ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ಎನ್ಮಾಡಲತಿರೀ ಅಕ್ಕೋರೇ ಅಂತ ಬಾಜು ಮನಿ ಅಕ್ಕೋರು ಬಾಗಿಲು ಬಡಿದರು. ಬರ್ರಿ ಒಳಗ ಅಂದೆ , ಇಲ್ರಿ ..ಬಾಳ ಕೆಲಸದ.ನಾಳಿಗಿ ನಮ್ಮನಿಗಿ ಅಪ್ಪೋರು ಹೊಂಟಾರ , ಪಾದಪೂಜಾ ಅದ.ಬರ್ರಿ.ಊಟ ಅಲ್ಲೆ ಮಾಡಬೇಕು ನೋಡ್ರಿ ಅಂದು ಗಡಿಬಿಡಿದಾಗ ಹೋದ್ರು. ಈಗ ಕೆಲ ದಿವ್ಸದಿಂದ ನನ್ನ ಪೋನ್ ದಾಗ ಬರಿ ಅಪ್ಪಗೋಳ ( ಮಠಾಧಿಶರ ) ಮಾರಿನೆ ಕಾಣಲತದ.ಯಾಕಂದ್ರ ಮೊನ್ನೆ ಕಲ್ಬುರ್ಗಿ ದಾಗ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿದ್ರು.ಭಾಳ ಜನಗಳನ್ನ ಸೇರಿಸಿದ್ರು.ಅದರ ಪ್ರಮುಖ ಸ್ವಾಮಿಯೊಬ್ರು ಕಮ್ಯೂನಿಸ್ಟ್ ವಿಚಾರಧಾರೆಯುಳ್ಳವ್ರಿಗೆ ಬೈದಿದ್ದೆ ಬೈದದ್ದು. ಹಿಂದೂಗಳಂದ್ರ ಅವರ ಮಾತಿಗಿ ವಿರುದ್ದ ಆಗಿದ್ದವ್ರಿಗಿ ಬೈಯೋದು ಅಂತ ನನಗ ಆ ಸಮಾವೇಶದಿಂದ ತಿಳಿತು.ವಿರುದ್ದ ಅಂದ್ರ ಬಸವಾದಿ ಶರಣರು ಸನಾತನ ಹಿಂದೂ ಪದ್ದತಿಗಳಾದ ಹೋಮ , ಹವನ , ಗುಡಿ ಕಟ್ಟೋದು , ದೇವರಮೂರ್ತಿ ಮೆರೆಸಿ ನೀರಾಗ ಬಿಸಾಡೋದು ಇನ್ನೂ ಅನೇಕ ಆಚರಣೆಗಳನ್ನ ನಿರಾಕರಿಸಿದ್ರೂ.ಸಮಾಜದಾಗಿನ ಮೂಢ ನಂಬಿಕೆ ಹೋಗಲಾಡಿಸುವದಕ್ಕ ಪ್ರಯತ್ನಿಸಿದ್ರು.ಅದಕ್ಕೆ ಈ ಹೋಮ ಹವನ ಪೂಜಾ ಗುಡಿ ಇಂತವಕ್ಕೆಲ್ಲ ನಿಮ್ಮ ಸಮಯ ವಿನಿಯೋಗಿಸಬ್ಯಾಡ್ರಿ , ಅದೇ ಸಮಯ ದುಡಿಲಕ್ಕ ಮಿಸಲಾಗಿಡ್ರಿ , ದುಡಿರಿ , ಉಣ್ರಿ , ಬದುಕ್ರಿ ಅಂತ ಸರಳವಾಗಿ ಹೇಳಿದ್ರು. ಆದ್ರ ಇವೆಲ್ಲ ನಮ್ಮ ದೇಶದ ಸಂಪ್ರದಾಯ , ಸಂಸ್ಕೃತಿ ಅಂತ ಮುಂದುವರೆಸಿಕೊಂಡು ಬಂದವ್ರು , ಶರಣರ ಆಶಯಗಳಿಗಿ ವಿರುಧ್ದವಾದ ಧೋರಣೆ ಹೊಂದಿದವ್ರು. ಪ್ರಶ್ನಿಸಿದ್ರ , ಬಸವಾದಿ ಶರಣರು ಎಲ್ಲರಿಗೂ ಬೆರಕಾದವ್ರು . ಬರೀ ನೀವೇ ಅವರ ಪೆಟೆಂಟ್ ತಗೊಂಡಿರೇನ್ , ಅಂತ ಕೇಳತಾರ ಒಬ್ಬ ಕಟ್ಟಾ ಹಿಂದೂ ಸ್ವಾಮಿ ಗಳು. ಹೌದು ಬಸವಾದಿ ಶರಣರು ಸಮಾಜ ಸುಧಾರಕರು. ಎಲ್ಲರಿಗೂ ಆದರ್ಶ ಪ್ರಾಯರು.ಅವರ ವಿಚಾರಗಳನ್ನು ಪಾಲಿಸದ ನೀವು ಯಾಕ ಅವರ ಪೆಟೆಂಟ್ ತಗೋತಿರಿ.ನಿಮ್ಮ ವಿಚಾರಧಾರೆ ಬೆಂಬಲಿಸೋ ಇನ್ನೂ ಭಾಳ ಜನ ಸಮಾಜ ಸುಧಾರಕರಿದ್ದಾರ.ಅವರ ಪೆಟೆಂಟ್ ನೀವೇ ತಗೋರಿ ನಮಗ ಬ್ಯಾಡ. ಮೂಢ ನಂಬಿಕೆ ಅಂದರ , ದಬ್ಬಾಳಿಕೆಗೆ ಪ್ರಶ್ನಿಸಿದ್ರ , ಸಮಾನತೆ ಬೇಕು ಅಂದ್ರ ಕಮ್ಯೂನಿಸ್ಟ್ ಅಂತ್ರಿ. ಎಲ್ಲಾನೂ ಸುಲಭವಾಗಿ ಸಿಕ್ರ ಯಾರು ಯಾಕ ಕಮ್ಯೂನಿಸ್ಟ್ ಆಗತಾರ. ಹೋರಾಡಿದ್ರ ಮಾತ್ರ ಸಿಗತದ ಅಂದ್ರ ಕಮ್ಯೂನಿಸ್ಟ್ ಆಗ್ಲೇಬೇಕಾಗತದ. ನಾವೆಲ್ಲರೂ ಹಿಂದೂ ಒಂದು ಬಂಧು ಅಂತ ಹೆಳೊದು ಚಲೋ ಅನಿಸ್ತದ ನಮಗೂ . ಹಿಂದೂ ಅಂದ್ರ ಬರಿ ಬ್ಯಾರೆ ಧರ್ಮದವ್ರಿಗಿ ಬೈಯೋದು , ಪಾಕಿಸ್ತಾನಕ್ಕೆ ಹೋಗಿ ಅನ್ನೊದು , ನಮ್ಮ ದೇಶದಾಗ ಬರೀ ಗುಡಿಗಳು ಮಾತ್ರ ಇರಬೇಕು ಅನ್ನೋದು ಹಿಂದುತ್ವಾನ. ಮತ್ತೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರದ ಯಾವ ಧರ್ಮವೂ ವ್ಯರ್ಥ. ನೀವು ಹೇಳಿದಂಗ ಎಲ್ಲರ ಆಚರಣೆ ಗೌರವಿಸೋಣ.ಪೂಜಾ ಮಾಡ್ಲಿ , ಗುಡಿಗೆ ಹೋಗ್ಲಿ , ಮಠಾಧಿಶರ ಕಾಲು ತೊಳ್ದು ನೀರು ಕುಡಿಲಿ..ಅವರವರ ಭಕುತಿಗೆ ಬಿಡೋಣ.ಆದ್ರ ಇವೆಲ್ಲ ಮಾಡದಿದ್ರ ಅವರನ್ನು ಹಿಂದುತ್ವದಿಂದ ದೂರ ಇಡಲು ನೀವು ಯಾರು..! ಒಂದು ವೇಳೆ ಈ ಎಲ್ಲಾ ಅಡಚಣೆಗಳು ಒಪ್ಪಿಕೊಳ್ಳೊಣ , ಇದರಿಂದ ಸಮಾಜಕ್ಕ ಆಗುವ ಉಪಯೋಗ ಎನು ಹೇಳ್ರಿ. ಬಾಜು ಮನಿ ಅಕ್ಕೋರು ಸ್ವಾಮಿಗಳಿಗಿ ಕರದು ಪಾದಪೂಜಿ ಮಾಡಿ , ತುಲಾಭಾರ ಮಾಡಿದ್ರು.