋರಾಗಿ ಅತ್ತುಬಿಟ್ಟೆ.  ಅಣ್ಣ ಶಿವರಾಜ ನನ್ನ ಬೆನ್ನಮೇಲೆ ಕೈಯಾಡಸ್ತಾ ಇದ್ದ.            ಆಸ್ಪತ್ರೆ ಮುಂದ ನಮ್ಮ ಟ್ರ್ಯಾಕ್ಸ್ ನಿಂತಾಗ, ಸರಿರಾತ್ರಿ ಇದ್ದುದರಿಂದ ಜನರೇನೂ ಇರಲಿಲ್ಲ.  ಸುಮಕ್ಕ ಬಾಗಲ ಹತೇಕ ನಿಂತು ನಮಗಾಗಿ ಕಾಯ್ತಾ ಇದ್ಳು. ನರ್ಸಗಳು ಮೊದಲಿಗೆ ಅವ್ವಾನ ನೋಡಾಕ ಬಿಡ್ಲಿಲ್ಲ. ಡಾಕ್ಟರ್ ಗೆ ಭೇಟಿಯಾಗ್ರಿ ಅಂದ್ರು. ಡಾಕ್ಟರ್ರೆ ನಮ್ಮತ್ತ ಬರುವುದು ಕಾಣಿಸಿತು. ಕನ್ನಡಕ ಮೇಲೇರಿಸುತ್ತಾ, “ಸಾರಿ ಸರ್, ನಿಮ್ಮ ಅವ್ವಾರ್ನ ಉಳಿಸಿಕೊಳ್ಳೋಕಾಗಲಿಲ್ಲ. ಹನ್ನೆರಡು ಗಂಟೆ ಹೊತ್ತಿಗೆ ಮತ್ತೇ ಸಿವಿಯರ್ ಅಟ್ಯಾಕ್ ಆಯ್ತು, ಪ್ರಯತ್ನ ಮಾಡಿದ್ವಿ ಕೆಲಸ ಆಗಲಿಲ್ಲ”. ಡಾಕ್ಟರ್ ಹೇಳಿದ ಮಾತು ಕೇಳಿ ಗರ ಬಡಿದವನಂತೆ ನಿಂತುಬಿಟ್ಟೆ. ಸುಮಕ್ಕ ತನ್ನ ದು:ಖದ ಕೋಡಿಯನ್ನು ಹರಿಬಿಟ್ಟಿದ್ದಳು. ಡಾಕ್ಟರ್ ಕೈಹಿಡಿದಾಗಲೇ ನನಗೆ ಎಚ್ಚರ ಬಂದಂತಾಯಿತು. ಅವ್ವ ಮಲಗಿದ್ದ ವಾರ್ಡ್ ಕಡೆ ಓಡೋಡಿ ಹೋದೆವು.  ಕತ್ತಲೆಗೆ ಹೆದರುತಿದ್ದ ನಮ್ಮವ್ವ ಅದರೊಟ್ಟಿಗೆ ಒಂದಾಗಿದ್ದಳು. ಅವ್ವ ಅವ್ವ ಅಂತಾ ಕೂಗಿದೇವು. ಅದಾವುದು ಅವಳಿಗೆ ಕೇಳಿಸುತ್ತಲೇ ಇಲ್ಲ. ಅಚ್ಚ ಕಪ್ಪು ನೆಲದ ವಾಸನೆಯ ಘಮಲಿನಲ್ಲಿ ಬೆಳೆದ ನನ್ನವ್ವ, ಕಪ್ಪು ಛಾಯೆಯ ಬೀರಿ, ಕೈ ಬೀಸಿ ನಗುನಗುತ ಮರೆಯಾದಂತೆ ಕಂಡಳು. ಅಪ್ಪನ ಕಷ್ಟಕ್ಕೆ ನೆರಳಾಗಿ, ಬಡತನವ ಸೋಸಿ, ಗಂಜಿನಂಬಲಿಗಾಗಿ, ಮೈ ಬೆವರಿಂದ ಬದುಕು ಕಟ್ಟಿದವಳು. ಹರಕು ಸೀರೆಗೆ ತೇಪೆ ಹಾಕಿಕೊಂಡು ಅಪ್ಪನ ಹೊಸ ಧೋತರಕೆ  ಆಸರೆಯಾದವಳು. ಅಪ್ಪನ ಜೊತೆಗೂಡಿ ನಮ್ಮೆಲ್ಲರ ಬದುಕಿಗೆ ನಾಂದಿ ಹಾಡಿದ ನನ್ನವ್ವ,ಇಂದು ಇದ್ದಕಿದ್ದಂತೆ ಎದ್ದು ಹೋದಳು ಅಪ್ಪನೆಡೆಗೆ. ಅಳುವಿನ ಆಕ್ರಂದನ ಆಸ್ಪತ್ರೆಯ ಇತರ ರೋಗಿಗಳ ಎದೆ ಝಲ್ ಎನಿಸಿತು, ಅವರೆಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು. ‘ಅಳಬ್ಯಾಡ್ರಿ ಎಲ್ಲಾರೂ ಒಂದಿನ ಹೋಗೋದss ಐತಿ’, ಎಂದು ನಿನ್ನೆ ಪಕ್ಕದ ಬೆಡ್ ನಲ್ಲಿ ತೀರಿಕೊಂಡ ಅಜ್ಜಿಯ ಬಳಗಕ್ಕೆ ಸಲಹೆ ನೀಡಿದ್ದಳು ನನ್ನವ್ವ. ಒಂದೇ ದಿನದಲ್ಲಿ ವಾರ್ಡಿನ ಎಲ್ಲ ರೋಗಿಗಳನ್ನು ನಗಿಸಿ ನಗುತ್ತಲೇ ಮರೆಯಾದಳು. ಭರವಸೆಯ ಬೆನ್ನೇರಿ ಇನ್ನಷ್ಟು ದಿನ ಬದುಕುವಾಸೆಯಿತ್ತಾಕೆಗೆ; ಕೈಗೂಡಲಿಲ್ಲ ಕೊನೆಗೂ, ಮರಳಿ ಬಂದಳು ತಾ ನಿತ್ಯ ಕುಳಿತು ಹರಟೆ ಹಾಕುವ ಕಟ್ಟೆಗೆ. ಅವಳ ಕಲಕಲ ಮಾತುಗಳು ಮೌನವಾಗಿ ಕುಳಿತವು . ಓಣಿ ಜಗಲಿಯ ಒಡತಿ, ಮಾತಿನಲ್ಲೇ ಕಥೆ ಕಟ್ಟುವ, ಒಡಪು ಹೇಳುವ, ಒಗಟು ಹೇಳಿ ಮಾತಿನಲ್ಲಿ ಜನರನ್ನು ಕಟ್ಟಿ ಹಾಕುವ ನನ್ನವ್ವ ಇಂದಿಲ್ಲ. ಆರತಿ ಎತ್ತುವಾಗಲೊಮ್ಮೆ ಅಡ್ಡ ಬರುತಿದ್ದ ನನ್ನವ್ವ, ಎಲ್ಲರಿಂದ ಒಡಪು ಕಟ್ಟಿ ಗಂಡನ ಹೆಸರು ಹೇಳಿಸುತಿದ್ದಳು. ಗಂಡನ ಹೆಸರು ಹೇಳಲು ನಾಚಿಕೆ ಪಡುತಿದ್ದ ಆ ಕಾಲದಲ್ಲಿ ಕೆಲ ಸಮಯ ಸಂತಸದ ವಾತಾವರಣ ನಿರ್ಮಿಸುತಿದ್ದಳು. ಹೇಳಲು ಬಾರದವರಿಗೆ ತಾನೇ ಹೇಳಿಕೊಡುತಿದ್ದಳು. ಅಂತ ನನ್ನವ್ವಳನ್ನು ನೆನೆಸಿಕೊಂಡು ವಾರಿಗೆಯವರೆಲ್ಲ ಗೋಳಿಟ್ಟು ಅಳುವುದು ಮರುಕ ಹುಟ್ಟಿಸುತಿತ್ತು. ಕುಬಸದ ಶುಭ ಕಾರ್ಯದಿಂದಿಡಿದು  ಹುಟ್ಟಿದ ಕೂಸಿಗೆ ಹೆಸರಿಡುವುದು, ಹೆಣ್ಮಕಳು ದೊಡ್ಡವರಾದಾಗ, ಮದುವೆ ಮುಂಜಿ ಹಿಂಗ ಏನಿದ್ರೂ ನನ್ನವ್ವಳ ಉಪಸ್ಥಿತಿ ಇರುತಿತ್ತು. ಕೋಗಿಲೆಯಂತೆ ಕಪ್ಪಾದರೂ ಅಕ್ಷರದರಿವಿಲ್ಲದ ನನ್ನವ್ವ ಸಾವಿರಾರು ಪದಗಳನ್ನು ಹೇಳುವ ಒಡತಿ.            ಹಿಂಗ ಜಗಲಿಮ್ಯಾಗ ಕುಂದ್ರಿಸಿದ್ದ ನಮ್ಮವ್ವನ  ಮುಂದ ತಮ್ಮ ಅನುಭವದ ಮೂಟೆ ಇಳಿಸಿಕೊಳ್ಳುತಿದ್ದರು. ನೆರೆಹೊರೆಯವರ, ಊರವರ ಒಡನಾಟ ಅವಳ ಒಂಟಿ ಜೀವನಕ್ಕೆ ಬಲ ತುಂಬಿತ್ತು.‌ ಅವಳ  ಬೆಲೆ ಮನೆಯವರಿಗೆ ಅರ್ಥವೇ ಆಗಲಿಲ್ಲ. ಹಿತ್ತಲಗಿಡ ಯಾವತ್ತೂ ಔಷಧಕ್ಕೆ ಬರೋದಿಲ್ಲ ಅನ್ನುವ ಹಾಗೆ ನನ್ನವ್ವ ತನ್ನ ನೋವುಗಳನ್ನು ತನ್ನ ಖುಷಿಯಲ್ಲಿಯೇ ಕಳೆದಳು. ಒಂದೆಡೇ ಕಿರಾತಕ ಮಗನ ಸಂಸಾರ, ಕಲಿಯೆಂದರೇ ಏನೇನೋ ಕಲಿತು ಖಾಸಗಿ ನೌಕರಿಯಲ್ಲಿ ಕೆಲಸ ಮಾಡಿ, ಕುಡಿತವೇ ತನ್ನ ಸರ್ವಸ್ವ ಅಂದ್ಕೊಂಡು ಅದೇ ಪ್ರಸಾದವನ್ನು ತನ್ನ ಮಡದಿ ಮಕ್ಕಳಿಗೆಲ್ಲಾ ಹರಿದು ಹಂಚಿದವ, ಆತ ಬಾಯಿ ಬಿಟ್ಟರೇ ಸಾಕು, ದುಡ್ಡು ಕೊಟ್ಟು ಹುಡುಕಿದರೂ ಸಿಗಲಾರದ ಬೈಗಳು. ಆತನ ಒಡನಾಟವೇ ಬೇಡವೆಂದು