ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮೌನವದು ಸ್ಪಷ್ಟತೆ ಇಲ್ಲದ
ಅನರ್ಥಗಳ ನಿರ್ಭಾವ  ಸ್ಥಿತಿ
ಸಮ್ಮತಿಯೂ  ಅಲ್ಲದ
ಅಸಮ್ಮತಿ ಸೂಚಿಸದ ದ್ವಂದ್ವ ನೀತಿ

ಮನಸ್ಸು ಬಲವಾದಾಗ ಪ್ರತಿಕಾರ
ದುರ್ಬಲವೆಂದರೆ ಅಂಗಿಕಾರ
ಇಲ್ಲದಿರೆ ನಪುಂಸಕತೆಯ ನಿರಾಕಾರ
ವಿವರಿಸಲಾಗದ ಅನಿರ್ಧಿಷ್ಟವಧಿ  ಮುಷ್ಕರ

ಮನದಿಂಗಿತಗಳನು ಬಲಿಕೊಟ್ಟು
ಒಳಬೇಗುದಿಯಲ್ಲಿ ಬೇಯುವ
ನೋಯುವ ನಿಶಕ್ತ ರೂಪವದು
ತನ್ನತನವ ದಹಿಸಿಕೊಂಡು ಬಂದುದ್ದನ್ನು
ಅಪ್ಪಿ ಸಪ್ಪೆಯಾಗುವ ಸಂತೆಯೊಳಗಿನ ವಸ್ತು

ಜ್ಞಾನವೋ ಅಜ್ಞಾನವೋ ಎಂದರುಹಲು
ಹಿಂಜರಿದುˌ ಸ್ವಾಭಿಮಾನಕೆ ಕಟ್ಟು ಬಿದ್ದು ಇದ್ದುದರಲ್ಲಿಯೇ ಎಲ್ಲವನ್ನೂ ಕಾಣುವ
ದಿವ್ಯ ರೂಪ   ದೃಢತೆಯ ಅಪರೂಪ
ಮನಸ್ಸು ವಿಚಲಿತಗೊಂಡ ಕೂಪˌ ವಿಕೋಪ

ಮೌನವದು  ವಿಶ್ವರೂಪ
ಹೊಸ ಮನ್ವಂತರಕೆ ಮುನ್ನುಡಿ
ಬರೆಯಲು
ಮೈದಾಳಿದ ಮಹಾ ಸಂಕಲ್ಪˌ
ಇದಕಾಗಿ ಇರಬೇಕು ಆತ್ಮಬಲದ
ಜ್ಞಾನದೀಪˌ  ಅದುವೇ ಅವನ
ಜೀವನದ ಮುನ್ನಡೆಗೆ ದಾರಿದೀಪ

ಮತಿಗೆಡದಿರಲಿ ಮನದ ಮೌನ
ದೃತಿಗೆಡದೆ ಮುನ್ನಡೆಯಲಿ ಜ್ಞಾನ
ಮೌನದಲ್ಲಿಯೂ ಧ್ಯಾನಸ್ಥನಾಗಿ
ಬೆಳಗಲಿ ಲೋಕದೊಳಿತಿನ ಸುಜ್ಞಾನ
ಉಳಿಸಿ ಬೆಳೆಸಲಿ ಮಾನ ಸಮ್ಮಾನ
ಮೌನವೇ ಧ್ಯಾನವಾಗಿˌ ಜ್ಞಾನವಾಗಿ
ಬಿತ್ತಿ ಅಂಕುರಗೊಂಡು ಸುಜ್ಞಾನದ ಸಮಾಜ ನಿರ್ಮಿಸಲಿ ಮೌನ.


About The Author

Leave a Reply

You cannot copy content of this page

Scroll to Top