ಇದರಿಂದ ಅವ್ರಿಗಿ ಮನಸ್ಸಿಗಿ ನೆಮ್ಮದಿ ಆಯ್ತು.ಸಮಾಜದಾ್ಗ ಅವ್ರ ಗೌರವ ಹೆಚ್ಚಾಯಿತ.ಮತ್ತ ಕೆಲ ಜನ್ರಿಗಿ ನಾವೂ ಗುರುಗಳಿಗಿ ನಮ್ಮ ಮನಿಗಿ ಕರದು ಪಾದಪೂಜಾ ಮಾಡಬೇಕು ಅನಿಸ್ತು.ಅಪ್ಪೋರ ಕೃಪೆಗೆ ಪಾತ್ರ ಆದೇವು ಅಂತ ಅಭಿಮಾನ ಆಯ್ತು.ಇನ್ನೂ ಎನೇನೋ ಆಯ್ತು. ಆದ್ರ ಇದರಿಂದ ಯಾರಿಗಿ ಏನು ಪ್ರಯೋಜನ ಆಯ್ತು.ಸಮಾಜದಲ್ಲಿ ಏನು ಸುಧಾರಣೆ ಆಯ್ತು.ಮುಂದಿನ ಮಕ್ಕಳಿಗಿ ಎನು ಸಂದೇಶ ಹೋಯ್ತು. ಹಿಂದೂಗಳು ಸನಾತನ ಧರ್ಮದ ಆಚರಣೆ ಮಾಡಬೇಕು ಅಂತ ಒತ್ತಾಯ ಮಾಡುವವರಿಗೆ ಒಂದು ಪ್ರಶ್ನೆ .ಇದರಿಂದ ಹೊಟ್ಟೆ ತುಂಬತದೇನು. ಯಾರಿಗಾದ್ರೂ ಉದ್ಯೋಗ ಸಿಗಬಹುದಾ.ಸಮಾಜದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದಾ.. ಈಗ ಎಲ್ಲರ ಆರ್ಥಿಕ ಪರಿಸ್ಥಿತಿ ಉತ್ತಮ ಆಗ್ಯಾದ.ಯಾರೂ ಪೂಜಾ ಪಾಠಗಳಿಗಿ ಖರ್ಚ ಮಾಡ್ಲಿಕ್ಕ ಲೆಕ್ಕಹಾಕತಿಲ್ಲ ಬಿಡ್ರಿ.ಈಗ ಎಲ್ಲಾರ ಮನ್ಯಾಗೂ ದೇವ್ರಿಗೆ ಒಂದು ಪ್ರತ್ಯೇಕ ರೂಂ ಇರತದ.ಅಲ್ಲಿ ದೇವರ ಅಲಂಕಾರ , ಬೆಳ್ಳಿ ಬಂಗಾರದ ಮೂರ್ತಿಗಳು ಭಕ್ತಿಯ ವಿವಿಧ ಭಾವಗಳೆಲ್ಲ ಅಲ್ಲಿಂದ ಅವರವರ ಪೋನ್ ಗಳ ಸ್ಟ್ಯಾಟಸ್ ಗಳ ಮೂಲಕ ಎಲ್ಲರಿಗೂ ತಲುಪ್ತಾವ. ಭಕ್ತಿ ಎಂಬುದು ತೊರುಂಬುವ ಲಾಭ ಎಂಬುದು ಎಷ್ಟು ನಿಜಾನೋ , ಇವೆಲ್ಲ ಮಾಡ್ಲಾರದವ್ರಿಗಿ ಸಮಾಜ ಎಷ್ಟು ಪ್ರತ್ಯಕವಾಗಿ ನೋಡತದ ಅನ್ನೊದು ಅಷ್ಟೆ ನಿಜ. ಈಗ ಹಿಂದೂ ಸಮಾಜದ ಆಚರಣೆಗಳನ್ನು ಆಚರಿಸೊದು ಬಿಡೊದು ಅವರವರ ಇಷ್ಟಕ್ಕೆ ಬಿಡಬೇಕು.ಆದ್ರ ಈ ಎಲ್ಲಾ ಆಚರಣೆ ಮಾಡ್ಲೇಬೇಕು ಅನ್ನುವವರು ಬಸವಾದಿ ಶರಣರನ್ನು ಈ ಅಸಚರಣೆಗಳ ಭಾಗ ಮಾಡದಿರುವದು ಒಳ್ಳೆದು.