ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣರ ಸಂಗಾತಿ ಡಾ .ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಇತಿಹಾಸ ಪುರುಷ ರಾವ ಬಹದ್ದೂರ್ ಅರಟಾಳ ರುದ್ರಗೌಡರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟು ಕೊನೆ ಉಸಿರು ಇರುವವರೆಗೆ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿ ನೀಡಿದ ದಿಟ್ಟ ಧೀಮಂತ ನಾಯಕ ಶ್ರೀ ಅರಟಾಳ ರುದ್ರಗೌಡರು. ರಾವ್ ಬಹದ್ದೂರ್ ರುದ್ರಗೌಡ ಚನ್ನವೀರಗೌಡ ಅರಟಾಳ (ಅರಟಾಳ ರುದ್ರಗೌಡರು) ಅವರು ಬ್ರಿಟಿಷ್ ಭಾರತದ ಆಡಳಿತಾವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರಮುಖ ಆಡಳಿತಗಾರರು, ದಕ್ಷ ಅಧಿಕಾರಿ ಹಾಗೂ ಪ್ರಭಾವಿ ಸಾಮಾಜಿಕ ಮತ್ತು ಶೈಕ್ಷಣಿಕ ಹೋರಾಟಗಾರರಾಗಿದ್ದರು.  ಇವರು ಬ್ರಿಟಿಷ್ ಸರ್ಕಾರದಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ, ಭ್ರಷ್ಟಾಚಾರ ನಿರ್ಮೂಲನೆಗೆ ಹೆಸರಾಗಿದ್ದರು. ಅರಟಾಳ ರುದ್ರಗೌಡರ ಜೀವನ ಮತ್ತು ಸಮಾಜಕ್ಕೆ ಅವರು ನೀಡಿದ ಪ್ರಮುಖ ಕೊಡುಗೆಗಳ ವಿವರ ಇಲ್ಲಿದೆ: ೧. ಜನನ ಮತ್ತು ವೃತ್ತಿ ಜೀವನ • ಜನನ: ಇವರು ಮಾರ್ಚ್ ೨೨, ೧೮೫೧ ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅರಟಾಳ ಗ್ರಾಮದಲ್ಲಿ (ಅಥವಾ ಕುಂದಗೋಳ ತಾಲೂಕಿನ ಹಿರೆ ಹರಕುಣಿ) ಜನಿಸಿದರು. • ಶಿಕ್ಷಣ:  ಕೇವಲ ಮೆಟ್ರಿಕ್ಯುಲೇಶನ್  ವರೆಗೆ ಮಾತ್ರ ಓದಿದ್ದ ಇವರು, ತಮ್ಮ ಅಪಾರ ಬುದ್ಧಿವಂತಿಕೆಯಿಂದ ಉನ್ನತ ಹುದ್ದೆಗೇರಿದರು. • ಆಡಳಿತ ಸೇವೆ:  ಧಾರವಾಡದ ಕಲೆಕ್ಟರ್ ಕಚೇರಿಯಲ್ಲಿ ಸಾಮಾನ್ಯ ಕಾರಕೂನರಾಗಿ (ಕ್ಲರ್ಕ್) ವೃತ್ತಿ ಆರಂಭಿಸಿದ ಇವರು, ತಮ್ಮ ಪ್ರಾಮಾಣಿಕತೆಯಿಂದಾಗಿ ಡೆಪ್ಯುಟಿ ಜಿಲ್ಲಾ ಕಲೆಕ್ಟರ್ (Deputy District Collector) ಹುದ್ದೆಯವರೆಗೆ ಬೆಳೆದರು. • ಭ್ರಷ್ಟಾಚಾರ ಮುಕ್ತ ಆಡಳಿತ: ಅಂದಿನ ಬ್ರಿಟಿಷ್ ಸರ್ಕಾರದ ರೆವಿನ್ಯೂ ಅಡ್ಮಿನಿಸ್ಟ್ರೇಟಿವ್ ರಿಪೋರ್ಟ್‌ನಲ್ಲಿ, “ಕಂದಾಯ ಇಲಾಖೆಯಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಕೀರ್ತಿ ರಾವ್ ಬಹದ್ದೂರ್ ಆರ್.ಸಿ. ಅರಟಾಳ್ ಅವರಿಗೆ ಸಲ್ಲುತ್ತದೆ” ಎಂದು ವಿಶೇಷವಾಗಿ ಬ್ರಿಟಿಷರೇ  ದಾಖಲಿಸಿದ್ದಾರೆ. ೨. ಶೈಕ್ಷಣಿಕ ಕೊಡುಗೆಗಳು (ಕರ್ನಾಟಕ ಕಾಲೇಜು ಸ್ಥಾಪನೆ) ೧೯೧೦ರ ದಶಕದವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕಾಗಿ ಒಂದೂ ಕಾಲೇಜು ಇರಲಿಲ್ಲ. ಇವರು ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದರು • ಧಾರವಾಡದಲ್ಲಿ ಕರ್ನಾಟಕ ಕಾಲೇಜು (KCD) ಸ್ಥಾಪಿಸುವಲ್ಲಿ ಇವರು ಅತ್ಯಂತ ಪ್ರಮುಖ ಪಾತ್ರ ವಹಿಸಿದರು. • ಕಾಲೇಜು ಆರಂಭಿಸಲು ಬ್ರಿಟಿಷ್ ಸರ್ಕಾರ ೨ ಲಕ್ಷ ರೂಪಾಯಿಗಳ ಠೇವಣಿ ಕೇಳಿದಾಗ, ಇವರು ಲಿಂಗಾಯತ ಸಮಾಜದ ಮುಖಂಡರನ್ನು ಒಗ್ಗೂಡಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ೨ ಲಕ್ಷ ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿಕೊಟ್ಟರು. • ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯಾದ ಕೆ.ಎಲ್.ಇ (KLE) ಸಂಸ್ಥೆಯ ಸ್ಥಾಪನೆಗೆ ಹಿರಿಯರನ್ನು ದಾನ ಮಾಡಲು ಪ್ರೇರೇಪಿಸಿದವರಲ್ಲಿ ಇವರೂ ಪ್ರಮುಖರಾಗಿದ್ದರು. ೩. ಸಾಮಾಜಿಕ ನಾಯಕತ್ವ ಮತ್ತು ಬಿರುದುಗಳು • ವೀರಶೈವ ಮಹಾಸಭೆ: ಅಖಿಲ ಭಾರತ ವೀರಶೈವ ಮಹಾಸಭೆಯ ಆರಂಭಿಕ ದಿನಗಳಲ್ಲಿ ಅದರ ಸಕ್ರಿಯ ಮುಖಂಡರಾಗಿ ಮತ್ತು ಅಧ್ಯಕ್ಷರಾಗಿ ಸಮಾಜದ ಸುಧಾರಣೆಗೆ ಶ್ರಮಿಸಿದರು ಅಲ್ಲದೆ ೧೯೧೨ ರಲ್ಲಿ ನಿಪ್ಪಾಣಿಯಲ್ಲಿ ಜರುಗಿದ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಐತಿಹಾಸಿಕ ಭಾಷಣ ಮಾಡಿದರು. • ಗೌರವಗಳು:  ಇವರ ಪ್ರಾಮಾಣಿಕ ಆಡಳಿತ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಇವರಿಗೆ ‘ರಾವ್ ಬಹದ್ದೂರ್’ ಮತ್ತು ‘ಸರ್’ ಬಿರುದುಗಳನ್ನು ನೀಡಿ ಗೌರವಿಸಿತ್ತು. ಲೋಕಮಾನ್ಯ ಟಿಳಕ, ಮಹಾತ್ಮಾ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗಿಂತಲೂ ವಯಸ್ಸಿನಲ್ಲಿ ಹಿರಿಯರಾಗಿದ್ದ ಅರಟಾಳ ರುದ್ರಗೌಡರು, ಉತ್ತರ ಕರ್ನಾಟಕದಲ್ಲಿ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮತ್ತು ಶಿಕ್ಷಣದ ಕ್ರಾಂತಿಗೆ ಮುನ್ನುಡಿ ಬರೆದ ಧೀಮಂತ ನಾಯಕರಾಗಿದ್ದಾರೆ. ಇವರು ಅಕ್ಟೋಬರ್ ೪, ೧೯೩೨ ರಂದು ನಿಧನರಾದರು. ಕರ್ನಾಟಕ ಚರಿತ್ರೆಯಲ್ಲಿ ಲಿಂಗಾಯತರ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆ ನಿಂತ ಉಕ್ಕಿನ ಮನುಷ್ಯ. ರಾವ್ ಬಹದ್ದೂರ್ ಅರಟಾಳ ರುದ್ರಗೌಡರ ಜೀವನದ ಮಹತ್ವದ ಘಟನೆಗಳು, ಕರ್ನಾಟಕ ಕಾಲೇಜಿನ ಸ್ಥಾಪನೆಯ ರೋಚಕ ಇತಿಹಾಸ ಮತ್ತು ಅವರ ಸಾಮಾಜಿಕ ಹೋರಾಟಗಳ ಆಳವಾದ ವಿವರಗಳು ಇಲ್ಲಿವೆ: ಕರ್ನಾಟಕ ಕಾಲೇಜು (KCD) ಸ್ಥಾಪನೆಯ ಇತಿಹಾಸ ೧೯೧೭ ಕ್ಕಿಂತ ಮೊದಲು ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕಾಗಿ ಯಾವುದೇ ಕಾಲೇಜು ಇರಲಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ಪುಣೆ (ಪುಣಾ) ಅಥವಾ ಮುಂಬೈಗೆ (ಬಾಂಬೆ) ಹೋಗಬೇಕಾಗಿತ್ತು. ಇದನ್ನು ತಪ್ಪಿಸಲು ಅರಟಾಳ ರುದ್ರಗೌಡರು   • ಬ್ರಿಟಿಷರ ಕಠಿಣ ಷರತ್ತು: ಧಾರವಾಡದಲ್ಲಿ ಕಾಲೇಜು ಸ್ಥಾಪಿಸಲು ಬ್ರಿಟಿಷ್ ಸರ್ಕಾರ ಸಾರ್ವಜನಿಕರಿಂದ ಭಾರಿ ಮೊತ್ತದ ಧನಸಹಾಯವನ್ನು ಠೇವಣಿಯಾಗಿ ಕೇಳಿತು. • ನಿಧಿ ಸಂಗ್ರಹದ ಸವಾಲು:  ಅರಟಾಳ ರುದ್ರಗೌಡರು ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಗೆ ಸಂಚರಿಸಿ, ಪ್ರಮುಖ ದಾನಿಗಳನ್ನು, ಜಮೀನ್ದಾರರನ್ನು ಮತ್ತು ಸಾಮಾನ್ಯ ಜನರನ್ನು ಭೇಟಿಯಾಗಿ ಕೇವಲ ಎರಡು ಲಕ್ಷ ರೂಪಾಯಿಗಳನ್ನು (ಆ ಕಾಲದ ಬೃಹತ್ ಮೊತ್ತ) ಒಟ್ಟುಗೂಡಿಸಿದರು.  • ಸ್ಥಾಪನೆ:  ಈ ಜಂಟಿ ಪ್ರಯತ್ನದಿಂದಾಗಿ ಜೂನ್ ೨೯, ೧೯೧೭ ರಂದು ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಅವರಿಂದ ಕಾಲೇಜಿನ ಶಂಕುಸ್ಥಾಪನೆ ನೆರವೇರಿತು. • ಸರ ಸಿದ್ದಪ್ಪ ಕಂಬಳಿ:  ನಂತರದ ದಿನಗಳಲ್ಲಿ ಕಾಲೇಜು ಮುಚ್ಚುವ ಪರಿಸ್ಥಿತಿಗೆ ಬಂದಾಗ ಮತ್ತು ವಿಜ್ಞಾನ ವಿಭಾಗವನ್ನು ಆರಂಭಿಸಬೇಕಾದಾಗ, ಬಾಂಬೆ ಸರ್ಕಾರದ ಶಿಕ್ಷಣ ಮಂತ್ರಿಯಾಗಿದ್ದ ಸರ ಸಿದ್ದಪ್ಪ ಕಂಬಳಿ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಈ ಕಾಲೇಜನ್ನು ಉಳಿಸಿ, ಬೆಳೆಸಿದರು. ಇದೇ ಕಾಲೇಜು ಇಂದು ವಿಶ್ವಪ್ರಸಿದ್ಧ ಕರ್ನಾಟಕ ಕಲೆ ಮತ್ತು ವಿಜ್ಞಾನ ಕಾಲೇಜು (KCD) ಎಂದು ಹೆಸರುವಾಸಿಯಾಗಿದೆ. . ಸಾಮಾಜಿಕ ಹೋರಾಟಗಳು ಮತ್ತು ಆರ್ಥಿಕ ಕ್ರಾಂತಿ ರುದ್ರಗೌಡರ ಹೋರಾಟ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರಲಿಲ್ಲ, ಅವರು ಉತ್ತರ ಕರ್ನಾಟಕದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೂ ಬುನಾದಿ ಹಾಕಿದರು: • ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (KCC Bank) ಸ್ಥಾಪನೆ:  ರೈತರು ಮತ್ತು ಸಾರ್ವಜನಿಕರು ಲೇವಾದೇವಿದಾರರ (ಸಾಹುಕಾರರ) ಸಾಲದ ಸುಳಿಗೆ ಸಿಲುಕಿ ಶೋಷಣೆಗೆ ಒಳಗಾಗುವುದನ್ನು ತಡೆಯಲು ಅರಟಾಳ ರುದ್ರಗೌಡರು 1916 ರಲ್ಲಿ ದಿವಾನ ಬಹದ್ದೂರ್ ಮೆಣಸಿನಕಾಯಿ ಹಾಗೂ ಇತರ ಮುಖಂಡರೊಂದಿಗೆ ಸೇರಿ ಧಾರವಾಡದಲ್ಲಿ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಪ್ರೇರಕ ಶಕ್ತಿಯಾದರು. • ಬೃಹತ್ ಮೊತ್ತದ ನಿಧಿ ಸಂಗ್ರಹ:  ತಮ್ಮ ಜೀವಿತಾವಧಿಯ ಹೋರಾಟದಲ್ಲಿ (೧೮೮೩-೧೯೧೭) ಅವರು ಸಾರ್ವಜನಿಕ ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳಿಗಾಗಿ ಅಂದಾಜು ೨೫ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇಂದಿನ ಮೌಲ್ಯದಲ್ಲಿ ಇದು ನೂರಾರು ಕೋಟಿ ರೂಪಾಯಿಗಳಿಗೆ ಸಮನಾಗುತ್ತದೆ. . ನಿರ್ದಿಷ್ಟ ಐತಿಹಾಸಿಕ ಘಟನೆಗಳು • ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದ ಆಡಳಿತ: ಅರಟಾಳ ರುದ್ರಗೌಡರು ಬೆಳಗಾವಿಯ ಡೆಪ್ಯುಟಿ ಕಲೆಕ್ಟರ್ ಆಗಿದ್ದಾಗ ಕಂದಾಯ ಇಲಾಖೆಯಲ್ಲಿದ್ದ ಲಂಚಗುಳಿತನ ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದರು. ಬ್ರಿಟಿಷ್ ಸರ್ಕಾರದ ಅಧಿಕೃತ ಆಡಳಿತ ವರದಿಯಲ್ಲೇ (Revenue Administrative Report), “ಕಂದಾಯ ಇಲಾಖೆಯಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕಿದ ಕೀರ್ತಿ ರಾವ್ ಬಹದ್ದೂರ್ ಆರ್. ಸಿ. ಅರಟಾಳ ಅವರಿಗೆ ಸಲ್ಲುತ್ತದೆ” ಎಂದು ಮುಕ್ತವಾಗಿ ಪ್ರಶಂಸಿಸಲಾಗಿದೆ.  ಇವರು ಸ್ಥಾಪಿಸಿದ ಲಿಂಗಾಯತ ಶಿಕ್ಷಣ ಸಂಸ್ಥೆ LEA ಮೂಲಕ ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಪ್ರೊ ಎಂ ಆರ್ ಸಾಖರೆ ಮುಂತಾದ ಎಲ್ಲಾ ಮಹನೀಯರು ಶಿಕ್ಷಣ ಪಡೆದು ಲಿಂಗಾಯತ ಸಮುದಾಯದಲ್ಲಿ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು.  ಇಂತಹ ಗೌರವ ಪಡೆದ ಮೊದಲ ಭಾರತೀಯ ಅಧಿಕಾರಿ ಇವರಾಗಿದ್ದಾರೆ. • ಕೆ.ಎಲ್.ಇ (KLE) ಸಂಸ್ಥೆಯ ಪ್ರಥಮ ಅಧ್ಯಕ್ಷರು:  ಬೆಳಗಾವಿಯ “ಸಪ್ತರ್ಷಿಗಳು” (ಏಳು ಜನ ಶಿಕ್ಷಕರು) ಸೇರಿ 1916 ರಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (KLE Society) ಯನ್ನು ಸ್ಥಾಪಿಸಿದಾಗ, ಅದರ ನೇತೃತ್ವ ವಹಿಸಲು ಅವರಿಗೆ ಒಬ್ಬ ಸಮರ್ಥ ಹಿರಿಯ ಮಾರ್ಗದರ್ಶಕರ ಅಗತ್ಯವಿತ್ತು. ಆಗ ಅರಟಾಳ ರುದ್ರಗೌಡರು ಅದರ ಜವಾಬ್ದಾರಿ ಹೊತ್ತುಕೊಂಡು, ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ (೧೯೧೬ ರಿಂದ ೧೯೨೮ ರವರೆಗೆ) ಸೇವೆ ಸಲ್ಲಿಸಿದರು. ಇವರ ಗೌರವಾರ್ಥವಾಗಿ ಕೆ.ಎಲ್.