ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು.

ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ  ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು.

ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ  ಊಟಕ್ಕೆ ಬಂದುಬಿಡಬಹುದಿತ್ತು ಅಂತ.
ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು.

ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.
ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು.

ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು.‌ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು.‌

ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ  ಕುಮಾರ್.  ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು.  ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು.

ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು.  ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು.

ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.
ಆಗ FEAP Front End Application  Programme ಹೊಸದಾಗಿ ಚಾಲ್ತಿಯಲ್ಲಿತ್ತು.

1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್‌ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.
​ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್‌ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.
​ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.
​ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್‌ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು.

ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್‌ಡಿ‌ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ ವಿವಿಧ ರೀತಿಯ ಲಿಸ್ಟ್ಗಳನ್ನು ಸರಿ ಮಾಡಿದ್ದರಿಂದ ಪಾಲಿಸಿ ದಾರರಿಗೆ ಅನುಕೂಲ ಆಗಿತ್ತು ಮಾತ್ರವಲ್ಲ ವಿಭಾಗಿಯ ಕಚೇರಿಯಲ್ಲಿ ನಮ್ಮ ಶಾಖೆಯ ಹೆಸರು ಗುರುತಿಸುವಂತೆ ಆಯಿತು ಅಲ್ಲವೇ ಬೇರೆ ಬೇರೆ ಶಾಖೆಯವರಿಗೆ ನಮ್ಮ ಮಾರ್ಗದರ್ಶನ ತೆಗೆದುಕೊಂಡು ಅಂತಹ ಕೆಲಸ ಮಾಡುವಂತೆ ಸೂಚಿಸಲಾಯಿತು. ವಿಭಾಗಿಯ ಮಟ್ಟದಲ್ಲಿ ನಡೆದ ಸೆಮಿನಾರ್ನಲ್ಲಿ ನನ್ನನ್ನು ಈ ಕುರಿತು ಮಾತನಾಡಲು ಸಹ ಕೇಳಿದರು. ವೃತ್ತಿ ಜೀವನದಲ್ಲಿ ತುಂಬಾ ತೃಪ್ತಿ ಕೊಟ್ಟಂತಹ ಕೆಲಸ ಅದು ಈಗಲೂ ಅದನ್ನು ನೆನೆಸಿಕೊಂಡಾಗ ಒಂದು ಸಾರ್ಥಕ ಭಾವನೆ.
(ಮುಂದುವರೆಯುವುದು)


About The Author

2 thoughts on “”

  1. ಸುಂದರ ಚಿತ್ರಗಳೊಂದಿಗೆ ಅಂಕಣ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

  2. ವೃತ್ತಿ ಜೀವನದ ಅನುಭವವನ್ನು ಸವಿವರವಾಗಿ, ರಸವತ್ತಾಗಿ ವರ್ಣಿಸಿದ್ದೀರಿ.

Leave a Reply

You cannot copy content of this page

Scroll to Top