ದೂರವಿಡಲಾಗಿತ್ತು. ಆದರೂ ತಾಯಿ ಕರುಳು ಕೇಳಬೇಕಲ್ಲ? ಸದಾ ಅವರ ಏಳ್ಗೆಗಾಗಿ ಹಂಬಲಿಸುತಿದ್ದಳು. ಇನ್ನೊಂದು ಸಿರದರನೆಂಬ ಪ್ರಾಣಿ,  ಬಹಳಷ್ಟು ಓದಿದವ, ಯಾವ ದು:ಶ್ಚಟಗಳಿಲ್ಲದಿದ್ದರೂ ಒಂದರ್ಥದಲ್ಲಿ ಅವ್ವಳಿಂದ ದೂರ ಉಳಿದ ಪಾಪಿ. ಎಲ್ಲದಕ್ಕೂ ಕಾರಣ ಇರಲೇಬೇಕಲ್ಲ.‌ ನನ್ನವ್ವಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವನು. ನಮ್ಮವ್ವ

“ಅವ್ವರಸಿ” ಶ್ರೀಧರ ಗಸ್ತಿ ಧಾರವಾಡ ಅವರ ಸಣ್ಣ ಕಥೆ Read Post »

ಕಾವ್ಯಯಾನ, ಗಝಲ್

ಶಮಾ ಜಮಾದಾರ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಶಮಾ ಜಮಾದಾರ ಗಜಲ್ ನಿನ್ನ ಮಡಿಲಿನಲಿ ಮುಖವಿಟ್ಟು ಅಳಬೇಕೆಂದಿರುವೆಮನಸಿನಲ್ಲಿಯ ತಳಮಳಗಳ ಹೇಳಬೇಕೆಂದಿರುವೆ ಕುಣಿಯೊಳಗಿಳಿಸಿ ಹೊರಟೆ ತಿರುಗಿಯೂ ನೋಡದೆ   ವಿರಹದ ಭಾವವಿಹೀನತೆಯನು ಕೇಳಬೇಕೆಂದಿರುವೆ ಭೂಗರ್ಭದ ಶೀತಲತೆ ನೆನಪಿಸಿದೆ ನಿನ್ನ ಸಡಿಲಪ್ಪುಗೆಬೇಡವಾದ ಬೇಡಿಯ ಸಂಸಾರ ಹೂಳಬೇಕೆಂದಿರುವೆ ಕೊನೆಯ ಉಸಿರಿನ ನಿರಾಳತೆಯ ಖುಷಿ ಹೇಳಲೆಂತುನೆನಪುಗಳ ಸಿರಿ ಸಂಪತ್ತಿನೊಂದಿಗೆ ಬಾಳಬೇಕೆಂದಿರುವೆ ಕೂದಲೆಳೆಯಿಂದ ಶಮೆಯ ಕತ್ತು ಸೀಳಿದ ಕಥೆಯಿದುಪ್ರೀತಿಯಲಿ ಶಹೀದಾಗಿ ಪ್ರೇಮವ ಆಳಬೇಕೆಂದಿರುವೆ ಶಮಾ ಜಮಾದಾರ

ಶಮಾ ಜಮಾದಾರ ಅವರ ಹೊಸ ಗಜಲ್ Read Post »

ಪುಸ್ತಕ ಸಂಗಾತಿ

“ಹಳ್ಳಿ ಎಂಬ ಬಳ್ಳಿ (ತೋಳನೂರು-ಒಂದು ಸಾಂಸ್ಕೃತಿಕ ಅಧ್ಯಯನ)ವಿಶ್ವೇಶ್ವರ ಎನ್‌.ಮೇಟಿ ಮುಂಬಯಿ” ಶಿವಲೀಲಾ ಹುಣಸಗಿ

ಪುಸ್ತಕ ಸಂಗಾತಿ ಶಿವಲೀಲಾ ಹುಣಸಗಿ “ಹಳ್ಳಿ ಎಂಬ ಬಳ್ಳಿ (ತೋಳನೂರು-ಒಂದು ಸಾಂಸ್ಕೃತಿಕ ಅಧ್ಯಯನ) ವಿಶ್ವೇಶ್ವರ ಎನ್‌.ಮೇಟಿ ಮುಂಬಯಿ” ಹಳ್ಳಿ ಎಂಬ ಬಳ್ಳಿ (ತೋಳನೂರು-ಒಂದು ಸಾಂಸ್ಕೃತಿಕ ಅಧ್ಯಯನ)ವಿಶ್ವೇಶ್ವರ ಎನ್‌.ಮೇಟಿ ಮುಂಬಯಿ. ಶ್ರೀ ವಿಶ್ವೇಶ್ವರ ಎನ್ ಮೇಟಿಯವರು ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಪ್ರವೃತ್ತಿಯಲ್ಲಿ ಸಾಹಿತಿ.ಇದೊಂದು ತರ ಭಿನ್ನ ಅಭಿರುಚಿಯಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಲೇಖಕರು.ವೃತ್ತಿ ಬದುಕಿಗೆ,ಪ್ರವೃತ್ತಿ ಮನಸ್ಸಿನ ಸಂತೋಷಕ್ಕೆ ಜೊತೆಗೆ ತಾನು ಇಷ್ಟ ಪಟ್ಟ ಹವ್ಯಾಸವನ್ನು ಇತರರಿಗೂ ಹಂಚುವ ಕಾಯಕದಲ್ಲಿ ತೊಡಗಿರುವುದು ಕಾಯಕ ನಿಷ್ಠೆಯನ್ನು ಅಭಿವ್ಯಕ್ತಗೊಳಿಸುತ್ತದೆ.ಲೇಖಕರಿಗೆ ತನ್ನ ಬಾಲ್ಯದ ನೆನಪುಗಳನ್ನು ಹಚ್ಚಹಸಿರಾಗಿಸಲು ಮತ್ತು ಊರಿನ ಋಣತೀರಿಸಲು ಯಾಕೆ ಒಂದು ಅಧ್ಯಯನ ಕೃತಿ ತರಬಾರದೆಂಬ ಆಲೋಚನೆ; ಸಾಹಿತಿಗೆ ವಿವಿಧ ಆಕರ ಗ್ರಂಥಗಳ ಸಹಾಯದಿಂದ ಭಿನ್ನ ಮಜಲುಗಳಲ್ಲಿ ಅಧ್ಯಯನ ಕಾರ್ಯ ಕೈಗೊಂಡು ” ತೋಳನೂರು- ಒಂದು ಸಾಂಸ್ಕೃತಿಕ ಅಧ್ಯಯನ ಕೃತಿ ಅನಾವರಣಗೊಂಡಿದೆ.ಇದರಲ್ಲಿ ಹಳ್ಳಿಯ ಜೀವನ ಅನುಭವಿಸಿ, ಮುಂಬೈನಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರೂ ಕೂಡ,ಹಿಂದೆ ಕಳೆದ ನೆನಪುಗಳನ್ನು ಬಾಲ್ಯ,ಹುಟ್ಟಿದ ಊರನ್ನು ಮರೆಯದೆ ಅದರ ಅಧ್ಯಯನಕ್ಕೆ ಮನಸ್ಸು ಹಾತೊರೆದಿದ್ದನ್ನು ಸಾಕಾರ ಗೊಳಿಸಿದ ಪರಿ ಶ್ಲಾಘನೀಯ!. ನಗರ ಜೀವನಕ್ಕೆ ಹೊಂದಿಕೊಂಡ ಮೇಲೆ ಹಳ್ಳಿ ಮರೆತು ಹೋಗುವುದು.ಆದರೆ ಲೇಖಕರು ಹಳ್ಳಿಯನ್ನು ಕರುಳ ಬಳ್ಳಿಗೆ ಹೋಲಿಸಿಕೊಂಡು ದಾಖಲಿಕರಣವನ್ನು ಅಚ್ಚುಕಟ್ಟಾಗಿ ಮಾಡಿರುವುದು ಅಭಿನಂದನಾರ್ಹ.. ಹಳ್ಳಿ ಎಂಬುದು ಮನುಷ್ಯನ ಬದುಕಿನ ಬೇರುಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಜೀವಂತ ನೆಲೆ. ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಗ್ರಾಮಜೀವನವು ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಚರಣೆ, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಸಂಬಂಧಗಳ ಮೂಲಕ ವಿಶಿಷ್ಟ ಅಸ್ಮಿತೆಯನ್ನು ಪಡೆದುಕೊಂಡಿದೆ. ಹಳ್ಳಿಯ ಬದುಕು ಕೇವಲ ಜೀವನೋಪಾಯಕ್ಕೆ ಸೀಮಿತವಾಗಿರದೆ, ತಲೆಮಾರುಗಳಿಂದ ಹರಿದುಬಂದ ಅನುಭವ, ಜ್ಞಾನ, ಮೌಲ್ಯ ಮತ್ತು  ನೆನಪುಗಳ ಸಂಗಮವಾಗಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಯೊಂದರ ಸಾಂಸ್ಕೃತಿಕ ಅಧ್ಯಯನವು ಆ ನೆಲದ ಬದುಕಿನ ಒಳನೋಟಗಳನ್ನು ಅರಿಯಲು