ಇ ಸಂಸ್ಥೆಯ ಮೊದಲ ಶಾಲೆಯನ್ನು ಇವರ ಮತ್ತು ಗಿಲಗಂಚಿ ಗುರುಸಿದ್ದಪ್ಪನವರ ಹೆಸರಿನಲ್ಲೇ ಸ್ಥಾಪಿಸಲಾಯಿತು. ಖ್ಯಾತ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿಯವರು ಅರಟಾಳ ರುದ್ರಗೌಡರ ಚರಿತ್ರೆಯನ್ನು ಕೇವಲ ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ, ಬದಲಿಗೆ ಅದು “ಅರ್ಧ ಶತಮಾನದ ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ” ಎಂದು ಬಣ್ಣಿಸಿದ್ದಾರೆ. ಇಂತಹ ಅಪರೂಪದ ಪ್ರಾಮಾಣಿಕ ಪಾರದರ್ಶಕ ಸರಳ ಸಜ್ಜನಿಕೆಯ ಶರಣ ರಾವ್ ಬಹಾದ್ದೂರ ಶ್ರೀ ಅರಟಾಳ ರುದ್ರಗೌಡರು ಲಿಂಗಾಯತ ಸಮಾಜದ ಧ್ರುವ ತಾರೆ ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಪುಸ್ತಕ ಸಂಗಾತಿ

ಸ. ರಾ. ಸುಳಕೂಡೆ ಅವರ ” ಸಮಾಧಾನ” ಸಂಚಲನ ಮೂಡಿಸಿದ ಕೃತಿ:ಜಯಲಕ್ಷ್ಮಿ.ಕೆ

ಪುಸ್ತಕ ಸಂಗಾತಿ ಜಯಲಕ್ಷ್ಮಿ ಕೆ. ಸ.ರಾ.ಸುಳಕೂಡೆ ಸಮಾಧಾನ. ಸಂಚಲನ ಮೂಡಿಸಿದ ಕೃತಿ.  ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ನನ್ನೊಳಗೊಂದು ಸಂಚಲನವನ್ನು ಮೂಡಿಸಿದ ಕೃತಿಯೆಂದರೆ ಅದು ಸ. ರಾ. ಸುಳಕೂಡೆ ಯವರು ಬರೆದ’ ಸಮಾಧಾನ ‘ ಎನ್ನುವ ಕೃತಿ. ಒಂದು ಪುಸ್ತಕವನ್ನು ಓದಿ ಮುಗಿಸಿದ ನಂತರ ನಡೆವ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡತಕ್ಕಂಥ ಅಂಶಗಳು  ಈ ಕೃತಿಯಲ್ಲಿದೆ. ಬದುಕು ಎಂದರೇನು?ಎನ್ನುವ ಬಗ್ಗೆ ವೈಚಾರಿಕ ಮನೋಭಾವವನ್ನು ಮೂಡಿಸುವ ಕೃತಿ ಎಂದರೆ ಅದು ‘ಸಮಾಧಾನ ‘.   ನನ್ನ ಬದುಕು  ಹೀಗೇ ಇರಬೇಕು ಎನ್ನುವ ಒಂದು ಸಾರ್ವತ್ರಿಕ ಪ್ರತಿಜ್ಞೆಯನ್ನು ಮನಪೂರ್ವಕವಾಗಿ ಸ್ವೀಕರಿಸಲು ನಮ್ಮನ್ನು ಅಣಿಗೊಳಿಸುವ ಕೃತಿಯಿದು.ಜೀವನದ ವಿವಿಧ ಆಯಾಮಗಳು   ಹೇಗಿದ್ದರೆ ಚೆನ್ನ? ಎಂಬ ಮೌಲ್ಯವನ್ನು ಸಾರುವ 25 ಪ್ರಬುದ್ಧ ಲೇಖನಗಳು ಈ ಕೃತಿಯಲ್ಲಿವೆ.ಪುಸ್ತಕವನ್ನು ತೆರೆದಿಟ್ಟ ಬಳಿಕ ಕೊನೆಯವರೆಗೂ ಓದಿಸಿಕೊಂಡು ಹೋದ ಹೆಗ್ಗಳಿಕೆ ಈ ಕೃತಿಯದ್ದು.  ನನ್ನ ಸಹೋದರರೊಬ್ಬರ ಸ್ಟೇಟಸ್ ನಲ್ಲಿ  ‘ಸಮಾಧಾನ ‘ ಎನ್ನುವ ಕೃತಿ ಲೋಕಾರ್ಪಣೆಗೊಂಡ ಬಗೆಗಿನ ಒಂದು ಭಾವಚಿತ್ರ ನೋಡಿದೆ. ಕೃತಿಯ ಹೆಸರೇ ಅದನ್ನು ಓದಲೇ ಬೇಕೆಂಬ ಕುತೂಹಲವನ್ನು ನನ್ನಲ್ಲಿ ಹುಟ್ಟು ಹಾಕಿತ್ತು. ತಕ್ಷಣ ಲೇಖಕರ ಫೋನ್ ನಂಬರ್ ಸಂಗ್ರಹಿಸಿಕೊಂಡು ಅವರಿಗೊಂದು ಕರೆ ಮಾಡಿದೆ.ನಾನು ಯಾರೆಂದೇ ಗೊತ್ತಿಲ್ಲದಿದ್ದರೂ ನನ್ನಲ್ಲಿ ವಿಳಾಸವನ್ನು ಕೇಳಿ ಪುಸ್ತಕವನ್ನು ಕಳುಹಿಸಿಕೊಟ್ಟರು. 117 ಕೃತಿಗಳನ್ನು ಸಾರಸ್ವತ ಲೋಕಕ್ಕಿತ್ತ ಬಹುದೊಡ್ಡ ಸಾಹಿತಿ ನಾಲ್ಕಕ್ಷರ ಗೀಚುವ ನನ್ನಂಥವರ ಕರೆಗೆ ಓಗೊಟ್ಟು ಪುಸ್ತಕ ಕಳುಹಿಸಿಕೊಟ್ಟದ್ದೇ ಅವರ ಹೃದಯವಂತಿಕೆಗೆ ಸಾಕ್ಷಿ.  