ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ದೇಹವೀಣೆಯಿದು ನಿಲ್ಲದೆ ಕಂಪಿಸುತಿದೆ ನೀ ನುಡಿಸದೇ
ಮನ ಮಂದಾರವಿದು ತಾಪದಿ ಮರುಗುತಿದೆ ನೀ ಬರದೇ
ನೆನಪಿನಂಗಳದ ತುಂಬ ಕನಸುಗಳ ಬಣ್ಣದ ರಂಗೋಲಿ
ಜೀವತಂತಿಯಿದು ಬಿಗಿದು ಗಟ್ಟಿಗೊಂಡಿದೆ ನೀ ಬಾರಿಸದೇ
ದುಃಖ ಉಮ್ಮಳಿಸಿ ಕಣ್ಣೀರ ಹನಿ ಧಾರೆಯಾಗಿ ಸುರಿಯುತಿವೆ
ಸ್ಪರ್ಶಸುಖವಿಲ್ಲದೆ ರಕ್ತ ಹೆಪ್ಪುಗಟ್ಟಿ ಕೊಲ್ಲುತಿದೆ ನೀ ಸೋಕದೇ
ತಂಗಾಳಿಯ ಚಾಮರವೂ ಸುಡುತಿದೆ ಕ್ಷಣ ಕ್ಷಣ ಪ್ರತಿಕ್ಷಣ
ವಿರಹವೇದನೆ ಒಂದೇ ಸವನೇ ಬಾಧಿಸುತಿದೆ ನೀ ಸೇರದೇ
ಬಾನ ಬಯಲಲ್ಲೆಲ್ಲಾ ಒಲವಿನೋಲೆಯ ಅಕ್ಷರಗಳ ಕಲರವ
ಎದೆಪುಟದಚ್ಚಾದ ಪ್ರೇಮದ ಚಿತ್ರ ಕೊರೆಯುತಿದೆ ನೀ ಇರದೇ
ಅಂತರಂಗದಲ್ಲೆಲ್ಲಾ ನಿನ್ನ ಪ್ರೀತಿ ಪರಿಮಳದ ನೀನಾದದ ಸದ್ದು
ಕನವರಿಕೆಯ ತರಂಗಗಳ ಭೋಗ೯ರೆತ ಕೊಚ್ಚುತಿದೆ ನೀ ತಬ್ಬದೇ
ಅನುಳ ಭಾವಬಿಂದಿಗೆಯಲಿ ಹೊಮ್ಮೊ ಬಯಕೆಗಳ ತೊಳಲಾಟ
ಮುತ್ತಿನಾ ಕತ್ತು ಒತ್ತರಿಸಿ ಮೈಮರೆಸಿ ಮರುಗಿಸಿದೆ ನೀ ಕೂಡದೇ
ಡಾ ಅನ್ನಪೂರ್ಣ ಹಿರೇಮಠ