ಸಹಕಾರಿಯಾಗುತ್ತದೆ. ‘ಹಳ್ಳಿ ಎಂಬ ಬಳ್ಳಿ’ ಎಂಬ ಶೀರ್ಷಿಕೆಯು ಹಳ್ಳಿಯ ಬದುಕಿನ ನಿರಂತರತೆ, ಸಂಬಂಧಗಳ ಬೆಸುಗೆ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ರೂಪಕಾತ್ಮಕವಾಗಿ ಸೂಚಿಸುತ್ತದೆ. ಬಳ್ಳಿಯು ಹೇಗೆ ತನ್ನ ಬೇರುಗಳಿಂದ ಪೋಷಣೆ ಪಡೆದು, ಆಸರೆಯನ್ನು ಹಿಡಿದು ಹರಡುತ್ತದೆಯೋ ಹಾಗೆಯೇಅಧ್ಯಯನದ ಪ್ರಮುಖ ಉದ್ದೇಶಗಳು ಬಹುಮುಖ್ಯವಾಗುತ್ತದೆ. # ತೋಳನೂರಿನ ಐತಿಹಾಸಿಕ, ಭೌಗೋಳಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಚಯಿಸುವುದು. ತೋಳನೂರು ಇದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಅಚ್ಚಕನ್ನಡದ ಕೊನೆಯ ಗಡಿ ಗ್ರಾಮ.ಮಹಾರಾಷ್ಟ್ರ ಮತ್ತು ಕರ್ನಾಟಕದ “ಬಾಂಡರಿ”ಯಾಗಿದೆ.2011 ರ ಜನಗಣತಿಯ ಪ್ರಕಾರ 815 ಮನೆಗಳು.ಜನಸಂಖ್ಯೆ 4415 ಇದೆ.ತೋಳನೂರು ಕ್ಷೇತ್ರ ಅಂದಾಜು 2429.62 ಹೆಕ್ಟೇರ್. ಬಾಂಡರಿಯಲ್ಲಿರುವುದರಿಂದ ಎರಡು ರಾಜ್ಯ ಸರ್ಕಾರಗಳ ಸೌಕರ್ಯ ಪಡೆಯುತ್ತಿರುವರು.ತೆರಿಗೆಯನ್ನು ಕೂಡ ಎರಡು ರಾಜ್ಯಗಳಿಗೆ ಕಟ್ಟುತ್ತಾರೆ.ಇಲ್ಲಿಯ ಜನರ ಸಂಬಂಧ ದ್ವಿರಾಜ್ಯಗಳಿಗೆ ಬೆಸೆದುಕೊಂಡಿದೆ. # ತೋಳನೂರಿನ ಹೆಸರಿನ ಉತ್ಪತ್ತಿ,ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಅಸ್ಮಿತೆಯನ್ನು ಗುರುತಿಸುವುದು. ಪ್ರತಿಯೊಂದು ಊರಿಗೂ ಒಂದಿಲ್ಲೊಂದು ಹೆಸರು ಇದ್ದೆ ಇರುತ್ತದೆ.ಅದರ ಹಿನ್ನಲೆಯ ಕಥೆಗಳು ಕೇಳಲು ಉತ್ಸುಕ ಮನಸ್ಸು. ತೋಳನೂರಿಗೂ ಒಂದು ಕಥೆ‌..”ವೃಕ ಶತಕ ಪುರ” ವೃಕ-ತೋಳ,ಶತ- ನೂರು,ಪುರ-ಊರುಅಂದರೆ ನೂರಾರು ತೋಳಗಳು ವಾಸವಿದ್ದ ಊರು.ಇದರಿಂದ ಅಲ್ಲಿ ವಾಸವಿದ್ದ ಕುರುಬ ಕುಟುಂಬಗಳಿಗೆ ಕುರಿಕಾಯುವುದೊಂದು ದೊಡ್ಡ ಸವಾಲು.ಅಂತಹ ಸಂಕಷ್ಟದ ಸಮಯದಲ್ಲಿ ಒಮ್ಮೆ ಶಿವಯೋಗಿಶ್ವರರು ತೋಳಗಳ ಊರಿನ ಮಾರ್ಗವಾಗಿ ಹೋಗುತ್ತಿರುವಾಗ,ಮೂರು ದಿನದಿಂದ ಉಪವಾಸವಿದ್ದ ತೋಳ ಸ್ವಾಮಿಗಳಿಗೆ ಅಡ್ಡಬರಲು, ಸ್ವಾಮಿಗಳು ತೋಳಕ್ಕೆ ಹೋಗಲು ಆಜ್ಞೆ ಮಾಡುತ್ತಾರೆ.ಆದರೆ,ಆ ತೋಳ ಹೋಗುವುದಿಲ್ಲ.