ಎತ್ತೆತ್ತಲೋ  ಸಾಗುವ ಮನಸ್ಸನ್ನು ತಡೆದು ” ಇದು ಜೀವನದ ದಾರಿ” ಎನ್ನುವ ಸತ್ಪಥವನ್ನು ತೋರುವ, ಪಥದುದ್ದಕ್ಕೂ ಬೆಳಕನ್ನು ಚೆಲ್ಲುವ ಕೃತಿ ‘ಸಮಾಧಾನ ‘. ಮನುಷ್ಯ ಸ್ವಭಾವದ ಎಲ್ಲ ಚಿತ್ರಣಗಳನ್ನೂ ಹೃದಯಂಗಮವಾಗಿ ಚಿತ್ರಿಸುತ್ತಾ ಸಹಜ ಬದುಕಿನ ಕಡೆಗೆ ನಮ್ಮ ಮನವನ್ನು ಸೆಳೆಯುವಲ್ಲಿ ಸಫಲಗೊಂಡ ಕೃತಿಯಿದು.  ವಿಜ್ಞಾನ ತಂತ್ರಜ್ಞಾನ ನಾಗಾಲೋಟದಿಂದ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯ ಯಂತ್ರ ಮಾನವನೆನಿಸದೆ ಮನುಜನಾಗಿಯೇ ಬಾಳಬೇಕು ಎನ್ನುವ ಚಿಂತನೆಯನ್ನು ಈ ಕೃತಿ ನಮ್ಮೊಳಗೆ ಹುಟ್ಟು ಹಾಕುತ್ತದೆ. ಬದುಕಿನಲ್ಲಿ ಗುರಿ ಎಷ್ಟು ಮುಖ್ಯವೋ,ಆ ಗುರಿಯಡೆಗೆ ಸಾಗುವ ಪಥವೂ ಅಷ್ಟೇ ಮುಖ್ಯ ಎಂದು  ಸಾರುವ ನಿರೀಕ್ಷೆ -ಪರೀಕ್ಷೆ ಎನ್ನುವ ಲೇಖನದಲ್ಲಿ ನಮ್ಮ ಆಶಯಗಳು ಕೈಗೂಡಬೇಕಾದರೆ ನಿಯತ್ತಿನ ಹಾದಿಯಲ್ಲಿಯೇ ಸಾಗಬೇಕು ಎನ್ನುವ ಕಿವಿ ಮಾತಿದೆ.” ಸಹಜಾನಂದಕ್ಕೆ ದೀರ್ಘಾಯುಷ್ಯವಿದೆ ” ಎನ್ನುವ ಮಾತಿನಂತೆ  ನಾಟಕೀಯತೆಯ ಪರದೆ ಸರಿಸಿ ತಳುಕು ಬೆಳಕುಗಳಿಂದೀಚೆ ಒಂದು ವಾಸ್ತವತೆ ಇದೆ,ಅದೇ ನಮ್ಮ ಬದುಕು ಎಂಬ ಅರಿವನ್ನು ‘ವಾಸ್ತವತೆ ಮತ್ತು ಸಹಜಾನಂದ’ ಎನ್ನುವ ಲೇಖನ ಕಟ್ಟಿಕೊಡುತ್ತದೆ. ಇಡೀ ಜೀವ ಜಗತ್ತಿನ ಸಾರವಡಗಿರುವುದೇ ಪರಿಪಾಲನೆ ಎನ್ನುವ ಪದದಲ್ಲಿ. ಪ್ರಾಣಿ ವರ್ಗದಲ್ಲಿ ಉನ್ನತ ಸ್ತರದಲ್ಲಿರುವವನು ಮನುಷ್ಯ. ಆತನ ಜೀವನದಲ್ಲಿ ಪಾಲನೆ ಪೋಷಣೆ ಎನ್ನುವ ಪದಗಳಿಗೆ ಇರುವ ಮಹತ್ವವನ್ನು ವಿಶದಪಡಿಸುವ ಲೇಖನ ‘ಪರಿಪಾಲನೆ ‘. ಮನುಷ್ಯ ಜೀವನದುದ್ದಕ್ಕೂ ‘ಭಾವ ‘ ಎನ್ನುವ ಲಯ   ಹರಿಯುತ್ತಲೇ ಇರಬೇಕು. ಆಗಲೇ ಪ್ರಾಣಿ ವರ್ಗದಲ್ಲಿ ನಾವು ಶ್ರೇಷ್ಠರೆನಿಸಲು ಸಾಧ್ಯ ಎನ್ನುವ ಅಂಶ ಈ ಲೇಖನದಲ್ಲಿದೆ.  ಮುಗ್ದತೆ, ಸಹೃದಯತೆ,ಎಲ್ಲಾ ಕರಗಿ ಹೋಗಿ ಹೊಡಿ,ಬಡಿ, ಕೊಲ್ಲು,ಎನ್ನುವ ವಿದ್ವಂಸಕ  ನಡವಳಿಕೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಕೃತಿಯ ಮೂಲ ಧಾತುವೆನಿಸಿದ  ಪ್ರೀತಿ ಮಮತೆ  ವಾತ್ಸಲ್ಯದ  ಅನಿವಾರ್ಯತೆಯನ್ನು ‘ವಾತ್ಸಲ್ಯ ‘ ಎನ್ನುವ ಲೇಖನದಲ್ಲಿ ಕೃತಿ ಕಾರರು ಮನಮುಟ್ಟುವಂತೆ  ಚಿತ್ರಿಸಿದ್ದಾರೆ. ಮನುಷ್ಯ  ಶಿಕ್ಷಣ ಕ್ಷೇತ್ರದಲ್ಲಿ,ಆರ್ಥಿಕ ವಲಯದಲ್ಲಿ,ಸಾಮಾಜಿಕ ಸ್ಥಾನಮಾನದಲ್ಲಿ ಬಹು ಎತ್ತರಕ್ಕೆ ಏರಿದ್ದರೂ ಕೂಡ ಆತನಿಗೆ ಇಂದು ‘  ನಿರಾಳತೆ ‘ ಎನ್ನುವುದು ಯಾಕೆ ದುರ್ಲಭವಾಗುತ್ತಿದೆ ಎನ್ನುವ ಬಗ್ಗೆ ಈ ಲೇಖನ ಓದುಗರ ಒಳಗಣ್ಣು ತೆರೆಸುತ್ತದೆ. ಹಣ, ಕೀರ್ತಿ, ಅಧಿಕಾರ ಇವೆಲ್ಲವುಗಳಾಚೆ ಬಹು ದೂರ ನಿಂತ ನಿರಾಳತೆ ನಮ್ಮಲ್ಲಿ ಮನೆ ಮಾಡಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿದೆ ಎನ್ನುವ ಲೇಖಕರ ಚಿಂತನೆ ನಿಜಕ್ಕೂ ಮನನ ಯೋಗ್ಯವಾದದ್ದು. ಶಿಕ್ಷಣ ರಂಗದಲ್ಲಿ ಹೆಚ್ಚು ಅಂಕ  ಗಳಿಸಬೇಕು, ಉದ್ಯೋಗ ರಂಗದಲ್ಲಿ  ಹೆಚ್ಚು ಹೆಚ್ಚು ಹಣ ಮಾಡಬೇಕು, ಸಾಮಾಜಿಕ ಸ್ಥಾನಮಾನಗಳು ಉನ್ನತ ಸ್ತರದಲ್ಲಿರಬೇಕು ಎಂದು ಬಯಸುವ ನಾವುಗಳು ಸಾರ ಸಜ್ಜನಿಕೆಯ ವ್ಯಕ್ತಿತ್ವ ನಮ್ಮದಾಗಬೇಕು ಎಂದೇಕೆ ಬಯಸುವುದಿಲ್ಲ? ಈ ಸೂಕ್ಷ್ಮವನ್ನು ಮರೆಯಬಾರದು ಎನ್ನುವ ಅರಿವನ್ನು ನೀಡುವ ಲೇಖನ ‘ಸಜ್ಜನಿಕೆ ಮತ್ತು ಸಂಪತ್ತು’. ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಮಾನವೀಯ ಮೌಲ್ಯಗಳು ಎಂದಿಗೂ ಮೂಲೆಗುಂಪಾಗಬಾರದು ಎಂಬುದನ್ನು ಕೃತಿಕಾರರು ಮನಮುಟ್ಟುವಂತೆ ವಿವರಿಸಿದ್ದಾರೆ. ಮಾತು ಮತ್ತು ನಡವಳಿಕೆ ಒಂದಕ್ಕೊಂದು ಪೂರಕವಾಗಿರಬೇಕು. ಅಂತೆಯೇ ನಮ್ಮ ಗ್ರಹಿಕೆ ಮತ್ತು ಗ್ರಹಿಸಿದ್ದನ್ನು ಕಾರ್ಯಗತಗೊಳಿಸುವ ಕ್ರಿಯಾಶೀಲತೆ ಎರಡೂ ಜೊತೆಯಾದಾಗ ಮಾತ್ರ ಒಂದು ಸಾಧನೆ ಸಾಧ್ಯ ಎನ್ನುವ ಕೃತಿಕಾರರ ಸಾಲುಗಳು ಕುಳಿತಲ್ಲೇ ಅರಮನೆ ಕಟ್ಟುವ ಮನೋಭಾವದ ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ.  ಸಂಬಳ, ಸಂಭಾವನೆ,ಅಧಿಕಾರ, ಮತ್ತು ಪ್ರಭಾವಕ್ಕಾಗಿ ಬದುಕುವ ಬದಲಾಗಿ ಪರಹಿತಕ್ಕಾಗಿ ಬದುಕುವ ಉದಾರತೆ ನಮ್ಮಲ್ಲಿ ಮೂಡಬೇಕು ಎನ್ನುವ ಲೇಖಕರ ಚಿಂತನೆ ಅನುಕರಣ ಯೋಗ್ಯವಾದದ್ದು. ‘ ಪರೋಪಕಾರಂ ಇದಂ ಶರೀರಂ ‘ ಎಂಬ ಧೋರಣೆಯನ್ನೇ ಪ್ರತಿಪಾದಿಸಿಕೊಂಡು ಧರ್ಮ ಶಾಲೆಗಳನ್ನು ಕಟ್ಟಿ  ಅನ್ನದಾಸೋಹ,ಅಕ್ಷರ ದಾಸೋಹ ಇತ್ಯಾದಿಗಳನ್ನು ಮಾಡುತ್ತಾ ಜೀವನ ಸಾರ್ಥಕ ಗೊಳಿಸಿಕೊಂಡು ಅಮರರಾದ ಧೀಮಂತರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎನ್ನುವ ಲೇಖಕರ ಸಾಲುಗಳು ಸರ್ವಕಾಲಕ್ಕೂ ಅನ್ವಯವಾಗುವಂಥದ್ದು. ‘ ವಿದ್ಯಾ ದದಾತಿ ವಿನಯಂ ‘ ವಿದ್ಯೆ ವಿನಯಕ್ಕಾಗಿ ಎನ್ನುವ ಹಿರಿಯರ ಉಪದೇಶದ ಸಾರ ಸತ್ವ ಬದಿಗೆ ಸರಿದು ಅನೀತಿ ಅಧರ್ಮ ಅನ್ಯಾಯಗಳ ಹಾದಿಯಾದರೂ ಸರಿಯೇ ಅವರಿವರನ್ನು ತಳ್ಳಿ ತಾನು ಮುಂದೆ ಸಾಗಬೇಕು ಎನ್ನುವ ಅವಿನಯ ವರ್ತನೆಯನ್ನು, ಹುಂಬತನವನ್ನು ಹುಟ್ಟು ಹಾಕುತ್ತಿರುವ ಇಂದಿನ ಶಿಕ್ಷಣ ಪ್ರಕ್ರಿಯೆ ಬದಲಾಗಬೇಕು ಎನ್ನುವ ಕೃತಿಕಾರರ ಆಶಯ ನಮ್ಮೆಲ್ಲರ ಆಶಯವಾಗಬೇಕಿದೆ.  ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಭಕ್ತಿ ಭಂಡಾರಿ  ಸಮಾಜ ಸುಧಾರಕ ಬಸವಣ್ಣನವರೇ ಮೊದಲಾದ ಶರಣರ ಕೆಲ ವಚನಗಳೊಂದಿಗೆ ಮೂಡಿಬಂದ ‘ ಕಿಲಾಡಿತನ ಮತ್ತು ಕಿಡಿಗೇಡಿತನ ‘ ಎನ್ನುವ ಲೇಖನ ಜೀವ ವಿರೋಧಿ ತತ್ವಗಳ ಪಾಲನೆಗೆ ಮುನ್ನುಗ್ಗುತ್ತಿರುವ ಮಾನವರಿಗೆ ಸದ್ಬಥವನ್ನು ತೋರುವ ದಿವ್ಯ ಸಂದೇಶವೇ ಆಗಿದೆ. ನಾನು -ನನ್ನದು ಎಂಬ ಸಂಕುಚಿತ ವೃತ್ತದೊಳಗೇ ಜೀವನ ಸಾಗಿಸುತ್ತಿರುವ ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳಾದ ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಆಶ್ರಯ ಬಯಸಿ ಬಂದವನಿಗೆ ನೆಲೆ ಈ ಮಾನವೀಯ ಮೌಲ್ಯಗಳನ್ನೇ ಮರೆತಿದ್ದೇವೆ ಎನ್ನುವ ಲೇಖಕರ ನೋವಿನ ಸಾಲುಗಳು ಓದುಗರ ಒಳಗಣ್ಣು ತೆರೆಸುತ್ತವೆ. ಪ್ರಕೃತಿಯೇ ಪರಮಾತ್ಮ ಎನ್ನುವ ಚಿಂತನೆಯನ್ನು ಲೇಖನಗಳು ಉದಾಹರಣೆ ಸಹಿತ ಸ್ಪಷ್ಟಪಡಿಸಿದ್ದು  ಈ ಪ್ರಕೃತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ.  ಕೃತಜ್ಞತಾ ಮನೋಭಾವ ಮಾನವನಿಗೆ ಇರಬೇಕಾದ ಮೂಲ ಗುಣ. ಈ ಅಲ್ಪಕಾಲದ ಬದುಕಿನಲ್ಲಿ ಇತರರಿಗಾಗಿ ಬದುಕುವವರಷ್ಟೇ ಲೆಕ್ಕದಲ್ಲಿ ಉಳಿಯುವವರು ಎನ್ನುವ ಕೃತಿಕಾರರ ಚಿಂತನೆ ನಾವುಗಳು ಲೆಕ್ಕದಲ್ಲಿ ಉಳಿಯಬೇಕೇ…. ಹೊರಗುಳಿಯಬೇಕೇ… ಎನ್ನುವ ಚಿಂತನೆಯನ್ನು ನಮ್ಮಲ್ಲೇ ಹುಟ್ಟು ಹಾಕುತ್ತದೆ. ‘ ಬೇಕು ಎನ್ನುವವನಿಗೆ ಸ್ವರ್ಗವೂ ನರಕವೇ.. ಸಾಕು ಎನ್ನುವವನಿಗೆ ನಿಂತ ನೆಲವೆಲ್ಲವೂ ಸ್ವರ್ಗವೇ ‘ ಎನ್ನುವ ಮಾತಿನ ಸಂಪೂರ್ಣ ಚಿತ್ರಣ’ ಸಮಾಧಾನ ‘ ದಲ್ಲಿದೆ. ಪ್ರತಿಷ್ಠೆ, ಶ್ರೇಷ್ಠತೆ ಎನ್ನುವ ಏಕಮುಖ ಚಿಂತನೆಯಿಂದ ವಿಶ್ವಮಾನವತೆಯತ್ತ ನಮ್ಮ ದೃಷ್ಟಿ ಹರಿಯಬೇಕಿದೆ. ಈ ನಿಟ್ಟಿನಲ್ಲಿ ದುಡಿದು ಗಳಿಸಿ ಹೊಟ್ಟೆ ಹೊರೆಯುವ, ‘ನಾನು’ ಎಂದು ಮೆರೆಯುವ, ಸಂಕುಚಿತ ಮನೋಭಾವ ದೂರವಾಗಿ ‘ನಾವು ‘ ಎಂಬ ಹೃದಯ ವೈಶಾಲ್ಯತೆ ನಮ್ಮದಾದಾಗ ಮಾನವ ಜನ್ಮ ಸಾರ್ಥಕ ಎನ್ನುವ ಸಂದೇಶವನ್ನು ‘ಸಮಾಧಾನ’ಎನ್ನುವ ಕೃತಿ ನೀಡುತ್ತದೆ. ಇಂತಹ ಅಪೂರ್ವ ಕೃತಿಯನ್ನು ಸಾರಸ್ವತ ಲೋಕಕ್ಕೆ ನೀಡಿದ ಸ. ರಾ. ಸುಳಕೂಡೆಯವರಿಗೆ ತುಂಬು ಹೃದಯ ಅಭಿನಂದನೆಗಳನ್ನು ಸಲ್ಲಿಸುತ್ತಾ,ಸಂಗ್ರಹ ಯೋಗ್ಯವಾದ ಈ ಕೃತಿ ಮನೆ ಮನೆಗಳಿಗೆ ತಲುಪಲಿ, ಸಮಾಜಮುಖಿ ಚಿಂತನೆಗಳನ್ನು ಓದುಗರ ಎದೆಯಲ್ಲಿ  ಹುಟ್ಟು ಹಾಕುವ ಮತ್ತಷ್ಟು ಕೃತಿಗಳು ಶ್ರೀಯುತರಿಂದ ಹೊರಹೊಮ್ಮಲಿ ಎಂದು ಆಶಿಸುತ್ತಾ, ಈ ನಿಟ್ಟಿನಲ್ಲಿ ಸುಳಕೂಡೆಯವರಿಗೆ ದೇವರ  ಆಶೀರ್ವಾದ ಸದಾ ಇರಲಿ ಎಂದು  ಭಗವಂತನಲ್ಲಿ ಬೇಡುತ್ತೇನೆ. ಜಯಲಕ್ಷ್ಮಿ ಕೆಮಡಿಕೇರಿ.

ಸ. ರಾ. ಸುಳಕೂಡೆ ಅವರ ” ಸಮಾಧಾನ” ಸಂಚಲನ ಮೂಡಿಸಿದ ಕೃತಿ:ಜಯಲಕ್ಷ್ಮಿ.ಕೆ Read Post »

You cannot copy content of this page

Scroll to Top