ಕಾವ್ಯ ಸಂಗಾತಿ
ವೆಂಕಟೇಶ್ ಈಡಿಗರ
“ಮೌನ ಯಾನ”


ಮೌನವದು ಸ್ಪಷ್ಟತೆ ಇಲ್ಲದ
ಅನರ್ಥಗಳ ನಿರ್ಭಾವ ಸ್ಥಿತಿ
ಸಮ್ಮತಿಯೂ ಅಲ್ಲದ
ಅಸಮ್ಮತಿ ಸೂಚಿಸದ ದ್ವಂದ್ವ ನೀತಿ
ಮನಸ್ಸು ಬಲವಾದಾಗ ಪ್ರತಿಕಾರ
ದುರ್ಬಲವೆಂದರೆ ಅಂಗಿಕಾರ
ಇಲ್ಲದಿರೆ ನಪುಂಸಕತೆಯ ನಿರಾಕಾರ
ವಿವರಿಸಲಾಗದ ಅನಿರ್ಧಿಷ್ಟವಧಿ ಮುಷ್ಕರ
ಮನದಿಂಗಿತಗಳನು ಬಲಿಕೊಟ್ಟು
ಒಳಬೇಗುದಿಯಲ್ಲಿ ಬೇಯುವ
ನೋಯುವ ನಿಶಕ್ತ ರೂಪವದು
ತನ್ನತನವ ದಹಿಸಿಕೊಂಡು ಬಂದುದ್ದನ್ನು
ಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು
ಜ್ಞಾನವೋ ಅಜ್ಞಾನವೋ ಎಂದರುಹಲು
ಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವ
ದಿವ್ಯ ರೂಪ ದೃಢತೆಯ ಅಪರೂಪ
ಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ
ಮೌನವದು ವಿಶ್ವರೂಪ
ಹೊಸ ಮನ್ವಂತರಕೆ ಮುನ್ನುಡಿ
ಬರೆಯಲು
ಮೈದಾಳಿದ ಮಹಾ ಸಂಕಲ್ಪˌ
ಇದಕಾಗಿ ಇರಬೇಕು ಆತ್ಮಬಲದ
ಜ್ಞಾನದೀಪˌ ಅದುವೇ ಅವನ
ಜೀವನದ ಮುನ್ನಡೆಗೆ ದಾರಿದೀಪ
ಮತಿಗೆಡದಿರಲಿ ಮನದ ಮೌನ
ದೃತಿಗೆಡದೆ ಮುನ್ನಡೆಯಲಿ ಜ್ಞಾನ
ಮೌನದಲ್ಲಿಯೂ ಧ್ಯಾನಸ್ಥನಾಗಿ
ಬೆಳಗಲಿ ಲೋಕದೊಳಿತಿನ ಸುಜ್ಞಾನ
ಉಳಿಸಿ ಬೆಳೆಸಲಿ ಮಾನ ಸಮ್ಮಾನ
ಮೌನವೇ ಧ್ಯಾನವಾಗಿˌ ಜ್ಞಾನವಾಗಿ
ಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ.
ವೆಂಕಟೇಶ್ ಈಡಿಗರ