ಆಗ ಸ್ವಾಮಿಗಳು ಭಸ್ಮ ವನ್ನು ತೋಳದ ಹಣೆಗೆ ಹಚ್ಚುತ್ತಾರೆ.ತಕ್ಷಣ ‘ತೋಳ’ಮಾಯವಾಗಿ ಹನ್ನೆರಡು ವರುಷದ ಬಾಲಕ ಕಾಣಿಸಿಕೊಂಡು ಗುರುಗಳಿಗೆ ನಮಸ್ಕರಿಸಿ, ನನ್ನ ಶಾಪ ವಿಮೋಚನೆಗೊಳಿಸಿದ್ದಕ್ಕೆ ಧನ್ಯವಾದ ಹೇಳಿ,ತನ್ನ ಜೀವನ ವೃತ್ತಾಂತ ಹೇಳಿ ತಾನು ತನ್ನ ದುರ್ನಡತೆಗೆ ನೂರು ಜನ್ಮಗಳಲ್ಲಿ ತೋಳನಾಗಿ ಹುಟ್ಟುವ ಶಾಪ ಹೊಂದಿದ್ದು.ಇಂದಿಗೆ ನಿಮ್ಮ ದರ್ಶನ ಭಸ್ಮದಿಂದ ನಿಶ್ಯಾಪ ಹೊಂದುವಂತಾಗಿದೆ.ಸೂರ್ಯ,ಚಂದ್ರರಿರುವ ತನಕ ಈ ಊರಿಗೆ “ತೋಳನೂರು” ಎಂಬ ಹೆಸರಿರಲೆಂದು ಬೇಡಿಕೊಂಡಿರುವುದಕ್ಕೆ ಶಿವಯೋಗಿಗಳು ಅವನ ಇಚ್ಛೆಯನ್ನು ಇಡೇರಿಸಿದರೆಂಬ ದಂತಕಥೆಯಿದೆ. ಶಶಿರವಿಗಳುಳ್ಳ ತನಕ ತೋಳಿನ |ಪೆಸರು ನಗರಕೆ ಇತ್ತು ನಡಿಸದು |ಹಸನವಾಯಿತು ಮರ್ತ್ಯಲೋಕಂ ಸಾಕು ಶಿವಪುರಕೆ ||ವಸೆದು ಬೀಳ್ಗೊಡು ಎಂಬ ಮಾತಿಗೆ |ಸುನಗುತ ಸ್ವರ್ಗಕೆ ಕಳುಹಿಸಿ |ಭಸಿತ ಧೂಳಿತ ದೇಶ ಚರಿಸುತ ಬಂದು ಮಣಿಪುರಕೆ”|| ಹಾಗೆಯೇ ಮಹಾಲಕ್ಷ್ಮಿ ಬಾವಿಯ ಕಥೆಯು “ಕೆರೆಗೆ ಹಾರ” ಎಂಬ ಕಥೆಯನ್ನು ನೆನಪಿಸುತ್ತದೆ. # ಊರಿನ ಜನಪದ ಸಾಹಿತ್ಯ, ಮೌಖಿಕ ಪರಂಪರೆ ಮತ್ತು ಆಡುನುಡಿಯ ವೈಶಿಷ್ಟ್ಯಗಳನ್ನು ಸಂಗ್ರಹಿಸುವುದು.ಕುರಟ್ಟಿಯ ಕಥೆ,ಮಹಾಲಕ್ಷ್ಮೀ ಬಾವಿಯ ಕಥೆ. # ಸ್ಥಳೀಯ ಹಬ್ಬಗಳು, ಜಾತ್ರೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ದಾಖಲಿಸುವುದು.ಕಾರಹುಣ್ಣಿಮೆಗೆ ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವುದು.ಮನೆಯಲ್ಲಿ ಇರುವ ಜಾನುವಾರುಗಳಿಗೆ ಪೂಜಿಸುವ ಹಬ್ಬವಾಗಿದೆ. ಮಣ್ಣಿನ ಗುಳ್ಳವ್ವ:- ಆಷಾಢದ ಪ್ರತಿ ಮಂಗಳವಾರ ಗುಳ್ಳವ್ವನ ಮಣ್ಣು ತರುವಾಗ, ” ಗುಳ್ಳೆವ್ವಗ ಮಣ್ಣು ತರಲೇ ಇಲ್ಲಗುಲಗಂಜಿ ಹಚ್ಚಿ ಆಡಲಿಲ್ಲಸುಳ್ಳೆ ಬಂತಲ್ಲವ್ವ ನಾಗರ ಪಂಚಮಿ” ಎಂದು ಹಾಡುತ್ತ ಬುಧವಾರ ಗುಳ್ಳೆವ್ವನನ್ನು ಕಳಿಸುವಾಗ, ” ರೊಟ್ಟಿ ಬುತ್ತಿ ಮಾಡಿಕೊಂಡುಎತ್ತಿನ ಮ್ಯಾಲೆ ಹೇರಿಕೊಂಡುಯಾವಾಗ ಕಂಡೆನವ್ವ ತಾಯಿ ಮಾರಿ” ಎಂದು ಹಾಡುತ್ತ ತೋಟಕ್ಕೆ ಹೋಗಿ ಗುಳ್ಳವ್ವನ ಪೂಜೆ ಮಾಡಿ ಅಲ್ಲೆ ಬಿಟ್ಟು ಊಟಮಾಡಿ ಬರುವುದು.