ಅನುವಾದ ಸಂಗಾತಿ
“ನ್ಯೂ ಸಿಲಬಸ್”
ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್


ನ್ಯೂ ಸಿಲಬಸ್
ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್
ಈಗ ನಾವೆಲ್ಲರೂ ಕೇಳಲೇಬೇಕು!
ಮಕ್ಕಳು ಹೇಳುತ್ತಿರುವುದನ್ನು ಕೇಳಬೇಕು.
ನಿನ್ನೆಯವರೆಗೂ ಈ ಮಕ್ಕಳೆಲ್ಲ ತಡಬಡ ಹೆಜ್ಜೆ ಹಾಕುತ್ತಾ,
ಮುದ್ದಾದ ಮಾತುಗಳನ್ನಾಡುತ್ತಾ,
ತುಟಿಗಳ ಮೇಲೆ ಮುಗ್ಧತೆಯನ್ನು ಜೀವಂತವಾಗಿರಿಸಿಕೊಂಡು,
‘ಮಮ್ಮಿ’, ‘ಪಾಪ್ಪಾ’ ಎಂದು ಓಡಿ ಬಂದವರೇ.
ಅವರನ್ನು ಇನ್ನು ಮುಂದೆ ಅದೇ ದೃಷ್ಟಿಯಿಂದ ನೋಡಬೇಕಾಗಿಲ್ಲ.
ನಮ್ಮ ಬಾಡಿಗೆ ಯೋಚನೆಗಳಲ್ಲಿ ಅವರನ್ನು ಮುಳುಗಿಸಬೇಕಾಗಿಲ್ಲ.
ಮಕ್ಕಳಿಗೂ ಕನಸುಗಳಿರುತ್ತವೆ,
ಬಣ್ಣಗಳು, ರಾಗಗಳೂ ಇರುತ್ತವೆ.
ಮಕ್ಕಳನ್ನು ಬೆಳೆಸುವುದೆಂದರೆ ಅಂಕಗಳು, ರ್ಯಾಂಕ್ಗಳು..
ಪ್ಲೇಸ್ಮೆಂಟ್ಗಳಷ್ಟೇ ತಾನೇ ನಮಗೆ ತಿಳಿದಿದ್ದು?
ಆದರೆ ಈ ಮೂರು ಎಲೆಗಳ ಆಟವನ್ನು ದಾಟಿ
ನಾಲ್ಕು ದಿಕ್ಕುಗಳನ್ನೂ ಈ ಮಕ್ಕಳೇ ಕಂಡುಕೊಂಡಿದ್ದಾರೆ.
ಸಿಸ್ಟಮ್ನಲ್ಲಿ ಹುಡುಕಬೇಕಾದದ್ದು ‘ಮೌಲ್ಯ’ ವಲ್ಲ,
ನಾವು ಕಳೆದುಕೊಂಡ ‘ಬಾಲ್ಯ’ ಎನ್ನುತ್ತಿದ್ದಾರೆ,
ಆ ದಿಕ್ಕಿನತ್ತ ನಮ್ಮನ್ನು ನೋಡಲು ಕರೆಯುತ್ತಿದ್ದಾರೆ.
ಫ್ರೇಮ್ಗಳಲ್ಲಿ ನಾವಿರಲಾರೆವು, ಬಾಕ್ಸ್ಗಳಲ್ಲಿ ಬಂಧಿಯಾಗಿರಲಾರೆವು ಎಂದು
ಖಡಾಖಂಡಿತವಾಗಿ ಹೇಳುತ್ತಿದ್ದಾರೆ.
ನಾವು ಕಂಡ ದೂರವನ್ನು ಮೀರಿದ ದಿಗಂತಗಳನ್ನು
ಅವರು ಕಾಣುತ್ತಿದ್ದಾರೆ.
ನಾವು ರೂಢಿಸಿಕೊಂಡ ಲೋಕವನ್ನು ಸಮಾಧಿ ಮಾಡಿ,
ತಾವು ಕನಸು ಕಾಣುವ ಹೊಸ ಜಗತ್ತನ್ನು ನೋಡಲು ಹೇಳುತ್ತಿದ್ದಾರೆ.
ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯ—
ನಮ್ಮ ಜಾತಿಗೆ ‘ವೆರಿ ನಾರ್ಮಲ್’ .
ಆದರೆ ಮಕ್ಕಳು ಈಗ ಅವುಗಳನ್ನು ‘ಅಬ್ನಾರ್ಮಲ್’ ಎನ್ನುತ್ತಿದ್ದಾರೆ.
ಅವರು ‘ಜೆನ್ ಜೀ’ಗಳು ಅಲ್ಲವೇ!
‘ ಜೀ ಹುಜೂರ್’ ಎಂಬ ಗುಲಾಮಗಿರಿಯನ್ನು ಬಿಟ್ಟು,
ಆತ್ಮಗೌರವದಿಂದ ಬದುಕುತ್ತಾ,
ತಮ್ಮ ಭಾಷೆಯ ಎಬಿಸಿಡಿಗಳನ್ನು ನಮ್ಮನ್ನು ಕಲಿಯಲು ಹೇಳುತ್ತಿದ್ದಾರೆ.