ಯಾವ ಆಚರಣೆಗಳನ್ನು ಬಸವಾದಿ ಶರಣರು ಖಂಡಿಸಿದರೋ ಅವೆಲ್ಲ ಈಗ ಹಿಂದೂ ಆಚರಣೆಗಳು , ನಮ್ಮ ಸಂಪ್ರದಾಯ , ನಮ ಸಂಸ್ಕೃತಿ ಎಂದು ಹೇಳುವವರು , ನಮ್ಮ ದೇಶದ ಬಹುತ್ವದ ಸಂಸ್ಕೃತಿಗಳ ನ್ನು ಕೂಡ ಗೌರವಿಸಬೇಕು. ಈಗ ಹಿಂದೆಂದಿಗಿಂತಲೂ ಕಾವಿಧಾರಿಗಳು ಹೆಚ್ಚಾಗ್ತಿದ್ದಾರ.ಓಟ್ ಬ್ಯಾಂಕ್ ಗಾಗಿ ರಾಜಕಾರಣಿಗಳು ಅವ್ರನ್ನ ಪೋಷಿಸುತ್ತಾರೆ.ಸಮಾಜವನ್ನು ಜಾತಿಭೇಧ ಗಳಿಂದ ಮುಕ್ತ ಮಾಡುವ ಕಾರ್ಯ ಮಾಡ್ಬೇಕಾದ ಮಠಗಳು ಜಾತಿ ಧರ್ಮದ ಕಂದಕಗಳನ್ನು ಇನ್ನೂ ಹೆಚ್ಚು ಮಾಡ್ತಿರೋದು ವಿಪರ್ಯಾಸ. ಜಾತಿಗೊಬ್ಬರ ಮಠಗಳು ಅದಕ್ಕೊಬ್ಬರು ಮಠಾಧಿಶರು ಅವರನ್ನು ಒಲೈಸಿ ತಮ್ಮ ಕಡೆ ಎಳೆದುಕೊಳ್ಳೊ ರಾಜಕಾರಣಿಗಳು , ಇದೆಲ್ಲದರ ನಡುವೆ ಸಾಮಾನ್ಯರ ಸ್ಥಿತಿ ಅತಂತ್ರ. ಮೊನ್ನೆ ಕಲ್ಬುರ್ಗಿ ಯಲ್ಲಿ ನಡೆದ ಹಿಂದೂ ಸಮಾವೇಶದ ಮುಖ್ಯ ಉದ್ದೇಶ ಎನಿತ್ತೊ ಎನೋ, ಆದ್ರ ಸ್ಟೇಜ್ ಮ್ಯಾಲಿರೊ ಕಾವಿಧಾರಿಗಳನ್ನು ನೋಡಿ ನಮ್ಮ ದೇಶ ಎಷ್ಟು ಅಭಿವೃದ್ಧಿ ಆಗಲತದ ಅಂತ ಅರ್ಥ ಆಯ್ತು . ಅಲ್ಲಿ ಇರುವ ಯಾರೊಬ್ರು ನಮ್ಮ ದೇಶದ ಕುರಿತಾಗ್ಲಿ , ನಿರುದ್ಯೋಗ ಕುರಿತಾಗ್ಲಿ. ಶಿಕ್ಷಣದ ಕುರಿತಾಗ್ಲಿ , ಮಾತಾಡಿಲ್ಲ.ಮಾತಾಡಿದ್ದೆಲ್ಲ ಬರೀ ಕಮ್ಯೂನಿಸ್ಟ್ (ಪ್ರಶ್ನಿಸುವರನ್ನು) ರನ್ನು ಬೈದದ್ದು. ಕಮ್ಯೂನಿಸ್ಟ್ ರು ಸಾಮಾಜ ಒಡಿತಾರಂತ ಹೇಳತಾರ.ಆದ್ರ ಆ ಒಡೆಯುವ ಕೆಲಸ ಮಾಡ್ತಿರೋದು ನೀವು.ಆಚರಣೆಗಳ ಹೆಸರಲ್ಲಿ ಮುಗ್ದ ಜನರ ವ್ಯಕ್ತಿತ್ವ ಕುಂಠಿತ ವಾಗುವಂತೆ ಮಾಡ್ತಿದ್ಷಿರಿ.