ನಂತರ ನಾಗರ ಪಂಚಮಿಗೆ ಹೊಸ ಮಣ್ಣು ತಂದು ನಾಗಪ್ಪಗ ಹಾಲು ಹಾಕುವುದು. # ಆಹಾರ ಪದ್ಧತಿ, ಉಡುಗೆ-ತೊಡುಗೆ, ವೃತ್ತಿ ಮತ್ತು ಜೀವನಶೈಲಿಯ ಸಾಂಸ್ಕೃತಿಕ ಮಹತ್ವವನ್ನು ಅಧ್ಯಯನ ಮಾಡುವುದು. # ಗ್ರಾಮೀಣ ಬದುಕಿನ ಮೇಲೆ ಆಧುನಿಕತೆಯ ಪ್ರಭಾವವನ್ನು ಸಾಮಾಜಿಕ ಜನಜೀವನವನ್ನು  ವಿಶ್ಲೇಷಿಸುವುದು. # ಸ್ಥಳೀಯ ಸಂಸ್ಕೃತಿಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯದ ಸಾಧ್ಯತೆಗಳನ್ನು ಗುರುತಿಸುವುದು.ತೋಳನೂರಿನಲ್ಲಿ ಮಂದಿರಗಳು,ಮಠಗಳು ತಮ್ಮದೇ ಆದ ಸಾಂಸ್ಕೃತಿಕ ಸಾಂಪ್ರದಾಯಿಕ ಶೈಲಿಯನ್ನು ಹೊಂದಿವೆ.ಒಟ್ಟು 20 ದೇವಾಲಯಗಳು3 ಮಠಗಳನ್ನು ಹೊಂದಿದೆ. # ಸ್ವಾತಂತ್ರ್ಯ ಹೋರಾಟಗಾರರು,ಸಾಹಿತಿಗಳು, ಕಲಾವಿದರು, ಸಾಧಕರ ಪರಿಚಯ.ಶ್ರೀ ಶಂಕರೆಪ್ಪಾ ಹುಲಮನಿ,ಶ್ರೀ ಚನ್ನಬಸಪ್ಪಾ ಮಳಸಿದ್ದಪ್ಪಾ ನಿರಾಳಿ,ಶ್ರೀ ಶಂಕೆಗೌಡ ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರರು.ಸಾಹಿತಿಗಳು:- ಶ್ರೀ ಚೆನ್ನಬಸವ ಕವಿ,ಶ್ರೀ ಬಿ.ಬಿ.ಜೇವೂರು,ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ವಿಶ್ವೇಶ್ವರ ಮೇಟಿ, # ಆಕರ ಗ್ರಂಥಗಳು. ತೋಳನೂರಿನ ಸಾಂಸ್ಕೃತಿಕ ಅಧ್ಯಯನವು ಅಲ್ಲಿನ ಸ್ಥಳೀಯ ಜೀವನದ ವಿವಿಧ ಆಯಾಮಗಳನ್ನು ಗುರುತಿಸಿ, ಅವುಗಳ ಹಿಂದಿರುವ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನವಾಗಿದೆ. ಹಿರಿಯರ ಅನುಭವಗಳು, ಮೌಖಿಕ ಪರಂಪರೆಗಳು, ಸ್ಥಳೀಯ ಆಚರಣೆಗಳು ಹಾಗೂ ಜನಜೀವನದ ದಾಖಲೆಗಳ ಮೂಲಕ ಊರಿನ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಗುರುತಿಸುವುದು ಈ ಅಧ್ಯಯನದ ಪ್ರಮುಖ ಆಶಯವಾಗಿದೆ.ಕಾಲ ಬದಲಾದಂತೆ ಗ್ರಾಮೀಣ ಬದುಕಿನಲ್ಲಿಯೂ ಅನೇಕ ಬದಲಾವಣೆಗಳು ಸಂಭವಿಸುತ್ತಿವೆ. ಶಿಕ್ಷಣ, ಉದ್ಯೋಗ, ವಲಸೆ, ತಂತ್ರಜ್ಞಾನ, ಮಾಧ್ಯಮಗಳು ಮತ್ತು ಆಧುನಿಕ ಜೀವನಶೈಲಿಯ ಪ್ರಭಾವದಿಂದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಜೀವನಮೌಲ್ಯಗಳಲ್ಲಿ ಪರಿವರ್ತನೆಗಳು