‘ಟೆಕ್ನೋ ಕಿಡ್ಸ್’ ಆಗಿ ಬೆಳೆಸಿದ್ದೇವೆ ಅಲ್ಲವೇ…
ಇವರಿಗೇನು ಭಾವನೆಗಳಿರುತ್ತವೆ ಅಂದುಕೊಂಡಿದ್ದೇವೆ.
ರೋಬೋ ಪೀಳಿಗೆ,
ಇವರಿಗೇನು ಅನುಬಂಧಗಳಿರುತ್ತವೆ ಅಂದುಕೊಂಡಿದ್ದೇವೆ.
ಆದರೆ ‘ಜಂತರ್ ಮಂತರ್’ ಸಾಕ್ಷಿಯಾಗಿ ಹೇಳುತ್ತಿದ್ದಾರೆ—
ಅವರ ಭಾವನೆಗಳು ಈ ಮಣ್ಣಿನೊಂದಿಗೆ..
ಈ ಅಣಕಿಸಲ್ಪಟ್ಟ ಜನರೊಂದಿಗೆ..
ತಮ್ಮನ್ನು ಸುತ್ತುವರಿದ ಪ್ರಕೃತಿಯೊಂದಿಗೆ..
‘ಪ್ರಶಾಂತ’ವಾದ ನಾಳೆಯೊಂದಿಗೆ ಹೆಣೆದಿವೆ!
ಇದನ್ನು ಕೇವಲ ‘ಪೇಪರ್ ಲೀಕ್’ ಕನ್ನಡಕದಿಂದಷ್ಟೇ ನೋಡಬೇಡಿ,
ಅವರು ಕಳೆದುಕೊಂಡ ವ್ಯವಸ್ಥೆಯ ಮೇಲಿನ
ಅಪನಂಬಿಕೆಯ ಪರಾಕಾಷ್ಠೆಯಾಗಿ ನೋಡಿ.
ಟಿಯರ್ ಗ್ಯಾಸ್, ವಾಟರ್ ಗನ್, ಲಾಠಿಚಾರ್ಜ್ಗಳು
ಅವರ ಮನೋಬಲದ ಮುಂದೆ
ತಲೆಬಾಗಲೇಬೇಕು ಎಂಬುದನ್ನು ಅರಿತುಕೊಳ್ಳಿ.
ಇದು
‘ಜನ್’ ತರಂಗ – ‘ಮನ್’ ತರಂಗ.
ಈಗ ಅವರಿಗೆ ನಾವುಗಳೇ ಮಕ್ಕಳು!
ಕ್ಲೈಮ್ಯಾಕ್ಸ್ಗೆ ಬಂದಿರುವ ಈ ಕಥೆಯಲ್ಲಿ
ಬೇಕಾಗಿರುವುದು ‘ಐಮ್ಯಾಕ್ಸ್’ ಸೀನ್ಗಳಲ್ಲ,
‘ಜೆನ್ ಜೀ’ ಗುರುಕುಲದ ಪಾಠಗಳು!
ಅವರ ಸಿಲಬಸ್ ಅನ್ನು ಅವರ ಭಾಷೆಯಲ್ಲೇ ಕಲಿಯೋಣ ಬನ್ನಿ.
ಈ ವಯಸ್ಸಿನಲ್ಲಿ ಮತ್ತೊಮ್ಮೆ ಮಕ್ಕಳಾಗಿ,
ಬುದ್ಧಿಯಲ್ಲಿ ಹಿರಿಯರಾದ ಅವರ ಗುರುತ್ವದಲ್ಲಿ
ಹೊಸ ಗಾಳಿಯನ್ನು ಉಸಿರಾಡೋಣ.
ಹೊಸ ಲೋಕದಲ್ಲಿ ಹೊಸ ಆಧಾರ್ ಕಾರ್ಡ್ಗೆ ಅರ್ಜಿ ಹಾಕೋಣ,
ನಮ್ಮ ಪಾಸ್ಪೋರ್ಟ್ ಅನ್ನು
ಮತ್ತೊಮ್ಮೆ ಹೊಸದಾಗಿ ನಾವೇ ಹುಡುಕಿಕೊಳ್ಳೋಣ.
ಬನ್ನಿ ಹೋಗೋಣ,
‘ಜೆನ್ ಜಿ’ ಗುರುಕುಲಗಳಿಗೆ..
‘ಮತ್ತೊಮ್ಮೆ ಹುಟ್ಟೋಣವೇ?’




ಬಹಳ ಅರ್ಥಪೂರ್ಣ ಸಾಲುಗಳು. ಅಭಿನಂದನೆಗಳು ❤️ಇರ್ವರಿಗೂ – ಡಾ. ಶ್ರೀಶೈಲ ಮಾದಣ್ಣವರ.
ರ್ಯಾಂಕ್
ಧನ್ಯವಾದಗಳು