ನಿಮಗೆ ಹಿಂದೂ ಸಮಾಜದ ಮೇಲೆ ಅಷ್ಟೊಂದು ಅಭಿಮಾನ ಇರುವದೇ ಆದ್ರೆ ಯಾವೊಬ್ಬ ಹಿಂದೂ ಪ್ರಜೆಯು ಬಡವನಾಗಿರಬಾರದು, ಅವಿದ್ಯಾವಂತನಾಗಿರಬಾರದು , ನಿರುದ್ಯೋಗಿ ಆಗಿರಬಾರದು . ಕಲಬುರಗಿ ಯಲ್ಲಿ ನಡೆಗ ಹಿಂದೂ ಸಮಾವೇಶದಲ್ಲಿ ಸ್ವಾಮಿಗಳು ಹೇಳತಿದ್ರು.ಬಸವಾದಿ ಶರಣರು ಕಾಯಕಕ್ಕ ಮಹತ್ವ ಕೊಟ್ಟವ್ರು. ಕೆಲ ಕಮ್ಯೂನಿಸ್ಟ್ ಸ್ವಾಮಿಗಳು ಏನು ಕಾಯಕ ಮಾಡ್ಧ ಬರಿ ಸಮಾಜ ಒಡೆಯೋ ಕೆಲ್ಸ ಮಾಡ್ತಾರ ಅಂತ. ಅದಕ್ಕೆ ನೀವು ಹೊರತಾಗಿಲ್ಲ ಮಹಾಶಯರೆ , ಯಾವ ಮಠಾಧಿಶರು ಕಾಯಕ ಜೀವಿಗಳಲ್ಲ.ಕೆಲ ಮಠಗಳು ವಿದ್ಯಾ ಸಂಸ್ಥೆ ಮೂಲಕ ಜನಪರ ಆಗಿವೆ.ಉಳಿದ ಮಠಗಳು ನಮ್ಮ ದೇಶದ ಓಟ್ ಬ್ಯಾಂಕ್ ಸಲುವಾಗಿ ಇರುವಂಥವು. ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ಮೊನ್ನೆ ಒಂದು ಕಾರ್ಯಕ್ರಮ ದಲ್ಲಿ ಮಠಾಧಿಶರ ರಿಗೆ ಎಲ್ಲರ ಮುಂದೆ ಹೆಳಿದ್ರು. ನೀವು ನಮಗಾಗಿ ಸೇವೆ ಮಾಡಿ , ನಮ್ಮ ಕೃಪೆ ಗೆ ಪಾತ್ರರಾಗಿ ಆಗ ನೀವು ಉಳಿತಿರಿ ಬೆಳಿತಿರಿ ಸಂತ. ಇದರಿಂದ ಗೊತ್ತಗತದ ರಾಜಕಾರಣಿಗಳ ಮತ್ತು ಮಠಾಧಿಶರ ಸಂಭಂಧ.ಒಬ್ಬರಿಗಿ ಬಿಟ್ಟು ಇನ್ನೊಬ್ರರಿಲ್ಲ. ಮಂಡೆ ಬೋಳಾಗದೆ ಮನ ಬೋಳಾಗದು ಅಂತ ಹಿಂದಿನವರು ಹೇಳತಿದ್ರು.ಈಗೀಗ ಬಹುತೇಕ ಮಠಾಧಿಶರು ಸರ್ವ ಪರಿತ್ಯಾಗಿ ಅಂತ ಹೇಳಕ್ಕೊಂತ ಎಲ್ಲಾ ಮೋಹದಲ್ಲಿ ಬಂಧಿಸಲ್ಪಟ್ಟವ್ರು. ಚರ್ಚೆಗಳಿಗೆ ಕೊನೆ ಇಲ್ಲ ಬಿಡ್ರಿ.ಎಲ್ಲರೂ ಅವರವರ ವಾದಕ್ಕ ಕಟ್ಟುಬಿದ್ದವ್ರು.ನಮ್ಮ ದೇಶದಾಗ ಎಲ್ಲರಿಗೂ ಅವರವರ ಇಷ್ಟದಂಗ ಬದುಕೋ ಹಕ್ಕು ಅದಾ. ಮತ್ತೊಬ್ಬರ ಬದುಕುವ ರೀತಿ ಪ್ರಶ್ನಿಸುವದರಿಂದ ಏನು ಬದಲಾಗಲ್ಲ.ಉಪದೇಶಗಳು ಈಗ ಯಾರಿಗೂ ಬೇಕಾಗಿಲ್ಲ.ಬೇಕಾಗಿರುವದು ಸಹಾಯ. ನಮ್ಮ ದೇಶದ ಮಠಗಳು ಜನರ ಆರ್ಥಿಕ ಸ್ಥಿತಿ ಸುಧಾರಿಸುವದಕ್ಕ ಪ್ರಯತ್ನ ಮಾಡ್ಲಿ.ಮಠಕ್ಕ ಬಂದ ಅನುದಾನ ಜನರ ಸಹಾಯಕ್ಕ ಬಳಕೆ ಆಗ್ಲಿ. ಗುಡಿಗಳು ಕಟ್ಟುವದರಿಂದ ನಮ್ಮ ದೇಶ ಉದ್ದಾರ ಅಗ್ತದ ಅಂತ ಅವರಿಗೆ ಅನುಸಿದ್ರ ಅದು ಅವರ ವಿಚಾರ.ಒಪ್ಪುವಂತೆ ಬಲವಂತ ಮಾಡ್ದೆ ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸಬೇಕು. ಬಸವಾದಿ ಶರಣರ ಆಶಯಗಳನ್ನು ಪೂರ್ಣ ಜೀವನದಾಗ ಅಳವಡಿಸಿಕೊಳ್ಳೊದು ಕಷ್ಟ.ಯಾರೂ ಪರಿಪೂರ್ಣ ರಲ್ಲ.ಸಮಾಜದಾಗ ಇರಬೇಕಂದ್ರ ಕೆಲವೊಮ್ಮೆ ನಮ್ಮ ಮನಸ್ಸಿನ ವಿರುದ್ದವಾಗೂ ವರ್ತಿಸಬೇಕಾಗತದ.ಅದಕ್ಕ ಯಾರನ್ನೂ ತೀಕ್ಷವಾಗಿ ನಿಂದಿಸದೆ ಅವರವರ ಇಷ್ಟಕ್ಕ ಬಿಡಬೇಕು.ಆದ್ರ ಸಮಾಜಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವದೆ ವಿಷಯದಿಂದ ನಷ್ಟ ಅಥವಾ ತೊಂದರೆ ಆದ್ರ ಪ್ರಶ್ನಿಸಬೇಕು. ಮಠಾಧಿಶರು ಗಳ ಬಗ್ಗೆ ನಮ್ಮ ದೇಶದ ಜನರಿಗೆ ನಂಬಿಕೆ ಭಕ್ತಿ ಅದ.ಅದನ್ನು ಉಳಿಸಿಕೊಂಡು ಜನಪರ ಕಾರ್ಯ ಮಾಡಲಿ.ಬರಿ ಪೂಜಾ ಪಾಠಗಳಿಗಿ ಮಾತ್ರ ಬಸವಾದಿ ಶರಣರನ್ನು ಬಳಸಿಕೊಳ್ಳದೆ , ಸಮಾನತೆ , ಪ್ರೀತಿ , ಕರುಣೆ ಮತ್ತು ಇವ ನಮ್ಮ ವ ಎಂಬ ಭಾವಗಳು ಜನರಲ್ಲಿ ಬಿತ್ತುವ ಪ್ರಯತ್ನ ಮಠ ಮಾನ್ಯ ಗಳು ಮಾಡ್ಬೇಕು. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ ಬೊಮ್ಮಾ ಅವರು ಕಲಬುರ್ಗಿ ಜಿಲ್ಲೆಯವರು.ಇದುವರೆಗು ನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕನಲಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳ ಒಂದನೇ ತಾರೀಖು ಸಂಗಾತಿಪತ್ರಿಕೆಗಾಗಿ ಅವರ ದೇಸಿ ನುಡಿಕಟ್ಟಿನಲ್ಲಿ ಅಂಕಣಬರಹವನ್ನು ಬರೆಯುತ್ತಿದ್ದಾರೆ.