ಕಂಡುಬರುತ್ತಿವೆ. ಕೆಲವು ಪರಂಪರೆಗಳು ಹೊಸ ರೂಪದಲ್ಲಿ ಮುಂದುವರಿದರೆ, ಇನ್ನು ಕೆಲವು ಕ್ರಮೇಣ ಮರೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ತೋಳನೂರಿನ ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವುದರ ಜೊತೆಗೆ, ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಅದರ ಸ್ವರೂಪವನ್ನು ವಿಶ್ಲೇಷಿಸುವ ಅಗತ್ಯವೂ ಇದೆ.  ಅಧ್ಯಯನವು ತೋಳನೂರಿನ ಸಾಂಸ್ಕೃತಿಕ ಬದುಕನ್ನು ಕೇವಲ ಪರಿಚಯಿಸುವುದಕ್ಕೆ ಸೀಮಿತವಾಗದೆ, ಅದರ ವೈಶಿಷ್ಟ್ಯಗಳು, ನಿರಂತರತೆ ಮತ್ತು ಬದಲಾವಣೆಗಳನ್ನು ಗುರುತಿಸುವ ದಿಸೆಯಲ್ಲಿ ಸಾಗುತ್ತದೆ. ಕ್ಷೇತ್ರಕಾರ್ಯ, ಸಂದರ್ಶನ, ನೇರ ವೀಕ್ಷಣೆ, ಮೌಖಿಕ ಆಕರಗಳ ಸಂಗ್ರಹ ಹಾಗೂ ಲಭ್ಯವಿರುವ ಲಿಖಿತ ದಾಖಲೆಗಳ ಪರಿಶೀಲನೆಯ ಮೂಲಕ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ‘ಹಳ್ಳಿ ಎಂಬ ಬಳ್ಳಿ — ತೋಳನೂರು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಈ ಪ್ರಯತ್ನವು ಸ್ಥಳೀಯ ಸಂಸ್ಕೃತಿಯ ವಿವಿಧ ಆಯಾಮಗಳನ್ನು ದಾಖಲಿಸಿ, ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ವಿಶ್ಲೇಷಿಸಿ, ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಹಳ್ಳಿಯ ನೆಲಮೂಲದ ಬದುಕಿನ ಸೊಗಡು, ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕಾಲಾನುಕ್ರಮದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಅರಿಯುವ ಮೂಲಕ ಸ್ಥಳೀಯ ಅಸ್ಮಿತೆಯನ್ನು ದಾಖಲಿಸುವುದು ಈ ಅಧ್ಯಯನದ ಆಶಯವಾಗಿದೆ.ಇನ್ನೂ ಹೆಚ್ಚೆಚ್ಚು ಬರಹಗಳು ಕನ್ನಡ ಸಾಹಿತ್ಯ ಕಣಜವನ್ನು ಸೇರುವಂತಾಗಲಿ ಎಂದು ಹಾರೈಸುವೆ. ಶಿವಲೀಲಾ ಹುಣಸಗಿಯಲ್ಲಾಪುರ.

“ಹಳ್ಳಿ ಎಂಬ ಬಳ್ಳಿ (ತೋಳನೂರು-ಒಂದು ಸಾಂಸ್ಕೃತಿಕ ಅಧ್ಯಯನ)ವಿಶ್ವೇಶ್ವರ ಎನ್‌.ಮೇಟಿ ಮುಂಬಯಿ” ಶಿವಲೀಲಾ ಹುಣಸಗಿ Read Post »

You cannot copy content of this page

Scroll to Top